ಮನಸ್ಸಿನಲ್ಲಿ ಮಂಡಿಗೆ ತಿನ್ನೋದು ಅಂತಾರಲ್ಲ ಹಾಗೆ ಮನೆ ಮಂದಿಗೆ ಗೆಳೆಯರಿಗೆ ಹೆತ್ತವರಿಗೆ ಹೇಳಲೇಬೇಕಾದುದನ್ನು ನಮ್ಮಲ್ಲಿ ಕೆಲವರು ತಾವು ಹೇಳುವುದು ಸರಿಯಿದ್ದರೂ ಹೇಗೆ ಹೇಳೋದು ಅಂತ ಇದ್ದ ಒಂದು ತಲೆ ಕೆಡಿಸಿಕೊಂಡು ಬೇಕಾಗಿದ್ದನ್ನು ಬೇಡವಾಗಿದ್ದನ್ನು ಯೋಚಿಸಿ ಇನ್ನೇನು ಪರಿಸ್ಥಿತಿ ಹದಗೆಡುತ್ತೆ ಅನ್ನೋವಾಗ ಅದೆಷ್ಟೋ ದಿನಗಳಿಂದ ತಲೆಯಲ್ಲಿಟ್ಟಕೊಂಡ ವಿಷಯವನ್ನು ಹೇಳಿದರೆ ಅವರೇನು ಅಂದುಕೊಳ್ತಾರೋ ಎಲ್ಲಿ ನೊಂದುಕೊಳ್ತಾರೋ ತನ್ನಿಂದಾಗಿ ಅವರಿಗೆ ಬೇಸರ ಆದರೆ ಸಿಟ್ಟು ಮಾಡಿಕೊಂಡರೆ ಅಂತ ತಾವೇ ಲೆಕ್ಕ ಹಾಕುತ್ತ ಕೂಡಿಸಿ ಕಳೆದು ಗುಣಿಸಿ ಇನ್ನೇನು ತಲೆ ಸಿಡಿಯುತ್ತೆ ಅನ್ನುವಾಗ ಇನ್ನು ತಡೆದುಕೊಳ್ಳೋಕೆ ಆಗಲ್ಲ ಅನ್ನೋವಾಗ ಹೇಳಬೇಕಾದವರ ಮುಂದೆ ನಿಂತುಕೊಂಡು ಅವರ ಮುಖವನ್ನೂ ನೋಡದೇ ಏನೋ ಒಂದು ಬಡಬಡಸುತ್ತಾರೆ
ಕೆಲವು ಜನರು ಹೀಗೆ ಕಡ್ಡಿಯಂತಿರುವುದನ್ನು ಗುಡ್ಡ ಮಾಡಿಕೊಳ್ಳುತ್ತಾರೆ. ಅವರ ವ್ಯಕ್ತಿತ್ವ ಅಂತಹುದು. ಮೊದಲಿನಿಂದಲೂ ಹೀಗೆ ಹೇಳಬೇಕಾಗಿರುವುದನ್ನು ನೇರವಾಗಿ ಹೇಳೋದು ರೂಢಿನೇ ಇರುವುದಿಲ್ಲ. ಹಾಗಂತ ಅವರು ನಿಮ್ಮ ಬೆನ್ನ ಹಿಂದೆ ಮಾತನಾಡುತ್ತಾರೆ ಅಂತಲ್ಲ. ಆ ಕೆಟ್ಟ ಅಭ್ಯಾಸವನ್ನು ಅವರು ಅಂಟಿಸಿಕೊಂಡಿರುವುದಿಲ್ಲ. ಆದರೆ ಹೇಳಬೇಕಾಗಿರುವುದನ್ನು ತಾವೇ ಆ ವಿಷಯದ ಪೇಟೆಂಟ್ ಪಡೆದವರ ಹಾಗೆ ಮನಸ್ಸಿನಲ್ಲಿಟ್ಟುಕೊಂಡು ಯಾರ ಮುಂದೆಯೂ ಬಾಯಿ ಬಿಡದೇ ಒಳಗೊಳಗೆ ತಾವೊಬ್ಬರೇ ನೊಂದುಕೊಳ್ಳುತ್ತ ಹೇಳಬೇಕಾಗಿರುವ ವಿಷಯದ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತ ಕೊರಗುತ್ತಾರೆ.
ಅತೀ ಚಿಕ್ಕ ಪುಟ್ಟ ಎನ್ನಿಸುವ ವಿಷಯಗಳನ್ನು ಹೇಳುವಾಗಲೂ ಇದೇ ಚಾಳಿ ಮುಂದುವರಿದಿರುತ್ತದೆ. ಮುಂದಿನವರು ಕಿರಿಯರಿಲಿ ಹಿರಿಯರಿಲಿ ಹೇಳಿಕೊಳ್ಳುವ ವಿಷಯವನ್ನು ಹೇಳಲು ಮನಸ್ಸಿಗೆ ತುಂಬಾನೆ ಕಿರಿ ಕಿರಿ ಮಾಡಿಕೊಳ್ಳುತ್ತಾರೆ. ಹೇಳುವ ವಿಷಯವನ್ನು ತಮ್ಮಲ್ಲೇ ನುಂಗಿಕೊಂಡು ನೋವು ಅನುಭವಿಸುತ್ತಾರೆ. ತಾವು ಹೇಳ ಹೊರಟಿರುವುದು ಸತ್ಯ ಮತ್ತು ನಿಜವಾದದ್ದು ಅಂತ ಮನಸ್ಸು ಸಾರಿ ಸಾರಿ ಹೇಳುತ್ತಿದ್ದರೂ ನೇರವಾಗಿ ಹೇಳುವ ಗೋಜಿಗೆ ಹೋಗುವುದಿಲ್ಲ. ನೇರವಾಗಿ ಹೇಳಿ ಬಿಟ್ಟರೆ ಮುಂದಿನವರ ಮೇಲೆ ಅಡ್ಡ ಪರಿಣಾಮ ಬೀರುತ್ತೇನೋ ಅಂತ ಗೊಂದಲದಲ್ಲಿ ಬೀಳುತ್ತಾರೆ. ಹೇಳಿ ನಿರಾಳವಾಗಿಬಿಡಲೋ ಅಥವಾ ಬೇಡವೋ? ಇಲ್ಲ ಒಳ್ಳೆಯ ಸಮಯ ಬರುವವರೆಗೆ ಕಾಯಲೋ ಹೀಗೆ ತಮ್ಮಷ್ಟಕ್ಕೆ ತಾವೇ ಮನಸ್ಸಿನಲ್ಲಿ ತೊಳಲಾಡುವುದನ್ನು ರೂಢಿಸಿಕೊಂಡು ಯಾವುದೇ ಒಂದು ನಿರ್ದಾರಕ್ಕೆ ಬರಲಾಗದೇ ತ್ರಿಶಂಕು ಸ್ಥಿತಿಯನ್ನು ಅನುಭವಿಸುತ್ತಾರೆ.
ಇದೊಂದು ತರಹ ಅತಿಯಾದ ಯೋಚನೆಯ ಕಾಯಿಲೆ. ಮೇಲಿಂದ ನೋಡಲು ಸಣ್ಣದು ಎನ್ನಿಸಿದರೂ ಒಳಗಿಂದೊಳಗೆ ಕಟ್ಟಿಗೆ ಕೊರೆಯುವ ಹುಳುವಿನಂತೆ ಬಿಟ್ಟು ಬಿಡದೇ ಕೊರೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಅದೆಷ್ಟು ಯೋಚಿಸುತ್ತಾರೆಂದರೆ ತಾವು ಹೇಳುವ ವಿಷಯದಿಂದ ಮುಂದಿನ ವರ್ಷಗಳಲ್ಲಿ ಅದೆಂತಹ ಪಜೀತಿ ಇಲ್ಲವೇ ಅನಾಹುತವಾಗುವುದೇನೋ? ಎಂದು ಮನಸ್ಸನ್ನು ರೇಜಿಗೆಬ್ಬಿಸುªಷ್ಟು ಯೋಚಿಸಿ ಮನಸ್ಸಿನ ಸ್ಥಿತಿಯನ್ನು ಹಾಳುಗೆಡುವುತ್ತಾರೆ. ಇತರರು ಎಂಥ ದೊಡ್ಡ ವಿಷಯಗಳನ್ನು ಸಲೀಸಾಗಿ ನೀರು ಕುಡಿದಂತೆ ತಮ್ಮ ಮುಂದೆ ಹೇಳುವುದನ್ನು ಕಂಡು ಬೆರಗಾಗಿ ನಾನೇಕೆ ಹೀಗೆ ಮಾಡಲಾರೆ ಹೇಳಬೇಕಿರುವುದನ್ನು ನೇರವಾಗಿ ಹೇಳಲಾರೆ ನನ್ನಿಂದೇಕೆ ಹೀಗೆ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿ ಮನದಲ್ಲಿ ಮೂಡುತ್ತದೆ. ಎದುರಿನವರ ಬಗ್ಗೆ ಸ್ವಲ್ಪ ಜಾಸ್ತಿಯೆನಿಸುವಷ್ಟು ಯೋಚಿಸುತ್ತಿರುವುದೇ ಕಾರಣ ತಾವು ಹೇಳುವುದನ್ನು ಹೇಗೆ ತೆಗೆದುಕೊಳ್ಳುತ್ತಾರೇನೋ ಎಂಬ ಅನುಮಾನ ವಿಪರೀತವೆನಿಸುವಷ್ಟು ಕಾಡುತ್ತದೆ ಅದಕ್ಕೆ ಹೀಗಾಗುತ್ತದೆ ಎಂಬ ಉತ್ತರ ತಲೆಗೆ ಹೊಳೆಯುತ್ತದೆ ಆದರೂ ಈ ನಿಟ್ಟಿನಲ್ಲಿ ಬದಲಿಸಿಕೊಂಡು ಅತಿಯಾಗಿ ಯೋಚಿಸುತ್ತಿರುವುದನ್ನೆಲ್ಲ ದಾಟಿಕೊಂಡು ಮನಸ್ಸಿನಲ್ಲಿರುವುದನ್ನು ಎದುರಿನವರಿಗೆ ಹೇಳಲು ಆಗುವುದೇ ಇಲ್ಲ.
ಕೆಲವೊಂದಿಷ್ಟು ಜನ ಎದುರಿನವರು ಏನಾದರೂ ತಿಳಿದುಕೊಳ್ಲಲಿ ಅದು ಅವರಿಗೆ ಬಿಟ್ಟಿದ್ದು. ನಾನು ಹೇಳಬೇಕಾದ್ದನ್ನು ಹೇಳಿಬಿಡುತ್ತೇನೆ ಆಗ ನನ್ನ ಮನಸ್ಸು ನಿರಾಳವಾಗಿರುತ್ತದೆ ಅಂತ ಮುಂದಿನವರ ಮುಖದ ಮುಂದೆ ಮುಖಕ್ಕೆ ಹೊಡೆದಂತೆ ಹೇಳಿ ಅವರ ಪ್ರತಿಕ್ರಿಯೆಗೂ ಕಾಯದೇ ಅಲ್ಲಿಂದ ಜಾಗ ಖಾಲಿ ಮಾಡಿರುತ್ತಾರೆ. ಇಂಥ ಜನರಿಗೆ ತಮ್ಮದಷ್ಟೇ ಚಿಂತೆ ತಾವು ನೀಟಾಗಿರಬೇಕು ತಮ್ಮ ಮನಸ್ಸಿನಲ್ಲಿ ತೊಳಲಾಟ ಬೇಡವೆಂದುಕೊಂಡು ಕೆಲವೊಂದು ಸಾರಿ ಕೆಲ ವಿಷಯಗಳನ್ನು ಹೇಳುವಂಥ ಸಂದರ್ಭ ಇರದೇ ಇದ್ದರೂ ಮನಸ್ಸಿನಲ್ಲಿದ್ದ ಸಂಗತಿಯನ್ನು ಒಂದೇ ಉಸಿರಿನಲ್ಲಿ ಹೊರಹಾಕಿ ಬೆನ್ನು ತೋರಿ ನಡೆದು ಬಿಡುತ್ತಾರೆ. ತಮ್ಮ ಮಾತುಗಳು ಬಹಳ ಜನರಿಗೆ ನೋವನ್ನು ತರುತ್ತವೆ. ಕಸಿವಿಸಿಯನ್ನುಂಟು ಮಾಡುತ್ತವೆ ಎಂದು ತಿಳಿದಿದ್ದರೂ ಇವರು ಡೊಂಟ್ ಕೇರ್ ಮೆಂಟ್ಯಾಲಿಟಿ ಹೊಂದಿರುತ್ತಾರೆ. ಇಂಥ ಡೋಂಟ್ ಕೇರ್ ಮಾಸ್ಟರ್‍ಗಳನ್ನು ಕಂಡು ನೇರವಾಗಿ ಹೇಳಲಾಗದವರು ಅಬ್ಬಾ! ಇವರೆಂಥ ಜನ ಮುಂದಿನವರಿಗೆ ತಮ್ಮ ಮಾತು ಎಷ್ಟು ಬೇಸರ ಮೂಡಿಸುತ್ತದೆ ಎನ್ನುವುದನ್ನು ವಿಚಾರ ಮಾಡದೇ ಮಾತನಾಡಿ ಕಾಲು ಕೀಳುತ್ತಾರಲ್ಲ ಎಂದು ಮನಸ್ಸಿನಲ್ಲಿ ಹೇ;ಳಿಕೊಳ್ಳುತ್ತ ಅವರತ್ತ ಕಣ್ಣು ಕೀಲಿಸಿ ನೋಡುತ್ತ ನಿಲ್ಲುತ್ತಾರೆ. ಇವರ ಹಾಗೆ ನಾನು ನಡೆದುಕೊಂಡು ಬಿಡಬಹುದಲ್ಲ ಅಂತೆನ್ನಿಸಿದರೂ ಮರುಕ್ಷಣವೇ ಅಯ್ಯೋ!ಇವರ ಹಾಗೆ ನಡೆದುಕೊಂಡರೆ ವಿನಾಕಾರಣ ಮತ್ತೊಬ್ಬರ ಮನಸ್ಸಿಗೆ ನಾನು ನೋಯಿಸಿದ ಹಾಗಾಗುತ್ತದೆ. ಇನ್ನಷ್ಟು ಗೊಂದಲಗಳನ್ನು ನಾನೇ ಸೃಷ್ಟಿಸಿದ ಹಾಗಾಗುತ್ತದೆ ಎಂದುಕೊಂಡು ವಿಪರೀತವೆನಿಸುವಷ್ಟು ಯೋಚಿಸಿ ತಮ್ಮ ಮನಸಿಗನ್ನಿಸಿದ್ದನ್ನು ನೇರವಾಗಿ ಹೇಳಲಿಕ್ಕಾಗದೇ ನೀರಿನಿಂದ ಹೊರ ತೆಗೆದ ಮೀನಿನಂತೆ ಒದ್ದಾಡುತ್ತಾರೆ.
ನೇರವಾಗಿ ಮಾತನಾಡಿ ನೇರವಾಗಿ ಹೊರಟುಹೋಗುವವರು ನೇರವಾಗಿ ಹೇಳಿಕೊಳ್ಳದವರನ್ನು ಘಾಸಿಕೊಳ್ಳಿಸಿಬಿಟ್ಟರೆ ಕತೆ ಮುಗಿದೇ ಹೋಯಿತು. ಅವರಿಗೆ ಆ ಸಂದರ್ಭದಲ್ಲಾಗುವ ನೋವು ಬೇಸರ ವಡ್ಡು ಒಡೆದ ಕೆರೆಯಂತಾಗಿ ಕಣ್ಣಿರನ್ನು ಹರಿಸುತ್ತದೆ. ನನಗೆ ಅವರ ಮಾತು ಮರೆಯಲಾರದ ನೋವನ್ನು ತಂದಿತು ನಾನು ಇತರರೊಂದಿಗೆ ಹೀಗೆ ನಡೆದುಕೊಂಡರೆ ನನ್ನ ಮಾತಿನಿಂದ ಅವರಿನ್ನೆಷ್ಟು ನೊಂದುಕೊಳ್ಳಬಹುದು? ನೊಂದುಕೊಂಡರೆ ನಾನು ಹೇಗೆ ಅವರನ್ನು ಸಮಾಧಾನಿಸಲಿ ಸಂತೈಸಲಿ? ಎಂಬ ಸೂಕ್ಷ್ಮ ಯೋಚನಾ ಲಹರಿಯಲ್ಲಿ ಬಿದ್ದು ಹೊರಳಾಡುತ್ತಾರೆ. ಇಲ್ಲ ನನಗೆ ಸಂಬಂಧಗಳು ಮುಖ್ಯ ನನಗೆ ಹಾಗೆ ಸುತಾರಾಂ ನಡೆದುಕೊಳ್ಳಲು ಆಗುವುದಿಲ್ಲ. ನನ್ನ ಮಾತುಗಳಿಂದ ನಾನು ಯಾರನ್ನೂ ಕಳೆದುಕೊಳ್ಳಲು ತಯಾರಿಲ್ಲ. ಅವರ ದೂರವಾಗುವಿಕೆ ನನಗೆ ತಡೆದುಕೊಳ್ಳಲಾಗುವುದಿಲ್ಲ ಎಂದು ಬೇರೆಯವರು ಅಂದಿದ್ದನ್ನು ಅನಿಸಿಕೊಂಡು ಮಾಡಿದ್ದನ್ನು ಸಹಿಸಿಕೊಂಡು ಮೂಕವೇದನೆ ಅನುಭವಿಸುತ್ತಾರೆ.
ಸಹನೆಗೊಂದು ಮಿತಿಯಿದೆ ಅಲ್ಲವೇ? ಒಂದು ದಿನ ಸಹನೆಯ ಕಟ್ಟೆ ಒಡೆದು ಮನಸ್ಸಿನ ನೋವು ಆಚೆಗೆ ನೇರವಾಗಿ ಬಂದು ಬಿಡುತ್ತದೆ. ಆಗ ಅಂದುಕೊಂಡಂತೆ ಇಷ್ಟು ದಿನ ತಾವೇ ಸಾಕಿಕೊಂಡು ಬಂದ ಸಂಬಂಧವೊಂದು ಶಾಶ್ವತವಾಗಿ ಕಳಚಿ ಹೋಗಿಬಿಡುತ್ತದೆ. ನೇರವಾಗಿ ಹೇಳಿದ್ದಕ್ಕೆ ಮನಸ್ಸಿಗೆ ಹತ್ತಿರವಿದ್ದ ಸಂಬಂದವನ್ನು ಕಳೆದುಕೊಂಡೆ ಎಂಬ ನೋವು ಮನಸ್ಸಿಗೆ ಹಗಲಿರುಳು ಕಾಡುತ್ತದೆ. ನೇರವಾಗಿ ಮಾತನಾಡಿ ಕಳೆದುಕೊಳ್ಳುವುದಕ್ಕಿಂತ ಮನಸ್ಸಿನಲ್ಲಿ ಮರಗುತ್ತ ಕೊರಗುತ್ತ ನುಂಗಿಕೊಳ್ಳುವುದೇ ವಾಸಿ ಎಂದುಕೊಂಡು ಮತ್ತೆ ಎಂದೂ ಹೇಳಬೇಕಾದುದನ್ನು ನೇರವಾಗಿ ಹೇಳುವ ಸಾಹಸಕ್ಕೆ ಕೈ ಹಾಕಲು ಹೋಗುವುದಿಲ್ಲ.
ಆತ್ಮೀಯರೆ, ಮೇಲೆ ಹೇಳಿದ ಉದಾಹರಣೆಗಳು ಎಷ್ಟೋ ಬಾರಿ ನಾವೂ ಆಗಿರುತ್ತೇವೆ. ಏನೇ ಇದ್ದರೂ ನೇರ ನಡೆ ನೇರ ನುಡಿ ಚೆನ್ನ ಅಂತ ನಿಮಗೂ ಗೊತ್ತು ನಮ್ಮ ಮಾತುಗಳು ಸ್ನೇಹ ಬೆಸೆಯುವ ಕೊಂಡಿಗಳಂತಿರಬೇಕು. ಸಂಬಂಧ ವೃದ್ಧಿಸುವ ತೆರದಲ್ಲಿರಬೇಕು. ಮಾತಿಗೆ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ. ಸಹೃದಯತೆ ಎಂಬ ಸದ್ಗುಣ ಬೇಕೇ ಬೇಕು. ಮಾತು ಧಗ ಧಗ ಉರಿಯುವ ಬೇಸಿಗೆಯ ಹಾಗಿರಬಾರದು ಅದ ಬಿಸಿಲೊಳಗೆ ಕುಡಿಯುವ ತಂಪು ನೀರಿನಂತೆ ಹಿತವಾಗಿರಬೇಕು. ಹೇಳುವದನ್ನು ನೇರವಾಗಿ ಹೇಳಿ ನಿರ್ದಾಕ್ಷಿಣ್ಯವಾಗಿ ಹೇಳಿ ಹಾಗಂತ ಬಿರಾಸಾಗಿ ಹೇಳಿ ಸುಖಾ ಸುಮ್ಮನೆ ಇತರರ ದ್ವೇಷಕ್ಕೆ ಗುರಿಯಾಗುವುದು ಬೇಡ. ಹೇಳುವ ಮಾತು ನೋವು ತರವಂತಿರಕೂಡದು. ಆಪ್ತತೆ ಆತ್ಮೀಯತೆ ಸೌಜನ್ಯತೆಯಿಂದ ಕೂಡಿರಬೇಕು. ಮುಂದಿನವರಿಗೆ ನಿಮ್ಮ ಮಾತಿನ ಒಳಾರ್ಥ ಮತ್ತು ನಿಮ್ಮ ಮನದ ಭಾವ ಸ್ಪಷ್ಟವಾಗುವಂತಿರಬೇಕು. ಹೇಳುವ ವಿಷಯಕ್ಕಿಂತ ಮಾತಿನ ದಾಟಿ (ಏರಿಳಿತ) ದ್ವನಿ ಅತಿಯಾದ ಪ್ರಭಾವ ಬೀರುತ್ತದೆ. ಶೇಕಡಾ 90 ರಷ್ಟು ಸಮಸ್ಯೆಗಳು ನಾವು ಹೇಳುವ ಸಂಗತಿಗಳಿಂದಲ್ಲ. ಹೇಳುವ ದಾಟಿಯಿಂದಲೇ ಉದ್ಭವಿಸುತ್ತವೆ ಎನ್ನುವುದು ನೆನಪಿನಲ್ಲಿರಲಿ. ಹೀಗಾಗಿ ನಯವಂತಿಕೆ ಮೃದುತನ ಮಾತಿನ ದಾಟಿಯಲ್ಲಿರಲಿ. ಇದಕ್ಕೆ ಇಂಗ್ಲೀಷ್‍ನಲ್ಲಿ ಅಸ್ಸೆರ್ಟಿವನೆಸ್ ಅಂತಾರೆ. ಬಿ ಅಸ್ಸೆರ್ಟಿವ್ ಸ್ಪೀಕರ್. ಹೇಳಬೇಕಾಗಿರುವುದನ್ನು ಹೇಳದೇ ಮನದಲ್ಲಿಟ್ಟುಕೊಂಡು ಭಾರವಾಗಿಸಿಕೊಳ್ಳದೇ ನೇರವಾಗಿ ಹೇಳಿ ಹಗುರವಾಗೋಣ ಹೂಂ ಅಂತಿರಿ ತಾನೆ?
-ಜಯಶ್ರೀ.ಜೆ. ಅಬ್ಬಿಗೇರಿ