ಬೀಳು ಭೂಮಿಯ ಭೀಷ್ಮ-ಕರ್ನಾಟಕದ ಹೆಮ್ಮೆಯ ಕೃಷಿ ಋಷಿ – ಚೆರ್ಕಾಡಿ ರಾಮಚಂದ್ರರಾವ್
ಭವ್ಯ ಭಾರತದ ಹೆಮ್ಮೆಯ ಕರ್ನಾಟಕದ ಕರಾವಳಿ ತೀರದಲ್ಲಿ ಬರೀ ಎರಡೂಕಾಲು ಎಕರೆ ಜಾಗದಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಜೀವನವನ್ನು ಸಾಗಿಸಿದ, ದೇಶಕ್ಕೇ ಮಾದರಿಯಾಗಬಲ್ಲ, ಯಾವುದೇ ಕೃಷಿ-ತೋಟಗಾರಿಕಾ ವಿಶ್ವವಿದ್ಯಾನಿಲಯಗಳು ಮಾಡದ ಸಾಧನೆಯನ್ನು ಮಾಡಿ ಸ್ವಾವಲಂಬಿ ಬದುಕನ್ನು ಬದುಕಿದ ವ್ಯಕ್ತಿ ಆಗಿ ಹೋಗಿದ್ದಾರೆ. ಸರ್ಕಾರದ ಭಿಕ್ಷೆಯಾದ ಸಬ್ಸಿಡಿಯನ್ನು ಧಿಕ್ಕರಿಸಿ, ಲೌಕಿಕ ಜಗತ್ತಿನ ಯಾವ ಆಧುನಿಕ ಉಪಕರಣಗಳನ್ನೂ ಬಳಸದೆ, ವಿದ್ಯುತ್ ಇಲ್ಲದೇ ಕೃಷಿಯಿಲ್ಲ, ರಾಸಾಯನಿಕಗಳಿಲ್ಲದೆ ಕೃಷಿ ಅಸಾಧ್ಯ ಎಂಬ ಎಲ್ಲವನ್ನೂ ನಿರಾಕರಿಸಿ, ರೈತನೊಬ್ಬ ಸಾಧಿಸಿ ತೋರಿದ್ದಾನೆ ಎನ್ನುವುದು ಕತೆಯೋ ಅಥವಾ ವಾಸ್ತವವೋ ಎಂಬುದನ್ನು ನೋಡುವುದಕ್ಕೂ ಮೊದಲು ಪ್ರಸ್ತುತ ನಾವು ಸೇವಿಸುವ ಆಹಾರ ಪದಾರ್ಥಗಳ ಗುಣಮಟ್ಟ ಹೇಗಿದೆ ಎಂಬುದನ್ನು ಕೊಂಚ ಗಮನಿಸೋಣ.
ಜನರ ಸಾಮಾನ್ಯ ತಿಳುವಳಿಕೆಯಂತೆ ಕೃಷಿ ಮತ್ತು ಹೈನುಗಾರಿಕೆ ಪರಸ್ಪರ ಅವಲಂಬಿತ ವೃತ್ತಿಗಳು ಹಾಗೂ ಕೃಷಿ ಮತ್ತು ಹೈನುಗಾರಿಕೆಗಳು ರಾಷ್ಟ್ರದ ಅಭಿವೃದ್ದಿಗೆ ಮತ್ತು ಆರೋಗ್ಯಕ್ಕೆ ಪೂರಕವಾದವುಗಳು ಎಂಬುದಿದೆ. ಹೈನುಗಾರಿಕೆ ಅತ್ಯಂತ ಲಾಭದಾಯಕ ವೃತ್ತಿ, ಹೆಚ್ಚು-ಹೆಚ್ಚು ಜನರು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೈನುಗಾರಿಕೆ ಸಚಿವರು ಕಾಲ-ಕಾಲಕ್ಕೆ ಅಪ್ಪಣೆ ಕೊಡಿಸುತ್ತಾರೆ. ಇವತ್ತಿನ ಹಣದುಬ್ಬರದ ಸ್ಥಿತಿಯಲ್ಲಿ ಹೈನುಗಾರಿಕೆ ಎಷ್ಟು ಲಾಭದಾಯಕ ಎನ್ನುವುದಕ್ಕಿಂತ ಹೈನು ಉತ್ಪನ್ನಗಳು ಎಷ್ಟು ಸುರಕ್ಷಿತ ಎಂದು ನೋಡುವುದು ಮುಖ್ಯವಾಗುತ್ತದೆ. ಅತಿಯಾದ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ವಹಿಸುವ ಯಾವುದೇ ಉದ್ಯಮವೂ ಕೂಡ ಅನೈತಿಕತೆಯಿಂದ ಪಾರಾಗಲು ಸಾಧ್ಯವಿಲ್ಲ. ಒಂದು ಲೋಟ ಹಾಲಿನಲ್ಲಿ ಇಪ್ಪತ್ತು ತರಹದ ನೋವು ನಿವಾರಕಗಳ, ಆಂಟಿಬಯಾಟಿಕ್ ಮತ್ತು ಉದ್ದೀಪನ ಹಾರ್ಮೋನುಗಳಿವೆ ಎಂಬುದನ್ನು ಕೃಷಿ ಮತ್ತು ಆಹಾರ ಪತ್ರಿಕೆ ಸ್ಪೇನ್‌ನಲ್ಲಿ ವರದಿ ಮಾಡಿದೆ. ಸ್ಪೇನ್ ಮತ್ತು ಮೊರಕ್ಕೋ ವಿಶ್ವವಿದ್ಯಾನಿಲಯದ ಸಂಶೋಧಕರು ಆಹಾರದಲ್ಲಿನ ಕಲಬೆರಕೆ ಅಂಶವನ್ನು ಪತ್ತೆ ಮಾಡುವ ಸಲುವಾಗಿ ಮೊಟ್ಟ ಮೊದಲಿಗೆ ಹಾಲಿನ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ಆಶ್ಚರ್ಯಕರವಾಗಿ ಈ ಅಂಶ ಬೆಳಕಿಗೆ ಬಂದಿದೆ. ನಂಬಲಸಾಧ್ಯವಾದ ಈ ಫಲಿತಾಂಶದಿಂದ ದಿಕ್ಕೆಟ್ಟ ಸಂಶೋಧಕರು ಬೇರೆ-ಬೇರೆ ಕಡೆಯಿಂದ ಮತ್ತೂ ಇಪ್ಪತ್ತು ಮಾದರಿಗಳನ್ನು ತಂದು ತೀವ್ರ ಪರೀಕ್ಷಗೊಳಪಡಿಸಿದಾಗ ಕಂಡು ಬಂದ ಫಲಿತಾಂಶ ಇನ್ನೂ ಘೋರವಾಗಿತ್ತು. ಟ್ರಿಕ್ಲೋಸಾನ್ ಎಂಬ ಶಿಲೀಂದ್ರನಾಶಕ ಮತ್ತು 17-ಬೀಟಾ ಎಸ್ಟ್ರಾಡಯಲ್ ಎಂಬ ಲೈಂಗಿಕ ಪ್ರಚೋದಕ ಹಾರ್ಮೊನುಗಳು ಪತ್ತೆಯಾದವು ಎಂದು ಟ್ರುಥ್ ಥಿಯರಿ ಪತ್ರಿಕೆ ವರದಿ ಮಾಡಿದೆ. ದನಗಳಿಂದ ನೂರಾರು ಲೀಟರ್ ಹಾಲು ಪಡೆಯಲು ಹಲವಾರು ತರಹದ ರೋಗ ನಿರೋಧಕ ಚುಚ್ಚುಮದ್ದುಗಳು, ಬೆಳವಣಿಗೆಯನ್ನು ವೇಗವಾಗಿ ವೃದ್ಧಿಗೊಳಿಸಲು, ಬೆದೆಗೆ ಬೇಗ ಬರುವಂತಾಗಲು ಗ್ರೋತ್ ಹಾರ್ಮೊನುಗಳನ್ನು ಬಳಸುತ್ತಾರೆ. ಇನ್ನು ಮೇವಿಗಾಗಿ ಬಳಸುವುದು ಹೆಚ್ಚಿನಂಶ ಕುಲಾಂತರಿ ಜೋಳ ಇತ್ಯಾದಿಗಳನ್ನು. ಅತ್ಯಂತ ಕಡಿಮೆ ದರದಲ್ಲಿ ಹಾಲುತ್ಪನ್ನಗಳನ್ನು ಪೂರೈಸುವ ವಾಲ್-ಮಾರ್ಟ್‌ನಂತಹ ಮಾಲ್‌ಗಳಲ್ಲಿ ಸಿಗುವ ಹಾಲಿನ ಡಬ್ಬಗಳಲ್ಲಿ ಈ ಅಂಶಗಳು ಹೆಚ್ಚು ಪತ್ತೆಯಾಗಿವೆ.
ಅವನೊಬ್ಬ ಅಮೇರಿಕಾದ ಸಾಮಾನ್ಯ ನಾಗರೀಕ. ಹೆಸರು ಎಡ್ ಬ್ರೌನ್. ಮುದ್ದಾದ ಹೆಂಡತಿ ಜೊತೆಗೆ ಮೂರು ಮಕ್ಕಳು. ಯಾಕೆ ನಮ್ಮ ಮಕ್ಕಳು ಅಗತ್ಯಕ್ಕಿಂತ ಹೆಚ್ಚು ಬೆಳೆಯುತ್ತಾರೆ? ಯಾಕೆ ನಮ್ಮ ಮಕ್ಕಳ ಮನಃಸ್ಥಿತಿ ಹಿಂಸ್ರ ರೂಪಕ್ಕೆ ತಿರುಗುತ್ತಿದೆ? ಅವಧಿಗೆ ಮುನ್ನವೇ ದೊಡ್ಡವರಾಗುತ್ತಿದ್ದಾರೆ? ಹೀಗೆ ಹತ್ತು ಹಲವು ಪ್ರಶ್ನೆಗಳೇಳುತ್ತಿದ್ದವು. ಈಗಿನ ವೇಗದ ಯುಗ ಮತ್ತು ಉಪಯೋಗಿಸುವ ಆಹಾರ ಸಾಮಾಗ್ರಿಗಳು ಮತ್ತು ಇತರೆ ವಸ್ತುಗಳು ಕಾರಣವಿರಬಹುದೇ ಎಂಬ ಅನುಮಾನ ಅವನಿಗೆ ಕಾಡುತ್ತಲೇ ಇತ್ತು. ಹೆಂಡತಿ ಉಪಯೋಗಿಸುವ ಕ್ರೀಮುಗಳಲ್ಲಿ ಏನೇನಿದೆ ಎಂದು ಗಮನಿಸಿದಾಗ ಅದೇ ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಹೇರಳವಿದ್ದವು. ಸಿಧ್ದ ಆಹಾರ ಪೊಟ್ಟಣಗಳ ಲೇಬಲ್‌ಗಳ ಮೇಲೂ ಇದೇ ತರಹದ ರಾಸಾಯನಿಕಗಳ ಪಟ್ಟಿಯಿದ್ದವು. ಹೀಗೆ ಅಧ್ಯಯನ ಮಾಡುತ್ತಿದ್ದಂತೆ ಅವನಿಗೆ ಗೋಚರಿಸಿದ ಸತ್ಯವೆಂದರೆ ಅಲ್ಲಿನ ಸಮಾಜ ದಿನನಿತ್ಯ ಸುಮಾರು 80 ಸಾವಿರ ರಾಸಾಯನಿಕಗಳ ಜೊತೆಯಲ್ಲಿ ಏಗುತ್ತಿರುವುದು ಕಂಡು ಬಂದಿತು. ಉಪಯೋಗಿಸುವ ಎಲ್ಲಾ ವಸ್ತುಗಳು ಅಂದರೆ ಅದು, ಹಲ್ಲುಜ್ಜುವ ಪೇಸ್ಟ್ ಇರಬಹುದು ಅಥವಾ ತಿನ್ನುವ ಗೋಧಿಯಿರಬಹುದು, ತರಕಾರಿಯಿರಬಹುದು, ಮೊಟ್ಟೆ-ಮಾಂಸವಿರಬಹುದು. ಎಲ್ಲವೂ ರಾಸಾಯನಿಕಗಳಿಂದ ತುಂಬಿದ ಭಂಡಾರವೇ ಆಗಿತ್ತು. ಬಟ್ಟೆ ತೊಳೆಯುವ, ಸ್ನಾನ ಮಾಡುವ ಸೋಪು, ಶಾಂಪೂ, ಮುಖಕ್ಕೆ ಲೇಪಿಸುವ ಕ್ರೀಮು, ತುಟಿಯ ರಂಗು, ಮನೆಗೆ ಬಳಿಯುವ ಬಣ್ಣ, ಮೆಟ್ಟುವ ಚಪ್ಪಲಿ, ಕೈಗಡಿಯಾರದ ಬೆಲ್ಟ್, ಓದುವ ದಿನಪತ್ರಿಕೆ, ಮೊಬೈಲ್ ಹೀಗೆ ಎಲ್ಲವೂ ರಾಸಾಯನಿಕಗಳ ಗೂಡು ಮತ್ತು ಇವೇ ಅನಾರೋಗ್ಯಕ್ಕೆ ಮೂಲ. ಕಾಣದ ಅದೃಶ್ಯ ವೈರಿಯನ್ನು ಹೇಗೆ ಎದುರಿಸುವುದು ಎಂಬುದೇ ಈಗ ಮುಂದಿರುವ ಸಮಸ್ಯೆ.
ಮೂಲಭೂತವಾಗಿ ಜೀವನ ಶ್ಯೆಲಿಯನ್ನು ಬದಲಿಸಿಕೊಳ್ಳುವುದು ಅವನ ಮುಂದಿರುವ ಆದ್ಯತೆ. ಸರಿ, ಉಪಯೋಗಿಸುವ ಪ್ರತಿ ವಸ್ತುವನ್ನು ಗಮನಿಸಿ, ಅದು ಸಾವಯವದಿಂದಾದ ಅಥವಾ ರಾಸಾಯನಿಕರಹಿತವಾದ ವಸ್ತುವೆಂದರೆ ಮಾತ್ರ ಉಪಯೋಗಿಸುವುದು ಇಲ್ಲದಿದ್ದರೆ ಇಲ್ಲ. ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾವಯವ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಲು ಪತ್ನಿ ಸಂತೋಷದಿಂದ ಒಪ್ಪಿದಳು. ತನ್ನ ಮನೆ, ಮಡದಿ ಮತ್ತು ಮಕ್ಕಳು ಆರೋಗ್ಯವಾಗಿದ್ದರೆ ಸಾಕೆ? ಈ ಜಿಜ್ಞಾಸೆ ಎಡ್ ಬ್ರೌನ್‌ನನ್ನು ಮತ್ತೆ ಮತ್ತೆ ಚಿಂತೆಗೀಡು ಮಾಡಿತು. ಸರಿ ಬಿಡುವಾದಾಗಲೆಲ್ಲ ತನ್ನ ವಿಚಾರಗಳನ್ನು ಅಕ್ಕ-ಪಕ್ಕದವರಿಗೆ, ಸ್ನೇಹಿತರಿಗೆ ಹೇಳ ತೊಡಗಿದ. ಕೆಲವರು ಇವನ ಮಾತನ್ನು ಉಪೇಕ್ಷಿಸಿದರು. ಹಲವರು ಆಚರಣೆ ಕಷ್ಟ ಎಂದು ಅವಲತ್ತುಕೊಂಡರು.
ಒಪ್ಪಿಕೊಳ್ಳಲಾರದ ಹಂತ (Unacceptable Levels) ಎಂಬುದೊಂದು ಸಿನೆಮಾವು 30ನೇ ಅಂತಾರಾಷ್ಟ್ರೀಯ ಪರಿಸರ ಚಿತ್ರೋತ್ಸವದಲ್ಲಿ ಆರೋಗ್ಯ ಮತ್ತು ಪರಿಸರ ಪ್ರಶಸ್ತಿಯನ್ನು ಪಡೆಯಿತು. ಇದರ ನಿರ್ಮಾತ ಮೇಲೆ ಹೇಳಿದ ಎಡ್ ಬ್ರೌನ್. 1940ನೇ ವರ್ಷದಿಂದ ಆರಂಭವಾದ ರಾಸಾಯನಿಕ ಕ್ರಾಂತಿಯ ನಂತರದಲ್ಲಿ ಹಲವು ಸಂಸ್ಥೆಗಳು ಒಪ್ಪಿಕೊಳ್ಳಬಹುದಾದ ರಾಸಾಯನಿಕಗಳ ಪರಿಣಾಮಗಳನ್ನು ವಿವಿಧ ರೀತಿಯಲ್ಲಿ ಪಟ್ಟಿ ಮಾಡಿವೆ. ಅಂದರೆ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ರಾಸಾಯನಿಕಗಳನ್ನು ಉಪಯೋಗಿಸುವ ಬಗೆ. ಆದಾಗ್ಯೂ ಕ್ರಿಮಿ-ಕೀಟನಾಶಕಗಳು ತೋರುವ ಪರಿಣಾಮ ಮೇಲ್ನೋಟಕ್ಕೆ ದುಷ್ಪರಿಣಾಮ ಬೀರಲಾರದು ಎಂದುಕೊಂಡರೂ, ದೀರ್ಘಕಾಲಿನ ದುಷ್ಪರಿಣಾಮಗಳನ್ನು ಅಳೆಯುವುದು ಕಷ್ಟಸಾಧ್ಯ. ಬಹುಮುಖ್ಯವಾಗಿ ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಿದ ಈ ಚಿತ್ರವನ್ನು ಪ್ರತಿಯೊಬ್ಬರೂ ನೋಡಲೇ ಬೇಕು. ಅದರಲ್ಲೂ ಕಾನೂನು ರೂಪಿಸುವವರು, ಮಂತ್ರಿಮಹೋದಯರು, ಕೃಷಿ-ತೋಟಗಾರಿಕಾ ಅಧಿಕಾರಿಗಳು ನೋಡಿದರೆ, ಮುಂದಿನ ಪೀಳಿಗೆ ಎಂತಹ ಆಪತ್ತಿನಲ್ಲಿದೆ ಎಂಬುದು ಅರಿವಾಗುತ್ತದೆ ಹಾಗೂ ಆರೋಗ್ಯವಂತ ಪೀಳಿಗೆಯನ್ನು ನೀಡಲು ಸಾಧ್ಯವಾಗುತ್ತದೆ. ಕಂಪ್ಯೂಟರ್‌ನಲ್ಲಿ ಚಿತ್ರ ವೀಕ್ಷಿಸಲು http://www.unacceptablelevels.com/ ಈ ಜಾಲತಾಣಕ್ಕೆ ಭೇಟಿ ನೀಡಿ.
ಅಮೇರಿಕಾವೊಂದರಲ್ಲೇ ಪ್ರತಿವರ್ಷ 3.5 ದಶಲಕ್ಷ ಟನ್‌ಗಳಷ್ಟು ರಾಸಾಯನಿಕಗಳನ್ನು ಉಪಯೋಗಿಸುತ್ತಾರೆಂದು ಅಂದಾಜು ಮಾಡಲಾಗಿದೆ. ಪಿ.ಸಿ.ಬಿ., ಡಿಡಿಟಿ. ಪಾದರಸ, ಸೀಸ ಹೀಗೆ 267 ವಿವಿಧ ರೀತಿಯ ರಾಸಾಯನಿಕಗಳನ್ನು ಅಲ್ಲಿ ಉಪಯೋಗಿಸಲಾಗುತ್ತದೆ. ಉಸಿರಾಡುವ ಗಾಳಿ, ಕುಡಿಯುವ ನೀರು, ಉಣ್ಣುವ ಆಹಾರ ಹೀಗೆ ಪ್ರತಿಯೊಂದು ವಿಷಮಯವೇ ಆಗಿದೆ. ವಿಷ ಸೇವನೆ ಬೇಡ, ನೆಮ್ಮದಿಯ ಬದುಕನ್ನು ಬಾಳೋಣ ಎಂಬ ಸಂದೇಶವನ್ನು ಹೊತ್ತ ಸಿನೆಮಾ ಜಗತ್ತಿನಾದ್ಯಂತ ಮನೆಮಾತಾಗಿದೆ.
ಈಗ ಮೊದಲಿನ ಪ್ಯಾರಕ್ಕೆ ಬರೋಣ. ಜಪಾನಿನ ಫುಕೋಕ ಮತ್ತು ಅವನ ಒಂದು ಹುಲ್ಲಿನ ಕ್ರಾಂತಿಯ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ನಮ್ಮ ಹೆಮ್ಮೆಯ ಕರ್ನಾಟಕದಲ್ಲೇ ಫುಕೋಕ ತರಹದ ವ್ಯಕ್ತಿಯೊಬ್ಬರಿದ್ದರು ಎಂಬುದು ಹಲವರಿಗೆ ತಿಳಿದಿಲ್ಲ. ಉಡುಪಿ ಜಿಲ್ಲೆಯ ಹೆಬ್ರಿಯಿಂದ ಬ್ರಹ್ಮಾವರಕ್ಕೆ ಹೋಗುವ ರಸ್ತೆಯಲ್ಲಿ ಸಿಗುವ ಊರು ಚೆರ್ಕಾಡಿ. ಎರೆಡವರೆ ಎಕರೆ ಜಮೀನಿನಲ್ಲಿ ನೈಸರ್ಗಿಕ ಪದ್ಧತಿಯಲ್ಲಿ ಕಳೆದ ೬೫ ವರ್ಷಗಳಿಂದ ವಿವಿಧ ಬೆಳೆಗಳನ್ನು ಬೆಳೆದು ಸಾಧಿಸಿದ ಸಾಧಕರ ಹೆಸರು ರಾಮಚಂದ್ರರಾವ್. ಮೂಲತಃ ಗಾಂಧಿವಾದಿಯಾದ ರಾಯರ ಚಿಂತನೆಯೆಂದರೆ ಸ್ವಾವಲಂಬಿ ಬದುಕು. ಮೊಟ್ಟ ಮೊದಲಿಗೆ ತಮ್ಮ ಕಾಳುಮೆಣಸಿನ ಬಳ್ಳಿಗಳ ತೋಟದಲ್ಲಿ ಅಲ್ಲಲ್ಲಿ ಭತ್ತದ ಗಿಡ ಹುಲುಸಾಗಿ ಬೆಳೆದಿರುವುದನ್ನು ಗಮನಿಸಿದರು. ಒಂದೊಂದೆ ತೆನೆಯನ್ನು ಬೇರ್ಪಡಿಸಿ ತೂಕ ಮಾಡಿದಾಗ ಅರ್ಧ ಕೆ.ಜಿ. ಉತ್ತಮ ಭತ್ತ ಸಿಕ್ಕಿತು. ನಿಸರ್ಗದ ಇದೇ ಮಾದರಿಯನ್ನೇ ಕೃಷಿಯಲ್ಲಿ ಅಳವಡಿಸಿಕೊಂಡರು. ತೀರಾ ಫುಕೋಕನಷ್ಟು ನಿಸರ್ಗ ಸಹಜ ಕೃಷಿ ಇವರದಲ್ಲವಾದರೂ ಆ ಪದ್ಧತಿಗೆ ಹತ್ತಿರ. ಮೊದಲನೆಯದಾಗಿ ಮನುಷ್ಯನಿಗೆ ದುರಾಸೆಯಿರಬಾರದು. ಇನ್ನೂ-ಮತ್ತೂ ಹಣ ಮಾಡುವ ತುರಿಕೆ ಶುರುವಾದರೆ ಮುಗಿಯಿತು. ತೋಟಕ್ಕೆ ಬೇಡದ ವಸ್ತುಗಳು ಲಗ್ಗೆಯಿಡುತ್ತವೆ. ಆರೋಗ್ಯವಾದ ಭೂಮಿ-ನಿಸರ್ಗ ಅನಾರೋಗ್ಯದ ತಾಣವಾಗುತ್ತದೆ. ಇವರ ಬಾವಿಗೆ ಪಂಪ್‌ಸೆಟ್ಟಿಲ್ಲ. ಏತ ಮಾದರಿಯಲ್ಲಿ ನೀರನ್ನೆತ್ತಿ ಮಾವು, ತೆಂಗು, ಹಲಸು ಇತ್ಯಾದಿ ಮರಗಳಿಗೆ ನೀರುಣಿಸುತ್ತಾರೆ. ಹತ್ತಿಯನ್ನು ಬೆಳಯುತ್ತಾರೆ, ಹೊರಗಿನ ಪ್ರಪಂಚದಿಂದ ಇವರು ಕೊಳ್ಳುವುದು ಸೀಮೆಎಣ್ಣೆ ಮತ್ತು ಬೇವಿನ ಹಿಂಡಿ ಮಾತ್ರ. ಮನೆಗೆ ವಿದ್ಯುತ್ ಸಂಪರ್ಕವಿಲ್ಲ. ಸೀಮೆಎಣ್ಣೆ ಮತ್ತು ಹರಳೆಣ್ಣೆ ದೀಪ ಮಾತ್ರ. ಮಂತ್ರಿ-ಮಹೋದಯರು, ವಂದಿಮಾಗದರು, ಕೃಷಿ ವಿಶ್ವವಿದ್ಯಾನಿಲಯದ ತಜ್ಞರು, ವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು ಇನ್ನೂ ಗಣ್ಯರು ಇತ್ಯಾದಿಗಳೆಲ್ಲ ಭೇಟಿ ಮಾಡಿ, ರಾಮಚಂದ್ರರಾಯರ ಕೃಷಿ ಪದ್ಧತಿಗೆ ಶಾಭಾಶ್ ನೀಡಿದ್ದಾರೆ. ತಾವು ಮಾಡದಿರುವುದನ್ನು ಯಕಶ್ಚಿತ್ ಒಬ್ಬ ರೈತ ಮಾಡಿ ತೋರಿದ್ದಾನೆ ಎಂದು ಒಳೊಗೊಳಗೇ ಕರುಬಿದ್ದಾರೆ. ಹೊಗಳಿಕೆಗೂ-ತೆಗಳಿಕೆಗೂ ರಾಯರು ಅತೀತರು. ಅತ್ತೂ-ಕರೆದು ಸರ್ಕಾರ ೨೦೦೩ರಲ್ಲಿ ಇವರಿಗೆ ಕೃಷಿಪಂಡಿತ ಪ್ರಶಸ್ತಿ ನೀಡಿ ಗೌರವಿಸಿದ್ದು ಬಿಟ್ಟರೆ, ಕರ್ನಾಟಕದ ರೈತರಲ್ಲಿ ಇವರ ಚಿಂತನೆಯನ್ನು ಬಿತ್ತಲು, ಅಳವಡಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ ಎಂಬುದು ಖೇದದ ವಿಚಾರವೇ ಸೈ. ಕೃಷಿಯೆನ್ನುವುದು ವ್ಯಾಪಾರವಲ್ಲ, ಅದೊಂದು ಸ್ವಾಭಿಮಾನದಿಂದ ಬದುಕಲು ರೂಡಿಸಿಕೊಳ್ಳುವ ಜೀವನ ಪದ್ಧತಿ, ತನಗೆ ಬೇಕಾದಷ್ಟು ಇಟ್ಟುಕೊಂಡು ಉಳಿದದ್ದನ್ನು ಇತರರಿಗೆ ಹಂಚುವ ಮನೋಭಾವವಿಲ್ಲದ ಈಗೀನ ಕೃಷಿ ಪದ್ಧತಿಯೇ ರೈತರ ಸಾಲು-ಸಾಲು ಆತ್ಮಹತ್ಯೆಗೆ ಮೂಲ ಕಾರಣ. ನಿಸರ್ಗವೇ ಕಣ್ಣಿಗೆ ಕಾಣುವ ದೇವರು, ನಾವು ಆ ದೇವರ ಮಕ್ಕಳು, ಬೇರೆ ಯಾವುದೇ ದೇವರಿಲ್ಲ ಎಂದು ಭದ್ರವಾಗಿ ನಂಬಿ ಸಾರ್ಥಕ ಬದುಕನ್ನು ಸಾಗಿಸಿದ ಬೀಳು ಭೂಮಿಯ ಭೀಷ್ಮ, ಕೃಷಿ ಋಷಿ 2010ರಲ್ಲಿ ತೀರಿಕೊಂಡರು. ಅವರ ಕಿರಿಮಗ ಆನಂದ ತಂದೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಂಪರ್ಕ ವಿಳಾಸ: ಶ್ರೀ ಚೆರ್ಕಾಡಿ ಆನಂದ ರಾವ್, ಖಾದಿ ಧಾಮ, ಅಂಚೆ: ಚೆರ್ಕಾಡಿ, (ಬ್ರಹ್ಮಾವರದ ಮೂಲಕ), ಉಡುಪಿ ತಾಲ್ಲೂಕು, ದಕ್ಷಿಣ ಕನ್ನಡ-576 215, ಕರ್ನಾಟಕ, ಭಾರತ.
ಅಂತಾರಾಷ್ಟೀಯ ಮಟ್ಟದಲ್ಲಿ ಬಹು ಚಿಂತಿತ ಮತ್ತು ಚರ್ಚಿತ ರಸವಿಷ ರಾಸಾಯನಿಕಗಳ ಬಗ್ಗೆ ಬೆಳಕು ಚೆಲ್ಲುವಂತಹ ಪ್ರಯತ್ನಗಳು ಪ್ರಾರಂಭವಾಗಿ ಜನರನ್ನು ಜಾಗೃತಿಗೊಳಿಸುವಲ್ಲಿ ಶ್ರಮಿಸುತ್ತಿವೆ. ಇದೇ ಚಿಂತನೆಯನ್ನು ಮುಕ್ಕಾಲು ಶತಮಾನದ ಹಿಂದೆ ನಮ್ಮವರೇ ಆದ ಚೆರ್ಕಾಡಿಯವರು ಮಾಡಿದ್ದು ನಮಗೆಲ್ಲಾ ಅತಿ ಹೆಮ್ಮೆಯ ಸಂಗತಿ.