ಅಳಿವಿನ ಅಂಚಿನಲ್ಲಿ ಮಾನವ ಕುಲ…? !: ಶಶಿಧರ ರುಳಿ

ರಸ್ತೆಯಲ್ಲಿ ಹೋಗುವಾಗ ಗಿಡದಲ್ಲಿಯ ಹೂವೊಂದು ಕಮರಿ ಹೋಗಿದ್ದು ಕಂಡಿತು. ಮುದುಡಿದ ಆ ತಾವರೆ ಕದಡಿದ ನನ್ನ ಮನಸ್ಸಿಗೆ ಸಾಕ್ಷಿಯಾಗಿ ನಿಂತಂತೆ ತೋರುತ್ತಿತ್ತು. ರಣ ಬಿಸಿಲಿನ ಹೊಡೆತಕ್ಕೆ ಬಾಡಿಹೋದ ಅದರ ಸುಂದರ ಪಕಳೆಗಳು ಯಾವುದೋ ಒಂದು ಕಾಲದಲ್ಲಿ ವೈಭವೋಪಿತ ಕಟ್ಟಡವಾಗಿದ್ದು ಈಗ ಬಿದ್ದುಹೋದ ಗೋಡೆಗಳು ಅದರ ಪಳಿಯುಳಕೆಯಂತೆ ಕಂಡವು. ಬೆಳಗಿನ ಜಾವ ಅರಳಿ ಸಂಜೆಯಾಗುತ್ತಿದ್ದಂತೆ ನಿಸ್ತೇಜವಾದ ಹೂವಿನ ಸುಂದರ ತನು, ಜೀವನದ ಕ್ಷಣಿಕತೆಯ ನೀತಿ ಹೇಳುತ್ತಿರುವಂತೆ ಅನಿಸಿತು. ಈ ಮೂಲಕ ಬದುಕಿನ ಪಯಣ ರಭಸದ ಯಾತ್ರೆ ಎಂಬ ಸತ್ಯವನ್ನು ತಿಳಿ ಹೇಳುತ್ತಿರುವಂತೆ ತೋರಹತ್ತಿತು. ಬಾಲ್ಯ, ಯೌವನ ಮತ್ತು ಮುಪ್ಪು ಬದುಕಿನ ಮೂರು ಹಂತಗಳನ್ನು ನಮಗರಿವಿಲ್ಲದೇ ನಾವು ಕ್ರಮಿಸಿ ಬಂದು ಸಂಧ್ಯಾಕಾಲದಲ್ಲಿ ನಿಂತಾಗಲೇ ಜೀವನವೆಷ್ಟು ಕ್ಷಣಿಕ ಎಂಬ ಈ ಸತ್ಯೆದ ಅರಿವಾಗುವದು. ಅಲ್ಲದೇ ಜೀವನದ ಕ್ಷಣಿಕತೆಯ ಪರಿಚಯವಾಗುವದು ಬದುಕಿನಲ್ಲಿ ಅನಿರೀಕ್ಷಿತವಾಗಿ ದುರ್ಘಟನೆಗಳು ಸಂಭವಿಸಿದಾಗಲೇ. ಅಲ್ಲಿಯವರೆಗೂ ನಾವು ಈ ಭೂಮಿಯ ಮೇಲೆ ಎಂದೆಂದಿಗೂ ಶಾಶ್ವತ ಎಂಬ ಪರಿಕಲ್ಪನೆಯಲ್ಲೇ ಜೀವಿಸಿರುತ್ತೇವೆ. ನಿಸರ್ಗ ನಮಗೆ ಯಾವಾಗಲೂ ಪಾಠಗಳನ್ನು ಹೇಳಿಕೊಡುತ್ತಲೇ ಇರುತ್ತವೆಯಾದರೂ ಮನುಷ್ಯ ತಾನೇ ಬುದ್ಧಿವಂತ ಎಂಬ ತಪ್ಪು ತಿಳುವಳಿಕೆಯಲ್ಲಿ ಪ್ರಕೃತಿಯನ್ನು ನಿರ್ಲಕ್ಷಿಸುತ್ತಲೇ ಬಂದಿದ್ದಾನೆ. ಮಾನವ ಸಹಜವಾಗಿ ಬದುಕಲು ಏನು ಬೇಕೋ ನಿಸರ್ಗವು ಅದೆಲ್ಲವನ್ನೂ ಅವನಿಗೆ ದಯಪಾಲಿಸಿದೆ. ಆದರೂ, ಮನುಷ್ಯನ ದುರಾಸೆ, ಪ್ರಕೃತಿಯ ವಿರುದ್ಧ ಹೋಗುವ ಲಾಲಸೆ, ಭೂಮಿಯ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿ ಇತರೇ ಜೀವ ಸಂಕುಲಗಳನ್ನು ಕಡೆಗಣಿಸಿ ತಾನು ಮೆರೆಯುವ ಯತ್ನಗಳನ್ನು ಸದಾ ಮಾಡುತ್ತಲೇ ಬಂದಿದ್ದಾನೆ. ಇವೆಲ್ಲವೂ ಭೂತಾಯಿಗೆ ಸಹಿಸಲಾಗದಷ್ಟು ನೋವನ್ನು ಕೊಡುತ್ತವೆ ಎಂಬ ಸೂಕ್ಷ್ಮ ಅವನಿಗೆ ಅರಿವಾಗುವದೇ ಇಲ್ಲ. ಮಾನವನನ್ನು ಹೊರತುಪಡಿಸಿ ಈ ಪ್ರಪಂಚದಲ್ಲಿರುವ ಕೋಟ್ಯಾನುಕೋಟಿ ಜೀವರಾಶಿಗಳು ಒಂದು ಕ್ಷಣಕ್ಕಾದರೂ ನಿಸರ್ಗದ ಕಟ್ಟುಪಾಡುಗಳನ್ನು ಬಿಟ್ಟು ಬದುಕುವದಿಲ್ಲ. ಆದರೆ, ಮಾನವ ಮಾತ್ರ ಇದಕ್ಕೆ ವಿಪರೀತ….!

ಮನುಷ್ಯನ ಉಗಮ ಈ ಪೃಥ್ವಿಯ ಮೇಲೆ ಆದಾಗಿನಿಂದಲೂ ಪ್ರಕೃತಿಯ ಮೇಲೆ ನಿರಂತರವಾಗಿ ಪ್ರಹಾರ ಮಾಡುತ್ತಲೇ ಬಂದಿದ್ದಾನೆ. ನಿಸರ್ಗದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅನೇಕಾನೇಕ ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಈ ರೀತಿ ಮನುಷ್ಯ ಯಾವಾಗಲೂ ಮತಿಭ್ರಮಣೆಯಾದವನಂತೆ ವರ್ತಿಸುತ್ತಲೇ ಬಂದಿದ್ದಾನೆ. ಮನುಷ್ಯನನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಕೃತಿಯು ಭೂಕಂಪ, ಸುನಾಮಿ, ಅಕಾಲ, ಕ್ಷಾಮ, ಅತೀವೃಷ್ಟಿ, ಅನಾವೃಷ್ಟಿ, ರೋಗ-ರುಜಿನ ಮುಂತಾದ ಅನೇಕ ವಿಧಾನಗಳಿಂದ ತಿಳಿಹೇಳುವ ಪ್ರಯತ್ನ ಮಾಡುತ್ತಲೇ ಬಂದಿದೆ. ಮಾನವ ಮಾಡಿದ ಮತ್ತೂ ಇನ್ನೂ ಮಾಡುತ್ತಿರುವ ತಪ್ಪುಗಳಿಂದ ಇತರೇ ಜೀವಿಗಳು ಪರದಾಡುವಂತಾಗಿದೆ. ಎಷ್ಟೋ ಪ್ರಾಣಿ-ಪಕ್ಷಿಗಳ ಸಂಕುಲಗಳೇ ನಾಶವಾಗಿ ಹೋಗಿವೆ. ಎಷ್ಟೋ ಜಲಚರಗಳನ್ನು ವಿನಾಶದ ಅಂಚಿಗೆ ತಳ್ಳಿದ್ದಾನೆ. ಮಾನವ ದಾನವನಾಗಿ ಮೆರೆಯುತ್ತಿರುವ ಇಂದಿನ ದಿನಗಳಲ್ಲಿ ಯುದ್ಧಪಿಪಾಸುವಾಗಿದ್ದಾನೆ. ಮನುಷ್ಯ, ಮನುಷ್ಯನ ರಕ್ತವನ್ನೇ ಕುಡಿಯುವಷ್ಟು ರಕ್ಕಸನಾಗಿದ್ದಾನೆ. ಕಾಲನ ಪರಿವೆಯಿಲ್ಲದೇ ತಾನು ಚಿರಂಜೀವಿ ಎಂಬ ಭ್ರಮೆಯಲ್ಲಿ ತನ್ನ ಅಟ್ಟಹಾಸವ ಮೆರೆಯುತ್ತಾ ಸೃಷ್ಟಿಯ ಅಸಮತೋಲನಕ್ಕೆ ಕಾರಣವಾಗಿ ನಿಂತಿದ್ದಾನೆ. ಆದರೆ, ಮಾನವನಿಂದು ಮರೆತಿದ್ದಾನೆ ತಾನು ದೇವನಿಂದ ವರಪಡೆದ ಮೇಲೆ ಭಸ್ಮಾಸುರನಂತೆ ವರ್ತಿಸುತ್ತಿದ್ದಾನೆಂದು. ಎಷ್ಟೋ ಕೃತಕ ಜೀವಿಗಳನ್ನು, ಜೈವಿಕ ಅಸ್ತ್ರಗಳನ್ನು ಹುಟ್ಟುಹಾಕಿ ಆ ಭಗವಂತ ದಯಪಾಲಿಸಿದ ಬುದ್ಧಿಶಕ್ತಿಯನ್ನು ತಪ್ಪು ಕಾರಣಿಗಳಿಗಾಗಿ ಬಳಸಿ ಸ್ವತಃ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಇಂದು ಕೊರೋನಾ ವೈರಾಣುವಿನಿಂದ ಉದ್ಭವವಾಗಿರುವ ಭಯಂಕರ ಪರಿಸ್ಥಿತಿಯು ಮಾನವನ ಕುಕೃತ್ಯಕ್ಕೆ ಜ್ವಲಂತ ಸಾಕ್ಷಿಯಾಗಿ ಬೆಳೆಯುತ್ತಲೇ ಇದೆ. ತನ್ನ ಕದಂಬ ಬಾಹುಗಳನ್ನು ಜಗತ್ತಿನಾದ್ಯಂತ ಪಸರಿಸುತ್ತಾ ಹೆಮ್ಮಾರಿಯಾಗಿ ವೃದ್ಧಿಸುತ್ತಾ ಮುನ್ನಡೆದಿದೆ. ಮಾನವನ ಬದುಕಿನ ರಸ್ತೆಗಳನ್ನು ಅಡ್ಡಗಟ್ಟಿ ನಿಂತಿದೆ ಕೊರೋನಾ ಇಂದು ..! ತನ್ನ ರಕ್ಕಸ ಬಾಹುಗಳನ್ನು ಬೃಹದಾಕಾರವಾಗಿ ಚಾಚಿ ಎಷ್ಟು ಜೀವಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವದೋ ಅರಿಯದಾಗಿದೆ ನಮಗೆ. ಮನುಷ್ಯ ತೃಣ ಸಮಾನವಾಗಿ ಕಾಣುತ್ತಿದ್ದಾನೆ, ಅಸಾಹಾಯಕನಾಗಿ ಕಾಲನಲ್ಲಿ ಲೀನನಾಗುತ್ತಿದ್ದಾನೆ. ಇಷ್ಟು ದಿನ ಮಾನವ ದಾನವನಾಗಿ ಮೆರೆದ ಕಾರಣ ಇಂದು ಈ ಜಗತ್ತಿನಲ್ಲಿ ತನ್ನ ಅಸ್ತಿತ್ವಕ್ಕೇ ಕುಂದು ತಂದುಕೊಂಡಿದ್ದಾನೆ. ಉರಿಯುವ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿ ಎಲ್ಲವನ್ನೂ ಭಸ್ಮ ಮಾಡುತ್ತಿದೆ. ಸುಟ್ಟು ಬೂದಿಯಾಗುತ್ತಿರುವ ಮನುಷ್ಯನಿಗೆ ಬೆಂಕಿಯನ್ನು ನಂದಿಸುವ ಬಗೆ ತಿಳಿಯುತ್ತಿಲ್ಲ. ಅದಕ್ಕೆ ಬೇಕಾಗುವ ಸಾಧನ ಪರಿಕರಗಳು ಅವನ ಹತ್ತಿರವಿಲ್ಲ. ಪ್ರಕೃತಿ ತಾನೇ ಪ್ರೀತಿಯಿಂದ ತಯಾರಿಸಿದ ಅದ್ಭುತ ಜೀವಿಯಾದ ಮಾನವ ಅವನ ಸ್ವಯಂ ವಿಕೃತಿಯಿಂದ ಪ್ರಕೃತಿಗೇ ಬೇಡವಾಗಿದ್ದಾನೆ. ಉಂಡ ಮನೆಗೆ ಎರಡು ಬಗೆಯುವದು ಎಂದರೆ ಇದೇನೆ. ಸ್ವಯಂಕೃತ ಅಪರಾಧಗಳು ಇಡೀ ಮಾನವ ಕುಲವನ್ನೇ ಅಳಿವಿನ ಅಂಚಿಗೆ ತಂದು ನಿಲ್ಲಿಸಿವೆ ಇಂದು. ಒಂದು ವೇಳೆ ಈ ಮಹಾಮಾರಿಯನ್ನು ಗೆದ್ದು ನಾವೇನಾದರು ಬದುಕಿ ಉಳಿದಲ್ಲಿ ಜೀವನ ಮೊದಲಿನಂತೆ ಇರುವದಿಲ್ಲವೆನ್ನುವದು ಮಾತ್ರ ನಿತ್ಯ ಉದಯಿಸುವ ಸೂರ್ಯನಷ್ಟೇ ಸತ್ಯೆ.! ಸೃಷ್ಟಿಕರ್ತ ದಯಪಾಲಿಸಿದ ಸುಂದರ ಜೀವನವನ್ನು ಮನಸ್ಸಿಗೆ ಬಂದಂತೆ ಹಾಳುಗೆಡವಿ ಪ್ರಕೃತಿಯ ಕೋಪಕ್ಕೆ ಕಾರಣವಾಗಿ, ಅಪರಾಧಿಯಾಗಿ ಕಟಕಟೆಯಲ್ಲಿ ನಿಂತಿದ್ದಾನೆ ಮನುಷ್ಯನಿಂದು. ಅಳಿವಿನ ಅಂಚಿನ ಬಾಗಿಲಲ್ಲಿ ಬಂದು ನಿಂತಿರುವ ಮಾನವ ಕುಲ, ಇಂದಿನ ವಿಷಮ ಪರಿಸ್ಥಿತಿಯಿಂದ ಹೊರಬರಬೇಕೆಂದರೆ ಆ ಸೃಷ್ಟಿಕರ್ತನೇ ದಯ ತೋರಬೇಕು.ಹಾಗೇನಾದರೂ ಆದಲ್ಲಿ ಮಾತ್ರ ಬದುಕಲು ಅವಕಾಶ ಸಿಗಬಹುದು… ಮತ್ತೊಂದು ಬಾರಿ. ಇಲ್ಲವಾದಲ್ಲಿ ಮಾನವ ಕುಲದ ಅಳಿವಿಗೆ ಮನುಷ್ಯ ತಾನೇ ಮುನ್ನುಡಿ ಬರೆದಂತೆಯೇ ಸರಿ …….!

ಶಶಿಧರ ರುಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x