ಪುಟ್ಟ ಪುಟ್ಟ ಕೈಗಳು ಅಮ್ಮನನ್ನು ಹಿಡಿದಿದ್ದವು. ೮ ದಿನದ ಮಗು ಬಹಳ ಸಣ್ಣದಾಗಿ ಹುಟ್ಟಿದ್ದು, ಆ ಮಗುವನ್ನು ಹೇಗೆ ಎತ್ತಿಕೊಳ್ಳಬೇಕೆಂಬುದು ಸಹ ತಿಳಿದಿರಲಿಲ್ಲ ಅಮ್ಮನಿಗೆ. ಸರಸ್ವತಿ ತನ್ನ ೨೨ ನೇ ವರ್ಷಕ್ಕೆ ಮಗುವಿಗೆ ಜನನ ನೀಡಿದ್ದಳು. ಅವಳಿಗೆ ಇದೆಲ್ಲ ಹೊಸತು. ಮಗು ಅಳುತ್ತಿದ್ದರೆ ಏನು ಮಾಡಬೇಕೆಂಬುದೇ ಅವಳಿಗೆ ತಿಳಿಯುತ್ತಿರಲಿಲ್ಲ. ಯಾವ ಕಾರಣಕ್ಕೆ ಅಳುತ್ತಿದೆ ಎಂದು ಯೋಚಿಸುತ್ತಿದ್ದಳು. ಮಗು ತುಂಬ ಅಳುತ್ತಿತ್ತು, ಅವಳಿಗೆ ಅದನ್ನು ಸಮಾಧಾನ ಮಾಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಅವಳ ನಿದ್ದೆಗೆ, ಊಟಕ್ಕೆ ಪ್ರತಿಯೊಂದಕ್ಕೂ ಮಗು ಮಲಗುವುದನ್ನೇ ಕಾಯಬೇಕಿತ್ತು. ಇನ್ನು ಚಿಕ್ಕವಯಸ್ಸಿನವಳಾಗಿದ್ದ ಅವಳಿಗೆ ಒಮ್ಮೊಮ್ಮೆ ಮಗುವನ್ನು ಸಂಭಾಳಿಸುವುದು ತುಂಬ ಕಷ್ಟ ಎನಿಸುತ್ತಿತ್ತು. ಅವಳ ಜೊತೆ ಅವಳ ಅಜ್ಜಿ ಇದ್ದದ್ದು ಅವಳಿಗೆ ಒಂದು ಬೆಟ್ಟದಷ್ಟು ಸಹಾಯ ಆಗಿತ್ತು. ಅಜ್ಜಿ ಅವಳಿಗೆ ಮಗುವನ್ನು ಎತ್ತಿಕೊಳ್ಳುವುದು, ಸಮಾಧಾನ ಮಾಡುವುದು, ಸ್ನಾನ ಮಾಡಿಸುವುದು ಎಲ್ಲವನ್ನು ಹೇಳಿಕೊಟ್ಟಿದ್ದರು. ಅವಳಿಗೆ ಮಗವನ್ನು ಬಿಟ್ಟರೆ ಬೇರೆ ಪ್ರಪಂಚವೇ ಇರಲಿಲ್ಲ. ಮಗುವಿನ ಪ್ರತಿಯೊಂದು ಬೆಳವಣಿಗೆ ಅವಳಿಗೆ ಆಶ್ಚರ್ಯ ಮತ್ತು ಕುತೂಹಲ ತರುತ್ತಿತ್ತು. ಅವಳ ದೇಹದಿಂದಲೇ ಹೊರಬಂದ ಒಂದು ಪುಟ್ಟ ಜೀವ…. ಅದಕ್ಕೆ ಹಸಿವು, ನಿದ್ದೆ, ನಗು, ಕೋಪ ಎಲ್ಲವು ಹೇಗೆ ಎನ್ನುವುದೇ ಅವಳ ಕೌತುಕದ ವಿಷಯ. ಸೃಷ್ಟಿ ಎಷ್ಟು ವಿಸ್ಮಯ ಎಂದು ಯೋಚಿಸುತ್ತಿದ್ದಳು. ಅವಳ ಗಂಡನಂತೆಯೇ ಇರುವ ಮಗಳು. ಅವಳನ್ನು ಬಿಟ್ಟುಇನ್ಯಾರ ಬಳಿಯೂ ಹೋಗುತ್ತಿರಲಿಲ್ಲ. ಸದಾ ತನ್ನ ಕಂಕುಳಲ್ಲೇ ಹೊತ್ತುಕೊಂಡಿರಬೇಕಿತ್ತು. ಮಗು ತುಂಬ ಮುದ್ದಾಗಿ ಬೆಳೆಯುತ್ತಿತ್ತು. ಅವಳಿಗೆ ಬೇರೆ ಯಾರು ಬೇಕಿರಲಿಲ್ಲ. ತನ್ನ ಮಗುವಿನ ನಗು, ಅಳು, ಖುಷಿ ಎಲ್ಲ ನೋಡುತ್ತಾ ಮೂಕವಿಸ್ಮಿತಲಾಗುತ್ತಿದ್ದಳು. ಬಹುಷಃ ಇದೆ ಎನಿಸುತ್ತದೆ ಅಮ್ಮ ಎಂದರೆ ಇರುವ ಭಾವನೆ.
ಮಗುವಿಗೆ ಆಹಾರ ಕ್ರಮ ಶುರುವಾಯಿತು. ಅವಳು ಏನು ತಿನ್ನಿಸಿದರು ಅವಳ ಮಗಳು ತಿನ್ನಲು ಇಷ್ಟ ಪಡುತ್ತಿರಲಿಲ್ಲ. ಮಗುವಿಗೆ ಊಟ ಮಾಡಿಸುವುದು ಒಂದು ಹರಸಾಹಸವಾಗಿತ್ತು. ಎಂಥಹ ತಿನಿಸನ್ನು ತಿನ್ನುತಿರಲಿಲ್ಲ. ಮಗುವಿಗೆ ಇಷ್ಟವಾಗಲೆಂದು ಬಹಳ ರೀತಿಯ ಅಡಿಗೆಯನ್ನು ತಯಾರಿಸಿ ಪ್ರಯತ್ನಿಸುತ್ತಿದ್ದಳು. ಆದರೆ ಬೇರೆ ಆಟಪಾಠಗಳಲ್ಲಿ ಚುರುಕಾಗಿತ್ತು ಮಗು. ನೋಡಲು ತುಂಬ ಮುದ್ದಾಗಿದ್ದ ಮಗುವನ್ನು ಎಲ್ಲರು ಮುದ್ದುಮಾಡುತ್ತಿದ್ದರು. ಅಮ್ಮನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಮಗುವಿಗೆ ಅಮ್ಮನೇ ಎಲ್ಲ! ಅಮ್ಮ ಅಡುಗೆ ಮಾಡುತ್ತಿದ್ದಾರೆ ಅಮ್ಮನ್ನ ಪಕ್ಕ ತಾನು ಕುಳಿತು ಏನಾದರೊಂದು ಮಾಡುತ್ತಿತ್ತು. ಮಗು ಊಟ ಮಾಡಲು ತುಂಬ ಹಟಮಾಡುತ್ತಿದ್ದ ಕಾರಣ ಸರಸ್ವತಿ ಮಗುವಿಗೆ “ಚೆನ್ನಾಗಿ ಊಟ ಮಾಡಿದರೆ ನೀನು ಬೇಗ ಬೆಳೆದು ದೊಡ್ಡವಳುತ್ತೀಯಾ.. ಆಗ ನೀನು ಶಾಲೆಗೆ ಹೋಗಬಹುದು, ಸೈಕಲ್ ಓಡಿಸಬಹುದು” ಎಂದೆಲ್ಲ ಪೂಸಿಮಾಡುತ್ತಿದ್ದಳು. ಅದನ್ನು ಕೇಳಿ ಒಂದೆರಡು ತುತ್ತು ಊಟ ಮಾಡುತ್ತಿದ್ದಳು. ಅಮ್ಮನಿಗೆ ಅಷ್ಟೇ ಖುಷಿ! ಆದರೆ ಪ್ರತಿಯೊಂದು ಊಟವು ೨-೩ ಗಂಟೆಗಿಂತ ಕಡಿಮೆ ಆಗುತ್ತಿರಲಿಲ್ಲ. ಹಾಗಾಗಿ ಅಮ್ಮನ ಊಟವು ಪ್ರತಿದಿನ ನಿಧಾನವಾಗುತ್ತಿತ್ತು.
ಒಂದು ದಿನ ಸರಸ್ವತಿಗೆ ಹುಷಾರಿರಲಿಲ್ಲ. ಮಗುವನ್ನು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡು ಸಮಾಧಾನ ಮಾಡಿ ಊಟ ಮಾಡಿಸುತ್ತಿದ್ದಳು. ಮಗು “ಅಮ್ಮ, ನಿನಗೆ ಏನಾಗಿದೆ..ಯಾಕೆ ಮಲಗಿದ್ದೀಯ” ಎಂದಾಗ ಸರಸ್ವತಿ “ನನಗೆ ಹುಷಾರಿಲ್ಲ ಮಗು, ವಯಸ್ಸಾಗುತ್ತ ಹೀಗೆಲ್ಲ ಹೆಚ್ಚಾಗಿ ಆಗುತ್ತದೆ” ಎಂದು ಹೇಳಿ ಮಗುವಿಗೆ ಸಮಾಧಾನ ಪಡಿಸಿ ಊಟಮಾಡಿಸಿದಳು. ಆದರೆ ಸರಸ್ವತಿ ಊಟ ಮಾಡಲು ಕುಳಿತಾಗಲೆಲ್ಲ ಮಗು ಅವಳಿಗೆ ಊಟ ಮಾಡಲು ಬಿಡುತ್ತಿರಲಿಲ್ಲ. ಒಂದೆರಡು ತುತ್ತು ತಿನ್ನುತ್ತಿದ್ದಂತೆಯೇ “ಸಾಕು ಬಿಡಿ ಅಮ್ಮ, ನೀವು ಊಟ ಮಾಡಿದ್ದು” ಎಂದು ಯಾವಾಗಲು ಹೇಳಿ ಅಮ್ಮನನ್ನು ಕೈತೊಳೆಯುವಂತೆ ಮಾಡುತ್ತಿದ್ದಳು. ಹಾಗೆ ಅವಳು ಹಾಗೆ ಮಾಡುವುದನ್ನು ನೋಡುತ್ತಿದ್ದ ಸರಸ್ವತಿಯ ಅತ್ತೆಗೆ ಬಹಳ ಬೇಸರವಾಗುತ್ತಿತ್ತು. ಎಂಥಹ ಮಗು ಇದು…. ೨-೩ ಗಂಟೆ ಮಗುವನ್ನು ಹೊತ್ತು ಊಟಮಾಡಿಸುತ್ತಿದ್ದ ಅವಳ ಸೊಸೆಗೆ ಸಮಾಧಾನವಾಗಿ ಊಟ ಮಾಡಲು ಮಗು ಬಿಡುವುದಿಲ್ಲವಲ್ಲ ಎಂದು…. ಒಮ್ಮೆ ಬಹಳ ಬೇಸರಗೊಂಡು ಮಗುವನ್ನು ಕೇಳಿದರು “ಏನು ಪುಟ್ಟ… ನಿಮ್ಮಮ್ಮ ಊಟ ಮಾಡುತ್ತಿದ್ದಾರೆ ಸಾಕು ಬಿಡಿ ಅಂತೀಯಲ್ಲ ಸರೀನಾ.,,, ಹಾಗೆಲ್ಲ ಮಾಡಬಾರದು, ನಿಮ್ಮಮ್ಮನಿಗೂ ಶಕ್ತಿ ಬೇಕಲ್ಲವೆ ನಿನ್ನ ನೋಡಿಕೊಳ್ಳೋಕೆ!”… ಮಗು ನಿಧಾನವಾಗಿ ಅಜ್ಜಿಯನ್ನೇ ನೋಡುತ್ತಾ “ಅಜ್ಜಿ… ಅಮ್ಮ ಅಂದ್ರೆ ನಂಗೆ ತುಂಬೆ ಇಷ್ಟ… ಆದ್ರೆ ಅಮ್ಮನಿಗೆ ಯಾವತ್ತೂ ವಯಸ್ಸಾಗ ಬಾರದು.. ಅಮ್ಮ ಹೀಗೆ ಇರಬೇಕು, ಅದಿಕ್ಕೆ ಅಮ್ಮಂಗೆ ಜಾಸ್ತಿ ಊಟ ಮಾಡಬೇಡಿ ಅಂತ ಹೇಳಿದ್ದು. ನಾನು ಊಟ ಮಾಡಿ ದೊಡ್ದು ಹುಡುಗಿ ಆಗತೀನಿ ಅಲ್ವಾ… ಆದರೆ ಅಮ್ಮ… ಜಾಸ್ತಿ ಊಟ ಮಾಡಿದ್ರೆ ಅಜ್ಜಿ ಆಗ್ತಾರೆ… ನಮ್ಮಮ್ಮ ಯಾವತ್ತೂ ಅಜ್ಜಿ ಆಗ್ಬಾರ್ದು. ಅಮ್ಮ ಯಾವಾಗ್ಲೂ ಹೀಗೆ ಇರಬೇಕು” ಅಂತ ಹೇಳಿ ಅಳುತ್ತಿದ್ದಳು… ಅವಳ ಮುಗ್ಧತೆಗೆ ಎಲ್ಲರು ನಗುತ್ತಿದ್ದರು.
-ಗಿರಿಜಾ ಜ್ಞಾನಸುಂದರ್
Lovely… Keep rocking…
ಮಗುವಿನ ಮುಗ್ಧ ಯೋಚನೆ…. ಸುಂದರವಾಗಿದೆ