ಮೋಡ ತುಂಬಿದ ಆಕಾಶ. ಏನೋ ಒಂಥರಾ ತವಕ, ದುಗುಡ. ಮನಸ್ಸಿನಲ್ಲಿ ತಳಮಳ. ಕೈ ಕೈ ಹಿಸುಕಿ ಕೊಳ್ಳುತ್ತಾ ಓಡಾಡುತ್ತಿದ್ದೆ. ನನ್ನ ಆತಂಕ ಹೆಚ್ಚು ಮಾಡಲೆಂದೇ ಮೋಡ ಮುಸುಕಿದೆಯೇನೋ ಅನ್ನುವಂತಿದೆ. ಅನು ನನ್ನ ಜೀವನಕ್ಕೆ ಬಂದು ೬ ವರ್ಷಗಳಾಯಿತು. ಅವಳಿಲ್ಲದೆ ಒಂದು ದಿನವೂ ಮುಂದೆ ಹೋಗುವುದಿಲ್ಲವೇನೋ ಅನ್ನುವಂತೆ ಬೆಸೆದಿದೆ ಜೀವನ. ಅವಳೇ ಸಾಕು ನಾನು ಸುಖವಾಗಿ ಜೀವನ ನಡೆಸಲಿಕ್ಕೆ ಅನ್ನುವಂತಿದ್ದೆವು. ಮಕ್ಕಳು ಬೇಕೇ ಬೇಕು ಅನ್ನುವ ಹಟವೇನು ನನಗಿರಲಿಲ್ಲ. ಆದರೆ ಅವಳಿಗೆ ಮಕ್ಕಳೆಂದರೆ ಪ್ರಾಣ. ಅವಳ ಆರೋಗ್ಯವನ್ನೇ ಪಣಕ್ಕಿಟ್ಟು ಮಕ್ಕಳನ್ನು ಹಡೆಯುವ ಸಾಹಸಕ್ಕೆ ಅವಳು ಕೈ ಹಾಕಿದ್ದು ನನಗೆ ಬಹಳ ಅಸಮಾಧಾನ ತಂದಿತ್ತು. ಇನ್ನು ಮಧ್ಯಾಹ್ನ ೩ ಘಂಟೆ ಅಷ್ಟೇ. ಆದರೆ ಆಸ್ಪತ್ರೆ ಕತ್ತಲಾಗಿದೆ. ಟ್ಯೂಬಲೈಟ್ ಬೆಳಕು ಎಲ್ಲೆಡೆ ಮೂಡಿದೆ. ಅವಳ ಆಕ್ರಂದನ ಕೇಳುತ್ತಿದೆ. ನನ್ನಲ್ಲೇನೋ ಪಾಪ ಪ್ರಜ್ಞೆ ಕಾಡುತ್ತಿದೆ. ಅವಳ ನೋವಿಗೆ ನಾನೇ ಕಾರಣವಾ? ಅವಳ ನೋವನ್ನು ಸ್ವಲ್ಪ ಮಟ್ಟಿಗಾದರೂ ನಾನು ತೆಗೆದುಕೊಳ್ಳಲು ಸಾಧ್ಯವಾಗಬಾರದೇ?
ನನ್ನ ಮನಸ್ಸಿನಲ್ಲಿ ಆಗುತ್ತಿರುವ ನೋವನ್ನು ಸಹಿಸಿಕೊಳ್ಳುವುದು ಹೇಗೆ?
ಸುಮಾರು ೮ ವರ್ಷಗಳ ಹಿಂದಿನ ಮಾತು. ತಿಳಿ ಹಳದಿ ಸೀರೆಯುಟ್ಟು ದೇವಸ್ಥಾನಕ್ಕೆ ಬಂದಿದ್ದ ಹುಡುಗಿ. ಇನ್ನು ಸೀರೆ ಉಡುವುದು ಹೊಸದು. ಬಹಳ ಜಾಗರೂಕತೆಯಿಂದ ಹೆಜ್ಜೆಹಾಕುತ್ತಿದ್ದಾಳೆ. ಸೀರೆಯ ನೆರಿಗೆಯನ್ನು ಕೈಯಲ್ಲಿ ಹಿಡಿದು ಹಾಕುತ್ತಿರುವ ಒಂದೊಂದೇ ಹೆಜ್ಜೆ ನೋಡಲು ತುಂಬ ಚೆಂದವೆನಿಸುತ್ತಿತ್ತು. ಹಣೆಯಲ್ಲಿಟ್ಟ ಪುಟ್ಟ ಕುಂಕುಮ, ಸ್ವಲ್ಪವೇ ಮೂಡಿದ ಮಲ್ಲಿಗೆ ಹೂವು, ಅವಳ ನಗು ಮತ್ತು ನಕ್ಕಾಗ ಕಾಣುವ ಹೊಳೆಯುವ ಬಿಳಿ ಹಲ್ಲು. ಮುತ್ತಿನಂತೆ ಜೋಡಿಸಿದ ಹಲ್ಲು. ಎಂಥ ಮೋಹಕ ನಗೆ ಅವಳದ್ದು. ಮುಗ್ಧತೆ ಎದ್ದು ಕಾಣುತ್ತಿತ್ತು. ಜೊತೆಯಲ್ಲೇ ಲೋಕವನ್ನೇ ಗೆಲ್ಲಬಲ್ಲೆ ಅನ್ನೋ ಉತ್ಸಾಹ ಕೂಡ. ಅವಳೊಂದಿಗೆ ಅವಳ ಮನೆಯ ಒಂದು ಹೆಂಗಸು. ಬಹುಷಃ ಚಿಕ್ಕಮ್ಮನೋ ದೊಡ್ಡಮ್ಮನೂ ಇರಬೇಕು. ಈ ಹುಡುಗಿ ತನ್ನದೇ ಲೋಕದಲ್ಲಿದ್ದಾಳೆ. ತನ್ನ ಸೀರೆಯ ಸಂಭ್ರಮ. ಹಾಗೆ ದೇವಸ್ಥಾನ ಪ್ರದಕ್ಷಿಣೆ ಹಾಕುತ್ತಾ ಬರುವಾಗ ಸೀರೆಯ ಅಂಚನ್ನು ಯಾರು ತುಳಿದು ಅದು ಸ್ವಲ್ಪ ಹರಿದು ಹೋಯಿತು. ಅವಳ ಮುದ್ದಾದ ಕೆನ್ನೆಯ ಮೇಲೆ ಕಣ್ಣೀರು ಹನಿ. ನನ್ನ ಮನಸ್ಸಿಗೆ ಕಷ್ಟವಾಯಿತು. ಹತ್ತಿರ ಹೋಗಿ ಸಮಾಧಾನ ಮಾಡುವ ಮನಸ್ಸಿತ್ತು. ಆದರೆ ಸ್ವಲ್ಪ ಅಂಜಿಕೆ ಕೂಡ. ಹಾಗೆ ನೋಡುತ್ತಿದ್ದೆ. ಪಕ್ಕದಲ್ಲಿದ್ದ ಹೆಂಗಸು ಅವಳಿಗೆ ಏನೋ ಸಮಾಧಾನ ಹೇಳಿ ಕರೆದುಕೊಂಡು ಹೋದರು. ಅವಳನ್ನೇ ಹಿಂಬಾಲಿಸುತ್ತಿದ್ದವು ನನ್ನ ಕಣ್ಣುಗಳು.
ಬಸ್ಸಿನಲ್ಲಿ ಜಾಗಕ್ಕಾಗಿ ಇಬ್ಬರು ಹೆಂಗಸರು ಜಗಳವಾಡುತ್ತಿದ್ದರು. ಅದು ಕೊಂಚ ಮಿತಿ ಮೀರಿ ಬಸ್ಸನ್ನು ನಿಲ್ಲಿಸಿ ರಸ್ತೆಗೆ ಬಂದಿತ್ತು. ಎಲ್ಲರೂ ಆ ಹೆಂಗಸರ ಗಲಾಟೆಯನ್ನು ಸರಿಪಡಿಸಲು ಕಷ್ಟ ಪಡುತ್ತಿದ್ದರು. ಅಷ್ಟರಲ್ಲಿ ಈ ಹುಡುಗಿ ಮುಗುಳ್ನಗುತ್ತ ಬಂದು ಅದೇನು ಹೇಳಿದಳೋ ಕಾಣೆ ಇಬ್ಬರು ಹೆಂಗಸರು ಸುಮ್ಮನಾದರು. ಆಮೇಲೆ ಗೊತ್ತಾಯಿತು ಅವರು ಸೀಟಿಗಾಗಿ ಜಗಳ ಆಡುತ್ತಿದ್ದರು, ಈ ಹುಡುಗಿ 'ವಯಸ್ಸು ಹೆಚ್ಚಾಗಿರುವವರು ಕೂತ್ಕೋಳಿ' ಅಂತ ಹೇಳಿದೊಡನೆ ಇಬ್ಬರು ತಮಗೆ ಸೀಟ್ ಬೇಡ ಎಂದು ನಿಂತರು. ಈ ಹುಡುಗಿ ಕುಳಿತುಕೊಂಡಳು. ಆಹಾ! ಎಂಥ ಜಾಣೆ ಇವಳು ಎಂದು ನೋಡುತ್ತಿದ್ದೆ. ಬರಿ ಸೌಂದರ್ಯ ಅಷ್ಟೇ ಅಲ್ಲ, ಬುದ್ಧಿವಂತಿಕೆಯಲ್ಲೂ ಮುಂದು ಏನು ತೋರಿಸಿದಳು.
ಅವಳನ್ನು ನೋಡಲೇಬೇಕೆನ್ನುವ ಹಂಬಲ ಹೆಚ್ಚುವಂತಿದ್ದಳು. ದೇವರು ಇವಳನ್ನು ಇಷ್ಟೊಂದು ಆಕರ್ಷಕವಾಗಿ ಮಾಡಿ, ನನ್ನ ಮನಸ್ಸನ್ನು ಯಾಕೆ ಹೀಗೆ ಮಾಡಿದ ಅಂತ ಯೋಚಿಸುತ್ತಿರುವಾಗಲೇ 'ರೀ ದಯವಿಟ್ಟು ೫೦೦ ರುಪಾಯಿಗೆ ಚಿಲ್ಲರೆ ಇದ್ದಾರೆ ಕೊಡಿ ಪ್ಲೀಸ್, ಕಂಡಕ್ಟರ್ ಕೇಳ್ತಿದಾರೆ' ಅಂತ ನನ್ನ ಹತ್ತಿರ ಬಂದು ಕೇಳುತ್ತಿದ್ದಾಳೆ. ಅಬ್ಭಾ! ಗುಡುಗು, ಸಿಡಿಲು ಎಲ್ಲ ನನ್ನೆದೆಯಲ್ಲಿ ಒಟ್ಟಿಗೆ ಬಡಿದಂತಾಗಿದೆ. ಅವಳನ್ನು ಇಷ್ಟ್ಟೊಂದು ಹತ್ತಿರದಿಂದ ನೋಡುತ್ತಿದ್ದೇನೆ ಮತ್ತು ಅವಳು ನನ್ನನು ಮಾತನಾಡಿಸುತ್ತಿದ್ದಾಳೆ. ಈ ಸಡಗರದಲ್ಲಿ ಅವಳು ಏನು ಕೇಳುತ್ತಿದ್ದಾಳೆ ಎಂದು ತಿಳಿಯುತ್ತಿಲ್ಲ. ಸುಮ್ಮನೆ ಮೂಗನ ಹಾಗೆ ಅವಳನ್ನೇ ನೋಡುತ್ತಿದ್ದೇನೆ. ಅವಳು ಮತ್ತೊಮ್ಮೆ 'ಚೇಂಜ್ ಇದ್ರೆ ಕೊಡಿ, ಇಲ್ಲಾಂದ್ರೆ ಇಲ್ಲ ಅಂತ ಹೇಳಿ' ಅಂತ ಸ್ವಲ್ಪ ಜೋರಾಗಿ ಕೇಳಿದಾಗ ಎಚ್ಚರ ಆಯಿತು. ಅವಳಿಗೆ ಚೇಂಜ್ ಕೊಡುವುದು ಏನು ನನ್ನನ್ನೇ ಕೊಟ್ಟಾಗಿತ್ತು. ಆದರೆ ಹೇಳಲು ಧೈರ್ಯ ಬೇಕಲ್ಲ. ಅವಳಿಗೆ ೧೪ ರೂಪಾಯಿ ಚೇಂಜ್ ಬೇಕಿತ್ತು. ಅದನ್ನು ಕೊಟ್ಟು ನಾನು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಅವಳು 'ಆಮೇಲೆ ಕೊಡ್ತಿನಿ' ಅಂತ ನನ್ನ ಮುಖ ನೋಡಿದಳು. ಆಹಾ! ಎಂಥ ಕಣ್ಣು! ಎಷ್ಟು ಜನರನ್ನು ತನ್ನ ಕಣ್ಣಲ್ಲೇ ಕೊಂದಿದ್ದಳೋ ಗೊತ್ತಿಲ್ಲ. ಸರಿ ನನಗೊಂದು ನೆಪ ಸಿಕ್ಕಿತು ಅವಳನ್ನು ಮಾತನಾಡಿಸಲು. ಅವಳು ನನ್ನ ಪಕ್ಕದಲ್ಲೇ ನಿಂತಿದ್ದರಿಂದ ನನಗೆ ಸ್ವಲ್ಪ ಇರುಸು ಮುರುಸು ಜೊತೆಗೆ ಸಂತೋಷ ಉಕ್ಕಿ ಹರಿಯುತ್ತಿತ್ತು. ಅವಳು ಹಾಕಿದ್ದ ಪೆರ್ಫ್ಯೂಮ್ ನನ್ನನ್ನು ಮರುಳು ಮಾಡಿತ್ತು. ಇಳಿಯುವ ಹೊತ್ತಿಗೆ ಅವಳು ಕೆಲಸ ಮಾಡುತ್ತಿರುವ ಜಗದ ಬಗ್ಗೆ ತಿಳಿದಿದ್ದು ಆಗಿತ್ತು. ಇಬ್ಬರು ಒಟ್ಟಿಗೆ ಇಳಿದೆವು. ನಾನೇ ಧೈರ್ಯ ಮಾಡಿ ಕಾಫಿಗೆ ಕರೆದೆ.
ಅವಳಿಗೆ ಏನನ್ನಿಸಿತೋ ಸರಿ ಎಂದು ಬಂದಳು. ಅವಳಿಗೆ ಇಷ್ಟವಾದ ಕೋಲ್ಡ್ ಕಾಫಿ ಹೀರುತ್ತಾ ನನ್ನ ಪರಿಚಯ ಮಾಡಿಕೊಟ್ಟೆ. ಹಾಗೆ ಮಾತಾಡುತ್ತಾ ಅವಳು ತನ್ನ ಬಗ್ಗೆ ಮತ್ತು ಅಪ್ಪ ಅಮ್ಮ ತೀರಿ ಹೋಗಿದ್ದಾರೆ ಎನ್ನುವ ವಿಷಯ ಹೇಳಿದಾಗ ಮನಸ್ಸಿಗೆ ನೋವಾಯಿತು. ಅವಳು ಅವಳ ಚಿಕ್ಕಮ್ಮ ನ ಮನೆಯಲ್ಲಿ ಇದ್ದಾಳೆ ಎಂದು ಹೇಳಿದಳು. ಅವಳನ್ನು ನೋಡುತ್ತಲೇ ಇರಬೇಕು ಅನ್ನುವಷ್ಟು ಅಗಾಧ ಆಸೆ. ಆದರೆ ಮೊದಲ ಸಲ ಸಿಕ್ಕಿರುವಾಗ ಹೀಗೆಲ್ಲ ಮಾಡಲು ಆಗುತ್ತಿಲ್ಲ. ಅವಳಿಗೆ ಏನನ್ನಿಸಿತೋ ಗೊತ್ತಿಲ್ಲ ನನ್ನ ಜೊತೆ ಸ್ವಲ್ಪ ಸಲಿಗೆಯಿಂದಲೇ ಮಾತನಾಡಿದಳು. ಅವಳ ಮುಗ್ಧತೆಗೆ ನನ್ನ ಮೆಚ್ಚುಗೆ ಹೆಚ್ಚಾಗುತ್ತಿತ್ತು. ಅವಳ ಅಪ್ಪ ಅಮ್ಮನ ಸಾವಿನ ಬಗ್ಗೆ ಹೇಳುತ್ತಾ ಅವಳು ತುಂಬ ಸಪ್ಪಗಾದಳು. ಅವರು ಆಕ್ಸಿಡೆಂಟ್ ನಲ್ಲಿ ತೀರಿ ಹೋಗಿ ೮ ವರ್ಷಗಳಾಗಿದ್ದು ಅವಳಿಗೆ ಅವಳ ಚಿಕ್ಕಮ್ಮನ ಆಸೆರೆಯೇ. ಆ ಚಿಕ್ಕಮ್ಮನಿಗೆ ಇವಳ ಮೇಲೆ ಅಕ್ಕರೆ, ಆದರೆ ಗಂಡನೇ ದೇವರು ಅನ್ನುವ ಸ್ವಭಾವ. ಅವನು ಹೇಳಿದ ಮಾತು ಮೀರುತ್ತಿರಲಿಲ್ಲ. ಹಾಗಾಗಿ ಅವನು ಹೇಳಿದಂತೆಯೇ ಎಲ್ಲ ನಡೆಯಬೇಕಿತ್ತು. ಚಿಕ್ಕಪ್ಪನಿಗೆ ಇವಳ ಮೇಲೆ ಅಷ್ಟೇನೂ ಅಕ್ಕರೆ ಇರಲಿಲ್ಲವಾದ್ದರಿಂದ ಇವಳ ಜೀವನ ಅಷ್ಟಕ್ಕಷ್ಟೇ ಆಗಿತ್ತು. ಬಹಳ ಮಾತುಕಥೆ ಆದ ಮೇಲೆ ಇಬ್ಬರು ಸ್ವಲ್ಪ ಹತ್ತಿರವಾಗಿದ್ದೆವು.
ಸ್ನೇಹ, ಸಲಿಗೆ ಇರುವಾಗ ಪ್ರೀತಿಗೆ ಹೆಚ್ಚು ಸಮಯ ಹಿಡಿಯುವುದಿಲ್ಲ. ಹಾಗಾಗಿ ನಮ್ಮ ಪ್ರೀತಿ ಬೇಗ ಬೆಳೆದು, ಇಬ್ಬರ ಮನೆಯಲ್ಲಿ ಸಮ್ಮತಿ ತೆಗೆದುಕೊಂಡು ಮದುವೆಯು ಆಯಿತು. ಅನು ತನ್ನೆಲ್ಲ ಪ್ರೀತಿಯನ್ನು ನನಗೆ ಧಾರೆಯೆರೆದಳು. ಅವಳನ್ನು ಎಷ್ಟು ಮುದ್ದಾಡಿದರೂ ಸಾಲದು ಎನ್ನುವಂತೆ ಇದ್ದಳು. ಅವಳೇ ಒಂದು ಮಗು. ಅವಳ ಮುಗ್ಧತೆ, ಅವಳ ನಗು, ಅವಳ ಒಡನಾಟ ಅಷ್ಟೇ ಸಾಕು ನನಗೆ. ಅವಳ ನಗು ಜಲಪಾತದಂತೆ ನನ್ನ ಸುತ್ತೆಲ್ಲ ತನ್ನ ಸಂತೋಷವನ್ನು ಹರಿಸುತ್ತಿತ್ತು. ಇನ್ನೇನು ಬೇಕು ನನಗೆ. ನಮ್ಮ ಮದುವೆಯಾಗಿ ೫ ವರ್ಷವಾದರೂ ಮಕ್ಕಳಾಗಲಿಲ್ಲ ಎಂದು ಕೊರಗುತ್ತಿದ್ದಳು ಅವಳು. ಅಕ್ಕ ಪಕ್ಕದ ಮನೆಯ ಮಕ್ಕಳನ್ನು ಬೆಳಗಿನಿಂದ ಸಂಜೆಯವರೆಗೂ ನಮ್ಮ ಮನೆಯಲ್ಲೇ ಇರಿಸಿಕೊಳ್ಳುತ್ತಿದ್ದಳು. ಆ ಮಕ್ಕಳು ಸಹ ಇವಳನ್ನೇ ಅಮ್ಮ ಎಂದು ಕರೆಯುತ್ತಿದ್ದವು. ಸಂಜೆ ಹೊತ್ತಿಗೆ ಅವರ ಅಮ್ಮಂದಿರು ಬಂದು ಕರೆದುಕೊಂಡು ಹೋಗುತ್ತಿದ್ದರು. ಇವಳಿಗೆ ಮನೆಯೆಲ್ಲ ಖಾಲಿ ಎನಿಸುತ್ತಿತ್ತು. ನಾನು ಆಫೀಸ್ ನಿಂದ ಬಂದೊಡನೆ ಕಣ್ಣೀರಿಡುತ್ತ ಡಾಕ್ಟರ್ ಹತ್ತಿರ ಹೋಗುವ ಮಾತು. ಸರಿ, ಅವಳ ಆಸೆಯಂತೆ ಡಾಕ್ಟರ್ ಬಳಿ ಹೋಗಿದ್ದಾಯಿತು. ಎಲ್ಲ ಪರೀಕ್ಷೆ ಮಾಡಿ ಅವಳಿಗೆ ಗರ್ಭಕೋಶದಲ್ಲಿ ಸ್ವಲ್ಪ ತೊಂದರೆ ಇರುವುದಾಗಿ ತಿಳಿಯಿತು. ಕೆಲವೊಂದು ತಂತ್ರಜ್ಞಾನ ಬಳಸಿ ಗರ್ಭ ಧರಿಸುವಂತೆ ಮಾಡಬಹುದು ಎಂದು ಹೇಳಿದರು. ಆದರೆ ಅದರಲ್ಲಿ ಕೆಲವೊಂದು ಸೂಕ್ಷ್ಮತೆ ಇರುವುದರಿಂದ ತಾಯಿಯ ಆರೋಗ್ಯಕ್ಕೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಇದನ್ನೆಲ್ಲಾ ಕೇಳಿದ ಮೇಲೆ ನನಗೆ ಮಕ್ಕಳು ಬೇಡ ಎಂದು ನಿರ್ಧಾರ ಮಾಡಿದೆ. ನನಗೆ ನನ್ನ ಅನುಗಿಂತ ಹೆಚ್ಚಿನದೇನೂ ಇಲ್ಲ. ಆದರೆ ಅವಳು ಹಠ ಹಿಡಿದು ಕೂತಿದ್ದಳು. ಮಕ್ಕಳಿಲ್ಲದ ಜೀವನ ಏಕೆ ಬೇಕು ಎಂದು ಕೋಪ ಮಾಡಿಕೊಂಡು ಊಟ ಬಿಟ್ಟು ಕೂತಿದ್ದಾಗ ನನಗೇನು ತೋಚಲಿಲ್ಲ. ಅವಳ ಹಠಕ್ಕೆ ಮಣಿಯಬೇಕಾಯಿತು.
ಒಂದೇ ಸಮ ಚಿಕಿತ್ಸೆಗಳನ್ನು ತೆಗೆದುಕೊಂಡು ಪಾಪ ಅವಳು ಸಣಕಲಾಗಿದ್ದಳು. ಆದರೂ ನನ್ನ ಮಾತು ಕೇಳಲು ತಯಾರಿಲ್ಲ. ಬಹುಷಃ ಇದಕ್ಕೆ ತಾಯಿ ಅನ್ನುತ್ತಾರೆ ಅನ್ನಿಸಿತು. ಕರುಣಾಮಯಿ, ತನ್ನೆಲ್ಲ ಶಕ್ತಿ, ಆಸೆ, ಆರೋಗ್ಯವನ್ನು ಕಳೆದುಕೊಂಡರು ತನ್ನ ಕರುಳಿನ ಕುಡಿಗೆ ಮಿಡಿಯುವ ಜೀವ. ದೇವರೆಂದರೆ ತಾಯಿಯೇ ಅಲ್ಲವೇ!
ಅವಳ ಆಕ್ರಂದನ ಎಲ್ಲೇ ಮೀರಿತ್ತು. ನನ್ನ ಎದೆ ಮಿಡಿತ ನನಗೆ ಕೇಳಿಸುತ್ತಿತ್ತು. ಉಸಿರಾಡಲು ಕಷ್ಟವಾಗುತ್ತಿದೆ. ಅಷ್ಟೊಂದು ಆತಂಕ. ಅಷ್ಟರಲ್ಲಿ ಒಂದು ಪುಟ್ಟ ಕಂದನ ಅಳು ಇವೆಲ್ಲವನ್ನೂ ಮೀರಿಸಿತ್ತು. ಅಬ್ಬಾ!! ಎಂಥ ಅಗಾಧ ಶಕ್ತಿಯಿದೆ ಆ ಪುಟ್ಟ ಜೀವಕ್ಕೆ. ನನ್ನ ದೇಹಕ್ಕೆಲ್ಲ ಒಮ್ಮೆ ಚೈತನ್ಯ ಬಂದಂತಾಯಿತು. ಒಳಗಿಂದ ನರ್ಸ್ ಬಂದು ನನ್ನ ಜೀವನಕ್ಕೆ ಒಂದು ಪುಟ್ಟ ಮಗಳ ಆಗಮನ ಆಗಿದೆ ಎಂದು ತಿಳಿಸಿದಳು. ನನ್ನ ಸಂತಸಕ್ಕೆ ಪಾರವೇ ಇಲ್ಲ. ನನ್ನ ಅನು ಮತ್ತು ಪುಟ್ಟ ಕಂದಮ್ಮ ಇಬ್ಬರು ಆರೋಗ್ಯವಾಗಿ ಮಲಗಿದ್ದರು. ಒಂದೊಂದು ಕ್ಷಣ ಅಮೂಲ್ಯ! ಈ ಅಮೂಲ್ಯ ಕ್ಷಣಕ್ಕೆ ಬೆಲೆಕಟ್ಟಲು ಆಗದು.. ನನ್ನ ಜೀವನವನ್ನು ಸುಂದರವಾಗಿ ಹೆಣೆಯಲು ಬಂದ ಇಬ್ಬರು ಸುಂದರಿಯರು ನನ್ನ ಕಣ್ಣ ಮುಂದಿದ್ದರು. ಅವರನ್ನು ಕಣ್ಣು ತುಂಬಿಕೊಳ್ಳುತ್ತಾ ಇದ್ದಂತೆ ನನ್ನ ಕಣ್ಣುಗಳು ಒದ್ದೆಯಾದವು. ಅವರಿಗೆ ನನ್ನ ಜೀವನ ಮುಡಿಪು.
-ಗಿರಿಜಾ ಜ್ಞಾನಸುಂದರ್
Its real good Imagination of a Husband's then a Fathers agony at a time of birth of child
Hi sir,
Thank you very much for your support.
Hi Giri, sakkathaagi bardidira. I love your choice of words and style. Odowaga aa suttmuttlin environment bagge nu odidre we can corelate to the character and kathege innashtu arta kodutte. ???? Keep it up lady
Thanks buddy.
2 of the utmost important phase of a person, illustrated beautifully into a story . keep writing ????
Thanks Suraj.