ಅದೊಂದು ಹೆಚ್ಚು ಜನಸಂಚಾರವಿರದ ಪ್ರದೇಶ. ಸುತ್ತಲೂ ಗುಡ್ಡ, ಪೊದರುಗಳು. ಒಂದಕ್ಕಿಂತ ಒಂದು ವಿಭಿನ್ನ. ಆದರೂ ಸೂಕ್ಷ್ಮವಾಗಿ ನೋಡಿದರೆ ಅಲ್ಲೊಂದು ಮನೆ ಕಾಣುತ್ತಿತ್ತು. ಅಲ್ಲಿದ್ದವರು ಶಾಂತಿ ಅವಳ ಗಂಡ ರಘು ಮತ್ತು ಅತ್ತೆ ಕಮಲಮ್ಮ. ದಿನ ನಿತ್ಯದ ಮನೆಗೆ ಬೇಕಾದ ವಸ್ತುಗಳ ಖರೀದಿಗೆ ನಾಲ್ಕು-ಐದು ಕಿಲೋಮೀಟರ್ ನಡೆದುಕೊಂಡು ಬಂದು ಹೋಗಬೇಕಾಗಿತ್ತು. ಹೆಚ್ಚಿನವರು ಇದೇ ಕಾರಣಕ್ಕಾಗಿ ಅಲ್ಲಿಂದ ಬೇರೆ ಕಡೆಗೆ ತೆರಳಿದವರು ಮತ್ತೆ ಆ ದಾರಿಯತ್ತ ಕಣ್ಣು ಹಾಯಿಸಿರಲಿಲ್ಲ. ಹಾಗಿದ್ದರೂ ಕಮಲಮ್ಮನದು ಒಂದೇ ಹಟ. ಬೇರೆಲ್ಲೂ ಹೋಗಲಾರೆನೆಂಬುದು.
ಶಾಂತಿ ಪದವೀಧರೆಯಾಗಿದ್ದರೂ ಕಮಲಮ್ಮನ ಆಸೆಯಂತೆ ಯಾವ ಕೆಲಸಕ್ಕೂ ಹೋಗಲು ಬಿಡದೆ ಮನೆಯಲ್ಲೇ ಕುಳ್ಳಿರಿಸಿದ್ದರು. ಕೆಲವೊಮ್ಮೆ ಗೃಹ ವಸ್ತುಗಳ ಖರೀದಿಗೆ ಈಕೆಯೇ ದೂರದ ಪೇಟೆಗೆ ನಡೆದು ಬರುತ್ತಿದ್ದಳು. ಅಲ್ಲಿ ಶಾಂತಿಗೆ ವಾಣಿಯ ಪರಿಚಯವಾಗಿತ್ತು. ಆಮೇಲೆ ಅವರಿಬ್ಬರೂ ಗೆಳತಿಯರಾಗಿದ್ದರು. ಶಾಂತಿ ವಾಣಿಯ ಮನೆಯಲ್ಲಿ ಹರಟೆ ಹೊಡೆದು ಮನೆಗೆ ವಾಪಸ್ಸಾಗುತ್ತಿದ್ದಳು. ಹೀಗೊಂದು ದಿನ ಶಾಂತಿ ಅಂದಿನ ಹರಟೆ ಮಾತುಗಳನ್ನು ಮನಸ್ಸಲ್ಲೇ ಮೆಲುಕು ಹಾಕುತ್ತಾ ಹೆಜ್ಜೆ ಹಾಕುತ್ತಿದ್ದಳು. ಮೂರು ಕಿಲೋಮೀಟರ್ ಅದಾಗಲೇ ನಡೆದು ಬಂದಿದ್ದಳು. ಇನ್ನುಳಿದಿರುವುದು ಮೂರು ಕಿಲೋಮೀಟರ್. ಅಷ್ಟರಲ್ಲಿ ಮಗುವೊಂದು ಅಳುವ ಸದ್ದು ಕೇಳಿತು. ಶಾಂತಿ ಹಿಂತಿರುಗಿ ನೋಡಿದಳು. “ಇಲ್ಲಿಗೆ ಮಗುವನ್ನೆತ್ತಿಕೊಂಡು ಬರುವವರು ಯಾರು? ತಮಗೆ ನೆಂಟರಿದ್ದರೂ ಇಷ್ಟು ಚಿಕ್ಕ ಮಗು ಯಾರಿಗೂ ಇಲ್ವಲ್ಲ?” ಶಾಂತಿ ಯೋಚನಾ ಮಗ್ನಳಾದಳು. ಮತ್ತೆ ಮಗುವಿನ ಅಳು ಎಚ್ಚರಿಸಿದಾಗ ಮತ್ತೆ ತಿರುಗಿದಳು. ಉಹೂಂ ಯಾರೂ ಇಲ್ಲ. ಮತ್ತೆ ಮುನ್ನಡೆದಳು ಶಾಂತಿ ಶಾಂತವಾಗಿ.. ನಡೆದೂ ನಡೆದೂ ಮನೆ ತಲುಪುವಷ್ಟರಲ್ಲಿ ಸುಸ್ತಾಯಿತವಳಿಗೆ. ಇದೇನು ಎಂದೂ ಆಗದಷ್ಟು ಸುಸ್ತು ಇಂದು? ತನಗೇನಾಗುತ್ತಿದೆ? ಛೆ! ಎಂದು ಕುಳಿವಳೇ ನಿದ್ದೆಯ ಮಂಪರಿನಲ್ಲಿ ತೇಲಾಡಿದಳು. ಪಾಪು ತನ್ನ ಕೈ ಹಿಡಿದು ಎಳೆದಾಗ ಮುಗ್ಗರಿಸಿಬಿಟ್ಟಳು. ಎಚ್ಚರವಾದವಳಿಗೆ ತಾನಿಷ್ಟೂ ಹೊತ್ತು ಕನಸು ಕಾಣುತ್ತಿದ್ದುದು ಅರಿವಾದಾಗ ಕಣ್ಬಿಟ್ಟು ನೋಡಿದಳು. ಎದುರಿಗೆ ಅತ್ತೆ ನಿಂತಿದ್ದರು. “ಶಾಂತಿ ಏನಾಯಿತು? ಯಾಕೆ ಒಂಥರಾ ಇದ್ದೀಯಾ? ಕುಳಿತಲ್ಲೇ ನಿದ್ದೆ ಬೇರೆ ಮಾಡಿರುವೆ. ಹುಶಾರಿಲ್ವೇ ಎಂದು ಹಣೆ ಮುಟ್ಟಿ ನೋಡಿದಳು. ಜ್ವರ ಏನೂ ಬಂದ ಹಾಗಿಲ್ಲ. ಮತ್ತೇನಾಯಿತು? ಪ್ರಶ್ನೆಗಳ ಸುರಿಮಳೆ ಕೇಳುತ್ತಿದ್ದವಳಿಗೆ ತಲೆ ಚಿಟ್ಟು ಹಿಡಿದಂತಾಯಿತು. ಇಂದೇನೋ ವಿಚಿತ್ರ ಎನಿಸಿತವಳಿಗೆ. ಮಾತನಾಡದೆ ಎದ್ದು ಹೋದಳು ತನ್ನ ಕೋಣೆಗೆ.
ಶಾಂತೀ… ಶಾಂತೀ… ತನ್ನ ಕೋಣೆ ಬಾಗಿಲಿಗೆ ಯಾರೋ ಬಡಿಯುತ್ತಿರುವುದರ ಜೊತೆಗೆ ತನ್ನ ಹೆಸರು ಕೂಗಿ ಕರೆಯುವುದೂ ಕೇಳಿಸಿದಾಗ ಎದ್ದು ಕುಳಿತಳು. ಗಡಿಯಾರದತ್ತ ನೋಡಿದಾಗ ಅದು ಬೆಳಗ್ಗಿನ ಎಂಟು ಗಂಟೆ ತೋರಿಸುತ್ತಿತ್ತು. “ಛೆ! ಇದೇನು ಇಷ್ಟೂ ಹೊತ್ತು ನಿದ್ದೆ ಮಾಡಿದೆನೆ? ಹಾಳಾದ ನಿದ್ದೆ” ಎನ್ನುತ್ತಲೇ ಹೊರಬಂದವಳಿಗೆ ವಾಣಿ ಅಲ್ಲಿರುವುದು ಕಾಣಿಸಿತು. “ಅರೆ ವಾಣಿ ಏನು ರಾಣಿಯವರ ಸವಾರಿ ನಮ್ಮ ಮನೆಯತ್ತ ಅದೂ ಬೆಳಗ್ಗೇನೆ..” ಹೆಚ್ಚೆಂದರೆ ಸಂಜೆ ಹೊತ್ತಿನಲ್ಲೆಲ್ಲಾ ಮನೆಗೆ ಬರುತ್ತಿದ್ದ ವಾಣಿಯತ್ತ ಪ್ರಶ್ನೆ ತೂರಿ ಬಂತು. “ಏನಿಲ್ವೇ ಸುಮ್ನೆ ಬಂದೆ. ಮನೇಲಿ ಸಿಹಿ ಕಡುಬು ಮಾಡಿದ್ದೀನಿ. ಬಾ ತಿನ್ನುವಿಯಂತೆ. ಹುಂ ಹೊರಡು. ನಿಮ್ಮತ್ತೆಗೆ ಡಬ್ಬದಲ್ಲಿ ಹಾಕಿ ತಂದಿದ್ದೀನಿ” ಎನ್ನುತ್ತಾ ಅವಸರಿಸಿದಾಗ ಸ್ನಾನ ಮಾಡಿ ಬಂದು ಹೊರಟಳು ಶಾಂತಿ ವಾಣಿಯ ಮನೆಗೆ. ಎಲ್ಲಿ ಮಗುವಿನ ಸದ್ದು ಕೇಳುತ್ತೋ ಅಂತ ಅಂಜುತ್ತಂಜುತ್ತಾ ಬರುತ್ತಿದ್ದವಳಿಗೆ ಈ ಸಲ ಅಮ್ಮಾ ಎಂದು ಕರೆದಂತೆ ಧ್ವನಿ ಕೇಳಿಸಿತು. ತಿರುಗಿ ನೋಡುತ್ತಾ ನಡೆಯುತ್ತಿದ್ದಳು. ಗೆಳತಿಯ ವರ್ತನೆ ಕಂಡು ವಾಣಿಗೆ ಅಚ್ಚರಿಯಾಯಿತು. “ಏನಾಯಿತಿವಳಿಗೆ? ನೆನ್ನೆಯಿಂದ ಒಂಥರಾ ಇದ್ದಾಳಲ್ಲಾ…” ಮನಸ್ಸಿನಲ್ಲೇ ಯೋಚಿಸುತ್ತಾ ಶಾಂತಿಯನ್ನು ಹಿಂಬಾಲಿಸಿದಳು. ಅಂತು ಮನೆ ತಲುಪಿದಾಗ ಸುಸ್ತಿನಿಂದ ಮಲಗೇ ಬಿಟ್ಟಳು ಶಾಂತಿ. ಸ್ವಲ್ಪ ಹೊತ್ತು ಕಳೆದರೆ ಸರಿ ಹೋಗಬಹುದೇನೋ ಎಂದು ಅವಳನ್ನು ಅಲ್ಲೇ ಬಿಟ್ಟು ಒಳ ನಡೆದಳು ವಾಣಿ. “ಹುಂ ಪುಟ್ಟಿ ನಾನೇ ನಿನ್ನ ಅಮ್ಮ. ಇಲ್ನೋಡು ನಿಂಗೇನು ತಂದಿದ್ದೀನಿ ನೋಡು. ಓಡ್ಬೇಡ ನಿಂತ್ಕೋ ನಿಂತ್ಕೊ” ಹೆಚ್ಚೂ ಕಡಿಮೆ ಧ್ವನಿಯೇರಿಸಿ ಕೂಗಿದಳು ಶಾಂತಿ. ಹೊರಬಂದ ವಾಣಿಗೆ ಭಯವಾಯಿತು. ಅಮ್ಮನನ್ನೂ ಜೊತೆಗೆ ಕರೆದುಕೊಂಡು ಬಂದಾಗ ಶಾಂತಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದಳು. ತಟ್ಟಿ ಎಚ್ಚರಿಸಿದಾಗ ತನಗೇನೂ ಆಗಿಲ್ಲವೆಂಬಂತೆ “ಎಲ್ಲಿ ಕಡುಬು? ನೀನೊಬ್ಳೇ ತಿಂದೆಯಾ?” ಎಂದು ವಾಣಿಯತಲ್ತೇ ಎದ್ದು ಬಂದಳು ಅವಳು. ಭಯವನ್ನು ತೋರಿಸದೆ ವಾಣಿ ನಗಲು ಪ್ರಯತ್ನಿಸಿದಳು. ಹರಟೆ ಮುಂದುವರಿದು ಹೊತ್ತು ಮಧ್ಯಾಹ್ನವಾಗುತ್ತಲೇ ತಾನು ಮನೆಗೆ ಹೊರಟುನಿಂತಳು ಶಾಂತಿ. ನಡೆದಳು.. ನಡೆದಳು.. ಮತ್ತದೇ ಸ್ಥಳ ತಲುಪಿದಾಗ ಮಗು ತನ್ನ ಕೈ ಹಿಡಿದು ನಡೆದಂತೆ ಭಾಸವಾಗಿ ಹೆಜ್ಜೆ ಮುಂದಿಡುತ್ತಿದ್ದಳು. ಮನೆ ತಲುಪಿದಾಗ ಮತ್ತೆ ಸುಸ್ತು.
ದಿನಗಳು ಹೀಗೆ ಮುಂದುವರಿಯುತ್ತಿದ್ದವು. ಶಾಂತಿ ಮಗುವಿನ ಜೊತೆಗೆ ನಗುವಂತೆ ಮಾಡುವುದು, ಮಾತನಾಡುವುದು ಮುಂದುವರಿಯುತ್ತಲೆ ಇದ್ದುವು. ಮನೆಯವರ ಗಮನಕ್ಕೂ ಬಂದಿದ್ದುವು ಈ ವಿಚಾರ. ಶಾಂತಿ ಮಾನಸಿಕವಾಗಿ ಅಸೌಖ್ಯದಲ್ಲಿರುವಳೆ? ವಾಣಿಗೆ ಇದೇನೂ ತಲೆಗೆ ಹೋಗುತ್ತಿರಲಿಲ್ಲ. ಒಂದರ್ಥದಲ್ಲಿ ಅವಳು ತನ್ನ ಗೆಳತಿಯ ಈ ಪರಿಸ್ಥಿತಿ ಕಂಡು ತಾನೇ ಮಾನಸಿಕವಾಗಿ ಬಳಲಿದಳು. ಶಾಂತಿಯ ಈ ಸ್ಥಿತಿಗೆ ಕಾರಾಣವಾದರೂ ಏನು? ಹೆಚ್ಚಿನ ಎಲ್ಲಾ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆದದ್ದಾಯಿತು. ಪರಿಣಾಮ ಶೂನ್ಯ.
ಅದೊಂದು ದಿನ ಕಮಲಮ್ಮ ಶಾಂತಿಯನ್ನು ಕರೆದುಕೊಂಡು ಜ್ಯೋತಿಷಿ ಬಳಿ ಹೋದರು. ಅಲ್ಲಿ ಆಕೆಗೆ ಯಾವ ಕಾರಣಕ್ಕೆ ಹೀಗಾಗುತ್ತಿರುವುದೆಂದು ಜ್ಯೋತಿಷಿ ಹೇಳುತೊಡಗಿದರು….
“ಅದೊಂದು ಸಂಭ್ರಮದ ವಾತಾವರಣ. ಶಾಂತಿ-ರಘು ಇವರ ವಿವಾಹ ಸಮಾರಂಭ. ಬಂಧು ಮಿತ್ರರು ಗೆಳೆಯ ಗೆಳತಿಯರು ಇನ್ನೂ ಅನೇಕರು ಅಲ್ಲಿ ಸೇರಿದ್ದರು. ರಘು ಒಬ್ಬ ಉತ್ತಮ ನಡತೆಗಾರ. ಎಲ್ಲರಲ್ಲೂ ಬೆರೆತು ನಡೆಯುವವ. ಮೇಲಾಗಿ ಒಬ್ಬನೇ ಒಬ್ಬ ಮಗ. ತಂದೆ ತಾಯಿ ಅತೀ ಸಲುಗೆಯಿಂದ ಬೆಳೆಸಿದ್ದರು. ವಿದೇಶದಲ್ಲಿರುವ ಕಾರಣವೋ ಏನೋ ಮದುವೆಗೆ ಜನ ತುಂಬಿ ತುಳುಕಿದ್ದರು. ಅಂತೂ ಮದುವೆ ಅದ್ಧೂರಿಯಾಗಿ ನೆರವೇರಿತು. ನೆಂಟರಿಷ್ಟರು ಬಂದು ಹೋಗುವವರಿದ್ದರು ಅವರವರ ಮನೆಗೆ. ಎಲ್ಲರೂ ಹೋದಮೇಲೆ ಮನೆ ಬಿಕೋ ಅನಿಸಿದಾಗ ಶಾಂತಿಗೆ ಸ್ವಲ್ಪ ಇರುಸುಮುರುಸಾಗ ತೊಡಗಿತು. ಆ ದಿನ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ರಘುನ ತಂದೆಗೆ ಸ್ಕೂಟರ್ ಒಂದು ಢಿಕ್ಕಿಯಾಗಿ ಸ್ಥಳದಲ್ಲೇ ಮೃತ ಪಟ್ಟಾಗ ಕಮಲಮ್ಮನ ಗೋಳು ಹೇಳತೀರದಂತಾಗಿತ್ತು. ಸರಿಯಾಗಿ ಮೂರು ತಿಂಗಳ ನಂತರ ರಘು ವಿದೇಶಕ್ಕೆ ಮತ್ತೆ ಹೊರಟುನಿಂತನು. ಹೊಟ್ಟೆ ಪಾಡಿಗಾಗಿ ದುಡಿಯಲೇ ಬೇಕಲ್ಲ? ಹೋಗುವ ಮೊದಲು ಕಮಲಮ್ಮ ಮನೆ ಬದಲಾಯಿಸಲು ಒತ್ತಾಯ ಪಡಿಸಿದ್ದರಿಂದಲೋ ಏನೋ ರಘು ಆ ಮನೆಗೆ ವಾಸ ಬದಲಾಯಿಸಿ ಮತ್ತೆ ಹೊರಟುಹೋದನು. ಶಾಂತಿ ಗರ್ಭಿಣಿಯಾಗಿದ್ದಳು. ಸ್ಕ್ಯಾನಿಂಗ್ ಮೂಲಕ ಮಗು ಹೆಣ್ಣೆಂದು ತಿಳಿದಾಗ ಅದನ್ನು ತೆಗೆಸಿಬಿಡುವಂತೆ ಕಮಲಮ್ಮ ಶಾಂತಿಗೆ ಹೇಳಿದ್ದರು. ಯಾವ ಹೆಣ್ಣು ತಾನೇ ತನ್ನ ಕರುಳ ಕುಡಿಯನ್ನು ಕೊಲ್ಲಲು ಮನಸ್ಸು ಮಾಡುವಳು? ಶಾಂತಿ ಆಗಲ್ಲವೆಂದು ರಂಪ ಮಾಡಿದಳು. ಪ್ರಸಾದ್‍ಗೆ ತಿಳಿದರೆ ಮನೆ ರಣರಂಗವಾದೀತೆಂದು ಕಮಲಮ್ಮ ಹೆದರಿದರು.
ಶಾಂತಿ ಹೆಣ್ಣುಮಗುವಿಗೆ ಜನ್ಮವಿತ್ತಳು. ಕಮಲಮ್ಮ ಇದಕ್ಕೇನಾದರೂ ಮಾಡಲೇಬೇಕೆಂದು ಯೋಚಿಸುತ್ತಿದ್ದಳು. ಹಾಗೆಂದೇ ಶಾಂತಿ, ಮಗು ನಿದ್ರಿಸುತ್ತಿರುವ ಸಮಯ ನೋಡಿ ಮಗುವಿನ ಕುತ್ತಿಗೆ ಹಿಸುಕಿಬಿಟ್ಟಳು. ನಿದ್ರಿಸುತ್ತಿರುವ ಮಗು ನಿದ್ದೆಯಲ್ಲೇ ಸತ್ತು ಹೋಗಿರುವುದು ಖಚಿತಪಡಿಸಿಕೊಂಡು ಮೆಲ್ಲ ಮೆಲ್ಲನೆ ಹೊರಬಂದರು. ಶಾಂತಿಗೆ ಎಚ್ಚರವಾದಾಗ ಏನೋ ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ ಎಂದು ಸಮಾಧಾನಪಡಿಸಿದಳು. ಆದರೂ ಹೆತ್ತ ತಾಯಿ ಹೇಗೆ ತಾನೇ ಸುಮ್ಮನಾಗುವಳು? ಇನ್ನು ದೂರದಲ್ಲಿರುವ ರಘು ವಿಷಯವಂತೂ ಹೇಳತೀರದು. ಮಗು ಇನ್ನಿಲ್ಲವೆಂದಾದಾಗ ಊರಿಗೆ ಬರಲೂ ಆಗದೆ ನೋಡಲೂ ಆಗದೆ ಕುಳಿತಲ್ಲೇ ಚಡಪಡಿಸಿದನು. ಮಗುವನ್ನು ಮಣ್ಣು ಮಾಡಿದ್ದಾಯಿತು. ಇದೇ ಮಗು ಮುಂದೆ ಪ್ರೇತವಾಗಿ ಶಾಂತಿಯನ್ನು ಕಾಡುತ್ತದೆ ಎಂಬ ಅರಿವು ಆಗಿರಲಿಲ್ಲ ಕಮಲಮ್ಮನಿಗೆ.”
ಜ್ಯೋತಿಷಿ ಬಾಯಿಂದ ಕಥೆ ಕೇಳುತ್ತಿದ್ದ ಶಾಂತಿ ಮೂರ್ಛೆ ತಪ್ಪಿ ಬಿದ್ದಿದ್ದಳು. ನಿಜ ವಿಷಯ ತಿಳಿದ ಶಾಂತಿ ಇನ್ನೇನು ಅಚಾತುರ್ಯ ಮಾಡುತ್ತಾಳೋ ಏನೋ ಎಂಬ ಗಾಬರಿಯಿಂದಲೇ ಅವಳನ್ನೆಬ್ಬಿಸಿ ಹೊರ ನಡೆದರು ಕಮಲಮ್ಮ ಯಾಂತ್ರಿಕವಾಗಿ.
-ಲತಾ ಆಚಾರ್ಯ
Nice lines 🙂
thank u