ಕನಸುಗಳನೊಮ್ಮೆ ಹರವಿ ಕುಳಿತೆ.. ಸಾಲಾಗಿ ಕಂಡುಕೊಂಡೆ ಅವನ ಬಗೆಗಿನ ಕನಸುಗಳನ್ನು.. ಇಷ್ಟರ ವರೆಗೆ ಎಷ್ಟೋ ಜನರು ಕೇಳಿದಾರೆ.. ನಿಂಗೆ ಬಾಯ್ ಫ್ರೆಂಡ್ ಇಲ್ವಾ? ಅಂತ..ಇಲ್ಲಾ ಅಂತ ನಾ ಹೇಳಿದ್ದಕ್ಕೆ , ನೀನು ವೇಸ್ಟ್ ಅಂತ ಅವಳ್ಯಾರೋ ಹೇಳಿದಾಗ ನನಗೇನು ಬೇಸರವಾಗಲಿಲ್ಲ.. ಏಕೆಂದರೆ ಅಪ್ಪ ಅಮ್ಮನ ಮುದ್ದು ಮಗಳು ನಾನು.. ಅವರು ಹೇಳಿದಂತೆ ಕೇಳುವುದು ಇಷ್ಟ.. ಬಹುಶಃ ನನ್ನ ಹುಡುಗನನ್ನು ದೇವರು ತುಂಬಾ ಪುರುಸೊತ್ತು ಮಾಡಿಕೊಂಡು ಸೃಷ್ಟಿಸಿರಬಹುದೇನೋ..ಅದಕ್ಕೇ ಅವನು ಇನ್ನೂ ಕನಸಾಗಿಯೇ ಉಳಿದದ್ದು.. ಊಹೂಂ ಅದೇ ಹಳೇ ಕಾಲದಂತೆ ಗತ್ತಿನಿಂದ ಹೆದರಿಸುವ ಹುಡುಗನೂ ನನಗೆ ಬೇಡ, .ಮಾಡರ್ನ ಮತ್ತು ಟ್ರೆಡಿಶನ್ ಗಳ ಮಿಕ್ಸ್ ಬೇಕು..ದೇವರನ್ನು ತುಂಬಾ ನಂಬುವ ಮುಗ್ಧ ಹುಡುಗನು, ನನ್ನನ್ನು ತುಂಬಾ ಪ್ರೀತಿಸುವ ಹುಡುಗ ಬೇಕು.. ಅದಕ್ಕಾಗಿಯೇ ಓದು ಮುಗಿದು ಕೆಲಸ ಸಿಗುವವರೆಗೂ ತಾಳ್ಮೆಯಿಂದಲೇ ಕಾಯುತ್ತೇನೆ ಅವನಿಗಾಗಿ.. ಆದರೆ ಹುಡುಕುವ ಹೊಣೆ ಮಾತ್ರ ನಂಗೆ ಬೇಡವೇ ಬೇಡ..ಹೀಗಯೇ ಕನಸುಗಳಿಗೆ ಕೊರತೆಯಿಲ್ಲ.. ಒಮ್ಮೊಮ್ಮೆ ಈ ಕನಸುಗಳನ್ನು ನೋಡಿದಾಗ ಹುಚ್ಚೆಂದು ಅನಿಸಿದ್ದುಂಟು.. ಬಾಯಿ ಮುಚ್ಕೊಂಡು ಓದೋ ಕೆಲಸ ಮಾಡು ಹುಡುಗಿ..ಎಂದು ಅದೆಷ್ಟೋ ಬಾರಿ ಇನ್ನೊಂದು ಮನಸ್ಸು ಹೇಳಿದರೂ, ಈ ನನ್ನ ಹುಚ್ಚು ಕನಸುಗಳು ಕೇಳಬೇಕಲ್ಲ..
ಅದೊಂಥರಾ ನನ್ನ ಕನಸುಗಳು.. ಕೇಳಿದವರೆಲ್ಲಾ ನಗೆಯಾಡುವ ಕನಸು.. ಮನಸ್ಸಿನ ಮೂಲೆಯಲ್ಲಿ ಹೆಣೆದಿಟ್ಟ, ಬದುಕಿನ ಕನಸು.. ಎಂದೋ ಒಂದಿನ ಬರುವ ಅವನಿಗಾಗಿ ನನ್ನ ಬಗೆಗಿಂತಲೂ ನಾ ಹೆಚ್ಚು ಯೋಚಿಸುವ ಕನಸು..ಮೊದಲ ದಿನ ಅವನು ನನ್ನ ನೋಡಲು ಬರುವಾಗ ಕೆಂಪು ಗುಲಾಬಿಯನ್ನೊಂದು ತಂದು ಪ್ರೀತಿಯಿಂದ ತಲೆಗೆ ಮುಡಿಸಿ, ಒಂದಿಷ್ಟು ದೊಡ್ಡ ನಗೆಯನ್ನು ಕಾಣಬೇಕು..ಅವನೆಂದರೆ ಕೇವಲ ನನ್ನ ಸಂಗಾತಿ ಮಾತ್ರವಲ್ಲ..ಅವನೆಂದರೆ ನನ್ನ ಬದುಕು.. ನನಗಿಂತಲೂ ನಾನು ಇಷ್ಟ ಪಡುವ ವ್ಯಕ್ತಿ. ಎಲ್ಲಾ ಫೀಲಿಂಗ್ಸ್ ಗಳನ್ನು ರಿಮಿಕ್ಸ್ ಮಾಡಿ ಕೊನೆಗೊಂದು ಹೊಸ ಗೀತೆಯನು ಹಾಡುವಾಸೆ. .ಕೇರಮ್ ಆಡುವಾಗ ಕ್ವೀನನ್ನು ನನಗಾಗೆ ಬಿಟ್ಟು ಕೊಟ್ಟು ನನ್ನ ಗೆಲುವಿನಲ್ಲಿ ಗೆಲುವು ಕಾಣುವ ಬದುಕನ್ನು ಪ್ರೀತಿಸುವ ಹುಡುಗಬೇಕು..
ಅದೆಂದೋ ರವಿ ಬೆಳೆಗೆರೆಯವರ ಪುಸ್ತಕದಲ್ಲಿ ಓದಿದ ನೆನಪಾಗುತ್ತೆ.. ನೀ ನನಗೆ ಎಲ್ಲವನ್ನೂ ಕೊಡುವೆಯಾ ಎಂದು ಕೇಳಿದ ಪ್ರಶ್ನೆಗೆ, ನಾ ನಿನಗೆ ಎಲ್ಲವನ್ನೂ ಕೊಡುತ್ತೇನೋ ಇಲ್ಲವೋ ಗೊತ್ತಿಲ್ಲ, ಆದರೆ ಬದುಕು ನನಗಾಗಿ ನೀಡಿದ ನನ್ನದೆಲ್ಲವನ್ನೂ, ನಿರ್ವಂಚನೆಯಿಂದ ಕೊಡುತ್ತೇನೆ ಎಂಬ ಸಾಲುಗಳು.. ಪ್ರೀತಿಯೇ ಜೀವನ ಹೌದೋ ಅಲ್ಲವೋ ಗೊತ್ತಿಲ್ಲ.. ಆದರೆ ಅವನು ನನ್ನ ಬದುಕಾದರೆ ಸಾಕು.. ಜೀವನದಲ್ಲಿ ಹುಡುಗಾಟ ಇದ್ದರೂ, ಹುಡುಗಾಟವನ್ನೇ ಜೀವನ ಮಾಡಿಕೊಂಡವನು ಬೇಡ. ಎಷ್ಟು ಅರ್ಥ ಮಾಡಿಕೊಳ್ಳಬೇಕೆಂದರೆ ಉಸಿರಾಟದ ಪ್ರತೀ ಉಸಿರುಗಳು ಕೇಳಿಸುವಷ್ಟು.. ಅವನು ನನ್ನ ಬದುಕಿಗೊಂದು ಸ್ಪೂರ್ತಿಯಾಗಬೇಕು.. ಮುಸ್ಸಂಜೆಯ ಮೌನದಲಿ ಶುದ್ದ ತಂಗಾಳಿಯಲಿ ಪ್ರೀತಿಯ ಹಾಡನ್ನು ಕೇಳಿಸುತ್ತ ಅವನ ತಲೆಯನ್ನೊಮ್ಮೆ ಸವರಬೇಕು.. ಉದ್ದಗೇ ಚಾಚಿದ ಕಾಲುಗಳಲ್ಲಿ ಅವನ ಮಲಗಿಸಿ ಜೋಗುಳವ ಹಾಡಬೇಕು.. ಜೋರು ಮಳೆಯಲ್ಲಿ ಒಂದೇ ಚತ್ರಿಯಲಿ ಕಾಲ್ನಡಿಗೆಯಲ್ಲಿ ಸಾಗುವಷ್ಟು ಬದುಕು ಚಂದವಿರಬೇಕೆನ್ನುವ ಹಲವಾರು ಕನಸುಗಳು..
-ಪದ್ಮಾ ಭಟ್, ಇಡಗುಂದಿ.
*****