ಕಪ್ಪು ಬೆಳಕಿನ ಆ ಕಂದಕದ ಬೆಳಕಿನಲ್ಲಿ ಸಾಗಿದ್ದ ನಮ್ಮ ಮಾತುಕತೆ ಏಲ್ಲೋ ಒಂದು ಕಡೆ ತನ್ನ ಹಾದಿಯನ್ನು ತಪ್ಪಿತ್ತು. ಅವಳನ್ನು ನಾನು ಭೇಟಿಯಾದೆ ಅನ್ನುವ ವಿಚಾರ ನನಗೆ ಆಗಲೇ ಮರೆತುಹೋಗಿತ್ತು. ಸುಂದರ ಮೊಗದ, ಆಕರ್ಷಕ ನಗುವಿನ ಆ ಹುಡುಗಿಯ ಮಾತುಗಳನ್ನು ಕೇಳುತ್ತಾ ಅವಳ ಜೊತೆ ನಾನು ಅನುಸರಿಸಿ ಒಡನಾಡುತ್ತಾ ಅವಳ ಮನಸ್ಸಿಗೆ ಹತ್ತಿರವಾಗಿದ್ದು ಮಾತ್ರ ತುಂಬಾ ಅನಿರೀಕ್ಷಿತ. ಇಷ್ಟು ವರ್ಷದವರೆಗೆ ಹುಡುಗಿಯರ ಅಂತರಂಗವನ್ನು ಹೆಚ್ಚು ಕೆದಕದ ನನಗೆ ಅದೊಂದು ಹೊಸ ಅನುಭವವಾಗಿತ್ತು. ಹೆಣ್ಣಿನ ಸುಂದರ ಮನೆಯೊಳಗೊಮ್ಮೆ ಹೋಗಿ ಬರುವ ತವಕ ಮಾತ್ರ ತುಂಬಾ ಕಾಡುತ್ತಿತ್ತು.
`ಬೇಡ ಕಣೋ ಆ ಹೆಂಗಸಿನ ಸಹವಾಸ… ಆಕೆ ವೇಶ್ಯೆ, ಸೊಳೆ, ಮೈಮಾರಿಕೊಳ್ಳುವ ಹೆಂಗಸು, ಸಿಗರೇಟು, ವಿಸ್ಕಿ ಕುಡಿಯುತ್ತಾಳೆ. ಮದುವೆಯಾಗದವಳು, ನೀನು ಏನು ಅಂತ ನನಗೆ ಗೊತ್ತು. ನಿನಗೆ ಸೂಟ್ ಆಗುವಂತಹ ಹೆಣ್ಣಲ್ಲ ಆಕೆ. ಏನಾದರೂ ಹೆಚ್ಚು ಕಡಿಮೆ ಆದರೆ ಅದು ನಿನ್ನ ಜೀವನಕ್ಕೆ ಅಪಾಯ…’
ಅವನ ಮಾತುಗಳು ಮುಂದುವರೆದಿದ್ದವು…
`ಬೇಡ ಕಣೋ.. ನಿನ್ನ ಸ್ನೇಹಿತ ಹೇಳಿದ ಹಾಗೆ ಸುಮ್ಮನೇ ಮಾತನಾಡಿಸಿಕೊಂಡು ಬಾ… ಸ್ವಲ್ಪ ಆಕರ್ಷಣೆ ಅನಿಸಿದರೆ, ಅವಳ ರೇಟು ವಿಚಾರಿಸಿ ಒಂದು ರಾತ್ರಿ ಅನುಭವಿಸಿ ಬಂದುಬಿಡು. ಇದಕ್ಕಿಂತ ಮುಂದೆ ಹೋಗಬೇಕಾದ ನಾಲ್ಕು ಹೆಜ್ಜೆಗಳನ್ನು ನೀನು ಖಂಡಿತ ಇಡಬೇಡ, ತುಂಬಾ ಕೆಟ್ಟದು. ಗಿಣಿ ಹೇಳಿದ ಹಾಗೆ ಹೇಳ್ತಾ ಇದೀನಿ.. ಈ ಹೆಂಗಸಿನ ಸಹವಾಸ ಬಿಟ್ಟುಬಿಡು, ಮುಂದೆ ಹೆಚ್ಚು ಕಡಿಮೆ ಆದರೆ ನನ್ನನ್ನು ಕೇಳಬೇಡ. ನೀನೇಕೆ ಹೇಳಲಿಲ್ಲ, ಎಚ್ಚರಿಸಲಿಲ್ಲ ಅಂತ ಬಯ್ಯಬೇಡ. ನನ್ನ ಮೇಲೆ ಗೂಬೆ ಕೂರಿಸಬೇಡ. ಮುಂದಾಗುವ ಅನಾಹುತವನ್ನು ಈಗಲೇ ನಾನು ಹೇಳಿಬಿಟ್ಟಿದ್ದೇನೆ’
ಹೀಗೆ ಪರಿಪರಿಯಾಗಿ ನನ್ನೊಳಗಿದ್ದವ ಹೊರಬಂದು ಬಾತ್ ರೂಮಿನಲ್ಲಿ ನನ್ನೆದುರು ನಿಂತು ಕನ್ನಡಿಯಲ್ಲಿ ಎಚ್ಚರಿಸಿದ್ದ. ಒಂದು ಕ್ಷಣ ಅವಾಕ್ಕಾದೆ. ಇವನ ಮಾತುಗಳುನ್ನು ಕೇಳಲೇ, ಬಿಡಲೇ ಅನ್ನುವ ದ್ವಂದ್ವ ನನ್ನನ್ನು ಕಾಡಿತು.
`ಯಾಕೋ ತುಂಬಾ ಹೆದರುತ್ತಿಯಾ.. ಆ ಹೆಂಗಸು ಒಂದೇ ಭೇಟಿಯಲ್ಲಿ ನಿನಗೆ ಇಷ್ಟೊಂದು ಹತ್ತಿರವಾಗಿದ್ದಾಳಲ್ಲ! ಅವಳ ಅಂತರಂಗದಲ್ಲಿ ನೂರಾರು ನೋವಿದೆ. ಹೇಳಿಕೊಳ್ಳಲಾಗದ ಕಷ್ಟಗಳಿವೆ. ಎನು ಅಂತ ತಿಳಿದುಕೊಳ್ಳೊಣ… ಅವಳು ಸಿಕ್ಕಿರುವ ಬಲೆಯಾದರೂ ಎಂತಹದ್ದು. ಹಾಗೆ ಒಮ್ಮೇ ನೋಡೆ ಬಿಡುವ. ಇವನ ಮಾತನ್ನು ನೀನು ನಂಬಿಕೊಂಡರೆ ಅಷ್ಟೇ…! ಜಗತ್ತಿನಲ್ಲಿ ಎಲ್ಲರೂ ಕೆಟ್ಟವರೇ… ಹಾಗಂತ ಕೆಟ್ಟವನಲ್ಲಿಯೂ ಒಂದು ಒಳ್ಳೆಯ ಮನಸ್ಸು ಇದ್ದೇ ಇರುತ್ತಲ್ವಾ?’
ಮನಸ್ಸಿನ ಮಾತುಗಳ ಮುಂದೆ ಬುದ್ದಿಯ ಮಾತುಗಳು ಹೆಚ್ಚಾದವು.
ಮನಸ್ಸಿನ ಮುಂದೆ ಬುದ್ದಿಯ ದಾರಿ ಸರಿ ಕಂಡಿತು.
`ಕಂಡೂ ಕಂಡೂ ಇರುಳು ಕಂಡ ಬಾವಿಯಲ್ಲಿ ಬೀಳ್ತೀನಿ ಅಂತ ಹೇಳುತ್ತಿಯಲ್ಲ, ಬೀಳು ಮಗನೇ… ಬಿದ್ದಾಗ ಮಾತ್ರ ನಾನು ನಿನಗೆ ನೆನಪಾಗೋದು..’ ಅಂತ ನೋವಿನಿಂದ ಕೂಗಿದ ಮನಸ್ಸು ನನ್ನ ಮೇಲೆ ಸಿಟ್ಟು ಮಾಡಿಕೊಂಡು ಒಳಗಡೆ ಸೇರಿಕೊಂಡಿತು. ಬುದ್ದಿ ತಾನು ಗೆದ್ದುಬಿಟ್ಟೆನೆಂಬ ಖುಷಿಯಲ್ಲಿ ತೇಲುತ್ತಿತ್ತು.
ಸಣ್ಣ ಕಿಸಿಕಿಸಿ ಸದ್ದು, ಬಾಟಲು, ಪಿಂಗಾಣಿ ಲೋಟ ಬಟ್ಟಲುಗಳ ಕಲರವ… ದೂರದಲ್ಲೆಲ್ಲೋ ಕೇಳುತ್ತಿರುವಂತಿದ್ದ ಮ್ಯಾಂಡೋಲಿನ್ ಸಂಗೀತ, ಅದಕ್ಕೆ ಇಂಗ್ಲೀಷ್ ಪದಗಳ ಹಾಡಿನ ದನಿ… ಧೂಳೆಬ್ಬಿಸುತ್ತಿರುವ ಧೂಮಪಾನದ ಸೊಗಡು… ಅರೆಬೆಂದ ಬೆಳಕಿನ ಕೋಣೆಯಲ್ಲಿ ಅವಳು ನನ್ನ ಮುಂದೆ, ತನ್ನ ಕಣ್ಣೀರನ್ನು ಒರೆಸಿಕೊಳ್ಳುತ್ತಾ…
`ಹಲೋ… ಯಾಕೆ ಸಪ್ಪಗಾಗಿದ್ದೀರಿ… ಯಾವ್ದೋ ಚಿಂತೆಯಲ್ಲಿ ಸಿಕ್ಕಿಹಾಕಿಕೊಂಡ ಹಾಗೆ ಕಾಣುತ್ತಿದ್ದೀರಿ… ನನ್ನ ಅಂತರಂಗದ ಮಾತುಗಳು ನಿಮಗೆ ಬೋರ್ ಹೊಡಿಸಿತೇ? ಏನಿಥಿಂಗ್ ವ್ರಾಂಗ್’ ಅಂತ ನನ್ನನ್ನು ಕೇಳಿದಳು.
`ನಥಿಂಗ್… ತೊಂದರೆ ಇಲ್ಲ. ನಿಮ್ಮ ಮಾತು ಮುಂದುವರೆಸಿ…’ ಒಳಗಿದ್ದ ಗೊಂದಲಗಳನ್ನು ತೋರ್ಪಡಿಸದೇ ಸಹಜ ನಗೆ ಬೀರಿ ಹೇಳಿದೆ.
ಆಗಲೇ ನಾವು ಕುಳಿತಿದ್ದ ಪಬ್ ಕ್ಲೋಸ್ ಆಗುವ ಸಮಯ ಬಂದಿತ್ತು.
`ಇಲ್ಲಿ ಬೇಡ.. ನಮ್ಮ ಮನೆಗೆ ಹೋಗೋಣ ಬನ್ನಿ. ಅಲ್ಲಿ ಯಾರೂ ನಮ್ಮನ್ನು ಡಿಸ್ಟರ್ಬ್ ಮಾಡುವುದಿಲ್ಲ’ ಅಂತ ಕರೆದಳು.
ಒಳಗಡೆ ಕೊನೆಯ ಕ್ಷಣದವರೆಗೂ ಬುದ್ದಿ ಮನಸ್ಸುಗಳು ಹೊಡೆದಾಡುತ್ತಲೇ ಇದ್ದವು. ಆಕೆಯ ಮನೆಗೆ ಹೋಗಬೇಡ ಅಂತ ಮನಸ್ಸು ಹೇಳಿ ತನ್ನ ಜವಾಬ್ದಾರಿಯನ್ನು ಮೆರೆಯಿತು. ಬುದ್ದಿ ಮಾತ್ರ ಆಸೆ ಹಾಗೂ ಯೌವ್ವನವೆಂಬ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಲು ಸಿದ್ದವಾಗಿ ನಿಂತಿತ್ತು.
ಅವಳನ್ನು ನಾನು ಹಿಂಬಾಲಿಸಿದೆ.
ಬಾಯಿಯೊಳಗಿದ್ದ ಹೊಗೆಯನ್ನು ನನ್ನ ಮುಖಕ್ಕೆ ಊಫ್ ಅಂತ ಎಸೆದು ಅವಳು ಸಣ್ಣಗೆ ನಗೆ ಬೀರಿದಳು. ತನ್ನ ಕೈಯಲ್ಲಿದ್ದ ಸಿಗರೇಟನ್ನು ಕೆಳಗೆ ಹಾಕಿದಳು.
ಅವಳ ಬೆಂಕಿ ಇನ್ನೂ ಆರಿರಲಿಲ್ಲ.
-ಫಕೀರ