ಮೊಬೈಲಿನ ಕರೆನ್ಸಿ ಖಾಲಿಯಾದರೆ, ರೀಚಾರ್ಚ್ ಮಾಡುವ ಅಂಗಡಿ ಎಷ್ಟು ದೂರವಿದ್ದರೂ ಅಲ್ಲಿಗೆ ದಾಪುಗಾಲಿಡುತ್ತೇವೆ. ದೇವಸ್ಥಾನದಲ್ಲಿ ಮಂಗಳಾರತಿಯ ಹೊತ್ತು ತಪ್ಪಬಾರದೆಂದು ತುರಾತುರಿಯಿಂದ ಹೊರಡುತ್ತೇವೆ. ಇನ್ನೇನು ಕೆಲವೇ ನಿಮಿಷದಲ್ಲಿ ಬಸ್ಸು ಹೊರಡುತ್ತದೆಂದು ಓಡೋಡಿ ಹೋಗುತ್ತೇವೆ. ಹಾಗೆಯೇ ನಾನಿಲ್ಲಿ ಅವಳನ್ನು ನೋಡಲು, ಉನ್ಮತ್ತನಾಗಿ ಬೆಳಗ್ಗೇ ತಪ್ಪದೆ ಅವಳು ಹೊರಡುವ ಹೊತ್ತ ಗೊತ್ತು ಮಾಡಿ ಹೋಗುತ್ತಿರುವೆ. ನಾನು ಹೋಗುವುದಕ್ಕೆ ಪವಿತ್ರ ಉದ್ದೇಶವಿದೆ ಮತ್ತು ಭಾರಿ ತೃಪ್ತಿಯಿದೆ.
ಅವಳೇನು ನೋಡಲು ಚಿತ್ರ ಸುಂದರಿಯರಾದ ಕತ್ರೀನಾ ಅಲ್ಲ, ಐಶ್ವರ್ಯ ರೈನೂ ಅಲ್ಲ. ಒಬ್ಬಳು; ಬಡ ಕುಟುಂಬದಿಂದ ಬಂದವಳು. ಅಲಂಕಾರದಲ್ಲಿ ಯಾವುದೇ ಪೌಡರಿನ ಅಚ್ಚಿಲ್ಲ, ಫೇರ್ ಆಂಡ್ ಲವ್ಲಿಯ ಘಾಟಂತೂ ಇಲ್ಲವೇ ಇಲ್ಲ. ಸೆಂಟಿನ ಪರಿಮಳದಿಂದಲೂ ದೂರ. ಈಕೆಯೊಬ್ಬಳು ಸಾವಯಾವ ಸುಂದರಿ. ಮುಂಜಾನೆ ಹಾಲು ತರಲು ಅಂಗಡಿಗೆ ಹೋಗುತ್ತಾಳೆ. ತನ್ನ ಮನೆಯ ಕೆಲಸವನ್ನು; ನೆಲ ಒರೆಸುವುದು, ಬಟ್ಟೆ ತೊಳೆಯುವುದು, ಕಸ ಹೊಡೆಯುದ ದೇವರ ಸೇವೆಯಂತೆ ಬಹಳ ತಲ್ಲೀನತೆಯಿಂದ ಮಾಡಿ ಮುಗಿಸುತ್ತಾಳೆ. ರಾತ್ರಿ, ಕೂಲಿ ಮಾಡಿ ಬಂದು ದಣಿದ ಅಪ್ಪ ಅಮ್ಮನಿಗೆ ಸಹಾಯ ಮಾಡುತ್ತಾಳೆ. ನಾನು ಇವಳು ಯಾವಾಗ ತನ್ನ ಮನೆಯಿಂದ ಹೊರಗಡೆ ಕಾಲಿಡುತ್ತಾಳೆಂದು ಕಾಯುತ್ತಿರುತ್ತೇನೆ. ಅದೂ ಅವಳಿಗೇ ಗೊತ್ತಾಗದ ಹಾಗೆ ಗುಟ್ಟಾದ ಕಾಯುವಿಕೆ.
ಈ ಕಾಯುವಿಕೆಯಲ್ಲಿ ಮಜಾ ಇದೆ. ಅವಳ ಮನೆಯ ಎದುರಿಗೊಂದು ದಿನಸಿ ಅಂಗಡಿ ಇದೆ. ದಿನಾ ಬೆಳಗ್ಗೆ ಅವಳು ಮನೆಗೆ ಹಾಲು ತರಲು ಈ ಅಂಗಡಿಗೆ ಬರುತ್ತಾಳೆ. ನಾನು ಅವಳು ಬರುವ ಮೊದಲೇ ದಿನಸಿ ಅಂಗಡಿಯಲ್ಲಿ ಹಾಜರಾಗುತ್ತೇನೆ. ಇತ್ತೀಚಿಗೆ ಈ ಅಂಗಡಿಯವರಿಗೆ ನಾನು ಮತ್ತು ಅವಳು ಬರುವ ಸಮಯ ಹೆಚ್ಚು ಕಮ್ಮಿ ಒಂದೇ ಆಗಿರುವುದು ಗೊತ್ತಾಗಿಬಿಟ್ಟಿದೆ. ನನಗೆ ಅವಳ ಮೇಲೆ ಏನೋ ಇದೆ ಅಂತ ಅಂಗಡಿಯವನಿಗೆ ಸಂದೇಹ ಗಟ್ಟಿಯಾಗಿದೆ. ಅವಳನ್ನು ನೋಡಲೆಂದು ದಿನಾ ನಾನು ಅಂಗಡಿಗೆ ಬಂದು ನಿಲ್ಲುವುದು ಮಾತ್ರ. ಅಂಗಡಿಯಿಂದ ಒಂದೇ ಒಂದು ಸಾಮಾನು ಖರೀದಿಸುವುದಿಲ್ಲ.
ತನ್ನ ಮನೆಯಿಂದ ವೈಯಾರ ಮಾಡುತ್ತಾ, ಕಾಲಿನ ಗೆಜ್ಜೆಯನ್ನು ಕಿಣಿ ಕಿಣಿ ಗೈಯುತ್ತಾ ಅಂಗಡಿ ಕಡೆ ಅವಳು ಬರುವ ಸೊಬಗ ನೋಡಬೇಕು. ಆ ನಡಿಗೆಯಲ್ಲೊಂದು ಗತ್ತಿದೆ. ಮುಂದೆ ಮದುವೆಯಾದರೂ ಸಂಸಾರ ನಡೆಸುವ ತಾಕತ್ತಿದೆ. ಅವಳ ಸೊಂಟ ಬಳುಕುವ ದಿಕ್ಕಿಗೆ ರಸ್ತೆಯ ಇಕ್ಕೆಲಗಳಲ್ಲಿರುವ ತೆಂಗಿನ ಮರವೂ ಬಳುಕತೊಡಗುತ್ತವೆ. ರಸ್ತೆಯೂ ಏರು ಪೇರಾಗುತ್ತದೆ. ನನ್ನ ಹೃದಯವೂ ಎಡ ಪಾರ್ಶ್ವದಿಂದ ಬಲಬದಿಗೆ ಜಿಗಿಯ ಪ್ರಯತ್ನಿಸಿದಂತೆ ಅನ್ನಿಸುತ್ತದೆ. ಅಂಗಡಿಗೆ ಬಂದು, ಅಣ್ಣಾ ಅರ್ಧ ಲೀಟರ್ ಹಾಲು ಎಂದು ಅಂಗಡಿಯವನಿಗೆ ಕೇಳುತ್ತಾಳೆ. ಅವಳ ದನಿಗೆ ಕೋಗಿಲೆಯ ಇಂಪಿದೆ. ಜೇನಿನ ಸಿಹಿ ಇದೆ. ಅಯ್ಯೋ ನಾನಿವಳನ್ನು ಮಾತನಾಡಿಸಲು ಐದು ತಿಂಗಳಿಂದ ಇದೇ ಅಂಗಡಿಯ ಎದುರಿರುತ್ತೇನೆ. ಆದರೆ ಒಮ್ಮೆಯೂ ಮಾತನಾಡಿಸಲು ಆಗಲಿಲ್ಲ. ಇವತ್ತು ಬೇಡ ನಾಳೆ ಪಕ್ಕಾ ಮಾತನಾಡಿಸಿಯೇ ತೀರುವೆನೆಂದುಕೊಳ್ಳುವೆ. ಆದರೆ ನಾಳೆಯೂ ಬಂದು ಹೋದರೂ ಮಾತನಾಡಿಸಲು, ನನ್ನ ಜಂಘಾ ಬಲವೇ ಉಡುಗಿಹೋಗಿರುತ್ತದೆ. ಹೋಗಲಿ ಈಗೀಗ ನಾನು ಮೌನಿ.
ಅವಳು ಪೂರ್ತಿ ನಂಗಿಷ್ಟ ಆದರೂ ನಾನವಳ ತಲೆಗೂದಲನ್ನು ಭಾರಿ ಇಷ್ಟ ಪಡುವೆ. ಚಿನ್ನದ ಎಳೆಗಳಂತೆ ಅವಳ ಕೂದಲ ಲಕಲಕ ಹೊಳಪು. ಕೂದಲನ್ನು ಹೈರ್ ಬಾಂಡಿನಲ್ಲಿ ಕಟ್ಟಿರುತ್ತಾಳೆ. ಯಾವ ಶಾಂಪು ಹಾಕಿರುತ್ತಾಳೋ ಅಥವಾ ದೈವದತ್ತವಾಗಿ ಬಂದಿರುವುದೋ ನಾನರಿಯೆ. ಅಷ್ಟೂ ನವಿರಾದ ತಲೆಗೂದಲು ಆಕೆಯದು. ಈ ಕೂದಲು ಆಕೆಯ ಸೌಂದರ್ಯಕ್ಕೆ ಇಟ್ಟ ಚಿನ್ನದ ಕಲಶವೇ ಸರಿ. ನನಗೆ ಅವಳ ಹೆಸರು ಇನ್ನೂ ಗೊತ್ತಿಲ್ಲ ಆದರೆ ಅವಳನ್ನು ನೋಡದೆ ಒಂದೂ ದಿನ ಕಳೆಯುವುದಿಲ್ಲ. ಮಾತಿಲ್ಲದೆ ಬರೀ ಮೌನವಾಗಿ ಅವಳನ್ನು ನೋಡುತ್ತಲೇ ಇರಬೇಕು ಅನ್ನಿಸುತ್ತದೆ.
-ಅಕ್ಷಯ ಕಾಂತಬೈಲು