ಅವನಿಕ – ಐ ಮಿಸ್ ಯೂ: ಅಮರ್ ದೀಪ್ ಪಿ.ಎಸ್.

ಡಿಯರ್ ಅವನಿಕ,

ನಿನಗಲ್ಲದೇ ನಾನ್ಯಾರಿಗೆ ಹೇಳಿಕೊಳ್ಳಲಿ,  ಈಗತಾನೇ ಎರೆಡೆರಡು ಅಪಘಾತವಾಗುವ ಕಂಟಕದಿಂದ ತಪ್ಪಿಸಿಕೊಂಡು ಬಂದು ಹೂಳು ತುಂಬಿದ ತುಂಗಭಧ್ರ ನದಿ ತಟದಲ್ಲಿ ಒಬ್ಬನೇ ಕೂತು ನಡುಗುತ್ತಿದ್ದೇನೆ. ಅದೇನಾಗಿತ್ತು ನಂಗೆ? ಬೈಕ್ ಓಡಿಸುವಾಗ ನಾನೆಂಥ “ಚಿತ್ತ”ದಲ್ಲಿದ್ದರೂ ಹದ ತಪ್ಪುತ್ತಿರಲಿಲ್ಲ.  ಯಾವ ಯೋಚನೆಯಲ್ಲಿ ಬೈಕ್ ಓಡಿಸುತ್ತಿದ್ದೆನೋ? ಎರಡು ಕ್ಷಣ ಮೈಮರೆತಿದ್ದರೆ ಟಿಪ್ಪರ್ ಗಾಡಿಯ ಗಾಲಿಗೆ  ಅಂಟಿಕೊಳ್ಳುತ್ತಿದ್ದೆ. ಯಾರಿಗಾದ್ರೂ ಫೋನ್ ಮಾಡಿ ಹೇಳಿಕೊಳ್ಲಾ ಅಂದರೆ ಮತ್ತೆ ನನಗೇ ಬೈಗುಳ.  ನಿನಗೊಬ್ಬಳಿಗೆ ಸುಮ್ಮನೇ ಮೆಸೇಜ್ ಕುಟ್ಟಿ ಮೊಬೈಲ್ ಜೇಬಲ್ಲಿಟ್ಟುಕೊಂಡೆ.  ಹೆದ್ದಾರಿಯಲ್ಲಿ ಈಗತಾನೇ ಕಣ್ಣುಬಿಟ್ಟುಕೊಂಡು ರೊಯ್ ಅಂತ ಸಾಗುತ್ತಿರುವ ಗಾಡಿಗಳು ಇಳಿಸಂಜೆಗೆ ಜಾರುತ್ತಿದ್ದವು.  ನಡುವೆ ಸೈರನ್ ಸದ್ದಿನೊಂದಿಗೆ ಆಂಬುಲೆನ್ಸ್ ಹೋಯಿತು.  ಬಹುಶ: ನಾನೂ ಟಿಪ್ಪರ್ ಗಾಲಿಗಂಟಿಕೊಂಡಿದ್ದರೆ ನನ್ನನ್ನೂ ಅದರಲ್ಲೇ ಎಳೆದೊಯ್ಯುತ್ತಿದ್ದರು.  “Iಣs ರಿusಣ beಛಿಚಿuse oಜಿ me………….” ನೀನೇನೋ ರಿಪ್ಲೈ ಮಾಡಿದೆ. ಆದರೆ ನಿಜಕ್ಕೂ ನೀನಾ? ಸಾಧ್ಯಾನೇ ಇಲ್ಲ. ಬಹುಶ: ನೀನು ನೆನಪಾಗಿದ್ದಕ್ಕೋ ಏನೋ ಆ ಕ್ಷಣಕ್ಕೆ ಎಚ್ಚರಗೊಂಡಿದ್ದಿರಬೇಕು.  ನಾವೇ ಏಕಾಂತ ಸೃಷ್ಟಿಸಿಕೊಂಡು ಕೂತು ಎದ್ದು ಬರುವುದು ಬೇರೆ.  ಒಂಟಿತನದಲ್ಲಿ ಸುಳಿದಾಡುವ ನಡೆದ ಘಟನೆಗಳು ನಮ್ಮನ್ನು ತಳಮಳಿಸುವುದು ಬೇರೆ.   ನಾನೀಗ ತಳಮಳಿಸಿ ಮಾತಾಡಿದ ದುಷ್ಪರಿಣಾಮವೇ ತಪ್ಪಿದ ಅನಾಹುತ.  

ಏನಿತ್ತು ನಮ್ಮಿಬ್ಬರ ನಡುವೆ ಮೊದಲು? ನಿನ್ನ ಹಸಿರ ಕಂಗಳ ನಿಷ್ಕಲ್ಮಷ ನಗೆಯ ಗುಂಗಲ್ಲಿರುತ್ತಿದ್ದ ನಿನ್ನಲ್ಲಿಗೆ ಬಂದು ಸುಮ್ಮನೇ ಪಕ್ಕದಲ್ಲಿ ನಾ ಕುಳಿತರೆ ಯಾಕೆಂದು ಕೇಳಲಿಲ್ಲ. ಯಾರೆಂದು ವಿಚಾರಿಸಲಿಲ್ಲ. ನಿನ್ನ ಪಾಡಿಗೆ ನೀನು- ಶಬರಿಯಂತೆ ಕಾಯುತ್ತಿದ್ದೆ. ಕಾಯುತ್ತಿದ್ದದ್ದು ಬಸ್ಸಗಾಗೋ? ನಿನ್ನ ನಿರೀಕ್ಷೆಯ ಖುಷಿಯ ಸಮಯಕ್ಕೋ?  ಗೊತ್ತಿಲ್ಲ.  ನನ್ನ ಅನಿಶ್ಚತತೆಯ ವಿಲವಿಲದೊಂದಿಗೆ ನಾನು.  ನಾನೊಬ್ಬ ಓದುಗ ಮಾತ್ರನಾಗಿದ್ದೆ.  ಪ್ರತಿದಿನ ಜಂಗುಳಿಯ ಮಧ್ಯೆ ಬಂದು ಕುಳಿತಾಗೆಲ್ಲಾ ನಾನು ಕಾಡಿಗೆ ತೀಡಿದ ನಿನ್ನ ಕಣ್ಣ ರೆಪ್ಪೆ ಕೆಳಗಿನ ಕಪ್ಪನ್ನೇ ಗಮನಿಸುತ್ತಿದ್ದೆ. ಆಗೆಲ್ಲಾ ನಿನ್ನ ಬಗ್ಗೆ ಸ್ನೇಹದ ಹಿತವೊಂದಿತ್ತು. ಸುಮ್ಮನೇ ಗುನುಗುತ್ತಿದ್ದ ನನ್ನ ಹಾಡಲ್ಲಿ ನಿನ್ನ ಅಪ್ರಿಷಿಯೇಷನ್ನು. ನಾನೋದಿದ ಪುಸ್ತಕದ ಸಾಲು ಹೇಳಿದರೆ ಪುಸ್ತಕದ ಎರವಲು ಪಡೆದು ಓದಿದ ನಿನ್ನ ಖುಷಿ. ಇಷ್ಟೇ ಅಲ್ವಾ ನಮಗಿದ್ದ ಸಲುಗೆ?.   ದಿನಗಳೆದಂತೆ ನಮ್ಮ ನಮ್ಮ ದಿನಗೂಲಿಗೆ ಹೆಜ್ಜೆಯಾಗುವ ದಾರಿಯ ಮಧ್ಯೆ ಒಂದು ಹಲೋ. ನಂತರ ಅನ್ನದಾತ ಸುಖೀಭವ ಅಂತ ಹಾಜರಿ ಹಾಕಿ ಇದ್ದ ಕೆಲಸ ಗುಡಿಸಿಟ್ಟು ಮತ್ತೆ ಸಂಜೆಗೆ ಸಿಕ್ಕಾಗ ಮುಖದಲ್ಲಿ ಸುಸ್ತಿನ ಮಾತೇ ಇಲ್ಲ.  ಲವಲವಿಕೆಯ ಹರಟೆ. ಒಂದು ಕಪ್ಪು ಚಹಾ. ನೀನು ಹೋದ ಮೇಲೆ ಕೊನೆ ಮುತ್ತಿನಂಥ ಜುರುಕಿ ಎಳೆದು ಬಿಸಾಡುವ ಸಿಗರೇಟು. ಮತ್ತೆ ನಾನು ನನ್ನ ದಾರಿ. 

ಈ ಜಗತ್ತಿನ ಕೆಲವರಿಗೆ ಒಂದು ಹೆಣ್ಣು ಮತ್ತು ಗಂಡಿನ ಮಧ್ಯೆಯ ಸಂಭಂಧಕ್ಕೆ ಹೆಸರಿಡಲು ಕೇವಲ ಒಂದು ವಾಂಚೆಯಂಥ ಪದ ಸಾಕು. ಅದಕ್ಕೂ ಮಿಗಿಲಾಗಿ ನೀನಿದ್ದದ್ದು ಒಬ್ಬ ಸ್ನೇಹಿ, ಹಿತೈಷಿ, ಹೊಸ ವಿಚಾರಕ್ಕೆ ಕಲಿಕೆಯಾಗಿ, ಅನುಭವಿಸಿದ ಖುಷಿ, ಗೇಲಿ  ಕೊಸರಿಲ್ಲದ ನಗೆ, ಸಮಾಧಾನಿಸುವ ಮನಸ್ಸು, ಹವ್ಯಾಸಕ್ಕೆ ಮುನ್ನುಡಿ, ಬರೀ ಓದುಗನಾಗಿದ್ದ ನಾನು ಅಚಾನಕ್ಕಾಗಿ ಒಂದೇನೋ ಬರಹ ಬರೆದಿದ್ದಕ್ಕೆ “ಚುಪಾ ರುಸ್ತುಂ” ಎಂದ ಬೆರಗು ಎಲ್ಲವೂ ಆಗಿದ್ದೆ.  ನೀನು, ಜೋಡೆಲುಬಿನಂಥ ನಿನ್ನ ಧೈರ್ಯದ ನಿರ್ಧಾರಕ್ಕೆ ಒಮ್ಮೊಮ್ಮೆ ನಾನೇ ಬೆರಗಾಗಿದ್ದೆ.  ಇದಕ್ಕಿಂತ ಒಳ್ಳೆಯ ಸ್ನೇಹ ಸಿಗಲು ಸಾಧ್ಯವೂ ಇದ್ದಿಲ್ಲ ಬಿಡು.  ನಾನೇ ಸ್ವಲ್ಪ ದುಡುಕ, ನೀನು ಸಂಯಮಿ. ಗಂಟೆಗಟ್ಟಲೇ ನಾನು ಬಡಬಡಿಸಿದರೂ ಬೇಸರಿಸದೇ ಕೇಳಿ “ಇರ್ಲಿ ಬಿಡು ಆಗಿದ್ದಾಯ್ತು” ಎನ್ನುವಂಥ ಕ್ಷಮಾ ಗುಣ ನೀನು.

ನೀನು ಬಹುವಚನ ದಾಟಿ ಮಾತಾಡಿವಳೇ ಅಲ್ಲ. ನಾನೇ ಒಂಟಿ ಅಕ್ಷರಕ್ಕೆ ಇಳಿದು ಆತ್ಮೀಯತೆ ಬೆಳೆಸಿಕೊಂಡೆ.   ನನ್ನ ಮುಖದಲ್ಲಿ ಬದಲಾವಣೆಗಳನ್ನು ಬಲುಬೇಗ  ಹುಡುಕಿ “ಯಾಕೆ ಏನಾಯ್ತು ” ಅನ್ನುವ ನಿನ್ನ ಕನ್ಸರ್ನ್ ಗೆ ಅದೆಷ್ಟು ಆಳವಿದೆ ಗೊತ್ತಾ? ನಾನೇ ಪಾಪಿ, ಒಮ್ಮೆ ಹೇಳಿದರೆ ಇನ್ನೊಮ್ಮೆ ಮಗುಮ್ಮನಾಗುತ್ತಿದ್ದೆ.   ನನ್ನ ದುಗುಡದ ದಿನಗಳೆಲ್ಲವೂ ನಿನ್ನ ಸಮಚಿತ್ತದ ಮಾತುಗಳಲ್ಲೇ ಕಳೆದು ಹೋಗುತ್ತಿದ್ದವು.   ಅದ್ಯಾವಾಗ ದುಂಡಿರಾಜ್ ರ ಒಂದು ಪದ್ಯ  ಓದಿದ್ದೆನೋ.  ಹೆಣ್ಣಿನ ಬಣ್ಣನೆಯ ಪದ್ಯವದು.  ತುಟಿ, ಮೂಗನ್ನು ಕವಿತ್ವದಲ್ಲಿ ಹೊಗಳಿ ಕಣ್ಣನ್ನು ಕೊನೆಗೆ ಲವಂಗ ಅಂದಿದ್ದರು. ಅಂದರೆ ಲವ್ ಹುಟ್ಟುವ ಅಂಗ ಅಂತ.   ಪದೇ ಪದೇ ನಿನ್ನ ಕಣ್ಣುಗಳನ್ನೇ ನೋಡುತ್ತಿದ್ದ ನನಗೆ ಯಾವ ಉನ್ಮಾದವೂ ಇಲ್ಲದೇ ಅಚಾನಕ್ಕಾಗಿ “ಲವಂಗ” ಅಂದುಬಿಟ್ಟೆ.  “ಬೇರೆ ಹೆಸರು ಸಿಗಲಿಲ್ಲವಾ?” ಅಂತ ನೀನು ಕೇಳಿದ ಮೇಲೆ ಒಂದೊಂದು ಹೆಸರನ್ನು ಹೇಳುತ್ತಾ ಹೋದೆ. ಸಿಕ್ಕು ಸಿಕ್ಕು ಗುಂಗುರು ಕೂದಲಿದ್ದ ನೀನು ಕರ್ಲಿ, ಗುಳಿಕೆನ್ನೆಯಿದ್ದದ್ದಕ್ಕೆ ಡಿಂಪ್ಲಿ.   ಅದಕ್ಕೆಲ್ಲಾ ಸ್ಮೈಲ್ ಸಿಂಬಲ್ ಆಗುತ್ತಿದ್ದೆಯೇ ಹೊರತಾಗಿ ಯಾವುದೇ ಆಕರ್ಷಣೆಯಾಗಿರಲಿಲ್ಲ.

ವರ್ಷಗಳಾದವು,  ನೀನು ನೀನಾಗೇ ಉಳಿದ ನಿಸ್ಪೃಹ ಮನಸ್ಸು.  ಇತ್ತೀಚೆಗೆ ನಾನೇ ಚಂಚಲಗೊಂಡೆ.  ಮೊದಲು ಪ್ರೀತಿ ಅನ್ನಿಸಿತು.  ಹಾಗೆಂದು ಹೇಳಿದರೆ, ಸ್ನೇಹ ಕಳೆದೀತೆಂದು ಬಾಯಿ ಬಿಡಲಿಲ್ಲ.  ನನ್ನೊಳಗಿನ ಬದಲಾವಣೆಗಳನ್ನು ಇಂಚಿಂಚು ಗಮನಿಸುವ ನಿನಗೆ ಅದೆಲ್ಲಿ ಅನುಮಾನ ಬರುತ್ತೋ ಅಂತ  ನಾನೇ ಹೇಳಿಕೊಂಡೆ.   ಬದಲಾದ ನನ್ನನ್ನು ಸಿಟ್ಟಲ್ಲಿ ಒಂದು ಮಾತಾದರೂ ಬೈಯುತ್ತೀಯೆಂದು ಕಾದೆ.  ಊಹುಂ, ನೀನದನ್ನು ಮಾಡಲೇ ಇಲ್ಲ. “ನೋಡು, ಮನುಷ್ಯನಲ್ಲಿ ದಿಗ್ಗನೆ  ಬದಲಾವಣೆಯಾಗೋದು ಸಹಜ. ಇವತ್ತು ನಿಂಗೆ ಹಾಗನ್ನಿಸಿರಬಹುದು, ಒಂದೆರಡು ತಿಂಗಳು ಸುಮ್ಕಿರು, ಆಮೇಲೆ ತಿಳಿಸು”  ಅಂತಷ್ಟೇ  ಹೇಳಿ ಮತ್ತೆ ಯಥಾಪ್ರಕಾರ ಡಿಂಪಲ್ ಆದೆ.

ಬದಲಾಗದ ನಾನು ಹೊರಬರಲಾರದೇ ಇನ್ನಷ್ಟು ಆಳವಾಗುತ್ತಾ ಹೋದೆ.  ತಿಂಗಳುಗಳು ಕಳೆದ ನನಗೆ ಗುಂಗು ಇಳಿಯದ ಯೋಚನೆಯಲ್ಲಿ ತಪ್ಪಿಸಿಕೊಂಡ ಅನಾಹುತದ ನಂತರ ಇವೆಲ್ಲಾ ನೆನಪಿಸಿಕೊಂಡು ಕೂತಿದ್ದೆ.  ಒಬ್ಬ ಗೆಳತಿಯನ್ನು ಕಳೆದುಕೊಳ್ಳುತ್ತೀನೆನ್ನುವ ಆತಂಕವೋ ಅಥವಾ ನೀನೇ ಬೇಕು ಎನ್ನುವ ತಹತಹವೋ ಒಟ್ಟಿನಲ್ಲಿ ದುಗುಡಕ್ಕೆ ಬಾಯಿ ಕೊಟ್ಟೆ.  ಅದೇ ತಪ್ಪಾಯ್ತು.  ಸಹನೆಯುಳ್ಳ ನೀನೇನೋ ಸರಿದಾರಿಗೆ ಸರಿದು ಮೌನಿಯಾದೆ. ಮಾತಿನ ಸಿಟ್ಟಿಗಿಂತ ಮೌನ ನೀಡುವ ಶಿಕ್ಷೆಯಿದೆಯಲ್ಲಾ? ಅದಕ್ಕಿಂತ ಘಾಸಿ ಮತ್ತೊಂದಿಲ್ಲ.  ನಾನೀಗ ಜಾತ್ರೆಯಲ್ಲಿ ಕೊಂಡು ತಂದ ಇಷ್ಟದ ಗೊಂಬೆಯನ್ನು ತುಂಬಿದ ಬಸ್ಸಲ್ಲಿ ಕಳೆದುಕೊಂಡು ಕೂಸಿನಂತಾಗಿದ್ದೇನೆ.  ಕಳೆದುಕೊಂಡದ್ದು ಬರೀ ಗೊಂಬೆ ಎನ್ನಲೋ?   ಲವಂಗ ಎನ್ನಲೋ?  ಇಷ್ಟದ ವ್ಯಕ್ತಿ ಎನ್ನಲೋ?  ನಗುವಿಗೆ ಕಾರಣವಾಗಿ ಮನಸ್ಸು ಪ್ರಫುಲ್ಲವಾಗಿದ್ದ ಉಸಿರೆನ್ನಲೋ? ಗೊತ್ತಾಗುತ್ತಿಲ್ಲ. ಅವನಿಕ ಅಂದರೆ ಭೂಮಿಯಂತೆ. ಕ್ಷಮಯಾ ಧರಿತ್ರಿ ಅನ್ನುತ್ತಾರೆ. ಕ್ಷಮಿಸುವ ಔದಾರ್ಯವೂ ನಿನಗಿಲ್ಲವೇ? ನಿನಗಲ್ಲದೇ ಇನ್ಯಾರಿಗೆ ಕೇಳಲಿ?


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಸಾವಿತ್ರಿ.ವೆಂ.ಹಟ್ಟಿ
ಸಾವಿತ್ರಿ.ವೆಂ.ಹಟ್ಟಿ
7 years ago

ಕಥೆ ಇಷ್ಟವಾಯಿತು ಸರ್..

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
7 years ago

ಧನ್ಯವಾದಗಳು

2
0
Would love your thoughts, please comment.x
()
x