ಪ್ರೀತಿ ಪ್ರೇಮ

ಅವನ ಪತ್ರ: ಪ್ರಾಣ್

ಹೇಗೆ ಕರೆಯಲಿ ಎಂದು ತಿಳಿಯದೆ ಹಾಗೆ ಶುರು ಮಾಡ್ತಾ ಇದ್ದೀನಿ. ಎಂದಿನಂತೆ 'ಮುದ್ದು' ಎಂದು ಕರೆಯೋಣ ಅಂದ್ಕೊಂಡೆ, ಅದ್ಯಾಕೋ ಹಾಗೆ ಕರೆಯಬೇಕು ಅನಿಸಲಿಲ್ಲ.  ಹೊರಡುವಿಕೆಯ ಹೊಸ್ತಿಲ ಬಳಿ  ನಿಂತು ಹಿಂತಿರುಗಿ ನಿನ್ನ ನೋಡಿ, ಹೇಳಲು ನಿಂತರೆ ಮತ್ತೆ ಹೋಗಬೇಕು ಅನಿಸೋದಿಲ್ಲ ! ಅದಕ್ಕೆ ಹಿಂದಕ್ಕೆ ತಿರುಗಿ ನೋಡದೆ ಹೊರಟಿದ್ದೀನಿ . ಆದರು ಹೊರಡುವ ಮುನ್ನ ನಿನಗೆ ಹೇಳದೆ ಹೋಗಬೇಕು ಅಂತ ಕೂಡ ಅನಿಸಲಿಲ್ಲ.

ಬಹುಶಃ ಒಂದ್ಹತ್ತು ವರುಷವಾಗಿದೆಯಲ್ಲವೇ ನಮ್ಮಿಬ್ಬರ ಪರಿಚಯವಾಗಿ !? ಪರಿಚಯ ಗೆಳೆತನವಾಗಿ, ಗೆಳೆತನ ಅಭಿಮಾನವಾಗಿ, ಅಭಿಮಾನ ಪ್ರೀತಿಯಾಗಿದ್ದು ಹೇಗೆ ಮತ್ತು ಯಾವಾಗ ಎಂದು ಅರಿವಾಗಲೇ ಇಲ್ಲ. 'ಪ್ರೀತಿ ಈ ವಯಸ್ಸಿನಲ್ಲೇ' ಅಂತ ನಗುತ್ತಾರೆನೋ ಅಲ್ವೇ ಕೇಳಿದವರು ?  'ಬದುಕಲ್ಲಿ ಎಲ್ಲಾದರಲ್ಲೂ ಸಂತೃಪ್ತರು ನಾವು ಯಾವುದಕ್ಕೂ ಕಡಿಮೆ ಇಲ್ಲ' ಎಂದುಕೊಂಡೇ ಇದ್ದ ನಾವು ಅಧ್ಹೇಗೆ ಈ ಪರಿಯಾಗಿ ಹೊಂದಿಕೊಂಡೆವೋ!!  ಅದೆಲ್ಲೋ ಒಂದು ಕಡೆ ಮನಸಲ್ಲಿ ಒಂದು ಖಾಲಿ ಜಾಗ ಇರುತ್ತದೆಯಂತೆ. ಆ ಖಾಲಿ ಜಾಗ ಇರೋದು ಕೂಡ ಗೊತ್ತಿರೋದಿಲ್ಲವಂತೆ. ನಮ್ಮನ್ನ ನಾವು ತೆರೆದುಕೊಳ್ತಾ , ಹಂಚಿಕೊಳ್ತಾ ಮನಸ್ಸಿನ ಅಂತಹ ಒಂದು  ಖಾಲಿ ಜಾಗದಲ್ಲಿ ಭದ್ರವಾಗಿ ನೆಲೆಯೂರಿ ಬಿಟ್ಟಿದ್ವಿ ಇಬ್ಬರೂ . ಅವಿಶ್ರಾಂತ ಕೆಲಸದ ನಡುವೆಯೂ, ಬದುಕಿನ ಅನೇಕ ಜವಾಬ್ದಾರಿಗಳ ನಡುವೆಯೂ, ನಮ್ಮ ಎಲ್ಲ ಪರಿಮಿತಿಗಳ ನಡುವೆಯೂ ನಮ್ಮಿಬ್ಬರಿಗೆಂದೇ  ಒಂದಷ್ಟು 'ಸ್ಪೇಸ್' ಮಾಡಿಕೊಂಡಿದ್ವಿ. ವೃತ್ತಿಯ ಒತ್ತಡಗಳು, ಮನೆಯ ಆಗುಹೋಗುಗಳು, ಮಕ್ಕಳ ಏಳುಬೀಳುಗಳು, ಇನ್ಯಾರದೋ ಒಂದಷ್ಟು ಕಥೆಗಳು, ನಮ್ಮದೇ ತಲೆಹರಟೆಗಳು, ಇವೆಲ್ಲದರ ಜೊತೆಗೆ ಒಂದಷ್ಟು ಪ್ರೀತಿಯ ಮಾತುಗಳು, ಈ  ಪರಿಯ ಅದೆಷ್ಟು ಪ್ರೀತಿ ಹಂಚಿಕೊಂಡೆವು ಅಲ್ವೇ! ನಿಗದಿತ ಸಮಯಕ್ಕಿಂತ ಒಂದೆರಡು ಕ್ಷಣಗಳು ನೀ ತಡವಾಗಿ ಕರೆ ಮಾಡಿದರೆ ಮನಸ್ಸು ಚಡಪಡಿಸುತ್ತಿತ್ತು ! ಹಾಗೆ ಅದೆಷ್ಟು ಜಗಳ ಅಡಿದ್ದೆವೋ ನೆನಪಿಲ್ಲ! ಎಲ್ಲೋ ಇರುವ ನೀನು ನೊಂದರೆ ಮನ ತಲ್ಲಣಗೊಳ್ತಾ ಇತ್ತು. ನೀ ನಕ್ಕರೆ ಮನ ಸಂಭ್ರಮಿಸುತ್ತಿತ್ತು. ಇಷ್ಟೆಲ್ಲ ಪ್ರೀತಿಯ ನಡುವೆ ಒಂದು ದಿನ ಕೂಡ ಬೇಟಿಯಾಗಿರಲಿಲ್ಲ ! ಮನಸ್ಸು ಮಾಡಿದ್ದರೆ ಅದೇನು ದೊಡ್ಡ ವಿಷಯವಾಗಿರಲಿಲ್ಲ. ಆದರೂ ಅದ್ಯಾಕೋ ಹಾಗೆ ಉಳಿದುಬಿಟ್ಟೆವು.  ದಿಗಂತದ ಅಂಚಿನ ಜೀವಗಾನದ ಮಿಡಿತಕ್ಕಾಗಿ ಕಾಯುತ್ತಾ,ಕನವರಿಸುತ್ತಾ .ಅಹ್ ! 

ಈಗ ಹೊರಟ್ಟಿದ್ದೇಕೆ ಅಂದ್ಯಾ ? ಉಹೊಂ, ಹೇಳುವುದಿಲ್ಲ ಬಿಡು. ಕೆಲವು ಕಾರಣಗಳು ಹೇಳಲಾಗದು. ಪ್ರೀತಿ ಹೇಗೆ ಆಯ್ತು ಎನ್ನುವುದು ಹೇಗೆ ಕೆಲವರಿಗೆ ಕ್ಷುಲಕ ಎನಿಸಿಬಿಡುತ್ತದೆಯೋ ಹಾಗೆ ಕೆಲವು ಕಾರಣಗಳೂ ಕೂಡ ಉಳಿದವರಿಗೆ ಕ್ಷುಲಕ ಎನಿಸಿಬಿಡುತ್ತದೆ. ನೀ ಹೇಳಿದ್ದೂ ಒಂದು ಕಾರಣವೇ ಅನಿಸಿಬಿಡುತ್ತದೆ. ಆ ಸ್ಥಾನದಲ್ಲಿದ್ದಾಗ ಮಾತ್ರ ಆ ಕಾರಣ genuine ಅನಿಸುವುದು . ಅದಕ್ಕೆ ಹೊರಟುಬಿಟ್ಟಿದ್ದೇನೆ . ಹೋಗುವಾಗ ಎಂದಿನಂತೆ ನಿನ್ನ ನಿಷ್ಕಲ್ಮಶ ಗೆಳೆತನದ ಮೂಟೆ ಹೊತ್ತು ಹೋಗ್ತಾ ಇದ್ದೇನೆ.  ನಿನ್ನ ನಗುವಿನ  ಸದ್ದು ಕಿವಿಯಲ್ಲಿ ಹಾಗೆ ಇದೆ. 'ಒಯ್ , ಏನ್ ಸರ್ ಹೆಂಗಿದೆ ಮೈಗೆ' ಅನ್ನೋ ನಿನ್ನ ಡೈಲಾಗ್ ಕೇಳಿ ಹೋಗಬೇಕು ಅನಿಸಿಸರೂ ನೀ ಎಲ್ಲಿ ಅಳುವೆಯೋ ಎಂಬ ಭಯವಿದೆ.  ನನ್ನ ಬಗ್ಗೆ ನಿನಗೆ ಕಾಳಜಿ ಇಲ್ವಾ ಎಂದು ನೀ ನನ್ನ 'ಕೊರಳಪಟ್ಟಿ(!!)' ಹಿಡಿದರೆ ಮತ್ತೆ ಹೋಗಲು ಸಾಧ್ಯವಾಗದೇನೋ ಎಂಬ ಸ್ವಾರ್ಥ ಕೂಡ ಇದೆ. ಅದಕ್ಕೆ ಕರೆ ಮಾಡದೆ ಹೋಗ್ತಾ ಇದೀನಿ .  ನನಗೆ ಗೊತ್ತು, ನೀ ನಾ ಕೇಳದೆ ನಾ ಹೇಳದೆ ಎಂದೂ ನನಗೆ ಕರೆ ಮಾಡುವುದಿಲ್ಲ ಎಂದು!! ಹಂಚಿಕೊಂಡ ಪ್ರೀತಿ, ಗೆಳೆತನ, ಜಗಳ ಎಲ್ಲವನ್ನ ಜತನವಾಗಿ ನನ್ನ ಜೊತೆಯೇ ತೆಗೆದುಕೊಂಡು ಹೋಗ್ತಾ ಇದೀನಿ. ಹೋಗುವ ಮುನ್ನ ಎಂದಿನಂತೆ ಕಣ್ಣಿಗೇನೂ ಕಾಣದೇ ಇದ್ದರೂ ಸ್ಪರ್ಶವೇ ಇಲ್ಲದಿದ್ದರೂ ಮಾತನಾಡುತ್ತಲೇ ಮೌನವಾಗಿ ತಬ್ಬಿಹಿಡಿದ ನಿನ್ನ ನೆತ್ತಿಯ ಪರಿಮಳವ ಉಸಿರ ತುಂಬ ಎಳೆದುಕೊಂಡು  ಹೊರಡಲೇ !? 

ಹೋಗಿಬರಲೇ …


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.