ಅಮರ್ ದೀಪ್ ಅಂಕಣ

ಅಲ್ಲಿರಲಾಗಲಿ​ಲ್ಲ ಇನ್ನೆಲ್ಲಿಗೂ ಹೋಗಲಿಲ್ಲ: ಅಮರ್ ದೀಪ್ ಪಿ.ಎಸ್.

ಹದಿನೈದಿಪ್ಪತ್ತು  ದಿನದ ಹಿಂದೆ ನನ್ನ ಸ್ನೇಹಿತರೊಬ್ಬರೊಂದಿಗೆ ಬಹಳ ದಿನದ ನಂತರ ಕಲೆತು ಹರಟುತ್ತಿದ್ದೆ.   ಅವನು  ತಾನು  ಕಂಡಂಥ ಕೆಲವರ ಅವಸರದ ನಡುವಳಿಕೆ ಬಗ್ಗೆ ಹೇಳುತ್ತಿದ್ದ;
 
"ಕೆಲವರನ್ನು ನಾವು ನೋಡಬಹುದು.  ಹುಳ ಹರಿದಾಡಿದಂತೆ ತಿರುಗುತ್ತಿರುತ್ತಾರೆ.  ಯಾವುದೇ ಸಭೆ,  ಸಮಾರಂಭ, ಕಾರ್ಯಕ್ರಮ,  ಉಪನ್ಯಾಸ ತಪ್ಪಿಸಿಕೊಳ್ಳುವುದಿಲ್ಲ.  ಆಯಾಯಾ ಕಾರ್ಯಕ್ರಮಗಳಲ್ಲಿ ತಮ್ಮ ಇರುವಿಕೆಯ ಛಾಪನ್ನು ಬಿಟ್ಟು ಬಂದಿರುತ್ತಾರೆ.  ಆ ಸಮಾರಂಭ ಪೂರ್ಣವಾಗುವವರೆಗೂ ಅಲ್ಲಿರುವುದಿಲ್ಲ. ತಮ್ಮ  ಹಾಜರಿ ಹಾಕಿ ಅವಕಾಶವಿದ್ದರೆ, ನಾಲ್ಕು ಮಾತಾಡಿ, ನೆರೆದಿದ್ದವರೊಂದಿಗೆ  ಆತ್ಮೀಯತೆಯಿಂದ  ಬೆರೆತು ಮತ್ತೊಂದು ಕಾರ್ಯಕ್ರಮದ, ಸಮಾರಂಭದ ನೆಪ ಹೇಳಿ ಜಾಗ ಖಾಲಿ ಮಾಡುತ್ತಾರೆ.  ಅಷ್ಟು ಸಮಯದ ಕೊರತೆ ನಿಜವಾಗಿಯೂ ಇದ್ದವರ ಪೀಕಲಾಟವದು.   ಆದರೆ,  ಸೂಕ್ಷ್ಮವಾಗಿ ಗಮನಿಸಿದಲ್ಲಿ ಆಸಕ್ತಿಕರ ಸಂಗತಿಗಳು ಗೊತ್ತಾಗುತ್ತವೆ. ಅಂತವರ ಹೊರತಾಗಿ ಕೆಲವರಿಗೆ ಅಲ್ಲಿರಲು ಆಸೆ ಇಲ್ಲವೆಂದಲ್ಲ,  ಇರಲಾಗು ವುದಿಲ್ಲ. ಮತ್ತೊಂದು ಕಡೆ ಅವರು  ಹೋದಲ್ಲೂ ಅದೇ ಕತೆ.  ಗುಂಪಿನಲ್ಲೇನೋ ಇರಲು ಆಸಕ್ತಿ.  ಅಲ್ಲೇ ಅವರು ಒಬ್ಬಂಟಿಯಾದವರಂತೆ  ಮತ್ತೆಲ್ಲಿಗೋ ಕಾಲು ಕಿತ್ತುತ್ತಾರೆ
 
ಸಾಹಿತ್ಯಿಕ, ರಾಜಕೀಯ, ಉಪನ್ಯಾಸ ಮತ್ತು ಪ್ರವಚನ ಇತ್ಯಾದಿ  ಕಾರ್ಯಕ್ರಮಗಳಾದರೆ ಗಂಟೆಗಳ ಲೆಕ್ಕ ಹಾಕುತ್ತೇವೆ.   ಮನೋರಂಜನೆ, ಸಂಗೀತ ಕಾರ್ಯಕ್ರಮವಾದರೆ ಅದರಲ್ಲೂ "ಚೆನ್ನಾಗಿ ನಡೀತಿದೆಯಾ? ಇಲ್ಲವಾ?  ಚೆನ್ನಾಗಿ ಹಾಡುತ್ತಾರಾ, ಕುಣಿಯುತ್ತಾರಾ ? ನಗಿಸುತ್ತಾರಾ? ಅಂದಾಜಿಸುತ್ತೇವೆ.  ಕಾರ್ಯಕ್ರಮ  ಎಷ್ಟೇ ಸೊಗಸಾಗಿದ್ದರೂ ಸರಿ, ಮೂಡು ಸರಿಯಿತಾ? ಎದ್ದು ಬಂದಿರುತ್ತೇವೆ. ಯಾವುದೇ ಜಂಜಡ ಬೇಡವೆಂದು  ಪುಸ್ತಕಗಳನ್ನು ಹಿಡಿದು ಕೂಡುತ್ತೇವಾ? ಅಲ್ಲೂ ಪಟ್ಟಾಗಿ ಅಂಟಿಕೊಂಡು ಓದುವುದು ಎಷ್ಟು ತಾಸು ಹಿಡಿಯು ತ್ತದೆ?.   ಅಬ್ಬಬ್ಬಾ ಅಂದರೆ ನಾವು ಎಷ್ಟು ಹೊತ್ತು ಬಿಟ್ಟು ಬಿಡದಂತೆ ಓದಬಲ್ಲೆವು ಅನ್ನುವುದನ್ನೂ   ಕರೆಕ್ಟಾಗಿ ಪ್ಲಾನ್ ಮಾಡುವುದಿಲ್ಲ.  ಪ್ಲಾನ್ ಮಾಡಿ ಇಂತಿಷ್ಟೇ ಹೊತ್ತಿಗೆ, ಗಂಟೆಗೆ, ದಿನಕ್ಕೆ ವರ್ಷಕ್ಕೆ ಅಂದುಕೊಂಡ ಓದು, ಕೆಲಸ, ಗೊತ್ತು ಗುರಿ ನಿಗದಿಪಡಿಸಿ ಕೊಂಡು ತಲುಪಿದವರು ಸಾಕಷ್ಟು ಜನರಿದ್ದಾರೆ.
  
ಕಾರ್ಯಕ್ರಮಗಳು, ಮದುವೆ ಸೀಜನ್ ಶುರುವಾಯಿತೆಂದರೆ, ಯಾವ ಮದುವೆಗೆ, ಯಾವ ಕಾರ್ಯಕ್ರಮಕ್ಕೆ ಹೋಗುವುದೋ? ಬಿಡುವುದೋ? ತಲೆನೋವು ಶುರುವಾಗುತ್ತೆ.   ಒಮ್ಮೊಮ್ಮೆ ದಿನವೊಂದಕ್ಕೆ ನಾಲ್ಕಾರು ಮದುವೆಗಳು, ಕಾರ್ಯಕ್ರಮಗಳು ಯಾವುದನ್ನೂ ಬಿಡುವಂತಿಲ್ಲ.    ಸಂಭಂಧದ ಕಾರಣಕ್ಕೋ, ಸ್ನೇಹದ ಕಾರಣಕ್ಕೋ ಒಟ್ಟಿನಲ್ಲಿ ಅಟೆಂಡ್ ಮಾಡಲೇಬೇಕು.    ಬಿಟ್ಟೆವಾ? "ದೊಡ್ದೊವ್ರಾಗಿಬಿಟ್ರಪ್ಪಾ" ಅನ್ನಿಸಿಕೊಳ್ಳ ಬೇಕು.  ಯಾಕಿದ್ದೀತು.  ಹೋಗಿ ಬಂದರಾಯಿತೆಂದು ಹೊರಡುತ್ತೇವೆ. ಅದೂ ಒಂದಕ್ಕಿಂತ ಹೆಚ್ಚು  ಸಮಾ ರಂಭ.  ಇದ್ದ ಊರಲ್ಲೇ ಆದರೆ ಒಂದೊಂದು ಕಡೆ ಹತ್ತು ಹದಿನೈದು ನಿಮಿಷ ಕಳೆದು ಸಿಕ್ಕವರನ್ನು ಹಲ್ಲು ಕಿರಿದು ಮಾತಾಡಿಸಿ ಕೈ ಕುಲುಕಿ ಬರುತ್ತೇವೆ.  ಇನ್ನು ಬೇರೆ ಊರುಗಳಲ್ಲಿನ  ಶುಭ ಸಮಾರಂಭವಾದರೆ ಹಾಜರಾಗಿ   ನಮ್ಮ ಯೋಗ್ಯತೆ ತಿಳಿದಷ್ಟು  ಅಲ್ಲ, ಜೇಬು ಸಹಕರಿಸಿದಷ್ಟು ಮುಯ್ಯ ಮಾಡಿ ಸಬೂತಿಗೆ ಹೆಸರೂ ಬರೆಸಿ ಅವಿಷ್ಟು ಸಮಾರಂಭದ ಮುಗಿಸಿಕೊಂಡು  ಕಡೆಗೆ ಬಸ್ ನಿಲ್ದಾಣಕ್ಕೆ ಬಂದು ಬಸ್ಸು ಹತ್ತಿ ಟಿಕೆಟ್ಟು ತೆಗೆಸಿ ಉಳಿದ ದುಡ್ಡು ಎಣಿಸುವಾಗ  ಖರ್ಚಾಗಿದ್ದ ದುಡ್ಡು ಲೆಕ್ಕ ಮಾಡುತ್ತೇವೆ.  ಇನ್ನು ಹೆಂಡತಿ, ಮಕ್ಕಳು, ಲಗೇಜು ಕಟ್ಟಿ ಕೊಂಡು ತಿರುಗುವುದಿದ್ದರೆ ಅಚಾನಕ್ಕಾಗಿ ಹೆಂಡತಿ ಮಕ್ಕಳ ಕಾಳಜಿಯಲ್ಲಿ ಲಗೇಜನ್ನು ಬಸ್ಸಲ್ಲಿ ಬಿಟ್ಟು ಬಂದಿರು ತ್ತೇವೆ, ಇಲ್ಲಾ  ದುಬಾರಿ ಬಂಗಾರದ ಆಭರಣಗಳು, ಲಗೇಜುಗಳ ಎಚ್ಚರಿಕೆ ಮಾಡುವಲ್ಲಿ ಚಿಕ್ಕ ಮಗುವನ್ನು ಬಸ್ಸಿನಿಂದ ಇಳಿಸುವುದನ್ನೇ ಮರೆತಿರುತ್ತೇವೆ.   ಮಗುವನ್ನು ಇಳಿಸಿಕೊಳ್ಳದಿದ್ದ ಸಂಧರ್ಭದಲ್ಲಿ ಜ್ಞಾಪಕ ಮಾಡುವ ಸಹ,ಪ್ರಯಾಣಿಕರು, ಬಸ್ ಕಂಡಕ್ಟರ್ ಲಗೇಜನ್ನು ಮರೆತು ಬರುವಾಗ ಎಚ್ಚರಿಸಲೇಬೇಕೆಂಬ  ನಿಯಮವೇನೂ ಇಲ್ಲ ಬಿಡಿ.  ಅದು ಸ್ವಯಂಕೃತ ಅಪರಾಧ.     
    
ಇನ್ನೂ ಕೆಲವರು  ಕೆಲವು ಸಂಧರ್ಭದಲ್ಲಿ ಇಲ್ಲಿ ಕೇಳಿದರೆ ಆ ಸಮಾರಂಭದಲ್ಲಿದ್ದೆ ಎಂದೂ ಅಲ್ಲಿ ಕೇಳಿದರೆ ಮತ್ತೆಲ್ಲೋ ಭಾಗವಹಿಸಿದ್ದೆನೆಂದು ಹೇಳಿ ಸಮ ಜಾಯಿಷಿ ನೀಡಿರುತ್ತಾರೆ.  ಅದರಲ್ಲಿ ಸುಳ್ಳೇನೂ ಇರುವುದಿಲ್ಲ. ಆದರೆ,ಅವರೆಲ್ಲರಿಗೂ  ಹೇಳಿದಂತೆ ಎಲ್ಲೂ ಅವರು ಹೆಚ್ಚು ಹೊತ್ತು ಕಾಲ ಕಳೆದಿರುವುದಿಲ್ಲ. ನಿಜವಾಗಿ ಹೇಳ ಬೇಕೆಂದರೆ, ಎಲ್ಲರ ಎದುರು ಹಾಜರಿ ಹಾಕಿದರೂ ತಮ್ಮ ಇರುವಿಕೆಯನ್ನು ಸಾಬೀತುಪಡಿಸಿದರೂ ಕೊನೆಗೆ ಏಕಾಂಗಿಯಾಗಿ ಸಂಜೆಯಾದರೆ  ಒಂದು ನಿರ್ಜನ ಪ್ರದೇಶದಲ್ಲಿ ಕುಳಿತು ಇಳಿಜಾರುವ ಹೊತ್ತನ್ನೋ  ಅಥವಾ   ಆಗತಾನೇ ಮೂಡುವ ಚುಕ್ಕೆಯನ್ನೋ ನೋಡುತ್ತಾ  ನಿಂತಿರುತ್ತಾರೆ.  ಹೆಚ್ಚೆಂದರೆ ಅಭ್ಯಾಸವಿದ್ದವರು  ಕತ್ತಲಾ ಗುತ್ತಲೇ   ಒಂದೆರಡು ಪೆಗ್ಗು ಸಿಗುವ ಮಂದ ಬೆಳಕಲ್ಲಿ  ಕಾಲ ಕಳೆದಿರುತ್ತಾರೆ. ಹಗಲಾದರೆ ಗದ್ದಲವಿಲ್ಲದ ಜಾಗದಲ್ಲಿ, ದೊಡ್ಡ ಮರದ ನೆರಳಲ್ಲಿ ಸಿಗರೇಟು ಸುಡುತ್ತಾ  ಸಿನೆಮಾ ಥೀಯೇಟರ್ ನಲ್ಲೋ ಕಾಲ  ತಳ್ಳಿರು ತ್ತಾರೆ.   ಏಕಾಂಗಿಯಾಗಿ ತಾವೇ  ಹುಡುಕಿ ಬಂದ ಜಾಗದಲ್ಲಿ ಒಂಟಿಗಾಲಲ್ಲಿ ನಿಂತು ಇನ್ನಷ್ಟು ಹೊತ್ತು ಅಲ್ಲಿದ್ದರೆ  ಚೆನ್ನಾಗಿತ್ತು, ಇವರೊಂದಿಗೆ ಇನ್ನಷ್ಟು ಹರಟಿ ಖುಷಿಪಡಬಹುದಿತ್ತು ಅಂತೆಲ್ಲಾ ಪೇಚಾಡುತ್ತಾರೆ."  

*****  

ನನ್ನಂಥವರ  ಒಂದು ವರ್ಗವೂ ಇರುತ್ತದೆ.  ಇರುತ್ತಾ? ಸುಮಾರು ಜನ ಬುದ್ಧಿವಂತರಿರೋ ಊರು ಕೇರಿಗಳಲ್ಲಿ ಯೋಜನಾಬದ್ಧತೆ ಇನ್ನು ರೂಢಿ ಮಾಡಿಕೊಳ್ಳಬೇಕಿರುವ  ಸಾಕಷ್ಟು ಸಂಖ್ಯೆಯ  ನನ್ನಂಥವರು ಸಾಮಾನ್ಯ.  ಯಾವುದನ್ನು ಓದಬೇಕು? ಯಾವ ಕೆಲಸಕ್ಕೆ ಕೈ ಹಾಕಬೇಕು?  ಗೊತ್ತು ಗುರಿ ಏನು ಎತ್ತ ಉಹೂಂ….  ಪೆಟ್ಟು ತಿನ್ನುವವರೆಗೂ ಯೋಚನೆಯನ್ನೇ ಮಾಡುವುದಿಲ್ಲ. ಕೈ ತಪ್ಪಿದ ಅವಕಾಶ ಎದುರಾಗಲೇ ಕೈ ಕೈ ಹಿಚುಕಿ ಕೊಳ್ಳುತ್ತೇವೆ.  ಖುಷ್ ಖುಷಿಯಾಗಿ ಕಾಲ ಕಳೆಯುವಂಥ ಸಂಧರ್ಭಗಳಿರುತ್ತವೆ.  ಕೆಲ ಒಳ್ಳೆ ಹವ್ಯಾಸಗಳನ್ನು ಅಂದರೆ, ವಾದ್ಯ ಕಲಿಕೆ, ಬರವಣಿಗೆ, ಓದು, ಫೋಟೋಗ್ರಫಿ, ಗೆಳೆಯರೊಂದಿಗೆ ತುಸು ಹರಟೆ, ಮನೆ, ಹೆಂಡತಿ ಮಕ್ಕಳ ಅಟ್ಯಾಚ್ ಮೆಂಟ್ ಇದ್ದಲ್ಲಿ ಅವರೊಟ್ಟಿಗೆ ಸುತ್ತಾಟ, ವಾಕಿಂಗ್ ಹೀಗೆ ರೂಢಿ ಮಾಡಿಕೊಂಡಿದ್ದಲ್ಲಿ ಅದರಲ್ಲೂ ತೃಪ್ತಿಯನ್ನು ಪಡೆಯಬಹುದು.  ಹುಯ್ದಾಡುವ ಮನಸ್ಸಿದ್ದರೆ ಅದು ಸಾಧ್ಯವೇ ಇಲ್ಲ. 
 
ಮೊನ್ನೆ ಭಾನುವಾರ ನನ್ನದೇ ಓರಗೆಯ 1992ರ  ಹತ್ತನೇ ತರಗತಿ ಬ್ಯಾಚ್ ನ ಆಗಿನ ಹುಡುಗ, ಹುಡುಗಿ ಯರು, ಕ್ಷಮಿಸಿ; ಈಗಿನ ಪುರುಷರು ಮತ್ತು ಮಹಿಳೆಯರು ಇಪ್ಪತ್ತೆರಡು ವರ್ಷದ ನಂತರ ತಮ್ಮ ಕುಟುಂಬ, ಮಕ್ಕಳು  ಸಮೇತ  ಗೆಟ್ ಟುಗೆದರ್ ಪಾರ್ಟಿಗೆ ಒಂದು ಕಡೆ ಸೇರಿದ್ದರು.  ಅದರಲ್ಲಿ ನನ್ನ ಆತ್ಮೀಯನೊಬ್ಬನ  ಒತ್ತಾಯದ ಮೇರೆಗೆ ಮತ್ತು ನನ್ನ ಹೆಂಡತಿಯ ತವರು ಅದೇ ಆದ್ದರಿಂದ  ಬೆಳಿಗ್ಗೆ ಕೊಪ್ಪಳದಿಂದ ಹೊಸಪೇಟೆಗೆ ಬೈಕ್ ನಲ್ಲಿ ನನ್ನ ಹೆಂಡತಿ, ಮಗ ಅಭಿ ಜೊತೆ ಹೊರಟೆ.  ಅವರನ್ನು ತವರು ಮನೆಯಲ್ಲಿ ಬಿಟ್ಟು  ಹಿರಿಯೂರಿಂದ  ಬಂದ  ಆತ್ಮೀಯ ಪ್ರಕಾಶ್ , ನಾನು  ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಹೊರಟೆವು.  ಅಲ್ಲಿ ಒಬ್ಬೊಬ್ಬರ ಅನಿಸಿಕೆ, ಅವರವರ ಮಕ್ಕಳಿಗೆ ಮನೋರಂಜನೆ, ಆಟ, ಎಲ್ಲಾ ನಡೀತಿತ್ತು.  ನಾನು ಅವರೊಟ್ಟಿಗೆ ಅವರದೇ ಶಾಲೆಯಲ್ಲಿ ಓದಿದದವನಲ್ಲ; ಅವರದೇ ಓರಗೆಯವ ಬೇರೆ ಶಾಲೆಯಲ್ಲಿ ಓದಿದವನು.   ಪರಿಚಯವಿದ್ದ ಕೆಲ ಆತ್ಮೀಯ ಗೆಳೆಯ ಅಶೋಕ, ಜಯಪ್ರಕಾಶ್, ಉದಯ್, ಹರ್ಷ, ಸುಭಾಶ್, ಆನಂದ್ ಬಾಬು, ಇತರರನ್ನು  ಮತ್ತು ಆಗಿನ ಹುಡುಗಿ ಯರು- ಈಗಿನ ತುಂಬು ಕುಟುಂಬದೊಂದಿಗೆ ಬಂದ ಹೆಂಗಸರನ್ನು ಮಾತಾಡಿಸಿದೆ.  ಆಗಲೇ ನನ್ನ ಅಂಗಾಲಲ್ಲಿ ಕೆರತ ಶುರುವಾಯಿತು.  ಕೂಡಲೇ ಕೊರಳಲ್ಲಿ ನೇತಾಕಿಕೊಂಡ ಕ್ಯಾಮೆರಾ ಜೋಪಾನ ಮಾಡುತ್ತಾ  "ಈಗ್ಬಂದೆ" ಅಂದು ಜಾಗ ಖಾಲಿ ಮಾಡಿದೆ.   ಇನ್ನೊಬ್ಬ ಗೆಳೆಯ ಫೋನ್ ಮಾಡಿ  ಕೇಳಿದ.   ಅಗಲೂ ಅದೇ ಕತೆ "ಇಲ್ಲಾ ಮಾರಾಯಾ, ನಮ್ ಅಳಿಯಂಗೆ ಕನ್ಯಾ ನೋಡ್ಬೇಕು, ಅದ್ಕೆ ಹೊರಟು ಬಂದೆ, ನೀವ್ ಎಂಜಾಯ್ ಮಾಡಿ, ನಾನ್ ಸಂಜೆ ಬಂದ್ ಜಾಯಿನ್ ಆಗ್ತೀನಿ"ಅಂದೆ.  
  
ಹಂಗೂ ಹಿಂಗೂ ಮಧ್ಯಾಹ್ನ ಮೂರರ ತನಕ ಕಾಲ ಕಳೆದೆ.  ಮತ್ತೆ ಗೆಳೆಯನ ಫೋನ್; "ಬಾರ್ಲೇ ಊಟಕ್ಕೆ".  ನನ್ನ ಉತ್ತರ ಸಿದ್ಧವಿತ್ತು; "ನಮ್ ಬೀಗರ ಮನೇಲಿ ಊಟ ಆಯ್ತಪ್ಪ ನೀವು ಬಾರ್ಸಿ"  ಅಂದೆ.  ನಿಜ ಹೇಳ ಬೇಕೆಂದರೆ, ನಾನು ಬೀಗರ ಮನೆಯಲ್ಲೂ ಇರಲಿಲ್ಲ ಬೇರೆಲ್ಲೂ ಹೋಗಿರಲಿಲ್ಲ. ನನಗೆ ಇಷ್ಟದ ತಣ್ಣನೆ ಜಾಗದಲ್ಲಿ ಕುಳಿತಿದ್ದೆ.  ಮೂರೂವರೆ ಗಂಟೆಗೆ ಸ್ನೇಹಿತರು, ಛಾಯಾಗ್ರಾಹಕರಾದ ಶಿವಶಂಕರ್ ಬಣಗಾರ್ ಅವರ ಕರೆ ಬಂದಿತು.  ಕೂಡಲೇ ಬೈಕ್ ತಗೊಂಡು ಅವರೊಟ್ಟಿಗೆ ಪಕ್ಷಿ ವೀಕ್ಷಣೆಗೆಂದು ಹಂಪಿ ಕಡೆ ಹೊರಟೆ. ಹವ್ಯಾಸಿ ಛಾಯಾಗ್ರಾಹಕರಾದ ಮಾರುತಿ ಪೂಜಾರಿ, ನೆಕ್ಕಂಟಿ ವಿಕ್ರಾಂತ್ ಇವರೂ ಬಂದಿದ್ದರು.  ಕೆಲವು ಪಕ್ಷಿಗಳ ಛಾಯಾ ಚಿತ್ರಗಳನ್ನು ತೆಗೆದೆವು. 
  
ಸಂಜೆ ಐದೂವರೆ ಸುಮಾರಿಗೆ ಜೊತೆಗಿದ್ದ ಮಾರುತಿ ಪೂಜಾರಿ, ನೆಕ್ಕಂಟಿ  ವಿಕ್ರಾಂತ್ ಇವರು ನಮಗಿಂತ  ಬೈಕಲ್ಲಿ ಸ್ವಲ್ಪ ಮುಂದಿದ್ದರು. ನಾನು, ಬಣಗಾರ್ ನನ್ನ ಬೈಕಲ್ಲಿ  ಹಿಂದೆ. "ಸಾಆಆಆಆಆಆಆಆಆರ್,  ಚಿರತೆ ಕಂಡಿದೆ, ಬೇಗ್ ಬನ್ನಿ……… "  ಬಣಗಾರರಿಗೆ ಕರೆ ಬಂದಿತ್ತು. ವಿಕ್ರಾಂತ್, ಮಾರುತಿ ಚಕಚಕನೆ ಚಿರತೆಯ  ಒಂದೆರಡು ಫೋಟೋ ಕ್ಲಿಕ್ಕಿಸಿದ್ದಾರೆ.  ಕೆಲ ದಿನಗಳಿಂದ ಹಂಪಿ ಸುತ್ತ ಮುತ್ತ ಚಿರತೆ ಕುಟುಂಬ ಸಮೇತ ತಿರುಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು.   ಈಗ ಮತ್ತೆ ಕಾಣಿಸಿಕೊಂಡಿದೆ.  ನನ್ನ ಜೊತೆಗಿದ್ದವರಿಗೆಲ್ಲಾ ಸ್ವತಂತ್ರ ವಾಗಿ ಬೆಟ್ಟ ಗುಡ್ಡದಲ್ಲಿ ತಿರುಗುವ ಚಿರತೆಯನ್ನು ಲೈವ್ ಆಗಿ ಚಿತ್ರ ಸೆರೆ ಹಿಡಿವ ಕಾತುರ.  ನನಗಿದು ಹೊಸ ಅನುಭವ.  ಸರಿ, ಆ ಸ್ಪಾಟ್ ಗೆ ಹೋಗಿ ಗಾಡಿ ನಿಲ್ಲಿಸುವ ಹೊತ್ತಿಗೆ ಮೆಲ್ಲಗೆ ಚಿರತೆ ಬೆಟ್ಟವಿಳಿಯಿತು.  ಕೆಲ ಹೊತ್ತು ಕಾದೆವು,  ಚಿತ್ರ ಸೆರೆಗೆ ಚಿರತೆ ಸಿಗಲಿಲ್ಲ.  ಇನ್ನೇನು ಹಂಪಿ ಕಡೆಗೆ ಹೊರಡಬೇಕು, ಮತ್ತೆ ನನ್ನ ಕಾಲಲ್ಲಿ ಕೆರೆತ.   ಚಿರತೆ ಮರೆತೇ ಹೋಯಿತು. ಬೆಳಿಗ್ಗೆ ಜೊತೆಗೆ ಕರೆದೊಯ್ದಿದ್ದ ಹೆಂಡತಿ, ಮಗನನ್ನು ಮರಳಿ ಕೊಪ್ಪಳಕ್ಕೆ ಬಸ್ಸು ಹತ್ತಿಸುವುದು ಜ್ಞಾಪಕವಾಗಿ  ಬಣಗಾರರನ್ನು ಬಿಟ್ಟು  ಒಬ್ಬನೇ ಹೊಸಪೇಟೆ ಕಡೆ ಹೊರಟೆ.  ಅದಕ್ಕೂ ಮುಂಚೆ "ನಾನ್ ಬರೋದು ತಡವಾದ್ರೆ ನನ್ನ ದಾರಿ ಕಾಯದೇ ಬಸ್ಸಲ್ಲಿ ಹೊರಡಿ" ಅಂತ ನನ್ನ ಹೆಂಡತಿಗೆ  ಹೇಳಿದ್ದು ಚಿರತೆ ಗದ್ದಲದಲ್ಲಿ ಮರೆತೇ ಹೋಗಿತ್ತು.  ದಾರಿ ಮಧ್ಯೆ ಕರೆ ಮಾಡಿ ಕೇಳಿದಾಗಲೇ ಗೊತ್ತಾಗಿದ್ದು.   ಸಂಕಟ ಪಡುತ್ತಾ  ಚಿರತೆ ಕಾಣುವವರೆಗೂ ಇದ್ದು  ನಾನೂ ಫೋಟೋ  ತೆಗಿಬಹುದಿತ್ತಲ್ವಾ?  ಅನ್ನಿಸಿತು. ಅಷ್ಟೊತ್ತಿಗೆ ಜೊತೆಗಿದ್ದ ಗೆಳೆಯರು ಮತ್ತೆ ಕಾಣಿಸಿದ  ಚಿರತೆಯನ್ನು ಲೈವ್ ಆಗಿ ನೋಡಿ ಫೋಟೋ  ಕ್ಲಿಕ್ಕಿಸುವಲ್ಲಿ ಯಶಸ್ವಿ ಆಗಿದ್ದರು.    
 
ನನ್ನ ಸ್ನೇಹಿತ ಹೇಳಿದ ಪ್ರಸಂಗಕ್ಕೂ ನನ್ನ ಅನುಭವಕ್ಕೂ ಯಾಕೋ ಹೋಲಿಕೆ ಇದೆಯಲ್ಲಾ ಅನ್ನಿಸ್ತು  ಛೇ, ಯಾಕಿಂಗಾಗುತ್ತೋ…….

****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಅಲ್ಲಿರಲಾಗಲಿ​ಲ್ಲ ಇನ್ನೆಲ್ಲಿಗೂ ಹೋಗಲಿಲ್ಲ: ಅಮರ್ ದೀಪ್ ಪಿ.ಎಸ್.

  1. ನೆಂಟರ ಮನೆಯಲ್ಲಿ ಟವೆಲ್-ಬನಿಯನ್ ಬಿಟ್ಟುಬರುವ ವರ್ಗವೂ ಇದೆ.

  2. ಸ್ವಾಮಿ, ಎಂಥಾ ವಿಪರ್ಯಾಸ ನೋಡಿ, ನನ್ನದೂ ಸಹ ಇದೇ ಕಥೆ ಕಣ್ರೀ

Leave a Reply

Your email address will not be published.