ಅಮಾವಾಸ್ಯೆ: ಗಿರಿಜಾ ಜ್ಞಾನಸುಂದರ್


“ಏ ಬೇಡ ಮಕ್ಕಳಾ, ಅವು ನಮ್ಮ ಸೀಬೆ ಮರಗಳಲ್ಲ, ಬೇರೆಯವರದ್ದು. ಅವರನ್ನು ಕೇಳದೆ ಹಾಗೆಲ್ಲ ಕೀಳಬಾರದು” ಎಂದು ಕಾಮಾಕ್ಷಿ ಕೂಗುತ್ತಿದ್ದರು ಮಕ್ಕಳ ಸೈನ್ಯ ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಹಣ್ಣುಗಳನ್ನು ಕಿತ್ತು ತಮ್ಮ ಚೀಲಕ್ಕೆ ಹಾಕುವುದರಲ್ಲಿ ಮುಳುಗಿತ್ತು. ಒಟ್ಟು ಹತ್ತು ಮೊಮ್ಮಕ್ಕಳು ಸೇರಿ ಲಗ್ಗೆ ಹಾಕಿದ್ದರು. ರಜಕ್ಕೆ ಅಜ್ಜಿ ಮನೆಗೆ ಬಂದಿದ್ದ ಎಲ್ಲರು ಮಂಗಗಳಾಗಿದ್ದರು. ಅವರನ್ನು ಹಿಡಿಯುವುದಕ್ಕೆ ಸೀನ ಮಾವನಕೈಯಲ್ಲಿ ಮಾತ್ರ ಸಾಧ್ಯ ಆಗುತ್ತಿತ್ತು. ಅವರು ಶಾಲೆಯ ಮುಖ್ಯೋಪಾಧ್ಯಾಪಕರಾಗಿ ಮಕ್ಕಳ ಮೇಲೆ ಒಳ್ಳೆ ಹಿಡಿತ ಹೊಂದಿದ್ದರು. ಆದರೆ ಅವರು ಬೆಳಿಗ್ಗೆ ತೋಟಕ್ಕೆ ಹೋದರೆ ಸಂಜೆಯೇ ಬಹಳ ತಡವಾಗಿ ಬರುತ್ತಿದ್ದರಿಂದ ಮಕ್ಕಳು ತಮ್ಮ ತುಂಟಾಟವನ್ನು ಮುಂದುವರೆಸಿದ್ದರು.

ರಮ್ಯಾ, ಸೌಮ್ಯ,ವಿಶಾಲ್, ಅದ್ವಿತ್ ಪ್ರಾಥಮಿಕ ಶಾಲೆಯಲ್ಲಿದ್ದರು. ಅವರಿಗಿಂತ ದೊಡ್ಡವರೆಂದರೆ ಸೌಜನ್ಯ, ಸಚಿನ್, ವರುಣ್ ಹಾಗು ವಿಶ್ವಾಸ್. ಇವರೆಲ್ಲ ಸೇರಿ ಅಜ್ಜಿ ಮನೆಗೆ ಕಳೆ ಬಂದಿತ್ತು, ಜೊತೆಗೆ ಗಲಾಟೆಯು ಕೂಡ. ಸುತ್ತ ಮುತ್ತಲ ಮನೆಗಳಿದ್ದ ಮಕ್ಕಳೆಲ್ಲ ಕಾಮಾಕ್ಷಿಯ ಮನೆಯಲ್ಲೇ ಇರುತ್ತಿದ್ದರು. ಸೀನು ಮಾವ ಬರುತ್ತಲೇ ಎಲ್ಲರು ಗುಪ್ ಚುಪ್. ಪಾಪ್ ಸೀನು ಮಾವನಿಗೆ ಒಳಗೊಳಗೇ ನಗುಬರುತ್ತಿತ್ತು. ತಾನು ಮಾಡದ ತುಂಟಾಟವೇ? ಆದರೂ ಅವರು ತನ್ನ ಮಾತನ್ನು ಮಾತ್ರ ಕೇಳುತ್ತಾರೆಂದು ತಿಳಿದು ಸುಮ್ಮನಿರುತ್ತಿದ್ದ.

ಮಕ್ಕಳಿಗೆ ರಜೆಯಲ್ಲಿ ಸಂತೋಷಪಡಲು ಇನ್ನೊಂದು ದೊಡ್ಡ ಕಾರಣವೇನೆಂದರೆ ಊರ ಜಾತ್ರೆ. ದೊಡ್ಡ ಮಟ್ಟದಲ್ಲಿ ಜನ ಸೇರಿ ಅಮ್ಮನ ರಥೋತ್ಸವ ಮಾಡುತ್ತಿದ್ದರು. ಒಂದು ವಾರದ ಮಟ್ಟಿಗೆ ನಡೆಯುತ್ತಿದ್ದ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಯ ಜನರೆಲ್ಲಾ ಸೇರುತ್ತಿದ್ದರು. ಊರ ತುಂಬ ಸಂಭ್ರಮ, ಎಲ್ಲೆಲ್ಲೂ ಪಾನಕ ಮಜ್ಜಿಗೆ, ಕೋಸಂಬರಿ, ಊಟ ತಿಂಡಿ, ಸಣ್ಣ ಪುಟ್ಟ ಅಂಗಡಿಗಳು.. ಇವೆಲ್ಲ ಬೆಂಗಳೂರಿನಲ್ಲಿ ಬೆಳೆಯುವ ಮಕ್ಕಳಿಗೆ ತುಂಬ ಖುಷಿ ಕೊಡುತ್ತಿತ್ತು. ಮುಂದಿನವಾರ ಜಾತ್ರೆ ಇದ್ದದ್ದರಿಂದ ಅಜ್ಜಿ ಮಕ್ಕಳಿಗೆಲ್ಲ ಹೊಸ ಬಟ್ಟೆಗಳನ್ನೂ ಕೊಡಿಸಲು ತಯಾರಿ ಮಾಡಿಕೊಂಡಿದ್ದರು. ಜೊತೆಗೆ ತಮ್ಮ ಕಡೆಯಿಂದ ಜಾತ್ರೆಗೆ ಅರ್ಪಿಸುವ ಕಾಣಿಕೆಯು ಸಿದ್ಧವಾಗುತ್ತಿತ್ತು. ಇನ್ನು ಮೊಮ್ಮಕ್ಕಳಿಗೆಂದು ಚಕ್ಕುಲಿ ನಿಪ್ಪಟ್ಟು, ಕೋಡುಬಳೆ, ರವೇ ಉಂಡೆ, ಸಜ್ಜೆ ಉಂಡೆ ಹೀಗೆ ಇನ್ನು ಥರಾವರಿ ತಿಂಡಿಗಳು ಅಡುಗೆ ಮನೆಯನ್ನು ಅಲಂಕರಿಸುತ್ತಿತ್ತು. ಪಕ್ಕದ ಮನೆಯ ಹೆಂಗಸರು ಕಾಮಾಕ್ಷಮ್ಮನ ಸಹಾಯಕ್ಕೆ ಬಂದಿದ್ದರು, ಹಾಗು ಅವರ ಮಕ್ಕಳು ಅಲ್ಲೇ ಆಟ ಆಡುತ್ತ ರಾತ್ರಿ ತುಂಬ ಹೊತ್ತಾದದ್ದರಿಂದ ಎಲ್ಲರು ಜಗುಲಿಯ ಮೇಲೆ ಊಟ ಮಾಡಿ ಮಾತನಾಡುತ್ತ ಕುಳಿತಿದ್ದರು. ಸೀನು ಮಾವ ಬಂದು ಎಲ್ಲರನ್ನು ಗದರಿಸಿ “ಏನು ನಿಮಗೆಲ್ಲ ನಿದ್ದೆ ಬರುತ್ತಿಲ್ಲವೇ? ಸರಿ ಬಹಳ ತಡವಾಗಿದೆ, ಇಲ್ಲೇ ಮಲಗಿ. ಹೊರಗಡೆ ತಣ್ಣಗೆ ಚೆನ್ನಾಗಿದೆ. ಎಲ್ಲರಿಗು ದೊಡ್ಡ ಜಮಖಾನ ಹಾಸುತ್ತೇನೆ.” ಎಂದು ದೊಡ್ಡದಾದ ಜಮಖಾನ ಹಾಸಿ ಎಲ್ಲರಿಗು ಮಲಗಲು ತಯಾರು ಮಾಡಿದರು. ಮಕ್ಕಳು ಖುಷಿಯಿಂದ ಜಗುಲಿಯ ಮೇಲೆ ತಮ್ಮ ತಮ್ಮ ಜಾಗ ಎಂದು ಮಲಗಿದರು. ತಣ್ಣನೆಯ ಗಾಳಿಗೆ ಸೊಂಪಾಗಿ ನಿದ್ದೆ ಬಂದಿತ್ತು. ಸೌಜನ್ಯ ಇನ್ನು ೧೩ ವರ್ಷದ ಹುಡುಗಿ. ಇನ್ನು ಅವಳ ಮೈಮನಸ್ಸು ಪ್ರಾಯಕ್ಕೆ ಕಾಲಿಟ್ಟಿರಲಿಲ್ಲ. ಅವಳಿಗೆ ಯಾರೋ ತನ್ನ ಮೈಮೇಲೆ ಕೈಯಾಡಿಸಿದ ಹಾಗೆ ಅನ್ನಿಸಿತು. ಹಿಂಸೆ ಅನ್ನಿಸುವಷ್ಟು ಮಟ್ಟಿಗೆ ಅವಳ ಮೇಲೆ ಆ ಕೈ ಓಡಾಡುತ್ತಿತ್ತು. ಅವಳು ಜೋರಾಗಿ ಕೂಗಲು ಆಗದಂತೆ ಅವಳ ಬಾಯನ್ನು ಯಾರೋ ಮುಚ್ಚಿದ್ದರು. ಸೌಜನ್ಯನಿಗೆ ತುಂಬ ಅಸಹ್ಯ ಅನ್ನಿಸುತ್ತಿತ್ತು. ಅವಳು ಜೋರಾಗೆ ಕೊಸರಾಡಲು ಶುರುಮಾಡಿದಾಗ ಅವಳ ಗೆಜ್ಜೆಯಿಂದ ಶಬ್ದ ಹೆಚ್ಚಾಯಿತು. ಆಗ ಅವಳ ಕಿವಿಯ ಹತ್ತಿರ ಯಾರೋ ಬಂದು “ಓಯ್, ಯಾರಿಗೂ ಹೇಳಬೇಡ” ಎಂದು ಯಾರೋ ಅವಳನ್ನು ಬಿಟ್ಟು ದೂರ ಓಡಿ ಹೋದರು.

ಅವಳಿಗೆ ಆ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದಾಗಿತ್ತು. ತುಂಬ ಹಿಂಸೆ, ಅವಮಾನ ಮತ್ತು ಮಾನಸಿಕ ಆಘಾತ ಅವಳನ್ನು ಆವರಿಸಿಕೊಂಡಿತ್ತು. ಅಂದಿನ ದಿನ ಅಮಾವಾಸ್ಯೆ ಆಗಿದ್ದರಿಂದ ಯಾರೆಂದು ಸಹ ಅವಳಿಗೆ ತಿಳಿಯಲಿಲ್ಲ. ಅಲ್ಲದೆ ಜೊತೆಯಲ್ಲಿ ಬಹಳಷ್ಟು ಮಕ್ಕಳು ಸಹ ಇದ್ದರಿಂದ ಅವಳಿಗೆ ಯಾರಿರಬಹುದೆಂಬ ಊಹೆ ಕೂಡ ಮಾಡಲಾಗಲಿಲ್ಲ. ಆದರೆ ಅಂದಿನಿಂದ ಸೌಜನ್ಯ ತುಂಬ ಮಂಕಾದಳು. ಅಜ್ಜಿ ಅವಳನ್ನು ಬಹಳವಾಗಿ ಕೇಳಿದರು ಅವಳು ಏನು ಹೇಳುವ ಸ್ಥಿತಿಯಲ್ಲಿರಲಿಲ್ಲ. ಅಜ್ಜಿ ಅವಳಿಗೆ ಊರಮ್ಮನ ದೇವಸ್ಥಾನದಲ್ಲಿ ತಾಯಿತ ಕಟ್ಟಿಸಿದರು. ಎಲ್ಲದನ್ನು ಊರಮ್ಮ ಸರಿಮಾಡುವಳೆಂಬ ನಂಬಿಕೆ ಅವಳಿಗೆ. ಅಂದಿನ ರಾತ್ರಿಯಿಂದ ಸೌಜನ್ಯ ಅಜ್ಜಿಯ ಪಕ್ಕ ಮಲಗಬೇಕೆಂದು ಹಠ ಮಾಡುತ್ತಿದ್ದರಿಂದ ಅಜ್ಜಿಯ ಪಕ್ಕ ಮಲಗುತ್ತಿದ್ದಳು. ಹಾಗಾಗಿ ಯಾರು ಅವಳನ್ನು ಮುಟ್ಟುವುದಿಲ್ಲವೆಂದು ಧೈರ್ಯವಿತ್ತು. ಊಟ ತಿಂಡಿ ಮಾಡುವಾಗಲೂ ಅವಳು ಮಂಕಾಗಿಯೇ ಇದ್ದಳು. ಜಾತ್ರೆಗೆಂದು ಅವಳ ಅಪ್ಪ ಅಮ್ಮ ಬಂದಾಗಲೂ ಅವಳು ಸಪ್ಪಗೆ ಇದ್ದಳು. ಯಾಕೆಂದು ಅಮ್ಮ ಕೇಳಿದಾಗ ಅವಳಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಮಗಳು ಏನನ್ನೋ ನೋಡಿ ಹೆದರಿರಬೇಕೆಂದು ಅಮ್ಮ ಸಮಾಧಾನ ಮಾಡಿಕೊಂಡಳು. ಜಾತ್ರೆ ತುಂಬ ಚೆನ್ನಾಗಿ ನಡೆಯಿತು. ಮಕ್ಕಳೆಲ್ಲ ಹೊಸ ಬಟ್ಟೆ ಧರಿಸಿ ಸಂಭ್ರಮ ಪಟ್ಟರು. ಊರ ತುಂಬ ಓಡಾಡಿ ಕುಣಿದಾಡಿದರು. ಸೌಜನ್ಯ ಅಜ್ಜಿಯನ್ನು ಬಿಟ್ಟು ಎಳ್ಳು ಹೋಗುತ್ತಿರಲಿಲ್ಲ. ಅಜ್ಜಿಯು ಸಹ ಹೇಳಿ ಸಾಕಾಗಿ ಸುಮ್ಮನಾದಳು. ಊಟಕ್ಕೆ ಕುಳಿತರು ಸಹ ಅಜ್ಜಿಯನ್ನು ಬಿಟ್ಟು ಹೋಗುತ್ತಿರಲಿಲ್ಲ. ಸೌಜನ್ಯನ ಆಟದ ಗೆಳತಿ ಪೂರ್ಣಿಮಾ ಅವಳನ್ನು ತನ್ನ ಮನೆಗೆ ಕರೆದರೂ ಅವಳು ಹೋಗುತ್ತಿರಲಿಲ್ಲ. ಪೂರ್ಣಿಮಾ ಅವಳನ್ನು ಕರೆದು ಸಾಕಾಗಿ ಕರೆಯುವುದನ್ನೇ ಬಿಟ್ಟಳು. ಆಟದ ವಯಸ್ಸೇ ಆಗಿದ್ದರು ಆಟವಾಡುವುದನ್ನೇ ಸೌಜನ್ಯ ಬಿಟ್ಟಿದ್ದಳು. ಬೇರೆ ಮಕ್ಕಳೆಲ್ಲ ಅವಳನ್ನು ವಿಚಿತ್ರವಾಗಿ ನೋಡುತ್ತಿದ್ದರು. ದಿನೇ ದಿನೇ ಸೌಜನ್ಯ ಸೊರಗತೊಡಗಿದಳು. ಇನ್ನು ಕಾಮಾಕ್ಷಿಗೆ ಅವಳನ್ನು ನೋಡಿ ದುಃಖ ತಡೆಯಲಾಗದೆ ಅವಳನ್ನು ತನ್ನ ಮಗಳ ಮನೆಗೆ ವಾಪಸ್ಸು ಕಳುಹಿಸಿದಳು.

ಅಮಾವಾಸ್ಯೆ ಬಂದರೆ ಸೌಜನ್ಯನ ಮುಖ ಇನ್ನು ಬಾಡುತ್ತಿತ್ತು. ಆಟ ಪಾಠಗಳಲ್ಲಿ ಚುರುಕಾಗಿದ್ದ ಹುಡುಗಿ ಮಂಕಾಗತೊಡಗಿದಳು. ಅವಳ ಅಮ್ಮ ರತ್ನನಿಗೆ ಇವಳದೆ ಯೋಚನೆ ಆಯಿತು. ಖುಷಿಯಾಗಿ ಅಜ್ಜಿ ಮನೆಗೆ ಪ್ರತಿವರ್ಷ ಹೋಗಿತ್ತಿದ್ದ ಮಗಳು ಈ ವರ್ಷ ಏಕೆ ಹೀಗಾದಳು ಎಂದು ತಿಳಿಯಲು ಸಾಧ್ಯವಾಗಲಿಲ್ಲ. ಅವಳ ಅಮ್ಮ ಕಾಮಾಕ್ಷಿ ಹಾಗು ಅಣ್ಣ ಸೀನು ಅವಳ ಮಗಳನ್ನು ತುಂಬ ಪ್ರೀತಿಯಿಂದ ನೋಡಿಕೊಳ್ಳುವರೆಂದು ಅವಳಿಗೆ ಬಹಳ ಧೈರ್ಯವಿತ್ತು. ಮಗಳನ್ನು ತುಂಬಾ ಮುದ್ದಾಗಿ ಬೆಳೆಸಿದ್ದಳು. ಸೌಜನ್ಯನ ಅಪ್ಪ ಪ್ರತಾಪ್ ಮಗಳನ್ನು ಬಹಳ ಸಲ ಕರೆದು ಪ್ರೀತಿಯಿಂದ ಏನಾಯಿತೆಂದು ಕೇಳಿದರು ಅವಳು ಏನು ಹೇಳುತ್ತಿರಲಿಲ್ಲ. ಸುಮ್ಮನೆ ಕುಳಿತಿರುತ್ತಿದ್ದಳು. ಆದರೆ ಅವರಿಗೆ ಇನ್ನೊಂದು ಆಶ್ಚರ್ಯ ಕಾಡಿತ್ತು. ಪ್ರತಿ ಅಮಾವಾಸ್ಯೆಯಲ್ಲಿ ಇದು ಮರುಕಳಿಸುತ್ತಿತ್ತು. ಅವಳು ಹೆದರಿಕೊಂಡು ಕೂಗುತ್ತಿದ್ದಳು. ಆಗ ಅಮ್ಮ ಸಮಾಧಾನ ಮಾಡುವುದು, ಆಮೇಲೆ ಅವಳು ಅಮ್ಮನ ಮಡಿಲಿನಲ್ಲಿ ಅಳುತ್ತ ಮಲಗುತ್ತಿದ್ದಳು.

ಬಹಳಷ್ಟು ಡಾಕ್ಟರ್ ಗಳ ಹತ್ತಿರ ಕರೆದುಕೊಂಡು ಹೋಗಿ ತೋರಿಸಿದರು ಏನೂ ಪ್ರಯೋಜನ ಆಗಲಿಲ್ಲ. ಯಂತ್ರ ಮಂತ್ರ ಎಲ್ಲವು ಆಯಿತು. ಭೂತ ಬಿಡಿಸುವರ ಬಳಿಯೂ ಕರೆದುಕೊಂಡು ಹೋದದ್ದಾಯಿತು. ಏನು ಸಹಾಯವಾಗಲಿಲ್ಲ. ಶಾಲೆ ಶುರುವಾಯಿತು. ಹೀಗೆಯೇ ಶಾಲೆಗೇ ಕಳುಹಿಸಲು ತೀರ್ಮಾನಿಸಿದ್ದಾಯಿತು. ಒಂದು ರೀತಿಯಲ್ಲಿ ಎಲ್ಲರಿಗು ಅವಳ ಅಮಾವಾಸ್ಯೆಯ ಅವಾಂತರಗಳು ರೂಢಿಯಾಗಿ ಹೋಗಿತ್ತು. ಒಬ್ಬಳೇ ಮಗಳಾದರೂ ಅವಳ ನೋವನ್ನು ತಂದೆತಾಯಿಗಳು ತಿಳಿದುಕೊಳ್ಳಲು ಆಗಲಿಲ್ಲ. ಅವಳು ತನ್ನದೇ ಲೋಕದ್ದಲ್ಲಿ ಮುಳುಗಿರುತ್ತಿದ್ದಳು. ತನ್ನ ದೇಹದಲ್ಲಿ ಆಗುತ್ತಿದ್ದ ಬೆಳವಣಿಗೆಯಬಗ್ಗೆ ಅವಳಿಗೆ ತುಂಬ ಕಿರಿಕಿರಿ ಆಗುತ್ತಿತ್ತು. ಯಾರೊಡನೆಯೂ ಬೆರೆಯುತ್ತಿರಲಿಲ್ಲವಾದ್ದರಿಂದ ಅಂತರ್ಮುಖಿಯಾಗಿದ್ದಳು. ಋತುಮತಿಯಾದ್ದು ಆಯಿತು. ಅದು ಅವಳಿಗೆ ತುಂಬ ಅಹಿತಕರ ಅನುಭವ ಅನ್ನಿಸಿತು. ತಾನು ಹೆಣ್ಣಾಗಿ ಹುಟ್ಟಿರುವುದು ತುಂಬ ಅಸಹ್ಯ ಅನ್ನಿಸುತ್ತಿತ್ತು. ಪಕ್ಕದ ಮನೆಯ ಸ್ನೇಹ ಆಂಟಿ ಅವಳಿಗೆ ತಿಳಿಹೇಳಿದರು. ಅವಳು ಏನನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ನಿಧಾನವಾಗಿ ಅವಳಿಗೆ ಸ್ವಲ್ಪ ಸಮಾಧಾನ ಆಗತೊಡಗಿತು. ತನ್ನ ದೇಹಕ್ಕೆ ಹೊಂದಿಕೊಳ್ಳಲು ಅವಳ ಮನಸ್ಸು ಸಹಾಯ ಮಾಡಿತು. ಶಾಲೆಯಲ್ಲಿ ತನ್ನ ಗೆಳತಿಯರು ತಮ್ಮ ಅನುಭವ ಹೇಳಿಕೊಂಡಾಗ ಅವಳಿಗೆ ತನ್ನ ಅನುಭವ ಏನು ಹೊಸದಲ್ಲ ಎಂದು ತಿಳಿಯಿತು. ಆದರೆ ಅವಳ ಅಮಾವಾಸ್ಯೆಯ ಹಿಂಸೆ ಮುಂದುವರೆದಿತ್ತು.

ರತ್ನನಿಗೆ ಅವಳ ಗೆಳತಿ ಅಪ್ರತಿಮ ಬಾಬಾ ಬಗ್ಗೆ ಬಹಳವಾಗಿ ಹೇಳಿದ್ದಳು. ಅವರ ಪವಾಡಗಳನ್ನು ವರ್ಣಿಸಿದ್ದಳು. ರತ್ನಳಿಗೆ ತನ್ನ ಮಗಳನ್ನು ಹೇಗಾದರೂ ಮೊದಲಿನಂತೆ ಮಾಡಬೇಕೆಂಬ ಹಂಬಲ. ಎಷ್ಟು ಕಷ್ಟಪಟ್ಟಿದ್ದರು ಪ್ರತಿಫಲ ಸಿಕ್ಕಿರಲಿಲ್ಲವಾದ್ದರಿಂದ ತುಂಬ ನೊಂದಿದ್ದಳು. ಈಗ ಬಾಬಾ ನ ಬಗ್ಗೆ ಕೇಳಿದ ಮೇಲೆ ಮಗಳನ್ನು ಕರೆದುಕೊಂಡು ಹೊರಟಳು.

ತುಂಬ ವಿಶಾಲವಾದ ಜಾಗ ಒಂದು ಸಲ ದೊಡ್ಡ ಗೇಟ್ ನಿಂದ ಒಳಗೆ ಬಂದಮೇಲೆ ಬೇರೆ ಪ್ರಪಂಚವೇ ಕಾಣಸಿಗುತ್ತದೆ. ಬಹಳಷ್ಟು ಥರದ ಗಿಡ ಮರಗಳು. ತುಂಬ ಚೆನ್ನಾಗಿ ನಿರ್ವಹಿಸಿರುವ ಉದ್ಯಾನವನ. ಶಿಸ್ತು ಎದ್ದುಕಾಣುತ್ತಿತ್ತು. ಜನ ಅವರಿಗೆ ಮೀಸಲಾಗಿರುವ ಜಾಗಗಳಲ್ಲಿ ಕುಳಿತಿದ್ದರು. ಅವರಲ್ಲಿ ಸ್ವಲ್ಪಜನ ವಿದೇಶೀಯರಂತೆ ಕಾಣುತ್ತಿದ್ದರು. ಎಲ್ಲರು ಕಣ್ಮುಚ್ಚಿ ಧ್ಯಾನ ಮಾಡುವಂತೆ ಕುಳಿತಿದ್ದರು. ತಮ್ಮ ಲೋಕದಲ್ಲೇ ತಾವು ಮುಳುಗಿದ್ದರು. ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಅವರಿಗೆ ಆಸಕ್ತಿಯೇ ಇದ್ದಂತಿರಲಿಲ್ಲ. ಅಲ್ಲೇ ಒಬ್ಬ ಸಹಾಯಕ್ಕೆಂದು ನೇಮಕ ಮಾಡಿದ್ದ ಮನುಷ್ಯ ಸೀದಾ ಇವರ ಬಳಿಗೆ ಬಂದು ಅವರನ್ನು ಒಂದು ದೊಡ್ಡ ಹಾಲ್ ಗೆ ಕರೆದುಕೊಂಡು ಹೋದ. ಅಲ್ಲಿ ಮತ್ತೊಂದು ದೊಡ್ಡ ಗುಂಪು. ಎಲ್ಲರಿಗು ಬಾಬಾ ರನ್ನು ನೋಡುವ ಉತ್ಸಾಹ ಮತ್ತು ತವಕ. ಇವರ ಟೋಕನ್ ನಂಬರ್ ಕೊಟ್ಟು ಕೂರಿಸಿದರು. ಸುಮಾರು ೪೦ ಜನ ಆದಮೇಲೆ ಸೌಜನ್ಯ ಮತ್ತು ಅವಳ ಅಮ್ಮನನ್ನು ಒಳಗಡೆಯ ಕೊನೆಗೆ ಕರೆದುಕೊಂಡು ಹೋದರು.

ಹಣೆತುಂಬಾ ಕೇಸರಿಬಣ್ಣ ಬಳಿದುಕೊಂಡಿದ್ದ ಒಬ್ಬ ಧಡೂತಿ ಮನುಷ್ಯ ಗದ್ದುಗೆಯ ಮೇಲೆ ಕುಳಿತಿದ್ದ. ದೊಡ್ಡ ಕಣ್ಣುಗಳು, ಉದ್ದ ಗಡ್ಡ. ಕುತ್ತಿಗೆಯ ತುಂಬ ತುಂಬ ಬೆಲೆಬಾಳುವಂಥ ೬-೭ ಸರಗಳು. ಬೆರಳುಗಳಿಗೆಲ್ಲ ಎಂಥೆಂಥದೋ ಉಂಗುರಗಳು. ಸ್ವಲ್ಪ ಭಯ ಆಗುವಂತೆಯೇ ಇದ್ದ. ಸನ್ನೆ ಮಾಡಿ ಕುಳಿತುಕೊಳ್ಳಲು ಹೇಳಿದ. ಇವರು ಅವನ ಪಾದದ ಬಳಿ ಕುಳಿತುಕೊಂಡರು. ರತ್ನ ತನ್ನ ಮನಸ್ಸಿನಲ್ಲಿತಾನು ಇಲ್ಲಿ ಜೊತೆಗೆ ಯಾರನ್ನಾದರೂ ಕರೆದುಕೊಂಡು ಬರಬಹುದಿತ್ತು ಅನ್ನುವ ಯೋಚನೆ ಮಾಡುತ್ತಲೇ ಇದ್ದಳು. ಅಷ್ಟರಲ್ಲಿ ಬಾಬಾ ಏನೆಂದು ಮತ್ತೊಂದು ಸನ್ನೆ. ಸೌಜನ್ಯನ ಸಮಸ್ಯೆಯನ್ನು ಹೇಳಿದಳು. ಅವನು ಅವಳಿಗೆ ಸಮಾಧಾನ ಮಾಡಿ, ನಾನು ನೋಡಿಕೊಳ್ಳುವೆ ಎಂದು ಧೈರ್ಯ ಹೇಳಿದ. ಒಂದಷ್ಟು ವಿಭೂತಿ ಮಂತ್ರಿಸಿ ಅವರ ಮೇಲೆ ಊದಿದ.

ನಿಧಾನವಾಗಿ ಕಣ್ಣುತೆರೆದ ರತ್ನನಿಗೆ ತಾನೆಲ್ಲಿದ್ದೇನೆ ಅನ್ನುವ ಪರಿಜ್ಞಾನವೇ ಇಲ್ಲ. ಏನೇನೋ ಮಾಸಲು ನೆನಪು. ಆದರೆ ಸೌಜನ್ಯ?? ಎಲ್ಲಿ ಸೌಜನ್ಯ? ಸುತ್ತಲೂ ಕಾಣುತ್ತಿಲ್ಲ. ರತ್ನ ಎಲ್ಲೋ ರಸ್ತೆಯ ಬದಿಯಲ್ಲಿ ಕುಳಿತಿದ್ದಾಳೆ. ಸುತ್ತಮುತ್ತಲಿನ ಜನ ಅವಳಿಗೆ ಏನು ಬೇಕೆಂದು ಕೇಳುತ್ತಿದ್ದರೆ. ಹೇಳಲು ಮಾತು ತೋಚುತ್ತಿಲ್ಲ. ಅವಳಿಗೆ ದೇಹ ಅವಳ ಸ್ಥಿಮಿತದಲ್ಲಿಲ್ಲ. ರೆಪ್ಪೆ ಭಾರವಾಗಿ ಹಾಗೆ ಕಣ್ಣು ಮುಚ್ಚಿದಳು. ಮತ್ತೆ ಕಣ್ಣು ತೆರೆದಾಗ ಆಸ್ಪತ್ರೆಯ ಹಾಸಿಗೆಯ ಮೇಲಿದ್ದಳು. ಅವಳ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಪದಾರ್ಥ ಸೇರಿ, ನರಗಳು ದುರ್ಬಲವಾಗಿದ್ದವು. ಈ ಮಧ್ಯೆ ಸೌಜನ್ಯಳ ನಾಪತ್ತೆಯ ಪ್ರಕರಣ ಪೊಲೀಸ್ ಬಳಿ ದಾಖಲು.

ಯಾರು ಇದಕ್ಕೆಲ್ಲ ಹೊಣೆ?

-ಗಿರಿಜಾ ಜ್ಞಾನಸುಂದರ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x