ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಕೊನೆಯ ಭಾಗ): ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ

ಈ ಮಟ್ಟದ ಹಾಗೂ ಈ ಮೊತ್ತದ ಕಾಡು ನಾಶ ಈ ಹಿಂದೆಯೂ ಆಗಿತ್ತು. ಬಗರ್ ಹುಕುಂ ಕಾಯ್ದೆ 1989-90ರಲ್ಲಿ ಜಾರಿಯಾದ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯ ಮಿಣಿಸುತ್ತಿನ ಮರಗಳ ಮಾರಣ ಹೋಮವಾಗಿತ್ತು. ಮರಗಳ ಬುಡಕ್ಕೆ ಬೆಂಕಿ ಹಚ್ಚಿ ಸುಡಲಾಗಿತ್ತು. ಆ ಕಾರಣಕ್ಕಾಗಿಯೇ ಕಳೆದ 10 ವರ್ಷಗಳಲ್ಲಿ ತಾಲ್ಲೂಕಿನಲ್ಲಿ 40% ಮಳೆ ಪ್ರಮಾಣ ಕಡಿಮೆಯಾಗಿದೆ. ರಾಜಕೀಯ ದೂರದೃಷ್ಟಿಯ ಕೊರತೆ, ಅತಿಯಾಸೆ, ರೈತರಲ್ಲಿ ಪರಸ್ಪರ ಪೈಪೋಟಿ ಮನೋಭಾವ (ಸರ್ಕಾರಿ ಕೃಪಾಪೋಷಿತ ಇಲಾಖೆಗಳೇ ಹಸಿರು ಕ್ರಾಂತಿಯ ನೆಪದಲ್ಲಿ ಕ್ಷೇತ್ರೋತ್ಸವ ಎಂಬ ಸಂಭ್ರಮಾಚರಣೆ ಪ್ರಾರಂಭಿಸಿದ್ದರಿಂದ ಆದ ವ್ಯತಿರಿಕ್ತ ಪರಿಣಾಮವೇ ರೈತರಲ್ಲಿ ಪರಸ್ಪರ ಪೈಪೋಟಿ), ಕೂಡಿಡುವ ಮನೋಭಾವ, ಪರಿಸರ ನಿಷ್ಕಾಳಜಿ, ವನ್ಯಜೀವಿಗಳ ಕುರಿತ ಅಸಡ್ಡೆ, ಅತೀ ರಾಸಾಯನಿಕಗಳ ಬಳಕೆ, ಅನಿಯಮಿತ ಕೊಳವೆ ಬಾವಿಗಳು, ಅನಿಯಂತ್ರಿತ ಕಾಡು ನಾಶ ಇತ್ಯಾದಿಗಳು ಇಡೀ ತಾಲ್ಲೂಕಿನ ಭೌಗೋಳಿಕ ಆರೋಗ್ಯವನ್ನು ಹದಗೆಡಿಸಿದೆ. ಇಷ್ಟಲ್ಲದೆ ಅನಿಯಂತ್ರಿತ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಕಾಡು ನಾಶಕ್ಕೆ ಬೇರಯದೇ ಲೆಕ್ಕ ಇಡಬೇಕಾಗುತ್ತದೆ. ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಯ ಹೆಸರಿನಲ್ಲಿ ರೈತರ ಜಮೀನಿನ ಜೊತೆಯಲ್ಲಿ ಕಾಡುಪ್ರಾಣಿಗಳ ಆವಾಸಸ್ಥಾನವಾದ ಕಾಡುಗಳನ್ನು ನುಂಗಿ ಹಾಕಲಾಗುತ್ತಿದೆ. ಸಾಗರ ತಾಲ್ಲೂಕಿನ ಮಳೆಕಾಡುಗಳನ್ನು ಇದೇ ರೀತಿ ನಾಶ ಮಾಡುತ್ತಿದ್ದರೆ ಭವಿಷ್ಯ ಊಹಿಸಲು ಸಾಧ್ಯವಾಗದಷ್ಟು ಭಯಾನಕವಾಗಲಿದೆ. ಕುಡಿಯುವ ನೀರಿಗಾಗಿ ದಿನನಿತ್ಯ ಹೊಡೆದಾಟಗಳು, ಬಡಿದಾಟಗಳು ಶುರುವಾಗುವ ದಿನ ಹೆಚ್ಚು ದೂರವಿಲ್ಲ. ಈ ಬಾರಿ ವಾಡಿಕೆಯ 20% ಮಳೆನಷ್ಟು ಮಳೆ ಆಗದೇ ಇರುವುದರಿಂದ, ಇಡೀ ತಾಲ್ಲೂಕಿನ ಕೆರೆಕಟ್ಟೆಗಳು ಮಳೆಗಾಲ ಮುಗಿಯುವ ಮುಂಚಿತವಾಗಿ ಬತ್ತಿ ಹೋಗಿವೆ. ಮುಖ್ಯ ಕೋಡಿಯಲ್ಲಿ ಜನವರಿ ಅಂತ್ಯದವರೆಗೂ ನೀರು ಹರಿಯುತ್ತಿದ್ದ ಕಾಲ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ನೀರಿನ ಅಭಾವದಿಂದ ಅಳಿದುಳಿದ ವನ್ಯಸಂಕುಲ ಅಳಿದು ಹೋಗುತ್ತಿದೆ. ಕಾಡಿನ ಪ್ರಮಾಣ ಕಡಿಮೆಯಾದಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಹೇಗೆ ಎಂಬುದನ್ನು ಅಲ್ಬೀಡೋ ಪರಿಣಾಮವನ್ನು ವಿಶ್ಲೇಷಣೆ ಮಾಡುವುದರ ಮೂಲಕ ತಿಳಿದುಕೊಳ್ಳಬಹುದು.

ಮಲೆನಾಡಿನಲ್ಲಿ ವಾತಾವರಣದಲ್ಲಿ ಬಿಸಿ ಹೆಚ್ಚಾಗುತ್ತಿದೆ ಎಂಬುದು ಇಲ್ಲಿ ವಾಸಿಸುತ್ತಿರುವ ಎಲ್ಲರ ಅನುಭವವಾಗಿದೆ. ಏಕೆ? ಪ್ರಕೃತಿದತ್ತವಾಗಿ, ಇಲ್ಲಿನ ಭೌಗೋಳಿಕ ಪರಿಸರಕ್ಕನುಗುಣವಾಗಿ ಇಲ್ಲಿ ಮರಗಳ ಸಾಂದ್ರತೆ ನೈಸರ್ಗಿಕವಾಗಿ ಹೆಚ್ಚು ಇದೆ. ಸೂರ್ಯನಿಂದ ಬರುವ ಅವಗೆಂಪು ಕಿರಣಗಳನ್ನು ಇಲ್ಲಿನ ನೈಸರ್ಗಿಕ ಅರಣ್ಯಗಳು ಎಲೆಗಳ ಮೂಲಕ ಹೀರಿಕೊಂಡು ಆಹಾರವನ್ನು ತಯಾರಿಸಿಕೊಳ್ಳುತ್ತವೆ. ಹೀಗೆ ಸೂರ್ಯನಿಂದ ಬರುವ ಶಾಖವನ್ನು, ವಾತಾವರಣದ ಇಂಗಾಲಾಮ್ಲವನ್ನು ಹೆಚ್ಚು ಪ್ರಮಾಣದಲ್ಲಿ ಹೀರಿಕೊಂಡು ಅತ್ಯಲ್ಪ ಪ್ರಮಾಣದ ಶಾಖವನ್ನು ಮತ್ತೆ ವಾತಾವರಣಕ್ಕೆ ಸೇರಿಸುವ ಕೆಲಸವನ್ನು ಮರಗಳು ಮಾಡುತ್ತವೆ, ಅಂದರೆ 0.15% ಶಾಖವನ್ನು ಮತ್ತೆ ಮರಗಳು ವಾತಾವರಣಕ್ಕೆ ಸೇರಿಸುತ್ತವೆ. ಇದೇ ಅರಣ್ಯವನ್ನು ಕಡಿದು, ಇಲ್ಲಿ ಹಸಿರಿನಿಂದ ನಳನಳಿಸುವ ಕೃಷಿಯನ್ನೇ ಮಾಡುತ್ತೀರಿ ಎಂದಿಟ್ಟುಕೊಂಡರೆ,  ಸೂರ್ಯನಿಂದ ಬಂದ ಶಾಖವನ್ನು ಪ್ರತಿಫಲಿಸುವ ಪ್ರಮಾಣ 0.25% ಆಗಿರುತ್ತದೆ. ಇದೇ ಜಾಗದಲ್ಲಿ ನೀವು ಕಾಂಕ್ರೀಟ್ ಕಟ್ಟಡವನ್ನು ಕಟ್ಟುತ್ತೀರಿ ಎಂದಿಟ್ಟುಕೊಂಡರೆ, ಪ್ರತಿಫಲನ ಪ್ರಮಾಣ 0.55% ಆಗಿರುತ್ತದೆ. ಅಂದರೆ ಕಾಡನ್ನು ಕಡಿದು ಬೇರೆ ಯಾವುದೇ ಚಟುವಟಿಕೆಯನ್ನು ಮಾಡಿದರೂ ವಾತಾವರಣದ ಬಿಸಿ ಹೆಚ್ಚುತ್ತಲೇ ಹೋಗುತ್ತದೆ. ನೀರು ಆವಿಯಾಗಿ, ಮೋಡವಾಗಿ, ಕಡೆಗೊಮ್ಮೆ ಘನೀಭವಿಸಿ ಮಳೆಯಾಗುವ ಪ್ರಕ್ರಿಯೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಹಾಗೆಯೇ ಮನುಷ್ಯ ಬದುಕಲು ಆಮ್ಲಜನಕ ಬೇಕು. ಆಮ್ಲಜನಕವನ್ನು ತಯಾರಿಸುವುದು ಮತ್ತೆ ಇದೇ ಮರಗಳೇ ಆಗಿವೆ. ಹಾಗಾದರೆ ಒಂದು ಮನುಷ್ಯನಿಗೆ ಆರೋಗ್ಯವಾಗಿ ಬದುಕಲು ಎಷ್ಟು ಮರಗಳು ಬೇಕು. ಇದಕ್ಕೊಂದು ಲೆಕ್ಕಾಚಾರವಿದೆ. ಒಂದು ಎಕರೆ ದಟ್ಟಾರಣ್ಯ ಪ್ರದೇಶದಿಂದ (ಎಕರೆಗೆ 180 ಮರಗಳು) ಉತ್ಪತ್ತಿಯಾಗುವ ಆಮ್ಲಜನಕದಿಂದ 18 ಜನ ಬದುಕಬಹುದು. ಅಂದರೆ, ಒಬ್ಬರಿಗೆ ಬರೀ ಉಸಿರಾಡಲು 10 ಮರಗಳು ಬೇಕಾಗುತ್ತವೆ. ಅದೇ ಒಬ್ಬ ವ್ಯಕ್ತಿ ಕಾರನ್ನು ಹೊಂದಿದ್ದಾನೆ ಹಾಗೂ ವರ್ಷಕ್ಕೆ ಸರಾಸರಿ 12 ಸಾವಿರ ಕಿ.ಮಿಯನ್ನು ಕಾರಿನಲ್ಲೆ ಚಲಿಸುತ್ತಾನೆ ಎಂದಿಟ್ಟುಕೊಂಡರೆ, ಆ ಕಾರಿನಿಂದ ಹೊರಹೊಮ್ಮುವ ಇಂಗಾಲಾಮ್ಲವನ್ನು ಹೀರಿಕೊಳ್ಳಲು ಮತ್ತೆ 60 ಹೆಚ್ಚುವರಿ ಮರಗಳು ಬೇಕಾಗುತ್ತವೆ. 

ಸಾಗರ ತಾಲ್ಲೂಕಿನ 2.5 ಲಕ್ಷ ಜನರು ಒಂದಲ್ಲಾ ಒಂದು ರೀತಿಯಲ್ಲಿ ಕೃಷಿ ಮತ್ತು ತೋಟಗಾರಿಕೆಯನ್ನು ಅವಲಂಬಿಸಿದ್ದಾರೆ. ಈ ಜನಸಂಖ್ಯೆಯಲ್ಲಿ ಸುಮಾರು 65 ಸಾವಿರ ಜನರು ಸಾಗರ ನಗರದಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಅಧಿಕಾರಿ ವರ್ಗವನ್ನು ಹೊರತು ಪಡಿಸಿದರೆ, ಉಳಿದ ಎಲ್ಲಾ ವ್ಯಾಪಾರ ವ್ಯವಹಾರಗಳು ಇಲ್ಲಿನ ಮಳೆ-ಬೆಳೆಯನ್ನೇ ಅವಲಂಬಿಸಿದೆ. ಹಾಗಾಗಿ, ಕಾಡುನಾಶದಿಂದಾಗುವ ವಾತಾವರಣ ಬದಲಾವಣೆ ಇಡೀ ತಾಲ್ಲೂಕನ್ನೇ ಕಾಡಲಿದೆ. ಕೃಷಿ-ತೋಟಗಾರಿಕಾ ಪ್ರಧಾನವಾದ ಸಾಗರ ತಾಲ್ಲೂಕಿನ ಜಲವಿದ್ಯುತ್ ಘಟಕವು ರಾಜ್ಯಕ್ಕೆ ಅಗತ್ಯವಿರುವ 40% ವಿದ್ಯುಚ್ಛಕ್ತಿಯನ್ನು ಸರಬರಾಜು ಮಾಡುತ್ತದೆ. ಕಳೆದೆರೆಡು ದಶಕಗಳಿಂದ ಮಳೆಯ ಅಭಾವದಿಂದಾಗಿ ವಿದ್ಯುಚ್ಛಕ್ತಿಯ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದ್ದು, ವಾತಾವರಣ ಬದಲಾವಣೆಗೆ ಇದು ಪರೋಕ್ಷ ಕಾರಣವಾಗಿ ಪರಿಣಮಿಸಿದೆ. ವಿದ್ಯುತ್ ಕ್ಷಾಮವನ್ನು ನೀಗಿಸಲು ರಾಜ್ಯ ಸರ್ಕಾರಗಳು ಹೆಚ್ಚು-ಹೆಚ್ಚು ಕಲ್ಲಿದ್ದಲು ಆಧಾರಿತ ವಿದ್ಯುತ್ತಿಗೆ ಮೊರೆ ಹೋಗುತ್ತಿವೆ.
 
ಹಾಗಾದರೆ ಇದಕ್ಕೆ ಪರಿಹಾರವೇನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅತ್ಯಂತ ಶ್ರಮದ ಕೆಲಸವೇ ಆಗಿದೆ. ಆದರೂ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಅನಾಹುತಕಾರಿ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಸಂಭಾವ್ಯ ಕ್ರಮಗಳನ್ನು ಚರ್ಚಿಸಬೇಕಾಗಿದೆ.
ಸವೋಚ್ಛ ನ್ಯಾಯಾಲಯದ ಆದೇಶದಂತೆ, ಅರಣ್ಯಕ್ಕೆ ಸಂಬಂಧಿಸಿದ ವ್ಯಾಖ್ಯೆಯನ್ನು ಮೂರು ವಿಧದಲ್ಲಿ ಮಾಡಲಾಗಿದೆ. ಮೊದಲನೆಯಾದಾಗಿ, ನಿಘಂಟಿನಲ್ಲಿ ವಿವರಿಸಿದಂತೆ ಅರಣ್ಯ ಪ್ರದೇಶದ ವ್ಯಾಪ್ತಿ, ಎರಡನೆಯದಾಗಿ, ಕಾನೂನಾತ್ಮಕವಾಗಿ ಘೋಷಣೆಯಾದ ಅರಣ್ಯ ಪ್ರದೇಶ ಮತ್ತು ಮೂರನೆಯದಾಗಿ ಅರಣ್ಯೇತರ ಪ್ರದೇಶಗಳಲ್ಲಿರುವ ಅರಣ್ಯ ಸ್ವರೂಪ (ಇದರಲ್ಲಿ ಸೊಪ್ಪಿನಬೆಟ್ಟ, ಹುಲ್ಲುಬನ್ನಿ, ಕಾನು ಪ್ರದೇಶ, ಗೋಮಾಳ ಇತ್ಯಾದಿಗಳು ಸೇರುತ್ತವೆ). ಈ ಮೂರು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅರಣ್ಯ ಇಲಾಖೆಯು ತನ್ನ ವ್ಯಾಪ್ತಿಗೆ ಸೇರುವ ಅರಣ್ಯ ಗಡಿ ಪ್ರದೇಶವನ್ನು ಮೊಟ್ಟಮೊದಲನೆಯದಾಗಿ ಮೋಜಣಿ ನಡೆಸಿ ಗಡಿರೇಖೆಗಳನ್ನು ಗುರುತಿಸಿ, ಸಂರಕ್ಷಣೆ ಮಾಡುವುದು. ಯಾರೇ ಆದರೂ ಅಕ್ರಮವಾಗಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದ್ದರೆ, ಕೂಡಲೇ ತೆರವುಗೊಳಿಸಿ, ಆ ಪ್ರದೇಶದಲ್ಲಿ ಮರುಅರಣ್ಯೀಕರಣಗೊಳಿಸುವುದು. ಪಂಚಾಯ್ತಿಮಟ್ಟದಲ್ಲಿ ವ್ಯಾಪಕವಾಗಿ ಮಳೆಕಾಡು, ವನ್ಯಜೀವಿ, ಜೀವಜಾಲ ಇತ್ಯಾದಿಗಳ ಕುರಿತು ವ್ಯಾಪಕವಾಗಿ ಜನಜಾಗೃತಿಗೊಳಿಸುವುದು. ಮುಂದುವರೆದ ಹಾಗೂ ಮೇಲ್ವರ್ಗದ ಮತ್ತು ಹಿಂದುಳಿದ ಅಥವಾ ಕೆಳಸ್ತರದ ಸಮಾಜದ ನಡುವೆ ಭೂಮಿಯ ವಿಚಾರದಲ್ಲಿ ದೊಡ್ಡ ಸ್ವರೂಪದ ಅಸಮಾನತೆ ಇದೆ. ಇರುವ ಭೂಮಿಯನ್ನು ಸಮಾನ ರೀತಿಯಲ್ಲಿ ಹಂಚಿಕೆ ಮಾಡುವುದು ಕೂಡ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರವಾಗಬಲ್ಲದು. 
ಅರಣ್ಯ ಹಕ್ಕು ಮಾನ್ಯತೆ ಕಾಯ್ದೆ 2006, ಇದನ್ನು ರಚಿಸಿರುವ ಮೂಲ ಉದ್ಧೇಶವೇ ಜನ-ಅರಣ್ಯ-ವನ್ಯಜೀವಿಗಳ ನಡುವೆ ಸಾಮರಸ್ಯ ಕಾಪಾಡುವ ಪ್ರಯತ್ನವಾಗಿದೆ. ಆದ್ದರಿಂದ, ಈ ಮೂಲ ಉದ್ಧೇಶಕ್ಕೆ ಧಕ್ಕೆಯಾಗದಂತೆ, ಈ ಕಾಯ್ದೆಯನ್ನು ಜಾರಿ ಮಾಡುವ ಹೊಣೆ ಹೊತ್ತ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪಂಚಾಯ್ತಿ ಇಲಾಖೆ, ಸಮಾಜಕಲ್ಯಾಣ ಇಲಾಖೆ ಹಾಗೂ ಅರಣ್ಯ ಹಕ್ಕು ಸಮಿತಿ ಸೇರಿದಂತೆ ಎಲ್ಲರೂ ಏಕತ್ರವಾಗಿ ಕಾಯ್ದೆಯ ಮೂಲ ಉದ್ಧೇಶವನ್ನು ಗಮನದಲ್ಲಿರಿಸಿಕೊಂಡೇ ಕೆಲಸ ಮಾಡಬೇಕು. ನಿಜವಾಗಿಯೂ ಅರ್ಹರಾದವರಿಗೆ ಅನ್ಯಾಯವಾಗದಂತೆ ಅರಣ್ಯ ಹಕ್ಕು ಮಾನ್ಯತೆಯನ್ನು ನೀಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು. ಹಾಗೆಯೇ ಅರ್ಹರಲ್ಲದವರು ಅರ್ಜಿಯನ್ನು ಸಲ್ಲಿಸುವ ಹಂತದಲ್ಲೇ ಭ್ರಷ್ಟಾಚಾರ ಜನ್ಮ ತಳೆಯುತ್ತದೆ, ಹಾಗೆಯೇ ಪ್ರತಿ ಹಂತದಲ್ಲೂ ಭಷ್ಟಾಚಾರ ತನ್ನ ವಿರಾಟ್ ರೂಪವನ್ನು ಮೆರೆಯುತ್ತಾ ಸಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳುವ ಮುಖ್ಯ ಜವಾಬ್ದಾರಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯದಾಗಿರುತ್ತದೆ (ಪಿಡಿಓ). ಇದನ್ನು ಗಮನಿಸಿ ಪ್ರಾಥಮಿಕ ಹಂತದಲ್ಲೇ ಅಂದರೆ ಅರ್ಜಿಯನ್ನು ಸ್ವೀಕರಿಸುವ ಪೂರ್ವದಲ್ಲೇ ಅರ್ಜಿದಾರ ಅರ್ಹನೋ ಅಥವಾ ಅಲ್ಲವೋ ಎಂಬುದನ್ನು ತೀರ್ಮಾನ ಮಾಡುವುದು ಅತ್ಯಂತ ಮಹತ್ವ್ತದ ಕೆಲಸವಾಗಿರುತ್ತದೆ. 

ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯಡಿಯಲ್ಲಿ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿದ ಎಲ್ಲರಿಗೂ ಭೂ ಹಕ್ಕನ್ನು ನೀಡಲಾಗುವುದು ಎಂಬ ಮಿಥ್ಯೆಯನ್ನು ತಾಲ್ಲೂಕಿನಾದ್ಯಂತ ವ್ಯವಸ್ಥಿತವಾಗಿ ಬಿತ್ತಲಾಗಿದೆ. ಆದ್ದರಿಂದ ಪಂಚಾಯ್ತಿ ಮಟ್ಟದಲ್ಲಿ ಕಡ್ಡಾಯವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸಭೆಗಳನ್ನು ಕರೆದು, ಕಾಯ್ದೆಯ ಮಿತಿಗಳನ್ನು ಮನವರಿಕೆ ಮಾಡುವ ಕೆಲಸವೂ ಆಗಬೇಕಿದೆ. ನಂತರದಲ್ಲಷ್ಟೇ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ದೃಶ್ಯ ಮುದ್ರಣದ (ವಿಡಿಯೋ ರೆಕಾರ್ಡಿಂಗ್) ಸಮ್ಮುಖದಲ್ಲೇ ಸ್ವೀಕರಿಸಬೇಕು. ಈ ಕಾಯ್ದೆಯಡಿಯಲ್ಲಿ ಇನ್ನೂ ಮತ್ತೂ ಭೂಹಕ್ಕನ್ನು ಕೊಡಿಸುವ ಆಮಿಷವೊಡ್ಡುವ ಹಾಗೂ ರಾಜಕೀಯವಾಗಿ ಬಲಿಷ್ಟವಾಗಿರುವ ಮಧ್ಯವರ್ತಿಗಳ ದೊಡ್ಡ ಗುಂಪೇ ಸೃಷ್ಟಿಯಾಗಿದೆ. ಪ್ರತಿ ಅರ್ಜಿಗೆ ಸಾವಿರಾರು ರೂಪಾಯಿಗಳನ್ನು ಪಡೆದು ವಂಚಿಸುವ ಇಂತಹ ಮಧ್ಯವರ್ತಿಗಳನ್ನು ಹಿಡಿದು ಮಟ್ಟ ಹಾಕುವ ಕೆಲಸವನ್ನು ಅಧಿಕಾರಿ ವರ್ಗದವರು ಮಾಡಬೇಕು. ಆಡಳಿತಾತ್ಮಕವಾದ ಈ ಕೆಲಸದಲ್ಲಿ ರಾಜಕೀಯಸ್ಥರು ಅನಗತ್ಯವಾಗಿ ಮೂಗು ತೂರಿಸುವುದನ್ನು ಬಿಡಬೇಕು. ಶಾಸನ ಸಭೆಯಲ್ಲಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಉದ್ಘೋಷಿಸಿದ ಪ್ರತಿಜ್ಞಾವಿಧಿಯನ್ನು ಕಾರ್ಯಾಂಗದ ಮುಖ್ಯಸ್ಥರು ಶಿರಸಾವಹಿಸಿ ಪಾಲಿಸಬೇಕು. 

ಜನಸಂಖ್ಯಾಸ್ಪೋಟದಿಂದಾಗಿ ಭೂಮಿಯ ಮೇಲಿನ ಒತ್ತಡ ಹೆಚ್ಚುತ್ತಲೇ ಇದೆ. ಆ ಜನಸಂಖ್ಯೆಗನುಗುಣವಾಗಿ ಭೂಮಿಯ ಗಾತ್ರವೇನು ಹಿಗ್ಗುವುದಿಲ್ಲ. ವಿಜ್ಞಾನಿಗಳ ಪ್ರಕಾರ ಈ ಭೂಮಿಗೆ 1000 ಕೋಟಿ ಜನರನ್ನು ಸಲಹುವ ಶಕ್ತಿ ಮಾತ್ರ ಇದೆ. 1000 ಕೋಟಿ ಜನಸಂಖ್ಯೆ ತಲುಪಲು ಇನ್ನು ಹೆಚ್ಚು ವರ್ಷಗಳು ಬೇಕಾಗುವುದಿಲ್ಲ. ಆದ್ದರಿಂದ, ಲಭ್ಯವಿರುವ ಭೂಮಿಯಲ್ಲೇ ಹೆಚ್ಚು-ಹೆಚ್ಚು ಸಾವಯವ ಬೆಳೆಗಳನ್ನು ಬೆಳೆಯುವ ತಂತ್ರಜ್ಞಾನವನ್ನು ರೈತರಿಗೆ ಸರ್ಕಾರ ಉಚಿತವಾಗಿ ನೀಡಬೇಕು. ತುಂಡುಭೂಮಿ ಸಾಗುವಳಿ ಪದ್ಧತಿ ಹೆಚ್ಚಿನ ಶ್ರಮ-ಖರ್ಚುನ್ನು ಬೇಡುತ್ತದೆ. ಈ ನಿಟ್ಟಿನಲ್ಲಿ ಸಹಕಾರಿ ತತ್ವ್ತದಡಿಯಲ್ಲಿ ಭೂಮಿಯನ್ನು ಸಾಗುವಳಿ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸುವ ಅಗತ್ಯವಿದೆ. 

ಗುಡ್ಡಗಾಡುಗಳಿಂದ ಆವೃತವಾಗಿರುವ ಸಾಗರ ತಾಲ್ಲೂಕಿನಲ್ಲಿ 1400 ಮಿ.ಮಿ. ಮಳೆಯಾದರೆ, ತಾಲ್ಲೂಕಿನ ಜನ ನೆಮ್ಮದಿಯ ಬದುಕನ್ನು ಕಾಣಬಲ್ಲರು. ಅಮೂಲ್ಯ ಮಳೆಕಾಡು ನಾಶದಿಂದ ಭವಿಷ್ಯದಲ್ಲಿ ಬಂದರೆಗುವ ಭೀಕರ ಕ್ಷಾಮದ ಅರಿವು ಇನ್ನೂ ಆಗದೇ ಇರುವುದು ತಾಲ್ಲೂಕಿನ ಸಮಸ್ತ ಜನರ ದುರದೃಷ್ಟವೇ ಸರಿ. ಮಳೆನೀರು ಇಂಗಿಸಿ-ಅಂತರ್ಜಲ ಹೆಚ್ಚಿಸಿ ಎಂಬ ಮಾತಿಗೆ ಮಳೆಗಾಲವೇ ಇಲ್ಲದಿದ್ದರೇ ಯಾವುದೇ ಅರ್ಥವೇ ಇರುವುದಿಲ್ಲ. ಕಾಡು ಉಳಿಸಿ-ನಾಡು ಬೆಳೆಸಿ ಎಂಬ ರಸ್ತೆ ಬದಿಯ ಘೋಷಣೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ನಾಡು ಉಳಿಯಬೇಕೆಂದರೆ, ಕಾಡು ಉಳಿಯುವುದು ಅನಿವಾರ್ಯ ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕಾದ ತೀವ್ರತುರ್ತು ಪರಿಸ್ಥಿತಿ ದುತ್ತೆಂದು ಎದುರಿಗೇ ಬಂದು ನಿಂತಿದೆ. ಬೇರೆ ಯಾವುದೇ ಅಭಿವೃದ್ಧಿ ಅಥವಾ ಮಹತ್ವ್ತದ ಕಾರ್ಯಗಳಿಗಿಂತ ಮಳೆಕಾಡು ಉಳಿಸಿಕೊಂಡು, ಬೆಳೆಸಿಕೊಂಡು ವಾತಾವರಣದ ಬಿಸಿಯೇರಿಕೆಯನ್ನು ತಡೆಗಟ್ಟುವ ಅತಿಮುಖ್ಯವಾದ ಹಾಗೂ ತುರ್ತಾದ ಕೆಲಸವಾಗಿದೆ. 

[ಲೇಖನದಲ್ಲಿ ವಿವರಿಸಿದ ಕಾಯ್ದೆಯ ಭಾಗವನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ನಿರ್ದೇಶನಾಲಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರ ಪ್ರಕಟಿತ “ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪಾರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ 2006 (2007ರ 2) ಮತ್ತು ನಿಯಮಗಳು-2008 9ನಿಯಮಗಳ ತಿದ್ದುಪಡಿ-2012)” ಇದರಿಂದ ಪಡೆಯಲಾಗಿದೆ]


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Anantha Ramesh
8 years ago

ಅಖಿಲೇಶ್ ಚಿಪ್ಪಳಿಯವರು ಬಹಳ ಕಾಳಜಿ ವಹಿಸಿ ಬರೆದ ಲೇಖನ ಸದರಿ ಜನಗಳನ್ನು ಮುಟ್ಟಬೇಕು. ವರ್ತಮಾನವೇ ಭಯ ಹುಟ್ಟಿಸುತ್ತಿರುವಾಗ, ಭವಿಷ್ಯದ ಬಗ್ಗೆ ಯೋಚಿಸುವ ಧೈರ್ಯವಾಗುತ್ತಿಲ್ಲ. ಜನ-ಅರಣ್ಯ-ವನ್ಯಜೀವಿಗಳ ಅವಿನಾಭಾವಕ್ಕೆ ಲೇಖಕರು ಸೂಚಿಸುತ್ತಿರುವ ಜಾಗೃತಿ ಕೆಲಸಗಳನ್ನು ಸಂಬಂಧಪಟ್ಟವರು ಮನಸಾ ಅನುಷ್ಠಾನಗೊಳಿಸುತ್ತಾರೆನ್ನುವ ನಂಬಿಕೆ ಉಳಿಸಿಕೊಳ್ಳೋಣವೆ?

1
0
Would love your thoughts, please comment.x
()
x