ಅಯ್ಯಯ್ಯೋ.. ದೆವ್ವಾ…!!: ತಿರುಪತಿ ಭಂಗಿ

                      
ಅಂದು ಮಟಮಟ ಮದ್ಯಾಹ್ನ  ಆಕಾಶದಲ್ಲಿ ಸೂರ್ಯ ಸೀಮೆ ಎಣ್ಣೆ ಸುರುವಿಕೊಂಡು ಅತ್ತೆಯ ಕಾಟ ಸಹಿಸಿಕೊಳ್ಳದ ಸೊಸೆ ಆತ್ಮಹತ್ತೆ ಮಾಡಿಕೊಂಡು ಧಗಧಗಿಸುವಂತೆ ಉರಿಯುತ್ತಿದ್ದ. ಡಾಂಬರ ರಸ್ತೆ  ಸ್ಮಾಶಾನ ಮೌನವಾಗಿ ಮಲಗಿತ್ತು. ಗಿಡಮರಗಳು ಮಿಲ್ಟಟ್ರೀ ಯೋಧರಂತೆ ವಿಶ್ರಾಮ್ ಸ್ಥಿತಿಯಲ್ಲಿ ನಿಂತುಕೊಂಡಿದ್ದವು. ಒಂದು ಎಲೆಯೂ ಅಲಗಾಡುತ್ತಿರಲಿಲ್ಲ. ಗಾಳಿ ಭೂಮಂಡಲದಿಂದ ಗಡಿಪಾರಾಗಿ ಹೋದಂತೆ ಇತ್ತು. ಅಂತ ಭಯಂಕರ  ರಸ್ತೆಯ ಮೇಲೆ ಒಂದು ಮೋಟಾರಿನ ಸುಳಿವಿಲ್ಲ. ಅಪ್ಪಿತಪ್ಪಿ ಆ ದಾರಿಗುಂಟ ಬರುವ ಮೋಟಾರುಗಳು ತಾವು ಸೇರಬೇಕಾದ ಜಾಗ ಸೇರುತ್ತವೆ ಎಂಬ ಯಾವ ಭರವಸೆ ಇರಲಿಲ್ಲ. ರಸ್ತೆಯಲ್ಲಿ ದೊಡ್ಡ ದೊಡ್ಡ ಹುಂಡಿಗಳು, ಕಲ್ಲು ಚೂರುಗಳು, ಆ ರಸ್ತೆಗೆ ಒಂದಿಷ್ಟು ಮೇರಗು ತಂದಿದ್ದವು. ಸರಕಾರದವರು ಈ ರಸ್ತೆಯ ಬಗ್ಗೆ ತಲಿ ಕೆಡಿಸಿಕೊಂಡಿರಲಿಲ್ಲ. ಜನರಿಗೂ ಅಷ್ಟೇ ಈ ರಸ್ತೆಯನ್ನು ದುರಸ್ತಿ ಮಾಡಬೇಕೆಂಬ ಅರಿವೇ ಇರಲಿಲ್ಲ. ಈ ರಸ್ತೆಯ ಎರಡೂ ಬದಿಯಲ್ಲಿರುವ ದೊಡ್ಡ ದೊಡ್ಡ ಮರಗಳನ್ನು ಆಡು-ಕುರಿ ಮೇಸುವ ಮಂದಿ ಕಡೆದು ಬೋಳು ಬೋಳು ಮಾಡಿದ್ದರು. ಉರುವಲಿಗೆ ಕೆಲವರು ಬುಡಸಮೇತ ಕಡೆದು ಹಸನುಗೊಳಸಿದ್ದರು.

ಹತ್ತು ವರ್ಷದ ಹಿಂದೆ ಮಟಮಟ ಮದ್ಯಾಹ್ನ ಈ ರಸ್ತೆ ಮೇಲೆ ತನ್ನ ಹೆಂಡತಿಯನ್ನು ಸೈಕಲ್ ಮೇಲೆ ಕುರಿಸಿಕೊಂಡು ಹೋಗುತ್ತಿದ್ದವನನ್ನು ನಾಕಾರು ಕಿಡಗೇಡಿ ಯುವಕರು ಚನ್ನಾಗಿ ಬಡೆದು ಅವನ ಹೆಂಡತಿಯನ್ನು ಆ ಯುವಕನ ಕಣ್ಣಮುಂದೆಯೇ ನಾಲ್ವರೂ ಅನುಭವಿಸಿ ತಮ್ಮ ಆಸೆ ತೀರಿಸಿಕೊಳ್ಳುತಿದ್ದರು. ‘ಬಿಡ್ರೋ ನನ್ನ ಹೆಂತಿಗೇನೂ ಮಾಡಬ್ಯಾಡ್ರೀ’ ಅಂತ ಆಕ್ರಂದನ ಇಡುತ್ತಿದ್ದವನ ಬಾಯಿಗೆ ಬಟ್ಟೆ ತುರುಕಿ, ಮತ್ತಷ್ಟು ಹಿಗ್ಗಾ ಮುಗ್ಗಾ ತಳಸಿದರು. ನಾಲ್ವರ ಹೊಡೆತವನ್ನು ಉಂಡ ದೇಹ ಹಣ್ಣು ಹಣ್ಣಾಗಿ ನಿತ್ರಾನಕ್ಕೆ ಬಿದ್ದಿತು. ಇಪ್ಪತ್ತೆರಡರ ತುಂಬು ಚಲುವೆಯಾದ ಆ ಯುವತಿ ಅವರ ಕಾಟಕ್ಕೆ ಕಿರಚಾಡಿ ಚೀರಾಡಿ ಗೋಗರೆದರೂ ಅವಳ ಸಂಕಟವನ್ನು ಅಲ್ಲಿ ಕೇಳುವವರೂ ಯಾರೂ ಇರಲಿಲ್ಲ. ತಮಗೆ ಅನುಭವಿಸಿ ಸಾಕಾದ ಮೇಲೆ ಅವಳನ್ನು ಕುತ್ತಿಗೆ ಹಿಚುಕಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವಳ ಗಂಡನ ಮೇಲೆ ಮಲಗಿಸಿ ಪರಾರಿಯಾಗಿದ್ದರು. ಅವರ ಹೊಡೆತದಿಂದ   ಪ್ರಜ್ಞೆತಪ್ಪಿ ಬಿದ್ದಿದ್ದ ಯುವಕ ಪ್ರಜ್ಞೆ ಬಂದ ಮೇಲೆ ಹೆಂಡತಿಯ ಶವ ನೋಡಿ ಮತಿ ಭ್ರಮೆಗೊಂಡು ಹುಚ್ಚನಂತೆ ನಗುತ್ತ ಕುಣಿಯುತ್ತ  ಕಿರಚುತ್ತ ಹಾಗೆ ಅದೇ ರಸ್ತೆ ಮೇಲೆ ನಡೆಯುತ್ತ ಎತ್ತಲೊ ಹೊರುಟು ಹೋದ.
         
ದನಾ ಕಾಯುವ ಹುಡುಗರು ಹೊಯ್ಕೊಂಡು ಜನರನ್ನು ಕೂಡಿಸಿದರು.  ಈ ಸುದ್ದಿ ಅವರಿವರಿಂದ ತಿಳಿದ ಪೋಲಿಸರು ಅಲ್ಲಿಗೆ ಬಂದು ಸತ್ತ ಹೆಣದಸುತ್ತ ನಕ್ಷೆಯ ಚಿತ್ರ ಬರೆದು ಅರಕೇರಿಯ ಹಿರಿಯರನ್ನು ಚೌಕಾಸಿ ಮಾಡಿದರು. ದನಾಕಾಯುವ ಹುಡಗರನ್ನು ಕರೆದು ಹೆದರಿಸಿ ಬೆದರಿಸಿ ಕೇಳಿದರೂ ಅಪರಾಧಿಗಳು ಯಾರೆಂಬುವುದು ತೀಳಿಯಲಿಲ್ಲ. ಹೆಣ ಯಾವೂರದ್ದು ಎಂದು ತಳಿಯಲು ಹರಸಹಾಸ ಮಾಡಿದರೂ ಗೊತ್ತಾಗಲಿಲ್ಲ. ಅದೇ ಜಾಗದಲ್ಲಿ ಹೆಣಕ್ಕೆ ಕೊಳ್ಳಿ ಕೊಟ್ಟು ಜೀಪು ಹತ್ತಿದರು.   ಅರಕೇರಿ, ತೋಳಮಟ್ಟಿ, ಭೀರಕಬ್ಬಿ  ಊರು ಜನರಿಗೆ ಈ ರೀತಿ ಅಪರಾಧ ಎಸಗಿದವರಾರು ಅಂತ ಅಂದಿನಿಂದ ಅನುಮಾನ ಕಾಡತೊಡಗಿತು.
    
ಅಂದಿನಿಂದ ಯಾವ ಊರಿನವರು ಆ ರಸ್ತೆಯ ಮೇಲೆ ಒಬ್ಬೊಬ್ಬರೇ ಹೋಗಿಲ್ಲ. ಸತ್ತವಳು ದೆವ್ವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾಳೆ ಎಂದು ಎಲ್ಲರೂ ನಂಬಿದ್ದಾರು.  ಹಿಂಗಾಗಿ ಈ ರಸ್ತೆಗೆ ‘ದೆವ್ವರಸ್ತೆ’  ಅಂತ ಅರಕೇರಿ ಊರವರು ನಾಮಕರಣ ಮಾಡಿದ್ದರು.
           
ಅರಕೇರಿ ಊರವರಂತು ಈ ರಸ್ತೆಯ ಮೇಲೆ ಒಬ್ಬೊಬ್ಬರೆ ಎಂದೂ ಹೋದ ಉದಾಹರಣೆಯೇ ಇರಲಿಲ್ಲ. ಹಠಸಾದಿಸಿ ಹೋದವರ ಪೈಕಿ ಕುದರಿ ಬಸ್ಯಾನ ಬಿಟ್ರ ಯಾರೂ ಜೀವಂತ ಮರಳಿ ಬಂದಿರಲಿಲ್ಲ. ಹೋಗುವುದಾದರೆ ನಾಕಾರ ಜನ ಕೂಡಿ ಹ್ವಾದ್ರ ಬಚಾವ್ ಅಕ್ಕಿದ್ರು. ಈ ರಸ್ತೆಯಲ್ಲಿ ಭಯಂಕರವಾದ ಒಂದು ದೆವ್ವ ಐತಿ ಅಂತ ಇಡೀ ಅರಕೇರಿ ಊರೇ ಮಾತಾಡುತ್ತಿತ್ತು. ಸುತ್ತಮುತ್ತಲಿದ್ದ ತೋಳಮಟ್ಟಿ, ಬೀರಕಬ್ಬಿ,  ಹಳ್ಳಿ ಜನರೂ ಈ ರಸ್ತೆಯಲ್ಲಿ ಇರುವ ದೆವ್ವಿನ  ಕಥಿ ತಿಳಿದು ಹೆದರಿದ್ದರು. ಅದರಾಗ ಕುದರಿ ಬಸ್ಯಾ ಆ ದಾರಿಯೊಳಗ ಒಬ್ಬ ಹೋಗಿ ಆ ಊರಾಗ ಗಿನ್ನಿಸ್ ದಾಖಲೇ ಮಾಡಿದ್ದ. ಬಸ್ಯಾನಷ್ಟ ಧೈರ್ಯದ ಗಂಡು ಸುತ್ತ ಹತ್ತ ಹಳ್ಯಾಗ ಇಲ್ಲ ಅಂತ ಇಡೀ ಊರಿಗೂರೆ ಮಾತಾಡ್ತಿತ್ತು. ಅಂದಿನಿಂದ ಬಸ್ಯಾ ತುಂಬಾ ಗತ್ತಿನಿಂದ ಊರಾಗ ಒಂದ ರೀತಿ ಹವಾ ಮೆಂಟೇನ್ ಮಾಡಿದ್ದ. ಕುಂತಲ್ಲಿ ನಿಂತಲ್ಲಿ ಆ ರಸ್ತೆಯಲ್ಲಿ ತಾನೊಬ್ಬನೆ ಮಟಮಟ ಬದ್ಯಾಹ್ನ ಹೋದದ್ದು. ದೆವ್ವ ಮೆಲ್ಲಕ ಬಂದು ಅವನ ಮುಂಡಿಮ್ಯಾಲ ಕೈ ಹಾಕಿ ‘ಎಲ್ಲಿಗಿ ಹ್ವಂಟಿಯಪ್ಪ ಬಸಣ್ಣಾ’ ಅಂತ ಮಾತಾಡಿಸುತ್ತ ಅವನಿಗೆ ತಿನ್ನಲು ಗ್ವಂಜಾಳ ತೆನಿ ಕೊಟ್ಟು ಮಂಗಮಾಯವಾದದ್ದು ಕಥಿ ಹೇಳತಿದ್ದ. ಬಸ್ಯಾ ಎಲ್ಲೆ ಹ್ವಾದ್ರು ಬಂದ್ರು ಅವನ ಸುತ್ತಮುತ್ತ ನಾಕಾರ ಮಂದಿ ಜಮಾ ಅಕ್ಕಿದ್ರು. ಒಂದಿನ ಮತೋ ಮಾತಿಗೆ ‘ದೆವ್ವಾ ನೋಡಾಕ ಹ್ಯಾಂಗ ಇತ್ತೋ ಬಸಣ್ಣಾ’ ಅಂತ ಕುಡ್ಡಮಲ್ಲ ಅಂಜಕೋತ ಕೇಳಿದ. ಸುತ್ತಲಿದ್ದವರು ಲೇ ಮಳ್ಳಸೂಳಿಮಗನ ಅದ ಹ್ಯಾಂಗಾರ ಯಾಕ ಇರ್ವಲ್ದು ಬಿಡವಲ್ದು ಅದನ ಕಟಗೊಂಡ ನೀ ಏನ ಮಾಡಾಂವ ಅದರ ಸುದ್ದಿ ಎತ್ತಿದರ ಚಡ್ಯಾಗ ಉಚ್ಚಿ ಬರ್ತಾವ ಅಂತ ಕುಡ್ಡಮಲ್ಲನ ಗದರ್ಸಿ ಬಾಯಿ ಮುಚ್ಚಿದ್ರು. ಆಗ ಕುದರಿ ಬಸ್ಯಾ ಅವರ ಪುಕ್ಕಲತನ ನೋಡಿ ನಗತೊಡಗಿದ.
                          

 ***** 

             
ಅಲ್ಲಿ ಇಲ್ಲಿ ಸಿಕ್ಕದ್ದ ತೀನಕೋತ ಹೆಂತಿ ಸತ್ತಾಗಿಂದ ಹುಚ್ಚನಾಗಿ ತಿರಗತಿದ್ದ ಆ ಸೈಕಲ್ ಸವಾರನಿಗೆ ಅರಕೇರಿ ಮಂದಿ ಪಾಪ ಅಂತ ಕರುಣೆ ತೋರಿಸಿ ಆ ಹುಚ್ಚನಿಗೆ ನೆನಪಾದಗೊಮ್ಮೆ ಕೂಳ ಕೊಡತಿದ್ರು. ನಾಕಾರ ಮಂದಿ ಕೂಡಿ ಎದರಿಗೆ ಬಂದ್ರೆ ‘ನನ್ನ ಹೆಂತಿಗೆ ಏನೂ ಮಾಡಬ್ಯಾಡ್ರೋ’ ಅಂತ ಅಳುತ್ತ ಅವರತ್ತ ಕಲ್ಲು ಎಸಿಯುತ್ತಿದ್ದ ಆ ಹುಚ್ಚ. ಕೆಲವರು ಹುಚ್ಚನ ನೋಡಿ ನಗತ್ತಿದ್ರು. ಕೆಲವರು ಎಲ್ಲಿ ಸೂಳಿಮಗಾಲೇ ನೀ ಅಂತ ಪಡಾಪಡಾ ಹೊಡಿತಿದ್ರು. ಹುಚ್ಚ ತನ್ನ ಹೆಂತಿ ಸತ್ತ ಜಾಗದಲ್ಲಿ ಸಿಕ್ಕ ವಸ್ತುಗಳನ್ನೆಲ್ಲ ತಂದು ಕೂಡಿ ಕೂಡಿ ಹಾಕಿದ್ದ. ರಾತ್ರಿಯಾದರೆ ಚಳಿ ಇರಲಿ ಮಳಿ ಇರಲಿ ಅವನ ವಸ್ತಿ ಅದೇ ಜಾಗದಲ್ಲಿ.   
     
ಹುಚ್ಚನ ಹೆಂಡತಿ ದೆವ್ವಾಗಿ ಊರ ಜನರಿಗೆ ಸಾಕಷ್ಟು ತೊಂದರೆ ಕೊಡುವುದಲ್ಲದೆ ಮೂರ ಜನರನ್ನು ಬಲಿ ತಗಿದುಕೊಂಡಿದ್ದು ಊರಿನವರು ಯಾರೂ ಮರತಿರಲಿಲ್ಲ. ಬೈಕ ಮ್ಯಾಲೆ ಮಟಮಟ ಮದ್ಯಾನ ಹೋಗುತ್ತಿದ್ದಾಗ ಅದೇ ಜಾಗದಲ್ಲಿ ಬಿದ್ದು ಪಾಟೀಲ ಶಿವಪ್ಪ ಹೆಣವಾಗಿದ್ದ. ಊರ ಮಂದಿ ಗಬಗುಡುತ್ತ ಬಂದುರು. ಮದುವಿಯಾಗಿ ಒಂದ ವರ್ಷದಾಗ ಶಿವಪ್ಪ ಸತ್ತಿದ್ದಕ್ಕ ಅವನ ಹೆಂಡತಿ ಉಳ್ಳಾಡಿ ಅಳುತ್ತಿದ್ದಳು. ಜಾಲಿಗಿಡದ ಕೆಳಗೆ ಕುಳಿತ ಹುಚ್ಚನೂ ಆಕಾಶ ಹರಿದು ಬೀಳುವಂತೆ ಭೂಮಿ ಹೋಳಾಗುವಂತೆ ಅಳತೊಡಗಿದ್ದ. ಹುಚ್ಚ ಅಳುವುದನ್ನು ಊರಜನರೂ ಯಾರೂ ಗಮನಿಸಲಿಲ್ಲ.
       
ಶಿವಪ್ಪನ ಹೆಣ ಎತ್ತಿಕೊಂಡು ಹೋಗಿ ಮಣ್ಣು ಮಾಡಿ ಮನೆಗೆ ಹೋದರು. ಶಿವಪ್ಪ ಸತ್ತು ಆರೆ ಆರು ತಿಂಗಳಲ್ಲಿ ಮತ್ತದೆ ಜಾಗದಲ್ಲಿ ಎತ್ತಿನ ಬಂಡಿಯಲ್ಲಿ ಬರುತ್ತಿದ್ದ ನಿಂಗ ಬಂಡಿಗಾಲಿ ಉಚ್ಚಿಬಿದ್ದು  ತೆಲೆಬುರುಡೆ ಬಿಚ್ಚಿ ಸತ್ತಿದ್ದ. ಅಯ್ಯೋ ಊರಿಗೆ ಏನೋ ಅನಾಹುತ ಕಾದಿದೆ ಎಂದು ಊರ ಜನರು ತಮ್ಮತಮ್ಮೊಳಗೆ ಮಾತಾಡಿಕೊಂಡರು. ನಿಂಗನ ಹೆಣಾ ಎತ್ತಿಕೊಂಡು ಹೋಗುವಾಗ ಮಳೆ ಧೋ ಎಂದು ಸುರಿಯ ತೋಡಗಿತು. ಜಾಲಿಯ ಗಿಡದ ಬುಡಕ್ಕೆ ಕುಳತಿದ್ದ ಹುಚ್ಚ ನಡಗುತ್ತ ಹಲ್ಲು ಕಿಸಿಯುತ್ತಿದ್ದ. 
     
ನಿಂಗ ಸತ್ತ ಎರಡು ವರ್ಷ ಆದ ಮೇಲೆ ಮೇಲಿನ ಮನಿ ಸಂಗಪ್ಪ ಅದೇ ಸ್ಥಳದಲ್ಲಿ ಎಡಿವಿ ಬಿದ್ದು ಸತ್ತಿದ್ದು ಇಡೀ ಊರಿಗೆ ಭಯ ಹುಟ್ಟಿತ್ತು. ಈ ಜಾಗ ಸ್ವಲ್ಪ ಸುಮಾರಿದೆ ನೋಡಿಕೊಂಡು ಹೋಗ್ರಿ ಅಂತ  ಮನೆಗೆ ಬಂದ ಬೀಗರಿಗೆ ಹೇಳುವ ಪರಸ್ಥಿತಿ ಬಂದಿತ್ತು. ಈ ಕಾಲದಾಗೂ ಏನ ದೆವ್ವಾ ಭೂತಿಗೆ ಹೇದರ್ತಿರಿ ಅಂತ ಯಾರಾದ್ರೂ ತಿರಿಗೆ ಮಾತಾಡಿದ್ರೆ. ‘ಹಂಗ್ಯಾಲ್ಲಾ ಅನಬ್ಯಾಡ ಸುಮ್ನಿರ್ರೀ ನಮ್ಮೂರಾಗÀ ಇದ್ದದ್ದ ಕರೇ ಐತಿ’ ಅಂತ ತಮ್ಮೂರ ಪ್ರತಿಷ್ಟೆ ಹೆಚ್ಚಿಸಿಕೊಳ್ಳುತ್ತಿದ್ದರು.
          
ಈ ದೆವ್ವಿಗೆ ಒಂದು ಗತಿ ಕಾಣಸ್ಬೇಕು ಹಿಂಗ ನಾಂವ ಹೆದ್ರಕೋತ ಹ್ವಾದ್ರ ಅದು ಹೆದ್ರಸ್ಕೋತ ಹೊಕ್ಕೈತಿ. ಬಾಳೆ ಬದುಕ ಮಾಡೂದ ಹ್ಯಾಂಗ ಅಂತ ಊರಮಂದಿ ಅಲ್ಲಲ್ಲಿ ಕುಂತಾಗ ನಿಂತಾಗ ವಿಚಾರಮಾಡಿದ್ರು. ಹಿಂತಾದ್ಕ  ಗಂಡ ಗಿರಾಕಿ ಅಂದ್ರ ಗಾಳಿಸಿದ್ದಪ್ಪ ಒಬ್ಬನ. ಹೆಂತೆಂತ ದೆವ್ವಾ ಭೂತಾ ಬಿಡಿಸ್ಯಾನ ಆದ್ರ ಆವನ ಫೀಜೂ ಬಾಳ ಅಕೈತಿ. ಆದ್ರೂ ಪರವಾಗಿಲ್ಲ ಅಂವನ ಕರಸೇ ಬಿಡೂನ ಅಂತ ಇಡೀ ಊರೆ ತೀರ್ಮಾನಿಸಿತು.  ಗಾಳಿ ಸಿದ್ದಪ್ಪ ಕಾರಿನಲ್ಲಿ ಬರ್ ಎಂದು ಬಂದು ಊರಾಗ ಇಳದ. ಜನರು ಅವನನ್ನು ಸಾಕ್ಷಾತ ದೇವ್ರಂತೆ ಭಯ ಭಕ್ತಿಯಿಂದ ನೋಡತೊಡಗಿದರು. ಬಾಗುವವರನ್ನು ಕಂಡರೆ ಬಾಗಿಸುವ ಕಲೆ ಮಂತ್ರದ ಸಿದ್ದಪ್ಪನಿಗೆ ಯಾರಾದರೂ ಹೇಳಿ ಕೊಡಬೇಕೆ?  ಊರ ಗೌಡರ ಮನೆಯಲ್ಲಿ ಚಾ ವ್ಯವಸ್ಥೆ ಬರ್ಜರಿ ಆಯಿತು. ಬಾಯಿಗೊಂದು ಕಲಕತ್ತಾ ಪಾನ್ ಬಂದು ಬಿದ್ದಿತು. ಬಾಯಾಡಿಸುತ್ತ ಹೂಂ.. ನಡಿರಿ ಜಾಗ ತೋರ್ಸರಿ ಅಂತ ಊರಿನವರಿಗೆ ಕೇಳಿದ.  ಹುಚ್ಚ ಕಂಬಾರ ಗುಡಿಸಲ ಹತ್ತಿರ ಸಿಕ್ಕ ಸಿಕ್ಕ ಹಾಳಿ ಆರಿಸುತ್ತ ಸಿದ್ದಪ್ಪನನ್ನು ನೋಡಿ ಹಲ್ಲು ಕಿಸಿದು ನಗತೊಡಗಿದ. ಅವನ ಕೊರಳಲ್ಲಿ ಹಾಕಿದ ರುದ್ರಾಕ್ಷಿ ಮಾಲೆ ಯನ್ನು ದಿಟ್ಟಿಸಿ ನೋಡಿ ಕೇ ..ಕೇ ಹಾಕತೊಡಗಿದ. ಅಲ್ಲಿದ್ದ ಯಾವನೋ ಅಂವ್ನ ಅತ್ತಾಗ ಅಟ್ಟರಿ ಅಂತ ಅಂದಾಗ  ಅಲ್ಲಿದ್ದವರಲ್ಲೊಬ್ಬ ಹುಚ್ಚನನ್ನು  ಬೆದರಿಸಿದರು. ಚೀರುತ್ತ ಕಿರಚುತ್ತ ಕೈಯಲ್ಲೊಂದು ಮುರಕು ತಾಟು ಇಡಿದುಕೊಂಡು ಹನಮಪ್ಪನ ಗುಡಿ ಕಡೆಗೆ ಕೇ..ಕೇ.. ಹಾಕುತ್ತ ಹೋದ.
         
ಸಿದ್ದಪ್ಪ ಹುಚ್ಚನನ್ನು ನೋಡಿ ನೋಡದಂತೆ ಮುನ್ನೆಡದ. ಊರ ಜನರು ತೋರಿಸಿದ್ದ  ಜಾಗಕ್ಕೆ ಬಂದು ಸುತ್ತೆಲ್ಲ ಕಣ್ಣಾಡಿಸಿದ. ಜಾಲಿ ಗಿಡದ ಕೇಳಗೆ ರಾಶಿ ಹಾಕಿದ ವಸ್ತುಗಳನ್ನು ದಿಟ್ಟಿಸಿದ. ಇದೇನು ಎಂದು ಗಾಳಿಸಿದ್ದಪ್ಪ  ಕೇಳಿದ. ಕುಡ್ಡಮಲ್ಲ ಇವು ನಮ್ಮೂರ ಹುಚ್ಚನ ಆಸ್ತಿ ಎಂದು ಹೇಳಿದ. ಅಲ್ಲಿದ್ದವರೆಲ್ಲರೂ ನಕ್ಕರು. ಗಾಳಿಸಿದ್ದಪ್ಪ ದಕ್ಷಿಣ ದಿಕ್ಕಿಗೆ ಮುಖಮಾಡಿ ಕೂಳಿತು ಮುಂದೆ ಬೆಂಕಿ ಮಾಡಿಕೊಂಡು ಅದಕ್ಕೆ ನೀರು ಚಿಮಿಕಿಸ ತೊಡಗಿದೆ. ಅವನು ನೀರು ಚಿಮಿಕಿಸಿದಾಗೊಮ್ಮೆ ಬೆಂಕಿ ‘ದಗ್ ದಗ್’ ಎಂದು ಉರಿಯುತ್ತಿತ್ತು. ಜನರು ಬಾಯಿ ಮೇಲೆ ಕೈ ಇಟ್ಟುಕೊಂಡು ಅವನ ಮಂತ್ರ ಶಕ್ತಿಗೆ ಶರಣಾಗಿದ್ದರು.  
   
‘ಈ ಭೂತಾನ ಈ ಊರ ಸೀಮಿಯಿಂದ ಅಲ್ಲ ರಾಜ್ಯದಿಂದ ಗಡಿ ಪಾರ ಮಾಡ್ತಿನಿ’ ಎಂದು ಹೇಳುತ್ತ ಗಾಳಿಸಿದ್ದಪ್ಪ ತನ್ನ ಇದ್ದಬಿದ್ದ ಎಲ್ಲ ಮಂತ್ರವನ್ನು ಆ ದಾರಿಯಲ್ಲಿ ಒಟಗುಡಿ ಖಾಲಿ ಮಾಡಿಕೊಂಡು ಹತ್ತು ಸಾಯಿರದ ಒಂದು ಕಟ್ಟು ಭದ್ರವಾಗಿ ಜೋಬಿಗೆ ಇಳಿಸಿಕೊಂಡು ಕಿತೆ ಎಂದಿದ್ದ.  

 

*****

        
ಎಲ್ಲಾರೂ ದೆವ್ವಾ ಹಾಳಾಗಿ ಹೋತ ಅಂತ ಜಲ್ಲ ಬಿಟ್ಟು ಆ ರಸ್ತೆ ಮ್ಯಾಲ ಒಂದಿಷ್ಟದಿನ ಊರ ಮಂದಿ ಯಾವಗ ಬೇಕಾದ ಅಡ್ಯಾಕ ಸುರೂ ಮಾಡಿದ್ರು. ಹೆಂಗಸ್ರು ಕೂಸು-ಕುನ್ನಿ ತಗೊಂದು ಹೊಲಮನಿ ಬಾಳೆ ಮಾಡಕ ಹತ್ತಿದ್ರು.  ಕುಡ್ಡ ಮಲ್ಲ ‘ಮಟಾ ಮಟಾ ಮದ್ಯಾನದಾಗ ಒಬ್ಬ ಬÀಂದ್ಯಾ ನೋಡು’ ಅಂತ ಕುದರಿ ಬಸ್ಯಾಗ ಚಾಷ್ಟಿ ಮಾಡಿದ. ಕುದರಿ ಬಸ್ಯಾನ ಹವಾ ಎಲ್ಲಾ ‘ಟುಸ್’ ಆಗಿ ಹೋತು. ಇವ್ನೌನ ಈ ಗಾಳಿ ಸಿದ್ದ ಬಂದ ನನ್ನ ಡಿಮಾಂಡ ಹಾಳ ಮಾಡಿದನೋಡ ಅಂತ ಬಸ್ಯಾ ಸಿದ್ದನ ಬೈದ. ಇಡೀ ಊರ ಗಾಳಿಸಿದ್ದನ ಮಂತ್ರದ ವಿದ್ಯೆ ಕೊಂಡಾಡಿದ್ದೆ ಕೊಂಡಾಡಿದ್ದು. ಹೆಂಗಸರಂತು “ಈಗ ಊರ ತಣ್ಣಗ ಆತನೋಡವ್ವಾ ಬಿದ್ದಾಡಿ ಮೂರ ಮಂದಿ ನುಂಗಿ ನೀರ ಕುಡದ್ಳು. ಗಾಳಿ ಬಿಡಸು ಮಾವ್ ಒದ್ದು ದೇಶ್ಯಾ ಬಿಟ್ಟ ಅಟ್ಟಿದ, ಈಗ ಎಲ್ಲಿ ಮೆಟ್ಟ ಹುಡಕ್ಯಾಳೊ ಹಾದರಗಿತ್ತಿ” ಅಂತ ಅಲ್ಲಿ ಕುಡಿದ ಹೆಂಗಸರು ದೆವ್ವಿನ ಬಗ್ಗೆ ಮಾತಾಡಿ ನಗುತ್ತಿದ್ದರು. ಊರು ತುಂಬಾ ಖುಷಿಯಲ್ಲಿ ಮೂಳಗಿತ್ತು.                           
 

******

              
ಪ್ರತಿ ವರ್ಷವೂ ಊರ ಹನಮಪ್ಪನ ಓಕಳಿ ಬಾಳ ಸಡಗರದಿಂದ ನಡಿತಿತ್ತು. ಪ್ರತಿ ವರ್ಷದಂತೆ  ಮನಿ ಮನಿಗೆ ಹೋಗಿ ಪಟ್ಟಿ ಎತ್ತಿ ಕಾಳು ಕಡಿ ಒಂದಿಷ್ಟ ಹಣ ಅರಕೇರಿ ಊರ ಹಿರಿಯ್ಯಾರು ಗ್ವಾಳಿ ಮಾಡಿದ್ರು. ಈ ವರ್ಷ ಓಕಳಿಗೆ ಕಂಪನಿ ನಾಟಕಾ ತರಿಸ್ಸಿ ಹನಮಪ್ಪನ ಸೆಡಗ್ರಾ ಹೆಚ್ಚ ಮಾಡಬೇಕಂತ ಊರ ಹಿರಿಯಾರೆಲ್ಲ ತೀರ್ಮಾನ ಮಾಡಿದ್ರು. ಕಂಪನಿ ನಾಟಕ ಯಾಕ ತರ್ಸೂದು ಊರಾಗ ನಾಟಕಾ ಮಾಡು ಹುಡುಗೂರ ರಗಡ ಅದಾರ. ನಾಟಕಾ ಕಲಿಸೂ ಕಂಬಾರ ಮಾಸ್ತರ ಏನೂ ಕೆಲಸ ಇಲ್ಲದ ಕುಂತಾನ. ಅಂವ ಮನಸ್ಸ ಮಾಡಡಿದ್ರ ತಿಂಗಳ ಒಪ್ಪತ್ನ್ಯಾಗ ತಾಲೀಮ ನೆಡಸಿ ಮಾತ ಗಟ್ಟಿಮಾಡಸ್ತಾನ ಅಂತ ಕುದರಿ ಬಸ್ಯಾ ನಡು ಬಾಯಿ ಹಾಕಿದ. ಊರ ಹಿರಿಯ್ಯಾರಿಗೆ ಬಸ್ಯಾನ ಮಾತು ಬರೊಬ್ಬರಿ ಅನಿಸ್ತು. ಆದ್ರಾತು ನಾಟಕದ ಹುಡಗೂರ್ನ ಗ್ವಾಳಿ ಮಾಡಿ, ಮಾಸ್ತರ್ನ ಒಪ್ಪಿಸಿ ತಾಬಡತೊಬ್ಡ ನಾಟಕ ತಾಲೀಮ ಕೊಡಸು ಜವಾಬ್ದಾರಿ ಮಾಡಬೇಕು ಅಂತ ಊರ ಹಿರ್ಯಾರು ಮಾತಾಡಕೊಂಡ್ರು. ಅವರಂದು ಕೊಂಡಂತೆ ಎಲ್ಲವೂ ಬರೊಬ್ಬರಿಯಾಗಿ ಸಾಗಿತು. ದಿನವಿಡಿ ಕಂಬಾರ ಮಾಸ್ತರ ಪೆಟಗಿ ಮ್ಯಾಲ ‘ಕುಂತ ಕೂಞï ಕುಟ್ಟ’ ಬಾರಿಸೂತ್ತ ನಾಟಕ ಕಲಿಸಿದ್ದ.
       
ಓಕಳಿ ಕೇವಲ ನಾಕೇ ನಾಕು ದಿನ ಇತ್ತು. ಮತ್ತೊಮ್ಮೆ ಊರ ಹಿರಿಯಾರು ಸಭೆ ಸೇರಿದರು. ಈ ರಸ್ತೆ ಬಾಳ ಹಾಳಾಗಿ ಹೋಗೇತಿ. ಪಂಚಾಯ್ತಿಯಿಂದ ರಸ್ತೆ ದೂರಸ್ತಿ  ಕೆಲಸ ಮಾಡಸಿದ್ರ. ಊರಿಗೆ ಬರೂ-ಹೋಗುವ ಬೀಗ್ರು ಬಿಜ್ಜರಿಗೆ ಯಾವ ತೊಂದ್ರಿನೂ ಆಗೂದಲಿಲ್ಲ ಅಂತ ಎಲ್ಲರೂ ವಿಚಾರಿಸಿದರು. ಊರ ಹಿರಿಯರ ಮಾತಿನಂತೆ ಮನಿಗೆ ಒಂದು ಗಂಡಾಳ ಸಲಕಿ ಗುದ್ಲಿ ಹಿಡಿದು ಬಂದು ಟ್ಯಾಕ್ಟರ್ ಹತ್ತಿದರು. ಹಿರೆ ಗುಡ್ಡದ ಒತ್ತಿನಲ್ಲಿರುವ ದೇಸಾಯಿ ವೀರಭದ್ರಪ್ಪನ ದಿಬ್ಬಿಗೆ ಕೈ ಹಾಕಿ ಒಂದು ಜೆಸಿಬಿ ಮಣ್ಣು ಎಳೆಯತೋಡಗಿತು. ನಾಕಾರು ಟ್ಯಾಕ್ಟರಗಳು ಹಿಂದೆ ಮುಂದೆ ಪಾಳಿ ಹಚ್ಚಿಕೊಂಡು ಬಂದು ಬರ್ ಎಂದು ಓಡತೊಡಗಿದವು. ಒಂದೆ ದಿನದಲ್ಲಿ ರಸ್ತೆಗೊಂದು ಕಳೆ ಬಂದಿತು. 
        
ಹುಚ್ಚ ಮಲಗುತಿದ್ದ ಜಾಗದಲ್ಲಿ ಮಣ್ಣು ಸುರಿದು ಅವನ ಸ್ಥಳವನ್ನು ತೆರವು ಮಾಡಿದ್ದರು. ಅವನು ಕುಡಿಟ್ಟ ಚಿಪ್ಪಾಡಿಯಂತ ಸಾಮುನುಗಳಿಗೆ ಬೆಂಕಿ ಹಚ್ಚಿ ಕಿಡಗೆಡಿಗಳು ಮಜಾತಗಿದುಕೊಂಡಿದ್ದರು. ಪಾಪ ಹುಚ್ಚ ಎರಡು ದಿನದಿಂದ ಹನಮಪ್ಪನ ಗುಡಿಯ ಹಿಂದೆ ಮುಂದೆ ಅಡ್ಡಾಡುತ್ತ ಹನಮಪ್ಪನ ಗುಡಿಯ ಎದರಿಗಿರುವ ಬೇವಿನ ಮರದ ಕೇಳಗೆ  ಮಲಗಿದ್ದ. ಸುತ್ತಲೂ ತನ್ನ ಸಂಪತ್ತು ಹರವಿಕೊಂಡು ಕುಳತಿದ್ದನ್ನು ಸಹಿಸದ ಕುಡ್ಡಮಲ್ಲ  ಹುಚ್ಚನನ್ನು ಹಿಡಿದು ರಪಾ ರಪಾ  ತಳಿಸಿ ‘ಒಂದ್ಯಾಡ ದಿನ ಎತ್ತಾಗರಾ ಹಾಳಿಗಿ ಹೋಗು ಬಿಗ್ರು ಬಿಜ್ಜರು ಬರ್ತಾರ ಗುಡಿಮುಂದ ತಿಪ್ಪಿ ಮಾಡಿ ಕುಂತಿಯಲ’್ಲ ಅಂತ ಇದ್ದ ಒಂದೆ ಕಣ್ಣು ಕಿಸಿದು ಹುಚ್ಚನನ್ನು ಅಲ್ಲಿಂದ ಅಟ್ಟಿದ. ಕುಡ್ಡ ಮಲ್ಲ ಹುಚ್ಚನ ಜೋಡಿ ತಗಲಿಗೆ ಬಿದ್ದು ಸಿಟ್ಟಿಗೆದ್ದದ್ದು ನೋಡಿ ಕುದರಿ ಬಸ್ಯಾ ಕೊಕ್ಕಾಡ್ಸಿ ನಗತ್ತಿದ್ದ. ಹುಚ್ಚ ಉರಿಉರಿ ಬಿಸಲಲ್ಲಿ ಎದ್ದು ಊರಿನ ಯಾವೂದೋ ಮೂಲೆ ಸೇರಿದ.
  
ಹನಮಪ್ಪನಿಗೆ ಅಂದು ಮೊದಲು ತುಪ್ಪದ ಅಭಿಷೇಕ ನಂತರ ಹಾಲಿನ ಅಭಿಷೇಕ ಮಾಡಿದರು. ಹೊನ್ನಬಣ್ಣದ ಬಟ್ಟೆ ಸುತ್ತಿ, ತೆಲೆಯ ಮೇಲೆ ರೂಮಾಲೂ ಸುತ್ತಿ ಹೂ ಹಣ್ಣುಗಳಿಂದ ಅಲಂಕರಿಸಿದ್ದರು.  ಗುಡಿಯ ಸುತ್ತಮುತ್ತಲೂ ಬಾಳೆ ಕಂಬ ತಳಿರು ತೋರಣ ಕಟ್ಟಿ ಅಲಂಕರಿಸಿದ್ದರು. ಇಡೀ ಊರಿಗೆ ಊರೆ ಮನೆಯಲ್ಲಿ  ಹೋಳಿಗೆ ಕಡಬು ಮಾಡಿಕೊಂಡು ಹನಮಪ್ಪನಿಗೆ ಎಡೆ ಹಿಡಿದು ತಾವೂ ತಮ್ಮ ತಮ್ಮ ಹೊಟ್ಟಗೆ ಸಮರ್ಪಿಸಿಕೊಂಡಿದ್ದರು. ಸಣ್ಣ ಸಣ್ಣ ಹುಡುಗರು ಹೊಸ ಬಟ್ಟೆ ತೊಟ್ಟು ಹನಮಪ್ಪನ ಓಕಳಿಗೊಂದು ಕಳೆ ತಂದಿದ್ದರು.  ಓಕಳಿ ಹೊಂಡ ತುಂಬಿ ಪುಟ್ಟ  ಆಗಸದಂತೆ ಕಾಣುತ್ತಿತ್ತು. ಇಳಿ ಹೊತ್ತಿಗೆ ಹನುಮನ ಪಲ್ಲಕ್ಕಿ ಗುಡಿಯ ಸುತ್ತ ಐದು ಸುತ್ತಿದ ಮೇಲೆ  ಪುಂಡ ಹುಡುಗರು ಹೆಣ್ಣು ವೇಷ ಧರಿಸಿಕೊಂಡು ಕೈಯಲ್ಲಿ ಕಾರಿ ಕಂಟಿ  ಹಿಡಿದುಕೊಂಡು ಒಬ್ಬರಿಗೊಬ್ಬರು ನೀರು ಉಗ್ಗುತ್ತ, ನೀರು ಉಗ್ಗಿದವರಿಗೆ ಕಾರಿ ಕಂಟಿಯಿಂದ ಶವ್ ಶವ್ ಬಾರಿಸುತ್ತ ಹನುಮಪ್ಪನ ಓಕಳಿ ಸಾಗಿತ್ತು. ಮನೆಯ ಕುಂಬಿ ಮೇಲೆ , ಕಟ್ಟಿಯ ಮೇಲೆ ಅಲ್ಲಿ ಇಲ್ಲಿ ನಿಂತು ಓಕಳಿನ್ನು ಜನರು ನೋಡುತ್ತ ಹನುಮಪ್ಪನ ಲೀಲೆಯನ್ನು ಸ್ಮರಿಸಿದರು.
   
ಕುದರಿ ಬಸ್ಯಾ ನಾಟಕದ ಗಡಬಿಡಿಯಲ್ಲಿ ಬಿದ್ದಿದ್ದ. ನಾಟಕ ಪಾತ್ರಧಾರಿಗಳಿಗೆ “ಚಲೋತಂಗ ಅಭಿನಯಾ ಮಾಡ್ರಿ ನಿಮ್ಮ ನಾಟಕ ನೋಡಾಕ ಪರವೂರವರೂ, ಬೀಗ್ರು ,ಬಿಜ್ಜರೂ ಬಂದಿರ್ತಾರ ನಿಂವ ಏನಾರ ಕ್ಯಾಕಿಸಗಿ ಮಾಡಿದ್ರ ಊರ ಮರ್ಯಾದಿ ಹಾಳ ಅಕೈತಿ” ಇಂತ ನಾಟಕ  ಪಾತ್ರ ಧಾರಿಗಳಿಗೆ  ತಿಳವಳಿಕೆ ಹೇಳುತ್ತಿದ್ದ. ಬಸ್ಯಾ ಹೇಳಿದ್ದಕ್ಕೆ ಎಲ್ಲರೂ ಹೂಂ .. ಎಂದು ತಲೆದೂಗಿದರು. 
     
ಸರಿಯಾಗಿ ಹತ್ತುಗಂಟೆಗೆ ನಾಟಕ ಪ್ರಾರಂಭವಾಯಿತು. ಊರ ಜನರು ತಮ್ಮ ತಮ್ಮ ಜಾಗವನ್ನು ಭದ್ರಗೊಳಿಸಿಕೊಂಡರು. ನಾಟಕದ ನಾಂದಿಗೀತೆ ಪ್ರಾರಂಬವಾಗೋ ಹೊತ್ತಿಗೆ ಕರೆಂಟ ಕೈ ಕೊಟ್ಟಿತು. ಎಲ್ಲರೂ ಕರೆಂಟ ಕೊಡುವವನ ತಾಯಿ ತಂಗಿಯ ಹೆಸರು ಹಿಡಿದು ಬೈದು ಸಮಾಧಾನವಾದರು. ಡಿಸೈಲ್ ಕೂಡಾ ಕಾಲಿ ಆದದ್ದು ಅರಿವಿಗೆ ಬಂತು. ಕುದರಿ ಬಸ್ಯಾ ‘ಬರ್’ ಎಂದು ಬೈಕ ಚಲೂ ಮಾಡಿ ಶರವೇಗದಲ್ಲಿ ಓಡಿಸುತ್ತ ನಾಕು ಕಿಲೋಮೀಟರ ದೂರಲ್ಲಿರುವ  ಪೆಟ್ರೋಲ್ ಬಂಕಿನತ್ತ ನಡೆದ. ಅವನ ಬೈಕ ಇಪ್ಪತ್ತು ಮಾರ ದೂರ ಹೋಗುತ್ತಲೇ ಕರೆಂಟ್ ಬಂದವು. ನಾಟಕ ಸುರುವಾಯಿತು. ಎಣ್ಣಿ ತರಲು ಹೋದ ಬಸ್ಯಾ ಎರಡು ಗಂಟೆಯಾದರೂ ಬರಾದೆ ಇದ್ದಾಗ ಕುಡ್ಡಮಲ್ಲನಿಗೆ ಯಾಕೋ ಅನುಮಾನ ಬರತೊಡಗಿತು.  ಬೆಳಕು ಹರಿಯೋ ಹೊತ್ತಾದರೂ ಬಸ್ಯಾ ಬಾರದಿದ್ದಕ್ಕೆ ಅರ್ಧ ಜನರು ಗಾಭರಿಯಾಗಿದ್ದರು. ನಾಕಾರುಜನ ಬೈಕ ಹತ್ತಿ ಪೆಟ್ರೋಲ ಬಂಕತ್ತ ಬಂವ್ ಎಂದು ಹೋದರು. ದಾರಿಯಲ್ಲಿ ಕಪ್ಪಗೆ ಹರಕು ಬಟ್ಟೆ ಕಾಕಿಕೊಂಡು ಏನೋ ಒಂದು ಡಬ್ಬ ಬಿದ್ದದ್ದನ್ನು ಕಂಡು ಬೈಕಿನಲ್ಲಿದ್ದವರು “ಅಯ್ಯಯ್ಯೋ ದೆವ್ವಾ” ಎಂದು ಗಾಬರಿಯಾಗಿ ಹೆದರುತ್ತ ಊರಿಗೆ ಬಂದರು. ಅಷ್ಟೊತ್ತಿಗೆ ನಾಟಕ ಮುಗದಿತ್ತು. ಅಲ್ಲಿ ಯಾರೂ ಇರಲಿಲ್ಲ. ಇವರು ಬರುವುದನ್ನೆ ಕಾಯ್ದು ಕುಳತಿದ್ದ ಕುಡ್ಡ ಮಲ್ಲ ಏನಾತು ಎಂದು ಕೇಳಿದ .ದಾರಿಯಲ್ಲಿ ದೆವ್ವ ಮಲಿಗೇತಿ ಎಂದು ಹೇಳಿದ್ದು ಕೇಳಿ ಕುಡ್ಡ ಮಲ್ಲನಿಗೆ ಗಾಬರಿಯಾಗುವ ಬದಲೂ ಅನುಮಾನ ಹೆಚ್ಚಾತು ಹತ್ತು ಹದಿನೈದು ಮಂದಿ ಒಟ್ಟಗಿ ಹೋಗಿ ನೋಡಿದರೆ ಅಲ್ಲಿ ಬಸ್ಯಾ ಹೆಣವಾಗಿ ಬಿದ್ದಿದ್ದ. ಅವನ ಕೊರಳಿಗೆ ಹಗ್ಗದಿಂದ ಬಿಗಿದು ಗಂಭೀರವಾಗಿ ಕೊಲೆ ಮಾಡಲಾಗಿತ್ತು. ಅದನ್ನು ನೋಡಿ ಎಲ್ಲರೂ ಗಾಬರಿಗೊಂಡರು. ಬಸ್ಯಾನ ದೇಹದಲ್ಲಿ ಹುಚ್ಚ ಹಾಕಿಕೊಳ್ಳುವ ಹರಕು ಬಟ್ಟೆಗಳು ಇದ್ದವು. ಬಸ್ಯಾ ಓಕಳಿಗೆಂದು ಹೊಲಸಿದ ಹೊಸ ಬಟ್ಟೆ, ಅವನು ಹತ್ತಿ ಬಂದ ಬೈಕು ಯಾವುದೂ ಕಾಣಲಿಲ್ಲ. ಇವನ ಮೇಲೇಕೆ ಹುಚ್ಚನ ಬಟ್ಟೆಗಳು ಬಂದವು ಎಂಬ ಸಂದೇಹ ಇಡೀ ಊರನ್ನೇ ಬೆಚ್ಚಿಬೀಳಿಸಿತು.  ಊರು ಜನರು ಹುಚ್ಚನನ್ನು ಹುಡುಕಾಡಿದರು. ಹುಚ್ಚನ ಸುಳಿವು ಎಲ್ಲೂ ಸಿಗಲಿಲ್ಲ. 
     
ಆ ಹೆಣ್ಣಿನ ಅತ್ಯಾಚಾರ ಮಾಡಿ ಕೋಲೆ ಮಾಡಿದವರೇ ಈ ನಾಕುಜನ ಯಾಕಾಗಿರಬಾರದು? ಈ ಕೊಲೆ ಆ ಹುಚ್ಚನೇ ಯಾಕೆ ಮಾಡಿರಬಾರದು? ಎಂದು ಆ ಹೆಣದ ಮುಂದೆ ನಿಂತು ಕುಡ್ಡ ಮಲ್ಲ ತರ್ಕಿಸುತ್ತಿದ್ದ ಆಗ  ಆಕಾಶದಲ್ಲಿ ಸೂರ್ಯ ಬೆಂಕಿಯಂತೆ ಉರಿಯುತ್ತಲೇ ಇದ್ದ.

******
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಪಾರ್ಥಸಾರಥಿ

rahasya pattedariya reethiya kathe 

ನಾಗೇಶ್
ನಾಗೇಶ್
8 years ago

ಸರ್..ಕಥೆ ಸೂಪರ್ ರೀ ಸರ್…

2
0
Would love your thoughts, please comment.x
()
x