ಮೊನ್ನೆ ಮೊಬೈಲ್ ಗೆ ಬಂದ ಮೆಸೇಜು ಒಂದುಕ್ಷಣ ಮೂಕಳನ್ನಾಗಿ ಮಾಡಿಸಿತ್ತು ಅದೇನೆಂದರೆ ೫ ನೇ ಕ್ಲಾಸಿನ ಪರೀಕ್ಷೆಯಲ್ಲಿ ಅಮ್ಮನ ಬಗ್ಗೆ ಬರೆಯಿರಿ ಎಂಬ ಒಂದು ಪ್ರಬಂಧವಿತ್ತಂತೆ.. ಆ ಪುಟ್ಟ ಹುಡುಗನೊಬ್ಬ ಬರೆದಿದ್ದೇನೆಂದರೆ ನನ್ನ ಅಮ್ಮನ ಬಗ್ಗೆ ಬರೆಯಲು ಇಂಗ್ಲೀಷಿನಲ್ಲಿರುವ ಯಾವ ಅಕ್ಷರವೂ ಸಮನಾಗಲಾರದು..ಯಾವುದೇ ಭಾಷೆಯ ಅಕ್ಷರಗಳೂ ಸಾಕಾಗದು ..ಸಮಯದ ಮಿತಿಯೂ ಇಲ್ಲ ಎಂಬುದು.. ಹೌದಲ್ವಾ? ಅಮ್ಮನೆಂದರೆ ಸಾವಿರ ಜನರ ನಡುವೆಯಿದ್ದರೂ ಆತ್ಮೀಯವಾಗಿ ಕಾಣುವ ಜೀವಿ. ಹುಟ್ಟುವ ಮೊದಲೇ ನಮ್ಮ ಬಗ್ಗೆ ಪ್ರೀತಿಯನ್ನು ಇಟ್ಟುಕೊಂಡಿದೆಯೆಂದರೆ ಅದು ಅಮ್ಮನೆಂಬ ವ್ಯಕ್ತಿ ಮಾತ್ರ. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ಅಮ್ಮಂದಿರಿರಲು ಸಾಧ್ಯವೇ ಇಲ್ಲ ಜಗತ್ತಿನ ಪ್ರೀತಿಸುವ ವ್ಯಕ್ತಿಗಳಲ್ಲಿ ಅವಳ ಪ್ರೀತಿಯನ್ನುಯಾರಿಗೂ ಹೋಲಿಸಲು ಸಾಧ್ಯವೇ ಇಲ್ಲ. ಮುಗ್ಧಭಾವಗಳಲಿ ಒಂದಾದ ಒಲವಿನ ಕಾಳಜಿಯು ಎಂತಹವರನ್ನಾದರೂ ಪ್ರೀತಿಯತ್ತ ಸೆಳೆಯಲು ಬಿಡದೇ ಇರಲಾರದು.. ತನಗಿಂತ ತನ್ನ ಮಕ್ಕಳ ಬಗ್ಗೆಯೇ ಯೋಚಿಸುತ್ತಾಳೆ. ಎಲ್ಲರೂ ಊಟವಾದ ಮೇಲೆ ಕೊನೆಯಲ್ಲಿ ತಾನು ಕುಳಿತು ಊಟಮಾಡುವ ಅಮ್ಮ ಅದೆಷ್ಟು ತ್ಯಾಗಮಯಿ ಅಲ್ವಾ?
ತನ್ನ ನೂರು ಆಸೆಗಳನ್ನು ನಿರಾಸೆ ಮಾಡಿಯಾದರೂ ತನ್ನ ಮಗುವಿನ ಒಂದು ಆಸೆಯನ್ನು ನೆರವೇರಿಸು ದೇವರೇ ಎಂದು ಬೇಡಿಕೊಳ್ಳುತ್ತಾಳಂತೆ. ತನ್ನ ಕನಸುಗಳೇನಿದ್ದರೂ ಮಕ್ಕಳ ಕನಸಿಗಿಂತ ಹೆಚ್ಚಲ್ಲ ಎಂಬ ನಿಸ್ವಾರ್ಥ ಮನೋಭಾವ ಆಕೆಯದ್ದು. .ತನಗಿಷ್ಟವಾದ ತಿಂಡಿಗಳೇನೇ ಇದ್ದರೂ ಮಕ್ಕಳಿಗಿಷ್ಟವೆಂದರೆ, ಅದನ್ನು ಮಕ್ಕಳು ತಿನ್ನಲಿ ಎಂಬ ಯೋಚನೆಯಲ್ಲಿ, ತನಗೆ ಆ ವಸ್ತು ಬೇಡವೇ ಬೇಡ ಎಂದು ಹೇಳುವುದುಂಟು.. ದಿನದ ಹತ್ತಾರು ಬಯಕೆಗಳ ಸನ್ನಿಧಿಯಲ್ಲಿ ಅವಳದ್ದೊಂದು ಪ್ರಮುಖ ಬಯಕೆಯೆಂದರೆ ಮಗು ಚೆನ್ನಾಗಿರಲೆಂಬುವುದು.. ಏನೂ ಗೊತ್ತಿಲ್ಲದ ಮಣ್ಣಿನ ಮುದ್ದೆಗೊಂದು ಆಕಾರವನ್ನಿತ್ತ ಶಿಲ್ಪಿ ಅವಳು. ಮತ್ತೆ ಮತ್ತೆ ಅಮ್ಮನ ನೆನಪಿಸಿಕೊಂಡಾಗಲೂ ಮುಖದ ಮೇಲೆ ಒಂದಷ್ಟು ಖುಷಿಯ ಭಾವಗಳು.. ಪ್ರೀತಿ ಎಂಬ ಪದಕ್ಕೆ ಅರ್ಥವನ್ನು ಕಲ್ಪಿಸುವ ಮುಗ್ಧತೆಗಳು..
ಅಮ್ಮನ ದಿನದಂದುಎಲ್ಲಾ ಪತ್ರಿಕೆಗಳಲ್ಲಿಯೂ, ಸಾಮಾಜಿಕಜಾಲ ತಾಣಗಳಲ್ಲಿಯೂ ಅದರದ್ದೇ ವಿಶೇಷ.. ಆದರೆ ಆ ಒಂದು ದಿನ ಮಾತ್ರ ಅಮ್ಮನ ದಿನವಾಗದಿರಲಿ. ಅಮ್ಮಕೊಟ್ಟ ಬದುಕಿನ ಎಲ್ಲಾ ದಿನಗಳೂ ಅವಳದ್ದೇ.. ತನ್ನುಸಿರನ್ನೇ ಇಟ್ಟು ಬೆಳೆಸಿದ ಆಕೆಗೆ, ಬೊಗಸೆಯಷ್ಟು ಪ್ರೀತಿ ಸಿಕ್ಕರೆ ಸಾಕು ಮಕ್ಕಳಿಂದ ಇನ್ನೇನನ್ನು ಬಯಸಿಯಾಳು ಮಕ್ಕಳ ಒಳಿತನ್ನು ಬಿಟ್ಟು. ಅಮ್ಮನ ಪ್ರೀತಿಯನ್ನು, ಜಗತ್ತಿನ ಎಲ್ಲಾ ಸಂಪತ್ತನ್ನು ಒಂದು ತಕ್ಕಡಿಯಲ್ಲಿ ಹಾಕಿ ತೂಗಿದರೆ ಅಮ್ಮನಿದ್ದ ಪ್ರೀತಿಯ ತಕ್ಕಡಿಯೇ ಕೆಳಗೆ ಬಂದು ಬಿಡುತ್ತದೆ..ಏಕೆಂದರೆ ಅದಕ್ಕಿಂತ ದೊಡ್ಡ ಸಂಪತ್ತು ಯಾವುದೂ ಇರಲಿಕ್ಕಿಲ್ಲ ಅಲ್ವಾ?
ಮಾಡಿದ ಅಡುಗೆಯನ್ನು ಪ್ರೀತಿಯಿಂದ ಬಡಿಸುವಾಗಲೇ, ಅವಳ ಮುಖದ ಖುಷಿ.. ಚಿಕ್ಕಗಾಯವಾದರೂ ಸಾಕು.. ನಮಗಾದ ನೋವಿಗಿಂತ ಅವಳೇ ಹೆಚ್ಚು ಬಳಲುವಳು. ಅಮ್ಮನೆಂಬುದು ಅದೃಷ್ಟ.. ಎಷ್ಟೋ ಬಾರಿ ಜಗತ್ತಿನಲ್ಲಿ ಅಮ್ಮನಿಲ್ಲದ ಪುಟ್ಟ ಮಕ್ಕಳನ್ನು ನೋಡುವಾಗ ದೇವರ ಮೇಲೆ ಸಿಟ್ಟು ಬರುವುದುಂಟು.. ದೇವರೇ ಯಾಕೆ ಹೀಗೆ ಮಾಡಿದೆ ಎಂದು.. ಇನ್ನೊಂದಿಷ್ಟು ಬಾರಿ ದೇವರಿಗೆ ಧನ್ಯವಾದ ಹೇಳುವುದುಂಟು..ದೇವರೇ ಅಮ್ಮನನ್ನು ನನ್ನ ಪಾಲಿಗೆ ಇಟ್ಟಿದ್ದೀಯಲ್ವಾ ಎಂದು..ಅಮ್ಮನೆಂದರೆ ಸಹಜತೆಯ ರೂಪ..ಅಲ್ಲೇನೂ ಆಡಂಬರವಿಲ್ಲ.. ಪ್ರೀತಿಯ ಮನಸು ಮಾತ್ರ ಅಲ್ಲಿನ ಭರವಸೆ..
ಸಣ್ಣಗೆ ನೋವಾದರೂ ಮೊದಲಿಗೆ ನೆನಪಿಗೆ ಬರುವುದು ಅಮ್ಮ.. ಖುಷಿಯಾದರೂ ಮೊದಲು ಅವಳ ಬಳಿಯೇ ಹೇಳಿಕೊಳ್ಳಬೇಕೆಂದೆನಿಸುತ್ತದೆ.. ಅವಳ ವಿಶಾಲವಾದ ಮಡಿಲಿನಲ್ಲಿ ಪುಟ್ಟ ಮಗುವಿನಂತೆ ಸ್ವಲ್ಪ ಹೊತ್ತು ತಲೆ ಹಾಕಿ ಮಲಗಿದರೂ ಸಾಕು.. ಇಡೀ ಜಗತ್ತನ್ನೇ ಮರೆಯಿಸಿ ಬಿಡುವ ಶಕ್ತಿ ಇದೆ..ಆ ಸುಂದರ ಭಾವದಲ್ಲಿ..ಕನಸುಗಳಿಗೆ ನೀರೆರೆದು ಪೋಷಿಸುವ ಪ್ರೋತ್ಸಾಹವಿದೆ ಅವಳ ಕಣ್ಣಿನ ನೋಟದಲ್ಲಿ.. ಇಡೀ ಜಗತ್ತೇ ನಮ್ಮ ವಿರುದ್ದ ಸಿಡಿದೆದ್ದು ನಿಂತರೂ, ನಿನ್ನನ್ನು ನಾ ರಕ್ಷಿಸುವೆ ಎಂಬ ಭರವಸೆಯ ತುಣುಕುಗಳಿವೆ ಮತ್ತೊಮ್ಮೆ ಮಗದೊಮ್ಮೆ ನೆನೆದು ಖುಷಿಪಡುವ ಪ್ರೀತಿಯ ಸೌಧ..
ಅಮ್ಮನೆಂದರೆ
ಕೊನೆಯದಾಗಿ.. ಎಲ್ಲರೂ ಈ ಪುಟ್ಟ ಕತೆಯನ್ನು ಕೇಳಿರಬಹುದು.. ಹೆಂಡತಿಯ ಮಾತನ್ನು ಕೇಳಿ ಅಮ್ಮನ ಹೃದಯವನ್ನೇ ತೆಗೆದುಕೊಂಡು ಬಂದ ಮಗನು ದಾರಿಯಲ್ಲಿ ಎಡವಿ ಬೀಳುತ್ತಾನೆ. ಆಗ ಆ ಹೃದಯ ಒಡೆದು ಚೂರಾಗುತ್ತದೆ.. ಚೂರಾದ ಪ್ರತೀ ತುಣುಕುಗಳೂ ಹೇಳುತ್ತಿರುತ್ತೆ.. ಮಗೂ ಪೆಟ್ಟಾಯ್ತಾ? ನಿಧಾನಕ್ಕೆ ಹೋಗು ಎಂದು..
*****
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು.
ಈಗೀಗ ವಯಸ್ಸಾದ ಅಪ್ಪ-ಅಮ್ಮರನ್ನು
ಅನಾಥಾಶ್ರಮಕ್ಕೆ ಸೇರಿಸುವ ಪರಿಪಾಠ ಶುರುವಾಗಿದೆ.
ಚೆನ್ನಾಗಿದೆ ಪದ್ಮಾಭಟ್ ರವರೆ.