ಅವಳ ಕೆನ್ನೆಯ ಗುಳಿ ತುಂಬಾ ಬಣ್ಣ ಬಳಿದ ಆ ಕೊನೇ ಹೋಳಿ ನೆನೆದರೇ ಮನದಲ್ಲಿ ವಿಷಾದದ ಗಾಳಿ ಏಳುತ್ತದೆ. ಏಕೆಂದರೆ ಅದೇ ಕೊನೆ, ಬಣ್ಣದ ಹೋಳಿಯೂ ಅವಳೊಡನೆ ದೂರಾಯಿತು….ಹೋಳಿಯ ತಲೆಬುಡ ತಿಳಿದಿರದಿದ್ದರೂ ಅದೊಂದು ನಿರೀಕ್ಷೆಯ ಹಬ್ಬ. ಬಟ್ಟಲುಕಂಗಳ ಆ ಹುಡುಗಿಯ ನುಂಪು ಕೆನ್ನೆಗಳಿಗೆ ಮೃದುವಾಗಿ ಬಣ್ಣ ಸವರಿ ಕಂಗಳಲ್ಲಿ ಮೂಡುವ ಬೆಳಕು ಕಾಣಲೆಂದು ಕಾತರಿಸಿದ ಹಬ್ಬ. ಜೊತೆಗೆ ಓರಗೆಯವರ ಜತೆಗೂಡಿ ಬಣ್ಣದ ಲೋಕದಲ್ಲಾಡುತ್ತಾ ಕಳೆದು ಹೋಗುವ ಸಂತಸ …
ಅಪ್ಪನ ಕಿಸೆಯಿಂದ ಎಗರಿಸುವುದಲ್ಲದೇ ಶಾಲೆಗೆ ನಡೆದುಕೊಂಡೇ ಹೋಗಿ ಬಸ್ಸಿನ ಹಣವನ್ನೂ ಉಳಿಸುತ್ತಿದ್ದೆವು ತಿಂಗಳಿನಿಂದ … ಮುಂದೆ ಆ ಹಣವೆಲ್ಲಾ ಬಣ್ಣಕ್ಕೆ ಮತ್ತೆ ಮಿಠಾಯಿಗಾಗಿ ಖಾಲಿಯಾಗುತ್ತಿತ್ತು…ಪ್ರೇಮದ ಹುಡುಗಿಯ ಬಳಿ ಸಾರಲು ಕಾಮದಹನದ ದಿನವೇ ಸೂಕ್ತವಾಗಿತ್ತು. ಬರೀ ಮಾತನಾಡುವುದಲ್ಲದೇ ಬಣ್ಣದೋಕುಳಿ ಆಡಲೂ ಸಾಧ್ಯವಾಗುವ ಪ್ರಶಸ್ತ ದಿನವದು…ಬೆಳಿಗ್ಗೆ ಆರಕ್ಕೆದ್ದು ಎಷ್ಟೊತ್ತಿಗೆ ಗಂಟೆ ಏಳಾಗುವುದೋ ಎಂದು ಕಾತರಿಸಿ ಕೂತಿದ್ದೆ. ಅವಳು ಬರಹೇಳಿದ್ದ ಸಮಯ ಅದು. ಆ ಸಮಯಕ್ಕೇ ಅವಳಪ್ಪ ಹಾಲು ತರಲು ಹೊರಹೋಗುತ್ತಿದ್ದ. ಅಮ್ಮ ತಿಂಡಿ ಮಾಡುವುದರಲ್ಲಿ ತಲ್ಲೀನಳು. ಇವಳು ಆಗ ಆಗಸದ ಹಕ್ಕಿ…ಕೈ ತುಂಬ ಬಣ್ಣ ಹಿಡಿದು ಕಿಸೆಯಲ್ಲಿ ಮಿಠಾಯಿ ಇಟ್ಟುಕೊಂಡು ನಡೆದರೆ ಅವಳು ಕಾಯುವ ಕಂಗಳ ಹೊತ್ತು ಬಾಗಿಲಲ್ಲೇ ನಿಂತಿದ್ದಾಳೆ..! ಅಷ್ಟೊತ್ತೂ ನನಗಾಗೇ ಕಾದಿದ್ದರೂ ಈಗ ಒಮ್ಮೆಲೇ ನಾಚಿಕೆ ತುಂಬಿಕೊಂಡು ಅಪ್ಸರೆಯಾಗಿದ್ದಳು…ಆಟವಾಡಿಸುವ ಮನಸಾಗಿ ನಾನೂ ಹುಸಿಗೋಪ ತೋರಿ ಮುಖ ತಿರುವಿಕೊಂಡೆ… ಗಾಬರಿ ಬಿದ್ದು ಏನಾಯಿತೆಂದು ಕೇಳಿದಳು. "ನಾನು ನಿನಗಾಗಿ ಬಣ್ಣ ತಂದರೆ ನೀ ಮುಂಚೆಯೇ ನಾಚಿ ಕೆನ್ನೆ ರಂಗೇರಿಸಿಕೊಂಡು ನಿಂತಿರುವೆಯಲ್ಲ..!!" ಎನ್ನಲು ನಾಚಿ ನಕ್ಕವಳ ಮೂಗುತಿ ಹೊಳೆಯುತಿತ್ತು..
ಬಾಗಿಲಿಂದ ಒಳಗೆ ಸರಿದು ಮುದ್ದಿನಿಂದ ಅವಳ ಕದಪುಗಳಿಗೆ ಬಣ್ಣದ ಹೊಳಪು ನೀಡುವಾಗ ಅವಳ ಕಣ್ಣಲ್ಲಿ ಬಳಬಳನೇ ನೀರು ಸುರಿದಿತ್ತು.. ಯಾಕೆಂದು ಕೇಳದೇ ಸುಮ್ಮನುಳಿದ ನನ್ನ ಕಣ್ಣಂಚೂ ಒದ್ದೆಯಾಗಿದ್ದು ಯಾಕೆಂದು ತಿಳಿಯಲಿಲ್ಲ ….ಮಾರು ದೂರ ಬಂದವನು ತಂದಿರುವ ಮಿಠಾಯಿ ನೆನಪಿಸಿಕೊಂಡು ಮತ್ತೆ ತಿರುಗಿದರೆ ಎದೆ ಧಸಕ್ಕೆಂದಿತು ಅವಳ ಮುಖ ನೋಡಿ..! ದುಃಖದಿಂದ ವಿಹ್ವಲಗೊಂಡು ಸೊರಗಿದಂತಿತ್ತು. ನಿಮಿಷದಲ್ಲಿ ಎಂಥ ಬದಲಾವಣೆ ..! ಕಣ್ಸನ್ನೆಯಲ್ಲೇ ಮಿಠಾಯಿ ತೋರಿಸಿದಾಗ ನಗುತ್ತ ನೀನೇ ಕೊಡು ಎಂದಳು. ಬಣ್ಣ ಮೆತ್ತಿದ ಕೈ ತೋರಿದರೂ ಊಹೂಂ. ಆದರೂ ಇನ್ನೊಮ್ಮೆ ಕೇಳಿದಾಗ ಕಿಸೆಯಿಂದ ಮಿಠಾಯಿ ತೆಗೆದುಕೊಂಡು ಮರುಮಾತಿಲ್ಲದೇ ಮನೆಯೊಳಗೆ ಮರೆಯಾದಳು. ಸಂಜೆ ದೇವಸ್ಥಾನದ ಹಿಂಬದಿಯ ಬಯಲಲ್ಲಿ ಮಕ್ಕಳೆಲ್ಲಾ ಬಣ್ಣದೆರಚಾಟ ಆಡುವುದು ಇದ್ದೇ ಇತ್ತು. ಅಲ್ಲಿ ಅವಳ ಸುಳಿವಿರಲಿಲ್ಲ. ಆಟ ಶುರುವಾಗಿ ಸ್ವಲ್ಪ ಹೊತ್ತಿಗೆ ಒಬ್ಬಾಕೆ ಹೇಳಿದಳು, ಅವಳು ಅಜ್ಜನೂರಿಗೆ ಹೊರಟಿದ್ದಾಳೆಂದು. ಸುದ್ದಿ ಕೇಳಿದ ನಂತರ ಯಾಕೋ ಬಣ್ಣವೆಲ್ಲಾ ಬೇಸರ ತರಿಸಿತ್ತು. ಸಂಜೆ ಊರವರೆಲ್ಲಾ ಸೇರಿ ಕಾಮದಹನವೆಂದು ಮಾವಿನ ಸಸಿ ಸುಡುವಾಗ ದೂರ ಕೂತು ನೋಡುತ್ತಿದ್ದ ನನಗೆ ಏಕೋ ಎದೆ ಹಿಂಡಿದ ಭಾವ. ಕಾರಣವಿಲ್ಲದೇ ದುಃಖ ಒತ್ತರಿಸಿ ಬಂತು. ಬಿಕ್ಕಳಿಕೆ ಯಾರಿಗೂ ತಿಳಿಯದಿರಲೆಂದು ದೂರ ಸರಿದೆ.
ಕೆಲವು ತಾಸು ಕಳೆದಿತ್ತಷ್ಟೇ. ಎಲ್ಲರೂ ಗುಂಪುಗುಂಪಾಗಿ ಓಡುತ್ತಿದ್ದರು. ಏನೋ ಅನಾಹುತ ನಡೆದದ್ದು ಖಚಿತವಿತ್ತು. ಅವಳ ಮನೆಯ ಮುಂದೆ ಕರುಳು ಕಿತ್ತು ಬರುವಂಥ ರೋದನ. ಅಂಗಳದಲ್ಲಿ ಸಾಲಾಗಿ ಮೂರು ಹೆಣಗಳನ್ನಿಟ್ಟಿದ್ದರು. ಅನತಿ ದೂರದಲ್ಲಿ ನುಜ್ಜುಗುಜ್ಜಾದ ಬೈಕು ನಿಂತಿತ್ತು. ಮೈ ತುಂಬ ರಕ್ತದಲ್ಲಿ ಮಿಂದು ಕೆಂಪಾಗಿದ್ದ ಅವಳ ಮುಖ ಜಿಗುಪ್ಸೆ, ಭಯ, ದುಃಖ, ಎಲ್ಲ, ಎಲ್ಲವನ್ನೂ ಉಮ್ಮಳಿಸಿ ಬರುವಂತೆ ಮಾಡಿತ್ತು . ಕ್ಷಣದಲ್ಲಿ ನಶ್ವರತೆ ಅರಿವಾಗಿತ್ತು. ರೋದನೆ ಹೊಳೆಯಾಗಿ ಹರಿದಿತ್ತು. ಪ್ರೇಮಮೂರ್ತಿಯ ದಹನವಾಗಿತ್ತು. ಗೋಗರೆತ ಕಟ್ಟೊಡೆದು ರಾತ್ರಿ ಪೂರ್ತಿ ಅತ್ತಿದ್ದೆ. ಅವಳು ಜೀವನವನ್ನೇ ಅಸ್ತವ್ಯಸ್ತಗೊಳಿಸಿ ಹೊರಟುಹೋಗಿದ್ದಳು…
ಅವಳಿಲ್ಲದೆಯೂ ಮರುದಿನ ಸೂರ್ಯ ಹುಟ್ಟಿದ್ದ….
–ಸಖ್ಯಮೇಧ
ಇದು ಅನುಭವ ಕಥನವೇ?..ಬೇಸರವಾಯ್ತು..nicely written
ಇಲ್ಲ ಮೇಡಮ್.., ಇದು ಕೇವಲ ಕಾಲ್ಪನಿಕ . -ಸಖ್ಯಮೇಧ