ಯಾರು ಬದುಕೆಂಬ ಫಲವತ್ತಾದ ನೆಲದಲ್ಲಿ, ಸಾಮರ್ಥ್ಯ ಎಂಬ ಪೈರನ್ನು ನೆಟ್ಟು, ಅದನ್ನು ಆಸಕ್ತಿಯೆಂಬ ಗೊಬ್ಬರ ಮತ್ತು ಶ್ರದ್ಧೆ ಎಂಬ ನೀರನ್ನು ಹಾಕಿ ಬೆಳೆಸುತ್ತಾರೋ ಅವರು ಸಂಪತ್ತು, ಸೌಭಾಗ್ಯ, ಸುಖ, ಸಂತೋಷ ಎಂಬ ಇಳುವರಿಗಳನ್ನು ಅಧಿಕ ಪ್ರಮಾಣದಲ್ಲಿ ಪಡೆಯಬಹುದಾಗಿರುತ್ತದೆ. ವ್ಯಕ್ತಿಯು ತನ್ನಲ್ಲಿ ಸುಪ್ತವಾಗಿ ಹುದುಗಿರುವ ಶಕ್ತಿ ಸಾಮಥ್ರ್ಯಗಳನ್ನು ಗೊತ್ತು ಮಾಡಿಕೊಂಡು ಭಾಷಾಕಲಿಕೆ ಹಾಗೂ ಅಭಿವ್ಯಕ್ತಿಯಲ್ಲಿ ಅಗತ್ಯವಾದ ಶಿಕ್ಷಣ ತರಬೇತಿ ಹಾಗೂ ಸತತ ಅಭ್ಯಾಸದ ಮೂಲಕ ತಾನು ಅದನ್ನು ಗರಿಷ್ಟ ಪ್ರಮಾಣದಲ್ಲಿ ಅಭಿವ್ಯಕ್ತಿಪಡಿಸಲು ಸಮರ್ಥನಾಗಿ/ಳಾಗಿ ಸಾಧನೆ ಮಾಡಬೇಕು. ತನ್ನಲ್ಲಿಯೇ ಅಗಾಧ ಪ್ರಮಾಣದಲ್ಲಿರುವ ಶಕ್ತಿ ಸಾಮಥ್ರ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದ ಭಾರತೀಯ ಸಮಾಜದಲ್ಲಿ ಶಕ್ತಿ ಸಾಮಥ್ರ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಲು ಮುಕ್ತ ಅವಕಾಶಗಳೇನೆನೂ ಇರಲಿಲ್ಲ. ಆದರೆ ಇಂದು ಸ್ಥಿತಿಗತಿಗಳೂ ಸಂಪೂರ್ಣವಾಗಿ ಬದಲಾಗಿವೆ. ಯಾರು ಯಾವುದನ್ನು ಬೇಕಾದರೂ ಆರಿಸಿಕೊಳ್ಳುವ ಮುಕ್ತ ಅವಕಾಶಗಳು ಲಭ್ಯವಿವೆ.
“ಕಷ್ಟಪಟ್ಟರೆ ಫಲವುಂಟು, ಕೈ ಕೆಸರಾದರೆ ಬಾಯಿ ಮೊಸರು” ಎಂಬುದನ್ನು ಸಾಬೀತು ಪಡಿಸಬಹುದಾಗಿದೆ. ಕುಂಟರು ಎರಡು ಕಾಲುಗಳು ಚೆನ್ನಾಗಿರುವವರಿಗಿಂತಲೂ ಹೆಚ್ಚಿನ ಸಾಧನೆ ಮಾಡಿದವರಿದ್ದಾರೆ. ಕುರುಡರು ಎರಡು ಕಣ್ಣುಗಳು ಚೆನ್ನಾಗಿರುವವರಿಗಿಂತಲೂ ಹೆಚ್ಚಿನ ಸಾಧನೆ ಮಾಡಿದವರಿದ್ದಾರೆ. ಅವರ ಆ ಬಗೆಯ ವಿಶಿಷ್ಟ ಸಾಧನೆಗಳಿಗೆ, ಅವರು ತಮ್ಮ ಕುಟುಂಬ, ಶಾಲೆ, ಕಾಲೇಜು, ಸಂಘ ಸಂಸ್ಥೆ ಮೊದಲಾದವುಗಳ ವತಿಯಿಂದ ಲಭ್ಯವಾಗಬಹುದಾದ ಎಲ್ಲ ಒಳಿತುಗಳನ್ನು ಸದುಪಯೋಗಪಡಿಸಿಕೊಂಡು, ತಮ್ಮಲ್ಲಿ ಹುದುಗಿದ್ದ ಶಕ್ತಿ ಸಾಮಥ್ರ್ಯಗಳನ್ನು ಬಳಸಿಕೊಂಡವರೇ ಆಗಿದ್ದಾರೆ. ವ್ಯಕ್ತಿ ತಮ್ಮಲ್ಲಿರುವ ಅಗಾಧ ಶಕ್ತಿ ಸಾಮಥ್ರ್ಯಗಳಲ್ಲಿ ಒಂದಲ್ಲಾ ಒಂದನ್ನು ಗರಿಷ್ಟ ಪ್ರಮಾಣದಲ್ಲಿ ಸದ್ಭಳಕೆ ಮಾಡಿಕೊಂಡು ಸಾಧನೆ ಮಾಡುವ ಕಡೆ ಸತತ ಪ್ರಯತ್ನ ಮಾಡಬೇಕು.
ಸ್ವಾತಿ ಮಳೆ ಹನಿ ಬೀಳ್ವ ಶುಕ್ತಿ ಬಾಯ್ದೆರೆದೇಳ್ವ
ಕೌತುಕದ ಸಮಯಯೋಗದೆ ಮೌಕ್ತಿಕ ಫಲ||
ಪ್ರೀತಿ ಸುಖ ಸತ್ಯ ದರ್ಶನ ಶಾಂತಿಗಳ ಹುಟ್ಟುಮ್
ಆ ತೆರೆದ ಯೋಗ ದಿನೆ ಮಂಕುತಿಮ್ಮ|| ಎನ್ನುವಂತೆ
ಅರ್ಹತೆ ಇರುವಾಗ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರಬೇಕು. ಆದರೆ ಎಲ್ಲ ಸಮಯ ನಮ್ಮದಲ್ಲವಾದ್ದರಿಂದ ಕೆಲವೊಮ್ಮೆ ಸ್ವಾತಿ ಮಳೆಗೆ ಚಿಪ್ಪು ಬಾಯ್ದೆರೆದು ಕಾಯುವಂತೆ ಸಿಕ್ಕ ಅವಕಾಶಗಳನ್ನು ಬಿಡದೆ ಅದನ್ನು ನಮ್ಮದಾಗಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲು ಸಾವಿರಾರು ಪ್ರೇರಣಾದಾಯಿ ಜೀವಂತ ನಿದರ್ಶನಗಳಿವೆ . ಆದರೆ ಆ ಪ್ರೇರಣಾದಾಯಿ ಘಟನೆಗಳನ್ನು ನಾವು ಹೇಗೆ ನಮ್ಮದಾಗಿಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಗಾಂಧೀಜಿಯವರು ಬಾಲ್ಯದಲ್ಲಿ “ಸತ್ಯ ಹರಿಶ್ಚಂದ್ರ” ಎನ್ನುವ ನಾಟಕದ ಪ್ರಭಾವದಿಂದಾಗಿ ಮುಂದೆ ಮಹಾತ್ಮ ಎನಿಸಿಕೊಳ್ಳುವಷ್ಟರ ಮಟ್ಟಿಗೆ ನಾಟಕದ ಪ್ರಭಾವ ಅವರ ಮೇಲಾಯಿತು. ನಾವು ದಿನವೂ ಫೇಸ್ಬುಕ್, ವಾಟ್ಸಾಪ್, ದೂರದರ್ಶನಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಷಯಗಳನ್ನು, ವಿವಿಧ ನಿದರ್ಶನಗಳ ಕತೆಗಳನ್ನು ಓದುತ್ತೇವೆ, ಕೇಳುತ್ತೇವೆ. ಆದರೆ ಅವು ನಮ್ಮ ಮೇಲೆ ಅಷ್ಟೊಂದು ಪ್ರಭಾವವನ್ನು ಬೀರುವುದಿಲ್ಲ.
ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಯಶಸ್ಸು ಸಾಧಿಸಬೇಕು. ಅವಕಾಶಗಳನ್ನು ಬಳಸಿಕೊಂಡು ಉನ್ನತ ದಾರಿಯಲ್ಲಿ ಇರುವಂತವರನ್ನು ಅನುಕರಿಸಬೇಕು.ಇಲ್ಲಿ ಮನಸ್ಸಿದ್ದರೆ ಮಾರ್ಗ ಎಂಬ ಮಾತು ಸೂಕ್ತವಾಗಿ ಅನ್ವಯಿಸುತ್ತೆ. .ಕೆಲವೊಮ್ಮೆ ನಾವು ಅನೇಕ ಅವಕಾಶಗಳಿಂದ ವಂಚಿತರಾಗಿ. ಏನು ಪಡೆದುಕೊಳ್ಳಬೇಕೆಂದು ಅಂದುಕೊಂಡಿರುತ್ತೆವೇಯೋ ಅದು ನಮಗೆ ಲಭಿಸದೆ ಹೋಗುವುದು. ಅಂತಹ ಸಮಯದಲ್ಲಿ ಮನಸ್ಸಿಗೆ ಕೊಂಚ ಬೇಸರ ಉಂಟಾಗುವುದು ಸಹಜ. ಆದರೆ ಮುಂದೆ ಬರುವ ಅನೇಕ ಅವಕಾಶಗಳನ್ನು ಬಳಸಿಕೊಂಡು ಯಾವ ಪರಿಯಲ್ಲಿ ಸಾಧನೆಯ ಮೆಟ್ಟಿಲನ್ನು ಏರುವೆವು ಎನ್ನುವುದು ಮುಖ್ಯ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಸಿಗುವ ಉತ್ತಮ ಸಮಯವನ್ನು ಸದುಪಯೋಗ ಪಡಿಸಿಕೊಂಡು ನಮ್ಮ ಬದುಕಿನ ಕನಸನ್ನು ನನಸಾಗಿಸಿಕೊಳ್ಳಬೇಕು. ಭಾವೋದ್ರೇಕಗಳಿಂದ ಹೊರ ಬಂದು ಮಾಡುವ ಕೆಲಸದ ಬಗ್ಗೆ ಹೆಚ್ಚಿನ ಆಸಕ್ತಿ ಹಾಗೂ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಅವಕಾಶದಿಂದ ವಂಚಿತರಾದಾಗ ನಾವು ಮಾಡುವ ತಪ್ಪಿನ ಬಗ್ಗೆಯೂ ಸೂಕ್ತ ರೀತಿಯ ಚಿಂತನೆ ನಡೆಸಬೇಕು. ನಾವು ಹಿಂದೆ ವಂಚಿತರಾದ ಅವಕಾಶದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎನ್ನುವುದನ್ನು ಅರಿಯಬೇಕು. ಮುಂದಿನ ದಿನಗಳಲ್ಲಿ ಹೊಸದನ್ನು ಪಡೆದುಕೊಳ್ಳುವ ಅವಕಾಶ ನಮಗಿದ್ದೇ ಇರುತ್ತದೆ. ಯಾರೇ ಆದರೂ ತಮ್ಮ ಜೀವನದಲ್ಲಿ ಏರಿಳಿತದ ಪಾಲನ್ನು ಹೊಂದಿರುತ್ತಾರೆ. ನಾವು ಯಾರೋ ನೀಡಿದ ಭರವಸೆಯ ಮಾತುಗಳ ಬೆನ್ನತ್ತಿ ಹೋಗಬೇಕಾಗಿಲ್ಲ, ಯಾರು ತಮ್ಮ ಮಾತಿಗೆ ಹಾಗೆಯೇ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ ಎಂಬುದನ್ನು ಅರಿಯಬೇಕು.
ಅವಕಾಶಗಳು ಬಾಗಿಲು ಬಡಿದಾಗ:-
ಅವಕಾಶಗಳು ಬಾಗಿಲು ಬಡಿದಾಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಏನಾಗಬಹುದೆಂಬುದಕ್ಕೆ ಒಂದು ಚಿಕ್ಕ ಉದಾಹರಣೆ ಇಲ್ಲಿದೆ.
ಮಗನಿಗೆ ಕೆಲಸ ಸಿಕ್ಕಿಲ್ಲವೆಂದು ಕೊರಗುತ್ತಿದ್ದ ಜಯಮ್ಮನವರಿಗೆ, ಪಕ್ಕದ ಮನೆಯ ಸುಮಿತ್ರಮ್ಮನ ಮಾತುಗಳನ್ನು ಕೇಳಿ ಸಿಹಿ ತಿಂದಷ್ಟೇ ಸಂತೋಷವಾಯಿತು. ಅವರ ಮನೆಯ ಹತ್ತಿರದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಅವಕಾಶವಿರುವದಾಗಿಯೂ ಹಾಗೂ ಮೊದಲು ಬಂದವರಿಗೆ ಆದ್ಯತೆ ಎಂದೂ ತಿಳಿಸಿದರು. ನಿರಾಶೆಯಿಂದ ಕಂಗೆಟ್ಟಿದ್ದ ಜಯಮ್ಮನವರು ಖುಷಿಯಿಂದ ಮಗನಿಗೆ ವಿಷಯ ತಿಳಿಸಿದರು.
ಜಯಮ್ಮನವರ ಮಗ, ಅಯ್ಯೋ ಹೋಗಮ್ಮಾ ಅಲ್ಲಿಗೆಲ್ಲಾ ಬೆಳಗಿನ ಜಾವವೇ ಹೋಗಿ ಸರತಿಯಲ್ಲಿ ನಿಂತು ಕಾಯಬೇಕು. ಕಾದರೂ ನಮ್ಮಂತವರಿಗೆಲ್ಲಾ ಕೆಲಸ ಸಿಗುವುದು ಕನಸೇ ಸರಿ, ಎಂದು ಉಡಾಫೆಯಿಂದ ಕೈ ಚೆಲ್ಲಿ ಕುಳಿತನು. ಇನ್ನು ಸುಮಿತ್ರಮ್ಮನವರ ಮಗ ಬೆಳಿಗ್ಗೆ ಮುಂಚೆಯೇ ಹೋಗಿ ಕಾದು ಕುಳಿತು ಕೆಲಸ ಗಿಟ್ಟಿಸಿಕೊಂಡು ಬಂದನು. ಇಲ್ಲಿ ಜಯಮ್ಮನವರ ಮಗ ಬಂದ ಅವಕಾಶವನ್ನು ಉಪಯೋಗಿಸಿಕೊಳ್ಳದೇ ಅದರಿಂದ ವಂಚಿತನಾದರೆ, ಸುಮಿತ್ರಮ್ಮನವರ ಮಗ ಪ್ರಯತ್ನ ಪಟ್ಟು ಅದರ ಪ್ರಯೋಜನವನ್ನು ಪಡೆದುಕೊಂಡನು. ಪ್ರಯತ್ನಿಸಿದ ಮಾತ್ರಕ್ಕೆ ಅವಕಾಶ ಉಪಯೋಗ ಆಗುತ್ತದೆ ಎಂದಲ್ಲ. ಆದರೆ ಪ್ರಯತ್ನವನ್ನೇ ಪಡದೆ ನಿರಾಶಾವಾದಿಗಳಾಗುವುದು ಸರಿಯಲ್ಲ.
ಜೀವನದಲ್ಲಿ ಅವಕಾಶಗಳು ಎಲ್ಲರಿಗೂ ಸಮಾನ. ಅದನ್ನು ಗುರುತಿಸುವ ಶಕ್ತಿ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುವುದರಿಂದ, ಕೆಲವರು ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಾರೆ, ಹಲವರು ಅವಕಾಶಗಳಿಂದ ವಂಚಿತರಾಗುತ್ತಾರೆ. ಕಾಲ ಯಾರಿಗೂ ಯಾವುದಕ್ಕೂ ಕಾಯುವುದಿಲ್ಲ. ಅವಕಾಶಗಳು ಬಂದಾಗ ಅಳೆದು ತೂಗಿ, ಯೋಚಿಸುತ್ತಾ ಕುಳಿತರೆ ಅದು ಇನ್ಯಾರದ್ದೋ ಪಾಲಾಗಿರುತ್ತದೆ.
ಕೆಲವರು ಅವಕಾಶ ಸಿಕ್ಕಿದಾಗ ಮಾತ್ರ ಅದರ ಸದುಪಯೋಗ ಪಡೆದರೆ, ಮತ್ತೇ ಕೆಲವರು ಎಲ್ಲ ಸಮಯವನ್ನೂ ತಮ್ಮ ಅವಶ್ಯಕತೆಗನುಗುಣವಾಗಿ ಅವಕಾಶಗಳನ್ನು ಸೃಷ್ಟಿಸಿಕೊಂಡು ಸದುಪಯೋಗಪಡಿಸಿಕೊಳ್ಳುತ್ತಾರೆ. ಇಂತವರನ್ನು ಅವಕಾಶವಾದಿಗಳು ಎನ್ನಬಹುದು. ಅವಕಾಶದ ಸದುಪಯೋಗಕ್ಕೂ ಹಾಗೂ ಅವಕಾಶವಾದಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಅವಕಾಶಗಳು ಯಾವಾಗಲೂ ಕಠಿಣ ಪರಿಶ್ರಮವಿದ್ದಂತೆ . ಬಹಳಷ್ಟು ಜನ ಅದನ್ನು ಗುರುತಿಸುವುದಿಲ್ಲ. ಬದಲಿಗೆ ತಮ್ಮನ್ನು ತಾವು ದುರದೃಷ್ಟವಂತರೆಂಬ ಹಣೆಪಟ್ಟಿ ಕಟ್ಟಿಕೊಂಡು ದೂಷಿಸಿಕೊಳ್ಳುತ್ತಾರೆ, ಮತ್ತೂ ಕೆಲವರು ಹೆದರಿಕೆಯಿಂದಲೇ ಬದುಕನ್ನು ದೂಡುತ್ತಾರೆ. ಒಂದೊಂದು ಹೆಜ್ಜೆ ಇಡುವಾಗಲೂ ಭಯದಿಂದಲೇ ಇಡುತ್ತಾರೆ. ಪ್ರತಿಯೊಂದನ್ನು ಅನುಮಾನದ ದೃಷ್ಟಿಯಿಂದಲೇ ನೋಡುತ್ತಾರೆ. ಇಂತಹವರಿಂದ ಅವಕಾಶಗಳ ಸದುಪಯೋಗ ಸಾಧ್ಯವಿಲ್ಲ.
ಎಂತಹ ಕಷ್ಟದ ಪರಿಸ್ಥಿತಿಯೇ ಆಗಿರಲಿ, ಅವಕಾಶಗಳು ಬಂದಾಗ ಅವನ್ನು ಗುರುತಿಸಿ ಉಪಯೋಗಿಸಿಕೊಳ್ಳುವವರು ಆಶಾವಾದಿಗಳು, ಅದೇ ನಿರಾಶಾವಾದಿಗಳು ಪ್ರತಿಯೊಂದು ಅವಕಾಶವನ್ನೂ ಕಷ್ಟವೆಂದು ಭಾವಿಸಿ ಅದನ್ನು ಉಪಯೋಗಿಸದೇ ಬಿಡುತ್ತಾರೆ. ಅನುಕೂಲದ ಸಂದರ್ಭಗಳು ಸೂರ್ಯೋದಯವಿದ್ದಂತೆ, ಭಾನುವಿನ ಉದಯದ ಆಸ್ವಾದವನ್ನು ಆ ಕ್ಷಣ ಅನುಭವಿಸದಿದ್ದರೆ ಅದು ಕಳೆದುಹೋಗುತ್ತದೆ. ಕೆಲವು ಅವಕಾಶಗಳು ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತವೆ. ಅಂತಹವುಗಳನ್ನು ಗುರುತಿಸಿ ಪ್ರಯೋಜನ ಪಡೆದುಕೊಳ್ಳುವುದು ಬುದ್ಧಿವಂತರ ಲಕ್ಷಣ. ಜೀವನದಲ್ಲಿ ಅತ್ಯಧ್ಭುತವಾದ ಸಂದರ್ಭಗಳು ಬರುತ್ತವೆಂದು ಕಾಯಬೇಡಿ. ಬಂದ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ನಿರಾಶಾವಾದಿಗಳು ಅಥವಾ ದುರ್ಬಲ ವ್ಯಕ್ತಿಗಳು ಅವಕಾಶಗಳಿಗೆ ಎದುರು ನೋಡುತ್ತಾರೆ. ಆಶಾವಾದಿಗಳು ಅಥವಾ ಪ್ರಬಲರು ಅವಕಾಶಗಳನ್ನು ಹುಟ್ಟು ಹಾಕುತ್ತಾರೆ.
ಕಷ್ಟ ಬಂದಾಗ ಧೃತಿಗೆಡದೆ ಧೈರ್ಯದಿಂದ ಎದುರಿಸಿದರೆ ಆ ಸಂದರ್ಭ ನಮ್ಮ ಕೈಗೆಟುಕಿದಂತೆಯೇ. ಹೆಲೆನ್ ಕೆಲರ್ ಹೇಳಿರುವಂತೆ, ಅವಕಾಶದ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ತೆರೆದುಕೊಳ್ಳುತ್ತದೆ. ಆದರೆ ನಾವು ವಿಷಾದದಿಂದ ಮುಚ್ಚಿರುವ ಬಾಗಿಲಿನೆಡೆಗೆ ನೋಡುತ್ತಾ ತೆರೆದಿರುವ ಬಾಗಿಲನ್ನು ನೋಡುವುದೇ ಇಲ್ಲ. ಅವಕಾಶಗಳು ಯಾವುದಾದರೂ ಆಗಿರಬಹುದು. ಕೆಲಸದಲ್ಲಿ ಬಡ್ತಿ, ಸಂಬಳದಲ್ಲಿ ಹೆಚ್ಚÀಳ, ಕುಟುಂಬದೊಂದಿಗೆ ಕಳೆಯುವ ಕಾಲ, ಸತ್ಸಂಗ ಕಲಿಕೆ ಹೀಗೆ ಯಾವುದೇ ರೂಪದಲ್ಲಿರಬಹುದು. ಜಾಗರೂಕತೆಯಿಂದ ಅವುಗಳ ಸದುಪಯೋಗ ಪಡೆಯುವುದು ಬುದ್ದಿವಂತರ ಲಕ್ಷಣ . ಸುಸಂದರ್ಭ ಬಂದು ಬಾಗಿಲು ಬಡಿಗಾಗ, ಎದ್ದು ಹೋಗಿ ಬಾಗಿಲು ತೆರೆದರೆ ಮಾತ್ರ ಅದು ನಮಗೆ ಸಿಗುತ್ತದೆ. ಅದೃಷ್ಟವಿದ್ದರೆ ನಮ್ಮದಾಗುತ್ತದೆಂದು ಕಾದು ಕುಳಿತರೆ ಅದು ಬೇರೆಯವರ ಪಾಲಾಗುತ್ತದೆ. ಕೆಲವರು ಕಷ್ಟಪಟ್ಟು ಕೆಲಸ ಮಾಡುವುದಲ್ಲದೇ ಬುದ್ದಿವಂತಿಕೆಯಿಂದಲೂ ಕೆಲಸ ಮಾಡಿ ಬಂದ ಅವಕಾಶವನ್ನು ದಕ್ಕಿಸಿಕೊಳ್ಳುತ್ತಾರೆ. ಕೆಲ ಬುದ್ದಿವಂತರು ಅವಕಾಶಗಳನ್ನು ಪಡೆಯಲು ಬಹಳಷ್ಟು ಸಮಯ ಮೀಸಲಿಡುತ್ತಾರೆ. ಹೀಗೆ ಮಾಡುವುದರಿಂದ ಸರಿಯಾದ ಅವಕಾಶದಿಂದ ವಂಚಿತರಾಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಬಂದ ಒಳ್ಳೆಯ ದೆಸೆಗಳನ್ನು ಬಂದಂತೆಯೇ ಉಪಯೋಗಿಸಿಕೊಳ್ಳಿ. ಅವಕಾಶವೆನ್ನುವುದು ಮಂತ್ರದಂಡವಲ್ಲ. ಸಂಕಲ್ಪ ಶಕ್ತಿ, ಕಠಿಣ ಪರಿಶ್ರಮ, ಸಾಮಥ್ರ್ಯ ಹಾಗೂ ನಮ್ಮಲ್ಲಿ ನಮಗೆ ಭರವಸೆಯಿದ್ದಲ್ಲಿ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಮದರ್ ಥೆರೆಸಾ ಹೇಳಿರುವಂತೆ “ಬದುಕೆ ಒಂದು ಅವಕಾಶವಿದ್ದಂತೆ” ಮೊದಲು ಅದರ ಪ್ರಯೋಜನವನ್ನು ಪಡೆದುಕೊಳ್ಳೋಣ. ಜೀವನದ ಸಾಫಲ್ಯವು ಅದನ್ನು ಬದುಕುವದರಲ್ಲಿಯೇ ಇದೆ. ಜೀವನದ ದಾರಿಯಲ್ಲಿ ಬಹಳಷ್ಟು ದೂರ ನಡೆದ ಮೇಲೆಯೇ ಬದುಕಿನ ಅರ್ಥ ತಿಳಿಯುತ್ತದೆ. ಆದರೆ, ಆಗಲೇ ತುಂಬ ತಡವಾಗಿರುತ್ತದೆ. ಮನುಷ್ಯನು ತನ್ನ ಬದುಕಿನ ಸದುಪಯೋಗಪಡೆಯಬೇಕಾದರೆ , ಅವನು ತನ್ನ ಜೀವನದ ಪ್ರತಿಯೊಂದು ನಿಮಿಷವನ್ನೂ ಗಂಟೆಯನ್ನೂ, ದಿನವನ್ನೂ ಸದುಪಯೋಗಪಡಿಸಿಕೊಳ್ಳಬೇಕು. ಈ ನಿಮಿಷ, ಗಂಟೆ ಹಾಗೂ ದಿನಗಳು ಮನುಷ್ಯನ ಬದುಕಿನಲ್ಲಿ ಹೆಣೆದುಕೊಂಡಿವೆ.
ಮನುಷ್ಯನು ಆಸೆಯ ಮೇಲೆ ಬದುಕದೆ, ತನ್ನ ಬದುಕಿನ ಮೇಲೆ ಆಸೆಯನ್ನು ಕಟ್ಟಿಕೊಂಡು ಬಾಳಬೇಕು. ಬರೀ ಆಸೆಯ ಮೇಲೆ ಬದುಕುವುದು ಜೀವನವೇ ಅಲ್ಲ. ಜೀವನಕ್ಕೆ ಅರ್ಥ ಇದೆಯೆಂದು ತಿಳಿದು, ಒಂದು ಗುರಿಯನ್ನು ಗೊತ್ತುಮಾಡಿಕೊಳ್ಳಬೇಕು. ಗುರಿಯನ್ನು ಕಣ್ಣೆದುರು ಇರಿಸಿಕೊಂಡವನಿಗೆ ಜೀವನದ ಅರ್ಥವನ್ನು ಹುಡುಕಿಕೊಳ್ಳುವುದು ಸುಲಭವೆನಿಸುತ್ತದೆ. ಜೀವನವನ್ನು ಇಂದು ಬದುಕಿದವನ ನಾಳೆಯೂ ಕೂಡ ಒಳ್ಳೆಯದಾಗಿರುತ್ತದೆ. ಈಗ ಹೇಗೆಯೇ ಇದ್ದರೂ, ನಾಳೆ ಒಳ್ಳೆಯ ಜೀವನವನ್ನು ಬದುಕಿರುತ್ತೇನೆ ಎನ್ನುವವನು, ತನ್ನ ಇಂದು ನಾಳೆಗಳೆರಡನ್ನೂ ಕಳೆದುಕೊಳ್ಳುತ್ತಾನೆ. ನಿನ್ನೆಯ ಮೇಲೆ ಇಂದು ಇರುವಂತೆ ಇಂದಿನ ಮೇಲೆ ನಾಳೆ ಇರುತ್ತದೆ. ಪ್ರತಿಯೊಬ್ಬನ ಜೀವನವೂ ಸ್ಪರ್ಧೆಯ ಒಂದು ಹೋರಾಟವಾಗಿದೆ. ಈ ಸ್ಪರ್ಧೆಯಲ್ಲಿ ಪಣಕ್ಕಿರಿಸಿದ ವಸ್ತು ಸುದೈವವಾಗಿದೆ. ಈ ಬಹುಮಾನವನ್ನು ಮನುಷ್ಯನು ಹೋರಾಟ ಮಾಡಿಯೇ ಪಡೆದುಕೊಳ್ಳಬೇಕು. ಅದನ್ನು ಪಡೆದುಕೊಳ್ಳಬೇಕೆನ್ನುವ ಮನುಷ್ಯನು ಸಾಹಸದ ಹಾದಿಯನ್ನು ತುಳಿದು ಹೋಗಬೇಕು. ಜೀವನದ ಹಾದಿಯಲ್ಲಿ ಹೋಗುವಾಗ, ಹಾದಿಯ ಎಡಬಲಗಳಲ್ಲಿ ಅನೇಕ ಅವಕಾಶಗಳು ಇರುತ್ತವೆ. ತನ್ನ ದಾರಿಯನ್ನು ಮನುಷ್ಯನು ಕಣ್ಣು ತೆರೆದುಕೊಂಡೇ ನಡೆಯಬೇಕು. ಆಗ ಅವನಿಗೆ ಎದುರಾದ ಅವಕಾಶಗಳು ಕಳೆದು ಹೋಗುವುದಿಲ್ಲ. ತನ್ನ ಜೀವನವನ್ನು ಪ್ರತಿಯೊಬ್ಬ ಮನುಷ್ಯನೂ ಪ್ರೀತಿಸಬೇಕು. ತನ್ನ ಜೀವನವನ್ನು ನಿಜವಾಗಿ ಬದುಕುವ ಮನುಷ್ಯನು ಇನ್ನೊಬ್ಬನನ್ನು ಪ್ರಿತಿಸುತ್ತಾನೆ. ಪ್ರೀತಿಮಾಡಬಲ್ಲ ಮನುಷ್ಯನಿಗೆ ಮಾತ್ರ ಮನುಷ್ಯ ಕುಲವನ್ನು ಪ್ರೀತಿಸುವುದು ಸಾಧ್ಯವಿದೆ. ಮನುಷ್ಯ ಜೀವನಕ್ಕೆ ಅದರಷ್ಟಕ್ಕೇ ಯಾವ ಅರ್ಥವೂ ಇಲ್ಲ. ಮನುಷ್ಯನು ಇನ್ನೊಬ್ಬರೊಂದಿಗೆ ಬದುಕಿದಾಗಲೇ ಅವನ ಜೀವನಕ್ಕೆ ಅರ್ಥ ಇದೆ. ಶಬ್ದಕ್ಕೆ ಅದರಷ್ಟಕ್ಕೆ ಯಾವ ಅರ್ಥವೂ ಇರುವುದಿಲ್ಲ. ಒಂದು ವಾಕ್ಯದಲ್ಲಿ ಉಪಯೋಗವಾದಾಗ ಅದು ತನ್ನ ಅರ್ಥವನ್ನು ಹೇಳುತ್ತದೆ. ಜೀವನದ ನಂತರವೂ ಜನರು ತನ್ನನ್ನು ನೆನೆಯುವಂತೆ ಮನುಷ್ಯನು ತನ್ನ ಜೀವನವನ್ನೂ ಬದುಕಬೇಕು.
ಮನುಷ್ಯನು ಯಾವ ಅವಕಾಶಗಳನ್ನು ಹುಡುಕಿಕೊಳ್ಳುವದರಲ್ಲಿ ವಿಫಲನಾದರೂ ಚಿಂತೆಯಿಲ್ಲ, ಆದರೆ ಅವನು ತನ್ನ ವ್ಯಕ್ತಿತ್ವ ಬೆಳೆಸಿಕೊಳ್ಳುವ, ತನ್ನ ಉಪಯುಕ್ತತೆ ಹೆಚ್ಚಿಸಿಕೊಳ್ಳುವ ಅವಕಾಶ ಹುಡುಕಿಕೊಳ್ಳುವುದರಲ್ಲಿ ವಿಫಲನಾಗಬಾರದು. ನಾವಿರುವ ಜಗತ್ತು ವಿಶಾಲವಾಗಿದೆ. ನ್ಯಾಯವಾಗಿ ಬದುಕಲು ನೂರಾರು ದಾರಿಗಳಿವೆ, ಸಾವಿರಾರು ಅವಕಾಶಗಳಿವೆ, ಲಕ್ಷಾಂತರ ಉದ್ಯೋಗಗಳಿವೆ, ಪ್ರತಿಯೊಬ್ಬರೂ ತಮ್ಮ ವಿಧ್ಯಾಭ್ಯಾಸ, ತಮ್ಮ ವಯಸ್ಸು, ಪ್ರತಿಭೆಗನುಗುಣವಾಗಿ ಸಮಯವನ್ನು ವ್ಯರ್ಥಮಾಡದೇ ಸರಿಯಾಗಿ ಉಪಯೋಗಿಸಿಕೊಂಡಲ್ಲಿ ವ್ಯಕ್ತಿಗತ ಜೀವನದೊಂದಿಗೆ ನಮ್ಮ ದೇಶ ಬೇಗ ಪ್ರಗತಿ ಹೊಂದುವದರಲ್ಲಿ ಯಾವುದೇ ಸಂಶಯವಿಲ್ಲ.
“ಪ್ರತಿಯೊಂದು ಆತ್ಮವೂ ದಿವ್ಯವಾದುದು” (ಈಚ ಸೋಲ್ ಈಸ್ ಪೋಟೆನ್ಷಿಯಲ್ ಡಿವೈನ್) ಎಂಬ ಮಾತಿದೆ. ಇದು ತುಂಬಾ ಅರ್ಥಪೂರ್ಣವಾದ ಮಾತು. ಈ ಜಗತ್ತಿನಲ್ಲಿ ಹುಟ್ಟಿ, ಬೆಳೆಯುವ ಪ್ರತಿಯೊಬ್ಬ ಪುರುಷ, ಮಹಿಳೆಯರಲ್ಲಿಯೂ ಹುಟ್ಟಿನಿಂದಲೇ ಬರುವ, ಪರಿಸರದ ಪ್ರಭಾವದಿಂದ ವೃದ್ಧಿಯಾಗುವ ಶಕ್ತಿ ಸಾಮಥ್ರ್ಯಗಳಿವೆ. ಅವು ಪ್ರತಿಯೊಂದು ಜಾತಿ, ಮತ, ಪಂಥ, ಪಂಗಡ,ಪಕ್ಷ ಲಿಂಗಭೇಧವಿಲ್ಲದೆ ಭಗವಂತನ ಅಥವಾ ಆ ಅದ್ವಿತೀಯ ಶಕ್ತಿಯ ವತಿಯಿಂದ ನೀಡಲ್ಪಟ್ಟಿವೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅನೇಕ ಅಮೂಲ್ಯ ಶಕ್ತಿ ಸಾಮಥ್ರ್ಯಗಳಿವೆ. ಪ್ರಾಣಿ, ಪಕ್ಷಿಗಳಿಗಿಂತಲೂ ಮಿಗಿಲಾದ ಅಗಾಧ ಪ್ರಮಾಣದ ಬುದ್ಧಿಶಕ್ತಿ , ಆಲೋಚನಾಶಕ್ತಿ ಮತ್ತು ವಾಕ್ ಶಕ್ತಿಗಳಿವೆ.ಸಾಕಷ್ಟು ಪ್ರಮಾಣದ ಶಾರಿರೀಕ ಶಕ್ತಿ ಸಾಮಥ್ರ್ಯಗಳಿವೆ. ಪ್ರಾಣಿ ಪಕ್ಷಿಗಳಿಗಿಂತಲೂ ಮಿಗಿಲಾದ ಅಗಾಧ ಪ್ರಮಾಣದ ಬುದ್ಧಿಶಕ್ತಿ, ಆಲೋಚನಾಶಕ್ತಿ ಮತ್ತು ವಾಕ್ ಶಕ್ತಿಗಳಿವೆ. ಸಾಕಷ್ಟು ಪ್ರಮಾಣದ ಶಾರೀರಿಕ ಶಕ್ತಿ ಸಾಮಥ್ರ್ಯಗಳಿವೆ . ಈ ವಿಶಿಷ್ಟ ಶಕ್ತಿ ಸಾಮಥ್ರ್ಯಗಳನ್ನು ತನ್ನ ವ್ಯಕ್ತಿತ್ವದ ಸರ್ವಾಂಗೀಣ ಸುಂದರ ವ್ಯಕ್ತಿತ್ವದ ನಿರ್ಮಾಣಕ್ಕೆ , ರ್ಯಾಂಕ ಪಡೆಯುವದಕ್ಕೆ ಸದ್ಭಳಕೆ ಮಾಡಿಕೊಂಡಿದ್ದೇ ಆದರೆ ಆತನ/ಆಕೆಯ ವತಿಯಿಂದ ಅದ್ಭುತ ಸಾಧನೆಗಳನ್ನು ಸಾಧಿಸಲು ಸಾಧ್ಯವಾಗುತ್ತದೆ.
ಅವಕಾಶಗಳು ಬಾಗಿಲು ತಟ್ಟಿದಾಗ
ಒಂದು ಗ್ರಂಥಾಲಯ ಬೆಂಕಿಗೆ ಆಹುತಿಯಾಗಿ, ಎಲ್ಲ ಪುಸ್ತಕಗಳು ಸುಟ್ಟು ಬೂದಿಯಾಗಿ ಒಂದೇ ಒಂದು ಪುಸ್ತಕ ಮಾತ್ರ ಉಳಿದಿತ್ತು ಅದು ಅಂತಹ ಮಹಾನ್ ಪುಸ್ತಕವೇನೂ ಅಲ್ಲ. ಒಬ್ಬ ಬಡವ ಅದನ್ನು ಸ್ವಲ್ಪ ಓದೋಣ ಎಂದು ಕೈಗೆತ್ತಿಕೊಂಡ . ಓದಲು ಪ್ರಾರಂಭಿಸಿದ. ವಿಷಯಗಳು ಅಷ್ಟೇನು ಪ್ರಶಂಸನೀಯವಾಗಿರಲಿಲ್ಲ. ಆದರೆ ಒಂದು ಪುಟದಲ್ಲಿ “ಕೆಂಪು ಸಮುದ್ರದ ತೀರದಲ್ಲಿರುವ ಒಂದು ಹರಳು ಮುಟ್ಟಿದರೆ ಚಿನ್ನ” ಎಂಬ ರಹಸ್ಯ ವಾಕ್ಯ ಬರೆದಿತ್ತು.ಯಾವುದೇ ವಸ್ತುವಿಗೆ ಆ ಹರಳನ್ನು ಮುಟ್ಟಿಸಿದರೆ ಆ ವಸ್ತು ಚಿನ್ನವಾಗಿ ಪರಿವರ್ತನೆಗೊಳ್ಳುತ್ತÀದೆ. ಆ ಹರಳು ಸಾವಿರಾರು ಹರಳುಗಳ ಜೊತೆಗೆ ಸಾಮಾನ್ಯ ಹರಳಿನಂತೆಯೇ ಇದೆ. ಆದರೆ ಅದರ ವಿಶೇಷತೆ ಏನೆಂದರೆ, ಬೇರೆ ಹರಳುಗಳನ್ನು ಮುಟ್ಟಿದಾಗ ತಣ್ಣಗಿರುತ್ತವೆ. ಆ ವಿಶೇಷ ಹರಳು ಮಾತ್ರ ಬಿಸಿಯಾಗಿರುತ್ತದೆ. ಎಂದು ವಿವರಿಸಲಾಗಿತ್ತು. ಆ ಬಡವ ಈ ಹರಳನ್ನು ಹುಡುಕಲು ಸಮೂದ್ರ ತೀರದಲ್ಲಿ ಠಿಕಾಣಿ ಹೂಡಿದ . ಬೆಳಕು ಹರಿಯಿತು. ಹರಳು ಹುಡುಕುವ ಕೆಲಸ ಪ್ರಾರಂಭಿಸಿದ . ಯಾವ ಹರಳು ಮುಟ್ಟಿ ನೋಡಿದರೂ ತಣ್ಣಗೇ ಇರುತ್ತಿತ್ತು. ಅವನ್ನು ಮುಟ್ಟುವುದು ಪುನಃ ಅಲ್ಲೇ ಬಿಸಾಡುವುದು, ಹೀಗೆ ನೂರಾರು ಹರಳುಗಳನ್ನು ಮುಟ್ಟಿ ಬಿಸಾಕತೊಡಗಿದಾಗ, ಅವನಿಗೆ ಒಂದು ಯೋಚನೆ ಹೊಳೆಯಿತು. ನಾನು ಪುನಃ ಪುನಃ ಇದೇ ಹರಳುಗಳನ್ನು ಎತ್ತುತ್ತಿದ್ದೇನೆ, ಮತ್ತು ಬೀಸಾಕುತ್ತಿದ್ದೇನೆ. ಇಲ್ಲೇ ಬಿಸಾಕುವ ಬದಲು ಸಮುದ್ರದಲ್ಲಿ ಬಿಸಾಕಿದರೆ , ಹೊಸ ಹರಳುಗಳನ್ನು ಬೇಗ ಪರೀಕ್ಷಿಸಬಹುದು. ಶ್ರಮ ಪಡುವುದೂ ತಪ್ಪುತ್ತದೆಂದು , ಯಾವ ಹರಳು ತಣ್ಣಗಿರುತ್ತದೋ ಅದನ್ನು ಸಮುದ್ರದಲ್ಲಿ ಎಸೆಯಲಾರಂಭಿಸಿದ. ಸಾಯಂಕಾಲದವರೆಗೂ ಇದೇ ಕೆಲಸ. ಹರಳು ಹುಡುಕು, ತಣ್ಣಗಿದ್ದರೆ ಸಮುದ್ರಕ್ಕೆ ಎಸೆ, ಹರಳು ಹುಡುಕು, ತಣ್ಣಗಿದ್ದರೆ ಸಮುದ್ರಕ್ಕೆ ಎಸೆ, ದಿನಗಳು ಉರುಳಿದವು ವಾರಗಳು ಉರುಳಿದವು ಒಂದು ದಿನ ಮಧ್ಯಾಹ್ನದ ಸಮಯ ಒಂದು ಹರಳು ಬಿಸಿಯಾಗಿತ್ತು ಅದ್ನೂ ಆತ ಸಮುದ್ರ್ಕಕೆ ಎಸೆದುಬಿಟ್ಟ. ಏಕೆಂದರೆ ಅವನಿಗೆ ಯಾವ ಹರಳು ಕೈಗೆ ಸಿಕಿದರೂ ಸಮುದ್ರಕ್ಕೆ ಎಸೆಯುವ ಅಭ್ಯಾಸವಾಗಿಬಿಟ್ಟಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿ ಹೋಯಿತು. ನಮ್ಮ ಜೀವನದಲ್ಲೂ ಅನೇಕ ಅವಕಾಶಗಳು ಕೈ ಸೇರುತ್ತವೆ. ಆದರೆ ನಾವು ಅದರ ಕಡೆ ಗಮನ ಹರಿಸದೆ , ಕೈಯಿಂದ ಜಾರಿಸಿಕೊಳ್ಳುತ್ತೇವೆ. ಆಮೇಲೆ ಪಶ್ಚಾತ್ತಾಪ ಪಟ್ಟರೆ ಹೋದ ಅವಕಾಶ ಮತ್ತೇ ಬರುತ್ತದೆಯೇ?
ಸೂಫಿ ಕತೆಗಳಲ್ಲಿ ಒಂದಾದ ನಿದ್ದೆ ಹೋಕನ ಕತೆ:- ಒಂದಾನೊಂದು ಕಾಲದಲ್ಲಿ ಅಮೈನ್ ಎಂಬ ಒಬ್ಬ ಒಳ್ಳೆಯ ವ್ಯಕ್ತಿಯಿದ್ದ, ಬಡವರಿಗೆ ಸಹಾಯ ಮಾಡುತ್ತಿದ್ದ, ದಾನ-ಧರ್ಮ ಮಾಡುತ್ತಿದ್ದ, ಎಲ್ಲ ಪ್ರಾಣಿಗಳನ್ನೂ ಪ್ರೀತಿಸುತ್ತಿದ್ದ. ಅವುಗಳನ್ನು ಸಾಧ್ಯವಿರುವಷ್ಟು ಉಪಚರಿಸುತ್ತಿದ್ದ. ಅನೀರಿಕ್ಷಿತ ಕಷ್ಟ ಪರಿಸ್ಥಿತಿಗಳನ್ನು , ಅನೇಕ ಸಲ ಇತರರ ಸಲುವಾಗಿ , ತಾಳ್ಮೆಯಿಂದ ಅನುಭವಿಸುತ್ತಿದ್ದ. ಜ್ಞಾನವನ್ನು ಅರಸುತ್ತಾ ಯಾತ್ರೆಗಳನ್ನು ಮಾಡುತ್ತಿದ್ದ. ಅನುಕರಣಯೋಗ್ಯ ನಡೆನುಡಿಗಳೂ ವಿನಯವೂ ಅವನಲ್ಲಿ ಇದ್ದವು. ಇದರಿಂದಾಗಿ ವಿವೇಕಿ, ಉತ್ತಮ ನಾಗರಿಕ ಎಂದೇ ಅವನು ಖ್ಯಾತನಾಗಿದ್ದನು. ಅವನಲ್ಲಿ ಏನೆಲ್ಲಾ ಒಳ್ಳೆಯ ಗುಣಗಳಿದ್ದರೂ ಇದ್ದ ಕೊರತೆಯೆನೆಂದರೆ ಅಜಾಗರೂಕತೆಯಿಂದಿರುವುದು. ಈ ಒಂದು ದೌರ್ಬಲ್ಯವನ್ನು ,ತಾನು ರೂಢಿಸಿಕೊಂಡಿದ್ದ ಇತರ ಒಳ್ಳೆಯ ಗುಣಗಳು ತೊಡೆದು ಹಾಕುತ್ತದೆಂದು ಅವನು ಪರಿಗಣಿಸಿದ್ದ.
ಅಮೈನ್‍ನಿಗೆ ನಿದ್ದೆ ಮಾಡುವುದು ಬಲು ಪ್ರೀಯವಾದ ಕಾರ್ಯವಾಗಿತ್ತು. ಕೆಲವು ಸಲ ಅವನು ನಿದ್ದೆ ಮಾಡುತ್ತಿದ್ದಾಗ, ಜ್ಞಾನ ಗಳಿಸುವ ಅವಕಾಶಗಳು, ಅಥವಾ ಜ್ಞಾನವನ್ನು ಮನೋಗತ ಮಾಡಿಕೊಳ್ಳುವ ಅವಕಾಶಗಳು, ನಿಜವಾದ ನಮ್ರತೆಯನ್ನು ಪ್ರದರ್ಶಿಸುವ ಅವಕಾಶಗಳು, ಅಥವಾ ಈಗಾಗಲೇ ಇದ್ದ ಸದ್ಗುಣಗಳಿಗೆ ಹೊಸದೊಂದನ್ನು ಸೇರಿಸುವ ಅವಕಾಶಗಳು ಬಂದು ಹೋಗುತ್ತಿದ್ದವು. ಅವನಿಗೆ ಅವು ಮತ್ತೊಮ್ಮೆ ದೊರೆಯುತ್ತಿರಲಿಲ್ಲ. ಅವನಲ್ಲಿದ್ದ ಸದ್ಗುಣಗಳು ಅವನ ಸ್ವಬಿಂಬದ ಮೇಲೆ ಹೇಗೆ ಅಳಿಸಲಾಗದ ಛಾಪನ್ನೊತ್ತಿದ್ದವೋ ಅಂತೆಯೇ ಅಜಾಗರೂಕತೆಯ ಗುಣವೂ ತನ್ನ ಛಾಪನ್ನೊತ್ತಿತ್ತು.
ಕೊನೆಗೊಂದು ದಿನ ಅಮೈನ್ ಸತ್ತನು. ಸಾವಿನ ನಂತರ ಸ್ವರ್ಗದ ಬಾಗಿಲುಗಳತ್ತ ಪಯಣಿಸುತ್ತಿರುವಾಗ ಆತ ಅಂತಃವೀಕ್ಷಣೆ ಮಾಡಿಕೊಂಡನು. ಸ್ವರ್ಗ ಪ್ರವೇಶಿಸುವ ಅವಕಾಶ ತನಗೆ ಲಭಿಸುತ್ತದೆ ಎಂಬುದಾಗಿ ಅವನಿಗೆ ಅನ್ನಿಸಿತು.
ಅವನು ಸ್ವರ್ಗದ ಬಾಗಿಲುಗಳನ್ನು ಸಮೀಪಿಸಿದಾಗ ಅವು ಮುಚ್ಚಿದ್ದವು. ಆಗ ಅವನಿಗೊಂದು ಧ್ವನಿ ಕೇಳಿಸಿತು. “ ಜಾಗರೂಕನಾಗಿರು. ಸ್ವರ್ಗದ ಬಾಗಿಲುಗಳು ಒಂದು ನೂರು ವರ್ಷಗಳಿಗೊಮ್ಮೆ ಮಾತ್ರ ತೆರೆಯುತ್ತವೆ.”
ಅಮೈನ್ ಬಾಗಿಲುಗಳು ತೆರೆಯುವ ಕ್ಷಣಕ್ಕಾಗಿ ಕಾಯುತ್ತ ಅಲ್ಲಿಯೇ ಕುಳಿತನು. ಸ್ವರ್ಗವನ್ನು ಪ್ರವೇಶಿಸುವ ಅವಕಾಶ ತನ್ನದಾಗುವ ಕ್ಷಣ ಸಮೀಪಿಸುತ್ತಿದೆ ಎಂಬ ಆಲೋಚನೆಯಿಂದ ಅವನು ಉತ್ತೇಜಿತನಾಗಿದ್ದರೂ ಮನುಕುಲಕ್ಕೆ ಒಳಿತನ್ನು ಮಾಡುವ ಅವಕಾಶಗಳಿಂದ ವಂಚಿತನಾದದ್ದು ಅವನಿಗೆ ತುಸು ಬೇಸರವನ್ನು ಉಂಟು ಮಾಡಿತು. ಅವಧಾನ ಕೇಂದ್ರಿಕರಿಸುವ ಸಾಮಥ್ರ್ಯದ ಕೊರತೆ ತನ್ನಲ್ಲಿ ಇರುವುದರ ಅರಿವೂ ಅವನಿಗಾಯಿತು. ಯುಗಗಳೇ ಕಳೆದವೋ ಏನೋ ಅನ್ನುವಷ್ಟು ಕಾಲ ಬಾಗಿಲುಗಳನ್ನೇ ನೋಡುತ್ತಾ ಕುಳಿತಿದ್ದ ಅವನು ಅರಿವಿಲ್ಲದೆಯೇ ತೂಕಡಿಸಲು ಆರಂಭಿಸಿದ. ಅವನ ಕಣ್ಣು ರೆಪ್ಪೆಗ ಮುಚ್ಚಿದ್ದ ಕ್ಷಣವೊಂದರಲ್ಲಿ ಸ್ವರ್ಗದ ಬಾಗಿಲುಗಳು ತೆರೆದುಕೊಂಡವು. ಅವನು ಪೂರ್ಣವಾಗಿ ಕಣ್ತೆರೆದು ನೋಡುವಷ್ಟರಲ್ಲಿ ಸತ್ತವರನ್ನೂ ಬಡಿದೆಬ್ಬಿಸುವಷ್ಟು ಜೋರಾದ ಸಪ್ಪಳದೊಂದಿಗೆ ಆ ಬಾಗಿಲುಗಳು ಮುಚ್ಚಿಕೊಂಡವು.
ಜೀವನದಲ್ಲಿ ಈ 4 ಗುಣಗಳನ್ನು ಅಳವಡಿಸಿಕೊಳ್ಳಿ:-
ಕೆಲವೊಂದು ಜನರನ್ನು ನಾವು ನೋಡಿರ್ತಿವಿ, ಏನ್ ಮಾಡಿದ್ರೂ ಅದ್ರಲ್ಲಿ ಒಳ್ಳೆಯದಾಗುತ್ತೇ ಅವ್ರಿಗೆ … ನೋಡಿದವ್ರೂ ಏನ್ ಅದೃಷ್ಟಾನಪ್ಪಾ ಇವ್ರದ್ದು ಅನ್ಬೇಕು ಆ ರೀತಿ .. ಯಾವುದೇ ಸ್ಪರ್ಧೆ ಇರಬಹುದು ಏನಾದ್ರೂ ಗೆದ್ಕೊಂಡು ಬಂದೇ ಬರ್ತಾರೆ. ಎಲ್ ಹೋದ್ರು ಜನರ ಮನಸ್ಸು ಗೆಲ್ತಾರೆ. . ಇವರ ಪ್ರಯತ್ನಗಳು ಹಾದಿ ತಪ್ಪೋದು ಕಡಿಮೆ . ಏನ್ ಅದೃಷ್ಟ ಪಡ್ಕೊಂಡು ಹುಟ್ಟಿದಾನಪ್ಪಾ ಇವ್ನು ಅನ್ಬೇಕು. ಆದ್ರೆ ವಿಷ್ಯ ಬೇರೆ ಇದೆ. ಅದೃಷ್ಟ ಮಣ್ಣು ಮಸಿ ಎಲ್ಲ ಅನ್ನೋದು ನಮ್ಮ ಹಣೆಬರಹದಲ್ಲಿಲ್ಲ ಬದಲಾಗಿ ನಮ್ಮ ಕೈನಲ್ಲೇ ಇದೆ ಅಂತೆ. ನಮ್ಮ ಅದೃಷ್ಟ ಖುಲಾಯಿಸಬೇಕು ಅಂತ ಅಂದ್ರೆ , ಕೆಲವು ವಿಷಯಗಳನ್ನು ನಾವು ಗಮನದಲ್ಲಿ ಇಟ್ಕೊಂಡಿರಬೇಕಂತೆ,
1)ಅವಕಾಶವ್ನನು ಸದುಪಡಿಸಿಕೊಂಡು ಅದೃಷ್ಟವನ್ನು ಶಕ್ತಿ ನಮಗಿದೆ ಅನ್ನೋ ವಿಶ್ವಾಸ ಬೆಳೆಸಿಕೊಳ್ಳಬೇಕು.
400 ಜನರನ್ನು ಕೂಡಿಸಿಕೊಂಡು ಅದರಲ್ಲಿ ತಮ್ಮನ್ನು ತಾವು ಅದೃಷ್ಟವಂತರು ಮತ್ತೆ ದುರದೃಷ್ಟವಂತರು ಅಂತ ಕರೆಸಿಕೊಳ್ಳವರನ್ನ ವಿಂಗಡನೆ ಮಾಡಿ, ವಿಜ್ಞಾನಿಗಳು ಅವರೆಲ್ಲರ ಹತ್ತಿರ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳಿ ಅವರ ಮನಸ್ಥಿತಿಯನ್ನು ಅಧ್ಯಯನ ಮಾಡಿದಾಗಕಂಡು ಬಂದ ಅಂಶಗಳಲ್ಲಿ ಕೆಲವು ಇಂತಿವೆ. ಅದೃಷ್ಟ ಅನ್ನೋದು ಹುಟ್ಟಿಂದ ಬರೋವಂಥದ್ದಲ್ಲ ಬದಲಾಗಿ ಮನುಷ್ಯ ಅದನ್ನು ಬೆಳೆಸಿಕೊಳ್ಳೋದು. 1)ಅದೃಷ್ಟ ಇರುವವರು ಏನು ಮಾಡ್ತಾರೆ ಅಂದ್ರೆ:-
*ಅವಕಾಶಗಳನ್ನು ಗುರುತಿಸಲಿಕ್ಕೆ ಬೇಕಾದಂತಹ ಕೌಶಲ್ಯವನ್ನು ಬೆಳೆಸಿಕೊಂಡಿರುತ್ತಾರೆ.
*ಮನಸ್ಸಿಗೆ ಅನ್ನಿಸೋದನ್ನ ಯಾವುದೇ ಹಿಂಜರಿಕೆ ಇಲ್ಲದೇ ಮಾಡುತ್ತಾರೆ.
*ಯವಾಗಲೂ ಒಳ್ಳೆಯ ಮತ್ತೆ ಪಾಸಿಟಿವ್ ಯೋಚನೆಯನ್ನೇ ಮಾಡುತ್ತಾರೆ.
*ಎಂಥದ್ದೇ ಕಷ್ಟ ಇದ್ರೂ ಅದನ್ನು ಸಾಧಿಸಿಯೇ ತೀರ್ತಿನಿ ಅನ್ನೋ ಛಲ ಬೆಳೆಸಿಕೊಂಡಿರುತ್ತಾರೆ.
2)ಭಯ ಬೀಳದೆ ಬೇರೆ ಬೇರೆ ರೀತಿಯ ಜನರನ್ನು ಮಾತನಾಡಿಸಬೇಕು.:-
ಯಾಕಂದ್ರೆ ಬೇರೆ ಬೇರೆ ರೀತಿಯ ಜನ ಸಿಕ್ಕಿದಾಗ ಬೇರೆ ಬೇರೆ ರೀತಿಯ ಅವಕಾಶಗಳು ಸಿಗೋದು ಹೆಚ್ಚು, ಹೇಗೆ ಅವಕಾಶಗಳನ್ನು ಪಡಕೋಬೇಕು ಮತ್ತು ಅವಕಾಶ ಸಿಕ್ಕಿದಾಗ ಹೇಗೆ ಅದನ್ನು ಬಳಸಿಕೊಳ್ಳಬೇಕು ಎನ್ನುವ ವಿವೇಚನೆಯು ಸಹ ನಮಗೆ ಗೊತ್ತಿರಬೇಕು.
3)ಅವಕಾಶಗಳ ಇರುವನ್ನು ಸೂಕ್ಷ್ಮವಾಗಿ ಗಮನಿಸಬೇಕು.
ಅದ್ಹೇಗೆ ಸಾಧ್ಯ ಅನ್ನಬಹುದು ನೀವು . ಯಾವುದೇ ವಿಷಯ ಆಗಲಿ. ಅಥವಾ ಸಂದರ್ಭ ಆಗಲಿ ಗಮನವಿಟ್ಟು ನೋಡಬೇಕು.. ಹಾಗೆ ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದಾಗ. ಅವಕಾಶಗಳನ್ನ ಗುರುತಿಸೋದು ಸುಲಭವಾಗುತ್ತೆ. ಮೇಲೆ ನೋಡೋದಕ್ಕಿಂತ ಆಳವಾಗಿ ನೋಡಿದಾಗ ವಿಷಯ ಅರ್ಥ ಆಗೋದರ ಜೊತೆಗೆ ಎಲ್ಲಿ ಅದನ್ನ ಬಳಸಿಕೊಳ್ಳೋ ಅವಕಾಶ ನಮಗೆ ಇದೆ ಅನ್ನೋದು ಸಹ ಗೊತ್ತಾಗುತ್ತೆ.
4)ಒಂದು ವಿಷಯವನ್ನು ಬೇರೆ ಬೇರೆ ಆಯಾಮದಲ್ಲಿ ಯೋಚಿಸಿ ನಿರ್ಧಾರ ತಗೊಳ್ಳಿ ಮನ್ನಡೆಯಿರಿ:-
ಏನ್, ಅದೃಷ್ಟ ಅನ್ನೋದು ಸುಮ್ಮನೆ ಕೈ ಹಿಡಿಯುತ್ತಾ? ಒಂದು ವಿಷಯವನ್ನ ಎಲ್ಲರೂ ಯೋಚ್ನೆ ಮಾಡೋ ಹಾಗೆ ಮಾಡಿದ್ರೆ, ಅಥವಾ ಎಲ್ಲರೂ ಹೇಗೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸ್ತಾರೋ ಅದೇ ರೀತಿ ನಾವೂ ಮಾಡಿದರೆ, ಬೇರೆಯವರಿಗೂ ನಮಗೂ ಯಾವ ವ್ಯತ್ಯಾಸ ಇರುತ್ತೆ ಹೇಳಿ? ಎಲ್ಲರೂ ಹೀಗೆ ಆಗುತ್ತೆ ಅಂತ ಯೋಚನೆ ಮಾಡಿದ್ರೆ, ನಾವು ಹೀಗ್ಯಾಕೆ ಆಗಬಾರದು? ಹೀಗೆ ಆದರೆ ಹೇಗೆ? ಅನ್ನೋ ಬಗ್ಗೆ ಯೋಚನೆ ಮಾಡಬೇಕು. ಅದರಿಂದ ಜಾಸ್ತಿ ಅವಕಾಶಗಳೂ ಸಿಗುತ್ತೆ, ಜೊತೆಗೆ ಅವಕಾಶ ಸಿಕ್ಕಿದಾಗ ಹೇಗೆ ಉಪಯೋಗಿಸಿಕೊಳ್ಳಬೇಕು ಅನ್ನೋದು ತಿಳಿಯುತ್ತೆ. ಮುಂದೆ ಯಾವುದಾದ್ರೂ ಅವಕಾಶ ಎದುರು ಸಿಕ್ಕಾಗ ನಮಗೆ ಅದೃಷ್ಟ ಇಲ್ವೇನೋ ಅಂತ ಕೊರಗೋ ಬದಲು, ಮೊದಲು ಅದನ್ನ ಪಡೆದುಕೊಂಡು ಆಮೇಲೆ ಬುದ್ದಿ ಉಪಯೋಗಿಸಿ ಅದೃಷ್ಟ ತಂದಕೊಳ್ಳಬೇಕು..
ಜೀವನದ ಪಯಣ ಯಶಸ್ಸಿನ ಕಡೆಗೆ ಸಾಗಬೇಕು ಯಶಸ್ಸು ಪಡೆದಾಗ ಮಾತ್ರ ವ್ಯಕ್ತಿಗಳು ಇತರರಿಗೆ ಆದರ್ಶರಾಲು ಸಾಧ್ಯ ಅವಕಾಶಗಳನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ. ಅವಕಾಶಗಳು ಎಂದಿಗೂ ನಮ್ಮನ್ನು ಅರಸಿಕೊಂಡು ಬರುವುದಿಲ್ಲ. ನಾವೇ ಅವಕಾಶಗಳನ್ನು ಸೃಷ್ಟಿಸಬೇಕು.
“ಅವಕಾಶಗಳು ಎದುರಿಗೆ ಸಿಗುವುದಿಲ್ಲ ನಾವೇ ಅದನ್ನು ಸೃಷ್ಟಿಸಿಕೊಳ್ಳಬೇಕು.ಅವಕಾಶಗಳು ನಮ್ಮ ಬಾಗಿಲನ್ನು ತಟ್ಟದಿದ್ದರೆ ನಾವು ಇನ್ನೊಂದು ಬಾಗಿಲನ್ನು ಸೃಷ್ಟಿಸಿಕೊಳ್ಳಬೇಕು.ಸಿಗುವ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು”.
–ಶ್ರೀಮತಿ ಎಸ್, ಎಸ್, ಭರಮನಾಯ್ಕರ