ಅಮ್ಮ ಎನ್ನುವವಳು ಜಗತ್ತಿನ ಅದಮ್ಯ ಜ್ಯೋತಿ ಚೇತನ. ಈ ಎರಡಕ್ಷರಗಳಲ್ಲಿ ಸೃಷ್ಟಿಯನ್ನೇ ಮೋಡಿಮಾಡಬಲ್ಲ ಅದೆಂಥದೋ ಶಕ್ತಿ ಇದೆ. ಆ ಶಕ್ತಿ ಅದರ ಉಚ್ಚಾರಣೆಯಿಂದ ಬಂದದ್ದೋ ಅಥವಾ ಆ ಪದದ ಹುಟ್ಟಿನಿಂದ ಬಂದದ್ದೊ ತಿಳಿಯದು ಆದರೆ ಆ ಪದಕ್ಕೆ ಶೋಭೆಯಂತಿರುವ ಆ ಹೆಣ್ಣು ಮಾತ್ರ ಮಮತೆ, ಪ್ರೀತಿ, ಸಹನೆ, ಕರುಣೆ ಇಂಥ ಹೇಳಲು ಅಸಾಧ್ಯವಾದ ಗುಣ ಭೂಷಿತೆ. ಜಗತ್ತಿನ ಎಲ್ಲರೂ ಇದನ್ನು ಕಂಡುಂಡವರೇ ! ಇವುಗಳೇ ನಮಗೆ ಅವಳನ್ನು ದೈವ ಸ್ವರೂಪಿ ಎನ್ನಲು ಪ್ರೇರಕ ಮತ್ತು ಅಮ್ಮ ಎನ್ನುವ ಪದಕ್ಕೆ ಅವಳೇ ಮೆರುಗು. ಹುಟ್ಟಿದ ಮಗುವಿಗೆ ಅಮ್ಮ ಎನ್ನುವ ಉಚ್ಚಾರಣೆಯನ್ನು ಯಾರೂ ಕಲಿಸಿಕೊಡಬೇಕಿಲ್ಲ ಅದು ಪ್ರಕೃತಿದತ್ತ ಕೂಡಾ ಈ ವಿಚಿತ್ರವೇ ಅವಳನ್ನು ನಮ್ಮಲ್ಲಿ ಎಂದಿಗೂ ಹಸಿರಾಗಿಡುತ್ತದೆ.
ಒಂಬತ್ತು ತಿಂಗಳು ಒಡಲಲ್ಲಿ ಬಚ್ಚಿಟ್ಟುಕೊಂಡು ಕಾಪಿಟ್ಟುಕೊಂಡು ಮೊಲೆಹಾಲು ಉಣಿಸಿ, ತಿನ್ನಿಸಿ, ಬೆಳೆಸಿ, ತಪ್ಪುಗಳನ್ನು ತಿದ್ದುತ್ತಾ, ಗುರುವಾಗಿ ಶಿಕ್ಷಿಸುತ್ತಾ, ದಾರಿ ತೋರಿಸುತ್ತಾ, ತಾನು ಏನೂ ಅಲ್ಲದಂತಿದ್ದು ನಮ್ಮ ಏಲ್ಲವೂ ಆಗಿರುತ್ತಾಳೆ. ಅವಳು ತನ್ನ ಪಾದಗಳ ಮೇಲೆ ಪಾದಗಳನ್ನಿರಿಸಿಕೊಂಡು ಅಂಬೇಗಾಲಿರಿಸಿದ್ದು, ಜೋಕಾಲಿ ಆಡಿಸುತ್ತಾ ತುತ್ತುನಿಸಿದ್ದು, ಶಾಲೆಗೆ ಕಳಿಸುವಾಗ ಬಟ್ಟೆ ತೂಡಿಸಿ ತೊಪ – ತೊಪ ಎಣ್ಣೆ ಹಾಕಿ ನೀಟಾಗಿ ತಲೆ ಬಾಚುತ್ತಿದ್ದದ್ದು, ಆನೆ ಆಡಿಸಿದ್ದು, ಮನಸ್ಸಿನಲ್ಲಿ ಕಿಲಕಿಲ ನಗುವ ಚಂದ್ರನನ್ನು ಅಚ್ಚೊತ್ತಿದ್ದು, ತೊಡೆಯ ಮೇಲೆ ಮಲಗಿಸಿಕೊಂಡು ಲಾಲಿ ಹಾಡಿದ್ದು, ಎಂದೂ ಕಾಣದ ಚೆಂದದ ಗುಮ್ಮನನ್ನು ಕಣ್ಣಿಗೆ ಕಟ್ಟಿದ್ದು, ಅವಳ ಕಥೆ – ಹಾಡು ನನ್ನಲ್ಲೊಬ್ಬ ಸೃಜನಶೀಲನನ್ನು ಹುಟ್ಟುಹಾಕಿದ್ದು ಎಲ್ಲಕ್ಕೂ ಮಿಗಿಲಾಗಿ ಪ್ರೀತಿ – ಕರುಣೆ ಉಣಿಸಿ ಉತ್ತಮ ಮಾನವನನ್ನಾಗಿ ರೂಪಿಸಿದ್ದು ಎಲ್ಲವೂ ಎಂದಿಗೂ ಮುಗಿಯದ ಅಚ್ಚರಿಗಳೇ ! ಮುಖ್ಯವಾಗಿ ಅವಳೇ ನಿಗೂಢ ಜಗತ್ತು, ಅಚ್ಚರಿಗಳ ಅಗಾಧ ಗಣಿ.
ಅಮ್ಮ ಎನ್ನುವ ಜೀವಿ ಈ ಜಡ ಜಗತ್ತಿನಲ್ಲಿ ಇಲ್ಲದಿದ್ದರೆ ಪ್ರೀತಿ, ಮಮತೆ, ಕರುಣೆ, ದಯೆ ಇತ್ಯಾದಿಗಳು ಇಲ್ಲಿ ನಮ್ಮೊಡನೆ ನಿಜಕ್ಕೂ ಇರುತ್ತಿರಲಿಲ್ಲವೇನೋ ಅನ್ನಿಸುತ್ತದೆ. ಮಾನವರಷ್ಟೇ ಅಲ್ಲದೇ ಪ್ರಾಣಿ, ಪಕ್ಷಿಗಳಲ್ಲೂ ಇಂಥದ್ದೊಂದು ಬಂಧವನ್ನು ಕಾಣಬಹುದು.ಗೋವಿನ ಹಾಡಿನಲ್ಲಿ ಬರುವ ಹುಲಿ-ಹಸು-ಕರುವಿನ ಸನ್ನಿವೇಶದ ಕಥೆ ಇದಕ್ಕೆ ಒಳ್ಳೆಯ ನಿದರ್ಶನವಾಗಬಲ್ಲದು. ತಾಯಿ ಹೃದಯ ತನ್ನ ನೋವಿಗೆ ಎಂದೂ ಕಂಬನಿ ಮಿಡಿಯುವುದಿಲ್ಲ. ತನ್ನ ಸುತ್ತಲ ಕುಟುಂಬ, ಸಮಾಜಕ್ಕಾಗಿ ಎಲ್ಲ ತ್ಯಾಗಕ್ಕೂ ಅವಳು ಸರ್ವ ಸಿಧ್ಧಳು.
ಈ ಭೂಮಿಯಲ್ಲಿ ಮಕ್ಕಳಿಗೆ ತನ್ನ ತಾಯಿಯೆಂಬ ಪ್ರೀತಿಯೋ, ಗಂಡನಿಗೆ ತನ್ನ ಹೆಂಡತಿಯೆಂಬ ಪ್ರೀತಿಯೋ, ಹುಟ್ಟಿಸಿದ ಅಪ್ಪನಿಗೆ ತನ್ನ ಮಗಳು ಎಂಬ ಪ್ರೀತಿಯೋ ಇಲ್ಲದಿರಬಹುದು ಆದರೆ ಎಲ್ಲ ತಾಯಂದಿರಿಗೂ ತನ್ನವರು ನನ್ನವರು ಎಂಬ ಅಂತ್ಯವಿಲ್ಲದ ಪ್ರೀತಿ ಇದ್ದೇ ಇರುತ್ತದೆ, ಎಲ್ಲೊ ಕೆಲವರು ಇದಕ್ಕೆ ಅಪವಾದವಾಗಿ ಇರಬಹುದಾದರೂ ಸಂಖ್ಯೆಯಲ್ಲಿ ಬೆರಳೆಣಿಕೆಯಷ್ಟು ವಿರಳ ಮಾತ್ರ.
ನನ್ನಮ್ಮ ನನ್ನೊಳಗಿನ ಭಾವನೆಗಳ ಕಣಜ.
ನಾನೊಬ್ಬ ಭಾವಜೀವಿ ಆಗಿದ್ದೇನೆ ಎಂದಾದರೆ ಅಲ್ಲಿ ನನ್ನೆಲ್ಲಾ ಭಾವನೆಗಳ ಜೊತೆಗೂ ಅಮ್ಮನ ಬಿಡಲಾರದ ನಂಟಿದೆ.
ನಾನು ಆಸ್ಪತ್ರೆಯ ಹೆರೆಗೆ ವಾರ್ಡಿನಲ್ಲಿ ಹುಟ್ಟಿದಾಗ ಅವಳೊಂದಿಗೆ ಅಪ್ಪ ಮತ್ತು ನನ್ನ ದೊಡ್ಡಮ್ಮ ಬಿಟ್ಟರೆ ಇನ್ಯಾರೂ ಇರಲಿಲ್ಲ. ಹಾಳು ಜಗಳಗಳು, ಕೋರ್ಟು ಕೇಸುಗಳು ನಮ್ಮ ಮಧ್ಯೆ ಎಂಥಾ ಗೋಡೆಗಳನ್ನು ಸೃಷ್ಪಿಸಿಬಿಡ್ತವೆ. ಒಮ್ಮೆ ಇಂಥವುದೇ ಸಮಸ್ಯೆಗೆ ಅಮ್ಮ ವಿಷ ಸೇವಿಸಿದ್ದೂ ಇದೆ. ಆಗಿನ ನನ್ನ ನೋವು ಎಂದಿಗೂ ಮರೆಯುವಂಥದ್ದಲ್ಲ. ಆಗ ಅಪ್ಪ ಕೆಲಸದ ನಿಮಿತ್ತ ಚಿತ್ರದುರ್ಗ ಜಿಲ್ಲೆಯಲ್ಲಿದ್ದರು, ನಾನೋ ಆಗ ಇನ್ನೂ ಮೂರನೇಯ ತರಗತಿಯ ಹುಡುಗ. ಏರಿಯಾದ ಜನವೋ ಕೊಂಚ ಕೂಡಾ ಮಾನವೀಯತೆ ಇಲ್ಲದವರು. ನನಗೆ ತಿಳಿದಂತೆ ಟೆಲಿಫೋನ್ ಬೂತಿಗಿ ಓಡಿಹೋಗಿ ಪೋಲೀಸ ಸ್ಟೇಷನ್ನಿಗೆ ಫೋನು ಮಾಡಿದರೆ ಅವರೋ ನಿಷ್ಪ್ರಯೋಜಕರಂತೆ ನೀನು ಅವರನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗು ನಾವು ಬ್ಯುಸಿ ಇದಿವಿ ಎಂದು ಫೋನಿಟ್ಟರು, ಫೋನು ಮಾಡಿ ಸರ್ಕಾರಿ ಆರೋಗ್ಯ ವಾಹನ ಬರಹೇಳೋನ ಎಂದು ಫೋನು ಮಾಡಿದರೆ ಅವರೂ ನಾವು ರಜೆಯಲ್ಲಿದ್ದೇವೆ ಬರಲಾಗುವುದಿಲ್ಲ ಎಂದುಬಿಟ್ಟರು. ಕೊನೆಗೆ ದಾರಿ ತೋಚದೇ ಮನೆಗೆ ಓಡಿ ಹೋಗಿ ಕಪಾಟಿನಲ್ಲಿದ್ದ ಹಣವನ್ನು ಜೇಬಿಗಿಳಿಸಿ ಆಟೋ ಹಿಡಿದು ಅಮ್ಮನೊಂದಿಗೆ ಸರ್ಕಾರಿ ಆಸ್ಪತ್ರೆಗೆ ಹೋದರೆ ಡ್ಯೂಟಿ ಡಾಕ್ಟರ್ ಇಲ್ಲ ಅವರು ಬರುವುದು ತಡವಾಗುತ್ತದೆ ಕಾಯುತ್ತಿರಿ ಎಂದು ದಾದಿಗಳು ಕೂಡಾ ಕಾಲ್ಕಿತ್ತರು ನನಗೊಂದು ತಿಳಿಯಲಿಲ್ಲ ಖಾಸಗಿ ಆಸ್ಪತ್ರೆಗೆ ಹೋದರೆ ಅವರು ಬಾಗಿಲಲ್ಲೇ ನಿಲ್ಲಿಸಿ ಇದು ಪೋಲಿಸ ಕೇಸ ಎಂದು ಹಾಗೆ ಆಚೆಕಳಿಸಿಬಿಟ್ಟರು. ಎಲ್ಲರೂ ಕೈ ಬಿಟ್ಟರೂ ಆಪದ್ಬಾಂದವ ಕೈ ಬಿಡಲಿಲ್ಲ. ಅದ್ಯಾರೋ ಅಲ್ಲೇ ಇದ್ದ ಓರ್ವ ವ್ಯಕ್ತಿ ಓಡಿಬಂದು ಉಪ್ಪು ಮಿಶ್ರಿತ ನೀರು ಕುಡಿಸಿ ಮುಕ್ಕಳಿಸಿದರೆ ವಿಷ ಆಚೆ ಬಂತು,
ಅವರು ಯಾರೋ ಈಗ ಅವರ ಮುಖವು ಅಸ್ಪಷ್ಟ. ಮುಂದೆ ಎರಡು ದಿನ ಅಮ್ಮ ನಿತ್ರಾಣ ಸ್ಥಿತಿಯಲ್ಲೇ ಇದ್ದಳು, ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯೂ ಆಯಿತು, ಹೇಗೊ ಅಮ್ಮನನ್ನು ಉಳಿಸಿಕೊಂಡೆ ಹೌದು ದೇವರು ಅವಳನ್ನು ನಮಗಾಗಿ ಉಳಿಸಿಕೊಟ್ಟಿದ್ದೂ ನಿಜವೇ.
ಮಕ್ಕಳು ತಪ್ಪು ಮಾಡಿದರೆ ಇನ್ನೊಮ್ಮೆ ಹಾಗೆ ಮಾಡದಿರಲಿ ಅಂತ ಅಪ್ಪ ಎರಡೇಟು ಹೆಚ್ಚೇ ಹೊಡೆಯುತ್ತಾರೆ. ಇದಕ್ಕೆಲ್ಲಾ ಅಡ್ಡಲಾಗಿ ನಿಂತು ಬಿಡಿಸಿ ಮುದ್ದಿಸಿ ಬುದ್ಧಿ ಹೇಳಿ ತಪ್ಪು ತಿದ್ದುತ್ತಾಳೆ, ನಾನು ತಿಂದ ಏಟುಗಳಿಗೆ ನನಗಿಂತಲೂ ಹೆಚ್ಚೆ ರೋದಿಸುತ್ತಾಳೆ ಜೊತೆಗೆ ಬಾಸುಂಡೆ ಬರುವಂತೆ ಹೊಡೆದಿದ್ದೀರಿ ಎಂದು ಅಪ್ಪನೊಂದಿಗೆ ಜಗಳಕ್ಕಿಳಿಯುತ್ತಾಳೆ. ಒಮ್ಮೆ ಹೀಗೆ ಇನ್ನೊಂದು ಘಟನೆ ಆಗ ಐದನೇ ತರಗತಿಯಲ್ಲಿ ಓದುತ್ತಿದ್ದೆ ಶಾಲೆಗೆ ಹೋಗುವವನಂತೆ ಪಾಟಿಚೀಲ ಹೆಗಲಿಗೇರಿಸಿ ಹೊರಟರೆ ನೇರ ಗುಡ್ಡದ ಮೇಲಿದ್ದ ಗೆಳೆಯನ ಮನೆಗೆ ಹೋಗಿ ಅಲ್ಲಿ ಚಿಂಟು ಪೋಗೋ ಹಂಗಾಮಾ ದ ಅನಿಮೇಶನ್ ಸೀರಿಯಲ್ಲು, ಮೂವಿಗಳನ್ನಾ ನೋಡುತ್ತಾ ಕೂತುಬಿಡುತ್ತಿದ್ದೆ, ಅವರ ಮನೆಯಲ್ಲಿ ಎಲ್ಲರೂ ಬೆಳಿಗ್ಗೆ ಹೊಲಕ್ಕೆ ಹೋದರೆ ಬರುವುದು ಸಂಜೆ ಏರಿದಮೇಲೆಯೇ. ಇನ್ನು ಕೆಲವು ಸಾರಿ ಗೆಳೆಯರೆಲ್ಲ ಸೇರಿ ಯಾವುದಾದರೂ ತೋಟ ಹೊಕ್ಕು ಮಾವು,ಕಬ್ಬು,ಶೇಂಗಾ, ಕದ್ದು ತಿನ್ನುತ್ತಿದ್ದೆವು. ಯಾವುದೋ ಮರದ ಕೆಳಗೆ ಬುಗುರಿ, ವಟಪಾ, ಲಗೋರಿ, ಗುಂಡಾ ಆಡುತ್ತಾ ಮಜವಾದ ಸಮಯ ಕಳೆದು ಬಿಡುತ್ತಿದ್ದೇವು. ಸಂಜೆ ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಓದಿ ಕಲಿತು ಬಂದವನಂತೆ ಮನೆ ಸೇರಿಬಿಡುತ್ತಿದ್ದೆ. ಒಂದು ದಿನ ಹೀಗೆ ಅಡ್ಡಾಗಿ ಮನೆಗೆ ಹೋದರೆ ಒಳಗೆ ಅಪ್ಪನಿಗೆ ನಾನು ಶಾಲೆಗೆ ಹೋಗದೇ ಖಾಲಿಪೀಲಿ ತಿರುಗಾಡುತ್ತಿರುವ ವಿಷಯ ಗೊತ್ತಾಗಿಹೋಗಿತ್ತು ಸಿಕ್ಕರೆ ಚರ್ಮ ಸುಲಿಸಿಕೊಳ್ಳುವುದು ಗ್ಯಾರಂಟಿ ಅಂತ ಬಾಗಿಲಲ್ಲಿ ನಿಂತವನು ಹಾಗೆ ಓಟಕಿತ್ತೆ. ಅಮ್ಮ ನನಗಾಗಿ ಊರೆಲ್ಲಾ ಅದೆಷ್ಟು ಬಾರಿ ಸುತ್ತಿದ್ದಳೋ ಗೊತ್ತಿಲ್ಲ, ನಾನಂತು ಮೂರ್ನಾಲ್ಕು ದಿನ ಮನೆ ಹತ್ತಿರ ಅಲ್ಲ ಓಣಿಯ ಸಮೀಪಕ್ಕೂ ಸುಳಿಯಲಿಲ್ಲ. ಬಹುಶಃ ಐದೊ ಆರನೇ ದಿನವೋ ರಾತ್ರಿ ವಿಠ್ಠಲ ದೇವಸ್ಥಾನದಲ್ಲಿ ಮಲಗಿದ್ದಾಗ ಪೂಜಾರಿ ಸೆರೆಹಿಡಿದು ಕೊಟ್ಟುಬಿಟ್ಟರು. ಮನೆಗೆ ಕರೆದುಕೊಂಡು ಹೋದರೆ ಅಪ್ಪ ಒಂದೇಟೂ ಹೊಡೆಯಲಿಲ್ಲ ಅಮ್ಮ ಮಾತ್ರ ಅಂದು ರೊಟ್ಟಿ ಹಿಟ್ಟು ನಾದಿದಂತೆ ಚೆನ್ನಾಗಿ ಹಿಂಡಿದ್ದಳು. ಹೊಡೆದು ನನ್ನ ಜೊತೆ ತಾಸುಗಟ್ಟಲೇ ತಾನು ಅತ್ತು, ತುತ್ತು ತಿನ್ನಿಸಿ, ಚೆವಿ ತಟ್ಟಿ ಮಲಗಿಸಿದ್ದಳು. ಅವಳ ಪ್ರೀತಿಯ ಗುರುತುಗಳು ಮೈ ತುಂಬಾ ಕೆಂಪು ಮೂಡಿಸಿದ್ದವು. ಅವಳೊಂದಿಗಿನ ನನ್ನ ಸ್ನೇಹ, ನೋವು ಹೇಳಲಸಾಧ್ಯವಾದದ್ದು, ಅಮ್ಮ ಅಂದರೆ ಹಾಗೆನೆ ಅವಳೊಂಥರಾ ವಿಸ್ಮಯ.
ಈಗಂತು ಅವರಿಂದ ದೂರವೇ ಇದ್ದೇನೆ. ಒಮ್ಮೊಮ್ಮೆ ಏನೋ ಮಾಡುತ್ತಿದ್ದಾಗ ಪಟ್ಟಂತ ನೆನಪಾಗಿ ಬಿಡ್ತಾರೆ, ಹೇಳದೇ ಕೇಳದೇ ಕಣ್ಣೀರು ದಳದಳ ಇಳಿದುಬಿಡ್ತವೆ, ಫೋನು ಮಾಡಿ ಅವರ ಕ್ಷೇಮ, ನೋವು, ನಲಿವು ವಿಚಾರಿಸಿ ನನ್ನ ಸುಖ – ದುಃಖ ಎಲ್ಲ ಹೇಳಿಕೊಳ್ತಿನಿ.ಆಗಾಗ ಮೊಬೈಲ ಗ್ಯಾಲರಿಯಲ್ಲಿನ ಫೋಟೊಗಳನ್ನಾ, ಮಾತನಾಡುವಾಗ ರೆಕಾರ್ಡ್ ಮಾಡಿಕೊಂಡ ಆಡಿಯೋಗಳನ್ನಾ, ಸಂತೋಷದ ಕ್ಷಣಗಳನ್ನು ಸೆರೆಹಿಡಿದುಕೊಂಡ ವಿಡಿಯೋ ತುಂಡುಗಳನ್ನಾ ನೋಡುತ್ತಾ ಕೇಳುತ್ತಾ ತೇವಗೊಂಡ ರೆಪ್ಪೆಗಳನ್ನಾ ಒರೆಸಿಕೊಳ್ತೇನೆ. ಆಗೆಲ್ಲಾ ಎಂಥಾ ನೋವಿನಲ್ಲೂ ಖುಷಿ ನನ್ನೆದೆಯಲ್ಲಿ ಗೂಡು ಕಟ್ಟುತ್ತೆ. ಬಿಡುವಿದ್ದಾಗ ಕೆಲಸದ ಮಧ್ಯೆ ರಜೆ ಹಾಕಿ ಊರಿಗೆ ಹೊರಟು ಬಿಡ್ತಿನಿ, ಮನೆಯಲ್ಲಿ ಅಪ್ಪ – ಅಮ್ಮ ಇಬ್ಬರನ್ನೂ ಬಿಡುವಾಗಿರಿಸಿ ಅವರ ಬಾಲ್ಯದ ದಿನಗಳನ್ನು, ಆಸೆಗಳನ್ನು, ಕನಸುಗಳನ್ನು ತಿಳಿದುಕೊಳ್ಳುತ್ತಲೇ ಇರ್ತಿನಿ. ಕಾಲಿಗೆ ಎಣ್ಣೆ ಮಾಲಿಷ ಮಾಡ್ತಿನಿ, ಸಾಧ್ಯವಾದಷ್ಟು ಕೆಲಸಗಳಿಗೆ ಸಹಾಯ ಮಾಡ್ತಿನಿ, ಕೀತಲೇ ಮಾಡ್ತಿನಿ, ತಮಾಷೆಯಾಗಿ ಮಾತಾಡಿ ಅವರೊಂದಿಗೆ ನಾನು ನಗ್ತಿನಿ, ಹಾಗೆ ಅವರಿಂದ ದೂರ ಇದ್ದಂತೆ ಅವರ ಸಂತೊಷವನ್ನಾ ತುಂಬಿಕೊಳ್ತಿನಿ. ಅಮ್ಮ ನನಗಾಗಿ ಸಿಹಿ ಸಿಹಿ ತಿಂಡಿ ಮಾಡಿಕೊಡ್ತಾಳೆ, ಸಂತೆಯಿಂದ ನನಗಂತಲೇ ಹೆಚ್ಚು ಹಣ್ಣುಳನ್ನಾ ಕೊಂಡು ತರ್ತಾಳೆ, ಉಳಿಸಿ ತಗೆದಿಟ್ಟ ದುಡ್ಡು ಕೊಡ್ತಾಳೆ, ಅಮ್ಮ ಅಂದ್ರೆ ಚಿಕ್ಕ ಚಿಕ್ಕ ಸಂಗತಿ, ಸಣ್ಣ ಸಣ್ಣ ಖುಷಿ ಇವನ್ನೆಲ್ಲಾ ಮಿಸ್ ಮಾಡಿಕೊಳ್ಳಲೇಬಾರದು.
ಇವೆಲ್ಲವುಗಳ ಮಧ್ಯೆ ಕೆಲವೊಮ್ಮೆ ಹಾಳು ವಿಷಯಗಳು ತಲೆ ಕೊರದುಬಿಡ್ತವೆ. ಒಂದು ವೇಳೆ ಅವಳು ನನ್ನೊಂದಿಗೆ ಇಲ್ಲವಾಗಿಬಿಟ್ಟರೇ ! ಒಂದು ಕ್ಷಣ ಜಗತ್ತು ಶೂನ್ಯ ಅನ್ನಿಸಿಬಿಡುತ್ತೆ, ನೀರಿಲ್ಲದ ಮರುಭೂಮಿ ಆಗಿಬಿಡ್ತೆನೆ, ಹೃದಯ ಗಾಣಕ್ಕೆ ಸಿಕ್ಕಿದ ಕಬ್ಫಿನಂತಾಗಿಬಿಡ್ತದೆ, ನನ್ನಿ ನೋವಿಗೆ ಯಾರೂ ಉತ್ತರ ಹೇಳುವವರಿಲ್ಲ, ಆ ದೇವರು ಕೂಡಾ. ಸ್ವತಃ ಅವಳೇ ನನಗೆ ಸಾಂತ್ವನ ಹೇಳಬೇಕೊ ಏನೊ ಗೊತ್ತಿಲ್ಲ. ಮನಸ್ಸು ಜೀವನದುದ್ದಕ್ಕೂ ಅವಳ ಪ್ರೀತಿ, ಜೋಗುಳ ಸದಾ ಇರಲಿ ಎಂದು ಹಂಬಲಿಸುತ್ತದೆ. ಎಲ್ಲವುಗಳ ಜೊತೆ ನನ್ನೆಲ್ಲಾ ಕನಸುಗಳೊಳಗೆ ಅವರನ್ನಾ ಸದಾ ಎಳೆಯುತ್ತೇನೆ. ಅವರಿಗಾಗೇ ಕನಸುಗಳನ್ನಾ ಹೆಣೆಯುತ್ತೇನೆ. ಬರೀಯ ಅವಳ ನೆನಪು ಕೂಡಾ ಸಾಗರದಷ್ಟು ಪ್ರೀತಿಯನ್ನಾ ನನ್ನ ಹೃದಯಕ್ಕೆ ತಂದು ನಾಟಿಬಿಡುತ್ತದೆ. ಹೂ ಐ ಲವ್ ಯೂ ಅಮ್ಮ.
– ಕೃಷ್ಣ ದೇವಾಂಗಮಠ
Satya.. Amma endare khandita chikka chikka khushi.. Prati kshanada khushi..