ಬೆಂಗಳೂರಿನ ವಿಶ್ವರಂಗ ತಂಡವು ಕೋರೊನಾ ನಂತರದಲ್ಲಿ “ಅಲೈದೇವ್ರು” ಎಂಬ ಮಹತ್ವದ ನಾಟಕವನ್ನು ಆಯ್ದುಕೊಂಡಿದ್ದು, ರವಿವಾರ ಸಂಜೆ ೪.೩೦ಕ್ಕೆ ಮತ್ತು ೭.೩೦ಕ್ಕೆ ಬಸವೇಶ್ವರ ಇಂಜಿನಿಯರ್ಸ್ ಅಕಾಡೆಮಿಯ ಕೆಇಎ ಪ್ರಭಾತ ರಂಗಮಂದಿರದಲ್ಲಿ ಎರಡು ಪ್ರದರ್ಶನ ನೀಡುತ್ತಿದೆ.
ಹನುಮಂತ ಹಾಲಿಗೇರಿಯವರ ರಚನೆಯ ಈ ನಾಟಕವನ್ನು ಸಿದ್ದರಾಮ ಕೊಪ್ಪರ ನಿರ್ದೇಶಿಸುತ್ತಿದ್ದಾರೆ. ಈ ನಾಟಕದಲ್ಲಿ ೩೫ಕ್ಕೂ ಹೆಚ್ಚು ಕಲಾವಿದರು ನಟಿಸುತ್ತಿರುವುದು ವಿಶೇಷ. ಉತ್ತರ ಕರ್ನಾಟಕ ಪ್ರತಿಯೊಂದು ಹಳ್ಳಿಯಲ್ಲೂ ನಡೆಯುವ ಜನಪದರ ಹಬ್ಬ ಅಲೈಹಬ್ಬದ ಕುರಿತತಾದ ಕಥಾ ಹಂದರವನ್ನು ಈ ನಾಟಕ ಹೊಂದಿದೆ. ಈ ಹಬ್ಬದಲ್ಲಿ ನಡೆಯುವ ಜನಪದ ಅಲೈ ಕುಣ್ತ ಮತ್ತು ಅಲೈಪದಗಳನ್ನು ಅಭ್ಯಾಸ ಮಾಡುವುದಕ್ಕಾಗಿಯೇ ಕಲಾವಿದರು ಎರಡು ತಿಂಗಳು ಸಮಯ ವ್ಯಯಿಸಿದ್ದಾರೆ.