ಸಮುದ್ರದದಂಡೆಗೆ ಬೌಂಡರಿ ಗೆರೆಗಳಂತೆ ಕಾಣುವ ಕಬ್ಬಿಣದ ರೈಲು ಹಳಿಗಳು!. ಅದರ ಮೇಲೆ ಎಡೆಬಿಡದೆ ಅತ್ತಿಂದಿತ್ತ ಓಡಾಡುವ ಕೊಂಕಣ ರೈಲುಗಳು. ಆ ಹಳಿಯ ದಾರಿಯಲ್ಲೊಂದು ಅಲಪಿ ಎಂಬ ಕುಟ್ಟ ನಾಡು!. ರೈಲಿನಲ್ಲಿ ಪಯಣಿಸುವಾಗ ಒಂದು ದಿಕ್ಕಿನಲ್ಲಿ ಮೀನು ಹಿಡಿಯುವ ಬೋಟ್ ಗಳು ಕಣ್ಣಿಗೆ ಕಂಡರೆ, ಇನ್ನೊಂದು ದಿಕ್ಕಿನಲ್ಲಿ ವೈಭವದ ಹವಾನಿಯಂತ್ರಿತ ನಯನ ಮನೋಹರ ಹೌಸ್ ಬೋಟ್ ಗಳ ಇರುವೆ ಸಾಲು!
ಹೆಂಡತಿ, ಮಗಳೊಂದಿಗೆ ಕುಟುಂಬ ಸಮೇತ ದೇವರ ನಾಡಿನ ಪ್ರಸಿದ್ಧ ಹೌಸ್ ಬೋಟ್ ಪ್ರವಾಸಿ ತಾಣವಾದ ಅಲಪಿ ಊರಿಗೆ ತೆರಳಲು ನಿರ್ಧರಿಸಿದೆವು. ಹುಬ್ಬಳ್ಳಿಯಿಂದ ಕುಮಟಾಕ್ಕೆರಾತ್ರಿ 11ಗಂಟೆಗೆ ಬಂದಿಳಿದೆವು. ಕುಮಟಾದಿಂದ ಮಧ್ಯರಾತ್ರಿ 12. 30ಕ್ಕೆ ನೇತ್ರಾವತಿ ಎಕ್ಸ್ ಪ್ರೆಸ್ ಅಲಪಿಗೆ ತೆರಳುತ್ತದೆ. ಮಧ್ಯಾಹ್ನ 3. 30ಕ್ಕೆ ಅಲಪಿಯನ್ನು ತಲುಪಿದೆವು. ಅಲಪಿ ರೈಲು ನಿಲ್ದಾಣದ ಫ್ಲ್ಯಾಟ್ ಫಾರಂ ಒಂದರಲ್ಲಿ ರೇಲ್ ವೀವ್ ಅಂತ ಹೋಟೆಲ್ ಇದೆ. ಅಲ್ಲಿ 800ರೂ ಕೊಟ್ಟು ಆ ದಿನ ಅಲ್ಲಿ ವಾಸವಿದ್ದೆವು. ಸಂಜೆ ಆಟೋರಿಕ್ಷಾದಲ್ಲಿ ಅಲಪಿಯ ಬೀಚ್ ಗೆ ತೆರಳಿದೆವು. ಅದು ರೈಲು ನಿಲ್ದಾಣದಿಂದ 1ಕಿ. ಮೀ ದೂರವಿದೆ. ತುಂಬಾ ಹತ್ತಿರ ವಿದೆ. ಬೆಳಗಿನ ಜಾವ ಹೋಟೆಲ್ ಚೆಕ್ಔಟ್ ಮಾಡಿ ನೇರವಾಗಿ ಆಟೋರಿಕ್ಷಾದಲ್ಲಿ ನೆಹರೂ ಟ್ರೋಫಿ ಹೌಸ್ ಬೋಟ್ ಲಂಗರು ಸ್ಥಳಕ್ಕೆ ಬಂದೆವು. ಇಲ್ಲಿಂದ ಎಲ್ಲ ಹೌಸ್ ಬೋಟ್ ಗಳು ಪಯಣವನ್ನುಆರಂಭಿಸುತ್ತವೆ. ಇದಕ್ಕೆ ಫಿನಿಶಿಂಗ್ ಪಾಯಿಂಟ್ ಎನ್ನುತ್ತಾರೆ. ಮೊದಲೇ ಟ್ರಿಪ್ ಅದ್ವೈಸರ್ ಹಾಗೂ ಮೇಕ್ ಮೈ ಟ್ರಿಪ್ ನಲ್ಲಿ ಟಾಪ್ರ್ಯಾಂಕಿಂಗ್ ಇದ್ದ ಅಲಪಿಯ ನಂಬರಗ ಒನ್ ಪೌರ್ಣಮಿ ಹೌಸ್ ಬೋಟ್ ನಲ್ಲಿ ತಂಗಲು ಮುಂಗಡವಾಗಿ ಕಾಯ್ದಿರಿಸಿದ್ದೆವು. ಸೀಸನ್ ಇರದಿದ್ದರೆ 8ಸಾವಿರ ಹಾಗೂ ಸೀಸನ್ ಇದ್ದಾಗ ಕನಿಷ್ಠ 12ಸಾವಿರ ತೆಗೆದುಕೊಳ್ಳುತ್ತಾರೆ. ನಾವು ಸೀಸನ್ ಇರಲಾರದಾಗ ಜೂನ್ ತಿಂಗಳಲ್ಲಿ ಹೋಗಿದ್ದೆವು.
ಪ್ರವಾಸದಲ್ಲೇ ಅರ್ಧಜೀವ ಸವೆಸಿದ್ದ ನಾನು ಹಿಂದಿನ ಪ್ರವಾಸಗಳಿಂದ ಕೆಲವು ಉಳಿಪೆಟ್ಟನ್ನು ತಿಂದಿದ್ದೆನು. ಸಕಾರಣವಾಗಿ ಪ್ರವಾಸಿ ಸ್ಥಳದಲ್ಲಿ ಯಾವಾಗಲೂ ಅತೀಕಡಿಮೆ ವೆಚ್ಚದ ವಸತಿ ಗೃಹವನ್ನು ಕಾಯ್ದಿರಿಸಬೇಕೆಂಬ ಖಬರು ಇತ್ತು. ಯಾಕೆಂದರೆ ಪ್ರವಾಸದ ಸಮಯದಲ್ಲಿ ವಸತಿ ನಿಲಯದಲ್ಲಿ ಅತಿಕಡಿಮೆ ಅವಧಿ ವಾಸವಿರುತ್ತೇವೆಂಬ ಅರಿವು ಇದ್ದರೆ ಒಳ್ಳೆಯದು. ಅಲಪಿಯ ರೈಲು ನಿಲ್ದಾಣದಲ್ಲಿದ್ದ ರೇಲ್ ವೀವ್ ಎಂಬ ವಸತಿಗೃಹದಲ್ಲಿ ಅತೀಕಡಿಮೆ ಖರ್ಚಿನಲ್ಲಿ ರಾತ್ರಿ ಕುಟುಂಬ ಸಮೇತ ತಂಗಿದ್ದು ಒಂದು ಒಳ್ಳೆಯ ನಡೆ ಹಾಗೂ ಬುದ್ಧಿವಂತಿಕೆ. ಮುಸ್ಸಂಜೆಯಲಿ ರೈಲು ನಿಲ್ದಾಣದ ಎದುರಿಗಿದ್ದ ಅಲಪಿ ಬೀಚ್ ನಲ್ಲಿ ಹೆಂಡತಿ ಹಾಗೂ ಮಗಳೊಂದಿಗೆ ಆಟವಾಡಲು ಅನುಕೂಲವಾಯಿತು ಹಾಗೆಯೇ ರೈಲಿನಿಂದ ಇಳಿದ ತಕ್ಷಣ ಲಗೇಜುಗಳ ಭಾರವನ್ನುಕಡಿಮೆ ಮಾಡ್ಕೊಂಡೆವು. ಎಲ್ಲಕ್ಕಿಂತ ಹೆಚ್ಚಾಗಿ ರೇಲ್ ವೀವ್ ಫ್ಲ್ಯಾಟ್ ಫಾರಂ ಒಂದರಲ್ಲಿ ಇರೋದ್ರಿಂದ ಅತಿ ಸುರಕ್ಷಿತ ಸ್ಥಳವಾಗಿದೆ. ಹಾಗೂ ಹೋಟೆಲ್ ಅತ್ಯುತ್ತಮವಾಗಿದೆ.
ಬೆಳಗ್ಗೆ ನೆಹರುಟ್ರೋಫಿ ಫಿನಿಶಿಂಗ್ ಪಾಯಿಂಟ್ಕಡೆಗೆ ಬಂದಾಗ 4500 ಕ್ಕೂ ಹೆಚ್ಚು ಹೌಸ್ ಬೋಟ್ ಗಳ ಪಯಣ ಈ ಸ್ಥಳದಿಂದಲೇ ಆರಂಭ ಹಾಗೂ ಅಂತ್ಯ!.
ಪೌರ್ಣಮಿ ಹೌಸ್ ಬೋಟ್ ಸಿಬ್ಬಂದಿಯು ನಮ್ಮಕುಟುಂಬವನ್ನು ಸ್ವಾಗತಿಸಿದರು. ಮೂರು ಜನರ ಸಿಬ್ಬಂದಿಯು ಹೌಸ್ ಬೋಟ್ ನ್ನು ಸುಪರ್ದಿಗೆ ತೆಗೆದುಕೊಂಡು ಪ್ರಯಾಣ ಶುರು ಮಾಡಿದರು. ಹೌಸ್ ಬೋಟ್ ಮನೆಯಿಂದ ವೆಲ್ಕಮ್ ಡ್ರಿಂಕ್ಸ್ ನ್ನು ನಗುತ್ತಲೇ ಸಿಬ್ಬಂದಿಯೊಬ್ಬರು ನಮ್ಮ ಕುಟುಂಬಕ್ಕೆ ನೀಡಿದರು. ರೊಕ್ಕ ಭಾಳ ಕೊಟ್ಟೀವಿ ಅಂದ ಮೇಲೆ ತಿನ್ನಲು ಹಾಗೂ ಕುಡಿಯಲು ಏನು ಕೊಟ್ಟರೂ ಇಲ್ಲವೆನ್ನಬಾರದು ಎಂಬ ಚೌಕಾಶಿ ನಿರ್ಧಾರವನ್ನು ಪ್ರವಾಸಕ್ಕೂ ಮುನ್ನವೇ ನಾವೆಲ್ಲ ಬಹುದೊಡ್ಡ ನಿರ್ಣಯವನ್ನು ತೆಗೆದುಕೊಂಡಿದ್ದೆವು.
ಆರಂಭದ ಅರ್ಧ ಗಂಟೆಗಳ ಕಾಲ ಒಂದೇ ಸಮನೆ ಹೌಸ್ ಬೋಟ್, ನೀರಿನ ಹೊಳೆಯಲ್ಲಿ ಸಾಗುತ್ತಿತ್ತು. ನನ್ನ ಹೆಂಡತಿಯು, “ರೀ, ಸಂಜೆತನಕ ಸುಮ್ಮನೆ ನೀರಿನಲ್ಲಿ ತೇಲುವ ಹೌಸ್ ಬೋಟ್ ಗೆ 15ಸಾವಿರ ಕೊಡೋದು ಭಾಳ ಆಯ್ತುರೀ”, ಈ ಮಾತಿಗೆ ನಾನು ಮೆಲ್ಲನೆ ಹೆಂಡತಿಯ ಹೆಗಲ ಮೇಲೆ ಕೈ ಹಾಕಿ, “ಮೇಡಂಅವರೇ, ಈ ಊರಿಗೆ FHjUÉVenice of the east ಎಂದು ಕರೆಯುತ್ತಾರೆ, ದೂರದಯುರೋಪ್ ನಗರವನ್ನು ನಾವೆಂದೂ ನೋಡುತ್ತೇವೆಯೋ ಇಲ್ಲವೋ ಗೊತ್ತಿಲ್ಲ, ಆ ವಿನೈಸ್ ಎಂಬ ನಗರದಲ್ಲಿ ಕಡ್ಡಿಪೊಟ್ಟಣ ಬೇಕೆಂದರೂ ಬೋಟ್ ನಲ್ಲಿ ಪ್ರಯಾಣಿಸಬೇಕು, ವಿದೇಶಿಯರು ಈಗಲೂ ಇಲ್ಲಿಗೆ ಭೇಟಿ ನೀಡುತ್ತಾರೆಂದರೆ ಯುರೋಪ್ ದೇಶದ ನಗರಕ್ಕಿಂತಲೂ ಈ ದೇವರ ನಾಡು ಅತ್ಯದ್ಭುತ, ನನಗೆ ತುಂಬಾ ವಿಶ್ವಾಸವಿದೆ, ನಾಳೆಗೆ ನಿನ್ನ ಪ್ರತಿಕ್ರಿಯೆ ಬೇರೇನೇ ಆಗಿರುತ್ತೆ”, ಅಷ್ಟರಲ್ಲಿ ಅಡುಗೆ ಮಾಡುವ ಸಿಬ್ಬಂದಿಯು ಅನಾನಸ್ ಹಣ್ಣನ್ನು ಕಂಪ್ಯೂಟರ್ ಸಾಯಿನ್ಸ್ ನಲ್ಲಿ ಓದುವ multi dimensional array ತರಹ ತುಂಡರಿಸಿದ್ದನು. ಮುಳ್ಳಿನ ತಟ್ಟೆಯಲ್ಲಿ ಸಾಲು ಸಾಲಾಗಿಟ್ಟ ಹಣ್ಣಿನಚೌಕದ ಗುಳಿಗೆಗಳಂತೆ ಕಾಣುತ್ತಿದ್ದವು. ಕಂಠಮಠಅನಾನಸ್ ಹಣ್ಣನ್ನುತಿಂದು ನಾಲಿಗೆಗೆ ಬರೆ ಹಾಕಿಸಿಕೊಂಡರೂ ಮತ್ತೊಂದುಅನಾನಸ್ ಹಣ್ಣು ಬೇಕೆಂದು ನಾನು ಅಡುಗೆ ಸಿಬ್ಬಂದಿಗೆ ವಿನಂತಿಸಿಕೊಂಡೆನು. 15ಸಾವಿರ ರೂಪಾಯಿ ಹೇಗಾದ್ರು ಕೊಟ್ಟಿದ್ದು ಸಾರ್ಥಕವಾಗಬೇಕೆಂದು ಲೆಕ್ಕ ಹಾಕಿದ್ದೆನು!. ಮತ್ತೊಂದು ಅನಾನಸ್ ಹಣ್ಣು ಸವಿದ ಮೇಲೆ ಅಡುಗೆ ಸಿಬ್ಬಂದಿಯು ಇನ್ನೊಂದು ಹೆಚ್ಚಲಾರದ ಅನಾನಸ್ ಹಣ್ಣನ್ನು ಲಿವಿಂಗ್ ಏರಿಯಾದಲ್ಲಿದ್ದ ಡೈನಿಂಗ್ ಟೇಬಲ್ ಮೇಲಿಟ್ಟರು. ನಿಮಗೆ ಯಾವಾಗ ಬೇಕು ಹೇಳಿ ಅವಾಗ ಅನಾನಸ್ ನೀಡುತ್ತೇವೆಂದಾಗ ನಾನು ನಗುತ್ತಲೇ ಪೆಚ್ಚುಮೋರೆ ಹಾಕಿದೆನು. ನಾವು ಬರಗೆಟ್ಟು ಬಂದೀವಿ, ನಿಮ್ಮ ಕೆಲಸ ಆತಿಥ್ಯ ಮಾಡುವುದಸ್ಟೇ ಅನ್ನೋದನ್ನು ಕಣ್ಣಿನಲ್ಲೇ ಸಿಬ್ಬಂದಿಗೆ ಉತ್ತರಿಸಿದ್ದರು.
ಮಧ್ಯಾಹ್ನವಾಯಿತು. ಊಟಕ್ಕೆ ಒಂದುಕಡೆ ಒಂದು ಗಂಟೆಗಳ ಕಾಲ ಬೋಟ್ ನ್ನು ಲಂಗರು ಹಾಕಿದರು. ಅಲಪಿಯ ವಿಶೇಷ ಮತ್ಸ್ಯ ಖಾದ್ಯವಾದ ಕರಿಮೀನು ಫ್ರೈಯನ್ನು ಅಡುಗೆ ಸಿಬ್ಬಂದಿಯು ತಂದಿಟ್ಟರು. ಈ ಸಲ ನಾಲ್ಕು ಕರಿಮೀನುಗಳನ್ನು ಡೈನಿಂಗ್ಟೇಬಲ್ ಮೇಲೆ ಇಟ್ಟಾಗ ನನಗೆ ನಗು ಬಂತು ಹಾಗೂ ಮುಜುಗುರವಾಯಿತು. ನನ್ನ ಹೆಂಡತಿ ಹಾಗೂ ಮಗಳು ಅಪ್ಪಟ ಸಸ್ಯಾಹಾರಿಗಳು. ಆ ವಿಷಯವನ್ನು ಮೊದಲೇ ತಿಳಿಯಪಡಿಸಿದ್ದರೂ ನಾಲ್ಕು ಕರಿಮೀನು ಫ್ರೈಇಟ್ಟಿದ್ದನ್ನು ನೋಡಿದ್ರೆ , “ನನ್ನನ್ನುತಿಂದುತೇಗಿ ಹೋಗು” ಎಂದು ಕರಿಮೀನುಗಳು ಹೇಳಿದಂತಿತ್ತು.
ಊಟವಾದ ಮೇಲೆ ಬೋಟ್ ನಾವಿಕನು ಸನ್ನೆಯಿಂದ ನನ್ನನ್ನುಕರೆದು, “ಸರ್, ಟಾಡಿ ಬೇಕಾ?ತೆಂಗಿನಮರದಿಂದ ನೇರವಾಗಿ ಭಟ್ಟಿ ಇಳಿಸಿರುತ್ತಾರೆ, ನಿಮ್ಮಕಡೆ ನೀರಾ ಅನ್ನುತ್ತಾರಲ್ಲ, ಅದನ್ನು ನೀವು ಕುಡಿಯುತ್ತೀರೆಂದರೆ ತಂದುಕೊಡಲೇ?”, ನಾನು ಮೆಲ್ಲನೆ, “ನೀವು ಪುಕ್ಕಟೆ ಕೊಡುತ್ತೀರೆಂದು ಎಲ್ಲವನ್ನುಕುಡಿಯುವ ಹೊಟ್ಟೆಬಾಕರಲ್ಲ, ಸ್ವಲ್ಪ ಮಜ್ಜಿಗೆ ನೀಡಿರಿ, ಅದನ್ನು ಕುಡಿದರೆ ದೊಡ್ಡ ನಶೆ ಏರುತ್ತದೆ”, ಹೀಗೆಂದಾಗ ಸಿಬ್ಬಂದಿಗಳ ಊಹೆಯು ತಲೆಕೆಳಗಾಯಿತು. ನನ್ನ ಸ್ಥಿತಪ್ರಜ್ಞೆಗೆ ಮಾರುಹೋದ ಅಡುಗೆ ಸಿಬ್ಬಂದಿಯು ಮಜ್ಜಿಗೆಯನ್ನು ಕುಟುಂಬಕ್ಕೆ ನೀಡಿದರು.
ನಿಧಾನವಾಗಿ ಬಿಸಿಲೇರಿತು. ನಾನು ನಾವಿಕನ ಜಾಗದಲ್ಲಿ ಕುಳಿತು ಬೋಟ್ ನ್ನು ನಡೆಸಿದೆನು. ಎದುರಿಗೆ ದೂರದಲ್ಲಿ ಚಿಕ್ಕ ಬೋಟ್ ನಲ್ಲಿ ಐಸ್ಕ್ರೀಮ್ ಮಾರುವವನು ಕಾಲುವೆಯಲ್ಲಿ ಪೊಂ, ಪೊಂ ಅಂತ ತುತ್ತೂರಿ ಊದುತ್ತಿದ್ದನು. ನನ್ನ ಮಗಳು ಐಸ್ಕ್ರೀಂ ಮಾರುವವನಿಗೆ ಕೈಸನ್ನೇ ಮಾಡಿದಳು. ಅಷ್ಟೇ ವೇಗದಲ್ಲಿ ಬಂದ ಐಸ್ಕ್ರೀಂ ಮಾರುವವನು ತನ್ನ ಬೋಟ್ ನ್ನು ಚಲಿಸುತ್ತಿದ್ದ ಹೌಸ್ ಬೋಟ್ ಗೆ ಹಗ್ಗದಿಂದ ಕಟ್ಟಿಹಾಕಿದನು. ಐಸ್ಕ್ರೀಂ ನೀಡಿದನು ಎರಡೂ ಬೋಟ್ ಗಳು ಚಲಿಸುತ್ತಿದ್ದವು. ನಾನು ಹಣವನ್ನು ಪಾವತಿಸಿದ ನಂತರ ಐಸ್ಕ್ರೀಂ ಮಾರುವವನು ಹೌಸ್ ಬೋಟ್ ಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದನು. ಚಿಕ್ಕ ಮೋಟಾರ್ ಬೋಟ್ ನಲ್ಲಿಕಣ್ಣು ಮಿಟುಕಿಸುವಸ್ಟರಲ್ಲಿ ಐಸ್ಕ್ರೀಂ ಮಾರುವವನು ಕಾಣೆಯಾದನು.
ಸಂಜೆಯಾಗುತ್ತಲೇ ಪ್ರಾಧ್ಯಾಪಕರು ಮೊಬೈಲ್ ನಲ್ಲಿದ್ದ ಕನ್ನಡ ಹಾಡುಗಳನ್ನು ಹೌಸ್ ಬೋಟ್ ನಲ್ಲಿದ್ದ ಸೌಂಡ್ ಸಿಸ್ಟಮ್ ನಲ್ಲಿ ಕೇಳುವ ಹಾಗೆ ವ್ಯವಸ್ಥೆ ಮಾಡಿಕೊಂಡರು. *”ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ”, * ಈ ಹಾಡನ್ನು ಕೇಳಿದ ಸಿಬ್ಬಂದಿಯು ಸಂತಸಪಟ್ಟರು.
ನಿಧಾನವಾಗಿ ಇಳಿಸಂಜೆಯಾಯಿತು. ಹೌಸ್ ಬೋಟ್ ನ್ನು ಲಂಗರು ಹಾಕುವ ಸಮಯವಾಯಿತು. ಕಾಲುವೆಯದಂಡೆಯಲ್ಲಿದ್ದ ಒಂದುತೋಟದ ಮನೆಯ ಹತ್ತಿರ ಲಂಗರು ಹಾಕಲಾಯಿತು. ಆತೋಟದ ಮನೆಯಿಂದ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡು ಇಡೀ ಬೋಟ್ ನ್ನು ಹವಾನಿಯಂತ್ರಿತವಾಗಿಸಲಾಯಿತು. ಲಿವಿಂಗ್ ಏರಿಯಾಕ್ಕೆ ಸೊಳ್ಳೆ ಪರದೆ ಹಾಕಲಾಯಿತು. ರಾತ್ರಿಊಟವನ್ನು ಅಡುಗೆ ಸಿಬ್ಬಂದಿಯು ಬಡಿಸಿದರು. ನನ್ನ ಕುಟುಂಬವು ಹವಾನಿಯಂತ್ರಿತ ಬೆಡ್ ರೂಮ್ ಕಡೆಗೆ ನಡೆದರು. ರಾತ್ರಿಯಾಗುತ್ತಿದ್ದಂತೆ ಹೌಸ್ ಬೋಟ್ ನೀರಿನಲ್ಲಿ ಅಲುಗಾಡುತ್ತಿತ್ತು. ಹೊಳೆಯ ನೀರು ಶಬ್ದ ಮಾಡುತ್ತಿತ್ತು.
ನಾನು ಬೆಡ್ರೂಮ್ ನಲ್ಲಿದ್ದ ರೀಡಿಂಗ್ ಹಾಲ್ ನಲ್ಲಿ ಕಥೆಯೊಂದನ್ನು ಬರೆಯಲು ಶುರು ಮಾಡಿದರು. ಅದು ಅವರ ಕನಸಾಗಿತ್ತು. ಆದರೂ ಹೆಂಡತಿಗೆ ಅರ್ಧಗಂಟೆಯಲ್ಲಿ ಒಂದು ಕಥೆಯನ್ನು ಬರೆದು, ಇನ್ನೊಂದು ಇಡೀ ಇರುಳ ಕಥೆಯನ್ನು ನಿನ್ನೊಂದಿಗೆ ಬರೆಯುವೆ ಎಂದು ಕಿಚಾಯಿಸಿದಾಗ ಹೆಂಡತಿಯು ನಸುನಕ್ಕಳು. ಆದರೆ ಸುಸ್ತಾಗಿದ್ದ ನನ್ನ ಮಗಳು ಯಾವ ಕಥೆಯನ್ನು ಬರೆಯಿಸಿಕೊಡಲಿಲ್ಲ. ಇಬ್ಬರನ್ನು ಹಿಗ್ಗಾಮುಗ್ಗಾ ಕಾಡಿದಳು.
ಇರುಳು ಸರಿದು ಬೆಳಗಾಯಿತು. ಒಂದೇ ಹೌಸ್ ಬೋಟ್. ಎತ್ತ ನೋಡಿದರೂ ನೀರು. ಬೆಳಗ್ಗೆ 7 ಗಂಟೆಗೆ ಹೌಸ್ ಬೋಟ್ ನ್ನು ನಾವಿಕನು ಚಾಲನೆ ಮಾಡಿದನು. ಆಗ ನನ್ನ ಕುಟುಂಬವು ಹಲ್ಲುಜ್ಜುತ್ತಿತ್ತು. ಅಡುಗೆ ಸಿಬ್ಬಂದಿಯು ಲಿವಿಂಗ್ ಏರಿಯಾದ ಡೈನಿಂಗ್ ಟೇಬಲ್ ಮೇಲೆ ಬಿಸಿಬಿಸಿ ಕಾಫಿ ಇಟ್ಟಿದ್ದರು. ಕಾಫಿಯನ್ನು ಹೀರುತ್ತಲೇ ನನ್ನ ಕುಟುಂಬವು ಕಾಲುವೆ ನೀರಿನ ತರಹ ಶಾಂತ ವಾಗಿತ್ತು. ಯಾವುದೋ ಗ್ರಹದ ಗೃಹದಲ್ಲಿದ್ದೇವೆಂಬ ಭಾವ ಇನ್ನಿಲ್ಲದೆ ಕಾಡುತ್ತಿತ್ತು. ಕಾಫಿ ಕುಡಿದಾದ ಮೇಲೆ ನನ್ನ ಕುಟುಂಬವು ಸ್ನಾನ ಮಾಡಿದ ನಂತರ ದೇವರಿಗೆ ನಮಿಸಿ ಡೈನಿಂಗ್ ಟೇಬಲ್ ಮೇಲಿಟ್ಟ ಇಡ್ಲಿ, ವಡಾ ಸಾಂಬಾರ ಸವಿದೆವು. ಅದಲ್ಲದೆ ಬ್ರೆಡ್, ಜಾಮ್ ಬಟರ್ ಗಳನ್ನು ಮಧ್ಯಾಹ್ನಕ್ಕೆ ಊಟ ಮಾಡಬಾರದೆಂದು ಜಿದ್ದಿಗೆ ಬಿದ್ದು ತಿಂದು ತೇಗಿದೆವು.
ಬೆಳಗ್ಗೆ 9ಗಂಟೆ ಆಯಿತು. ನೆಹರುಟ್ರೋಫಿ ಫಿನಿಶಿಂಗ್ ಪಾಯಿಂಟ್ ನ್ನು ಹೌಸ್ ಬೋಟ್ ತಲುಪಿತು. ಸಿಬ್ಬಂದಿ ನೀಡಿದ ಫೀಡ್ ಬ್ಯಾಕ್ ಫಾರ್ಮನಲ್ಲಿ ಎಲ್ಲದಕ್ಕೂ ಬೆಂಕಿ ಅಂತ ಅತ್ಯುತ್ತಮ ಅಂಕಗಳನ್ನು ನೀಡಿದೆವು. ರುಚಿಯಾಗಿ ಊಟ ಬಡಿಸಿದ ಹಾಗೂ ಸುರಕ್ಷಿತವಾಗಿ ಸುತ್ತಾಡಿಸಿದ ಇಬ್ಬರು ನಾವಿಕರಿಗೆ ತಲಾ 200ರೂ ಗಳನ್ನು ಪ್ರೀತಿಯಿಂದ ನೀಡಿದೆವು. ಸಿಬ್ಬಂದಿಯು ನಸುನಗುತ್ತಲೇ, “ಸರ್, ನೀವು ತಿನ್ನಲು ಕೊಟ್ಟಿದ್ದೆಲ್ಲವನ್ನು ಕತ್ತರಿಸುತ್ತಿದ್ದನ್ನು ನೋಡಿ, ನೀವು ಮಹಾ ಜಿಪುಣರು ಅಂತ ಅಂದುಕೊಂಡಿದ್ದೆವು, ಆದರೆ ನಿಮ್ಮ ಮನಸ್ಸು ವಿಶಾಲ ಹೃದಯವಿದೆ”, ಹೀಗೆಂದಾಗ , “ನಾವು ಕರ್ನಾಟಕದವರು! ನೋಡೋಕೆ ಜವಾರಿ!ಆದ್ರೆ ಎಲ್ಲಿ ಹೋದರೂ ನಮ್ಮದೇ ಹವಾ ರೀ!”, ಖುಷಿಯಿಂದಲೇ ನಾನು ಹೇಳಿದಾಗ ಅಲ್ಲಿಂದ ನಿರ್ಗಮಿಸಿದೆವು.
ತಲುಪುವಮಾರ್ಗ: ವಿಮಾನದಲ್ಲಿ ಕೊಚ್ಚಿ ತಲುಪಿ ಅಲ್ಲಿಂದ ನೇರವಾಗಿ ಅಲಪಿಗೆ ಟ್ಯಾಕ್ಸಿ ಮುಖಾಂತರ ತಲುಪಬಹುದು.
ರೈಲುಮಾರ್ಗ: ಹುಬ್ಬಳ್ಳಿಯಿಂದ ಕುಮಟಾ ಬಸ್ ನಲ್ಲಿ ತಲುಪಿ ಅಲ್ಲಿಂದ ನೇರವಾಗಿ ಅಲಪಿಗೆ ರೈಲುಗಳಿವೆ. ಕಾರವಾರ ದಿಂದ ರಾಜಧಾನಿ ಎಕ್ಸ್ ಪ್ರೆಸ್ ಇದೆ, ಕುಮಟಾ ದಿಂದ ನೇತ್ರಾವತಿ ಎಕ್ಸ್ ಪ್ರೆಸ್ ಅಲಪಿಗೆ ನೇರವಾಗಿ ರೈಲಿದೆ.
ಬೆಂಗಳೂರಿನಿಂದ ನೇರವಾಗಿ ವೋಲ್ವೋ ಬಸ್ ಇದೆ ಹಾಗು ಎರ್ನಾಕುಲಂತನಕ ರೈಲುಗಳಿವೆ ಅಲ್ಲಿಂದ ಅಲಪಿಗೆ ರೈಲು ಹಾಗೂ ಬಸ್ ಗಳಿವೆ.
ಲಾಸ್ಟ್ ಪಂಚ್: ದೇವರ ನಾಡಿಗೆ ದೇವರುಗಳು ಹೋಗುತ್ತವೆ, ಸ್ವಲ್ಪಕನ್ನಡ ದೇವರುಗಳು ಸ್ವರ್ಗ ನೋಡಲು ಜಾಸ್ತಿನೇ ಅಲ್ಲಿಗೆ ತೆರಳುತ್ತವೆ!?
-ಭಾರ್ಗವ ಎಚ್ ಕೆ