ಅರಿಶಿಣ ಬುರುಡೆ ಹಕ್ಕಿ
ಹಳದಿ ದೇಹ, ಕಪ್ಪು ರೆಕ್ಕೆಯ ಆಕರ್ಷಕ ವರ್ಣ ಸಂಯೋಜನೆ ಹೊಂದಿರುವ ಅರಿಶಿಣ ಬುರುಡೆ ಹಕ್ಕಿಯು ಸದಾ ಕಾಲ ಶುಭ್ರವಾಗಿದ್ದು, ಚಟುವಟಿಕೆಯಿಂದ ಕೂಡಿರುತ್ತದೆ, ಸಂಘ ಜೀವನ ಬಯಸುವ ಈ ಹಕ್ಕಿಯು ಚಿಕ್ಕ-ಚೊಕ್ಕ ಸಂಸಾರವನ್ನು ಬಹಳ ಪ್ರೀತಿಸುವ ಪ್ರವೃತ್ತಿ ಹೊಂದಿದೆ.ಈ ಹಕ್ಕಿಗೆ ಸುವರ್ಣ ಹಕ್ಕಿ, ಮಂಜಲಕ್ಕಿ, ಹೊನ್ನಕ್ಕಿ, ಪಿಪೀಲಾಯ ಮುಂತಾದ ಹೆಸರುಗಳೂ ಇವೆ. ತನ್ನದೇ ಆದ ಒನಪು, ವಯ್ಯಾರ ಹಾಗೂ ಗಾಂಭೀರ್ಯ ಹೊಂದಿರುವ ಈ ಹಕ್ಕಿಗೆ ಮದುವಣಗಿತ್ತಿ ಎಂಬ ಹೆಸರಿನಿಂದಲೂ ಕರೆಯುವುದುಂಟು. ಅರಿಶಿಣ ಬುರುಡೆಯು ಒರಿಯಲ್ ಕುಂಡೂ ಜಾತಿಗೆ ಸೇರಿದ ಗುಬ್ಬಚ್ಚಿ ಗಾತ್ರದ ಹಕ್ಕಿಯಾಗಿದೆ.
ಗಂಡೇ ಸುರಸುಂದರ
ಲಘು ರಕ್ತವರ್ಣದ ಕೊಕ್ಕು, ಕಣ್ಣಿನ ಸುತ್ತ ಕಾಡಿಗೆ ತೀಡಿದಂತಹ ಗುರುತು, ಅರಿಶಿಣ ಬಣ್ಣದ ದೇಹಕ್ಕೆ ಕಪ್ಪು ರೆಕ್ಕೆಗಳ ಮೆರುಗು ಹೊಂದಿದ ಸುಂದರ ಪಕ್ಷಿಯೇ ಅರಿಶಿಣ ಬುರುಡೆ. ಅರಿಶಿಣ ಬುರುಡೆ ಹಕ್ಕಿಯ ಹೆಣ್ಣು ಮತ್ತು ಗಂಡುಗಳ ದೇಹರಚನೆಯಲ್ಲಿ ವ್ಯತ್ಯಾಸವಿದ್ದು, ಹೆಣ್ಣು ಹಕ್ಕಿಗಿಂತ ಗಂಡು ಹಕ್ಕಿಯು ಬಲುಸುಂದರವಾಗಿರುತ್ತದೆ. ಮದುವಣಗಿತ್ತಿ ಎಂಬ ಪರ್ಯಾಯ ಹೆಸರು ಇರುವುದು ಗಂಡು ಹಕ್ಕಿಗಳಿಗೇ. . ! ಗಂಡು ಹಕ್ಕಿಗಳು ಬಾಲದಲ್ಲಿ ಹೆಚ್ಚು ಹಳದಿ ಹೊಂದಿದ್ದು, ಕೊಕ್ಕು ಹಾಗೂ ಕಣ್ಣುಗಳಲ್ಲಿನ ಕೆಂಪು ಬಣ್ಣ ಮಂದವಾಗಿದೆ. ಹೆಣ್ಣು ಹಕ್ಕಿಯ ದೇಹದ ಕೆಳಭಾಗದಲ್ಲಿ ಬೂದು ಬಣ್ಣದ ಕಿರು ಪಟ್ಟೆಗಳಿರುತ್ತವೆ.
ಆವಾಸ
ಅರಿಶಿಣ ಬುರುಡೆ ಹಕ್ಕಿಯು ಬಲೂಚಿಸ್ತಾನ್, ಆಫ್ಘಾನಿಸ್ತಾನ್, ಪಾಕಿಸ್ತಾನ್, ತುರ್ಕಮೆನಿಸ್ತಾನ್, ಕಜಕಿಸ್ತಾನ್ ಹಾಗೂ ಹಿಮಾಲಯದ ನೇಪಾಳದವರೆಗೂ ತನ್ನ ಅಸ್ತಿತ್ವವನ್ನು ಹೊಂದಿದೆ. ಚಳಿಗಾಲದಲ್ಲಿ ಮಾತ್ರ ದಕ್ಷಿಣ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಅಂಡಮಾನ್ ಗಳಿಗೆ ವಲಸೆ ಬರುತ್ತದೆ. ಆದರೆ ಭಾರತದಲ್ಲಿ ಕಂಡುಬರುವ ಅರಿಶಿಣ ಬುರುಡೆ ಹಕ್ಕಿಯು ಬೇರೆ ಅರಿಶಿಣ ಬುರುಡೆಗಳಂತೆ ವಲಸೆ ಹೋಗದೆ ಅಲ್ಲೇ ಉಳಿಯುತ್ತದೆ. ಅರಿಶಿಣ ಬುರುಡೆಯು ನಿತ್ಯಹರಿದ್ವರ್ಣದ ಕಾಡು, ಕುರುಚಲು ಕಾಡು, ಗೋಮಾಳ, ತೋಪುಗಳು, ಉಧ್ಯಾನವನ, ತೋಟ ಮಾತ್ರವಲ್ಲದೇ ಜನವಸತಿ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಕಂಡು ಬರುತ್ತದೆ.
ಹಣ್ಣುಪ್ರಿಯ ಹಕ್ಕಿ
ಅರಿಶಿಣ ಬುರುಡೆಯು ಹೆಚ್ಚಾಗಿ ಕಾಡಿನಲ್ಲಿ ದೊರೆಯುವ ಎಲ್ಲಾ ತರಹದ ಹಣ್ಣುಗಳನ್ನು ಸೇವಿಸುತ್ತದೆಯಾದರೂ ಬಯಲುಸೀಮೆಯ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಅತ್ತಿ ಹಣ್ಣು, ಗೋಣಿ ಹಣ್ಣು, ಆಲದಹಣ್ಣು, ಬಸರಿಹಣ್ನುಗಳನ್ನು ಹೆಚ್ಚಾಗಿ ಸೇವಿಸುತ್ತಿರುತ್ತದೆ. ಮರಗಳು ಹಣ್ಣುಬಿಟ್ಟ ಕಾಲದಲ್ಲಿ ಅರಿಶಿಣ ಬುರುಡೆಯು ಇತರೆ ಹಕ್ಕಿಗಳೊಡಗೂಡಿ ಸದ್ದುಮಾಡುತ್ತಾ ಹಣ್ಣುಗಳನ್ನು ತಿನ್ನುವುದನ್ನು ನೋಡುವುದೇ ಒಂದು ಆನಂದ. ಹಣ್ಣುಗಳು ದೊರೆಯದಿದ್ದಾಗ ಕೀಟಗಳನ್ನು ಹಿಡಿದು ತಿನ್ನುತ್ತದೆ. ಅಲ್ಲದೇ ಹೂವಿನ ಮಕರಂದವನ್ನು ಹೀರುತ್ತದೆ. ಕೆಲವೊಮ್ಮೆ ಹಾರುವ ಹಲ್ಲಿಯನ್ನೂ ಬೇಟೆಯಾಡಿ ಹಿಡಿದು ತಿನ್ನುತ್ತದೆ.ಅರಿಶಿಣ ಬುರುಡೆಯು ಹಣ್ಣುಗಳನ್ನು ತಿನ್ನುವುದರ ಜೊತೆಗೆ ಕೆಲವು ಹಣ್ಣುಗಳ ಬೀಜಗಳನ್ನೂ ಪ್ರಸಾರ ಮಾಡುತ್ತಿರುತ್ತದೆ. ಗುಡ್ಡಗಳಲ್ಲಿ ಕಂಡುಬರುವ ಲಾಂಟೆನಾ ಗಿಡಗಳು ಎಲ್ಲೆಲ್ಲೂ ಕಂಡುಬರಲು ಕಾರಣ ಈ ಅರಿಶಿಣ ಬುರುಡೆಹಕ್ಕಿಗಳೇ ಎಂಬುದು ಪಕ್ಷಿತಜ್ಞರ ವಾದ.
ಗೂಡೊಂದು ತೊಟ್ಟಿಲಿನಂತೆ
ಅರಿಶಿಣ ಬುರುಡೆ ಹಕ್ಕಿ
ಹೆಣ್ಣು ಅರಿಶಿಣ ಬುರುಡೆ ಹಕ್ಕಿ
ಗಂಡು ಅರಿಶಿಣ ಬುರುಡೆ ಹಕ್ಕಿ
ಅರಿಶಿಣ ಬುರುಡೆ ಹಕ್ಕಿ
ಏಪ್ರಿಲ್ ನಿಂದ ಆಗಸ್ಟ್ ವರೆಗೆ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗುವ ಅರಿಶಿಣ ಬುರುಡೆಯು ಜೇಡರಬಲೆ, ನಾರು ಮತ್ತು ಎಲೆಗಳಿಂದ ಮರದ ಕೊಂಬೆಗಳ ಮಧ್ಯದಲ್ಲಿ ತೊಟ್ಟಿಲಿನಂತಹ ಗೂಡನ್ನು ಕಟ್ಟುತ್ತದೆ ಮತ್ತು ಆ ಗೂಡಿನಲ್ಲಿ ಬಿಳಿಯ ತೊಗಟಿಯ ಮೇಲೆ ಮಣ್ಣು ಹಾಗೂ ಕಪ್ಪನೆಯ ಚುಕ್ಕಿಗಳನ್ನೊಳಗೊಂಡ ಮೂರರಿಂದ ನಾಲ್ಕು ಮೊಟ್ಟೆಗಳನ್ನಿಟ್ಟು ಕಾವುಕೊಟ್ಟು ಮರಿಮಾಡುತ್ತದೆ, ಮರಿಗಳ ಲಾಲನೆ ಪಾಲನೆಯನ್ನು ಗಂಡು ಹಾಗೂ ಹೆಣ್ಣು ಹಕ್ಕಿಗಳೆರೆಡೂ ಸಮನಾಗಿ ನಿರ್ವಹಿಸುತ್ತವೆ. ಅರಿಶಿಣ ಬುರುಡೆಯು ಕಾಜಾಣ ಹಕ್ಕಿಯ ಗೂಡಿನ ಪಕ್ಕದಲ್ಲೇ ಗೂಡನ್ನು ಕಟ್ಟುತ್ತದೆ.
ಅಭ್ಯಂಗಸ್ನಾನ
ಸದಾಕಾಲ ಚಟುವಟಿಕೆಯಿಂದಿರುವ ಅರಿಶಿಣ ಬುರುಡೆಯು ಶುಭ್ರತೆಗೆ ಹೆಚ್ಚು ಒತ್ತುಕೊಡುತ್ತದೆ. ಹರಿಯುವ ನೀರಾದರೂ ಸರಿ ಅತವಾ ನಿಂತ ನೀರಾದರೂ ಸರಿ ನೀರು ಶುದ್ಧವಾಗಿದ್ದರೆ ಸಾಕು ಆ ನೀರಿನಲ್ಲಿ ಪದೇಪದೇ ಮುಳುಗೇಳುತ್ತಾ ತನ್ನ ದೇಹೋತ್ಸಾಹವನ್ನೂ ವೃದ್ಧಿಸಿಕೊಳ್ಳುವುದರ ಮೂಲಕ ತಾನು ದೇಹವನ್ನು ಸದಾಕಾಲ ಶುಭ್ರವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುತ್ತದೆ.
ಕಾಗೆ, ಹದ್ದು, ಗಿಡುಗದಂತಹ ಭಕ್ಷಕಗಳು ಮಾಡುವ ಅಹೋರಾತ್ರಿ ಧಾಳಿಗಳಿಂದಾಗಿ ತನ್ನ ಮೊಟ್ಟೆಗಳನ್ನು ಉಳಿಸಿಕೊಳ್ಳಲು ಸದಾ ಕಾಲ ಹೋರಾಟಮಾಡುತ್ತಿರುವ ಅರಿಶಿಣ ಬುರುಡೆಯು ಅಳಿವಿನಂಚಿಗೆ ಸಿಲುಕಿದ್ದು, ತನ್ನ ಅಳಿವು ಉಳುವಿಗಾಗಿ ಹೋರಾಟಮಾಡಬೇಕಾದ ಅನಿವಾರ್ಯತೆಯು ಒದಗಿಬಂದಿರುವುದು ದುರ್ದೈವವೇ ಸರಿ.
-ಪ. ನಾ. ಹಳ್ಳಿ. ಹರೀಶ್ ಕುಮಾರ್