ಅವತಾರ್ ವರ್ಸಸ್ ಬಬ್ರುವಾಹನ

ಆಗ ತಾನೆ "ಅವತಾರ್" ಸಿನಿಮಾ ನೋಡಿ ಬರುತ್ತಿದ್ದೆ. ದಾರಿಯುದ್ದಕ್ಕೂ ಅದೇ ಗುಂಗು, ಅದರ ನಿರ್ದೇಶಕ ಮತ್ತು ನಿರ್ಮಾಪಕ ಜೇಮ್ಸ್ ಕ್ಯಾಮೆರಾನ್, ಅದರಲ್ಲಿ ಕೆಲಸ ಮಾಡಿದ ಅಲ್ಲಲ್ಲ…..ಈ ಸಿನಿಮಾವನ್ನೇ ತಮ್ಮ ಊಟ ತಿಂಡಿ ನಿದ್ರೆಯಾಗಿಸಿಕೊಂಡ, ಕಲಾ ನಿರ್ದೇಶಕ, ಕ್ಯಾಮೆರಾಮೆನ್, ಚಿತ್ರದ ದೃಶ್ಯಕಾವ್ಯವನ್ನು ಸೃಷ್ಟಿಸಲು ಹಗಲು ರಾತ್ರಿಯೆನ್ನದೇ ಕೆಲಸಮಾಡಿದ ಗ್ರಾಫಿಕ್ಸ ತಂತ್ರಜ್ಞರು, ಕಲಾವಿದರೂ ಪ್ರತಿಯೊಂದು ಪಾತ್ರಗಳನ್ನು ಕಂಪ್ಯೂಟರುಗಳಲ್ಲಿ, ನಿಜವಾದ ಮಾಡೆಲ್ಲುಗಳಲ್ಲಿ ಸೃಷ್ಟಿಸಿ ನಿರ್ದೇಶಕ ಕ್ಯಾಮೆರಾನ್‍ಗೆ ತೋರಿಸಿದಾಗ,  ಅರೆರೆ….ಇದು ಈ ರೀತಿ ಬೇಡ, ಅ ರೀತಿ ಮಾಡಿ, ಇದು ಓಕೆ ಅದ್ರೂ ಇದರಲ್ಲಿ ಇನ್ನೂ ಸ್ವಲ್ಪ ವೈವಿದ್ಯತೆ ಬೇಕು, ಇದು ನೋಡಿ ಚೆನ್ನಾಗಿದೆ, ಆದ್ರೆ ಇನ್ನೂ ಸ್ವಲ್ಪ ಪರಿಪೂರ್ಣತೆ ಕೊಡಲು ಸಾಧ್ಯವೇ ಅಂಥ ಪ್ರತಿ ಪಾತ್ರಗಳು, ಗಿಡಗಳು, ಎಲೆಗಳು, ಬೆಳಕುಚೆಲ್ಲುವ ಹುಳುಗಳು, ಪ್ರಾಣಿಗಳು, ತೇಲಾಡುವ ಬೆಟ್ಟಗಳು, ಅದಕ್ಕೆ ಕೊಂಡಿಗಳಾದ ರಾಕ್ಷಸಗಾತ್ರದ ಬಿಳಲುಗಳು, ಹಾರಾಡುವ ಪಕ್ಷಿಗಳು, ರಾತ್ರಿಸಮಯದ ಆ ಪ್ರಕೃತಿಯ ಸ್ವರ್ಗ, ಇತ್ಯಾದಿಗಳನ್ನು ನೋಡಿ ತಂತ್ರಜ್ಞರಿಗೆ ಈ ನಿರ್ದೇಶಕ ಕ್ಯಾಮೆರಾನ್ ಎಂಥ ಗೋಳು ಕೊಟ್ಟಿರಬೇಕು. ಅವರು ಹಗಲು ರಾತ್ರಿ ಕೊನೆಗೆ ಕನಸಲ್ಲೂ ಕುಸುರಿಕೆಲಸಮಾಡಿ ತಕ್ಷಣ ಎದ್ದು ಅದನ್ನೇ ಮರುಸೃಷ್ಟಿಸಿರುವ ಕೆಲಸಕ್ಕೆ ತೊಡಗಿಕೊಂಡಿದ್ದರೆ ಮಾತ್ರ ಯಾರು ಕಾಣದಂತ, ಕಲ್ಪಿಸಿಕೊಳ್ಳದಂತ ಮಾಯಾಲೋಕ ಸೃಷ್ಟಿಸಲು ಸಾಧ್ಯವಲ್ಲವೇ ಅಂದುಕೊಳ್ಳುವ ಇಡಿ ಸಿನಿಮಾ ತಂಡಕ್ಕೆ ನನ್ನ ದೀರ್ಘ ನಮಸ್ಕಾರಗಳನ್ನು ಹಾಕಿ  ಮನೆಗೆ ಬಂದೆ.

ಊಟದ ಸಮಯ. ಟಿವಿಯಲ್ಲಿ ಬಬ್ರುವಾಹನ ಸಿನಿಮಾ ಬರುತ್ತಿತ್ತು.  ನಾನು ಅವತಾರ್ ಸಿನಿಮಾಗೆ ಹೋಗಿದ್ದನ್ನು ಹೇಮಾಶ್ರಿಗೆ ಹೇಳಲ್ಲಿಲ್ಲ. ಇಬ್ಬರೂ ಊಟಮಾಡುತ್ತಿದ್ದೆವು. ನಾನು ಟಿವಿಯಲ್ಲಿನ ಸಿನಿಮಾ ಸರಿಯಾಗಿ ಗಮನಿಸದೇ ಅವತಾರ್ ಹ್ಯಾಂಗವರ್‍ನಲ್ಲಿ ಊಟ ಮಾಡುತ್ತಿದ್ದೆ.  ಆಗ ಬಂತಲ್ಲ ಅರ್ಜುನ ಮತ್ತು ಬಬ್ರುವಾಹನ ನಡುವಿನ ವಾಗ್ಯುದ್ದ ತದನಂತರ ಅವರ ಬಾಣಪ್ರಯೋಗ.  ಅರ್ಜನ ಮೊದಲು ಬಿಟ್ಟ ಅದೆಂತದೋ ಬೆಂಕಿಯುಗಳುವ ಅಸ್ತ್ರ ಅದಕ್ಕೆ ವಿರುದ್ಧವಾಗಿ ಬಬ್ರುವಾಹನ ಬಿಟ್ಟ  ಮತ್ತೊಂದು ಅದಕ್ಕಿಂತ ಶಕ್ತಿಶಾಲಿ ಅಸ್ತ್ರ.  ಅವೆರಡು ಆಕಾಶದಲ್ಲಿ ಹಾರಾಡಿ ಒಂದಕ್ಕೊಂದು ತಾಗಿ ಗುದ್ದಾಡಿ  ಕೊನೆಗೊಂದು ಗೆದ್ದಿತು.  ಮತ್ತೆ ಮತ್ತೊಂದು ಬಾಣ ಪ್ರಯೋಗ ಇಬ್ಬರಕಡೆಯಿಂದ. " ರೀ ಇದೇನ್ರಿ ಇದು  ಅರ್ಜುನ ಮತ್ತು ಬಬ್ರುವಾಹನ ಇಬ್ಬರೂ ಹೆಚ್ಚೆಂದರೆ ನೂರು ಮೀಟರ್ ದೂರವಿರಬಹುದು. ಇಬ್ಬರೂ ಸರಿಯಾದ ಗುರಿಕಾರರೆಂದಮೇಲೆ ಅವನು ಬಿಟ್ಟ ಬಾಣ ಇವನಿಗೆ ತಗುಲಬೇಕು, ಇವನು ಬಿಟ್ಟಬಾಣ ಅವನಿಗೆ ನಾಟಿ ಸಾಯಬೇಕು, ಆದ್ರೆ ಇಲ್ಲಿ ಇದ್ಯಾಕೆ ಆ ಬಾಣಗಳೆರಡು ಆಕಾಶಕ್ಕೆ ಹೋಗ್ತವಲ್ಲ?"  ಅವಳಿಂದ ಸಡನ್ನಾಗಿ ಬಂದ ಪ್ರಶ್ನೆ ನನ್ನನ್ನು ಒಂದುಕ್ಷಣ ತಬ್ಬಿಬ್ಬು ಮಾಡಿತು.   ಅವಳು ಕೇಳುತ್ತಿರುವುದು ಸರಿಯಾಗಿದೆಯಲ್ಲಾ.   ಆದ್ರೆ ತಕ್ಷಣ ನನಗೆ ಉತ್ತರ ನೀಡಲಾಗಲಿಲ್ಲ.  ಅವಳ ಪ್ರಶ್ನೆಯೇ ನನ್ನ ಪ್ರಶ್ನೆಯೂ ಆಗಿತ್ತು. ಸ್ವಲ್ಪ ಹೊತ್ತು ಆಲೋಚಿಸಿ,  " ನೀನು ಬುದ್ದಿವಂತೆಯಾಗಿದ್ದೀಯಾ ಅನ್ನಿಸುತ್ತೆ,  ಇದೇ ಸಿನಿಮಾವನ್ನು ನಿನ್ನ ಬಾಲ್ಯದಲ್ಲಿ ನೋಡಿದಾಗ ಯಾರಿಗೂ ಅವಾಗ ಈ ಪ್ರಶ್ನೆಯನ್ನು ಕೇಳಲಿಲ್ಲವೇ"  ನಾನು ಮರು ಪ್ರಶ್ನೆ ಹಾಕಿದೆ.  ಅವಳಿಂದ ಎಂಥ ಉತ್ತರ ಬರಬಹುದು ಅಂತ ಕಾಯುತ್ತಿದ್ದೆ.

"ನೋಡ್ರಿ ನಮ್ಮ ಚಿಕ್ಕಂದಿನ ಹಬ್ಬ ಹರಿದಿನಗಳಲ್ಲಿ, ಗಣೇಶನ ದೊಡ್ಡ ಪೆಂಡಾಲುಗಳಲ್ಲಿ[ಅರಸಿಕೆರೆಯಲ್ಲಿಯಲ್ಲಿ ಗಣೇಶ ಪೆಂಡಾಲಿನಲ್ಲಿ ತಿಂಗಳುಗಟ್ಟಲೆ ಗಣೇಶನನ್ನು ಇಟ್ಟು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಹಳೆ ಸಿನಿಮಾಗಳನ್ನು ಹಾಕುತ್ತಿದ್ದರಂತೆ]ವಿಧಿವಿಲಾಸ, ಜಗದೇಕವೀರ, ಬಬ್ರುವಾಹನ, ಭೂಕೈಲಾಸ ಹೀಗೆ ಅನೇಕ ಸಿನಿಮಗಳನ್ನು ಹಾಕುತ್ತಿದ್ದರಲ್ಲಾ ಅದು ನಮಗೆ ಮೊದಲೇ ಗೊತ್ತಾಗಿ ಸ್ಕೂಲ್ ಬಿಟ್ಟ ತಕ್ಷಣ ಮನೆಯಲ್ಲಿ ಬ್ಯಾಗ್ ಬಿಸಾಡಿ ಅಲ್ಲಿ ಗೆಳತಿಯರೊಂದಿಗೆ ಹೋಗಿ ಕುಳಿತುಬಿಡುತ್ತಿದ್ದೆ. ಅದರ ಆನಂದವೇ ಬೇರೆ ಬಿಡ್ರಿ" ಅಂದಳು.

ಆ ಸಿನಿಮಾಗಳಲ್ಲೂ ಇಂಥ ಸನ್ನಿವೇಶಗಳನ್ನು ನೋಡಿದಾಗ ನನಗೆ ಕೇಳಿದಂತೆ ನೀನು ಆವಾಗ ಯಾರಿಗೂ ಈ ರೀತಿ ಪ್ರಶ್ನೆ ಕೇಳಲಿಲ್ವಾ" ನಾನು ಕೇಳಿದೆ.

"ಅಯ್ಯೋ ಹೋಗ್ರಿ, ಆಗಿನ ಮಜವೇ ಬೇರೆ, ನಮ್ಮೂರಲ್ಲಿ ಇದ್ರೆ ಇನ್ನೂ ಅಂತ ಸಿನಿಮಾ ನೋಡಿ ಖುಷಿ ಪಡಬಹುದಿತ್ತು. ನಿಮ್ಮನ್ನು ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಅವೆಲ್ಲಾ ಎಲ್ಲಿ ಸಿಗುತ್ತವೆ ಹೇಳಿ" ಅಂತ ನನಗೇ ಮರು ಪ್ರಶ್ನೆ ಹಾಕಿದಳು. ಅವಳ ಪ್ರಶ್ನೆಗೆ ನಾನು ಉತ್ತರಿಸದಿದ್ದರೂ ಬೆಂಗಳೂರಿಗೆ ಬಂದರೆ ಅಂತ ಖುಷಿಯನ್ನು ಎಲ್ಲರೂ ಕಳೆದುಕೊಂಡುಬಿಡುತ್ತಾರ.  ನನ್ನಲ್ಲಿ  ಹೊಸ ಪ್ರಶ್ನೆ ಉದ್ಬವವಾಗಿತ್ತು.

ಬೇರೆ ಊರಿನಿಂದ ಬಂದವರಿಗೆ ಈ ರೀತಿ ಆದರೆ ನನ್ನಂತೆ ಇಲ್ಲೇ ಹುಟ್ಟಿ ಬೆಳೆದವರ ಕತೆಯೇನು ಅಂದುಕೊಂಡಾಗ ನನ್ನ ಬಾಲ್ಯದ ನೆನಪು ಮರುಕಳಿಸಿತು.

ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ.  ಆಗ ನಮ್ಮ ರಸ್ತೆಗಳಲ್ಲಿ ಗಣೇಶ, ಕನ್ನಡ ರಾಜ್ಯೋತ್ಸವ, ಇತ್ಯಾದಿಗಳನ್ನು ನಡೆಸುವಾಗ ಕಡ್ಡಾಯವಾಗಿ ಒಂದೆರಡು ಸಿನಿಮಾಗಳನ್ನು ಹಾಕುತ್ತಿದ್ದರು. ನಾಳೆ ರಾತ್ರಿ ಇಂಥ ಸಿನಿಮಾ ಅಂತ ಮೈಕಿನಲ್ಲಿ ದೊಡ್ಡದಾಗಿ ಇವತ್ತೇ ಅನೌನ್ಸ್ ಮಾಡುತ್ತಿದ್ದರು. ಜೊತೆಗೆ ಅಲ್ಲೊಂದು ದೊಡ್ಡ ಕೈಬರಹವನ್ನು ಹಾಕಿಬಿಡುತ್ತಿದ್ದರು.  ನಾನು ಗೆಳೆಯರೊಂದಿಗೆ ಬೆಳಿಗ್ಗೆ ಹೋಗುವಾಗ ಅದನ್ನು ನೋಡಿಬಿಟ್ಟರೆ ಮುಗೀತು. ರಾತ್ರಿ ಬೇಗ ಊಟ ಮುಗಿಸಿ ನನ್ನ ಕೈಲಿದ್ದ ಚಿಲ್ಲರೆ ಕಾಸಿಗೆ ಆಗ ಸಿಗುತ್ತಿದ್ದ ಕುರುಕುಲು ತಿಂಡಿಗಳನ್ನು ಜೇಬಿನಲ್ಲಿ ತುಂಬಿಸಿಕೊಂಡು ಗೆಳೆಯರೊಂದಿಗೆ ಸಿನಿಮಾ ಶುರುವಾಗುವ ಮೊದಲೇ ಮುಂದಿನಸಾಲಿನಲ್ಲಿ ಜಾಗವನ್ನು ಹಿಡಿದು ಕುಳಿತುಬಿಡುತ್ತಿದ್ದೆ.  ಭೂಕೈಲಾಸ, ವಿಧಿವಿಲಾಸ, ಜಗದೇಕವೀರ, ಶ್ರೀನಿವಾಸ ಕಲ್ಯಾಣ, ಸತ್ಯಹರಿಸ್ಚಂದ್ರ, ಒಂದೇ ಎರಡೇ ಹತ್ತಾರು ಸಿನಿಮಾಗಳನ್ನು ಅದರೊಳಗಿನ ಮಾಯ ಮಂತ್ರಗಳನ್ನು ನೋಡಿ ಮಜಾ ಮಾಡುತ್ತಿದ್ದೆವು.

ಆಗಲೂ ರಥವೇರಿ ಬಿಲ್ಲುಬಾಣಗಳ ಯುದ್ಧ,  ಉದಯಕುಮಾರ್ ಒಮ್ಮೆ ಬಲಗೈಯಲ್ಲಿ ಚೂಂ ಅಂದು ಬಿಟ್ಟರೇ ಮುಗೀತು ಒಬ್ಬ ರಾಕ್ಷಸ ಬಂದುಬಿಡುತ್ತಿದ್ದ ಅವನು ಎಲ್ಲಾ ಯೋದರನ್ನು ಒಸಗಿಬಿಡುತ್ತಿದ್ದರೆ ನಮಗೆ ಸಿಟ್ಟು. ಆಷ್ಟರಲ್ಲಿ ರಾಜಕುಮಾರ್ ಬಿಟ್ಟಬಾಣ ಆಕಾಶವೆಲ್ಲಾ ಸುತ್ತಿ, ಎಲ್ಲೆಲ್ಲೋ ಅಲೆದಾಡಿ ಕೊನೆಗೆ ಆ ರಾಕ್ಷಸನಿಗೆ ತಗುಲಿ ಅವನು ಸತ್ತರೆ ನಮಗಂತೂ ನಾವೇ ಯುದ್ಧದಲ್ಲಿ ಗೆದ್ದಷ್ಟೂ ಸಂಭ್ರಮ. ಒಂದು ಕೋಣೆಯೊಳಗೆ ನಮ್ಮ ರಾಜಕುಮಾರ್ ಹೋದರೆ, ಅಲ್ಲಿರುವ ಪ್ರತಿಗೋಡೆಯಲ್ಲಿನ ವಸ್ತುಗಳು ಮಾಯಾವಸ್ತುಗಳೇ. ಒಂದು ಗೋಡೆಗೆ ಸಿಕ್ಕಿಸಿದ್ದ  ಹುಲಿಮುಖವನ್ನು  ಮುಟ್ಟಿದರೆ ಸಡನ್ನಾಗಿ  ಎದುರಿಂದ ಈಟಿಯೊಂದು ನುಗ್ಗಿ ಬಂದು ರಾಜಕುಮಾರಿಗೆ ಚುಚ್ಚುವುದಲ್ಲದೇ ನಮಗೇ ಚುಚ್ಚಿಬಿಟ್ಟಿತ್ತೇನೋ ಅನ್ನಿಸಿ ಅದುರಿ, ಬೆದರಿಬಿಡುತ್ತಿದ್ದೆವು.  ಸಿನಿಮಾ ನೋಡಿ ಮನೆಗೆ ಬಂದರೆ ರಾತ್ರಿ ಕನಸಲ್ಲೂ ಅದೇ ಬಂದು ಭಯದಿಂದ ಅಮ್ಮನನ್ನು ಅಪ್ಪನನ್ನು ಅಪ್ಪಿ ಮಲಗಿದ್ದು ನೆನಪಾಯಿತು.

ಅದೆಲ್ಲಾ ಆದರೂ ನಮಗೆ ಅಂಥ ಸಿನಿಮಾಗಳು ಬೇಕಿತ್ತು. ಅದರೊಳಗಿನ ಈ ಮಾಯಾ ಮಂತ್ರಗಳು, ಬಾಣ ಬಿರುಸುಗಳು ಬೇಕಿತ್ತು. ಇವತ್ತು ನಮ್ಮಲ್ಲಿ ಮೂಡಿದ ಈ ಪ್ರಶ್ನೆಗಳು ಅವತ್ತು ಮೂಡಲಿಲ್ಲವೇಕೆ?  ಇಂಥವು ಸಿನಿಮಾ ಮಾತ್ರವಲ್ಲ,  ಐದು ಆರನೇ  ತರಗತಿಯಲ್ಲಿ ಸ್ಕೂಲ್ ಬಿಟ್ಟಕೂಡಲೇ ನಮ್ಮ ಮನೆಯ ಹತ್ತಿರವಿರುತ್ತಿದ್ದ ಗ್ರಂಥಾಲಯಕ್ಕೆ ನುಗ್ಗಿ ಅಲ್ಲಿರುವ  ಚಂದಮಾಮ, ಬೊಂಬೆಮನೆ, ಬಾಲಮಿತ್ರದಲ್ಲೂ ಇಂಥವೇ ಮಾಯಾ ಮಂತ್ರಗಳು, ಸಪ್ತ ಸಾಗರಗಳು, ಪರ್ವತಗಳ ದಾಟಿ ಏಳುಸುತ್ತಿನ ಕೋಟಿಯೊಳಗಿನ ಪ್ರವೇಶದ್ವಾರಕ್ಕೆ ಹೋದರೇ ಅಲ್ಲಿಯೂ ಹೀಗೆ ಅನೇಕ ಬೆರಗುಗೊಳಿಸುವ ಅನೇಕ ಮಂತ್ರ ತಂತ್ರಗಳ ವಿದ್ಯೆಗಳು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆದು ನಾವೇ ಒಂದು ಪಾತ್ರವಾಗಿ ಅಲ್ಲಿನ ಎಲ್ಲ ಅನುಭವಗಳನ್ನು ನಾವು ಅನುಭವಿಸಿ ಮೈಮರೆತಾಗಲೂ ಈಗ ಬಂದ ಪ್ರಶ್ನೆ ಆಗ ಏಕೆ ಬರಲಿಲ್ಲ?

ಬಹುಶಃ  ಬಾಲ್ಯದ ಮುಗ್ಧತೆಯೇ ಇಂಥ ಪ್ರತಿಯೊಂದನ್ನು ಬೆರಗಿನಿಂದ ನೋಡಿ ಸಂಭ್ರಮಿಸುವುವುದನ್ನು ಕಲಿಸುತ್ತಿತ್ತೇನೋ.  ಆದ್ರೆ ನಾವು ಹತ್ತನೇ ತರಗತಿ, ಪಿಯುಸಿ, ಪದವಿಗೆ ಬರುತ್ತಿದ್ದಂತೆ ಇಂಥ ಸಿನಿಮಾಗಳ ಬಗ್ಗೆ, ಬಾಲಮಿತ್ರ, ಚಂದಮಾಮ ಬರಹಗಳ ಬಗ್ಗೆ ನಮ್ಮ ತಿಳುವಳಿಕೆ ಹೆಚ್ಚಾಗಿ ಅದನ್ನು ಹೇಗೆ ಮಾಡುತ್ತಾರೆ ಅನ್ನುವುದು ತಿಳಿದು ಇದು ಇಷ್ಟೇನಾ…ಇದೆಲ್ಲಾ ಬರೀ ಸುಳ್ಳು, ಗಿಮಿಕ್ಕು, ಅನ್ನಿಸತೊಡಗಿದ್ದು ನಮ್ಮ ಮುಗ್ಧತೆ ಮಾಯವಾಗಿ ನಾವು ಬುದ್ಧಿವಂತರಾಗಿದ್ದೇವೆ ಎನ್ನುವ ಅಲೋಚನೆ ನಮ್ಮಲ್ಲಿ ಮೂಡಿತ್ತು.  ಅದ್ರೆ ಅದು ಬಹುಕಾಲ ಇರಲಿಲ್ಲ.  ಮತ್ತೆ ವಿದೇಶಿ ಸಿನಿಮಾಗಳಲ್ಲಿ ಮತ್ತೆ ನಮ್ಮ ನಿರೀಕ್ಷೆ, ನಮ್ಮ ಬುದ್ಧಿವಂತಿಕೆಯನ್ನು ಮೀರಿ "ಸ್ಪೈಡರ್‍ ಮ್ಯಾನ್, ಟೈಟಾನಿಕ್, ಟರ್ಮಿನೇಟರ್, ದ ಡೇ ಆಪ್ಟರ್ ಟುಮಾರೋ, ಇಂಡಿಪೆಂಡೆನ್ಸ್ ಡೇ, ೨೦೧೨, ಲಾರ್ಡ್ ಆಫ್ ರಿಂಗ್ಸ್, ಹ್ಯಾರಿ ಪಾಟರ್,  ಇನ್ನೂ ಅನೇಕ ಸಿನಿಮಾಗಳು ಮತ್ತೆ ನಮ್ಮಲ್ಲಿ ಅಡಗಿದ್ದ ಮುಗ್ಧ ಮನಸ್ಸನ್ನು ಎಚ್ಚರಗೊಳಿಸಿ ಮತ್ತೆ ಬೆರಗು ಗೊಳಿಸಿಬಿಟ್ಟವು.  ಅವುಗಳ ಮುಂದೆ ನಮ್ಮ ಈ ಬಾಣ ಬಿರುಸುಗಳ ಬಬ್ರುವಾಹನ, ಮಾಯಾಬಜಾರ್, ಇತ್ಯಾದಿಗಳೆಲ್ಲಾ ಸವಕಲು ತಂತ್ರಜ್ಞಾನವೆನಿಸುವಷ್ಟು ಬುದ್ದಿವಂತರಾದರೂ ನಾವು ಸ್ಪೈಡರ್ ಮ್ಯಾನ್, ೨೦೧೨ ಇತ್ಯಾದಿಗಳಲ್ಲಿ ಹೊಸ ಅದ್ಭುತಗಳನ್ನು ನಿರೀಕ್ಷಿಸುತ್ತೇವೆಂದರೇ ನಮ್ಮ ನಮ್ಮಲ್ಲಿ ಅಡಗಿರುವ ಮುಗ್ದತೆಯೂ ಹೊಸ ತಂತ್ರಜ್ಞಾನವೆನ್ನುವ ಬೆರಗನ್ನು ನಿರೀಕ್ಷಿಸುತ್ತಾ ಆಗಾಗ್ಗೆ ಹೊರಬರಲು ಪ್ರಯತ್ನಿಸುತ್ತಿರುತ್ತದೆ ಅಲ್ಲವೇ. ಈಗಲೂ ನಮ್ಮ ಹಳೆತಲೆಮಾರಿನವರಿಗೆ ಬಬ್ರುವಾಹನ, ಮಾಯಾಬಜಾರುಗಳಂತ ಸಿನಿಮಾಗಳೇ ಸಂಭ್ರಮಿಸಲು ಬೇಕಾದರೆ, ಅವರಲ್ಲಿ ಇನ್ನೂ ಮುಗ್ದತೆ ಉಳಿದುಕೊಂಡಿದೆ ಅಂತ ಆಯಿತಲ್ಲವೇ.

ಆದ್ರೂ "ಅವತಾರ್" ಸಿನಿಮಾದಲ್ಲಿ ಯಾವ ತಂತ್ರಜ್ಞಾನವನ್ನು ಉಪಯೋಗಿಸಿದ್ದಾರೆ ಅನ್ನುವುದನ್ನು ಕಂಡುಹಿಡಿಯಲು ಪ್ರಯತ್ನಿಸಿದೆ. ಆಗಲಿಲ್ಲ. ಆಗದಿರವುದು ಒಳ್ಳೆಯದೆ. ಅದನ್ನು ತಿಳಿದುಕೊಂಡುಬಿಟ್ಟರೇ ಇಷ್ಟೇನಾ ಅನ್ನಿಸಿ ಅಂತ ಅದ್ಬುತ ಮಾಯಾಲೋಕವನ್ನು ಆನಂದಿಸುವ  ಅವಕಾಶವನ್ನು ನಾವು ಕಳೆದುಕೊಂಡುಬಿಡುತ್ತೇವೆ ಅಲ್ವಾ ?

ಲೇಖನ

ಶಿವು.ಕೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
ಈಶ್ವರ ಭಟ್

ಕೊನೆಯ ಸಾಲು ಬಹಳ ಹಿಡಿಸಿತು. ಎಲ್ಲವನ್ನೂ ತಿಳಿಯಬೇಕು ಎಂದು ತಿಳಿದುಕೊಂಡರೆ ಇಷ್ಟೇನಾ ಎನ್ನುವ ಭಾವ ಗ್ಯಾರಂಟಿ. ಒಳ್ಳೆಯ ಲೇಖನ ಶಿವು ಸರ್.

Utham
11 years ago

Agina majave bere
Chenagidhe nimma lekana
Shubhavagali

Santhoshkumar LM
11 years ago

ಹೌದು ಶಿವು.
ಮುಗ್ಧತೆಯನ್ನು ಮನುಷ್ಯ ಕಳೆದುಕೊಂಡ ಹಾಗೆಲ್ಲ, ಅವುಗಳನ್ನು ಎಂಜಾಯ್ ಮಾಡುವುದನ್ನು ನಿಲ್ಲಿಸಿಬಿಡುತ್ತಾನೆ.
ವಿಜ್ಞಾನದ ದಿಸೆಯಿಂದ ನಾವು ಮುಂದುವರೆದಿದ್ದೇವೆಯಾದರೂ ಸೂರ್ಯ ಚಂದ್ರರ, ಗ್ರಹಗಳ, ಹಾಗೂ ಮುಂತಾದ ವಿಷಯಗಳ ಬಗೆಗಿನ ಕುತೂಹಲವನ್ನು ಅದರಿಂದ ಸಿಗುವ ಖುಷಿಯನ್ನು
ಕಳೆದುಕೊಂಡಿರುವುದಂತೂ ಸತ್ಯ. ಚೆನ್ನಾಗಿದೆ:)

ಹೇಳಲಿಕ್ಕೆ ಮರೆತೆ. ನಾನೂ ಕೂಡ ಅತ್ಯಂತ ಖುಷಿಪಟ್ಟು ಅನುಭವಿಸಿ ನೋಡಿದ ಚಿತ್ರವೆಂದರೆ "ಅವತಾರ್".

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಮೈ ಮರೆತು ನೋಡಿದ ಚಿತ್ರ ಅವತಾರ್, ಮಾಯಾಲೋಕದಂತಹ ಚಿತ್ರಗಳನ್ನು ನೋಡಲು ರೊಮಾಂಚನವೇ ಸರಿ. ಮಾಯೆಯೆಂದು ತಿಳಿದರೂ ಅವೇ ಹೆಚ್ಚು ಖುಷಿಯನ್ನು ಕೊಡುತ್ತವೆ. ಲೇಖನದಲ್ಲಿ ಚಿತ್ರ ಮಾಯೆ ಮತ್ತು ಮುಗ್ಧತೆಯನ್ನು ಚೆನ್ನಾಗಿ ಬಿಂಬಿಸಿದ್ದೀರ. ಧನ್ಯವಾದಗಳು ಸರ್.  

4
0
Would love your thoughts, please comment.x
()
x