ಅಲ್ಲಿ ಟ್ರಂಪಾಯಣ – ಇಲ್ಲಿ ನೋಟುಗಳ ಮರಣ!!!: ಅಖಿಲೇಶ್ ಚಿಪ್ಪಳಿ

akhilesh
ಅತ್ಯಂತ ವಿವಾದಾತ್ಮಕ ಹೇಳಿಕೆ ನೀಡುತ್ತಾ, ಸದಾ ವಿವಾದದಲ್ಲೇ ಮುಳುಗೇಳುತ್ತಾ ಅಮೇರಿಕಾದ ಅಧ್ಯಕ್ಷ ಪದವಿಯನ್ನು ಏರಿದ ರಿಪಬ್ಲಿಕ್ ಬಣದ ಮಹಾನುಭಾವ ಟ್ರಂಪ್ ಮೂಲತ: ಉದ್ದಿಮೆದಾರ, ಬಂಡವಾಳಶಾಹಿ. ಇವನ ಎದುರಾಳಿ ಇವನಿಗಿಂತ ಹೆಚ್ಚು ಮತ ಪಡೆದರೂ ತಾಂತ್ರಿಕ ರಾಜಕಾರಣದ ಕಾರಣಗಳಿಂದಾಗಿ ಸೋಲಬೇಕಾಯಿತು. ಬಿಡಿ ಈ ಅಂಕಣದಲ್ಲೇಕೆ ರಾಜಕೀಯವೆಂದು ಮೂಗು ಮುರಿದೀರಿ. ಅಪಾಯವಿರುವುದು ಈ ಮನುಷ್ಯನ ಚಿಂತನೆಗಳಲ್ಲಿ ಹಾಗೂ ಧೋರಣೆಗಳಲ್ಲಿ ಎಂದು ಹೇಳಲೇಬೇಕಾಗಿದೆ. ಹವಾಗುಣ ಬದಲಾವಣೆ ಅಥವಾ ವಾತಾವರಣ ವೈಪರೀತ್ಯವೆನ್ನುವುದು ಬರೀ ಸುಳ್ಳು ಎಂದು ಹೇಳುವವರ ಗುಂಪಿನ ನಾಯಕನೀತ. ಇಂಗಾಲಾಮ್ಲ ಹೆಚ್ಚುವುದರಿಂದ ಏನೇನು ಅಪಾಯವಿಲ್ಲ ಎನ್ನುತ್ತಾ ಪಳೆಯುಳಕೆ ಇಂಧನಗಳಿಗೇ ಮಣೆ ಹಾಕುವ, ಶಸ್ತ್ರಾಸ್ತ್ರ ದಲ್ಲಾಳಿಗಳನ್ನು ನಡುಮನೆಗೆ ಬಿಟ್ಟುಕೊಳ್ಳುವ ಪ್ರವೃತ್ತಿಯಿದ್ದವ. ಅಧ್ಯಕ್ಷನಾದ ಮೇಲೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಹೊರಟರೆ ಅಪಾಯ ಕಟ್ಟಿಟ್ಟ ಬುತ್ತಿ. 1992ರ ರಿಯೋ ಶೃಂಗ ಸಭೆಯಿಂದ 2015ರ ಪ್ಯಾರೀಸ್ ಶೃಂಗದವರೆಗೂ ಪ್ರಪಂಚದ ಎಲ್ಲಾ ದೇಶಗಳೂ ಕಡೆದೂ ಕಡೆದೂ ಒಂದು ನಿರ್ಧಾರಕ್ಕೆ ಬರುವ ಹೊತ್ತು ಇದು. ಈ ಸಮಯದಲ್ಲೇ ಧುತ್ತೆಂದು ಅಪಾಯ ಟ್ರಂಪ್ ರೂಪದಲ್ಲಿ ಬಂದು ನಿಂತಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಈತನ ಅಧ್ಯಕ್ಷ ಪದವಿ ಖಾಯಂ ಆಗಿಯೇ ಇರುತ್ತದೆ. ಜಗತ್ತಿಗೇ ದೊಡ್ಡಣ್ಣನಾಗಿ ಮರೆಯುತ್ತಿರುವ ಒಂದು ದೇಶದ ಅಧ್ಯಕ್ಷನಿಗೆ ದೂರಗಾಮಿ ಪರಿಣಾಮಗಳ ಅರಿವಿಲ್ಲದಿದ್ದಲ್ಲಿ, ಅಭಿವೃದ್ಧಿ ಹೊಂದುತ್ತಿರುವ ಹಾಗೂ ಹಿಂದುಳಿದ ದೇಶಗಳ ಪಾಡು ನಿಜಕ್ಕೂ ಶೋಚನಿಯವಾಗಲಿದೆ. ತೀರ ಪ್ರದೇಶದ ಜನ ಇನ್ನಷ್ಟು-ಮತ್ತಷ್ಟು ಅಪಾಯಗಳಿಗೆ ತಲೆ ಒಡ್ಡಬೇಕಾಗಿದೆ. ಹಾಗಾಗದಿರಲೆಂದು ಬಯಸುವುದು ಹಾಗೂ ಕಾಲ-ಕಾಲಕ್ಕೆ ಆತನ ತಪ್ಪು ಹೆಜ್ಜೆಗಳನ್ನು ಸೂಕ್ತ ವೇದಿಕೆಗಳಲ್ಲಿ ಖಂಡಿಸುವುದು, ಟೀಕಿಸುವುದು ಮಾಡಲೇ ಬೇಕಾಗಿದೆ. ಇದಕ್ಕೆ ಅನೇಕ ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ ಹೊಣೆ ಹೊತ್ತ ಸಂಘಟನೆಗಳು ಇವೆ. ಅಧ್ಯಕ್ಷೀಯ ಸ್ಥಾನಕ್ಕೆ ಆಯ್ಕೆಯಾಗಿ ಟ್ರಂಪ್ ತನ್ನ ಮಡದಿಗೆ ಮುತ್ತಿಕ್ಕಿದ ಹೊತ್ತಿನಲ್ಲೇ ನಮ್ಮ ದೇಶದ ಆರ್ಥಿಕ ಕ್ಷೇತ್ರದಲ್ಲೊಂದು ಬಿರುಗಾಳಿ ಎದ್ದಿದೆ. 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಏಕಾಏಕಿ ರದ್ದು ಮಾಡಲಾಗಿದೆ. ಕಳ್ಳತನದ ಕಪ್ಪುಹಣಕ್ಕೆ ಮಣೆಯೇ ಇಲ್ಲದಾಗಿದೆ. ಹಲವು ಮಾರ್ಗಗಳಿಂದ ಕೂಡಿಟ್ಟ ನೋಟುಗಳು ರದ್ದಿಗೂ ಹಾಕಲಾರದ ಸ್ಥಿತಿಯಲ್ಲಿವೆ.

ಸ್ವಿಟ್ಜರ್‍ಲ್ಯಾಂಡ್ ದೇಶದ ಮುದ್ರಣ ಯಂತ್ರ, ಜರ್ಮನಿ, ಜಪಾನ್ ಹಾಗೂ ಇಂಗ್ಲೆಂಡ್ ದೇಶಗಳಿಂದ ತರಿಸಿದ ಪೇಪರ್ ಹಾಗೂ ಸ್ವಿಸ್‍ನಿಂದ ಬಂದ ಇಂಕು ಇವುಗಳನ್ನು ಬಳಸಿಕೊಂಡು ಮುದ್ರಿಸಿದ ಹೆಚ್ಚು ಮುಖಬೆಲೆಯ ನೋಟುಗಳೀಗೀಗ ರದ್ದಿ ಪೇಪರ್ ಬೆಲೆಯೂ ಇಲ್ಲ. ಹೊಸ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದೇಶೀಯವಾಗಿಯೇ ತಯಾರಿಸಿದ ಕಾಗದಗಳನ್ನು ಹಾಗೂ ಇಂಕುಗಳನ್ನು ಬಳಸಿ ನೋಟು ಮುದ್ರಿಸಬೇಕು ಎಂದು ತೀರ್ಮಾನಿಸಿದೆ. ವಿಷಯ ವಿದೇಶಿ ವಿನಿಮಯದ್ದಲ್ಲ. ನೋಟುಗಳನ್ನು ಮುದ್ರಿಸುವ ಪೇಪರ್ ಗುಣಮಟ್ಟ ಅತ್ಯುತ್ತಮವಾಗಿರಬೇಕು. ಇದಕ್ಕಾಗಿ ಆಯ್ದ ಜಾತಿಯ ಮರಗಳೇ ಬೇಕು. ಈಗಾಗಲೇ ರದ್ದಾದ ನೋಟುಗಳನ್ನು ಯಾರೂ ರದ್ದಿಯವನಿಗೆ ನೀಡುವುದಿಲ್ಲ. ನಾವು ಓದುವ ದಿನಪತ್ರಿಕೆಗಳು ಕೊನೆಯಲ್ಲಿ ರದ್ದಿಗೆ ಹೋಗಿ ಮರುಬಳಕೆಯಾಗುತ್ತವೆ. ನೋಟುಗಳ ವಿಷಯದಲ್ಲಿ ಹಾಗೆ ಆಗುವುದಿಲ್ಲ. ಕಳ್ಳತನದಿಂದ ಕೂಡಿಟ್ಟ ಹಣವನ್ನು ಇತರರಿಗೆ ನೀಡಲು ಹೇಗೂ ಮನಸ್ಸು ಒಪ್ಪುವುದಿಲ್ಲ. ಬಿಗಿಯಾದ ಕಣ್ಗಾವಲು ಇರುವುದರಿಂದ ಹೊಸ ನೋಟುಗಳನ್ನು ಪಡೆಯುವುದು ಸಾಧ್ಯವಿಲ್ಲ. ಸ್ವಯಂಕೃತವಾಗಿ ನಿರ್ಮಿಸಿಕೊಂಡ ಇಂತಹ ಹತಾಶೆಯ ಸ್ಥಿತಿಯಲ್ಲಿ ಮಾಜಿ ಶ್ರೀಮಂತರು ನೋಟುಗಳನ್ನು ನದಿಯಲ್ಲಿ ಎಸೆಯುವುದೋ ಅಥವಾ ಸುಡುವುದೋ ಮಾಡುತ್ತಾರೆ. ಇವೆರೆಡೂ ಪ್ರಕ್ರಿಯೆಗಳು ಪರಿಸರಕ್ಕೆ ಹಾನಿಯುಂಟು ಮಾಡುವುದೇ ಆಗಿದೆ. ನದಿಯಲ್ಲಿ ತೇಲಿಸಿದರೆ ಜಲಚರಗಳಿಗೆ ಕುತ್ತು ಬರುತ್ತದೆ. ಸುಟ್ಟರೆ ಮತ್ತಷ್ಟು ಇಂಗಾಲಾಮ್ಲ ವಾತಾವರಣಕ್ಕೆ ಸೇರಿ ಭೂಮಿ ಇನ್ನಷ್ಟು ಬಿಸಿಯಾಗಲು ಕಾರಣವಾಗುತ್ತದೆ. ಒಂದು ಅಂದಾಜಿನ ಪ್ರಕಾರ ಸಾಗರದಂತಹ ತಾಲ್ಲೂಕಿನಲ್ಲೇ 5 ಸಾವಿರ ಕೋಟಿಯಷ್ಟು ಕಪ್ಪು ಹಣದ ಸಂಗ್ರಹವಿದೆ. ಡಿಸೆಂಬರ್ 30ರ ತನಕ ಇದನ್ನು ಬಿಳಿ ಮಾಡಲು ಹರಸಾಹಸ ಮಾಡಲಾಗುತ್ತದೆ. ಆದರೂ ಸಿಂಹಪಾಲು ಕಪ್ಪುಹಣ ಬಿಳಿಯಾಗುವುದೇ ಇಲ್ಲ. ಆಗ ಅನಿವಾರ್ಯವಾಗಿ ಕಪ್ಪು ಹಣ ಬೆಂಕಿಗೆ ಆಹುತಿಯಾಗುತ್ತದೆ.

ಇದೇ ಹೊತ್ತಿನಲ್ಲಿ ಮೊರಾಕ್ಕೋದಲ್ಲಿ ನವಂಬರ್ 13ರಿಂದ ಮತ್ತೊಂದು ಜಾಗತಿಕ ಹವಾಮಾನ ಶೃಂಗ ಶುರುವಾಗಿದೆ. ಪ್ರಪಂಚದ ಎಲ್ಲಾ ದೇಶಗಳ ಪ್ರತಿನಿಧಿಗಳು ಒಂದು ಕಡೆ ಸೇರಿ ಭೂತಾಪವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಏನೇನು ಸಾಧ್ಯತೆಗಳಿವೆ ಎಂದು ಚರ್ಚಿಸುತ್ತಿದ್ದಾರೆ. ಜಾನುವಾರುಗಳ ಹೊಟ್ಟೆಯಿಂದ ಹೊರಬರುವ ಮೀಥೇನ್ ಅನಿಲವನ್ನು ಹೇಗೆ ಕಡಿಮೆ ಮಾಡಬಹುದು, ಅವುಗಳ ಆಹಾರಕ್ರಮಗಳನ್ನು ಹೇಗೆ ಬದಲಾಯಿಸಿ ಮೀಥೇನ್ ಅಂಶವನ್ನು ಕಡಿಮೆಮಾಡ ಬಹುದು ಎಂಬುದಕ್ಕೆ ವಿಶೇಷ ವೇದಿಕೆ ರಚನೆಯಾಗಿದೆ. ಇಡೀ ವಿಶ್ವವನ್ನು ಸೌರಶಕ್ತಿಯನ್ನೆ (ಸೋಲಾರ್ ಇಂಪಲ್ಸ್) ಬಳಸಿಕೊಂಡು ತಯಾರಿಸಲಾದ ವಿಮಾನದ ಸಹಾಯದಿಂದ ಸುತ್ತಿದ ರೂವಾರಿ ಪ್ರಸ್ತಾವಿಕವಾಗಿ ಮರುಬಳಕೆ ಇಂಧನಗಳ ಬಳಕೆಯ ಕುರಿತು ಮಾತನಾಡಿದ್ದಾರೆ. ಒಂದೊಮ್ಮೆ ಪ್ರಪಂಚದ ಎಲ್ಲಾ ಸರ್ಕಾರಗಳು ಸೇರಿ ಭೂಬಿಸಿಯ ಪ್ರಮಾಣವನ್ನು 2 ಡಿಗ್ರಿಗಿಂತ ಹೆಚ್ಚು ಏರದಂತೆ ಮಾಡುವಲ್ಲಿ ವಿಫಲವಾದರೆ, ಈ ಭೂಮಿ ಹಲವು ಪ್ರದೇಶದ ಜನಗಳಿಗೆ, ಪ್ರಾಣಿಗಳಿಗೆ, ಸಸ್ಯಗಳಿಗೆ ಕಂಟಕವಾಗಿ ಪರಿಣಮಿಸುತ್ತದೆ. ಹಿಮಕವಚಗಳು ಕರಗುತ್ತವೆ, ಸಮುದ್ರ ಮಟ್ಟ ಏರುತ್ತದೆ, ಬೆಳೆಗಳು ವಿಫಲವಾಗುತ್ತವೆ, ನೀರಿನ ಲಭ್ಯತೆ ಕಡಿಮೆಯಾಗುತ್ತದೆ. ಕಂಡು ಕೇಳರಿಯದ ಹೊಸ ತರಹದ ಕಾಯಿಲೆಗಳು ಉದ್ಭವವಾಗಿ ಉಲ್ಬಣಿಸುತ್ತವೆ. ಕಾಡ್ಗಿಚ್ಚು, ಚಂಡಮಾರುತಗಳ ಸಂಖ್ಯೆ ಹೆಚ್ಚಾಗುತ್ತದೆ. ತೀರ ಪ್ರದೇಶಗಳು ಹಾಗೂ ಕೆಲವು ದೇಶಗಳು ಸಮುದ್ರಕ್ಕೆ ಆಹುತಿಯಾಗುತ್ತವೆ. ಒಟ್ಟಾರೆಯಾಗಿ ಸಾಮಾಜಿಕ ಹಾಗೂ ಆರ್ಥಿಕವಾದ ಅಸಮತೋಲನೆ ಎಲ್ಲೆಡೆ ತಾಂಡವವಾಡುತ್ತದೆ.

ಜಗತ್ತಿನ ಎರಡನೇ ಅತಿದೊಡ್ಡ ಇಂಗಾಲಾಮ್ಲ ತ್ಯಾಜ್ಯವನ್ನು ಹೊರಹಾಕುತ್ತಿರುವ ದೇಶ ಅಮೇರಿಕ. ಪ್ರಪಂಚದ ಒಟ್ಟಾರೆ ಇಂಗಾಲಾಮ್ಲ ತ್ಯಾಜ್ಯದ ಪ್ರಮಾಣದಲ್ಲಿ ಅಮೆರಿಕದ ಪಾಲು 16%. ಮನುಕುಲದ ಅತಿದೊಡ್ಡ ಸವಾಲು ಎಂದು ಕರೆದ ಹವಾಗುಣ ಬದಲಾವಣೆ ತಜ್ಞ ಜೇಮ್ಸ್ ಹಾನ್ಸನ್ ಪ್ರಕಾರ ಉದ್ದಿಮೆದಾರರು, ಬಂಡವಾಳಶಾಹಿಗಳು ಹಾಗೂ ಶಸ್ತ್ರಾಸ್ತ್ರ ವ್ಯಾಪಾರಿಗಳ ನೇತಾರ ಟ್ರಂಪ್ ಶಖೆಯಿಂದಾಗಿ ಮೇಲೆ ಹೇಳಿದ ಎಲ್ಲಾ ಅವಘಡಗಳು ಉಲ್ಬಣಿಸುವ ದಟ್ಟ ಸಾಧ್ಯತೆಗಳು ಕಂಡುಬರುತ್ತಿವೆ. ಇದಕ್ಕೆ ಪೂರಕವಾಗಿ 2012ರಲ್ಲೆ ಈ ಟ್ರಂಪ್ ಮಹಾಶಯ “ಹವಾಗುಣ ಬದಲಾವಣೆ” ಎಂಬುದು ಒಂದು ಹಸೀ ಸುಳ್ಳು. ಇಂಗಾಲಾಮ್ಲದಿಂದ ಯಾವುದೇ ಅಪಾಯವಿಲ್ಲವೆಂದು ಹೇಳಿಕೆ ನೀಡಿದ್ದನ್ನು ಇಕೋವಾಚ್ ಪತ್ರಿಕೆ ವರದಿ ಮಾಡಿದೆ. ಟ್ರಂಪ್ ಎಂಬ ಮನುಷ್ಯನನ್ನು “ಹವಾಗುಣ ಬದಲಾವಣೆ ನಿರಾಕರ್ತರ ಮುಖ್ಯಸ್ಥ” ಎಂಬ ಹೊಸ ಪದನಾಮದಿಂದ ಗುರುತಿಸಲಾಗುತ್ತಿದೆ.

ಟ್ರಂಪ್ ಅಧ್ಯಕ್ಷಗಾದಿಗೆ ಏರುವುದು ಮುಂದಿನ ಜನವರಿಯಲ್ಲಿ, ಆದರೂ ತನ್ನ ಅಧಿಕಾರವನ್ನು ಈಗಲೇ ಚಲಾಯಿಸುವ ತರಾತುರಿಯಲ್ಲಿ ಇದ್ದಾರೆ. 1970ರಲ್ಲಿ ಆಗಿನ ಅಧ್ಯಕ್ಷರಾದ ರಿಚರ್ಡ್ ನಿಕ್ಸನ್ ಯು.ಎಸ್. ಪರಿಸರ ಸಂರಕ್ಷಣಾ (ಯು.ಎಸ್. – ಎನ್ವಿರಾನ್‍ಮೆಂಟ್ ಪ್ರೊಟೆಕ್ಷನ್ ಏಜನ್ಸಿ ಅಥವಾ ಇಪಿಎ) ಸಂಸ್ಥೆಯನ್ನು ಪ್ರಾರಂಭಿಸಿದರು. ಹೆಸರೇ ಹೇಳುವಂತೆ ಇದರ ಮುಖ್ಯ ಕಾರ್ಯವ್ಯಾಪ್ತಿ ಪರಿಸರ ಸಂರಕ್ಷಣೆ ಹಾಗೂ ಹವಾಗುಣ ಬದಲಾವಣೆಯನ್ನು ಕಡಿಮೆ ಮಾಡುವಲ್ಲಿ ಶ್ರಮಿಸುತ್ತಿರುವ ಈ ಸಂಯುಕ್ತ ಸಂಸ್ಥೆಯ ಕಟ್ಟುನಿಟ್ಟಿನ ಕಾನೂನುಗಳು ಅಮೆರಿಕದ ಆರ್ಥಿಕ ವ್ಯವಸ್ಥೆಯನ್ನೇ ಹಾಳುಗೆಡವುತ್ತಿವೆ. ಈ ಸಂಸ್ಥೆಯನ್ನು ಮುಚ್ಚುವುದೋ ಅಥವಾ ಇದರ ಅಧಿಕಾರ ವ್ಯಾಪ್ತಿಯನ್ನು 70%-80% ಕಡಿತಗೊಳಿಸುವುದು ಅನಿವಾರ್ಯ ಎಂದು ಚುನಾವಣಾ ಭಾಷಣದಲ್ಲೇ ಹೇಳಿದ್ದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಪಳೆಯುಳಕೆ ಇಂಧನಗಳ ಕಂಪನಿಗಳಿಂದ ಹಣ ಪಡೆದು ಗೆದ್ದ ಮೇರಾನ್ ಎಬೆಲ್ ಎಂಬ ಮನುಷ್ಯನನ್ನು ಯು.ಎಸ್.ಪರಿಸರ ಸಂರಕ್ಷಣಾ ಸಂಸ್ಥೆಯ ನೂತನ ಆಡಳಿತಗಾರನೆಂದು ಈಗಲೆ ಘೋಷಿಸಲಾಗಿದೆ ಹಾಗೂ ಈ ಮೂಲಕ ಸಂಸ್ಥೆಯ ಶವ ಪೆಟ್ಟಿಗೆಗೆ ಮೊಳೆ ಹೊಡೆಯುವ ಕಾಯಕ ಪ್ರಾರಂಭವಾಗಿದೆ.

ಹವಾಗುಣ ಬದಲಾವಣೆಗೆ ಅತಿಮುಖ್ಯ ಕಾರಣ  ಕಲ್ಲಿದ್ದಲು ಗಣಿಗಳು. ಅಮೆರಿಕಾದ ಶೇ.33 ವಿದ್ಯುತ್‍ನ್ನು ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಸ್ಥಾವರಗಳೇ ಉತ್ಪಾದಿಸುತ್ತವೆ. ಹಿಂದಿನ ಅಧ್ಯಕ್ಷರ ಕಾಲದಲ್ಲಿ ಹೊಸ ಕಲ್ಲಿದ್ದಲು ಗಣಿಗಳಿಗೆ ಪರವಾನಿಗೆ ನೀಡುವುದನ್ನು ನಿಷೇಧಿಸಲಾಗಿತ್ತು. ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ಇಡೀ ದೇಶದಾದ್ಯಂತ ಹೊಸ ಕಲ್ಲಿದ್ದಲು ಗಣಿಗಳಿಗೆ ಪರವಾನಿಗೆ ನೀಡಲಾಗುವುದೆಂದು ಈಗಲೇ ಘೋಷಿಸಲಾಗಿದೆ. ಟ್ರಂಪ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ನೀವು ಇನ್ನು ಹೆಮ್ಮೆಯಿಂದ ಎದೆಯುಬ್ಬಿಸಿ ನಾನು ಗಣಿ ಉದ್ಯಮಿ” ಎಂದು ಹೇಳಿಕೊಳ್ಳಬಹುದು ಎಂದಿದ್ದಾರೆ. ಜೊತೆಗೆ ಗಣಿ ಉದ್ಯಮಕ್ಕೆ ಎಲ್ಲಾ ತರಹದ ರಿಯಾಯಿತಿಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹೋದ ವರ್ಷ ಪ್ಯಾರೀಸ್‍ನಲ್ಲಿ ನಡೆದ ಜಾಗತಿಕ ಹವಾಗುಣ ಬದಲಾವಣೆ ಶೃಂಗದಲ್ಲಿ ಎಲ್ಲಾ ದೇಶಗಳು ಸೇರಿ ಹಲವು ಒಪ್ಪಂದಗಳಿಗೆ ಬದ್ಧರಾಗುವ ಪಣ ತೊಟ್ಟಿದ್ದರು. ಅಮೆರಿಕವು 22 ಬಿಲಿಯನ್ ಟನ್ ಇಂಗಾಲಾಮ್ಲವನ್ನು 2016 ರಿಂದ 2030ರ ಅವಧಿಯಲ್ಲಿ ಕಡಿಮೆ ಮಾಡುವುದೆಂದು ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸುವ ಯಾವ ಪ್ರಸ್ತಾಪಗಳು ಟ್ರಂಪ್‍ನ ಕಾರ್ಡಿನಲ್ಲಿ ಇಲ್ಲ. ಈ ಅಂತಾರಾಷ್ಟ್ರೀಯ ಒಪ್ಪಂದದಲ್ಲಿ ಇರುವ ಲೋಪವೆಂದರೆ, ಯಾವುದೇ ದೇಶ ಒಪ್ಪಂದದ ಅಂಶಗಳನ್ನು ಪಾಲಿಸದಿದ್ದರೆ, ಯಾವುದೇ ಕ್ರಮ ತೆಗೆದುಕೊಳ್ಳುವ ಹಾಗೆ ಇಲ್ಲ ಅಥವಾ ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ.

ಅಲ್ರ್ಬೆರ್ಟಾ, ಕೆನಡಾ, ಮೋಂಟಾನಾ ಮತ್ತು ನೆಬ್ರಾಸ್ಕದ ಮೂಲಕ ಹಾದುಹೋಗಲಿರುವ 1179 ಮೈಲಿಯುದ್ದದ ಕಚ್ಛಾತೈಲದ ಕೀಸ್ಟೋನ್ ಎಕ್ಸ್‍ಲ್ ಪೈಪ್‍ಲೈನ್ ಯೋಜನೆಗೆ ಕಳೆದ 7 ವರ್ಷಗಳಿಂದ ಪರಿಸರದ ಕಾರಣಕ್ಕಾಗಿ ಅನುಮತಿ ಸಿಕ್ಕಿರಲಿಲ್ಲ. ನಾನು ಅಧಿಕಾರಕ್ಕೆ ಬಂದರೆ ಈ ಯೋಜನೆಗೆ ಅನುಮತಿ ನೀಡಿ ದಾಖಲೆ ಸಮಯದಲ್ಲಿ ಪೂರೈಸುತ್ತೇನೆ ಎಂದು ಟ್ರಂಪ್ ತಮ್ಮ ಚುನಾವಣಾ ಭಾಷಣದಲ್ಲಿ ಬೀಗಿದ್ದರು. ನೂರಾರು ನದಿಗಳ ಮೂಲಕ ಸಾಗುವ ಅತಿಉದ್ದದ ಈ ಪೈಪ್‍ಲೈನ್ ಸೋರಿಕೆಯಾದಲ್ಲಿ ಅತಿದೊಡ್ಡ ಅವಘಡ ಸಂಭವಿಸಬಲ್ಲದು ಎಂಬ ಪ್ರಶ್ನೆಗೆ, ನಾವು ಅಲ್ಪ-ಸ್ವಲ್ಪ ಕಳೆದುಕೊಳ್ಳುವ ಮನ:ಸ್ಥಿತಿಯನ್ನು ಹೊಂದಿರಬೇಕು, ಆಗಲೇ ನಮಗೆ ಹೆಚ್ಚಿನ ಲಾಭ ದೊರಕುವುದು ಎಂದು ಉತ್ತರಿಸಿದ್ದಾನೆ ಈ ಟ್ರಂಪ್ ಮಹಾಶಯ.

ಅಮೆರಿಕಾದ ನ್ಯೂಟನ್ ಹಾಗೂ ಲೊವಾ ಪ್ರದೇಶದಲ್ಲಿ  ಪವನ ವಿದ್ಯುತ್‍ನ್ನು ಅತಿಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಪಳೆಯುಳಕೆ ಇಂಧನಗಳಿಗಿಂತ ಪವನ ವಿದ್ಯುತ್ ಕಡಿಮೆ ವೆಚ್ಚದ್ದು ಹಾಗೂ ಪರಿಸರ ಸ್ನೇಹಿಯಾಗಿದೆ. ಆದರೆ ಟ್ರಂಪ್ ಪ್ರಕಾರ “ಪವನ ವಿದ್ಯುತ್ ಯೋಜನೆ”ಗಳು ಈ ದೇಶಕ್ಕೆ ಒಂದು ಸಮಸ್ಯೆಯಾಗಿವೆ. ಮರುಬಳಕೆ ಇಂಧನಗಳಿಂದಾಗಿ ರಾಷ್ಟ್ರ ಆರ್ಥಿಕವಾಗಿ ಹಿಂದೆ ಸರಿಯುತ್ತಿದೆ ಹಾಗೂ ಇದರು ಸರಿಯಾದ ಕ್ರಮವಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಮರುಬಳಕೆ ಇಂಧನಗಳಿಗೆ ಯಾವುದೇ ರೀತಿಯ ಪ್ರೋತ್ಸಾಹ ನೀಡಲಾಗುವುದಿಲ್ಲವೆಂದು ತಿಳಿಸಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿರುವ 8 ಸಾವಿರ ಕಂಪನಿಗಳ ಸುಮಾರು 209000 ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಕೊಳ್ಳುತ್ತಾರೆ. ಹಿಂದಿನ ಸರ್ಕಾರ ಸೌರ ವಿದ್ಯುತ್ ಬಳಕೆಯನ್ನು ಪ್ರೋತ್ಸಾಹಿಸಲು ಸೌರ ವಿದ್ಯುತ್ ಬಳಸುವವರಿಗೆ ವಿಶೇಷ ರಿಯಾಯಿತಿಯನ್ನು ನೀಡುತ್ತಿತ್ತು. ಈ ರಿಯಾಯಿತು ಅವಧಿ ಇದೇ ಡಿಸೆಂಬರ್‍ಗೆ ಕೊನೆಗೊಳ್ಳುತ್ತದೆ. ಇದನ್ನು ನವೀಕರಿಸಲು ಟ್ರಂಪ್ ನೇರಾ-ನೇರ ನಿರಾಕರಿಸಿದ್ದಾರೆ ಎಂದು ಇಕೋವಾಚ್ ವರದಿ ಮಾಡಿದೆ.

ಈ ಟ್ರಂಪ್ ಎಂಬ ಮನುಷ್ಯ ತನ್ನ ಧೋರಣೆಗಳಿಂದ ನಿಶ್ಚಿತವಾಗಿ ಹಲವು ತರಹದ ಪರಿಸರದ ನಾಶಕ್ಕೆ ಕಾರಣವಾಗುತ್ತಾನೆ. ಒಂದು ಸಮಾಧಾನವೆಂದರೆ ಈ ಬಾರಿ ಅಲ್ಲಿನ ಯುವಕರು ಅಂದರೆ 18-24 ವರ್ಷದ ಒಳಗಿನ ಹೆಚ್ಚಿನವರು ಟ್ರಂಪ್ ವಿರುದ್ಧವಾಗಿ ಮತ ಚಲಾಯಿಸದ್ದಾರೆ. ಮತ್ತೆ ಮರುಅವಧಿಗೆ ಟ್ರಂಪಾಯಣ ಮುಂದುವರೆಯಲಾರದು ಎಂಬುದಷ್ಟೇ ಈಗ ನಾವು ಪಟ್ಟುಕೊಳ್ಳಬಹುದಾದ ಸಮಾಧಾನ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x