ಸ್ನೇಹದ ದಾಕ್ಷಿಣ್ಯಕ್ಕೆ ಸಿಕ್ಕಿಬಿದ್ದು ಆಗಾಗ್ಗೆ(ವರ್ಷಕ್ಕೊಮ್ಮೆ ಅನ್ನಿ. ಮೈಸೂರಿನಲ್ಲಿ ದಿನಪೂರ್ತಿ ನಡೆಯುವ ಕಾರ್ಯಕ್ರಮವೊಂದಕ್ಕೆ ಬಹುತೇಕ ವೇದಿಕೆಯಲ್ಲಿ ಕುಳಿತ (ಮೂಕ)ಪ್ರೇಕ್ಷಕನಾಗಿ ಭಾಗವಹಿಸುವ ದೌರ್ಭಾಗ್ಯ ನನ್ನ ಪಾಲಿಗೆ ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವಂತೆ ಮೆಟ್ಟಿಕೊಂಡು ಬಂದಿದೆ. ಹತ್ತು ಗಂಟೆಗೆ ಆರಂಭವಾಗಿ ಒಮ್ಮೊಮ್ಮೆ ಸಾಯಂಕಾಲ ಏಳರವರೆಗೆ ನಡೆಯುವ ಸಾಹಿತ್ಯಕ, ಸಾಮಾಜಿಕ, ಸಾಸ್ಕೃತಿಕ ಮತ್ತು ವೈದ್ಯಕೀಯ(ಏಕೆಂದರೆ ನೇತ್ರ ವಾಗ್ದಾನ ಕಾರ್ಯಕ್ರಮವನ್ನೂ ಹಮ್ಮಿಕೊಂಡಿರುತ್ತಾರೆ) ಕಲಾಪ ಹೊಂದಿರುವ ವ್ಯಾಪಕ ಯೋಜನೆಯ ಕಾರ್ಯಕ್ರಮವಿದು. ಬೆಳಿಗ್ಗೆ ಸಭಾಕಲಾಪ ಉದ್ಘಾಟನೆ. ದೀಪ ಹಚ್ಚುವ ಕಾರ್ಯಕ್ರಮದಲ್ಲಿ ಗಣ್ಯರ ಕೈಯಿಂದ ಕೈಗೆ ರಿಲೇ ರೇಸಿನ ಬ್ಯಾಟನ್ನಿನಂತೆ ಹರಿದಾಡುವ ಮೇಣದ ಬತ್ತಿ , ಹಚ್ಚೇವು ಕನ್ನಡದ ದೀಪ ಹಾಡಲು ಬಂದು ವೇದಿಕೆಯಲ್ಲೇ ಗಂಟಲು ಸರಿಪಡಿಸಿಕೊಳ್ಳುವ ಸಾಲಂಕೃತ ಯುವಕ ಯುವತಿಯರು ಚಿತ್ರ ಕ್ಲಿಕ್ಕಿಸುವ ಮೊಬೈಲುಗಳು, ಆ ಗದ್ದಲವೇ ರೈಲ್ವೇ ಸ್ಟೇಷನ್ನನ್ನೂ ಮೀರಿಸಿರುತ್ತದೆ.
ಸಭಾಸದರಿಗೆ ಸ್ವಾಗತ ಭಾಷಣವೆಂಬ ಸಶ್ರಮ ಶಿಕ್ಷೆ ವಿಧಿಸಲು ಈಗ ತಯಾರು ಭಾಷಣಕಾರರು. ಸ್ವಾಗತ ಮಾಡುತ್ತಾರೋ ಇಲ್ಲವೋ ಭಾಷಣ ಮಾಡುವುದಂತೂ ನಿಶ್ಚಯ ಅನ್ನಿ. ಚಪ್ಪಾಳೆಗಳ ಸುರಿಮಳೆ (ಅಂತೂ ಭಾಷಣ ನಿಲ್ಲಿಸಿದ್ದಕ್ಕೆ). ಮತ್ತೆ ಸಂಘಟಕ ನುಡಿಕಟ್ಟೆಗೆ ಧಾವಿಸಿ ಇವನು ಬಿಟ್ಟ ಹಲವು ಹೆಸರುಗಳನ್ನು ಘೋಷಿಸುವಷ್ಟರಲ್ಲೇ ಸಭೆಯಲ್ಲಿ ಸಂಚಲನ, ಗುಜುಗುಜು ಸಂಘಟಕ ವೇದಿಕೆಯಿಂದ ಹಾರಿ ಅತ್ತ ಧಾವಿಸುತ್ತಾ ಮಂಗಲವಾದ್ಯದವರಿಗೆ ಕೈಯಲ್ಲೇ ಇಶಾರೆ ಮಾಡಿದೊಡನೆ ವಾದ್ಯಮೇಳ ಶುರು. ಬಂದವರು ಯಾರೆಂದಿರಾ? ಮಾನ್ಯ ಶಾಸಕರು ಬರುವುದು ಅನುಮಾನ ಎಂದು ಹೇಳಿದ್ದರೂ ಬರುವ ಕೃಪೆ ಮಾಡಿರುತ್ತಾರೆ. ವೇದಿಕೆಯ ವಯಸ್ಸಾದ ಸಾಹಿತಿಗಳೆಲ್ಲ ಕಷ್ಟಪಟ್ಟು ಎದ್ದು ಶಾಸಕರಿಗೆ ವಂದಿಸುತ್ತಾರೆ. ಒಮ್ಮೆ ನಾನು ಏಳದೇ ಕೂತಿದ್ದೆ. ಸಂಘಟಕ ಬಂದು ಏಳಲು ನನ್ನ ಕಿವಿಯಲ್ಲಿ ಆದೇಶಿಸಿದ.
ಶಾಸಕರಿಗೆ ವಿಶೇಷ ಸ್ವಾಗತ, ಆಳೆತ್ತರದ ಹಾರ ಹಾಕಿ, ಮೈಸೂರು ಪೇಟ ತೊಡಿಸಿ ಸಂಘಟಕ ಸಭೆಯತ್ತ ಸನ್ನೆ ಮಾಡುತ್ತಾನೆ . ಜನಪ್ರಿಯ ಶಾಸಕರಿಗೆ ಜಯವಾಗಲಿ ಎಂಬ ಘೋಷ ಮುಗಿಲು ಮುಟ್ಟುತ್ತದೆ. ನೇರ ಮೈಕಿನತ್ತ ಧಾವಿಸುವ ಶಾಸಕ ಅನ್ಯಕಾರ್ಯಕ್ರಮ ನಿಮಿತ್ತ ಬೇರೊಂದು ಕಡೆ ಹೋಗಬೇಕಾಗಿದೆಯೆಂದು ಹೇಳಿ, ಸಭೆಗೆ ಶುಭಾಶಯ ಕೋರಿ ದಂಡುದಾಳಿ ಸಮೇತ ನಿರ್ಗಮಿಸುತ್ತಾರೆ. ಯಥಾಪ್ರಕಾರ ವೇದಿಕೆಯ ಮೇಲಿನ ವಯೋವೃದ್ಧ ಸಾಹಿತಿಗಳು ಕಷ್ಟಪಟ್ಟು ಎದ್ದುನಿಂತು ಬೀಳ್ಕೊಡುಗೆಯ ನಮಸ್ಕಾರ ಮಾಡುತ್ತಾರೆ (ಮತ್ತು ಮಾಡಬೇಕು ಕೂಡ). ಇನ್ನು ಆ ಸಂಘಟಕ ಅವರನ್ನು ಕಾರು ಹತ್ತಿಸಿ ವಾಪಸು ಬರುವವರೆಗೆ ಸಭೆಗೆ ವಿರಾಮ. ಪ್ರತಿವರುಷ ನಾನು ಇದಕ್ಕೆ ಸಾಕ್ಷಿಯಾಗಿರುವುದರಿಂದ ಇದು ಹೀಗೇ ಎಂದು ಕುರಿತೇ ನೀಟಾಗಿ ಹೇಳಬಲ್ಲೆ.
ಸಂಘಟಕ ವಾಪಸು ಬಂದು ಜನಪ್ರತಿನಿಧಿಗಳಿಗೆ ಇರುವ ಕಾರ್ಯಭಾರವನ್ನು ಸಭೆಗೆ ಮತ್ತೊಮ್ಮೆ ತಿಳಿಸಿ ಎಲ್ಲರ ಕ್ಷಮೆಕೋರಿ, ಕಾರ್ಯಕ್ರಮ ಮುಂದುವರೆಸಲು ನಿರೂಪಕ-ನಿರೂಪಕಿಯರಿಗೆ ( ಹೌದು ಅವರು ಇಬ್ಬರು. ತಮ್ಮನ್ನು ತಾವು ಮುದ್ದಣ ಮನೋರಮೆಯೆಂದೇ ಕರೆದುಕೊಂಡಿರುತ್ತಾರೆ)ಸೂಚಿಸುತ್ತಾರೆ. ನಂತರ ಇಪ್ಪತೈದು ವಿವಿಧ ರಂಗದ ಸಾಧಕರಿಗೆ ಸನ್ಮಾನ. ಅವರು ವೇದಿಕೆಗೆ ಬಂದು ಪೀಠ ಅಲಂಕರಿಸುವುದು, ಪರಿಚಯವಾಚನ, ವೇದಿಕೆಯ ಗಣ್ಯರಿಂದ ಶಾಲು, ಹಾರ, ಫಲಕ, ಪ್ರಶಸ್ತಿಪತ್ರ ಸಲ್ಲಿಕೆ ಇತ್ಯಾದಿಗಳಿಂದ ಸಭೆಯಲ್ಲಿ ಮತ್ತೆ ಗೊಂದಲಪುರದ ನಿರ್ಮಾಣ . ಈಗ ಮತ್ತೊಬ್ಬ ಹಾಡಲು ಬರುತ್ತಾನೆ. ಮನರಂಜನೆಗಾಗಿ. ಅವನ ಹಿಂದೆ ಜನಪದ ಕಲಾವಿದ, ಮತ್ತೊಬ್ಬ ಬಾಲಪ್ರತಿಭೆಯ ಪ್ರದರ್ಶನ, ಪುಸ್ತಕಗಳ ಬಿಡುಗಡೆ(ಕನಿಷ್ಠ ಐದಾರು) ಆ ಎಲ್ಲ ಪುಸ್ತಕಗಳ ಪರಿಚಯ, ನನ್ನದೂ ಸೇರಿದಂತೆ ಇತರ ಗಣ್ಯರ ಭಾಷಣಗಳು ಇತ್ಯಾದಿ, ಇತ್ಯಾದಿ. ಇಷ್ಟೆಲ್ಲಾ ಮುಗಿದು ಈಗ ಅಧ್ಯಕ್ಷರ ಭಾಷಣದ ಸರದಿ. ಅವರು ಸಭೆಯನ್ನು ಅವಲೋಕಿಸಿ (ಹಾಗೆಯೇ ಜನರ ಹಸಿದ ನೋಟವನ್ನೂ ಅರಿತು) ಪಾಪ ಚುಟುಕಾದ ಭಾಷಣ ಮಾಡುತ್ತಾರೆ.
ಅಂದೂ ಹಾಗೇ. ಮಧ್ಯಾಹ್ನ ಒಂದೂವರೆಗೆ ಮ್ಯಾರಥಾನ್ ನೆನಪಿಸುವ ಸಭಾಕಲಾಪ ಮುಗಿದು , ಊಟದ ಪರಿಕರಗಳ ಸದ್ದು, ಹಸಿವು ಅತ್ತಲೇ ಎಳೆಯುತ್ತಿತ್ತು. . “ಇಲ್ಲೇ ಕೂತುಕೊಳ್ಳಿ ಎಲ್ಲ ವ್ಯವಸ್ಥೆಯಾಗಿದೆ” ಎಂಬ ಸೌಜನ್ಯದ ಮಾತು ಯಾರಿಂದಲೋ. ಹತ್ತು ನಿಮಿಷವಾದರೂ ಯಾರ ಸುಳಿವೂ ಇಲ್ಲ . ಒಬ್ಬ ಸ್ವಯಂಸೇವಕ ಒಂದೊಂದೇ ತಟ್ಟೆ ತಂದು , ಎಲ್ಲ ವಯೋವೃದ್ಧರಿಗೂ ಬಹುಶಃ ಅವರ ವಯಸ್ಸಿನ ಕ್ರಮದಲ್ಲೇ ಕೊಡುತ್ತಾ ಬಂದು, ಕೊನೆಗೆ ನನ್ನ ಸರದಿಯೂ ಬಂತು. ತಟ್ಟೆಯಲ್ಲಿ ಬಿಸಿಬೇಳೆಬಾತ್, ಮೊಸರನ್ನ ಮಾತ್ರ ಇತ್ತು. ತಂದು ಕೊಟ್ಟ ವ್ಯಕ್ತಿಯೇ “ಅಷ್ಟೇ ಅಂತೆ ಇರೋದು, ಬಜ್ಜಿ, ಬಾದೂಷಾ ಎಲ್ಲಾ ಖಾಲಿಯಾಯ್ತಂತೆ. ” ಎಂದು ವಿವರಣೆ ನೀಡಿದ. ಅದನ್ನಾದ್ರೂ ಇನ್ನೊಂದು ಸಾರಿ ಹಾಕಿಸಿಕೊಳ್ಳೋಣ ಅಂತ ಇರುವಾಗ “ತಟ್ಟೆ ಇಲ್ಲಿ ಕೊಡಿ, ನಾನು ಅಲ್ಲಿ ಇಡ್ತೇನೆ” ಎಂದು ಅದೇ ಬಾಲಕ ಶರವೇಗದಲ್ಲಿ ತಟ್ಟೆಯನ್ನು ಕೈನಿಂದ ಕಸಿದುಕೊಂಡು ಪರಾರಿಯಾದ. ಅಲ್ಲಿಗೆ ಅರೆಹೊಟ್ಟೆ ಪೂರ್ಣಗೊಳಿಸಿಕೊಳ್ಳುವ ನನ್ನ ಯೋಜನೆಗೆ ಇತಿಶ್ರೀಯಾಯಿತು. ಸಂಘಟಕರು ತಮ್ಮ ಊಟ ಮುಗಿಸಿ ನನ್ನ ಹತ್ತಿರ ಬಂದು “ನಾನು ಊಟಕ್ಕೆ ಮುಡಾ ಚೇರಮನ್ ಗೆ ಕಂಪನಿ ಕೊಡಬೇಕಾಗಿತ್ತು ಹಾಗಾಗಿ ನಿಮ್ಮನ್ನು ಗಮನಿಸಲು ಆಗಲಿಲ್ಲ ಕ್ಷಮಿಸಿ, ಆ ಕಾರ್ಯಕರ್ತನಿಗೆ ನಿಮ್ಮ ಊಟದ ವ್ಯವಸ್ಥೆ ಮಾಡಲು ಹೇಳಿದ್ದೆ. ಎಲ್ಲಾ ಸಿಕ್ಕಿತು ಅಲ್ವಾ?” ಎಂದು ಸೌಜನ್ಯದ ಮಾತನಾಡಿದರು. ನಾನು ವ್ಯಂಗ್ಯವಾಗಿ “ಬಿಸಿಬೇಳೆಭಾತ್, ಮೊಸರನ್ನ ಅಷ್ಟೇ ನನಗೆ ಸಿಕ್ಕಿದ್ದು. ಮತ್ತೇನೇನು ಮಾಡಿದ್ರು?”ಎಂದು ಕೇಳಿದೆ. ಅವರಿಗೆ ಅರ್ಥವಾಯಿತು. “ನೋಡಿ ಕಾರ್ಯಕರ್ತರು ಎಂಥಾ ಪ್ರಮಾದ ಮಾಡಿಬಿಡ್ತಾರೆ ಛೆ! ” ಎಂದು ಉದ್ಗರಿಸಿ “ದಯವಿಟ್ಟು ಮಧ್ಯಾಹ್ನ ನಾಲ್ಕು ಗಂಟೆಯವರಿಗೆ ಇದ್ದು ಕವಿಗೋಷ್ಠಿಯಲ್ಲಿ ವಾಚನ ಮಾಡುವವರಿಗೆ ಪ್ರಶಸ್ತಿ ಪತ್ರ ನೀಡಬೇಕು. “ಎಂದು ವಿನಂತಿಸಿದರು. ಭಲೇ! ಎಷ್ಟು ಬೇಗ ಈ ಮನುಷ್ಯ ನನ್ನ ಅರೆಹೊಟ್ಟೆಯ ವಿಷಾದಪರ್ವವನ್ನು ಮರೆತಿದ್ದಾರೆ ಎಂದು ಅಚ್ಚರಿಯಾಯಿತು. (ಆದರೆ ನಾನು ಹೇಗೆ ಮರೆಯಲಿ?)
ಸಂಘಟಕರ ಅಪ್ಪಣೆಯಂತೆ ಅಲ್ಲಿದ್ದ ಮೂವತ್ತೈದು ಕವಿಗಳಿಗೂ ಪ್ರಶಸ್ತಿಪತ್ರ ಕೊಟ್ಟು, ಹಳದಿ ಕೆಂಪು ಸ್ಕಾರ್ಫ್ ಹೊದಿಸಿ, ಹಲ್ಲು ಕಿರಿಯುವ ವ್ಯಾಯಾಮ ಮಾಡಿದೆ. ನಾಲ್ಕುಗಂಟೆಗೆ ಎಲ್ಲರ ಕ್ಷಮೆಕೋರಿ, ಸಂಘಟಕರ ಅನುಮತಿ ಪಡೆದು ಅಲ್ಲಿ ಬಿಡುಗಡೆಯಾದ ಪುಸ್ತಕಗಳು, ಪ್ಲಾಸ್ಟಿಕ್ ಮಣಿಹಾರ ಎಲ್ಲ ಬ್ಯಾಗಿಗೆ ತುಂಬಿಕೊಂಡು, ಅರೆಹೊಟ್ಟೆಯಲ್ಲಿ ತರಾತುರಿಯಿಂದ ಹೊರಟೆ. ಈಗಲಾದರೂ ಹೊಟ್ಟೆಗೆ ಏನಾದರೂ ದೊರೆಯಬಹುದೆಂಬ ಆಶಾವಾದದೊಂದಿಗೆ. ಒಬ್ಬ ಕಿರಿಕವಿ ನನ್ನ ಹಿಂದೆ ಸರಸರ ಓಡಿ ಬಂದು ನನ್ನ ಕೈನಿಂದ ಬ್ಯಾಗ್ ಕಿತ್ತುಕೊಂಡು “ಈಗಲೇ ಹೊರಟಿರಾ ?”ಎಂದು ಕೇಳಿದ. ನಾನು ʼಹೌದು” ಎಂದೆ. “ಯಾವ ಕಡೆಗೋ” ಎಂದು ವಿಚಾರಿಸಿದ. “ಬೆಂಗಳೂರಿಗೆ” ಎಂದು ಆತುರವಾಗಿ ಹೇಳಿದೆ. “ಬಸ್ಸಿನಲ್ಲಾ?”ಎಂದು ಕೇಳಿದ . “ಹೌದು ಬೆಂಗಳೂರಿನವರೆಗೆ ನಡೆದುಕೊಂಡು ಹೋಗಲು ಶಕ್ತಿಯಿಲ್ಲ” ಎಂದು ಅಸಹನೆಯಿಂದಲೇ ಉತ್ತರಿಸಿದೆ. “ಅಲ್ಲಾ, ನಾನು ಕೇಳಿದ್ದು ಬಸ್ ಸ್ಟಾಂಡ್ ವರೆಗೂ ಹೇಗೆ ಅಂತ?” ಎಂದು ವಿಷದೀಕರಿಸಿದ. ಅವನಿಗೆ ಉತ್ತರಿಸದೆ ಹೋಗುತ್ತಿದ್ದ ಆಟೋ ನಿಲ್ಲಿಸಿ “ಸಬರ್ಬನ್ ಬಸ್ ಸ್ಟ್ಯಾಂಡ್ “ಎಂದು ಹೇಳಿ ಆ ಅಪರಿಚಿತನಿಗೆ “ಬ್ಯಾಗ್ ಕೊಡಿ”ಎಂದೆ. ” ಸಾರ್ ನಾನು ಪಾಂಡವಪುರಕ್ಕೆ ಹೋಗಬೇಕು. ನಿಮ್ಮ ಜತೆನೇ ಬರ್ತೀನಿ” ಎಂದು ನನ್ನ ಅನುಮತಿಗೂ ಕಾಯದೆ ಆಟೋ ಹತ್ತಿದ.
ಸಬರ್ಬನ್ ಬಸ್ ಸ್ಟ್ಯಾಂಡ್ ಬಂತು . “ಸಾರ್, ಬೆಂಗಳೂರು ಬಸ್ ಅಲ್ಲಿ . ಅಲ್ಲಿವರೆಗೂ ಬ್ಯಾಗ್ ಹಿಡ್ಕೊಂಡು ಬರ್ತೀನಿ”ಎಂದು ಬಿಡದೆ ಹಿಂಬಾಲಿಸಿದ. “ಇದೇ ಬಸ್ಸು ಎಂದು ಬಸ್ಸಿನ ಒಳಗೆ ನುಗ್ಗಿ. “ಸಾರ್ ಒಳ್ಳೆ ಸೀಟು ಹಿಡಿದಿದ್ದೇನೆ” ಎಂದು ಬೀಗಿದ. ಅಂತೂ ನಾನು ಅರೆಹೊಟ್ಟೆಯಲ್ಲೇ ಬೆಂಗಳೂರಿಗೆ ಪ್ರಯಾಣ ಮಾಡುವುದನ್ನು ಖಾತರಿಮಾಡಬೇಕೆಂದು ಯಾವ ವಿಶ್ವಾಮಿತ್ರ ಈ ನಕ್ಷತ್ರಿಕನಿಗೆ ಆದೇಶ ನೀಡಿದ್ದನೋ ಏನೋ!ಈಗ ನಾನು ಹೊಟ್ಟೆ ತುಂಬಿಸಿಕೊಳ್ಳಲು ಬಸ್ ಮದ್ದೂರಿನಲ್ಲಿ ನಿಲ್ಲುವವರೆಗೆ ಕಾಯುವುದು ಅನಿವಾರ್ಯವಾಯಿತು.
–ಮಹಾಬಲ ಕೆ ಎನ್