ಅಳುವಿನಲ್ಲಡಗಿದೆ ಬಾಳು: ಸಂಗೀತ ರವಿರಾಜ್


ಹೀಗೊಂದು ಶುಭನುಡಿಯಿದೆ " ಒಂದೇ ಹಾಸ್ಯದ ಬಗ್ಗೆ ಮತ್ತೆ ಮತ್ತೆ ನಗುವುದಿಲ್ಲವಾದರೆ, ಒಂದೇ ಸಂಗತಿ ಬಗ್ಗೆ ಮತ್ತೆ ಮತ್ತೆ ಅಳುವುದ್ಯಾಕೆ?  ಮತ್ತೆ ಮತ್ತೆ ತೇಲಿ ಬರುವ ಅಳು ಒಂದು ರೀತಿಯಲ್ಲಿ ಅಪ್ಯಾಯಮಾನವಾದ ಸಂಗತಿ. ಅಳುವೆನ್ನುವುದು ಮನುಷ್ಯನ ಎಲ್ಲಾ ಮೂಲಭೂತ ಕ್ರಿಯೆಗಳಂತೆ ಸಹಜವೋ? ಅದೊಂದು ಕಲೆಯೋ? ಸಾಂಧರ್ಭಿಕವೋ? ತಿಳಿಯಲೊಲ್ಲುದು. ಆದರು ಬೇಸರವಾದಾಗ ಅಳುವುದು ಮಾತ್ರ ಸಹಜ. ಅಳುವ ಗಂಡಸರನ್ನು ನಂಬಬೇಡ ಎನ್ನುತ್ತದೆ ಗಾದೆ. ಈ ಗಾದೆ ಚಾಲ್ತಿಗೆ ಹೇಗೆ ಬಂತೆಂದು ಯೋಚಿಸಿದರೆ ಅಳು ಯಾವಾಗಲೂ ಹೆಣ್ಣಿಗೆ ಕಟ್ಟಿಟ್ಟ ಬುತ್ತಿ ಎಂಬುದಾಗಿ ಎಲ್ಲರು ಅಂದುಕೊಂಡಿರುವುದರಿಂದಲೆ ಆಗಿರಬಹುದು. ಅಳು ಮತ್ತು ಹೆಣ್ಣನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದರು ತಪ್ಪಾಗಲಾರದು.  ನಾವು ಸಾಯುವಾಗ ಅಳುವುದು ಹೆಣ್ಣು ಮಕ್ಕಳು ಮಾತ್ರ ಎಂಬ ಮಾತನ್ನು ಹಲವರು ಹೇಳುತ್ತಿರುತ್ತಾರೆ. ಅಳುಮುಂಜಿತನ ಹೆಣ್ಣು ಜೀವಕ್ಕೆ ಅದೆಷ್ಟು ಹೊಂದಿಕೊಂಡಿದೆ ಎಂಬುದು ಇದರಿಂದ ಅರ್ಥವಾಗುತ್ತದೆ. ಅಳು ಹೆಣ್ಣು ಜೀವಕ್ಕೆ ಹೊಂದಿಕೊಂಡಷ್ಫ್ಟು ಆಪ್ತವಾಗಿ ಗಂಡು ಜೀವಕ್ಕೆ ಖಂಡಿತ ಹೊಂದಿಕೊಂಡಿಲ್ಲ.  ಗಂಡಸರು ಅಳುತ್ತಾರೆಂದರೆ ಅದು ಬಲು ಅಪರೂಪ ಮತ್ತು ಅತೀವ ದು:ಖದ ಸಂದರ್ಭವೆ ಆಗಿರುತ್ತದೆ. ಆದರೆ ಹೆಂಗಸರಿಗೆ ಹಾಗಲ್ಲ, ಅಳುವಿಗೆ ಕಾರಣವು ಬೇಕಿಲ್ಲ. ಈ ಕಣ್ಣೀರಿನ ನಡುವೆ ಮೊಸಳೆ ಕಣ್ಣೀರು ಹಾಕುವವರು ಎಂಬುದಾಗಿ ಗುರುತಿಸಿಕೊಳ್ಳುವ ಜನರಿದ್ದಾರೆ. ಇದರರ್ಥ ಭಾವನೆಗಳಿಲ್ಲ ಕಣ್ಣೀರಿನಿಂದ ಜನರ ಅನುಕಂಪ ಗಿಟ್ಟಿಸುವ ದುರುದ್ದೇಶವಿರುತ್ತದೆ. ಮೊಸಳೆ ಕಣ್ಣೀರಿಗೆ ರಾಜಕಾರಣಿಗಳನ್ನು ಉತ್ತಮ ಉದಾಹರಣೆಯಾಗಿ ಬಳಸಿಕೊಳ್ಳಬಹುದು. ನೀರಿನಲ್ಲಿ ವಾಸಿಸುವ ಮೊಸಳೆಗಳು ತಮ್ಮ ದೇಹದಲ್ಲಿರುವ ಉಪ್ಪಿನಂಶವನ್ನು ಕಣ್ಣೀರಿನ ರೂಪದಲ್ಲಿ ಹೊರಹಾಕುತ್ತವೆ. ಇದಕ್ಕು ಮತ್ತು ನಿಜವಾದ  ಅಳುವಿಗೆ ಏನು ಸಂಬಂಧವಿಲ್ಲ. ಆದರಿಂದ ನಕಲಿ ಕಣ್ಣೀರಿಗೆ ಮೊಸಳೆ ಕಣ್ಣೀರು ಎನ್ನುತ್ತಾರೆ.

ಚಿಕ್ಕ ಮಕ್ಕಳಿಗೆ ಅಳುವಿನೊಂದಿಗೆ ತುಂಬ ಸನಿಹದ ನಂಟು.  ಮಗುವಿಗೆ ಆರೇಳು ವರ್ಷದವರೆಗೆ ತಮಗೆ ಬೇಕಾದ ಪ್ರತಿಯೊಂದು ವಿಷಯವನ್ನು, ವಸ್ತುವನ್ನು ದಕ್ಕಿಸಿಕೊಳ್ಳಲು ಅಳುವೆ ಅಸ್ತ್ರವಾಗಿರುತ್ತದೆ.   ಪೋಷಕರು ಅದರ ಅಳುವಿನೆದುರು ಕರಗಿ ಹೋಗುತ್ತಾರೆ. ಹೀಗೆ ಜನಿಸಿದ ತಕ್ಷಣದಿಂದ ಶುರುಹಚ್ಚಿಕೊಳ್ಳುವ ಅಳು ನಮ್ಮ ಜೀವನದ ಕೊನೆಯ ಕ್ಷಣದವರೆಗೆ ನಮ್ಮೊಳಗೆ ಹಾಸುಹೊಕ್ಕಾಗಿರುತ್ತದೆ. ಅಳುವಾಗ ’ಅಡ್ರಿನೋಕೋರ್ಟಿ ಕೊಟ್ರೂಪಿಕ್" ಎನ್ನುವ ಅಂಶ ನಮ್ಮ ದೇಹದಿಂದ ಹೊರಹಾಕಲ್ಪಡುತ್ತದೆ. ಜೋರಾಗಿ ಅತ್ತಾಗ ದೇಹ ಮನಸ್ಸು ಎರಡು ಹಗುರವಾದ ಅನುಭವವು ಆಗುತ್ತದೆ. ಇದಕ್ಕೆ ವೈಜ್ಙಾನಿಕ ಕಾರಣವು ಇದೆ. ದೇಹ ಒತ್ತಡ ಅನುಭವಿಸಿದಾಗ ಉತ್ಪತ್ತಿಯಾದ ವಿಷಕಾರಿ ಅಂಶಗಳು ಕಣ್ಣೀರಿನ ಮೂಲಕ ಹೊರಹೋಗುತ್ತದೆ. ದೊಡ್ಡ ದೊಡ್ಡ ಆಘಾತವನ್ನು ಕಂಡಾಗ ಕೆಲವರು ಅಳದೆ ಗರಬಡಿದವರಂತೆ ಆಗಿಬಿಡುತ್ತಾರೆ. ಇದರಿಂದ ಮಾನಸಿಕ ರೋಗ ಉಂಟಾಗುವ ಸಾಧ್ಯತೆ ಹೆಚ್ಚು. ಇದರ ಬದಲಾಗಿ ಜೋರಾಗಿ ಅತ್ತು ಮನಸ್ಸನ್ನು ಹಗುರ ಮಾಡಿಕೊಂಡರೆ ಆರೋಗ್ಯಕರವು ಹೌದು. 

ಕಣ್ಣೀರಿನ ಕಥೆಯಲ್ಲಿ ಇನ್ನು ಆಶ್ಚರ್ಯಕರ ಸಂಗತಿಯೊದನ್ನು ಹೇಳುತ್ತೇನೆ. ಚಲನಚಿತ್ರ ನೋಡುವಾಗ ಅಥವ ಪುಸ್ತಕಗಳನ್ನು ಓದುವಾಗ ಅದರಲ್ಲಿ ಭಾವನೆಗಳು ಬದಲಾಗುವ ಸಂದರ್ಭದಲ್ಲಿ ಅಂದರೆ ದು:ಖದ ಸನ್ನಿವೇಶಗಳು ಬಂದಾಗ ಒಂದು ಹಂತದಲ್ಲಿ ನಾವು ಅತ್ತುಬಿಡುತ್ತೇವೆ. ನನಗೆ ಈ ಅಭ್ಯಾಸ ಚಿಕ್ಕಂದಿನಿಂದಲೆ ಸಹಜವಾಗಿ ಬಂದಿದೆ ಮತ್ತು ದು:ಖಿಸುತ್ತಲೆ ಓದುತ್ತಿದ್ದೆ. ಆದರೆ ಇತ್ತೀಚೆಗೆ ಚಲನಚಿತ್ರಗಳನ್ನು ನೋಡುವಾಗ ಅಳು ಬಂದರೆ ಹತ್ತಿಕ್ಕಿಕೊಳ್ಳುತ್ತೇನೆ. ಈಗಲು ದು;ಖದ ಸನ್ನಿವೇಶಗಳನ್ನು ನೋಡಿ ಕಣ್ಣೀರು ಹಾಕುವುದೆಂದರೆ ನಾಚಿಕೆಯ ವಿಷಯವಲ್ಲವೆ? ಇಂತಹ ಅಳುವಿಗೆ ಏನೆಂದು ಹೆಸರಿಡೋಣ? ನಮ್ಮ ತಲ್ಲೀ ನತೆಯ ಪರಮಾವಧಿ ಎನ್ನಬಹುದು ಅಥವ ನಾವುಗಳು ಬಲು ಭಾವಜೀವಿಗಳಾಗಿರಬಹುದು. ಅಲ್ಲದೆ ಹೀಗೆ ಅಳುವುದು ನಮ್ಮ ಜೀವನದ ಭಾಗವಾಗಿರಲುಬಹುದು. ಅಳುವಿಲ್ಲದೆ ಯಾವುದೆ ಚಲನಚಿತ್ರವಾಗಲಿ ಧಾರಾವಾಹಿಯಾಗಲಿ ನಿರ್ಮಾಣವೆ ಆಗಿಲ್ಲ ಎನ್ನಬಹುದು. ಕಣ್ಣೀರಿನಲ್ಲೇ ಕೈ ತೊಳೆಯುವ ಹಲವಾರು ಸಿನಿಮಾಗಳಿವೆ. ಇಂತವುಗಳನ್ನು ಇಷ್ಫ್ಟಪಡುವ ಜನರ ಒಂದು ವರ್ಗವೆ ಇರುತ್ತದೆ. ಇದು ನಟನೆ ಆಗಿರಬಹುದು. ಆದರೆ ಅಳುವೆಂಬುದು ಜನರ ಜೀವನದ ಅವಿಭಾಜ್ಯ ಅಂಗವಾಗಿರುವುದರಿಂದ ನಟನೆ ಎಂಬುದನ್ನು ನಾವು ಬಲವಾಗಿ ಪರಿಗಣಿಸುವುದಿಲ್ಲ. ನಟಿಸುವಾಗ ಸುಖಾಸುಮ್ಮನೆ ಕಣ್ಣೀರು ಬರುವುದಿಲ್ಲವಾದರಿಂದ ಗ್ಲಿಸರಿನ್ ಹಚ್ಚಿ ಕಣ್ಣೀರು ಬರುವಂತೆ ಮಾಡುತ್ತಾರೆ.

ಇನ್ನು ಹೆಂಡತಿಯ ಅಳುವಿನಿಂದ ಮನೆಯೆ ಹೋಳಾಗಿ ಹೋದ ಪ್ರಸಂಗಗಳಿವೆ. ಹೆಂಡತಿ ಅತ್ತರೆ ಗಂಡ ಕರಗಿ ಹೋಗುತ್ತಾನೆ. ಕೂಡಲೆ ಆಕೆಯ ಬೇಕು ಬೇಡಗಳನ್ನು ಪೂರೈಸುತ್ತಾನೆ. ಹೆಣ್ಣಿಗೆ ಕಣ್ಣೀರು ಎಷ್ತು ಸಹಜವೊ ಅಂತೆಯೆ ಅದೊಂದು ಅಸ್ತ್ರವು ಹೌದು ಎನ್ನಬಹುದು. ಮದುವೆಯ ಭಾಗವಾದ ಹೆಣ್ಣಿಳಿಸುವ ಕಾರ್ಯಕ್ರಮದಲ್ಲಿ ಅಳದ ಹೆಣ್ಣು ಸಿಗುವುದು ಬಲು ಅಪರೂಪ.ತನ್ನ ಮನೆಯನ್ನು ತೊರೆದು ಪತಿಯ ಮನೆಗೆ ಹೋಗುವಾಗ ಅವಳೊಂದಿಗೆ ತವರಿನವರೆಲ್ಲರು ಅಳುತ್ತಾರೆ. ಅಳುವಿನ ಪ್ರಭಾವದಿಂದ ಅದೆಷ್ತೋ ಅನಾಹುತಗಳು ನಡೆದಿರಬಹುದು, ಅಂತೆಯೆ ಅಳು ಹಲವಾರು  ಮನಸ್ಸುಗಳನ್ನು ಕೂಡಿಸಿರಬಹುದು. ರಾಮಾಯಣದಲ್ಲಿ ಲಕ್ಷ್ಮಣನು ಶೂರ್ಪನಖಿಯ ನಾಸ್ಸಛೇಧ ಮಾಡಿದ್ದರಿಂದ ಆಕೆ ವಿಪರೀತ ರೋಧಿಸುತ್ತಾ ಅಣ್ಣ ರಾವಣನಲ್ಲಿ ವಿಷಯವನ್ನು ಅರಹುತ್ತಾಳೆ. ರಾವಣನು ಆಕೆಯ ಅಳುವನ್ನು ನೋಡಿಯೆ ಸೀತಾಪಹರಣ ಮಾಡಿದ್ದರಿಂದ ಅದು ಸಂಪೂರ್ಣ ರಾಮಾಯಣಕ್ಕೆ ಅಡಿಗಲ್ಲಾಯ್ತು.

ನವರಸಗಳಲ್ಲಿ ಒಂದಾದ ಅಳುವಿಗೆ ನಿಮಿತ್ತವಾದ ಒಂದು ನಿರ್ದಿಷ್ಟ ರೂಪುರೇಷೆಯಿದೆ ಮತ್ತು ಇದು ಸ್ವಾಭಾವಿಕವು ಹೌದು. ಮಗು ಜನಿಸಿದ ತಕ್ಷಣ ಅಳುತ್ತದೆಯೆ ಹೊರತು ನಗುವುದಿಲ್ಲ. ಮನಸ್ಸಿಗೆ ಮತ್ತು ದೇಹಕ್ಕೆ ನೋವಾದಾಗ ಮನುಷ್ಯ ಅಳುತ್ತಾನೆ. ಅನಾಹುತಗಳು ಸಂಭವಿಸಿದಾಗ ಅಳುತ್ತಾರೆ. ಮನುಷ್ಯ ಸಾಯುವಾಗ ಇತರರು ಅಳುವುದು ಸರ್ವೆಸಾಮಾನ್ಯ.ಆದರೆ ನಗುವಿಗೆ  ಹೀಗೆ ನಿರ್ಧಿಷ್ಟ ಕಾರಣಗಳು ಇಲ್ಲ. ಯಾವಾಗ ಯಾವ ಸಂಧರ್ಭದಲ್ಲು ನಗಬಹುದು. ಪ್ರಸ್ತುತ ಜೀವನಕ್ರಮ ಹೇಗಿದೆಯೆಂದರೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಲಾಫಿಂಗ್ ಕ್ಲಬ್ಗಳನ್ನು ಆಯೋಜಿಸಿ ಜನರನ್ನು ನಗಿಸುತ್ತಾರೆ. ಆದರೆ ಅಳುವಿಗೆ ಇಂತಹ ದುರಾದ್ರಷ್ಟ ಬರಲು ಖಂಡಿತಾ ಸಾಧ್ಯವಿಲ್ಲ. ಆರೋಗ್ಯದ ದೃಷ್ತಿಯಿಂದ ನಗು ಅಳುವಿಗಿಂತ ಉತ್ತಮವಾದ್ದರಿಂದ ಜನರು ಅನಿವಾರ್ಯವಾಗಿ ದುಡ್ಡು ಕೊಟ್ಟು ನಗುತ್ತಾರೆ. ನಾವು ಮನುಷ್ಯರು ಸಂತೋಷದ ಕಣ್ಣೀರು ಎಂಬ ಇನ್ನೊಂದು ವಿಚಾರವನ್ನು ತೀವ್ರವಾಗಿ ಅನುಭವಿಸುತ್ತೇವೆ. ಅತೀ ದು:ಖದಂತೆ, ಅತೀವ ಸಂತೋಷವಾದರು ಬರುವ ಈ ಕಣ್ಣೀರು ಅಧ್ಬುತವೆ ಸರಿ! ಇದರ ಹೊರತಾಗಿ ಈರುಳ್ಳಿಯ ಖಾರಕ್ಕೆ, ಕಣ್ಣಿಗೆ ಕಸ ಬಿದ್ದರೆ ಬರುವ ಕಣ್ಣೀರಿಗೆ ಅದರದೆ ಆದ ವೈಜ್ಞಾನಿಕ ಕಾರಣಗಳಿವೆ. 

ಜೀವಶಾಸ್ತ್ರದ ಪ್ರಕಾರ ಅಳುವ ಜೀವಿಯೆಂದರೆ ಮನುಷ್ಯ ಮಾತ್ರ. ಆದರೆ ಗೊರಿಲ್ಲಾ ಮತ್ತು ಆನೆಗಳು ಸೇರಿದಂತೆ ಇನ್ನು ಹಲವಾರು ಪ್ರಾಣಿಗಳು ಕಣ್ಣೀರು ಸುರಿಸುತ್ತವೆ ಎಂದು ಕೆಲವು ಮೂಲದಿಂದ ತಿಳಿದ್ದಿದ್ದರು ಅದು ಮನಸ್ಸಿನ ಭಾವನೆಗಳಿಂದ ಹೊರಹೊಮ್ಮುವ ಕಣ್ಣೀರು ಎಂದು ಖಚಿತವಾಗಿ ಹೇಳಲಾಗದು. ಆದರು ಹಿರಿಯರ ಬಾಯಿಮಾತಿನ ಪ್ರಕಾರ ಪ್ರಾಣಿಗಳು ದು;ಖವಾದಾಗ ಅಳುತ್ತವೆ. ಅವುಗಳು ಬೇಸರವನ್ನು ತೀವ್ರವಾಗಿ ಅನುಭವಿಸುತ್ತವೆ. ಆದರೆ ವ್ಯಕ್ತಪಡಿಸುವ ರೀತಿಯಲ್ಲಿ ಮನುಷ್ಯರಿಗಿಂತ ಭಿನ್ನವಾಗಿರುತ್ತದೆ. ಕೆಲವು ಪ್ರಾಣಿಗಳು ಅರಚುವ ಮೂಲಕವು ತನ್ನ ಅಳುವನ್ನು ವ್ಯಕ್ತಪಡಿಸುತ್ತವೆ ಎನ್ನಬಹುದು. ನಮ್ಮ ಮನೆಯ ಸಾಕು ನಾಯಿ ಸುಬ್ಬಿ ನಾಲ್ಕು ಮರಿಗಳನ್ನು ಹೆತ್ತ ನಂತರದ ನಾಲ್ಕು ದಿನಗಳಲ್ಲಿ ಆಚಾನಕ್ಕಾಗಿ ಆ ಮರಿಗಳು ಸತ್ತು ಹೋದವು. ಆ ತಾಯಿ ನಾಯಿ ಏನೊಂದು ಬೊಬ್ಬೆ ಮಾಡದೆ ಮನೆಯ ಹೊರಗೆ ಮೂಲೆ ಮೂಲೆಗಳಲ್ಲಿ ಆತುಕೊಳ್ಳುತ್ತಿತ್ತು. ಅದು ಅಳುತ್ತಿದೆ ಬಂದು ನೋಡೆಂದು ನನ್ನ ಪತಿ ನನ್ನನ್ನು ಕರೆದುಕೊಂಡು ಹೋಗಿ ತೋರಿಸಿದರು. ಅದರ ಕಣ್ಣ ತುಂಬ ತುಳುಕಿಕೊಂಡು ನೀರಿದ್ದಂತು ನಿಜ.

ಅಳುವುದು ದುರ್ಬಲ ಮನಸ್ಸಿನ ಪ್ರತೀಕ ಎಂಬುದು ಮನಶಾಸ್ತ್ರಜ್ಞರ ಅಭಿಮತ. ದುರ್ಬಲ ಮನಸ್ಸಿನವರ ಪಂಗಡವನ್ನು ಪಕ್ಕಕ್ಕಿಟ್ಟರು ಅಳು ಎಲ್ಲ ವರ್ಗದ್ದ ಜನರ ಜೀವನದಲ್ಲು ವ್ಯಾಪಿಸಿ ಹಾಸುಹೊಕ್ಕಾಗಿದೆ. ಅಳುವುದು ಅವಮಾನಕರ ಎಂದು ಭಾವಿಸಿ ಖಾಸಗಿಯಾಗಿ ಅಳುವವರು ಹೆಚ್ಚಿನವರಾಗಿರುತ್ತಾರೆ. ಕೆಲವು ಸಂಧರ್ಭದಲ್ಲಿ  ಯಾರಿಗು ಕಾಣದಂತೆ ಅಳುವುದು ಉತ್ತಮ ಲಕ್ಷಣ. ಅಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ಭಾವನೆಗಳಲ್ಲೊಂದು. ಅಳುವಿಗು ಒಂದು ನಾದವಿದೆ, ಗೌರವವಿದೆ. ಅಳುವನ್ನು ಎಂದಿಗು ದೂಷಿಸಲು ಸಾಧ್ಯವಿಲ್ಲ. ಒಂದು ಹನಿ ಕಣ್ಣೀರನ್ನು ಹಾಕದೆ ಯಾರು ತಮ್ಮ ಜೀವನವನ್ನು ದಾಟಿ ದಡ ಸೇರಲು ಸಾಧ್ಯವಿಲ್ಲ. ಅಳುವಿನ ಲೀಲೆಯೆ ಅಭಿನಂದನಾರ್ಹ. ನಗುವಿಗೆ ಹಾಸ್ಯವೊಂದೆ ಕಾರಣವಾದರು, ಅಳುವಿಗೆ ನಾನಾ ಕಾರಣಗಳು. ನಾನಾ ಕಾರಣಗಳ ನಡುವಿನ ಅಳುವಿನ ಕಾರ್ಯಕಾರಣ ನಮ್ಮ ಬಾಳಿನ ಅಂತರ್ಯವು ಹೌದು. ಬುದ್ಧಿ ಭಾವದ ನೀತಿ-ಅನೀತಿಗೆ ಅಳುವು ಸಂಭ್ರಮ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Soory Hardalli
Soory Hardalli
10 years ago

Good article. But few language correction. Anyhow, thank you.

ವಿನೋದ್ ಕುಮಾರ್ ವಿ.ಕೆ.

ಇದೇ ಮೊದಲು ಅಳುವಿನ ಬಗ್ಗೆ ಒಂದು ಲೇಖನ ಓದಿದ್ದು ನಾನು!! ಹಾಸ್ಯದ ಬಗ್ಗೆ ನಗುವಿನ ಬಗ್ಗೆ ಬೇಕಾದಷ್ಟು ಬರ್ದಿದ್ದಾರೆ ಜನರು.. ನಿಜ ಅಳು ಜೀವನದ ಅತ್ಯಂತ ಆಪ್ತ ಸ್ನೇಹಿತ.. ಕೆಲವೊಮ್ಮೆ ಅಳುವಿನಷ್ಟು ಆಪ್ತ ಬೇರೆ ಇರಲ್ಲ.. ಅತ್ತ ಮೇಲೆ ಮನಸಿಗಾಗುವ ಹಗುರ ಭಾವನೆ ಅಥವಾ ಸಮಧಾನ.. ದುಖದಿಂದ ಅತ್ತವನಿಗೇ ಗೊತ್ತು ಅಲ್ಲವೇ?..

 

Akhilesh Chipli
Akhilesh Chipli
10 years ago

ಅಳುವೇ ಜೀವನ ಸಾಕ್ಷಾತ್ಕಾರ. ಬರಹ ಚೆನ್ನಾಗಿದೆ ಸಂಗೀತಾಜೀ.

3
0
Would love your thoughts, please comment.x
()
x