"ಅಮೊರೆಸ್ ಪೆರ್ರೋಸ್". ನಾನು ನೋಡಿದ ಮೊದಲ ಆಂಗ್ಲೇತರ ವಿಶ್ವಚಿತ್ರಗಳಲ್ಲಿ ಒಂದು. ಚಿತ್ರದ ಮೊದಲ ದೃಶ್ಯವೇ ಒಂದು ಟೆನ್ಸ್ ಕಾರ್ ಚೇಸ್. ಐದು ನಿಮಿಷದೊಳಗೆ ಒಂದು ಭೀಕರ ಕಾರ್ ಅಪಘಾತ ಆಗುತ್ತೆ. ಇದರಿಂದ ಮೂರು ಜನರ ಬದುಕಿನಲ್ಲಿ ಊಹಿಸಲಾಗದ ರೀತಿಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಈ ಮೂರು ಜನರ ಬದುಕು ಅಪಘಾತದ ಮುನ್ನ ಹೇಗಿರುತ್ತೆ, ಹೇಗೆ ಮೂರೂ ಜನರು ಅದೇ ಜಾಗದಲ್ಲಿ, ಅದೇ ಸಮಯದಲ್ಲಿ ಬರುವಂತೆ ಆಗುತ್ತೆ ಹಾಗೂ ಅಪಘಾತದ ನಂತರ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ. ಈ ನಿರೂಪಣೆಯ ತಂತ್ರವನ್ನ ಮಣಿರತ್ನಂ ಅವರ "ಯುವ" ಚಿತ್ರದಲ್ಲೂ ಬಳಸಲಾಗಿದೆ.
ಆಕ್ಟೇವಿಯೋ ಮತ್ತು ಸುಸಾನಾ
ಆಕ್ಟೇವಿಯೋ ತನ್ನ ಅಣ್ಣ ರಮೀರೊ, ಅತ್ತಿಗೆ ಸುಸಾನಾ ಜೊತೆ ವಾಸಿಸುತ್ತಿರುತ್ತಾನೆ. ಮಹಾ ಹುಂಬ. ಹೆಂಡತಿಯನ್ನು ಕೆಟ್ಟದಾಗಿ ನೋಡಿಕೊಳ್ಳೋ ಅಣ್ಣನ ಮೇಲೆ ಆಕ್ಟೇವಿಯೋಗೆ ಇನ್ನಿಲ್ಲದ ಕೋಪ. ಜೊತೆಗೆ ಅತ್ತಿಗೆ ಮೇಲೆ ಮೋಹ, ಇವನ ಪ್ರೀತಿಗೆ ಅವಳೂ ಕರಗುತ್ತಾಳೆ. ಒಂದಷ್ಟು ದುಡ್ಡು ಕೂಡಿಸಿ ಆಮೇಲೆ ಇಬ್ಬರೂ ಎಲ್ಲಾದರೂ ಓಡಿ ಹೋಗೋ ಪ್ಲಾನ್ ಮಾಡ್ತಾರೆ. ಇದಕ್ಕಾಗಿ ಮನೆಯಲ್ಲಿರೋ ನಾಯಿಯನ್ನ ಡಾಗ್ ಫೈಟಿಂಗ್ ಗೆ ಕರೆದೊಯ್ದು ಬರುವ ಬೆಟ್ಟಿಂಗ್ ಹಣವನ್ನ ಕೂಡಿಡ್ತಾ ಇರ್ತಾನೆ ಆಕ್ಟೇವಿಯೋ. ಒಮ್ಮೆ ಡಾಗ್ ಫೈಟಿಂಗ್ ನಡೆಯುವಾಗ ಉಂಟಾದ ಗಲಾಟೆಯಿಂದ ತಪ್ಪಿಸಿಕೊಳ್ಳಲು ಆಕ್ಟೇವಿಯೋ ವೇಗವಾಗಿ ಕಾರ್ ಓಡಿಸಿಕೊಂಡು ಹೋಗುವಾಗ ಆ ಅಪಘಾತ ಆಗುತ್ತೆ.
ಡೇನಿಯಲ್ ಮತ್ತು ವ್ಯಾಲರೀ
ಡೇನಿಯಲ್ ಒಬ್ಬ ದೊಡ್ಡ ಮ್ಯಾಗಜಿನ್ ಉದ್ಯಮಿ. ವ್ಯಾಲರೀ ಪ್ರಖ್ಯಾತ ಸೂಪರ್ ಮಾಡೆಲ್. ವ್ಯಾಲರೀ ಅನ್ನು ಇಷ್ಟ ಪಡುವ ಡೇನಿಯಲ್ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ವ್ಯಾಲರೀ ಜೊತೆ ಬೇರೊಂದು ಅಪಾರ್ಟ್ ಮೆಂಟ್ ಅಲ್ಲಿ ನೆಲೆಸುತ್ತಾನೆ. ಡೇನಿಯಲ್, ವ್ಯಾಲರೀ, ಅವಳ ಪುಟ್ಟ ನಾಯಿ ರಿಚಿ – ಸಂತೋಷದ ಜೀವನ ಇವರದು. ಒಮ್ಮೆ ವ್ಯಾಲರೀ ಕಾರಿಗೆ ಆಕ್ಟೇವಿಯೋ ಕಾರ್ ಗುದ್ದಿ ತೀವ್ರವಾಗಿ ಗಾಯಗೊಳ್ಳುತ್ತಾಳೆ. ಮನೆಯಲ್ಲಿ ಚೇತರಿಸಿಕೊಳ್ತಿರೋ ಹೊತ್ತಿನಲ್ಲಿ ಅವಳ ನಾಯಿ ರಿಚಿ ಯಾವುದೋ ಒಂದು ಸಂದಿಗೆ ಹೋಗಿ ಸಿಕ್ಕಿಹಾಕೊಂಡು ಬಿಡುತ್ತೆ. ನಾಯಿಯನ್ನು ಆಚೆ ತರಲು ಹರಸಾಹಸ ಪಡುವ ಡೇನಿಯಲ್ ಹಾಗೂ ವ್ಯಾಲರೀ ಮಧ್ಯ ಮನಸ್ತಾಪಗಳು ಹೆಚ್ಚಾಗ್ತಾ ಹೋಗುತ್ತೆ.
ಎಲ್ ಚಿವೋ ಮತ್ತು ಮರು
ಶಾಲಾ ಶಿಕ್ಷಕನಾಗಿದ್ದ ಎಲ್ ಚಿವೋ ಕ್ರಾಂತಿಯ ಹುಚ್ಚು ಹತ್ತಿಸಿಕೊಂಡು ಇಪ್ಪತ್ತು ವರ್ಷ ಜೈಲುವಾಸ ಅನುಭವಿಸಿರುತ್ತಾನೆ. ಮನೆಯವರಿಂದ ದೂರವಾಗಿರೋ ಇವನು ಸತ್ತುಹೋಗಿದ್ದಾನೆ ಅಂತ ತಿಳಿದಿರುತ್ತಾಳೆ ಅವನ ಮಗಳು ಮರು. ಬೀದಿನಾಯಿಗಳ ಗುಂಪನ್ನು ಕಟ್ಟಿಕೊಂಡು ಅಲೆಮಾರಿಯಂತೆ ಬದುಕುತ್ತಿರುವ ಇವತ್ತಿನ ಚಿವೋ ಒಬ್ಬ ಸುಪಾರಿ ಹಂತಕ. ಒಬ್ಬನ ಕೊಲೆ ಮಾಡಲು ಬರೋವಾಗ ಈ ಅಪಘಾತ ನಡೆಯುತ್ತೆ. ಅಲ್ಲಿ ಸಿಗೋ ಆಕ್ಟೇವಿಯೋ ನಾಯಿಯನ್ನೂ ತನ್ನ ನಾಯಿಗಳ ಜೊತೆ ಕರೆದುಕೊಂಡು ಹೋಗ್ತಾನೆ. ಆದರೆ ಚಿವೋ ಒಂದು ದಿನ ಹೊರಗೆ ಹೋಗಿರುವಾದ ಫೈಟಿಂಗ್ ಮಾಡಿ ಮಾಡಿ ಅಭ್ಯಾಸವಿರೋ ಈ ನಾಯಿ ಚಿವೋನ ಬೇರೆಲ್ಲಾ ನಾಯಿಗಳನ್ನೂ ಸಿಗಿದು ಸಾಯಿಸಿಬಿಡುತ್ತೆ. ಅದಾದ ನಂತರ ತನ್ನ ಇಡೀ ಜೀವನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ತಾನೆ ಚಿವೋ, ಹಾಗೂ ತನ್ನ ಮಗಳಿಗೆ ತನ್ನ ಅಸ್ತಿತ್ವದ ಬಗ್ಗೆ ತಿಳಿಸಲು ಹಾತೊರೆಯುತ್ತಾನೆ.
ಚಿತ್ರದಲ್ಲಿ ಮೆಚ್ಚಿದ ಅಂಶಗಳು
2000ರಲ್ಲಿ ಬಂದ ಅಲೆಜನ್ಡ್ರೋ ಇನರ್ರಿತು ನಿರ್ದೇಶನದ ಈ ಮೆಕ್ಸಿಕನ್ ಚಿತ್ರ ಅವನ “ಡೆತ್ ಟ್ರೈಲಾಜಿ”ಯ ಮೊದಲನೆಯದು. ಇದಕ್ಕೆ ಮುಂಚೆ ಅಪಘಾತದ ಇಂತಹ ಚಿತ್ರಣ ನೋಡಿರಲಿಲ್ಲ. ಅಪಘಾತ ಅಂದ್ರೆ ಮೂರ್ನಾಕು ಆಂಗಲ್ ಇಂದ ಸುಮಾರು ಅರ್ಧ ನಿಮಿಷದ ದೃಶ್ಯ ನೋಡಿ ಅಭ್ಯಾಸವಿದ್ದ ನನಗೆ ಒಂದೂವರೆ ಸೆಕೆಂಡ್ ಅಲ್ಲಿ ಮುಗಿದೇ ಹೋಗುವ ಅಪಘಾತವನ್ನು ನೋಡಿ ಹೌಹಾರಿದ್ದೆ. ನಿಧಾನಕ್ಕೆ ಪರದೆಯ ಮಧ್ಯೆ ಚಲಿಸುತಿದ್ದ ಕಾರ್ ಕಣ್ಣು ಮಿಟುಕಿಸೋದರ ಒಳಗೆ ಫ್ರೇಮಿಂದ ಆಚೆ ಹೋಗಿಬಿಟ್ಟಿರುತ್ತೆ. ಕಥೆಯ ಮಧ್ಯದಿಂದ ಶುರು ಮಾಡಿ ಮುಂಚಿನ, ಆಮೇಲಿನ ಎಳೆಗಳನ್ನು ಬಿಡಿಸಿಟ್ಟಿರುವ ರೀತಿ ನಿಜಕ್ಕೂ ಪರಿಣಾಮಕಾರಿಯಾಗಿದೆ.
“ಅಮೊರೆಸ್ ಪೆರ್ರೋಸ್” ಅಂದ್ರೆ “ಲವ್ ಇಸ್ ಅ ಬಿಚ್” ಅನ್ನೋ ಅರ್ಥ ಬರುತ್ತಂತೆ. ಮೂರೂ ಕಥೆಗಳಲ್ಲಿ ಸಾಮಾನ್ಯವಾಗಿ ಬರುವ ಥೀಮ್ ಅಂದ್ರೆ ಪ್ರೀತಿ ಮತ್ತು ನಂಬಿಕೆ. ಅತ್ತಿಗೆಯನ್ನು ಮೋಹಿಸುವ, ಅದರಿಂದ ಅಣ್ಣನಿಗೆ ನಂಬಿಕೆ ದ್ರೋಹ ಮಾಡುವ ಆಕ್ಟೇವಿಯೋ, ಹೆಂಡತಿ ಮಕ್ಕಳನ್ನು ಬಿಟ್ಟು ಸುಸಾನ ಪ್ರೇಮದಲ್ಲಿ ಬೀಳುವ ಡೇನಿಯಲ್, ಆದರ್ಶಗಳ ಪ್ರೀತಿಯಲ್ಲಿ ಸಂಸಾರದ ನಂಬಿಕೆಯನ್ನು ಕಳೆದುಕೊಳ್ಳೋ ಚಿವೋ – ಒಂದಕ್ಕೊಂದು ಹೊಸೆದುಕೊಂಡಿರುವ ಕಥೆಗಳು ಅಮೋಘ! ಹಾಗೆಯೇ ಮೂರೂ ಕಥೆಗಳಲ್ಲೂ ಬರುವುದು “ನಾಯಿ”ಯ ಮೆಟಫರ್. ಒರಟುಸ್ವಭಾವದ ಕಿತ್ತಾಡುವ ಆಕ್ಟೇವಿಯೋದು ಫೈಟಿಂಗ್ ನಾಯಿ. ಎಲ್ಲಾ ಐಶಾರಾಮಗಳು ಇದ್ದಾಗಲೂ ಅಷ್ಟು ಸುಲಭವಾಗಿ ಪ್ರೀತಿ “ಕಳೆದುಹೋಗೋ” ಸುಸಾನಾಳದು ನಾಜೂಕಿನ ಪುಟ್ಟ ನಾಯಿ ರಿಚಿ. ಆದರ್ಶವೆಂಬ ಒಂದು ನಾಯಿಯನ್ನು ಕರೆತಂದು ಅಷ್ಟು ಬೆಲೆಬಾಳುವ ಜೀವನದ ಇನ್ನಿತರ ಖುಷಿಗಳೆಂಬ ನಾಯಿಗಳನ್ನು ಬಲಿಕೊಟ್ಟ ಚಿವೋ. ಥೂ ಜೀವನ ನಾಯಿಪಾಡು ಅನ್ನಿಸುವಂತೆ ಮಾಡಿಬಿಡುತ್ತೆ ಈ ಚಿತ್ರ.
ನನಗೆ ಹಿನ್ನೆಲೆ ಸಂಗೀತ ಇಷ್ಟವಿರುವ ಚಿತ್ರಗಳನ್ನು ಹೆಸರಿಸಲು ಹೇಳಿದರೆ ಈ ಚಿತ್ರವನ್ನು ಮಿಸ್ ಮಾಡೋದೇ ಇಲ್ಲ. ಅದರಲ್ಲೂ ಕ್ಲೈಮಾಕ್ಸ್ ಅಲ್ಲಿ ಬಾರೋ ಸಂಗೀತ ಮರೆಯೋಕೆ ಆಗಲ್ಲ. ಕಡೆಯಲ್ಲಿ ಬರೋ ಸಾಲು ಕೂಡ. We are also what we have lost. ನಾವೇನು ಕಳೆದುಕೊಂಡಿದ್ದೇವೋ ನಾವು ಅದೂ ಕೂಡ ಹೌದು ಆಲ್ವಾ?
ಡೆಥ್ ಟ್ರಾಯಲೋಜಿಯ ಅತ್ಯುತ್ತಮ ಚಿತ್ರ. ಉಳಿದವರೆಡೂ ಚೆನ್ನಾಗಿದ್ದರೂ ಇದರ ಮಟ್ಟಕ್ಕೆ, ಹಸಿ ಚಿತ್ರಣಕ್ಕೆ ಬ೦ದಿಲ್ಲ. ಈ ತರಹದ ಕಥಾ ಸ೦ಗಮಕ್ಕೆ ಹೈಪರ್ ಲಿ೦ಕ್ ಸಿನೆಮಾ ಅ೦ತಲೂ ಕರೆಯುತ್ತಾರೆ. ಸತ್ಯಜಿತ್ ರೇಯ ಕಾ೦ಚನಗ೦ಗಾ ಇದರಲ್ಲಿ ಮೊದಲನೆಯದು ಅ೦ತ ಉಲ್ಲೇಖ ಮಾಡಲಾಗಿದೆ. ಒ೦ದು ಸಣ್ಣ ಎಳೆಯ ಕೊ೦ಡಿಯಿ೦ದ ಕಥೆಗಳೆಲ್ಲವೂ ಸೇರಿ ಹೊಲಿದಿರುವ ಟೆಕ್ನಿಕ್. ನನಗಿಷ್ಟದ ಸಿನೆಮಾವಿದು. ಮಾಗ್ನೋಲಿಯ, ಕ್ಲಿವೋಸ್ಕಿಯ ಥ್ರೀ ಕಲರ್ಸ್ ಅತ್ಯುತ್ತಮ ಚಿತ್ರಗಳು