ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಭಾಗ 2): ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ

ಅರಣ್ಯಹಕ್ಕು ಮಾನ್ಯತೆ ಕಾಯ್ದೆ ಜಾರಿ ಪ್ರಯತ್ನ ಹವಾಮಾನದ ಬದಲಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನೋಡೋಣ. ಸಾಗರ ತಾಲ್ಲೂಕಿನಲ್ಲಿ 29 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಹಾಗೂ ನೈಸರ್ಗಿಕ ಕಾಡನ್ನು ಸವರಿ ಎಂ.ಪಿ.ಎಂ.ನವತಿಯಿಂದ ಬೆಳೆಸಿದ 7100 ಹೆಕ್ಟರ್ ಅಕೇಶಿಯಾವೆಂಬ ಹಸಿರು ಮರಳುಗಾಡೂ ಇದೆ. ಕರ್ನಾಟಕ ಪವರ್ ಕಾರ್ಪೊರೇಷನ್‍ವತಿಯಿಂದ 653 ಹೆಕ್ಟೆರ್ ಅರಣ್ಯ ಪ್ರದೇಶವನ್ನು ಎಂ.ಪಿ.ಎಂ.ನವರಿಗೆ ಅಕೇಶಿಯಾ ಬೆಳೆದುಕೊಳ್ಳಲು ನೀಡಲಾಗಿದೆ. 1989-90ರಲ್ಲಿ ಜಾರಿಯಾದ ಬಗರ್‍ಹುಕುಂ ಕಾಯ್ದೆಯಡಿಯಲ್ಲಿ ಇದೇ ಅರಣ್ಯ ಪ್ರದೇಶದಲ್ಲಿ ಮಂಜೂರಾದ ಜಮೀನುಗಳ ವಿವರಗಳನ್ನು ಇಲಾಖೆಯ ಕಡತದಿಂದ ಕಳೆಯಲಾಗಿಲ್ಲ. ಸಂರಕ್ಷಿತ ಪ್ರದೇಶಗಳನ್ನು ಹೊರತುಪಡಿಸಿದರೆ, ಅರಣ್ಯ ಇಲಾಖೆ ಹೆಸರಿನಲ್ಲಿರುವ ಕಾಡುಗಳಿಗೆ ಯಾವುದೇ ನಿರ್ಧಿಷ್ಟ ಗಡಿರೇಖೆಗಳಿಲ್ಲವಾದ್ದರಿಂದ, ಪ್ರತಿವರ್ಷ ಅರಣ್ಯಪ್ರದೇಶ ಒತ್ತುವರಿಯಾಗುತ್ತಲೇ ಇದೆ.

ಅರಣ್ಯಗಳು ಇಂಗಾಲಾಮ್ಲವನ್ನು ಹೀರಿಕೊಂಡು ಆಮ್ಲಜನಕವನ್ನು ನೀಡುತ್ತವೆ ಎಂಬುದು ವಿಜ್ಞಾನ. ಆದರೆ ಇದು ಎಷ್ಟು ಜನರ ಅರಿವಿನಲ್ಲಿ ಇದೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹಳ್ಳಿಗಾಡಿನ ರೈತರು ಮತ್ತು ರೈತ ಅವಲಂಬಿತ ನೂರು ಜನರನ್ನು ಸಮೀಕ್ಷೆ ಮಾಡಿದಾಗ ಬಂದ ಉತ್ತರ ಗಾಬರಿ ಹುಟ್ಟಿಸುವಂತಿದೆ. ನಾವು ಉಸಿರಾಡುವ ಆಮ್ಲಜನಕ ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಹೆಚ್ಚಿನವರು ಗೊತ್ತಿಲವೆಂದರೆ, ಕೆಲವರು ದೇವರ ಹೆಸರನ್ನು ಹೇಳಿದರು. ನಮ್ಮ ಸುತ್ತ-ಮುತ್ತಲಿರುವ ಮರ-ಗಿಡಗಳೇ ಆಮ್ಲಜನಕವನ್ನು ತಯಾರಿಸುತ್ತವೆ ಎಂಬ ಸತ್ಯವನ್ನು ಬಹುಜನ ನಂಬಲಿಲ್ಲ.

1980ರ ದಶಕದಲ್ಲಿ ಪರಿಚಯಿಸಿದ ಅಕೇಶಿಯಾ ಸಸ್ಯವು ಸಾಗರದ ಮಳೆಕಾಡನ್ನು ನುಂಗಿ ಹಾಕಿದ್ದೀಗ ಇತಿಹಾಸ. ಅತ್ಯಂತ ವೇಗವಾಗಿ ಬೆಳೆಯುವ ಅಕೇಶಿಯಾ ಬರೀ ಅರಣ್ಯಪ್ರದೇಶವನ್ನಷ್ಟೇ ನುಂಗಲಿಲ್ಲ. ಖಾಸಗಿ ಜಮೀನು ಮಾಲೀಕರು ಅಕೇಶಿಯಾ ತರುವ ಹಣದ ಆಸೆಗೆ ಮರುಳಾಗಿದ್ದು ಸುಳ್ಳಲ್ಲ. ಅಕೇಶಿಯಾ ಬೆಳೆಸಿದವರಿಗೂ ಹಾಗೂ ಬೆಳೆದವರಿಗೂ ತತ್‍ಕ್ಷಣದಲ್ಲಿ ಹಣದ ರೂಪದ ಲಾಭ ಕಂಡಿತೇ ವಿನ: ಅದರ ದೂರಗಾಮಿ ದುಷ್ಪರಿಣಾಮಗಳ ಅರಿವು ಆಗಲಿಲ್ಲ. ನೈಸರ್ಗಿಕ ನಲ್ಲಿಗಳು (ಅಬ್ಬಿ ನೀರುಗಳು) ಬತ್ತಿ ಹೋಗುತ್ತಿರುವುದು ಅಲ್ಲಲ್ಲಿ ಗಮನಕ್ಕೆ ಬಂದಿತು. ಹಿಂದೆಯೇ ಮಳೆ ಪ್ರಮಾಣವೂ ಕಡಿಮೆಯಾಗುತ್ತಿರುವ ಅನುಭವವಾಗತೊಡಗಿತು.

ಈಗ ಮುಖ್ಯ ಕತೆಗೊಂದು ಪ್ಲಾಶ್‍ಬ್ಯಾಕ್ ಕೊಡೋಣ. ಒಂದು ಸಮುದಾಯ ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಟವಾಗಲು ಕಾರಣವಾದ ಒಂದು ಐತಿಹಾಸಿಕ ಘಟನೆಯನ್ನು ಇಲ್ಲಿ ಉದ್ಧರಿಸದಿದ್ದರೆ, ಮುಖ್ಯ ಕತೆಯನ್ನು ಎಷ್ಟೇ ಅಚ್ಚುಕಟ್ಟಾಗಿ ವಿವರಿಸಿದರೂ ಢಾಳಾಗಿಬಿಡುವ ಸಾಧ್ಯತೆಯಿದೆ. ಅತಿಹೆಚ್ಚು ಭೂಮಿ ಹೊಂದಿರುವ ಜಮೀನ್ದಾರರು ವೈಯಕ್ತಿಕವಾಗಿ ಸಾಗು (ಉಳುಮೆ) ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ತಮ್ಮ ಜಮೀನಿಗೆ ಕೆಲಸಕ್ಕೆ ಬರುವ ಆಳುಗಳಿಗೆ ಸಾಗುಮಾಡಲು ಅನುವು ಮಾಡಿಕೊಟ್ಟರು. ಹೀಗೆ ಕೂಲಿ ಮಾಡುವ ಆಳುಗಳು ಗೇಣಿ ರೈತರಾಗಿ ಬದಲಾದರು ಹಾಗು ಇದಕ್ಕಾಗಿ ಈ ಗೇಣಿರೈತರು ಜಮೀನುದಾರರಿಗೆ ಎಕರೆಗೆ ಇಂತಿಷ್ಟು ಭತ್ತ ಹುಲ್ಲು ನೀಡಬೇಕು ಎಂಬ ಷರತ್ತು ಇತ್ತು.  ಇದಕ್ಕೆ ಗೇಣಿ ಪದ್ಧತಿ ಎನ್ನಲಾಗುತ್ತಿತ್ತು. ಇಲ್ಲಿ ಜಮೀನುದಾರರು ಗೇಣಿರೈತರನ್ನು ಶೋಷಣೆ ಮಾಡುವುದು ಸಾಮನ್ಯವಾಗಿತ್ತು, ಜಮೀನುದಾರ ನಿಗದಿ ಪಡಿಸಿದ ಅಳತೆಯ ಕೊಳಗಗಳಲ್ಲಿ (ಸಾಮಾನ್ಯವಾಗಿ ಈ ಅಳತೆ ನಿಗದಿತ ಅಳತೆಗಿಂತ ಹೆಚ್ಚಾಗಿರುತ್ತಿತ್ತು). ಹೀಗೆ ಜಮೀನುದಾರರು, ಕಷ್ಟಪಡುವ ಗೇಣಿರೈತರನ್ನು ಅತೀವವಾಗಿ ಶೋಷಿಸುತ್ತಿದ್ದರು.  ಜಮೀನುದಾರರ ದಬ್ಬಾಳಿಕೆ ಮತ್ತು ಶೋಷಣೆಯನ್ನು ಸಹಿಸದ ಗೇಣಿರೈತರು ತಿರುಗಿಬಿದ್ದು, ಹೋರಾಟದ ಹಾದಿ ಹಿಡಿದರು. ಕೊನೆಗೂ ದೇವರಾಜ್ ಅರಸು ಸರ್ಕಾರ ಗೇಣಿರೈತರಿಗೆ ನ್ಯಾಯವನ್ನು ಕೊಡಿಸಲು ಸಫಲರಾದರು. ಇದೇ “ಉಳುವವನೆ ಹೊಲೊದೊಡೆಯ” ಎಂಬ ಘೋಷವಾಕ್ಯ 1970ರ ದಶಕದಲ್ಲಿ  ದೇಶಾದ್ಯಂತ ಮನೆಮಾತಾಯಿತು.

ಈ ಹೋರಾಟದ ಫಲವಾಗಿ ಗೇಣಿರೈತರಾಗಿದ್ದ ಸಮುದಾಯದಲ್ಲಿ ಹೊಸ ಮುಖಂಡರ ಉದಯವಾಯಿತು. ರಾಜಕೀಯವಾಗಿಯೂ ಈ ಸಮುದಾಯದ ನಾಯಕರು ಪ್ರಬಲವಾದರು. ಸಾಮಾಜಿಕ ನ್ಯಾಯವನ್ನು ಕೊಡಿಸುವಲ್ಲಿ ಶ್ರಮಿಸಿದ ನಾಯಕರು ರಾಜಕೀಯದ ಎಲ್ಲಾ ಮುಖ್ಯ ಹುದ್ದೆಗಳನ್ನು ಅಲಂಕರಿಸಿ, ಸಮುದಾಯಕ್ಕೆ ಸೇವೆ ಸಲ್ಲಿಸಿದರು. ಜಮೀನುದಾರಿ ಹಾಗೂ ಗೇಣಿದಾರರ ಈ ಸಂಘರ್ಷದ ಹೋರಾಟದಲ್ಲಿ ಈರ್ವರ ಮಾನಸಿಕ ಸ್ಥಿತಿಯೊಂದು ವಿಲಕ್ಷಣ ಪರಿಸ್ಥಿತಿಗೆ ಸಿಲುಕಿಕೊಂಡಿತು. ಜಮೀನು ಕಳೆದುಕೊಂಡ ಜಮೀನುದಾರನಿಗೆ ಕಳೆದುಕೊಂಡ ಜಮೀನಿಗೆ ಬದಲಾಗಿ ಮತ್ತಷ್ಟು ಜಮೀನು ಸಂಪಾದಿಸುವ ಹಠ ಹುಟ್ಟಿಕೊಂಡಿತು. ಇದರ ಜೊತೆಗೆ, ಗೇಣಿದಾರನಾಗಿ ದುಡಿದ ರೈತ, ಇದೀಗ ಭೂಮಾಲೀಕನೇ ಆದ, ನವ ಭೂಮಾಲೀಕನ ಮಾನಸಿಕ ಸ್ಥಿತಿ ಒಂದು ತರಹ ಜಮೀನುದಾರನ ಮಾನಸಿಕಸ್ಥಿತಿಗೆ ಭಿನ್ನವಾಗಿ ಏನೂ ವರ್ತಿಸಲಿಲ್ಲ. ನವಭೂಮಾಲೀಕನಾದ ಗೇಣಿದಾರನೂ ಕೂಡ ತನ್ನ ಜಮೀನಿನ ವ್ಯಾಪ್ತಿಯನ್ನು ವಿಸ್ತರಿಸುವ ಕಾಯಕದಲ್ಲೇ ತೊಡಗಿದ. ಇದೇ ಕಾರಣಕ್ಕೆ 1989-90ರಲ್ಲಿ ಬಗರ್ ಹುಕುಂ ಕಾಯ್ದೆ ಜಾರಿಯಾಗಿ ಮತ್ತಷ್ಟು ಮಳೆಕಾಡುಗಳು ರೈತರ ಪಾಲಾದವು (12 ಸಾವಿರ ಎಕರೆ ಅರಣ್ಯ ಪ್ರದೇಶ).

ಒಟ್ಟು ಕುಟುಂಬಗಳ ಅಥವಾ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ, ತುಂಡು ಜಮೀನು ಹೊಂದಿರುವ ರೈತರ ಸಂಖ್ಯೆಯೂ ಹೆಚ್ಚಾಯಿತು. ತುಂಡು ಜಮೀನಿನಲ್ಲಿ ದುಡಿಯುವುದು ಯಾವುದೇ ತರಹದ ಲಾಭ ತರುವ ವೃತ್ತಿಯಾಗಲಿಲ್ಲ. ಹೊಸ-ಹೊಸ ಕೆಲಸ ಹುಡುಕುತ್ತಾ ಯುವ ಪೀಳಿಗೆ ನಗರಗಳತ್ತ ವಲಸೆ ಹೋಗಲು ತೊಡಗಿದರು. ಈ ಮಧ್ಯೆ ರಾಜಕೀಯವಾಗಿ ಅನೇಕ ಸ್ಥಿತ್ಯಂತರಗಳು ಆದವು. ಹೋರಾಟದ ಹಿನ್ನೆಲೆ ಹೊಂದಿದ ನಾಯಕರು, ಹೊಸಪೀಳಿಗೆಯ ನಾಯಕರ ಎದುರು ರಾಜಕೀಯವಾಗಿ ಹಿನ್ನೆಡೆಯನ್ನು ಅನುಭವಿಸಿದರು. ಹೊಸ ತಳುಕಿನ ರಾಜಕೀಯದ ಗಾಳಿ ಹಳೆ ಹೋರಾಟದ ಸೊಗಡಿನ ರಾಜಕೀಯವನ್ನು ಅಪ್ರಸ್ತುತ ಮಾಡುವಲ್ಲಿ ಯಶಸ್ವಿಯಾಯಿತು. ಹಾಗಂತ ಹೋರಾಟದ ರಾಜಕಾರಣ ಮೂಲೆಗುಂಪೇನು ಆಗಲಿಲ್ಲ. ಪ್ರಪಂಚದ ನಿತ್ಯದ ಆಗುಹೋಗುಗಳಿಗೆ ತೆರೆದುಕೊಳ್ಳದಿದ್ದರೆ, ಒಟ್ಟಾರೆಯಾಗಿ ನಷ್ಟವಾಗುವುದು ವ್ಯಕ್ತಿಗೆ ಹೊರತು ಪ್ರಪಂಚಕ್ಕಲ್ಲ ಎನ್ನಬಹುದಾದರೂ, ಭೂಮಿ ವಿಸ್ತರಣೆ ವಿಚಾರದಲ್ಲಿ ಈ ಮಾತು ಹಿಂದು-ಮುಂದಾಗುತ್ತದೆ.

ಯಾವ ಶಕ್ತಿ ಗೇಣಿರೈತರಿಗೆ ಭೂಮಿ ಕೊಡಿಸುವಲ್ಲಿ ಹೋರಾಟ ಮಾಡಿ ಯಶಸ್ವಿಯಾಗಿತ್ತೋ, ಅದೇ ಶಕ್ತಿ ಇಪ್ಪತೊಂದನೇ ಶತಮಾನದ ಆದಿಭಾಗದ ತಳುಕಿನ ರಾಜಕೀಯದ ದಾಳಿಗೆ ಬಲಿಯಾಗಿ ನೇಪಥ್ಯ ಸೇರಿತು. ಸರಿಸುಮಾರು ಇದೇ ಹೊತ್ತಿನಲ್ಲಿ ಕೇಂದ್ರ ಸರ್ಕಾರ “ಅರಣ್ಯ ಹಕ್ಕು ಮಾನ್ಯತೆ ಕಾಯ್ದೆ (2006) ಜಾರಿಗೆ ತಂದಿತು. ಭೂ ಹೋರಾಟದಿಂದಲೇ ಅಧಿಕಾರದ ರುಚಿ ಕಂಡ ಹೋರಾಟದ ರಾಜಕಾರಣ ಈ ಕಾಯ್ದೆಯ ಉಪಯೋಗವನ್ನು ಪಡೆದುಕೊಂಡು ಮತ್ತೆ ರಾಜಕೀಯವಾಗಿ ಮರುಸ್ಥಾಪನೆಗೊಳ್ಳುವ ಪ್ರಯತ್ನ ನಡೆಸಿತು. ಪ್ರತಿ ಪಂಚಾಯತಿಗಳಿಗೆ ತೆರಳಿ, ಅರಣ್ಯ ಹಕ್ಕು ಸಮಿತಿಗಳನ್ನು ರಚಿಸುವ ಕಾಯಕದಲ್ಲಿ ಜಾಗೃತವಾಯಿತು. ಕಾಯ್ದೆಯಲ್ಲಿ ಹೇಳಿದ ಗ್ರಾಮಸಭೆಯ ಮಹತ್ವ್ತವನ್ನು ವಿವರಿಸುವುದರಲ್ಲಿ ವಿಫಲವಾಗಿ, ಅರಣ್ಯಹಕ್ಕು ಮಾನ್ಯತೆ ಕಾಯ್ದೆ ಜಾರಿ ವಿಷಯದಲ್ಲಿ ಗ್ರಾಮಸಭೆಯ ನಡಾವಳಿಗಳು ಸರ್ವೋಚ್ಛ ನ್ಯಾಯಾಲಯದ ಆದೇಶಗಳಿಗಿಂತ ಹೆಚ್ಚಿನ ಮಹತ್ವ್ತ ಹೊಂದಿವೆ ಹಾಗೂ ಅರಣ್ಯ ಜಮೀನು ಮಂಜೂರಿಗೊಳಿಸುವಲ್ಲಿ ಅರಣ್ಯ ಹಕ್ಕು ಸಮಿತಿಯ ತೀರ್ಮಾನವೇ ಅಂತಿಮ ಎಂಬಂತಹ ಪ್ರಚೋದಕ ವಿಚಾರಗಳನ್ನು ತಾಲ್ಲೂಕಿನ ಎಲ್ಲಾ ಪಂಚಾಯ್ತಿ ಮಟ್ಟದಲ್ಲೂ ಪಸರಿಸುವಲ್ಲಿ ಹೋರಾಟದ ರಾಜಕಾರಣ ಯಶಸ್ವಿಯಾಯಿತು. ಇದೊಂದು ರಾಜಕೀಯವಾಗಿ ಮರುಸ್ಥಾಪನೆಗೊಳ್ಳುವ ಪೂರ್ವತಯಾರಿಯಾಗಿತ್ತು.

ರಾಜಕೀಯದಲ್ಲಿ ಮತ್ತೆ ಬದಲಾವಣೆಯ ಗಾಳಿ ಬೀಸಿ ಹೋರಾಟದ ರಾಜಕಾರಣ ಮತ್ತೆ ಅಧಿಕಾರಕ್ಕೇರಲು ಸಫಲವಾಯಿತು. ಈ ಸಫಲತೆಗೆ ಕಾರಣ ಅರಣ್ಯಭೂಮಿಯ ವಿಷಯವೆಂಬುದನ್ನು ಮರೆಯಬಾರದು. ರಾಜಕೀಯವಾಗಿ ಮತ್ತೆ ಹುಟ್ಟಿಬರಲು ಅನೇಕರು ಅನೇಕ ತರಹದ ಆಶ್ವಾಸನೆಗಳನ್ನು ನೀಡುತ್ತಾರೆ. ನೀಡಿದ ಆಶ್ವಾಸನೆಗಳನ್ನು ಯಾರೂ ಪೂರೈಸುವುದಿಲ್ಲ. ಯಾಕೆ ಪೂರೈಸಿಲ್ಲ ಎಂದು ಯಾವ ಮತದಾರರೂ ಕೇಳುವುದಿಲ್ಲ ಹಾಗೂ ವಿಷಯವೇ ಭಾರತದ ರಾಜಕಾರಣದ ಅತ್ಯಂತ ವಿಲಕ್ಷಣ ಅಂಶವಾಗಿದೆ. ಸಾಗರದಲ್ಲಿನ ರಾಜಕಾರಣದಲ್ಲಿ ಹೀಗೆ ಆಗಲಿಲ್ಲ ಎನ್ನುವುದು ದು:ಖದ ಸಂಗತಿಯಾಗಿದೆ. ಇಲ್ಲಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ “ಓಲ್ಡ್ ಸ್ಕೂಲ್ ಆಫ್ ಥಾಟ್” ಮನ:ಸ್ಥಿತಿಯ ಶಾಸಕರು, ಚುನಾವಣಾಪೂರ್ವ ನೀಡಿದ ಆಶ್ವಾಸನೆಯನ್ನು ಜಾರಿಗೊಳಿಸುವ ಪ್ರಯತ್ನವನ್ನೇ ಪ್ರಾರಂಭಿಸಿದರು. ತಾಲ್ಲೂಕಿನ ಎಲ್ಲಾ 35 ಪಂಚಾಯ್ತಿಮಟ್ಟದಲ್ಲಿ ಅರಣ್ಯಹಕ್ಕು ಸಮಿತಿಗಳನ್ನು ರಚಿಸಲಾಯಿತು. ಕಾಯ್ದೆಯ ಯಾವುದೇ ನಿಯಮಗಳನ್ನು ಪಾಲಿಸದೆ ಅರ್ಜಿಗಳನ್ನು ಸ್ವೀಕರಿಸಲಾಯಿತು. ಅರೆಮಾಹಿತಿಗೊಂಡ ಅರ್ಜಿಗಳನ್ನೂ ಮಾನ್ಯ ಮಾಡಬೇಕು ಎಂಬ ಒತ್ತಡವನ್ನು ಅಧಿಕಾರಿ ವರ್ಗದವರಿಗೆ ಸತತವಾಗಿ ಹೇರುತ್ತಾ ಅರಣ್ಯ ಭೂಮಿಯನ್ನು ಮಂಜೂರು ಮಾಡಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ.

ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿ ಎಲ್ಲಾ ಅರ್ಜಿಗಳನ್ನು ಮಾನ್ಯ ಮಾಡುತ್ತಾ ಹೋದಲ್ಲಿ, ಈ ಪ್ರಕರಣ ದೇಶ ಕಂಡ ಅತಿದೊಡ್ಡ ಡಿ-ನೋಟಿಫಿಕೇಷನ್ ಹಗರಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇರಲಿ, ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯ ಜಾರಿ ಹವಾಮಾನ ಬದಲಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದನ್ನು ಕೊಂಚ ನೋಡೋಣ. ಅರಣ್ಯ ಹಕ್ಕು ಕಾಯ್ದೆ 2006ರಲ್ಲಿ ವಿವರಿಸಿರುವಂತೆ, ಕಾಯ್ದೆಯ ಫಲಾನುಭವಿಯು ಯಾವುದೇ ತರಹದಲ್ಲಿ ಅರಣ್ಯಕ್ಕಾಗಲೀ ಅಥವಾ ಅಲ್ಲಿನ ವನ್ಯಜೀವಿಗಳಿಗಾಲಿ ಹಾನಿ ಮಾಡುವಂತಿಲ್ಲ. ಅರಣ್ಯ ಹಾಗೂ ಅರಣ್ಯವಾಸಿ ಜೊತೆ-ಜೊತೆಯಾಗಿ, ಸುಸ್ಥಿರವಾಗಿ ಬದುಕಲು ಮಾಡಿದ ಒಂದು ಕಾನೂನು ಬದ್ಧ ಸೂತ್ರವಷ್ಟೆ ಆಗಿದೆ. ಆದರೆ, ಕಾಯ್ದೆಯ ಯಾವ ಆಶಯಗಳೂ ಸಾಗರ ತಾಲ್ಲೂಕಿನಲ್ಲಿ ರಚಿತವಾದ ಅರಣ್ಯ ಹಕ್ಕು ಸಮಿತಿಗಳಿಗೆ ಅರ್ಥವಾಗದಿರುವುದೇ ಅತಿದೊಡ್ಡ ದುರಂತ. ಅರ್ಜಿ ತಯಾರಿಸುವ ಮಧ್ಯವರ್ತಿಗಳು ಇರಬಹುದು, ಅಥವಾ ಇನ್ಯಾವುದೇ ಪ್ರಭಾವಿ ವ್ಯಕ್ತಿ ಇರಬಹುದು, ಇವರಿಗೆ ಜಮೀನು ಮಂಜೂರಾತಿಯಾಗಬೇಕಾದರೆ, ಅಲ್ಲಿ ಯಾವುದೇ ತರಹದ ಅರಣ್ಯ ಸಂಪತ್ತು ಇರಬಾರದು ಎಂಬ ಬಲವಾದ ನಂಬಿಕೆಯಿರುವುದೇ, ಹಾಲಿ ಇರುವ ಅರಣ್ಯ ಪ್ರದೇಶಕ್ಕೆ ಕುತ್ತು ಬರುವ ಅಂಶವಾಗಿದೆ.

ಈ ಹಂತದಲ್ಲಿ ಆಧುನಿಕ ಸಮಾಜ ಒಂದು ಮರವನ್ನು ಆರ್ಥಿಕವಾಗಿ ಹೇಗೆ ನೋಡಬಲ್ಲದು ಎಂಬುದನ್ನು ಇಲ್ಲೊಂದು ಕೋಷ್ಟಕದ ಮೂಲಕ ನೋಡೋಣ; 50 ವರ್ಷ ವಯಸ್ಸಾದ 50 ಟನ್ ತೂಗುವ ಒಂದು ಮರದಿಂದ ಎಷ್ಟು ಆದಾಯವನ್ನು ಯಾವ ರೂಪದಿಂದ ಪಡೆಯಬಹುದು?

1.            ಒಂದು ವರ್ಷಕ್ಕೆ ಸದರಿ ಮರ ಆಮ್ಲಜನಕ ರೂಪದಲ್ಲಿ ನೀಡುವ ಮೊತ್ತ                              2,50,000.00

2.            ವಾಯುಮಾಲಿನ್ಯ ನಿಯಂತ್ರಣ ಮಾಡುವಲ್ಲಿನ ಸೇವೆಯ ಮೊತ್ತ                                    5,00,000.00

3.            ಮಳೆನೀರು ಸಂಗ್ರಹಣೆ                                                                              2,50,000.00

4.            ಮಣ್ಣಿನ ಸವಕಳಿ ತಡೆಯುವಲ್ಲಿ                                                                      2,50,000.00

5.            ಪಶು-ಪಕ್ಷಿಗಳಿಗೆ ಆಹಾರ ನೀಡುವಲ್ಲಿ                                                                2,50,000.00

6.            ಜಾನುವಾರುಗಳಿಗೆ ಮೇವಿನ ರೂಪದಲ್ಲಿ                                                               70,000.00

                                                                                                                                     ———-

    ಒಟ್ಟು                                                                                                           15,70,000.00

(ಜೆಮ್ಸ್ ಬುಕ್ ಆಫ್ ನಾಲೆಡ್ಜ್ – ಪುಟ 49)

ಹದಿನೈದು ಲಕ್ಷದ ಎಪ್ಪತು ಸಾವಿರ ರೂಪಾಯಿಗಳನ್ನು ಒಂದು ಜೀವಂತ ಮರ ಒಂದು ವರ್ಷಕ್ಕೆ ದುಡಿದು ತರಬಲ್ಲದು ವೈಜ್ಞಾನಿಕವಾಗಿ ದೃಢಪಟ್ಟ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆ 2006ರ ಸಾಗರ ತಾಲ್ಲೂಕಿನಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಹಾಗೂ ಈ ಸಲ್ಲಿಕೆಯಾದ ಅರ್ಜಿಗಳಿಗೆ ಮಂಜೂರು ಮಾಡಬಹುದಾದ ವಿಸ್ತೀರ್ಣ ಮತ್ತು ಸದರೀ ಮಂಜೂರಾಗಬಹುದಾದ ವಿಸ್ತೀರ್ಣದಲ್ಲಿ ನಾಶವಾಗುವ ಮರಗಳ ಸಂಖ್ಯೆ ಇವುಗಳನ್ನು ಕೊಂಚ ವಿವರವಾಗಿ ನೋಡಬೇಕಾಗುತ್ತದೆ.

ಸಲ್ಲಿಕೆಯಾದ 15 ಸಾವಿರ ಚಿಲ್ಲರೆ ಅರ್ಜಿಗಳಿಂದಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 1 ಲಕ್ಷ ಎಕರೆ ಅರಣ್ಯ ಪ್ರದೇಶ ಆಹುತಿಯಾಗಲಿದೆ. ಅತಿಕಡಿಮೆಯೆಂದರೆ ಎಕರೆಗೆ 50 ವರ್ಷದ 50 ಟನ್ ತೂಗುವ 10 ಮರಗಳು ನಾಶವಾಗಲಿವೆ ಎಂದುಕೊಂಡರೂ, 10 ಲಕ್ಷ ಮರಗಳ ಹನನವಾಗಲಿದೆ. ಅಂದರೆ 1 ಲಕ್ಷದ 57 ಸಾವಿರ ಕೋಟಿ ರೂಪಾಯಿಗಳ ಪ್ರತ್ಯಕ್ಷ ನಷ್ಟ. ಹಾಗೂ ಒಂದು ನೂರು ಕೋಟಿ ಕಿ.ಲೋ ಆಮ್ಲಜನಕದ ಉತ್ಪಾದನೆಯ ಕೊರತೆಯಾಗಲಿದೆ. ಮರಗಳು ವಾತಾವರಣದಲ್ಲಿನ ಇಂಗಾಲಾಮ್ಲವನ್ನು ಹೀರಿಕೊಂಡೇ ನಮಗೆ ಆಮ್ಲಜನಕವನ್ನು ನೀಡುತ್ತವೆ. ಇಷ್ಟು ಮರಗಳ ಕಡಿತಲೆಯಾಯಿತು ಎಂದರೆ ಅಷ್ಟು ಪ್ರಮಾಣದ ಇಂಗಾಲಾಮ್ಲ ವಾತಾವರಣಕ್ಕೆ ಸೇರುತ್ತದೆ ಎಂದು ಅರ್ಥ. ಅಂದರೆ ವಾತಾವರಣದಲ್ಲಿನ ಪ್ರತಿವರ್ಷದ ಇಂಗಾಲಾಮ್ಲದ ರಜಾಯಿಗೆ ಇನ್ನಷ್ಟು ಮತ್ತಷ್ಟು ಇಂಗಾಲಾಮ್ಲ ಸೇರಿಸಿ ದಪ್ಪ ಮಾಡುವಲ್ಲಿ ಗಣನೀಯ ಕೊಡುಗೆಯಾಗುತ್ತದೆ ಎಂದಾಯಿತು. ಇದಕ್ಕೆ ಪೂರಕವಾಗಿ ಸಾಗರ ತಾಲ್ಲೂಕಿನ ಸಾರಿಗೆ ನಿಯಂತ್ರಣ ಇಲಾಖೆಯ ಲೆಕ್ಕವನ್ನು ಗಮನಿಸಬೇಕಾಗುತ್ತದೆ. 1990ರಲ್ಲಿ ಇದೇ ಸಾರಿಗೆ ನಿಯಂತ್ರಣ ಇಲಾಖೆಯ ವ್ಯಾಪ್ತಿಯಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ 10 ಸಾವಿರ ಚಿಲ್ಲರೆಯಾಗಿತ್ತು. ಜಾಗತೀಕರಣದ ನಂತರದ 20 ವರ್ಷಗಳ ನಂತರ ಅಂದರೆ 2009-10ರಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ 45 ಸಾವಿರ ಮುಟ್ಟಿತು. ಅಕ್ಟೋಬರ್ 2015ರಲ್ಲಿ ಈ ನೋಂದಣಿಯಾದ ವಾಹನಗಳ ಸಂಖ್ಯೆ 1 ಲಕ್ಷ 50 ಸಾವಿರವನ್ನು (ಇದರಲ್ಲಿ ಅನ್ಯಪ್ರದೇಶಗಳಿಂದ ಖರೀದಿ ಮಾಡಿದ, ಆದರೆ ವ್ಯಾಪ್ತಿಯಲ್ಲಿ ನೋಂದಣಿಯಾಗದ ವಾಹನಗಳ ಸಂಖ್ಯೆ 40 ಸಾವಿರ) ಮುಟ್ಟಿದೆ. ಅತ್ತ ಇಂಗಾಲಾಮ್ಲವನ್ನು ಹೀರಿಕೊಳ್ಳುವ ಕಾಡು ಕಡಿಮೆಯಾದರೆ, ಇತ್ತ ಇಂಗಾಲಾಮ್ಲ ಕಕ್ಕುವ ವಾಹನಗಳ ಸಂಖ್ಯೆ 1000 ಪಟ್ಟು ಏರಿತು.

(ಮುಂದುವರೆಯುವುದು)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಪಾರ್ಥಸಾರಥಿ

ಪ್ರಕೃತಿಯ ಗಣಿತದ ಲೆಕ್ಕವೇನೊ ಸರಿಯಿದೆ, 
ಆದರೆ ನಮ್ಮ ಸಮಾಜ ಇಂತಹ ಗಣಿತದಲ್ಲಿ ವೀಕ್ ಅನ್ನಿಸುತ್ತೆ, 
ಪರಿಣಾಮ ಮಾತ್ರ ಘೋರವಾಗಿರುತ್ತದೆ ಅನ್ನುವ ಕಲ್ಪನೆ ಸಹ ಇಲ್ಲ 
ಇಂದು ನಾವು ಮಾಡುತ್ತಿರುವದೆಲ್ಲ 
ತಾನು ಕುಳಿತ ಕೊಂಬೆಯನ್ನೆ ಕಡಿಯುತ್ತಿದ್ದ ಕಾಳಿದಾಸನ ರೀತಿ. 
ಅವನಿಗೆ ಆವರಿಸಿದ್ದು ಮುಗ್ದತೆ ದಡ್ಡತನ 
ಇಂದಿನ ಜನರಿಗೆ ಆವರಿಸಿದೆ ದುರಾಸೆ ಹಾಗು ಕ್ರೌರ್ಯ 

Akhilesh Chipli
Akhilesh Chipli
8 years ago

ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ಧನ್ಯವಾದಗಳು

3
0
Would love your thoughts, please comment.x
()
x