“ಅಂಜು, ಅಂಜು” ಎಂದು ಹೊರಗಡೆಯಿಂದ ಬಂದ ಕೂಗಿಗೆ, “ಅಮ್ಮಾ ಸಂತು ಬಂದ ನಾನ್ ಶಾಲೆಗೆ ಹೊರಟೆ ಬಾಯ್” ಎಂದು ಒಳಗಿನಿಂದ ತುಂಟ ಹುಡುಗಿ ಓಡಿ ಬಂದಳು. ತಿಂಡಿ ತಿಂದು ಹೋಗು ಎಂದು ಕೂಗಿದ ಅಮ್ಮನ ದನಿ ಕಿವಿಯ ಮೇಲೆ ಬೀಳಲೇ ಇಲ್ಲ. “ಇವತ್ತು ತಿಂಡಿ ತಿನ್ನದೆ ಬಂದ್ಯ ? ನನ್ನ ಬೈಸೋಕೆ ಹೀಗೆ ಮಾಡ್ತೀಯ” ಎಂದು ದಿನದ ಮಾತು ಆರಂಭಿಸಿದ ಸಂತು. ಯಥಾಪ್ರಕಾರ ಇದಕ್ಕೆ ಕಿವಿಕೊಡದ ಪೋರಿ “ಫಸ್ಟ್ ಪೀರಿಯಡ್ ಗಣಿತ ಇದೆ ಹೋಮ್ ವರ್ಕ್ ಮಾಡಿದ್ಯ” ಎಂದಳು.
ಜೊತೆಯಾಗಿ ಇದ್ದಷ್ಟು ಹೊತ್ತು ಬಿಟ್ಟುಬಿಡದಂತೆ ಮಾತನಾಡುತ್ತಿದ್ದ ಎರಡು ಬಾಯಿಗಳು ಮೂರನೆಯವರೆದುರು ತುಟಕ್ ಪಿಟಕ್ ಅಂತಿರಲಿಲ್ಲ.
ಓದಿನಲ್ಲಿ ಮುಂದಿದ್ದ ಅಂಜು ಎಲ್ಲರ ಅಚ್ಚುಮೆಚ್ಚು ಆದರೆ ತನಗೆ ಬೇಕಿರುವ ಮಾತು ಮಾತ್ರ ಅವಳ ಕಿವಿಯ ಮೇಲೆ ಹಾಗೆ ಬಾಯಲ್ಲಿ ಕೂಡ.
ಓದಿನಲ್ಲಿ ಮುಂದೆ ಆದರೆ ಅಂಜುವಿನಷ್ಟಲ್ಲ ಪುಟಾಣಿ ಸಂತು.
ಆದರೆ ಇಬ್ಬರು ನೆರೆಮನೆಯವರು ಸಣ್ಣ ಮಗುವಾಗಿದ್ದಾಗಿಂದ ಒಟ್ಟಿಗೆ ಒಡನಾಟ. ಒಂದೆ ಶಾಲೆ, ಒಂದೆ ತರಗತಿ ಹಾಗಾಗಿ ಮಕ್ಕಳಿಬ್ಬರು ಆಟ, ಪಾಠ ಎಲ್ಲದರಲ್ಲು ಜೊತೆ.
ಹೀಗಿರುವಾಗ ಹೈ ಸ್ಕೂಲ್ ಮೆಟ್ಟಿಲೇರಲು, ಸಂತುವಿನ ಭವಿಷ್ಯದ ಒಳಿತಿಗಾಗಿ ಅವನ ತಂದೆ ಮನೆಪಾಠಕ್ಕೆ ಸೇರಿಸಿದರು. ಅಂಜು ಸೇರಲಿಲ್ಲ, ಅಮ್ಮನ ಮಾತಿನಂತೆ ಆಡಲು ಹೊರಗಡೆ ಹೋಗುವುದನ್ನು ಬಿಟ್ಟಳು.
“ಆಂಟಿ ಸಂತು ಬಂದ, ಕ್ರಿಕೆಟ್ ಬ್ಯಾಟ್ ಹಿಡಿದು ಬಂದ” ಎಂದು ತನ್ನ ಅಮ್ಮನಿಗೆ ಹೇಳುತಿದ್ದ ಅಂಜುವನ್ನು ನೋಡಿ “ಹೋಗೆ ಫಿಟ್ಟಿಂಗ್ ರಾಣಿ” ಎಂದು ಗೊಣಗುತ್ತ ಒಳ ಬಂದ ಸಂತು, ಹೋಗು ಹೋಗು ಇವತ್ತು ಹಬ್ಬ ನಿನಗೆ ಎಂದು ಗೊಣಗುತ್ತ ಸಂತುವಿನ ಮನೆಯಿಂದ ಆಚೆ ನೆಡೆದಳು ಅಂಜು. ನೋಡಿ ಕಲಿ ಆ ಹುಡುಗೀನ ಸ್ವಲ್ಪಾನು ಸಮಯ ವ್ಯರ್ಥ ಮಾಡಲ್ಲ. ೧೦ನೇ ತರಗತಿ ಎಷ್ಟು ಸಿರಿಯಸ್ ಆಗಿ ಓದ್ಕೋತಾಳೆ. ನೀನು ಇದೀಯ ಆಕಡೆ ಟ್ಯೂಷನ್ ಫಿ ಕೂಡ ದಂಡ ಕ್ರಿಕೆಟ್ ಆಡೋಕೆ ಹೋಗ್ತೀಯ ಓದೀದುಬಿಟ್ಟು. ಇದು ಸಂತು ಮನೆಯಲ್ಲಿನ ನಿತ್ಯದ ಡ್ರಮಾ.
ಮತ್ತೆ ಸಿಕ್ಕಾಗ ಸಂತು ಅಂಡ್ ಅಂಜು, ನಿನಗೆ ಮಾಡೋಕೆ ಕೆಲಸ ಇಲ್ಲ ಯಾವಾಗ್ಲು ಬುಕ್ ಮುಂದೇನೆ ಇರ್ತೀಯ ಕುಡುಮಿ. ನಾನು ನಿನ್ನ ಹಾಗೆ ಮನೆಲೆ ಇರೋಕಾಗಲ್ಲ ಫಿಟ್ಟಿಂಗ್ ಇಡ್ಬೇಡ ಎಂದನು ಸಂತು ತುಸು ಕೋಪದಲ್ಲಿ. ನನ್ನು ಜೊತೆ ಕರ್ಕೋಂಡು ಹೋಗು ಎಂದಳು ಅಂಜು ನಗುತ್ತ. ಎಲ್ಲಿಗೆ, ಕ್ರಿಕೆಟ್ ಆಡ್ತೀಯ ನೀನು ಎಂದು ಆಶ್ಚರ್ಯದಿಂದ ಸಂತು ಅವಳನ್ನೆ ನೋಡಿದನು. ಛೆ ಛೆ ಆಡಕ್ಕಲ್ಲ ಬಾ ಐಸ್ ಕ್ರೀಂ ತಿನ್ನೋಕೆ ಹೋಗೋಣ ಎಂದಳು. ಅಬ್ಬ ಸದ್ಯ ನೀನು ಗ್ರೌಂಡ್ಗೆ ಬಂದ್ರೆ ಆಟ ಹೇಗಪ್ಪ ಅನ್ಕೋತಿದ್ದೆ. ಹೋಗೋ ಕೋತಿ ಎಂದು ಮತ್ತದೆ ತರ್ಲೆ ತಮಾಷೆ ತುಂಟಾಟದ ಕ್ಷಣಗಳು.
ಈ ಮುನಿಸು, ಜಗಳ, ಓದು ಇದರ ನಡುವೆ ಇಬ್ಬರು ಬೇಗ ೧೦ನೇ ತರಗತಿ ಮುಗಿದರೆ ಕಾಲೇಜ್ ಹೋಗಬಹುದು, ಮನೆಪಾಠ ಇರುವುದಿಲ್ಲ ಓದುವುದು ಕಡಿಮೆ ಎಂದು ಮಾತನಾಡುತ್ತ ಸಮಾಧಾನಪಡುತಿದ್ದರು.
ಆ ದಿನವು ಬಂತು ಊಹಿಸಿದಂತೆ ಇಬ್ಬರು ತೇರ್ಗಡೆಯಾದರು. ಆದರೆ ಅಂಜು ಅಂಕಗಳು ಸಂತುಗಿಂತ ಜಾಸ್ತಿ ಇತ್ತು ಹಾಗಾಗಿ ಅವನದು ಕೊಂಚ ದೂರದ ಕಾಲೇಜು.
ಆದರೆ ಅದು ಅವರ ಸ್ನೇಹಕ್ಕೆ ಅಂತರ ತರಲಿಲ್ಲ. ಇಬ್ಬರು ಈಗಲು ಜೊತೆಯಲ್ಲೆ ಓಡಾಡುತಿದ್ದರು. ಇದನ್ನು ನೋಡಿದವರು ಇವರಿಬ್ಬರ ನಡುವೆ ಸ್ನೇಹಕ್ಕೆ ಮೀರಿದ ಅನ್ಯೋನತೆ ಎಂದು ಮಾತನಾಡಲು ಆರಂಭಿಸಿದರು ಅದು ಇಬ್ಬರ ತಂದೆ ತಾಯಿಯನ್ನು ತಲುಪಿತು. ಅಂಜು & ಸಂತು ಇದಕ್ಕೆ ಅಂಜಿದವರಲ್ಲ ಆದರೆ ಅಪ್ಪ, ಅಮ್ಮ ಹೇಗೆ ತೆಗೆದುಕೋಳ್ಳುತ್ತಾರೆ, ಏನು ಹೇಳಬಹುದೆಂದು ಯೋಚನೆ ಮಾಡುತ್ತ ಅವರೊಡನೆ ಮಾತಾಡಲು ನಿರ್ಧರಿಸಿದರು. ಅತ್ತ ಅಪ್ಪ ಅಮ್ಮ ಏನು ಕೇಳಿಸಿಲ್ಲವೆನ್ನುವಂತಿದ್ದರು ಮಕ್ಕಳ ಮೇಲಿನ ನಂಬಿಕೆ ಮುರಿಯದೆ. ಇದನ್ನು ನೋಡಿ ಅಶ್ಚರ್ಯವಾದರೂ ಇಬ್ಬರು ಮನೆಯಲ್ಲಿ ಇದಕ್ಕೆ ಸಮರ್ಥನೆ ಬೇಡ ಬದಲಿಗೆ ನಂಬಿಕೆ ಮುರಿಯಬಾರದೆಂದು ತಿಳಿದು ಮುಖ ನೋಡಿಕೊಂಡು ಮುಗುಳುನಕ್ಕರು.
ಅಂಜು ವೈದ್ಯಕೀಯ ತರಬೇತಿ ಆರಿಸಿಕೊಂಡರೆ ಸಂತು ತಾಂತ್ರಿಕ ತರಬೇತಿ ಆರಿಸಿಕೊಂಡನು. ಆದರೇನಾಯಿತು ಐಸ್ ಕ್ರೀಂ ತಿನ್ನಲು, ಪುಸ್ತಕ ಖರೀದಿಸಲು, ಕಿತ್ತಾಡಲು, ಓಲೈಸಲು, ಚಾಡಿ ಹೇಳಲು ಇಬ್ಬರು ತುಂಬಾ ಪುರುಸೊತ್ತಾಗಿ ಇರುತ್ತಿದ್ದರು.
ಸ್ವಲ್ಪ ದಿನದಿಂದ ಸಂತು ಕ್ರಿಕೆಟ್ ಆಡೋಕೆ ಹೋಗೋದು ಕಮ್ಮಿಯಾಗಿದೆ, ಸ್ಪೆಷಲ್ ಕ್ಲಾಸ್ ಜಾಸ್ತಿಯಾಗಿದೆ, ಮಾತು ಕಮ್ಮಿ ಮಾಡಿದ್ದಾನೆ ಎಂದೆನಿಸಿ ಡಿಟೆಕ್ಟಿವ್ ಅಂಜು ಜಾಗ್ರತಳಾದಳು. ಸಂತು ಕಾಲೇಜಿಗೆ ಬೇಟಿ ಇತ್ತಳು. ಸಂತು ಖುಷಿಯಿಂದ ಏನಿವತ್ತು ಇತ್ತಕಡೆ ಪಯಣ ಎಂದನು. ನಿನಗೆ ಇತ್ತೀಚೆಗೆ ಹುಶಾರಿಲ್ಲ ಹೋಗಿ ನೋಡಿಕೊಂಡು ಬಾ ಅಂದ್ರು ನಿಮ್ಮಮ್ಮ ಅದಕ್ಕೆ ಬಂದೆ ಎಂದಳು.
ನಗುತ್ತ ಬರೋದು ಬಂದಿದ್ಯ ಒಂದು ಸಹಾಯ ಮಾಡು ಎಂದು ಕೇಳಿದ. ಯಾರೋ ಅದು ಬೇಗ ಹೇಳು ಇವತ್ತೆ ಮನೆಗೆ ಕರೆದುಕೊಂಡು ಹೋಗೋಣ, ಅಂಕಲ್ ಆಂಟಿಗೇ ನಾನೇ ಹೇಳುತ್ತೇನೆ ಅಂತ ಕಣ್ಣುಗಳನ್ನು ಅರಳಿಸಿ ಕೇಳಿದಳು. ರೀ ಡಾಕ್ಟ್ರೆ ಸ್ವಲ್ಪ ಸಮಾಧಾನ ಇರಲಿ ಎಂದ ಸಂತು ಮುಗುಳು ನಕ್ಕನು. ಅಷ್ಟರಲ್ಲಿ ಅವನ ಜುನಿಯರ್ಸ ಕ್ಲಾಸ್ ಬಿಡ್ತು, ಸಂತು ಒಂದು ಹುಡುಗಿಯತ್ತ ಕೈ ಚಾಚಿ ಹೆಸರು ಹಂಸ, ಹೇಗಿದ್ದಾಳೆ ನನ್ನ ಹುಡುಗಿ ಎಂದ. ಅಂಜು ಏನೋ ಹೇಳುವಷ್ಟರಲ್ಲಿ ಇನ್ನು ಅವಳಿಗೆ ಗೊತಿಲ್ಲ ಏನೇನೋ ಮಾತಾಡಬೇಡ ಅವಳ ಮುಂದೆ ಎಂದ. ಹಂಸ ಹತ್ತರ ಬಂದಾಗ ಪರಿಚಯ ಮಾಡಿಕೊಟ್ಟ ಅವಳ ಮನೆ ನಮ್ಮ ಮನೆಯ ಹತ್ತಿರ ಎಂದು ಹೇಳಿದ, ಇಬ್ಬರು ಹುಡುಗಿಯರು ಮಾತನಾಡುತ್ತ ಇದ್ದರು. ಸಂತು ಮನೆಯತ್ತ ಹೊರಡೋಣ ಹಾಗೆ ಮಾತಾನಾಡುತ್ತ ನಡೀರಿ ಎಂದು ಹೆಜ್ಜೆ ಹಾಕಿದ, ಇವರಿಬ್ಬರು ಹಿಂಬಾಲಿಸಿದರು. ಸ್ವಲ್ಪ ದಿನ ಕಳೆದಂತೆ ಅಂಜುವಿನ ಸಹಾಯದಿಂದ ಸಂತು, ಹಂಸರ ಪ್ರೇಮ ಇಬ್ಬರಿಗು ತಿಳಿದು, ಇಬ್ಬರು ಒಪ್ಪಿದರು. ಸಂತು ಮೊದಲು ವ್ಯಾಸಂಗ ಮುಗಿಸಿ ಕ್ಯಾಂಪಸ್ ಇಂಟರ್ ವ್ಯೂನಲ್ಲಿ ಕೆಲಸ ಗಿಟ್ಟಿಸಿದ. ಅಂಜು ಉನ್ನತ ವಾಸಂಗಕ್ಕಾಗಿ ವಿದೇಶಕ್ಕೆ ಹೋದಳು.
ವ್ಯಾಸಂಗ ಮುಗಿಸಿ ರಜೆಯಲ್ಲಿ ಊರಿಗೆ ಬಂದ ಅಂಜುವನ್ನು ಕಾಣಲು ತನ್ನ ಗೆಳೆಯ ಬರಲಿಲ್ಲ. ತನ್ನ ಮನೆಗೆ ಬಂದರು ಸಂತು ತನ್ನನ್ನು ಕಾಣಲು ಬರಲು ಇಲ್ಲ, ಅವರ ಮನೆಗೆ ಹೋದಾಗ ಅಲ್ಲೂ ಇರಲಿಲ್ಲ. ಅವನ ಅಮ್ಮ ಮಾತ್ರ ಸಿಕ್ಕರು, ಸಂತು ಎಲ್ಲಿ ಎಂದಾಗ ಇಲ್ಲೆ ಎಲ್ಲೋ ಹೋಗಿರ ಬೇಕು ನಿನಗೆ ಸರ್ಪರೈಸ್ ಕೋಡೋಕೆ ಅಂತ ನಗುತ್ತ ಒಳಗೆ ಹೋದರು.
ಅಂಜುಗೆ ತನ್ನ ಮನೆಯಲ್ಲಿ ಮದುವೆಯ ಪ್ರಸ್ತಾಪ.
ಸಂತು ಅಮ್ಮ ಅಪ್ಪ ಅಂಜುವನ್ನು ಸೊಸೆಯಾಗಿ ಕೊಡಿ ಎಂದು ಅಂಜುವಿನ ತಂದೆ, ತಾಯಿಯ ಬಳಿ ಕೇಳಿದ್ದರು. ಅಂಜುವಿನ ಅಪ್ಪ ಮಗಳನ್ನು ಕೂರಿಸಿ ಕೇಳಿದರು. ಅವರಾಗಿ ಸಂಬಂಧ ಕೇಳಿದ್ದಾರೆ, ಗೊತ್ತಿರುವ ಜನ, ಒಳ್ಳೆಯ ಹುಡುಗ ಯೋಚನೆ ಮಾಡಿ ನಿರ್ಧಾರ ತಿಳಿಸು ಎಂದರು.
ಸಂತು ತನ್ನ ಬಾಲ್ಯದ ಗೆಳೆಯ, ಅವನು ತನ್ನ ಬಾಳ ಸಂಗಾತಿಯನ್ನು ಆರಿಸಿಕೊಂಡಿದ್ದಾನೆ. ಮೊನ್ನೆಯಷ್ಟೆ ಇಬ್ಬರೊಟ್ಟಿಗೆ ನನ್ನ ಪ್ರೀತಿಯ ಬಗ್ಗೆ ಹಾಗೆ ವಿದೇಶದಲ್ಲಿ ನೆಲಸಲು ನಿರ್ಧರಿಸಿರುವ ವಿಷಯ ಮಾತನಾಡಿದ್ದೇವೆ. ಬೇಗ ಅವನಿಗೆ ತಿಳಿಸಿಬಿಡು, ಆಗದೆ ಇದ್ರೆ ನಂ ಕೊಡು ನಾವೇ ಹೇಳುತ್ತೇವೆ ಎಂದಿದ್ದರು. ಮತ್ತೆ ಇದೇನಿದು, ಈ ವಿಷಯ ಸಂತುಗೆ ತಿಳಿದಿಲ್ಲವೆನುಸುತ್ತದೆ ಅವನೊಟ್ಟಿಗೆ ಮಾತನಾಡಿ ಮನೆಯಲ್ಲಿ ಮಾತನಾಡೋಣ ಅಂತ ಊಟ ಮುಗಿಸಿ ಎದ್ದಳು. ರಾತ್ರಿಯಾದರು ಸಂತು ಪತ್ತೆ ಇಲ್ಲ. ಸರಿ ಬೆಳಿಗ್ಗೆ ಎದ್ದು ನೋಡೋಣವೆಂದು ಮಲಗಿದಳು.
ಬೆಳಿಗ್ಗೆ ಏಳಲು ತುಂಬಾ ಹೊತ್ತಾಗಿತ್ತು, ಅಮ್ಮ ಸಂತು ಬಂದಿದ್ನ ಎಂದು ಕೇಳುತ್ತ ಅಡುಗೆ ಮನೆಯತ್ತ ಹೋದಳು. ಇಲ್ವೆ ಬಂದಿಲ್ಲ, ಅವನಿಗೂ ಕೆಲಸ ಜಾಸ್ತಿ ಅನ್ಸುತ್ತೆ ರಾತ್ರಿ ತಡವಾಗಿ ಬಂದು ಇನ್ನು ಮಲಗಿರಬೇಕು ನೀನು ಕಾಫಿ ಕುಡಿದು ಹೋಗಿ ರೆಡಿಯಾಗಿ ಬಾ ತಿಂಡಿಗೆ ಎಂದು ಕಾಫಿ ಕೋಟ್ಟರು. ಕಾಫಿ ಕುಡಿದು ಜಳಕ ಮಾಡಿ ರೆಡಿಯಾಗಿ ಬಂದು ಹೋಗಿದ್ದು ಸೀದ ಗೆಳೆಯನ ಮನೆಗೆ. ಆದರೆ ಮತ್ತೆ ದ್ವಂದ್ವ ಕಾರಣ ಅವನು ಇರಲಿಲ್ಲ. ತಗೋ ತಿಂಡಿ ತಿನ್ನು ಎಂದು ಸಂತುವಿನ ತಾಯಿ ಕೈಗೆ ಪುಳಿಯೋಗರೆ ಇದ್ದ ತಟ್ಟೆ ಕೊಟ್ಟರು. ಇನ್ನು ಮದುವೆ ವಿಚಾರ ಕೇಳಿದರೆ ಮುಜುಗರವಾದೀತು ಎಂದ ಅರಿತ ಅಂಜು ಕುಹಕವಾಗಿ ಎಲ್ಲಿ ನಿಮ್ಮ ಮಗ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ ಎಂದು ಬೇರೆ ವಿಷಯ ತೆಗೆದೆ ಎಂದುಕೊಳ್ಳುವಷ್ಟರಲ್ಲಿ ಸಂತು ಅಮ್ಮ ಮದುವೇ ಆಗಿಬಿಡು ನಿನ್ನ ಹಿಂದೇನೆ ಇರ್ತಾನೆ ಎಂದು ನಗುತ್ತ ಒಳಗಡೆ ಹೋದರು. ತಲೆ ಚಚ್ಚಿಕೊಳ್ಳುತ್ತ ಎಲ್ಲಿ ಇವನು ಎಂದು ಅವರನ್ನು ಹಿಂಬಾಲಿಸಿದಳು. ನೆನ್ನೆ ಬೆಳಿಗ್ಗೆ ಹೋದವನು ಇನ್ನು ಬಂದಿಲ್ಲ, ಏನೋ ರಿಲೀಸ್ ಇದೆ ಅಂತೆ ಜಾಸ್ತಿ ಕೆಲಸ ಅಂದ, ಇವತ್ತು ಸಂಜೆ ಬರ್ತಾನೆ. ಮದುವೆ ಒಂದಾದ್ರೆ ದಿನಾ ಮನೆಗೆ ಬರ್ತಾನೆ ಅಂದ್ರು. ಸರಿ ಬಾಯ್ ಎಂದು ಅಂಜು ತನ್ನ ಮನೆ ಕಡೆ ಹೊರಟಳು.
ಅಲ್ಲಿ ಅವಳ ತಂದೆ ಹೊಸ ಫೋನ್ ಹಾಗು ಸಿಂ ತಂದು ಕೋಟ್ಟರು. ಇದೆ ಸಮಯಕ್ಕೆ ಕಾದಿರುವಂತೆ ಅಂಜು ರೂಮಿಗೆ ಹೋಗಿ ಸಂತುವಿಗೆ ಕರೆ ಮಾಡಿದಳು. ಆ ಕಡೆ ಇಂದ ಸಂತು ಹಲೋ, ಯಾರು ಎಂದ ಕೂಡಲೆ, ಎಲ್ಲೋ ಹಾಳಾಗಿದ್ಯ ೨ ದಿನದಿಂದ ಕಾಯ್ತಿದಿನಿ ಹಾಗೆ ಹೀಗೆ ಎಂದು ಸಂತುವಿಗೆ ಮಾತಾಡಲು ಅವಕಾಶ ಕೊಡದೆ ಒಂದೇ ಸಮನೆ ತನಗೆ ಸಮಾಧಾನವಾಗುವರೆಗೆ ಬೈದಳು. ಸುಮ್ಮನೆ ಇದ್ಯಲ್ಲ ಮಾತಾಡೋ ಕೋತಿ ಎಂದು ಕಡೆಗೂ ಅವನಿಗೆ ಮಾತಾಡಲು ಬಿಟ್ಟಳು. ನಿನ್ನ ಅಪ್ಪ ಅಮ್ಮ ನಿನ್ನ ಹತ್ತಿರ ಮಾತಾಡಿದ್ದಾರ ಎಂದ. ಅಲ್ಲಿಗೆ ಅವನಿಗೂ ವಿಷಯ ತಿಳಿದಿದೆ ಎಂದರ್ಥವಾಯಿತು ಅಂಜುವಿಗೆ. ಏನು ಹೇಳಬೇಕೋ ತಿಳಿಯದೆ, ಯಾವಾಗ ಸಿಗ್ತೀಯ ನಾನು ಮಾತಾಡಬೇಕಿದೆ ಎಂದಳು. ಚೆನ್ನಾಗಿ ಎಲ್ಲರನ್ನು ಗಮನದಲ್ಲಿಟ್ಟುಕೊಂಡು ಯೋಚನೆ ಮಾಡಿ ಕಾಲ್ ಮಾಡು ಸಿಗೋಣ ಬಾಯ್ ಎಂದು ಸಂಭಾಷಣೆ ಮುಗಿಸಿದ. ಏನು ಮಾಡಲು ತಿಳಿಯದಾದ ಅಂಜು, ಸಂತು ಯಾಕೆ ಹೀಗೆ ಮಾತಾಡಿದ ತಿಳಿಯದೆ ಸುಮ್ಮನೆ ಕುಳಿತಳು.
ಸಂಜೆ ಹೊತ್ತಿಗೆ ನೆಡೆಯುತ್ತಾ ಮನೆ ಕಡೆ ಬರುತ್ತ ಹಂಸ ಆಡಿದ ಮಾತುಗಳು ಅಂಜುವಿನ ತಲೆಯಲ್ಲಿ ಓಡಾಡುತ್ತಿದ್ದವು. ಸಂತುಗೆ ಕೆಲಸ ಜಾಸ್ತಿಯಾಗಿದೆ, ತಾನು ಕೆಲಸ ಹುಡುಕುವುದರಲ್ಲಿ ಹೆಚ್ಚು ಕಾಲವಿಡಿಯುತ್ತಿದೆ ಎಂದಿದ್ದಳು. ಸಂತು ತನಗೆ ಸಂದರ್ಶನಕ್ಕೆ ತಯಾರಾಗಲು ಹಾಗು ಅಪ್ಲೈ ಮಾಡಲು ಸಹಾಯ ಮಾಡುತಿದ್ದಾನೆ. ಮದುವೆಯೆಂದಾಗ, ಕೆಲಸದ ನಂತರ ಎಂದು ಖುಷಿಯಾಗಿ ಹೇಳಿದ ಬಗೆಯನ್ನು ನೆನೆದು ಅವಳಿಗೆ ಸಂತು ಹಾಗು ತನ್ನ ಮನೆಯಲ್ಲಿ ನೆಡೆಯುತ್ತಿರುವ ಮದುವೆಯ ಪ್ರಸ್ತಾಪದ ಅರಿವಿಲ್ಲವೆಂದು ಅರ್ಥವಾಯಿತು. ಹಾಗೆ ನೆಡೆದುಕೊಂಡು ಹಂಸಳ ಮನೆಯಿಂದ ತನ್ನ ಮನೆ ಕಡೆಗೆ ಹೆಜ್ಜೆ ಹಾಕಿದಳು.
ಚೆನ್ನಾಗಿ ಯೋಚಿಸಿ, ಸಂತು ಯಾಕೆ ಹೀಗೆ ಆಡುತಿದ್ದಾನೋ ಗೊತ್ತಿಲ್ಲ ಆದರೆ ತಾನು ಈ ಮದುವೆಗೆ ತಯಾರಿಲ್ಲ. ಅಪ್ಪ ಅಮ್ಮನಿಗೆ ವಿಷಯ ತಿಳಿಸುವ ಮುನ್ನ ಸಂತು ಜೊತೆ ಮಾತಾಡಿ ತನ್ನ ಮನದಲ್ಲಿನ ನಿರ್ಧಾರವನ್ನು ತಿಳಿಸಿಬಿಡೋಣ ಅಂತ ತಿಳಿ ಮನಸಿನಿಂದ ಮಲಗಿದಳು.
ಸಂತುವನ್ನು ಹುಡುಕಿಕೊಂಡು ಅವನ ಕಛೇರಿಗೆ ಭೇಟಿ ನೀಡಿದಳು. ಅವಳನ್ನು ಕಂಡ ಸಂತು ಕಕ್ಕಾಬಿಕ್ಕಿಯಾದನು. ಅರ್ಧ ದಿನ ರಜ ಹೇಳಿ ಅವಳೊಟ್ಟಿಗೆ ಹೋರಗಡೆ ಬಂದನು. ಇಬ್ಬರು ಹತ್ತಿರದ ಹೋಟೆಲ್ ಒಂದರಲ್ಲಿ ಊಟಕ್ಕೆ ಹೋದರು. ಮುಖಕ್ಕೆ ಮುಖಕೊಟ್ಟು ಮಾತನಾಡಲಾಗದೆ ಅದೆಲ್ಲೋ ನೋಡುತ್ತ ಕುಳಿತನು, ಇದನ್ನು ಗಮನಿಸಿದ ಅಂಜು ಊಟ ಆರ್ಡರ್ ಮಾಡಿದಳು.
ಸ್ವಲ್ಪ ಹೊತ್ತು ನೋಡಿ ತಾನೆ ಮಾತು ಶುರು ಮಾಡಿದಳು, ಏನಾಗಿದೆ ನಿನಗೆ. ಆರ್ ಯೂ ಆಲ್ ರೈಟ್?.
ಎಸ್ ನನಗೇನಾಗಿದೆ ಚೆನ್ನಾಗಿದ್ದೇನೆ ಎಂದ.
ಎಲ್ಲಿ ಮುಖ ನೋಡಿ ಹೇಳು ನೋಡೋಣ ಎಂದಳು.
ಇಲ್ಲ ಆಗೋದಿಲ್ಲ ನನ್ನನ್ನು ಕ್ಷಮಿಸು, ಕ್ಷಮಿಸ್ತಿಯಾ ಅಲ್ವ ಎಂದು ಒಂದೇ ಸಮನೆ ಕೇಳತೊಡಗಿದ.
ಎಸ್ ಹೇಳು ಏನಾಗ್ತಿದೆ ಎಂದುತ್ತರಿಸಿದಳು.
ತಲೆ ತಗ್ಗಸಿ ಹೇಳಲಾರಂಬಿಸಿದ, ಹಂಸಳ ಅಕ್ಕ ಮನೆ ಬಿಟ್ಟು ಅವಳ ಪ್ರೇಮಿಯೊಡನೆ ಯಾರಿಗೂ ತಿಳಿಸದೆ ಮದುವೆಯಾದರು, ಅವರ ಅಪ್ಪನಿಗೆ ಹೃದಯಾಘಾತವಾಯಿತು. ತನ್ನ ತಂದೆಗೆ ಮತ್ತೆ ನೋವುಂಟು ಮಾಡಬಾರದೆಂದು ನಿರ್ಧರಿಸಿದ ಹಂಸ. ಇನ್ನು ಮುಂದೆ ಒಳ್ಳೆಯ ಸ್ನೇಹಿತರಾಗಿರೋಣ ಎಂದು ಹೇಳಿ ಹೊರಟೇಹೋದಳು. ಒಂದೆರೆಡು ದಿನ ಕಳೆದಂತೆ ನಾನೆ ಅವಳ ಮನೆಗೆ ಹೋಗಿ ಅವಳ ತಂದೆಯ ಯೋಗ ಕ್ಷೇಮ ವಿಚಾರಿಸಿ ಬಂದೆ. ಹಾಗೆ ಹಂಸಳಿಗೆ ಕೆಲಸ ಹುಡುಕುವ ನೆಪದಲ್ಲಿ ಇನ್ನು ಹತ್ತಿರವಾದೆ. ಅವರ ತಂದೆ ಹಾಗು ತನ್ನ ತಂದೆ ತಾಯಿಯ ಒಪ್ಪಿಗೆ ಪಡೆಯುವ ಜವ್ಬಾದಾರಿ ನನ್ನದು ಎಂದೇಳಿ ಅವಳನ್ನು ಮದುವೆಗೆ ಒಪ್ಪಿಸಿದೆ. ನಮ್ಮ ಮನೆಯಲ್ಲಿ ಒಪ್ಪಿಸಿ ಹೆಣ್ಣು ಕೇಳಲು ಹಂಸಾಳ ಮನೆಗೆ ಅಪ್ಪ ಅಮ್ಮನ ಜೊತೆ ಹೋಗೋಣವೆಂದು ತೀರ್ಮಾನಿಸಿ ಅಂದು ಮನೆಯಲ್ಲಿ ವಿಷಯ ತಿಳಿಸಿದೆ. ಅಮ್ಮ ಅಳುತ್ತ ಸ್ವಲ್ಪ ಸಮಯ ಕೊಡು ಎಂದೇಳಿ ಮಲಗಿದರು. ಇಷ್ಟೇಳಿ ಗಟಗಟನೇ ನೀರು ಕುಡಿಯಲಾರಂಬಿಸಿದನು.
ಊಟ ಮುಗಿಸು ಆಮೇಲೆ ಮತನಾಡೋಣವೆಂದು ಮೆದುವಾಗಿ ಹೇಳಿ ಊಟ ಮಾಡಲಾರಂಭಿಸಿದಳು ಅಂಜು. ಸಂತು ಕೂಡ ಅವಳ ಮಾತಿಗೇ ಒಪ್ಪಿಗೆ ಎನ್ನುವಂತೆ ಸುಮ್ಮನೆ ಊಟ ಮುಗಿಸಿ ಬಿಲ್‌ಪಾವತಿಸಿ, ನಿಶ್ಯಬ್ಧವಾಗಿ ಹೊರಗಡೆ ನೆಡೆದರು.
ಅಮ್ಮನ್ನು ಹಾಗೆ ಯಾವುದರಲ್ಲು ಆಸಕ್ತಿ ಇಲ್ಲದವಳಂತೆ ಕಂಡದ್ದೆ ಇಲ್ಲ ಎಂದು ಮಾತಾರಂಭಿಸಿದನು. ಅಮ್ಮ ನೋಡನೋಡುತಿದಂತೆ ಮೌನಕ್ಕೆ ಶರಣಾಗ ತೊಡಗಿದರು, ಖಿನ್ನತೆಗೊಳಗಾದರು.
ಸಂತುವಿನ ಮಾತು ಕೇಳಿ ಅಂಜುವಿಗೆ ಕಣ್ಣುತುಂಬಿತ್ತು. ಕಾರಣ ನೀನೆಯಾಗಿದ್ದೆ ಅಂಜು ಎಂದು ಆಕೆಯತ್ತ ನೋಡಿದ. ಅರ್ಥವಾಗಲಿಲ್ಲ ಎಂದು ಅವಳು ಅವನ ಕಡೆನೋಡಿದಳು. ಹೌದು ಅಮ್ಮನ ಮನಸಿನಲ್ಲಿ ನೀನೆ ಸೊಸೆಯಾಗಿದ್ದೆ ತುಂಬಾ ವರ್ಷಗಳಿಂದ, ನಾನು ಬೇರೆ ಹುಡುಗಿ ಎಂದಾಗ ಮಾತನಾಡದೆ ಒಬ್ಬಳೆ ಯೋಚನೆ ಮಾಡಿ ಖಿನ್ನತೆಗೆ ಜಾರಿದ್ದಳು. ನಿಮ್ಮ ತಂದೆ ತಾಯಿ ನನ್ನ ಅಮ್ಮ ಅಸ್ಪತ್ರೆಯಲ್ಲಿ ಇದ್ದಾಗ ಎಂದಿನಂತೆ ನನಗೆ ಸಹಾಯಮಾಡಿದರು. ನಿನ್ನ ಅಪ್ಪ ಅಮ್ಮ, ನನ್ನ ಅಪ್ಪ ನನಗೆ ನಿನ್ನನ್ನು ಮದುವೆಯಾಗಲೊಪ್ಪಿಸಿದರು. ಅವರೆಲ್ಲರಿಗೋ ಇಷ್ಟ ಹಾಗು ಕನಸು ಎಂದೇಳಿದಾಗ ನನಗೆ ಇಲ್ಲವೆನ್ನಲಾಗಲಿಲ್ಲ ಎಂದು ಹೇಳಿ, ಸದ್ಯ ಎಲ್ಲವನ್ನು ಹೇಳಿಬಿಟ್ಟೆ ಎಂದು ಸಮಾಧಾನವಾದವನಂತೆ ನಿಟ್ಟುಸಿರು ಬಿಟ್ಟನು.
ಪಕ್ಕದಲ್ಲಿ ಅಂಜು ರೌದ್ರಾವತಾರದಲ್ಲಿ ಒಂದೇ ಸಮನೆ ಕೇಳಲಾರಂಬಿಸಿದಳು, ಇಷ್ಟೆಲ್ಲಾ ಆಗಿದೆ ನನಗೆ ಒಂದು ಮಾತು ತಿಳಿಸಿಲ್ಲ. ನಿನ್ನ ಅಮ್ಮ ನನ್ನ ಅಮ್ಮ ನನಗೆ ಯಾವತ್ತು ಇಬ್ಬರು ಎಂದೆನಿಸಿರಲಿಲ್ಲ ಆದರೆ ಅವರಿಗೆ ಅಷ್ಟೊಂದು ತೊಂದರೆಯಾದರು ನನಗೆ ತಿಳಿಸಿಲ್ಲ. ಕಣ್ಣಿಗೆ ಮರೆಯಾಗಿ ಹೋದಕೋಡಲೆ ಎಲ್ಲರು ನನ್ನನ್ನು ಮರೆತೆ ಬಿಟ್ಟಿರಿ ಎಂದು ಕೂಗಾಡಿ ತಣ್ಣಗಾದಳು. ಬಾ ಮನೆಗೆ ಹೋಗೋಣವೆಂದು ಬೈಕ್ನಲ್ಲಿ ಕರೆದುಕೊಂಡು ಹೋದನು. ದಾರಿ ಮಧ್ಯದಲ್ಲಿ ನಿನಗೆ ಹೇಳದೆ ಇದ್ದದ್ದು ತಪ್ಪು, sorry. ಆದರೆ ಏನು ಮಾಡಬೇಕೇಂದು ತಿಳಿಯದೆ ಹೋಯಿತು ಆ ಕೆಲವು ದಿನಗಳು, ನೀನಿದ್ದರೆ ಖಂಡಿತ ನನಗೆ ದೈರ್ಯವಿರುತಿತ್ತು ನಿನ್ನ ಹೊರತು ಬೇರೇನು ಬೇರಾರು ನೆನಪಾಗಲಿಲ್ಲ. ನೀನು ಮಾತ್ರ ನನ್ನೊಟ್ಟಿಗಿದಿದ್ದರೆ ಆ ಸಂದರ್ಭ ಸುಲಭವಾಗಿ ನಿಭಾಯಿಸುತಿದ್ದೆ ಎಂದು ಹೇಳಿ ಮನೆಗೆ ಬಿಟ್ಟನು ಅವಳನ್ನು. ಬೈ ಎನುತ್ತ ಒಳಗೆ ಹೋದವಳಿಗೆ ಅವನ ಕೊನೆಯ ಮಾತುಗಳು ಕಿವಿಯಲ್ಲಿ ಸುತ್ತಲಾರಂಭಿಸಿದವು.
ರಾತ್ರಿಯೆಲ್ಲ ಯೋಚನೆ ಮಾಡಿ ಬೆಳ್ಳಿಗ್ಗೆ ಎದ್ದು ಸಂತುವಿನ ಮನೆಗೆ ಹಾಜರ್. ಮೊದಲಿನಂತೆ ಅಡುಗೆ ಮನೆಗೆ ಹೋಗಿ ತಿಂಡಿ ಕೇಳಿ ತಿಂದು ಅವನ ಅಮ್ಮನೊಟ್ಟಿಗೆ ಕಾಲ ಕಳೆದಳು. ಮಧ್ಯಾಹ್ನದೊತ್ತಿಗೆ ಗಂಭೀರವಾದ ಅಂಜು ತನ್ನ ಕನಸುಗಳನ್ನು ಹೇಳಿಕೊಂಡಳು. ವಿದೇಶದಲ್ಲಿ ನೆಲೆಸಬೇಕು ಎಂದೆಲ್ಲ ಹೇಳಿ. ಕೊನೆಯಲ್ಲಿ ಎಲ್ಲರಿಗು ಅವರಿಷ್ಟದಂತೆ ಬದುಕಬೇಕು ಇರೋದೊಂದೆ ಜೀವನ. ಹಂಸ ಇಂಜಿನಿಯರ್. ಸಂತು ಹಾಗು ಹಂಸ ಒಂದೇ ಕನಸಿರುವವರು. ಎಂದೆಳುತ್ತ ಸಂತು ಮದುವೆ ಹಂಸಾಳೊಂದಿಗೆ ಎಂದೊಪ್ಪಿಸಿದಳು.
ತನ್ನ ಮನೆಯಲ್ಲಿ ಸಂತು ತನಗೆ ಒಳ್ಳೆಯ ಸ್ನೇಹಿತ ಅವನು ನನಗೆ ಹಾಗೆ ಬೇಕು ಜೀವನದಲ್ಲಿ. ಅವನ ಹೊರತು ಬೇರೆಯಾವ ಸ್ನೇಹಿತರು ನನಗಿಲ್ಲ. ಅವನನ್ನು ಕಳೆಯಬೇಡಿ ಎಂದೇಳಿ. ಸಂಜೆ ಎಲ್ಲರನ್ನು ಹಂಸಳ ಮನೆಗೆ ಹೆಣ್ಣು ಕೇಳಲುಕರೆದುಕೊಂಡು ಹೋದಳು. ಅಲ್ಲಿ ಕೂಡ ಹಂಸಳ ತಂದೆ ಸಂತೋಷದಿಂದ ಒಪ್ಪಿ ಮದುವೆ ಮಾಡಕೊಟ್ಟರು.
ಕೆಲವು ವರ್ಷದಲ್ಲಿ ಅಂಜು ದೊಡ್ಡ ಸರ್ಜನ್ನಾಗಿ ವಿದೇಶದಲ್ಲಿ ಒಳ್ಳೆಯ ಹೆಸರು ಮಾಡಿದಳು. ವ್ಯಾಸಂಗ ಮಾಡುವಾಗ ಪ್ರೀತಿಸಿದ ಹುಡುಗ ಕೂಡ ತನ್ನೊಟ್ಟಿಗೆ ಸರ್ಜನ್. ಇಬ್ಬರು ವ್ಯಾಸಂಗ ಮಾಡಲು ವಿದೇಶಕ್ಕೆ ಹೋದವರು ಅಲ್ಲೆ ತಮ್ಮ ವೃತ್ತಿಯನ್ನು ಕಂಡುಕೊಂಡರು. ಆದರೆ ಸಂತು ಅಂಜುವನ್ನು ಮರಳಿ ತಾಯ್ನಾಡಿಗೆ ಬರಲು ದಿನ ಹೇಳುತ್ತಲೇ ಇದ್ದ. ಇದು ಅವಳಿಗೂ ಸರಿಯೆನಿಸಿ, ತನ್ನ ಸಹೋದ್ಯೋಗಿಗೆ ತಾನು ಮನೆಗೆ ಹಿಂದಿರುಗುವುದರ ಬಗ್ಗೆ ಹೇಳಿದಾಗ ಅವನು ಅವಳಿಗೆ ಮದುವೆಗೆ ಒಪ್ಪಿಗೆ ಕೇಳಿ ತಾನು ಹಿಂದಿರುಗುವುದಾಗಿ ತಿಳಿಸಿದ.
ಮದುವೆಯಾಗಿ ತನ್ನದೆಯಾದ ಅಸ್ಪತ್ರೆಯಲ್ಲಿ ಅಪ್ಪ ಅಮ್ಮನೊಟ್ಟಿಗೆ ಸಂಸಾರ ಸಾಗುತಿತ್ತು.
ಸಂಜೆ ಅಸ್ಪತ್ರೆಯಿಂದ ಬಂದ ಅಂಜು ಕಣ್ಣುಗಳು ಸಂತುವನ್ನು ಅವನ ಮನೆಯ ಬಾಗಿಲಲ್ಲಿ ಕಂಡು ಐಸ್ ಕ್ರೀಮ್ ಎಂದಳು. ಇಬ್ಬರು ಮನೆಯೊಳಗೆ ಹೋಗದೆ ನೆಡೆಯುತ್ತ ಮುಂದೆ ಹೋದರು. ಟೀ ಮಾಡಿಕೊಡಲ್ವ ನನ್ನ ಜೊತೆ ಊರು ಸುತ್ತೋಕೆ ಬಂದ್ಯ ಎಂದು ರೇಗಿಸಲಾರಂಭಿಸಿದನು ಸಂತು. ಅಂಜು ಸ್ವಲ್ಪ ಟೀ ಮಾಡಿಕೋಡ್ತಿಯಾ ಎಂಬ ಅವಳ ಗಂಡನ ಕೂಗಿಗೆ ಟೀ ಕೊಡುತಿದ್ದ ಅವಳನ್ನು ಒಂದೆರೆಡು ದಿನದ ಹಿಂದೆ ಕಂಡಿದ್ದನ್ನು.
ಅವನನ್ನು ಕೆಲಸದಿಂದ ಮನೆಗೆ ಬಂದ ಮೇಲೆ ಹೆಂಡತಿಗೆ ಸಹಾಯ ಮಾಡಲು ತರಕಾರಿ ಹೆಚ್ಚುತಿದ್ದವನನ್ನು ಗಮಸಿದ್ದ ಅಂಜು. ಹೌದು ನನಗೆ ಟೀ ಮಾಡೋದು, ಅಡುಗೆ ಮಾಡೋದು ಇದೆ ಕೆಲಸ. ತಾವೇನು ತರಕಾರಿ ಹೆಚ್ಚೊದು ಬಿಟ್ಟು ಬಂದಿದ್ದು ಎಂದು ಅವನ ಗೋಳಾಡಿಸ ತೊಡಗಿದಳು.
ಎಂದು ಬದಲಾಗದ, ಸರಿ ತಪ್ಪುಗಳ ಲೆಕ್ಕವಿಡದ, ಪ್ರೀತಿ, ವಾತ್ಸಲ್ಯ, ಜಗಳ, ಕ್ಷಣಿಕ ಮುನಿಸು, ಕಣ್ಣಿನ ಮುಂದೆ ಇದ್ದರೂ ಇಲ್ಲದಿದ್ದರೂ ಮಾಸದ ನಲ್ಮೆಯ ಬಾಂದವ್ಯವೆ ಸ್ನೇಹ.
–ಶೀಲಾ ಎಸ್. ಕೆ.