ಅಮ್ಮನ ನೆನಪಿನ ಧಾರೆ: ಮಾಲಾ


ಅಮ್ಮನ ನೆನಪು,

ಸಂಪುಟ ೧, 
ಸಂಪಾದನೆ: ಚಂದ್ರಕಾಂತ ವಡ್ಡು, 
ಅಂಕುರ ಪ್ರಕಾಶನ,
ನಂ. ೧೧೪೮, ೧ನೇ ಮಹಡಿ, 
೨ನೇ ಅಡ್ಡರಸ್ತೆ, ಪಡುವಣ ರಸ್ತೆ, 
ಮೈಸೂರು ೫೭೦೦೨೩, 
ಪುಟಗಳು ೨೦೦, 
ಬೆಲೆ ರೂ. ೧೫೦

ಮಕ್ಕಳ ಪ್ರಪಂಚದಲ್ಲಿ ಮೊದಲಿಗೆ ಅಮ್ಮನಿಗೇ ಸ್ಥಾನ. ಅಮ್ಮ ಎಂಬ ಪದವೇ ಸಾಕು ನಮಗೆ ಹರುಷ ತರಲು.  ಎಲ್ಲ ಮಕ್ಕಳಿಗೂ ಅಮ್ಮನ ನೆನಪು ಅವಳಿಲ್ಲದಿರುವಾಗಲೇ ಹೆಚ್ಚು ಕಾಡುತ್ತದೆ ಎಂದು ನನಗನಿಸುತ್ತದೆ. ಈ ಹೊತ್ತಗೆಯಲ್ಲಿ ೩೬ ಜನ ಮಕ್ಕಳು ಅವರ ತಾಯಿ ಬಗ್ಗೆ ತಮ್ಮ ನೆನಪನ್ನು ಬಿಚ್ಚಿಟ್ಟಿದ್ದಾರೆ. ಇಲ್ಲಿ ಖ್ಯಾತನಾಮರು, ಅಷ್ಟು ಪ್ರಸಿದ್ಧಿ ಹೊಂದದವರು ಹೀಗೆ ಎಲ್ಲರ ಲೇಖನ ಒಟ್ಟುಗೂಡಿವೆ.  ಹೆಚ್ಚಿನ ಅಮ್ಮಂದಿರಿಗೂ ಏಳೆಂಟು ಹತ್ತು ಮಕ್ಕಳು. ಅವರನ್ನು ಸಾಕಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. (ಈಗಿನ ಕಾಲದ ಮಕ್ಕಳಿಗೆ ಅಂಥ ಕಲ್ಪನೆಯೂ ಬರಲು ಸಾಧ್ಯವಿಲ್ಲ. ಈಗ ಅಷ್ಟು ಕಷ್ಟ ಯಾರಿಗೂ ಇರುವುದಿಲ್ಲ ಹಾಗೂ ಒಬ್ಬ ತಾಯಿಗೆ ಅಷ್ಟು ಮಕ್ಕಳು ಕೂಡ ಇರುವ ಸಾಧ್ಯತೆ ಇಲ್ಲ.) ಹೆಚ್ಚಿನ ತಾಯಂದಿರು ಬಡತನವನ್ನೇ ಹಾಸಿ ಹೊದ್ದವರು. ಏಳೆಂಟು ಮಕ್ಕಳನ್ನು ಹೆತ್ತು ಕೊನೆಗೆ ಮೂರೋ ನಾಲ್ಕೊ ಮಕ್ಕಳು ಬದುಕಿ ಉಳಿವಂಥ ಪರಿಸ್ಥಿತಿ. ತನ್ನ ಮಕ್ಕಳಿಗಾಗಿ ತಾಯಿ ಎಷ್ಟು ಕಷ್ಟ ಪಡುತ್ತಿದ್ದಳು ಎಂಬುದು ಇಲ್ಲಿ ಬರುವ ತಾಯಂದಿರ ಚಿತ್ರಣದಿಂದ ಮನವರಿಕೆಯಾಗುತ್ತದೆ.  ಪ್ರತ್ಯಕ್ಷ ದೇವರನ್ನು ಕಾಣಲು ಸಾಧ್ಯವಾಗದೆ ಇರುವುದಕ್ಕೆ ಅಮ್ಮನ ಮೂಲಕ ತನ್ನನ್ನು ಕಾಣಿರಿ ಎಂದು ದೇವರು (ಸ್ತ್ರೀ) ತಾಯಿಯನ್ನು ಈ ಭೂಮಿಗೆ ಕರುಣಿಸಿದ ಎಂಬ ಮಾತಿದೆ. ಇದು ಸತ್ಯ ಕೂಡ.

ಇಲ್ಲಿ ಬರುವ ತಾಯಿಯನ್ನು ತನ್ನ ಕೊನೆಗಾಲದಲ್ಲಿ ಹೆಚ್ಚಿನ ಮಕ್ಕಳು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂಬ ಸಂತೃಪ್ತಿ ನಮಗೆ ಓದುವಾಗ ಲಭಿಸುತ್ತದೆ. ಕೆಲವರು ಇದಕ್ಕೆ ಅಪವಾದ. ಹಾಗೂ ಕೊಟ್ಟ ಕಷ್ಟವನ್ನು ಪಶ್ಚಾತ್ತಾಪದ ಮೂಲಕ ಈಗ ಅದನ್ನು ತೊಡೆಯಲು ಪ್ರಯತ್ನಿಸಿದ್ದಾರೆ.  

ಈ ಪುಸ್ತಕದಲ್ಲಿ ಒಂದು ದೊಡ್ಡ ಕೊರತೆ ಎಂದರೆ ಕೆಲವರು ತಮ್ಮ ತಾಯಿಯ ಹೆಸರನ್ನೇ ನಮೂದಿಸದಿರುವುದು. ಹಾಗೂ ಯಾವ ಊರು ಎಂಬ ಉಲ್ಲೇಖವನ್ನೂ ಹಾಕದಿರುವುದು. ಮತ್ತು ತಾಯಿ ಹುಟ್ಟಿದ ಇಸವಿ ಹಾಗೂ ತೀರಿದ ಇಸವಿ ದಾಖಲಿಸದಿರುವುದು. ಅವರಿಗೆ ಮಾತ್ರ ಅವರ ತಾಯಿ ಹೆಸರು ಗೊತ್ತಿದ್ದರೆ ಸಾಕೆ? ಓದುಗರಿಗೆ ತಿಳಿಯುವುದು ಬೇಡವೇ? ಉದಾಹರಣೆಗೆ ಗುರುಪ್ರಸಾದ ಕುರ್ತಕೋಟಿ ತಮ್ಮ ತಾಯಿ ಬಗ್ಗೆ ಬರೆಯುತ್ತ, ತಾಯಿ ತನ್ನ ದುಃಖ ಮರೆಯಲು ಕಥೆ, ಲೇಖನಗಳನ್ನು ಬರೆಯುತ್ತಿದ್ದರು ಎಂದು ಬರೆದು ಲೇಖನದುದ್ದಕ್ಕೂ ಎಲ್ಲೂ  ತಾಯಿಯ ಹೆಸರನ್ನೇ ಬರೆಯದಿರುವುದು ಆ ಲೇಖನದ ದೊಡ್ಡ ಕೊರತೆ ಎನಿಸಿತು.  

ಇಂಥ ಒಂದು ಸಾಹಸಕ್ಕೆ  ಚಂದ್ರಕಾಂತ ವಡ್ಡು ಮುಂದಾಗಿರುವುದು  ಪ್ರಶಂಸನೀಯ. ಇದರ ಎರಡನೇ ಸಂಪುಟವನ್ನು ಹೊರತರುವ ಕಾರ್ಯದಲ್ಲಿ ಕ್ರಿಯಾಶೀಲರಾಗಿದ್ದಾರಂತೆ. ಭಾಗ ೨ರಲ್ಲಿ ಇಂಥ ತಪ್ಪುಗಳು ಆಗದಂತೆ ಎಚ್ಚರವಹಿಸಲಿ. ಅವರಿಗೆ ಹಾಗೂ ಎಲ್ಲ ಲೇಖಕರಿಗೆ ಅಭಿನಂದನೆಗಳು.

ವಯಸ್ಸಾದ ತಾಯಿ ಇರುವ ಎಲ್ಲ ಮಕ್ಕಳಲ್ಲೂ ಒಂದು ವಿನಂತಿ. ನಮ್ಮ ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋಣ. ತಾಯಿ ಬಳಿ ನಾವಿಲ್ಲದಿದ್ದರೆ ಕೊನೆಪಕ್ಷ ವರ್ಷಕ್ಕೆ ಒಂದೆರಡು ಸಲ ಸಮಯವಿಲ್ಲ ಎಂಬ ಕುಂಟುನೆಪ ಮಾಡದೆ ಅವರಿರುವಲ್ಲಿಗೆ ಬಂದು ಮಾತಾಡಿಸೋಣ. ದೂರವಾಣಿಯಲ್ಲಾದರೂ ವಾರಕೊಮ್ಮೆ ಮಾತಾಡುತ್ತಿರೋಣ. (ಈಗ ಬಿ.ಎಸ್.ಎನ್.ಎಲ್ ರಾತ್ರಿ ೯ರಿಂದ ಬೆಳಗ್ಗೆ ೭ ರತನಕ ಉಚಿತ ಕರೆ ಒದಗಿಸಿದೆ. ಬಹುಶಃ ಹೀಗಾದರೂ ಮಕ್ಕಳು ಅಮ್ಮನ ಬಳಿ ಮಾತಾಡಲಿ. ಕಾಸು ಖರ್ಚಾಗುತ್ತೆ ಎಂಬ ನೆವ ಹೇಳದೆ ಇರಲಿ ಎಂದಿರಬಹುದು!) ಇಳಿ ವಯಸ್ಸಿನಲ್ಲಿ ಎಲ್ಲಾ ತಾಯಂದಿರು ತಮ್ಮ ಮಕ್ಕಳಿಂದ ಬಯಸುವುದು ಒಂದು ಹಿಡಿ ಪ್ರೀತಿ ಮಾತ್ರ ಎಂಬುದನ್ನು ಮರೆಯದಿರೋಣ. ಅವರು ಇದ್ದಾಗ  ಚೆನ್ನಾಗಿ ನೋಡಿಕೊಳ್ಳದೆ ಸತ್ತನಂತರ ಅದ್ದೂರಿಯಾಗಿ ಕರ್ಮಾಂತರ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಗುಂಡೇನಟ್ಟಿ ಮಧುಕರ
ಗುಂಡೇನಟ್ಟಿ ಮಧುಕರ
8 years ago

ನನ್ನ ಕಳೆದ ಅಕ್ಟೋಬರ್ 8,  2014 ರಂದು ನಮ್ಮನ್ನಗಲಿದಳು. ಪುಸ್ತಕ ಪರಿಚಯಿಸುತ್ತ ಹೇಳಿದಂತೆ. ತಾಯಿ ತೀರಿಹೋದ ನಂತರ ಅವಳ ನೆನಪು ಬಹಳ ಕಾಡುತ್ತದೆ. ಇರುವಾಗ   ಅವಳ ಮಹತ್ವವಿರುವುದಿಲ್ಲ. ನನ್ನ ತಾಯಿ ತನ್ನ ಜೀವನದ  ಕೊನೆ ನಾಲ್ಕು ತಿಂಗಳು ತಂಬ ನೋವನ್ನು ಅನುಭವಿಸಿದಳು. ಸುಮಾರ ಹತ್ತು ವರ್ಷಗಳ ಹಿಂದೆ ಅವಳಿಗೆ ಆರೋಗ್ಯ ತುಂಬ ಗಂಭೀರವಾಗಿತ್ತು. ಆವಾಗ್ಯೆ ನಾನು ದೇವರಲ್ಲಿ ಅವಳು ಬದುಕಿಯುಳಿಯುವಂತೆ ಬೇಡಿಕೊಂಡಿದ್ದೆ. ಈಗ   ಅವಳು ಪಡುವ ಹಿಂಸೆಯನ್ನು ನೋಡಿ ಅವಳು ಇದರಿಂದ ಪಾರಾದರೆ ಸಾಕೆಂಬ ಭಾವನೆ ನನ್ನಲ್ಲಿ ಮೂಡಿತ್ತು. ನಾನು ಬರೆಯುತ್ತ ಹೋದಂತೆ ಮತ್ತೆ ನನ್ನ  ಕಣ್ಣಲ್ಲಿ ನೀರು ಮಿಂಚುತ್ತವೆ .

"ಅಮ್ಮನ ನೆನಪು' ಕೃತಿ ನನಗೆ ಎಲ್ಲಿ ಸಿಗುತ್ತವೆ. ಅವರ ಮೊಬೈಲ್ ನಂಬರ ತಿಳಿಸಿದರೂ ನಡೆದೀತು. ನಮ್ಮ ಪತ್ರಿಕೆಯಲ್ಲಿಯೂ ಅದರ ಪರಿಚಯಿಸಬಹುದು. ಲೇಖಕರ ಸಂಪರ್ಕ ಸಂಖ್ಯೆ ತಿಳಿಸಿದರೆ ಒಳ್ಳೆಯದು.

ನನ್ನ ನಂಬರ 9448093589

 

ಗುರುಪ್ರಸಾದ ಕುರ್ತಕೋಟಿ

ಮಾಲಾ,

ಅಮ್ಮನ ನೆನಪುಗಳನ್ನು ಮತ್ತೆ ಹಸಿರಾಗಿಸಿದ್ದಕ್ಕೆ ಧನ್ಯವಾದಗಳು! ನೀವು ಗಮನಿಸಿದ ಹಾಗೆ ನಾನು ನನ್ನ ಅಮ್ಮನ ಬಗ್ಗೆ ಬರೆದ ಲೇಖನದಲ್ಲಿ ಅವರ ಹೆಸರನ್ನು ಎಲ್ಲಿಯೂ ಹೇಳಿಕೊಂಡಿಲ್ಲ ಎಂಬುದು ನನ್ನ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು!
ನನಗೆ ಯಾವಾಗಲೂ ಸ್ಫೂರ್ತಿಯಾಗಿರುವ ನನ್ನಮ್ಮನ ಹೆಸರು ಪರಿಮಳ ಕುರ್ತಕೋಟಿ. ಅವರು ಬರೆದಿರುವ ಸಮಗ್ರ ಕತೆಗಳ ಸಂಗ್ರಹ “ತುಳಸಿ” ಎಂಬ ಕೃತಿ ಪ್ರಕಟವಾಗಿದೆ.

ಧನ್ಯವಾದಗಳೊಂದಿಗೆ
ಗುರುಪ್ರಸಾದ ಕುರ್ತಕೋಟಿ

3
0
Would love your thoughts, please comment.x
()
x