ಕರ್ನಾಟಕ ರಾಜಕಾರಣದಲ್ಲಿ ದೇವರಾಜ ಅರಸು ಅವರ ಹೆಸರು ಅನೇಕ ಕಾರಣಗಳಿಗೆ ಮಹತ್ವಪಡೆದುಕೊಂಡಿದೆ. ಅಂತೆಯೇ ವಿವಾದಕ್ಕೂ ಉಲ್ಲೇಖಿತವಾಗುತ್ತದೆ. ಆದರೆ, ಇತ್ತೀಚಿನವರೆಗೆ ಅವರ ಮಿತಿಗಳನ್ನು ಕುರಿತು ನಡೆದಷ್ಟು ಮಾತುಕತೆಗಳು ಅವರ ಸಾಧನೆ ಕುರಿತು ನಡೆದಿರಲಿಲ್ಲ. ಅರಸು ಅವರ ಜನ್ಮಶತಮಾನೋತ್ಸವದ ನೆಪದಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗ, ಕೆಲ ಅರಸು ಪರ ಸಂಘಟನೆಗಳು ಮತ್ತು ಅಭಿಮಾನಿಗಳು ಮತ್ತು ಕರ್ನಾಟಕ ಸರ್ಕಾರ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ವಸ್ತುನಿಷ್ಟ ಸಂಗತಿಗಳು ಚರ್ಚೆಗೆ ಬಂದಿವೆ.
ಪ್ರಬಲ ಜಾತಿಗಳ ಬೆಂಬಲವಿಲ್ಲದೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಹುದ್ದೆ ಪಡೆಯುವುದು, ಸುಧಾರಣೆಗಳನ್ನು ಜಾರಿಗೆ ತರುವುದರ ಹಿಂದಿರುವ ಕಷ್ಟಗಳನ್ನು ಎನ್.ಎಸ್.ಶಂಕರ್ ಅವರ ಕೃತಿ ‘ಅರಸು ಯುಗ’ ಸೂಕ್ಷ್ಮವಾಗಿ, ಖಚಿತ ದಾಖಲೆಗಳೊಂದಿಗೆ ಮಂಡಿಸುತ್ತದೆ. ದೇವರಾಜ ಅರಸು ಅವರ ದೂರದೃಷ್ಟಿ ಅವರ ಸಮಕಾಲೀನ ಮತ್ತು ಅನುಯಾಯಿಗಳಲ್ಲೇ ಇಲ್ಲದಿರುವುದನ್ನು ಈ ಕೃತಿಯಲ್ಲಿ ಸ್ಪಷ್ಟವಾಗಿ ಕಾಣಬಹುದು.
ಹಾವನೂರು ವರದಿ, ಕೂಲಿಗಾಗಿ ಕಾಳು ಯೋಜನೆ, ಉಳುವವನೇ ಹೊಲದೊಡೆಯ, ಜೀತಮುಕ್ತಿ, ಮಲಹೊರುವ ಪದ್ಧತಿ ನಿಷೇಧ ಮೊದಲಾದ ಕ್ರಾಂತಿಕಾರಕ ನಿರ್ಧಾರಗಳ ಹಿಂದೆ ಅರಸು ಅವರಿಗಿದ್ದ ರಾಜಕೀಯ ಇಚ್ಛಾಶಕ್ತಿ ಹಾಗೂ ದೂರದೃಷ್ಟಿಯನ್ನೂ ಓದುಗರೆದುರು ತೆರೆದಿಡುತ್ತದೆ. ಉಳುವವನೇ ಹೊಲದೊಡೆಯ ಕಾನೂನಿನ ಮೂಲಕ ಕರ್ನಾಟಕದಲ್ಲಿ ಉಂಟಾದ ಬದಲಾವಣೆಗಳನ್ನು ಎನ್.ಎಸ್.ಶಂಕರ್ ಹೀಗೆ ದಾಖಲಿಸುತ್ತಾರೆ: “4,85,000 ಗೇಣಿದಾರರು ಸುಮಾರು 21 ಲಕ್ಷ ಎಕರೆ ಪಡೆದು ಭೂಮಾಲೀಕರಾದರು, ಅದರಲ್ಲಿ 14,700 ದಲಿತ ಭೂಹೀನರು ಒಂದು ಲಕ್ಷ ಎಕರೆಗೂ ಹೆಚ್ಚಿನ ವಿಸ್ತೀರ್ಣದ ಭೂಮಿಯನ್ನು ಗಳಿಸಿದ್ದು ಕಡಿಮೆ ಸಾಧನೆಯೇನಲ್ಲ. ಇದರ ಜೊತೆಗೆ 3,700 ಕೃಷಿ ಕಾರ್ಮಿಕರು ತಾವು ವಾಸಿಸುತ್ತಿದ್ದ ಮನೆಗಳ ಮಾಲೀಕರೂ ಆದರು.”(ಪು. 92)
ಇನ್ನು ಹೀಗೆ ಭೂಮಿ ಹಂಚಿಕೆ ಮಾಡಿದವರಿಗೆ 20 ಕೋಟಿ 30 ಲಕ್ಷ ರೂಪಾಯಿಗಳನ್ನು ಪರಿಹಾರರೂಪವಾಗಿ ನೀಡಿರುವ ಅರಸರ ನ್ಯಾಯ ದೃಷ್ಟಿಕೋನದೆಡೆಗೆ ಬೆಳಕು ಚೆಲ್ಲಲಾಗಿದೆ.
ಅಧಿಕಾರ ಇರುವುದು ಜನರ ಸೇವೆಗೆ ಎಂಬ ಎಚ್ಚರ ಅರಸರಿಗಿತ್ತು ಎಂಬುದನ್ನೂ, ವೃದ್ಧಾಪ್ಯ ವೇತನ ಸೇವೆಗಳನ್ನು ಅಧಿಕಾರಿಗಳೇ ಜನರ ಬಳಿ ಹೋಗಿ ಒದಿಗಿಸಬೇಕೆಂಬ ಅವರ ನಿಲುವು ಜನರಪರ ಆಡಳಿತದ ಸೂಕ್ಷ್ಮತೆಗಳನ್ನು ವಿವರಿಸುತ್ತದೆ.
ಚೋಮನ ದುಡಿ ಕಾದಂಬರಿ ಕುರಿತು ಕೆಲವು ದಲಿತ ಮತ್ತು ಸಾಮಾಜಿಕ ನ್ಯಾಯದ ಪರ ವಾದಿಸುವವರಿಗೆ ಅನೇಕ ತಕರಾರುಗಳಿವೆ. ಶಿವರಾಮ ಕಾರಂತರು “ಚೋಮನಿಗೆ ಕಾದಮಂಬರಿಯಲ್ಲಾದರೂ ಭೂಮಿಯನ್ನು ಕೊಡಿಸಲಿಲ್ಲ” ಎಂಬುದು ಅದರಲ್ಲಿ ಪ್ರಮುಖವಾಗಿದೆ. ಆದರೆ ಶಿವರಾಮ ಕಾರಂತರ ಕಾದಂಬರಿಯೇ ತಮ್ಮ ಭೂ ಸುಧಾರಣೆ ಕಾಯ್ದೆಗೆ ಪ್ರೇರಣೆ ಎಂದು ಸ್ವತಃ ದೇವರಾಜ ಅರಸರು ಹೇಳಿಕೊಂಡಿರುವುದನ್ನು ಈ ಕೃತಿಯಲ್ಲಿ ಕಾಣಬಹುದು. ಶಿವರಾಮ ಕಾರಂತರಿಗೂ ಕೇವಲ ಕಾದಂಬರಿಯಲ್ಲಿ ಮಾತ್ರ ದಲಿತರಿಗೆ ಭೂಮಿ ಕೊಡಿಸುವುದರಿಂದ ಲಾಭವಿಲ್ಲವೆಂಬುದು ತಿಳಿದಿತ್ತು. ಆ ಕಾರಣದಿಂದಲೇ ಸ್ಥಾಪಿತ, ಸಾಂಪ್ರಾದಾಯಿಕ ಹಿಡಿತಗಳಿಂದ ದಲಿತರಿಗೆ ಭೂಮಿ ಸಿಗುವುದು ಸರಳವಲ್ಲ ಎಂಬುದನ್ನೇ ಅವರು ‘ಚೋಮನ ದುಡಿ’ಯಲ್ಲಿ ಪ್ರತಿಪಾದಿಸಿದ್ದರು.
ಜೀತ ನಿಷೇಧ, ಮಲಹೊರುವ ಪದ್ಧತಿ ನಿಷೇಧಗಳ ಮುಂದಿನ ಸವಾಲುಗಳನ್ನು ದೇವರಾಜ ಅರಸರು ನಿರ್ವಹಿಸಿದ ಬಗೆ, ಋಣ ಪರಿಹಾರ ಕಾಯ್ದೆ ಜಾರಿಯಲ್ಲಿ ತೋರಿದ ಎಚ್ಚರ ಹಾಗೂ ವೃಕ್ಷ ಸಂರಕ್ಷಣಾ ಕಾಯ್ದೆ ಜಾರಿಗೆ ಮುಂದಾಗಿ ಬೆಂಗಳೂರನ್ನು ಉದ್ಯಾನ ನಗರಿಯನ್ನಾಗಿಸಿದಂತಹ ಅನೇಕ ಸಾಧನೆಗಳನ್ನು ಈ ಕೃತಿಯಲ್ಲಿ ಕಾಣಬಹುದು.
ಇದರ ಜೊತೆಗೆ ದೇವರಾಜ ಅರಸು ಅವರ ಅನುಯಾಯಿಗಳು ಹಾಗೂ ಸ್ವಪಕ್ಷೀಯರ ಹುನ್ನಾರಗಳನ್ನೂ ಈ ಕೃತಿ ಬಯಲಿಗೆಳಿದಿದೆ. ಅಧಿಕಾರ ಸಿಕ್ಕ ಎಲ್ಲರೂ ಅರಸು ಅವರಂತೆ ದೀನದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದರೆ ಕರ್ನಾಟಕದ ಇಂದಿನ ಸ್ಥಿತಿ ಇನ್ನಷ್ಟು ಉತ್ತಮವಾಗಿರುತ್ತಿತ್ತು ಎಂದು ಅರಸು ಯುಗ ಓದುಗರಿಗೆ ಅನಿಸುತ್ತದೆ.
ಇನ್ನು ಆಡಳಿತದಲ್ಲಿ ತಂದ ದಕ್ಷತೆ, ಅಧಿಕಾರಿಗಳ ಮೇಲಿನ ಹಿಡಿತ ಹೇಗಿರಬೇಕೆಂಬ ಮಹತ್ವದ ವಿಚಾರಗಳನ್ನು ಈ ಕೃತಿ ಕರ್ನಾಟಕದ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ತಿಳಿಸುತ್ತದೆ.
ದೇವರಾಜ ಅರಸರ ಕಾಲದ ಭ್ರಷ್ಟಾಚಾರದ ಆಪಾದನೆಗಳಿಗೆ ಅಂದಿನ ಮಾಧ್ಯಮಗಳು ಹೇಗೆ ಕಾರಣವಾದವು, ಜನಪರ ಆಡಳಿತದ ಅಲೆಯ ಕುರಿತು ಆಡಬೇಕಾದ ಮಾತುಗಳ ಬದಲಿಗೆ, ಭ್ರಷ್ಟಾಚಾರ ಏಕೆ ಸ್ಥಾನ ಪಡೆಯಿತು ಮೊದಲಾದ ವಿಷಯಗಳು ಈ ಕೃತಿಯಿಂದ ಬಹಿರಂಗವಾಗಿವೆ.
ಇನ್ನು ಸ್ವತಃ ದೇವರಾಜ ಅರಸರ ಭ್ರಷ್ಟಾಚಾರದ ಕುರಿತು ಇರುವ ಅನುಮಾನಗಳಿಗೂ ಈ ಕೃತಿಯ ಕಡೆಯ ಅಧ್ಯಾಯ ಉತ್ತರವಾಗಿದೆ. ಅರಸರ ಅನೇಕ ಒಡನಾಡಿಗಳ ಮಾತುಗಳನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಿರುವುದರಿಂದಾಗಿ ಕೃತಿಗೆ ಅಧಿಕೃತತೆ ಲಭಿಸಿದೆ. 126 ಪುಟಗಳ ಅತಿ ಚಿಕ್ಕ ವಿಸ್ತಾರದಲ್ಲಿ ಅರಸು ಅವರ ಬಾಲ್ಯ, ಹರೆಯ, ರಾಜಕೀಯ ಏಳುಬೀಳುಗಳನ್ನು ಯಾವುದೇ ಭಾವೋದ್ವೇಗವಿಲ್ಲದೆ, ತಣ್ಣನೆಯ ಧ್ವನಿಯಲ್ಲಿ ಕಟ್ಟಿಕೊಟ್ಟಿರುವುದು ಈ ಕೃತಿಯ ವಿಶೇಷತೆ.
-ಪ್ರದೀಪ್ ಮಾಲ್ಗುಡಿ
ಕೃತಿ: ಅರಸು ಯುಗ
ಪ್ರಕಾಶಕರು: ಡಿ. ದೇವರಾಜ ಅರಸು ಜನ್ಮಶತಮಾನೋತ್ಸವ ಸಮಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು-52
ಮುದ್ರಣ: 2016