ಅಸಂಗತವಾಗಿರುವ ಕಥೆ ಅಥವಾ ಸಿನಿಮಾಕ್ಕೆ ಅದೃಶ್ಯವಾದ ಶಕ್ತಿಯೊಂದಿದೆ. ಅಸಂಗತ ಸಾಹಿತ್ಯಕ್ಕೆ ತಂತ್ರ, ಹೆಣೆದ ಬಲೆಯಂತ ಉದ್ದೇಶಪೂರಿತ ಕಥಾವಸ್ತು, ಕಥಾವಸ್ತುವಿಗೊಂದು ಕೊನೆ, ಕೊನೆಯಾಗುವದಕ್ಕೆ ಒಂದು ತಿರುವು, ರೋಚಕತೆ, ಕೊನೆಯಾಗಿದ್ದಕ್ಕೆ ಒಂದು ನೀತಿ ಇವ್ಯಾವುದು ಇಲ್ಲ. ಬಹುತೇಕ ಸಲ ಅಸಂಗತ ಕಥಾಲೋಕದಲ್ಲಿ ನಮ್ಮ ಕಲ್ಪನೆಗೆ ನಿಲುಕಿರದ ಘಟನೆಗಳು ನಡೆಯುವದು, ಮಾತುಗಳು ಕೇಳಲ್ಪಡುವದು ಸಾಮಾನ್ಯ. ಅಸಂಗತತೆ ತನ್ನನ್ನು ತಾನು ಓದುಗ ಅಥವಾ ಕೇಳುಗ ಅಥವಾ ನೋಡುಗನ ದೃಷ್ಟಿ, ಕಲ್ಪನೆ, ತೀರ್ಮಾನಕ್ಕೆ ಒಪ್ಪಿಸಿಕೊಂಡಿರುತ್ತದೆ. ಸ್ಪಷ್ಟವಾಗಿ ಹೇಳಿರದ, ಪ್ರಕಟವಾಗಿ ಬಿಚ್ಚಿಟ್ಟಿರದ ಅರ್ಥವೊಂದು ನಮ್ಮಲ್ಲಿ ಹುಟ್ಟುವಂತೆ ಮಾಡುವದೇ ಅಸಂಗತ ಸಾಹಿತ್ಯದ ಶಕ್ತಿ ಮತ್ತು ಗುರಿ. ಅಸಂಗತ ಸಿನಿಮಾಗಳಲ್ಲಿ ಕಂಡುಬರುವ ಒಂದಕ್ಕೊಂದು ಹೊಂದಿಕೆಯಿಲ್ಲ ದ ಅಥವಾ ಘಟಿಸುವ ದೃಶ್ಯಗಳು ನಮ್ಮಲ್ಲಿ ಅಂತರ್ಗತವಾಗಿರುವ ಮೌಲ್ಯಗಳು ಮತ್ತು ಅವುಗಳ ಸರಳತೆಯ ಮೂಲಕ ಜೀವನವನ್ನು ಕಟ್ಟಿಕೊಳ್ಳುವ ಬಗೆ ಉದ್ದೀಪನಗೊಳುವಂತೆ ಮಾಡುವದೇ ಆಗಿದೆ. ಹೀಗಾಗಿ ಅಸಂಗತಗಳು ತಾರ್ಕಿಕವಾದ ಅರ್ಥಹೀನಗಳಲ್ಲ ಬದಲಾಗಿ ಅವು ಮನುಷ್ಯನ ನೆಲೆಯಿಂದ, ಮನುಷ್ಯ ಮರೆತ ಸರಳತೆಯ 'ಸಾಧ್ಯತೆ 'ಗಳು. ಇಲ್ಲದಿರುವಿಕೆ ಎಲ್ಲ ಆಧ್ಯಾತ್ಮ ತತ್ವಗಳ ಮೂಲ ಪ್ರತಿಪಾದನೆ. ಇದೇಕಾರಣದಿಂದ ಅಸಂಗತ ಸಾಹಿತ್ಯ ಅಥವಾ ಸಿನಿಮಾಗಳು ನಶ್ವರವಾದಕ್ಕೆ ಸಂಬಂಧಿಸಿದ ಹಲವಾರು ಘಟನೆಗಳನ್ನ, ಮಾತುಗಳನ್ನ ನಮ್ಮ ಮುಂದಿಡುತ್ತವೆ. ನಮ್ಮ ನಮ್ಮ ದೇಹದೊಳಗೆ ಇರುವವರು ನಾವೇ ಹೌದು ಎನ್ನುವದಕ್ಕೆ ನಮ್ಮ ಬಳಿ ಯಾವುದೇ ಪುರಾವೆ ಇಲ್ಲ. ಹೀಗಾಗಿ ನಮ್ಮ ದೇಹದೊಳಗೆ ನಾವು ಇದ್ದೇವೇ ಎಂದು ತಿಳಿಯುವದು ಹೇಗೆ ? ಅಥವಾ ನಾವು ನಮ್ಮ ದೇಹದಲ್ಲೇ ಇದ್ದೇನೆ ಎನ್ನುವ ಅನಿವಾರ್ಯವಾದ, ಎಲ್ಲ ಇಲ್ಲಗಳ ಅಡಿ ಇದೆಯೆಂಬ ನಂಬಿಕೆಯಡಿಯಲ್ಲಿ ನಾವು ಬದುಕಿದ್ದೇವೆಯೇ ? ಅಸಂಗತ ಅಥವಾ ಅಸಂಬದ್ಧ ಎನ್ನುವದು ವ್ಯಕ್ತಿಯ ಅರ್ಥ ಹುಡುಕಾಟ ಮತ್ತು ಬ್ರಹ್ಮಾಂಡದ ಅರ್ಥವಿಲ್ಲದಿರುವಿಕೆಯ ಇಲ್ಲಗಳ ನಡುವಿನ ಮೂಲಭೂತ ಅಸಾಮರಸ್ಯದಿಂದ ಉದ್ಭವಿಸಿದೆ. ಅರ್ಥಹೀನ ವಿಶ್ವದಲ್ಲಿ ಅರ್ಥ ಹುಡುಕುತ್ತಿರುವ ನಮ್ಮ ಸ್ಥಿತಿಯನ್ನು ವಿಡಂಬನೆ ಮಾಡುವ ಸಾಹಿತ್ಯ ಅಸಂಗತದ್ದು. ಅರ್ಥ ಕಾಣಿಸದ ಹಲವಷ್ಟು ತಮಾಷೆಯ ಸರಕುಗಳಾಗುವಂತೆ ಅಸಂಗತಗಳೂ ಮೇಲ್ನೋಟಕ್ಕೆ ತಮಾಷೆಯ ಪಲ್ಲಕ್ಕಿಗಳಾಗಿವೆ.
ಇವೆಲ್ಲವುಗಳಿಂದಲೇ ೧೯೭೫ ರ ವೂಡಿ ಅಲೆನ್ ನಟನೆ ಮತ್ತು ನಿರ್ದೇಶನದ 'ಲವ್ ಆಂಡ್ ಡೆತ್ ' ( ಪ್ರೀತಿ ಮತ್ತು ಮೃತ್ಯು ) ಸಿನಿಮಾ ತಮಾಷೆಯಾಚೆಗಿನ ಚಿಂತನೆ ನಮ್ಮನ್ನು ಹಚ್ಹ್ಚುವದು.
೧೯ ನೇ ಶತಮಾನದ ರಶಿಯಾದಲ್ಲಿ ಘಟಿಸುವ ಈ ಕತೆಯಲ್ಲಿ,ಬುದ್ದಿಜೀವಿ ಬೋರಿಸ್, ಸೋದರಸಂಬಂಧಿ ಸೊಂಜಾ ಮತ್ತು ಅವಳ ಬೌದ್ಧಿಕತೆ ಎರಡನ್ನು ಪ್ರೀತಿಸುತ್ತಿ ರುವದು, ಅವಳ ಬೌದ್ಧಿಕತೆಯ ಉನ್ನತ ಮಟ್ಟದಲ್ಲಿದೆ ಎನ್ನುವ ನಂಬಿಕೆಯಿಂದ.ಸೊಂಜಾ ಕೇವಲ ಬೋರಿಸ್ ನ ಬೌದ್ಧಿಕತೆಯನ್ನು ಇಷ್ಟಪಡುತ್ತಿರುತ್ತಾಳೆ ಮತ್ತು ಅವಳು ನಿಜವಾಗಿಯೂ ಪ್ರೀತಿಸುತ್ತಿರುವದು ಬೋರಿಸ್ ನ ಸಹೋದರ ಇವಾನ್ ನನ್ನು. ಆದರೆ ಇವಾನ್, ಸೊಂಜಾ ಮತ್ತು ಅವಳ ಬೌದ್ಧಿಕತೆಗೆ ಸಾಟಿಯಾಗದೇ ಇದ್ದುದರಿಂದ ಸೊಂಜಾ ಬೇರೊಬ್ಬನನ್ನು ಪ್ರೀತಿಸುವುದಾಗಿ ನಿರ್ಧರಿಸುತ್ತಾಳೆ. ಬೇರೊಬ್ಬ ಸಹ ಅವಳ ಬೌದ್ಧಿಕತೆಗೆ ಸಾಟಿಯಾಗದೇ ಇದ್ದರೆ ಮತ್ತೊಬ್ಬನನ್ನು ಮದುವೆಯಾದರೆ ಆಯಿತು ಎನ್ನುವದು ಅವಳ ವಿಚಾರ. ಈಮಧ್ಯೆ ಸೊಂಜಾ ಳನ್ನು ಪ್ರೀತಿಸಿ ಮದುವೆಯಾಗುವ ಪ್ರಯತ್ನದಲ್ಲಿರುವ ಬುದ್ದಿಜೀವಿ ಬೋರಿಸ್ ಗೆ ರಷಿಯ ಸೈನ್ಯದ ಪರವಾಗಿ ನೆಪೋಲಿಯನ್ ವಿರುದ್ಧ ನಡೆಯುವ ಯುಧ್ಧದಲ್ಲಿ ಭಾಗವಹಿಸುವ ಅನಿವಾರ್ಯತೆ ಬಂದುದರಿಂದ ಅವನ ಮದುವೆ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು ಹೌದು. ಹೀಗೆ ಸೊಂಜಾಳಿಂದ ದೂರವಾದ ಬೋರಿಸ್ ಮತ್ತೆ ಅವಳನ್ನು ಭೇಟಿಯಾಗಿ, ಮದುವೆಯಾಗಿ ಅವರಿಬ್ಬರೂ ನೆಪೋಲಿಯನ್ ನನ್ನು ಕೊಲ್ಲುವ ಸಂಚಿನಲ್ಲಿ ಭಾಗವಹಿಸುವದು ಸಿನಿಮಾದ ಕಥೆ.
ಅಸಂಗತ ಜಗತ್ತಿನ ಅದ್ಭುವ ಅನುಭವ ಕಟ್ಟಿಕೊಡುವ ಈ ಸಿನಿಮಾದ ಅಂತರಾಳ ಬೋರಿಸ್ ಪಾತ್ರದ ವೂಡಿ ಅಲೆನ್, ಸೊಂಜಾ ಪಾತ್ರಧಾರಿ ಡಿಯಾನ್ ಕೀಟನ್ ಮತ್ತು ಸಿನಿಮಾದ ಸಂಭಾಷಣೆ.
ಸೊಂಜಾ :
ಪ್ರೀತಿ ಮಾಡುವದು ಪ್ರೀತಿಯಿಂದ ಬಳಲುವದಕ್ಕಾಗಿ. ಬಳಲುವದನ್ನು ತಪ್ಪಿಸಬೇಕಾದರೆ ಪ್ರೀತಿಸಬಾರದು. ಆದರೆ ಹೀಗೆ ಮಾಡುವದರಿಂದ ನಾವು ಪ್ರೀತಿಸದಿರುವದಕ್ಕಾಗಿ ಬಳಲಬೇಕಾಗುತ್ತದೆ. ನಾವು ಸಂತೋಷವಾಗಿರಲು ಪ್ರೀತಿಸಬೇಕು. ಹಾಗಾದ್ರೆ ಸ೦ತೋಷವಾಗಿರಬೇಕಾದರೆ ಬಳಲೇಬೇಕು ಆದರೆ ಬಳಲುವದಾದರೆ ನಾವು ಸ೦ತೋಷವಾಗಿರುವದು ಹೇಗೆ ? ಆದ್ದರಿಂದ ನಾವು ಅಸ೦ತೋಷ ದಲ್ಲಿರಬೇಕು ಎಂದಾದರೆ ಪ್ರೀತಿಸಬೇಕು ಅಥವಾ ಬಳಲುವದಕ್ಕೆ ಪ್ರೀತಿಸಬೇಕು ಅಥವಾ ಅತಿಯಾಗಿ ಪ್ರೀತಿಸಿ ಅತಿಯಾಗಿ ಬಳಲಬೇಕು. ಬಹುಶ: ನಿನಗೆ ಅರ್ಥವಾಗಿರಬೇಕು ಅಲ್ಲವೇ ?
ಇನ್ನೊಂದು ಸಂಭಾಷಣೆ :
ಬೋರಿಸ್ : ಪ್ರಶ್ನೆಯಿರುವದು ನಾನು ಜೀವನದ ಬಗ್ಗೆ ಏನು ಕಲಿತಿದ್ದೇನೆ ಎಂದು ? ಕಲಿತಿದ್ದುದು ಒಂದು ಮಾತ್ರ : ಮನುಷ್ಯರು ಬುದ್ಧಿ ಮತ್ತು ದೇಹ ಎನ್ನುವ ಎರಡು ಭಾಗಗಳಾಗಿದ್ದಾರೆ. ಮನಸ್ಸು ಅತಿ ಶ್ರೇಷ್ಠವಾದ ಕಾವ್ಯ ಮತ್ತು ತತ್ವಶಾಸ್ತ್ರ ಮುಂತಾದ ಆಕಾಂಕ್ಷೆಗಳನ್ನು ಹೊಂದಿರುತ್ತದೆ ಹಾಗೂ ದೇಹ ಎಲ್ಲಾ ಮೋಜನ್ನು ಅನುಭವಿಸುತ್ತದೆ. ನಾನು ಭಾವಿಸುವ ಹಾಗೆ ಜೀವನದಲ್ಲಿ ಪ್ರಮುಖ ವಿಷಯವೆಂದರೆ ದ್ವೇಷದಲ್ಲಿ ಬದುಕುವದು ಎಂದಿಗೂ ಸಲ್ಲದು. ನೋಡೀ ಒಂದು ವೇಳೆ ದೇವರು ಎನ್ನುವನು ಇರುವದು ನಿಜವೇ ಆಗಿದ್ದರೆ ಖಂಡಿತವಾಗಿಯೂ ಅವನು ದುಷ್ಟನಾಗಿರುವದಕ್ಕೆ ಸಾಧ್ಯವಿಲ್ಲ. ನನಗೆ ಅನ್ನಿಸುವ ಹಾಗೇ ದೇವರ ಬಗ್ಗೆ ನೀವು,ಅತೀ ಕೆಟ್ಟದಾಗಿ, ಅಬ್ಬಬ್ಬ ಎಂದರೆ ದೇವರು ಮೂಲತಃ ಜೀವನದಲ್ಲಿ ಅಂಥ ಸಾಧನೆಯನ್ನೇನು ಮಾಡದಿರುವವನು ಎನ್ನಬಹುದು. ಅದೂ ಅಲ್ಲದೆ ಜೀವನದಲ್ಲಿ ಸಾವಿಗಿಂತ ಅನೇಕ ಕೆಟ್ಟ ಸಂಗತಿಗಳಿವೆ. ಅಲ್ಲ, ನೀವು ಯಾವತ್ತಾದರೂ ಒಂದು ಸಾಯಂಕಾಲವನ್ನಾದರು ಒಬ್ಬ ಜೀವವಿಮಾ ಏಜೆಂಟ್ ಜೊತೆಗೆ ಕಳೆದಿದ್ದರೆ ನಾನು ಏನು ಹೇಳುತ್ತಿರುವದು ಎಂದು ಗೊತ್ತಾಗುತ್ತದೆ. ಇಷ್ಟಕ್ಕೂ ನಾನು ಹೇಳಲಿಕ್ಕೆ ಹೊರಟಿರುವದು ಸಾವನ್ನು ಯಾವತ್ತೂ ಕೊನೆ ಎಂದು ಕೊಳ್ಳುವ ಬದಲು, ಸಾವು ಒಂದು ರೀತಿಯಲ್ಲಿ ನಮ್ಮ ಖರ್ಚುಗಳನ್ನ ಉಳಿಸುವ ಕಾರ್ಯ ಅಂದುಕೊಳ್ಳಬಹುದು ಅಲ್ವೇ? ಇನ್ನು ಪ್ರೀತಿಯ ಬಗ್ಗೆ, ಹುಹ್ ! ಹ್ಮ್ ಏನ್ ಹೇಳಬಹುದು ? ಪ್ರೀತಿ ಅನ್ನುವದು, ನೀವು ಎಷ್ಟು ಪ್ರಮಾಣದ ಲೈಂಗಿಕ ಸಂಬಂಧಗಳನ್ನ ಹೊಂದಿದಿರಿ ಎನ್ನುವ ಲೆಕ್ಕ ಅಲ್ಲ. ಗುಣಮಟ್ಟ, ಅದು ಮುಖ್ಯವಾಗುತ್ತದೆ. ಮತ್ತೊಂದೆಡೆ ಈ ಪ್ರಮಾಣ ಅನ್ನೋದು ಪ್ರತಿ ಎಂಟು ತಿಂಗಳಿಗೊಮ್ಮೆ ಕಡಿಮೆಯಾಗುತ್ತಿದ್ದರೆ, ನಾನು ಖಂಡಿತವಾಗಿಯೂ ಅದರ ಬಗ್ಗೆ ಯೋಚಿಸುತ್ತೇನೆ. ಸರಿ ! ನಾನು ಹೇಳಲಿಕ್ಕಿದ್ದುದು ಅಷ್ಟೇ, ಶುಭವಾಗಲಿ.
ಸೊಂಜಾ : ನೀವು ನನ್ನ ಉತ್ಕಟ ಪ್ರೇಮಿಗಳಾಗಿದ್ದಿರಿ.
ಬೋರಿಸ್ : ಓಹ್ ! ಧನ್ಯವಾದಗಳು ! ನಾನು ಖಂಡಿತ ಅದನ್ನು ಮೆಚ್ಚುತ್ತೇವೆ. ಆದರೆ ದಯವಿಟ್ಟು ನನ್ನನು ಕ್ಷಮಿಸು, ಈಗ ನಾನು ಸತ್ತುಹೋಗಿದ್ದೇನೆ.
ಸೊಂಜಾ : ಅಂದರೆ? ಅದು ಯಾವ ಥರ ?
ಬೋರಿಸ್ : ಯಾವ ಥರ ? ನಿನಗೆ ಟ್ರೆಸ್ಕಿ ರೆಸ್ಟೋರೆಂಟಿನ ಚಿಕನ್ ಗೊತ್ತಲ್ಲ ? ಅದು ಕೆಟ್ಟದಾಗಿರುತ್ತದೆ.
ಸಿನಿಮಾ : ಲವ್ ಆಂಡ್ ಡೆತ್ ( Love and Death)
ಭಾಷೆ : ಇಂಗ್ಲೀಶ್
ದೇಶ : ಅಮೇರಿಕ, ಫ್ರಾನ್ಸ್
ಕಥೆ ಮತ್ತು ನಿರ್ದೇಶನ : ವೂಡಿ ಅಲೆನ್
Final Cut:
ಪ್ರಖ್ಯಾತ ಹಾಸ್ಯಗಾರನೂ ಆಗಿರುವ ವೂಡಿ ಅಲೆನ್, ಡಿಯಾನ್ ಕೀಟನ್ ಬಗ್ಗೆ ಹೇಳಿರುವ ಒಂದು ಮಾತು : ನಿಜ ಜೀವನದಲ್ಲಿ ಕೀಟನ್ ದೇವರನ್ನು ನಂಬುತ್ತಾಳೆ ಹಾಗೂ ರೇಡಿಯೋ ಕೆಲಸ ಮಾಡುವದಕ್ಕೆ ಅದರೊಳಗಿನ ಪುಟ್ಟ ಪುಟ್ಟ ಮನುಷ್ಯರೇ ಕಾರಣ ಎನ್ನುವದನ್ನು ಸಹ ನಂಬುತ್ತಾಳೆ.
ಇಂತಿ,
ಸಚೇತನ
*****
Chennagide….mattashtannu buthi lekhakara bogaseyallirabahudu,munduvareyali
Dhanyavaadagalu !