ಅರೆಬೆಂದ ತರಕಾರಿ, ಅಡ್ಡಗೋಡೆಯ ಮೇಲಿಟ್ಟಂತೆ ಅರ್ಧ ಪೂರ್ತಿ ಮಾಡಿದ ಮಾತು, ಒಂದೇ ಹೃದಯವೆನ್ನುವಂತಿದ್ದಾಗ ದೂರಾದ ಎರಡು ಅರ್ಧಗಳು, ಅರ್ಧಾಂಗಿ ದೂರಾಗಿ ವಿರಹವೇದನೆಯಿಂದ ಬಳಲುತ್ತಿರೋ ಉಳಿದರ್ಧ.. ಹೀಗೆ ಅರ್ಧವೆನ್ನೋದು ಕೊಡೋ ವೇದನೆ ಅಷ್ಟಿಷ್ಟಲ್ಲ. ಅರೆಬರೆದ ಕವನವೋ, ಕತೆಯೋ ಮುಗಿಸಲಾಗದಿದ್ದರೆ ನನ್ನನ್ನು ಶುರುವಾದರೂ ಯಾಕೆ ಮಾಡಿದೆಯೋ ಎನ್ನುವಾಗ ಆಗೋ ನರಳಾಟವೂ ಕಮ್ಮಿಯಲ್ಲ , ಅರೆಕ್ಷಣದಲ್ಲಿ ಒಲಿಂಪಿಕ್ ಪದಕ ತಪ್ಪಿದಾಕೆ, ಅರೆಕ್ಷಣ ಮೈಮರೆತಿದ್ದೆ ಜೀವನವೇ ಹಾಳಾಯ್ತು ಅನ್ನೋ ವ್ಯಕ್ತಿ, ಅರೆಕ್ಷಣ ನಿದ್ರೆ ತೂಕಡಿಸಿತ್ತಷ್ಟೇ.. ಎಚ್ಚೆತ್ತುಕೊಳ್ಳೋದ್ರಲ್ಲಿ ಅನಾಹುತ ಘಟಿಸಿಹೋಗಿತ್ತು ಅನ್ನೋ ಡ್ರೈವರುಗಳು ಆ ಅರೆಕ್ಷಣಕ್ಕೆ ಜೀವನವಿಡೀ ಪರಿತಪಿಸೋ ಪರಿ ಯಾರಿಗೂ ಬೇಡ. ಹಲ್ಲಿ, ಹಾವು, ನೊಣ, ಸೊಳ್ಳೆಯಂತ ಜೀವಿಗಳ ಕೊಲ್ಲಹೋಗಿ ಅವು ಸಾಯದೇ, ಅರ್ಧ ಜೀವವಾಗಿದ್ದಾಗಿನ ನರಳಾಟ ನೋಡಲಾಗದು. ಜೀವಚ್ಚವವಾಗಿ ಅರ್ಧ ಬದುಕಿ ಅರ್ಧ ಸತ್ತಂತಿರೋ ಜೀವಗಳಿಗೆ “ದಯಾಮರಣ” ಕೊಡಬೇಕೆನ್ನೋ ವಾದ-ವಿವಾದಗಳು ಅತ್ತ ನಿರಾಕರಣೆಯನ್ನು ಕಾಣದೆ ಇತ್ತ ಸಮ್ಮತಿಯನ್ನೂ ಪಡೆಯದೇ ಅತ್ತ ಹೋಗದೇ, ಇತ್ತಲೂ ಮರಳದ ಅರ್ಧದಾರಿಯಲ್ಲಿರುವುದು ಬೇರೆ ಮಾತಾದರೂ ಈ ಅರ್ಧವೆನ್ನೋದರ ನೋವು ಅರ್ಥವಾಗದವರ ಕಣ್ಣಲ್ಲೂ ನೀರಿಳಿಸುತ್ತದೆ. ಆದರೆ ಈ ಅರ್ಧವೆನ್ನೋದು ನೋವನ್ನೇ ತರುತ್ತೆ ಅನ್ನೋದೂ ಅರ್ಧ ಸತ್ಯವಷ್ಟೇ.ಅರ್ಧ ರಾತ್ರಿಗೇ ನಮ್ಮ ದೇಶಕ್ಕೆ ಸಿಕ್ಕ ಸ್ವಾಂತಂತ್ರ್ಯ, ಮಧ್ಯ ರಾತ್ರಿಯಾದ ಮೇಲೆಯೇ ಪುಸ್ತಕ ತೆಗೆಯೋ ನೈಟೌಟುಗಳು.. ಅರ್ಧ ಮಸಾಲೆಪುರಿ, ಬೈಟು ಕಾಫಿಗಳು ಹೀಗೆ ಅರ್ಧವೆನ್ನೋದು ವಿದ್ಯಾರ್ಥಿ ಜೀವನದಲ್ಲಿ ಕೊಟ್ಟ ಖುಷಿ ಮರೆಯೋದೇಗೆ ? ಅರ್ಧ ರೂಪಾಯಿಯ ಐಸ್ ಕ್ಯಾಂಡಿ, ಸೈಕಲ್ ರೈಡುಗಳು ಕೊಟ್ಟ ಮಜಾ.. ವಾಹ್. ಅದೆಲ್ಲಾ ಹೌದು. ಇದ್ದಕ್ಕಿದ್ದಂತೆ ಈ ಅರ್ಧದ ಬಗೆಗಿನ ಮಾತೇಕೆ ಅಂದಿರಾ ? ಇದಕ್ಕೆ ನಿನ್ನೆಯ ಬೆಳಗ್ಗೆ ಹನ್ನೆರಡರ ಸುಮಾರಿಗೆ, ಹನ್ನೆರಡನ್ನುವುದು ಬೆಳಗ್ಗೆಯೋ ಮಧ್ಯಾಹ್ನವೋ ಅನ್ನೋ ಮಾತು ಸದ್ಯಕ್ಕೆ ಆಚೆಗಿಟ್ಟು ಅರ್ಧದಿನ ಕಳೆದಾಗ ಅಂದಿಟ್ಟುಕೊಳ್ಳಬಹುದಾಗ ನಡೆದ ಘಟನೆಯೇ ಸ್ಪೂರ್ತಿ.
ಬೆಂಗಳೂರಲ್ಲಿ ಅರ್ಧಕ್ಕರ್ದ ದಾರಿ ತಪ್ಪಿಸೋರೇ ಇರ್ತಾರೆ ಅಂತ ಇಲ್ಲಿಗೆ ಬಂದ ಎರಡು ವರ್ಷಗಳಲ್ಲಿ ಮೂಡಿದ ಭಾವವಾಗಿತ್ತು. ಗೌತಮ ಬುದ್ದ ಕಾಲೇಜು, ಅಂಬೇಡ್ಕರು ಇಂಜಿನಿಯರಿಂಗ್ ಕಾಲೇಜಿನ ಹತ್ರ ಹೋಗೋಕೆ ಯಾವ ಬಸ್ಸು ಅಂದವನಿಗೆ ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಬಸ್ಸು ಹತ್ತಿಸಿದ ಮಂದಿ.. ತದ್ವಿರುದ್ದ ದಿಕ್ಕಿನಲ್ಲಿರೋ ಅಲ್ಲಿ ಹೋಗಿ ಇಳಿದಾಗ ಬೆಂಗಳೂರಲ್ಲಿ ಎಪ್ಪತ್ತು ಕಾಲೇಜಿದೆ. ಅಡ್ರೆಸ್ ತಿಳಿಯದೇ ಎಲ್ಲೆಲ್ಲಿಗೋ ಹೋಗೋದು ನಿನ್ನ ಕರ್ಮವೆಂದು ಬಯ್ಸಿಕೊಳ್ಳಬೇಕಾದ ಪರಿಸ್ಥಿತಿ. ದೊಮ್ಮಲೂರಿನ ಪಕ್ಕದ ಕಮಾಂಡ್ ಆಸ್ಪತ್ರೆಗೆ ಹೋದಾಗ ಮೆಜೆಸ್ಟಿಕ್ಕಿಗೆ ವಾಪಾಸ್ ಹೋಗೋಕೆ ಬಸ್ಟಾಂಡೆಲ್ಲಿ ಅಂದವನಿಗೆ ಅಲ್ಲೇ ಎಡಪಕ್ಕದಲ್ಲಿದ್ದ ಬಸ್ಟಾಂಡ್ ತೋರಿಸದೇ ಒಂದೂವರೆ ಕಿಲೋಮೀಟರ್ ದೂರದಲ್ಲಿ ಬಲಬದಿಗಿದ್ದ ಬಸ್ಟಾಂಡಿಗೆ ದಾರಿ ತೋರಿದವರು! , ಹೆ.ಎಸ್. ಆರ್ ಲೇಔಟಿಂದ ಮೆಜೆಸ್ಟಿಕ್ಕಿಗೆ ಹೋಗಬೇಕಾದವನಿಗೆ ಸಿಲ್ಕ್ ಬೋರ್ಡಿಗೆ ಬಸ್ಸಿನ ದಾರಿ ತೋರೋ ಬದಲು ಎರಡೂವರೆ ಕಿಲೋಮೀಟರ್ ಇನ್ಯಾವುದೋ ಒಳದಾರಿಯಲ್ಲಿ ನಡೆಸಿದ ಪುಣ್ಯಾತ್ಮರು,,, ಹೀಗೆ ಇಲ್ಲಿ ಪ್ರತೀ ಬಾರಿ ಬಸ್ಸುಹತ್ತೋ ಮೊದ್ಲು ಗೂಗಲ್ಲಲ್ಲಿ ಅಡ್ರೆಸ್ ಹುಡ್ಕಿ ಹೋಗಬೇಕಾಗುವುದನ್ನು ನೆನಪಿಸೋರು ಹಲವು ಮಂದಿ. ಹಲವು ಆಸೆಗಳ ಹೊತ್ತು ಬೆಳಗ್ಗೆಯ ತಿಂಡಿ ತಿಂದು ಮನೆ ಬಿಟ್ಟವನು ಮಧ್ಯಾಹ್ನದ ಊಟಕ್ಕೂ ಗತಿಯಿಲ್ಲದೇ ಎಲ್ಲೆಲ್ಲೋ ಅಲೆದಲೆದು ಸಂಜೆಯ ಹೊತ್ತಿಗೆ ಹೇಗೋ ಅಡ್ರೆಸ್ ಹುಡುಕಿ ಮೆಜೆಸ್ಟಿಕ್ಕಿಗೆ ಬಂದ ದಿನಗಳು, ಕನಸುಗಳೂ ಬೇಡ, ಇಲ್ಲಿನ ಅಲೆಮಾರಿತನವೂ ಬೇಡ, ಮರಳಿಬಿಡೋಣ ಎನಿಸಿದ್ದ ದಿನಗಳೆಷ್ಟೋ. ದಾರಿಯಲ್ಲಿ ಹೋಗ್ತಿದ್ದವರನ್ನ ಕೇಳಿದರೆ ಗೊತ್ತಿಲ್ಲ ಅನ್ನೋ ಉತ್ತರವೇ ಖಾಯಂಮ್ಮಾಗಿ ಇಲ್ಲಿ ಪೋಲಿಸರನ್ನ, ಆಟೋದವ್ರನ್ನ ಮಾತ್ರ ಅಡ್ರೆಸ್ ಕೇಳ್ಬೇಕು. ಇನ್ಯಾರನ್ನೂ ಅಡ್ರೆಸ್ಸೇ ಕೇಳಬಾರದೆನಿಸಿಬಿಟ್ಟಿತ್ತು. ಆದರೆ ಇದೇ ವಾಸ್ತವವನ್ನೋ ಭ್ರಮೆ ಹರಿದಿದ್ದು ನಿನ್ನೆಯ ಹನ್ನೆರಡರ ಹೊತ್ತಿಗೆ..
ಬೆಂಗಳೂರಲ್ಲಿ ಮಲ್ಲೇಶ್ವರಂ ಅಂತ ಗೂಗಲ್ಲಲ್ಲಿ ಕೊಟ್ರೆ ತಮಿಳರ ಅಡ್ಡ ಅನ್ನೋ ಹಲ ಕೊಂಡಿಗಳು ತೆರೆದುಕೊಳ್ಳುತ್ತೆ. ಆದ್ರೆ ಈ ಮಲ್ಲೇಶ್ವರಂ ಅಥವಾ ಮಲ್ಲೇಶ್ವರಕ್ಕೆ ಆ ಹೆಸ್ರು ಬಂದಿದ್ದು ಅಲ್ಲಿರೋ ೧೭ನೇ ಶತಮಾನದ ಕಾಡುಮಲ್ಲಿಕಾರ್ಜುನ ಅಥವಾ ಕಾಡುಮಲ್ಲೇಶ್ವರ ದೇವಸ್ಥಾನದಿಂದ ಅಂತ ಅನೇಕರಿಗೆ ತಿಳಿದಿರಲಾರದು. ಅಲ್ಲಿನ ಸಾಯಿ ಭವನ, ನಂದಿ ತೀರ್ಥ, ಗಂಗಮ್ಮ, ವೆಂಕಟೇಶ, ಈಶ್ವರ ಹೀಗೆ ಹಲವು ದೇಗುಲಗಳಿರೋ ದೇಗುಲ ಬೀದಿಯ ದರ್ಶನ ಮುಗಿಸಿ ಮಲ್ಲೇಶ್ವರಂನ ಫ್ಲೈ ಓವರ್ ಬಳಿ ನಿಂತಿದ್ದೆವು.ಮುಂದೆ ಮಂತ್ರಿ ಮಾಲೆಂಬೋ ಗಮ್ಯ ಮನದಲ್ಲಿತ್ತು. ಆದ್ರೆ ಹೇಗೆ ಸಾಗಬೇಕೆಂಬೋ ದಾರಿ ಗೊತ್ತಿರಲಿಲ್ಲ. ಫ್ಲೈ ಓವರಿನ ಎಡಕ್ಕೆ ಹೋದರೆ ಬಸ್ಟಾಂಡೋ, ಬಲಕ್ಕೆ ಹೋದರೆ ಬಸ್ಟಾಂಡೋ ಎಂಬ ಮಾತಲ್ಲಿದ್ದೆವು. ಸೀದಾ ನಡೆದರೆ ಮಂತ್ರಿ ಮಾಲೇ. ಆದರೆ ಅದು ಎಷ್ಟೂ ದೂರವೋ ಗೊತ್ತಿಲ್ಲ. ಅದಲ್ಲದೇ ಒನ್ ವೇ ಬೇರೆ. ಸೀದಾ ಬಸ್ಸುಗಳೂ ಹೋಗಲ್ಲ. ಸರಿ ಅಲ್ಲಿದ್ದ ಆಟೋದವ್ರ ಬಳಿ ಕೇಳಬೇಕು ಅಂತ ಮಾತಾಡ್ತಿದ್ವಿ. ಮಂತ್ರಿ ಮಾಲ್ ಇಲ್ಲೇ ಹತ್ರ ಅಪ್ಪ. ಒಂದು ನಾನೂರು ಮೀಟರ್ ನಡೆದ್ರೆ ಸಿಗುತ್ತೆ ಅನ್ನೋ ಮಾತು ಕೇಳಿಬಂತು ಹಿಂದಿಂದ. ಬೆಂಗಳೂರಲ್ಲಿ ಕನ್ನಡ ! ಅದೂ ಅನಪೇಕ್ಷಿತವಾಗಿ.. ಕನ್ನಡಿಗರೊಂದಿಗೂ ಮೊದಲ ಬಾರಿ ಇಂಗ್ಲೀಷಿನಲ್ಲಿ ಶುರು ಮಾಡಿ ಆಮೇಲೆ ಕನ್ನಡದವರು ಅಂತ ಅರಿತು ಕನ್ನಡಕ್ಕೆ ಎಳೆಯಬೇಕಾದ ಪರಿಸ್ಥಿತಿ ಬಂದಿರೂ ಸಂದರ್ಭದಲ್ಲಿ ಕೇಳಿದ ಕನ್ನಡ ಖುಷಿಯನ್ನೂ, ಅಚ್ಚರಿಯನ್ನೂ ತಂದಿತು. ಕನ್ನಡಾಂಬೆಯೇ ನಮ್ಮ ಮೇಲೆ ಕರುಣೆ ತೋರಿ ಮೂರ್ತಿವೆತ್ತು ಬಂದಿದ್ದಾಳೋ, ಅಥವಾ ಆಶರೀರವಾಣಿಯೋ ಎಂದೂ ಒಮ್ಮೆ ಅನುಮಾನ ಮೂಡಿತು. ಹಿಂದೆ ತಿರುಗಿ ನೋಡಿದರೆ ಅದು ಆಶರೀರವಾಣಿಯಲ್ಲ ಮಹಿಳಾ ವಾಣಿ. ಇಬ್ಬರು ನೀಳವೇಣಿ ತಾಯಂದಿರು ನಮ್ಮ ಹಿಂದೇ ಬರುತ್ತಿದ್ದರು. ಆಟೋದವ್ರಿಗೆ ಕೇಳ್ಬೇಡಿ ಅಪ್ಪಾ. ಅವ್ರು ಎಲ್ಲೆಲ್ಲೋ ಸುತ್ತಿಸಿ ಸುತ್ತಿಸಿ ಹೋಗ್ತಾರೆ. ಸೀದಾ ನಡ್ಕೊಂಡು ಹೋಗಿಬಿಡಿ. ಮಂತ್ರಿ ಮಾಲ್ ಸಿಗುತ್ತೆ ಅಂದ್ರು. ಹೂಂ ಸರಿ ಅಕ್ಕಾ, ತುಂಬಾ ಥ್ಯಾಂಕ್ಸ್ ಅಂದೆ. ಬಾಯ್ತುಂಬಾ ಧನ್ಯವಾದಗಳು ಅನ್ನದೇ ದರಿದ್ರ ಅಭ್ಯಾಸ ಬಲದಿಂದ ಥ್ಯಾಂಕ್ಸೆಂದ ನಾಲಿಗೆಗೆ ಮನಸ್ಸು ಶಪಿಸ್ತಾ ಇದ್ರೂ ಧನ್ಯವಾದಗಳು ಅಂದ್ರೆ ಇವ್ನು ಯಾವ ಲೋಕದ ಜೀವಿ ಅಂತ ನೋಡ್ತಾರೇನೋ ಅನ್ನೋ ಅಳುಕು ಕುಟುಕ್ತಾ ಇತ್ತು! ಅವರು ಹೇಳಿದಂತೆ ಹತ್ತೇ ನಿಮಿಷದಲ್ಲಿ ಮಂತ್ರಿ ಮಾಲ್ ಹತ್ರ ಇದ್ವಿ ಆಮೇಲೆ.. ಇದರೊಂದಿಗೆ ಇಲ್ಲಿ ಸಹಾಯ ಕೇಳಿದ್ರೂ ಸಹಾಯ ಮಾಡಲ್ಲ. ಸಹಾಯ ಮಾಡೋದು ಹೋಗ್ಲಿ ತಮ್ಮ ಪಕ್ಕದ ಅಪಾರ್ಟಮೆಂಟಲ್ಲಿರೋರ ಹೆರ್ಸೂ ಗೊತ್ತಿರೋಲ್ಲ ಅಂತ ಕಂಡ ಕೆಲ ಸಂಗತಿಗಳನ್ನೇ ವಾಸ್ತವವೆಂದು ಭಾವಿಸಿದ್ದ ಭ್ರಮೆ ಕರಗಿಹೋಯ್ತು. ಮಾರತ್ತಳ್ಳಿಯ ಮೂಲೆಯಲ್ಲಿ ಕನ್ನಡಕ್ಕಾಗಿ ಕಾತರಿಸುತ್ತಿರೋ ಕಿವಿ ಮಲ್ಲೇಶ್ವರದ ಕನ್ನಡ ವಾತಾವರಣದಿಂದ ಖುಷಿಯಾಗಿತ್ತು.
ಮತ್ತೆ ಮಂತ್ರಿ ಮಾಲಿಗೆ ಕಾಲಿಟ್ರೆ ಅಲ್ಲೊಂದು ನೃತ್ಯ ಕಾರ್ಯಕ್ರಮಕ್ಕೆ ಆಯ್ಕೆ(ಅದೇ ರೀ ಆಡಿಷನ್!!) ನಡೀತಾ ಇತ್ತು. ಅದು ಕನ್ನಡ ಕಾರ್ಯಕ್ರಮ ಅನ್ನೋದು ಅಲ್ಲಿದ್ದ ಫಲಕಗಳಿಂದ ಮಾತ್ರ ಗೊತ್ತಾಗಬೇಕಿತ್ತಷ್ಟೇ. ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್, ಮತ್ತೊಂದು , ಇನ್ನೊಂದು .. ಹೀಗೆ ಕನ್ನಡ ಬಿಟ್ಟು ತಮಿಳು, ತೆಲುಗು, ಹಿಂದಿ ಹೀಗೆ ಬೇರೆಲ್ಲಾ ಭಾಷೆಗಳ ಹಾಡುಗಳು, ಅದಕ್ಕೆ ಡ್ಯಾನ್ಸು!!
ಅದಕ್ಕೊಬ್ಬ ನಿರೂಪಕನ ಬದಲು ಆಂಕರ್ರು. ಹೌ ಆರ್ ಯೂ ಫೀಲಿಂಗ್ ಅಂತ ಇವನಂದ್ರೆ ಕುಣಿದು ಕುಣಿದು ಸುಸ್ತಾಗಿದ್ದವ ಒಂದೂವರೆ ನಿಮಿಷ ಇಂಗ್ಲೀಷಲ್ಲಿ ಮಾತಾಡಿದ !! ಇಂಗ್ಲೀಷ್ ಅರ್ಥವಾಗೋಲ್ಲ ಅಂತಲ್ಲ. ಈ ತರದ ಶೋನ ಡಿಸ್ಕವರಿ ಚಾನಲ್ಲವ್ರೋ, ಹಿಂದಿಯ ಜೀ ಟೀವರ್ರೋ ನಡೆಸಿದ್ರೆ ಬೇಜಾರಾಗ್ತಿರ್ಲಿಲ್ಲ. ಆದ್ರೆ ಪಕ್ಕಾ ಕನ್ನಡದ ಚಾನೆಲ್ಲೊಂದು.. ಬಿಡಿ ಆ ವಿಷಯ.ಅಲ್ಲಿ ನಿಲ್ಲೋಕಾಗದೆ ಮುಂದೆ ನಡೆದ್ವಿ. ಮತ್ತೆ ಅಂದು ಸಿಕ್ಕ ಮಹಿಳಾ ಮಣಿಗಳ ವಿಷಯಕ್ಕೆ ವಾಪಾಸ್ ಬರ್ತೀನಿ. ಯಾವೂರಪ್ಪ ಅಂದ್ರು. ಅವ್ರಿಗೂ ಆಶ್ಚರ್ಯ ಆಗಿರ್ಬೇಕು ನಮ್ಮ ನೊಡಿ. ಈ ಬೆಂಗ್ಳೂರಲ್ಲಿ ಹುಡುಗರಿಬ್ರು ನಡ್ಕೊಂಡು ಹೊರಟಿದಾರೆ ಅಂದ್ರೆ, ಅದೂ ಶೂ, ಸ್ಪೈಕು, ಕಿವಿಗೊಂದು ಇಯರ್ ಫೋನ್ ಹಾಕ್ಕೊಳದೇ ಹೊರಗೆ ಕಾಲಿಟ್ಟಿದಾರೆ ಅಂತಂದ್ರೆ ಖಂಡಿತಾ ಇವ್ರು ಇಲ್ಲಿನೋರಲ್ಲ ಅನಿಸಿಬಿಟ್ಟಿರ್ಬೇಕು ಅವ್ರಿಗೆ. ಯಾವೂರಪ್ಪ ನಿಮ್ಮದು ಅಂದ್ರು. ಬೆಂಗಳೂರು ಅನ್ನೋಕೆ ಬಾಯಿ ಬರಲಿಲ್ಲ. ಮೂಲ ಜಿಲ್ಲೆಯ ಹೆಸರೇ ಹೇಳಿದ್ವಿ. ಸದ್ಯ ನಮ್ಮೂರು ಬೆಂಗಳೂರೇ ಆಗಿದ್ರೂ ನಮ್ಮ ಮೂಲ ಊರಿನ ಹೆಸ್ರು ಹೇಳಿದ್ದು ಪೂರ್ಣ ಸುಳ್ಳೇನೂ ಆಗಿರ್ಲಿಲ್ಲ. ಪೂರ್ಣ ಸತ್ಯವೂ ಅಲ್ಲ. ಅರ್ಧ ಸತ್ಯ ಅಷ್ಟೇ.
ಅರ್ಧ ಸತ್ಯ ಅಂದಾಕ್ಷಣ ನೆನಪಿಗೆ ಬಂತು. ನಾವು ಸಣ್ಣವರಿದ್ದಾಗ ಆ ಹೆಸರಿನ ಧಾರಾವಾಹಿಯೊಂದು ಬರುತ್ತಿತ್ತು. ಧಾರಾವಾಹಿಗಳೆಂದರೆ ಮೂರು ವರ್ಷ, ಏಳೂವರೆ ವರ್ಷಗಳೆಲ್ಲಾ ಚಿಂಗಮ್ಮಿನಂತೆ ಎಳೆಯೋ ಸಂಪ್ರದಾಯವಿರದ ಆ ಕಾಲದಲ್ಲಿ ಅದು ನೂರು, ಇನ್ನೂರು ಕಂತುಗಳನ್ನ ಪೂರೈಸೋದೇ ಒಂದು ದೊಡ್ಡ ಸಂಭ್ರಮವಾಗಿತ್ತು. ಈಗ ಬರ್ತಿರೋ ಎಳೆವಾಹಿಗಳು(ವಿಪರೀತ ಎಳೆಯೋದಕ್ಕೆ ಈ ರೀತಿ ಕರೆಯೋದು ಸೂಕ್ತ ಅಂದುಕೊಂಡಿದ್ದೇನೆ) ಒಟ್ಟೊಟ್ಟಿಗೆ ಎರಡು ಮೂರನ್ನು ನೋಡಿದರೂ ಎಲ್ಲದರ ಕತೆಯನ್ನೂ ಅರ್ಥ ಮಾಡ್ಕೊಂಡು ಜೀರ್ಣಿಸಿಕೊಳ್ಳೋ ಸೂಪರ್ ಶಕ್ತಿವಂತೆಯರನ್ನಾಗಿ ನಮ್ಮ ತಾಯಿ, ತಂಗಿಯಂದಿರನ್ನು ರೂಪಿಸಿಬಿಟ್ಟಿದೆ !. ಅರ್ಧ ಗಮನ ಹೋಂ ವರ್ಕಿನ ಮೇಲೆ, ಅರ್ಧ ಕಾರ್ಟೂನಿನ ಮೇಲಿಡೋದೇ ಅಭ್ಯಾಸವಾಗಿ ಆಗಿ ಕಾರ್ಟೂನಿಲ್ಲದೇ ಹೋಂವರ್ಕೇ ಮಾಡದ ಹುಡುಗರನ್ನ ನಿರ್ಮಿಸಿ ಬಿಟ್ಟಿದೆ ! ನನಗೆ ಅಂಡರ್ಸ್ಟಾಂಡ್ ಆಗ್ತಿಲ್ಲ, ಕಂಡೆಕ್ಟರೇ ಚೇಂಚ್ ಕೊಡಿ, ಐ ಆಮ್ ಗೋಯಿಂಗ್ ಟು ಮಾಲು, ಯೂ ಕಮಿಂಗು ಅನ್ನೋ ಕನ್ನಡಿಗರ ಧಿಮಾಕುಗಳೆಲ್ಲಾ ಕನ್ನಡನ ಕೊಲ್ತಿವೆ. ಕನ್ನಡ-ಇಂಗ್ಲೀಷುಗಳ ಕಲಬೆರಕೆ ಮಾಡಿ ಕಂಗ್ಲೀಷ್ ಮಾಡ್ತಿವೆ, ಮೂಲ ಕನ್ನಡ ಸಾಯ್ತಿದೆ ಅನ್ನೋ ಮಾತು ಸತ್ಯ. ಆದರೆ ನೂರಕ್ಕೆ ನೂರರಷ್ಟಲ್ಲ. ನಿಂತ ನೀರಾಗಿರದೇ ಬಂದ ಒಳ್ಳೆಯ ಅಂಶಗಳೆಲ್ಲಾ ಬರಲಿ ಎಂದು ಎಲ್ಲವನ್ನೂ ಸೇರಿಸ್ಕೊಂಡು ಬೆಳೆದ್ರೆ ಭಾಷೆಯೂ ಬೆಳಿತಾ ಹೋಗತ್ತೆ ಅನ್ನಿಸುತ್ತೆ. ಅಂದ ಹಾಗೆ ಇದು ಈ ಅರೆಕ್ಷಣದ ಅಭಿಪ್ರಾಯವಷ್ಟೇ.. ಜ್ನಾನ ಬೆಳೆದಂತೆ, ಸತ್ಯದ ಹಲಮುಖಗಳ ತಿಳಿಯುತ್ತಾ ಹೋದಂತೆ ಇದೂ ಬದಲಾಗುತ್ತಾ ಸಾಗುತ್ತೆ. ಅಂದ ಹಾಗೆ ಎಂದಿನಂತೆ ಮೂಡೋ ಪ್ರಶ್ನೆ. ಸಂಪೂರ್ಣ ಎಂದು ಯಾವುದನ್ನೇ ನಾವು ಅಂದುಕೊಂಡರೂ ಅದೇ ಪೂರ್ಣವೇ ? ಅದನ್ನು ಬಿಟ್ಟು ಬೇರೆ ಇಲ್ಲವೇ ಎಂದು. ಪೂರ್ಣಚಂದ್ರನೆನಿಸಿರೋ ಶಶಿಯೇ ಪರಶಿವನ ತಲೆಯ ಮೇಲೆ ಅರ್ಧವಾಗಿದ್ದಾನೆ. ಹುಣ್ಣಿಮೆಯಲ್ಲಿ ಪೂರ್ಣನೆನಿಸಿದವನು ಹದಿನೈದು ದಿನಗಳಲ್ಲೇ ಕ್ಷೀಣಿಸುತ್ತಾ ಸಾಗಿ ಮಾಯವಾಗುತ್ತಾನೆ. ಮತ್ತೆ ಹದಿನೈದು ದಿನಗಳ ಕಾಲಚಕ್ರದಲ್ಲಿ ಮತ್ತೆ ಮೂಡುತ್ತಾನೆ. ನಾವು ಒಮ್ಮೆ ಮಾತ್ರ ಅವನನ್ನು ನೋಡಿ ಅದೇ ಸತ್ಯವೆನ್ನೋದಾದ್ರೆ ನಮ್ಮ ಸತ್ಯ ಯಾವ ಕಾಲಘಟ್ಟದಲ್ಲಿ ಅವನನ್ನು ನೋಡಿರುತ್ತೇವೆ ಅನ್ನೋದ್ರ ಮೇಲೆ ನಿರ್ಧರಿಸಿರುತ್ತೆ.ಅದೇ ತರಹ ಸಾರ್ವಕಾಲಿಕ ಸತ್ಯವೆನ್ನೋದು ಇದ್ಯೇ ? ಒಂದು ಕಾಲಕ್ಕೆ, ಸಮೂಹಕ್ಕೆ ಸತ್ಯವೆನಿಸಿದ್ದು ಮತ್ತೊಂದು ಕಾಲಘಟ್ಟಕ್ಕೆ ಸತ್ಯವಲ್ಲವೆನಿಸಬಹುದು. ಒಬ್ಬರಿಗೆ ಶತಸತ್ಯವೆನ್ನಿಸಿದ್ದು ಮತ್ತೊಬ್ಬರಿಗೆ ಶುದ್ದಸುಳ್ಳೆನಿಸಬಹುದು. ಬೇಸಿಗೆ ಕಾಲ ವರ್ಷಕ್ಕೆ ನಾಲ್ಕು ತಿಂಗಳು ಮಾತ್ರ ಅನ್ನೋ ಭಾರತೀಯನ ಸಾರ್ವಕಾಲಿಕ ಸತ್ಯ ಆರು ತಿಂಗಳು ಬೇಸಿಗೆ ಕಾಣೋ ನಾರ್ವೆ ವಾಸಿಗೆ ಸುಳ್ಳೆನಿಸಬಹುದು. ಅದೇ ತರ ಇಲ್ಲೂ.. ನಮ್ಮ ಅರಿವಿನ ಪರಿಧಿ ವಿಸ್ತರಿಸುತ್ತಾ ಸಾಗದಿದ್ದರೆ ನಮಗೆ ಕಂಡಿದ್ದೇ ಸತ್ಯವೆಂದುಕೊಳ್ಳುತ್ತಾ ಅರೆಸತ್ಯದ ಭ್ರಮೆಯಲ್ಲೇ ಬದುಕಿ ಅರ್ಧ ಕತ್ತಲೆಯನ್ನೇ ಬೆಳಕೆಂದುಕೊಂಡು ಬೆಳಕಿನ ಅಭಾವದಲ್ಲಿ ಬದುಕುತ್ತಿರುತ್ತೇನೆ..
ಅಂದ ಹಾಗೆ ಪಂಜುವಿಗೆ ಇನ್ನೇನು ಐವತ್ತರ ಸಂಭ್ರಮ. ಐವತ್ತು ಅನ್ನೋದಕ್ಕಿಂತ ಅರ್ಧಶತಕ ಅನ್ನೋದು ಸೂಕ್ತ ಅಂದ್ಕೋತೀನಿ. ತೆಂಡೂಲ್ಕರಿನ ಕಟ್ಟಾ ಅಭಿಮಾನಿಗಳಿಗೆ ಇದು ಇಷ್ಟವಾಗಬಹುದು, ಎಲ್ಲೆಲ್ಲೂ ಕ್ರಿಕೆಟ್ಟಿನ ಹೇರುವಿಕೆ ನಡೀತಿದೆ ಅನ್ನೋ ಕ್ರಿಕೆಟ್ ದ್ವೇಷಿಗಳಿಗೆ ಇದರ ಜೀರ್ಣಿಸುವಿಕೆ ಕಷ್ಟವೂ ಆಗಬಹುದು. ಏನೇ ಅಂದುಕೊಂಡರೂ ಉದ್ದೇಶ ಅದಲ್ಲ. ಈ ಐವತ್ತ್ತು ನೂರು ಇನ್ನೂರು ಸಾವಿರಗಳಾಗಿ ಬೆಳೆಯಲೆಂಬುದೇ ಹಾರೈಕೆ.. ಮುಗಿಸೋ ಮೊದಲು ಮೂಡಿರಬಹುದಾದ ಸಂದೇಹವನ್ನು ನಿವಾರಿಸೋ ಅರ್ಧ ಪ್ರಯತ್ನವನ್ನೂ ಮಾಡಿಬಿಡುತ್ತೇನೆ. ಏನಾಗಿದೆ ನಿನಗೆ ? ಶುರು ಮಾಡಿದ ಯಾವುದನ್ನೂ ಪೂರ್ತಿಮಾಡದೇ ಅರ್ಧಂಬರ್ಧ ಮಾಡ್ತಾ ಇದೀಯಲ್ಲ ಅಂದ್ರಾ ? ಏನ್ಮಾಡೋಣ ಹೆಸರಿಟ್ಟ ಮೇಲೆ ಅದ್ರ ದುಷ್ಪರಿಣಾಮ ಲೇಖನದ ಮೇಲೂ ಅಗ್ಬಿಟ್ಟಿದೆ. ಅಂದ ಹಾಗೆ ನಿಮ್ಮ ಓರೆ ನೋಟ, ಅರೆಗಣ್ಣು, ಅರೆ ನಗುವಾದರೂ ಇದಕ್ಕೆ ಸಿಗಲೆಂಬ ನಿರೀಕ್ಷೆಯೊಂದಿಗೆ ವಿರಮಿಸುತ್ತಿದ್ದೇನೆ..