“ಭಯ್ಯಾ… ನನ್ನ ಭಾಯಿಯ ಸಿನೆಮಾ ಬರುತ್ತಿದೆ'', ಎಂದು ಕುಣಿಯುತ್ತಾ ಹೇಳಿದ್ದ ಆತ.
ಹೀಗೆ ಉತ್ಸಾಹದಿಂದ ನನ್ನ ಜೊತೆ ಮಾತನಾಡುತ್ತಿದ್ದಿದ್ದು ದೆಹಲಿಯ ಮಯೂರ್ ವಿಹಾರ್ ನಿವಾಸಿಯೂ, ನನ್ನ ತಮ್ಮನಂತಿದ್ದ ಮಿತ್ರನೂ ಆಗಿದ್ದ ಸೋನು. ಇಲ್ಲಿ ತನ್ನ “ಭಾಯಿ'' ಎಂದು ಭುಜಕುಣಿಸುತ್ತಾ ಸೋನು ಕರೆಯುತ್ತಿದ್ದಿದ್ದು ನಟ ರಣಬೀರ್ ಕಪೂರ್ ನನ್ನು. ಸೋನು ರಣಬೀರ್ ಕಪೂರ್ ನ ಡೈ-ಹಾರ್ಡ್ ಅಭಿಮಾನಿ. ಅತ್ತ ನಟ ರಣಬೀರ್ ಕಪೂರ್ ಕೆಮ್ಮಿದರೆ ಇತ್ತ ಎದೆ ನೋವಾಗುತ್ತಿದ್ದಿದ್ದು ಸೋನುವಿಗೆ. ನಟ ರಣಬೀರ್ ಕಪೂರ್ ನ ನೆಲಕಚ್ಚಿದ ಚಿತ್ರಗಳ ಬಗ್ಗೆ ಬೇಜಾರಾಗುತ್ತಾ ನಿಟ್ಟುಸಿರಾಗುತ್ತಿದ್ದಿದ್ದು ಸೋನು. ಇನ್ನು ನಟಿ ಕತ್ರೀನಾಳೊಂದಿಗೆ ರಣಬೀರ್ ಓಡಾಡುತ್ತಿದ್ದಾನೆಂಬ ಬ್ರೇಕಿಂಗ್ ನ್ಯೂಸ್ ಯಾವುದೋ ಟ್ಯಾಬ್ಲಾಯ್ಡ್ ಪತ್ರಿಕೆಯ ಬಾಕ್ಸ್ ಐಟಮ್ ನಿಂದ ತಿಳಿದಾಗ ಹೊಟ್ಟೆ ಉರಿದುಕೊಂಡಿದ್ದೂ ಇದೇ ಸೋನು. ಅಣ್ಣಾವ್ರು ತಮ್ಮ ಅಭಿಮಾನಿಗಳನ್ನು “ದೇವರು'' ಎಂದು ಕರೆಯುತ್ತಿದ್ದರಂತೆ. ಇಂಥಾ ದೇವನೊಬ್ಬ ನನಗೆ ಸಾಕ್ಷಾತ್ಕಾರವಾಗಿದ್ದೂ ಇದೇ ಸೋನುವಿನಿಂದ.
ಮಗನಿಗೆ ಅತ್ತ ಚೆನ್ನಾಗಿ ಅಂಕಗಳೂ ಬರಲಿಲ್ಲವೆಂದು ಇತ್ತ ನೆಟ್ಟಗಿನ ನೌಕರಿಯೂ ಸಿಗುತ್ತಿಲ್ಲವೆಂದು ತಲೆಕೆಡಿಸಿಕೊಂಡಿದ್ದ ಸೋನುವಿನ ತಂದೆ ಐ.ಎ.ಎಸ್ ಪರೀಕ್ಷೆಯ ತಯಾರಿಗೆ ಸಂಬಂಧಿಸಿದ ಕೆಲ ಪುಸ್ತಕಗಳನ್ನು ತಂದು ಮಗನೆದುರು ಗುಡ್ಡೆ ಹಾಕಿದ್ದರು. “ಮಗನೇ, ನೀನು ಇನ್ನೇನನ್ನೂ ಮಾಡಬೇಡ. ಇನ್ನೊಂದು ವರ್ಷ ಚೆನ್ನಾಗಿ ಕುಳಿತು, ಓದಿ, ಒಂದು ಪರೀಕ್ಷೆ ಪಾಸು ಮಾಡಿ ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೋ'', ಎಂದಿದ್ದರು ಆ ತಂದೆ. ಆದರೆ ತನ್ನ ಮುದ್ದಿನ ಮಗ ರಣಬೀರ್ ಕಪೂರ್ ನ ಹಿಂದೆ ಬಿದ್ದಿದ್ದಾನೆಂಬುದು ಅವರಿಗಾದರೂ ಏನು ಗೊತ್ತಿತ್ತು. ಮನೆಯೊಳಗೆ ಕುಳಿತು ಆ ತಂದೆ ತನ್ನ ಮಗನ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಆತನೋ ಅಪ್ಪನ ಕಣ್ಣಿಗೆ ಮಣ್ಣೆರಚಲು ಓದಲು ಹೋಗುವಂತೆ ಪುಸ್ತಕವೊಂದನ್ನು ಹಿಡಿದು ತಾರಸಿಗೆ ಬಂದು ರಣಬೀರ್ ಕಪೂರ್ ನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ.
ಈ ಸೋನು ಮಹಾಶಯನನ್ನು ಭೇಟಿಯಾದ ಒಂದು ವಾರದಲ್ಲೇ “ಹೀಗೆ ಓದಿದರೆ ಇವನು ಪರೀಕ್ಷೆಯನ್ನು ಪಾಸು ಮಾಡಿದಂತೆಯೇ'' ಎಂದು ನಾನು ಮನದಲ್ಲೇ ಗೊಣಗಿದ್ದೆ.
***********
1970 ರ ದಶಕವನ್ನು “ಗೋಲ್ಡನ್ ಇರಾ ಆಫ್ ಸ್ಟ್ರೀಕಿಂಗ್'' ಎಂದೂ ಕರೆಯುತ್ತಿದ್ದರಂತೆ.
ಏಕೆಂದರೆ ಎಲ್ಲಿಂದಲೋ ಬಂದು ಮೈಮೇಲೆ ಒಂದಿಂಚು ಬಟ್ಟೆಯೂ ಇಲ್ಲದೆ ಏಕಾಏಕಿ ಮೈದಾನಕ್ಕೆ ಧುಮುಕಿ ಮಂಗನಾಟ ಮಾಡುವ ಟ್ರೆಂಡ್ ಒಂದು ಆಗ ಸೃಷ್ಟಿಯಾಗಿತ್ತು. ಪಡೆದುಕೊಂಡು ಬಂದಿದ್ದು ಪುಣ್ಯವೋ ಪಾಪವೋ, ಆಸ್ಟ್ರೇಲಿಯನ್ ಆಟಗಾರ ಗ್ರೆಗ್ ಚಾಪೆಲ್ ಮಾತ್ರ ಎರಡೆರಡು ಬಾರಿ ಈ ನಗ್ನ ಅಭಿಮಾನಿಗಳಿಗೆ ಎದುರಾಗಬೇಕಾಯಿತು. ಅದು 1977 ರ ಸಮಯ. ಈಡನ್ ಪಾಕರ್ಿನ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ಆಡುವುದರಲ್ಲಿ ವ್ಯಸ್ತವಾಗಿದ್ದವು. ಬ್ಯಾಟಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯನ್ ತಂಡದ ಪರವಾಗಿ ಕ್ರೀಸಿನ ಇನ್ನೊಂದು ಬದಿಯಲ್ಲಿದ್ದಿದ್ದು ತಂಡದ ಕಪ್ತಾನ, ಖ್ಯಾತ ಬ್ಯಾಟ್ಸ್ಮನ್ ಗ್ರೆಗ್ ಚಾಪೆಲ್.
ಅಚಾನಕ್ಕಾಗಿ ಆಕಾಶದಿಂದ ಉದುರಿಬಿದ್ದನೋ ಎಂಬಂತೆ ಏಕಾಏಕಿ ಓಡುತ್ತಾ ಪಿಚ್ ಬಳಿಗೆ ಒಬ್ಬ ಬರುತ್ತಿದ್ದ ನೋಡಿ! ಪ್ರೇಕ್ಷಕರೂ, ಆಟಗಾರರೂ, ಕಾಮೆಂಟರಿ ಬಾಕ್ಸಿನಲ್ಲಿದ್ದವರೂ ಈತನನ್ನು ನೋಡುವುದರಲ್ಲೇ ಬಾಕಿ. ವೇಗವಾಗಿ ಓಡುತ್ತಾ ಬಂದ ಆತ ಸೀದಾ ನುಗ್ಗತೊಡಗಿದ್ದೇ ಪಿಚ್ ನ ಕಡೆಗೆ. ಈ ಆಸಾಮಿಯನ್ನು ಕಂಡು ಗ್ರೆಗ್ ನ ಪಿತ್ತ ನೆತ್ತಿಗೇರಿತೋ ಏನೋ! ಅವನ ಕೈಯನ್ನು ಹಿಡಿದುಕೊಂಡು ಒಂದು ನಿಮಿಷ ಗೋಳುಹುಯ್ದುಕೊಂಡು ಬಿಟ್ಟ ಗ್ರೆಗ್. ಜೊತೆಗೇ ತನ್ನ ಬ್ಯಾಟಿನಿಂದ ಮೆತ್ತಗೆ ಅವನ ಹಿಂಭಾಗಕ್ಕೆ “ಸಾಂಕೇತಿಕ''ವಾಗಿ ಎರಡು ಬಾರಿಸಿಯೂ ಬಿಟ್ಟ. ಬಹುಶಃ ಆಟಗಾರನೊಬ್ಬನಿಂದ ಇಂತಹ “ಸ್ವಾಗತ''ವನ್ನು ನಿರೀಕ್ಷಿಸದಿದ್ದ ಆತನೂ ಗಲಿಬಿಲಿಗೊಂಡನೋ ಏನೋ. ಬಂದ ವೇಗದಲ್ಲೇ ಆತ ಮರಳಿ ಓಡಿಹೋಗಿದ್ದ. ನಂತರ ಭದ್ರತಾ ವಿಭಾಗದ ಅಧಿಕಾರಿಗಳು ಅವನನ್ನು ವಶಕ್ಕೆ ಪಡೆದುಕೊಂಡರು.
ಈ ಪಂದ್ಯವು ಮುಗಿದ ನಂತರ ಆತನೇನಾದರೂ ಗ್ರೆಗ್ ನ ಕೈಗೆ ಸಿಕ್ಕಿಬಿದ್ದಿದ್ದರೆ ಅದೇನಾಗುತ್ತಿತ್ತೋ! ಏಕೆಂದರೆ ಈ ಘಟನೆಯು ನಡೆದ ಕೆಲ ನಿಮಿಷಗಳಲ್ಲೇ ರನ್ ಔಟ್ ಆಗಿ ಗ್ರೆಗ್ ಚಾಪೆಲ್ ಪೆವಿಲಿಯನ್ ಸೇರಬೇಕಾಯಿತು. ಅಭಿಮಾನಿಯೊಬ್ಬನ ಹುಚ್ಚಾಟದಿಂದ ಆಟಗಾರನ ಏಕಾಗ್ರತೆಯು ಭಂಗವಾಗಿದ್ದು ಸ್ಪಷ್ಟವಾಗಿತ್ತು. ಮುಂದೆ 1979 ರಲ್ಲೂ ಇಂಥದ್ದೊಂದು ಪ್ರಕರಣವು ಗ್ರೆಗ್ ಚಾಪೆಲ್ ನೊಂದಿಗೇ ಮರುಕಳಿಸಿತ್ತು. ಆದರೆ ಈ ಬಾರಿ ಗ್ರೆಗ್ ಅಭಿಮಾನಿಯನ್ನು ಹೊಡೆಯುವ ಗೋಜಿಗೆ ಹೋಗದೆ ಆ ಗಡಿಬಿಡಿಯ ಕ್ಷಣದಲ್ಲೇ ಎಲ್ಲಿಂದಲೋ ವಕ್ಕರಿಸಿದ ಅಭಿಮಾನಿಯ ಗುಪ್ತಾಂಗವನ್ನು ತನ್ನ ಬ್ಯಾಟಿನಿಂದ ಮುಚ್ಚಿದ್ದ.
ಸರಿಯಾದ ಸಮಯಕ್ಕೆ ಕ್ಲಿಕ್ ಅಂದಿದ್ದ ಛಾಯಾಗ್ರಾಹಕರ ಕ್ಯಾಮೆರಾಗಳು ಆ ಅಪರೂಪದ ಚಿತ್ರವನ್ನು ಸೆರೆಹಿಡಿದು ಪತ್ರಿಕೆಗಳ ಕ್ರೀಡಾಪುಟಗಳಲ್ಲಿ ರಾರಾಜಿಸುವಂತೆ ಮಾಡಿದವು.
***********
ಅದು 2008 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ನಡೆಯುತ್ತಿದ್ದ ಏಕದಿನ ಪಂದ್ಯ.
ಸ್ಲೆಜಿಂಗ್ ಎಂದು ಕರೆಯಲಾಗುವ ಮಾತಿನ ಚಕಮಕಿಯಲ್ಲಿ ಆಸೀಸ್ ಆಟಗಾರರು ಅದೆಷ್ಟು ದೊಡ್ಡ ಪುಂಡರು ಎಂಬುದು ಜಗಜ್ಜಾಹೀರಾದ ಸಂಗತಿ. ಅದರಲ್ಲೂ ಒಂದು ಕಾಲಘಟ್ಟದಲ್ಲಂತೂ ಈ ಬಗೆಯ ವರ್ತನೆಯನ್ನೇ ಹೊಂದಿದ್ದ ಆಟಗಾರರನ್ನು ಆಸೀಸ್ ತಂಡವು ಹೊಂದಿದೆಯೋ ಎಂದು ಅನ್ನಿಸುವಷ್ಟು ಇದು ಸುದ್ದಿಯಾಗಿತ್ತು. ಬ್ರೆಟ್ ಲೀ, ಆಂಡ್ರ್ಯೂ ಸೈಮಂಡ್ಸ್, ರಿಕಿ ಪಾಂಟಿಂಗ್ ನಂತಹ ಘಟಾನುಘಟಿ ಆಟಗಾರರು ಆಟದ ಮೈದಾನದಲ್ಲಿ ತೋರಿಸುವ ತಮ್ಮ ಅದ್ಭುತ ಪ್ರದರ್ಶನದ ಜೊತೆಗೇ ಆಗಾಗ ಉದುರಿಸುತ್ತಿದ್ದ ಹರಿತ ನುಡಿಮುತ್ತುಗಳಿಂದಲೂ ಆಟದ ಮೂಡ್ ಗೆ ಕಿಚ್ಚಿಡುತ್ತಿದ್ದರು.
ಆ ಪಂದ್ಯದಲ್ಲೂ ಒಬ್ಬ ಹುಚ್ಚು ಅಭಿಮಾನಿ ಓಡೋಡುತ್ತಾ ಪಿಚ್ ಕಡೆಗೆ ಬಂದಿದ್ದ. ಕ್ರೀಸ್ ನಲ್ಲಿದ್ದಿದ್ದು ಬೇರೆ ದೈತ್ಯನಂತಿದ್ದ ಆಂಡ್ರ್ಯೂ ಸೈಮಂಡ್ಸ್. ಅದ್ಯಾವ ಅವಸರದಲ್ಲಿದ್ದನೋ ಆ ಅಭಿಮಾನಿ! ಆತ ಅದೆಂಥಾ ವೇಗದಲ್ಲಿ ಓಡಿ ಬಂದಿದ್ದನೆಂದರೆ ಆತನನ್ನು ಕೊಂಚ ಕೆಣಕುವ ಮೂಡಿನಲ್ಲಿದ್ದ ಸೈಮಂಡ್ಸ್ ಕೂಡ ಒಂದು ಕ್ಷಣ ಗೊಂದಲಕ್ಕೀಡಾಗಿದ್ದ. ಸೈಮಂಡ್ಸ್ ತನ್ನ ಭುಜದಿಂದ ಆತನಿಗೆ ಮೆತ್ತಗೆ ತಿಣುಕಲು ಪ್ರಯತ್ನಿಸಿದರೂ ಓಟದಲ್ಲಿದ್ದ ಶರವೇಗದ ಪರಿಣಾಮವಾಗಿ ಅಭಿಮಾನಿ ಮಹಾಶಯ ಆಯತಪ್ಪಿ ನೆಲಕ್ಕುರುಳಿದ್ದ. ತಪ್ಪು ಆ ಅಭಿಮಾನಿಯದ್ದೋ ಅಥವಾ ಆಸೀಸ್ ಆಟಗಾರನದ್ದೋ ಎಂದು ಕ್ರೀಡಾ ಪತ್ರಕರ್ತರು ಆ ದಿನದ ವರದಿಯನ್ನು ಬರೆಯುವಾಗ ಗೊಂದಲಕ್ಕೆ ಬಿದ್ದರು.
ಆ ಸಂಜೆ ಎರಡೂ ತಂಡಗಳ ಡ್ರೆಸ್ಸಿಂಗ್ ರೂಮಿನಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಜೋಕುಗಳು ಹರಿದಾಡಿದವಂತೆ.
***********
ಈಗ ಮರಳಿ ಸೋನುವಿನತ್ತ ನಾವು ಬರೋಣ.
ಸೋನುವಿನ ಮನೆಯಲ್ಲೇ ಕೆಲ ತಿಂಗಳುಗಳ ಕಾಲ ಬಾಡಿಗೆಗಿದ್ದ ನಾನು ನಂತರ ಅಂಗೋಲಾ ದೇಶಕ್ಕೆ ಬಂದಿಳಿದೆ. ಈ ಸಮಯದಲ್ಲೇ ಮನೀಷ್ ಶರ್ಮಾ ನಿರ್ದೇಶನದ ಶಾರೂಖ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಫ್ಯಾನ್'' ಬಿಡುಗಡೆಯಾಯಿತು. ಬಿಡುಗಡೆಯಾದ ಭಾರತೀಯ ಚಲನಚಿತ್ರಗಳನ್ನು ತಕ್ಷಣವೇ ನೋಡಿ ಆನಂದಿಸುವ ಅವಕಾಶದಿಂದ ವಂಚಿತನಾದ ಪರಿಣಾಮವಾಗಿ ಕೆಲ ತಿಂಗಳುಗಳ ನಂತರವೇ ನಾನು ಈ ಚಿತ್ರವನ್ನು ನೋಡಿ ಆನಂದಿಸಬೇಕಾಯಿತು.
ಚಿತ್ರವನ್ನು ನೋಡುತ್ತಲೇ ನನಗೆ ತಕ್ಷಣ ನನಪಾಗಿದ್ದು ಇದೇ ಸೋನು. ಅದೇ ಕೇಶಶೈಲಿ, ಹಾವಭಾವ, ರೂಪ, ಎತ್ತರ, ಮೈಕಟ್ಟು… ಎಲ್ಲವೂ. ಗೌರವ್ ಪಾತ್ರವು ಥೇಟು ಸೋನುವಿನ ಕಾಪಿ-ಪೇಸ್ಟ್ ಮಾಡಿದಂತೆ ನನಗೆ ಎದುರಾಗಿತ್ತು. ಚಿತ್ರದ ಇಂಟರ್ ವಲ್ ನ ನಂತರದ ಭಾಗದ ನಿರೂಪಣೆಯು ದಿಕ್ಕುತಪ್ಪಿದಂತೆ ಕಂಡರೂ ಸೋನುವನ್ನೇ ತೆರೆಯಲ್ಲೇ ನೋಡುತ್ತಿರುವಂತೆ ಚಿತ್ರವನ್ನು ನೋಡಿ ಆನಂದಿಸಿದೆ. ಹಲವು ಕುಂದುಕೊರತೆಗಳ ಹೊರತಾಗಿಯೂ ಚಿತ್ರವು ಇಷ್ಟವಾಗಿತ್ತು. ಏನಿಲ್ಲವೆಂದರೂ ಚಿತ್ರದ ಬೆನ್ನೆಲುಬಿನಂತಿದ್ದ ಶಾರೂಖ್ ಖಾನ್ ಅಭಿನಯವೂ ಸೇರಿದಂತೆ ಚಿತ್ರತಂಡದ ಈ ಅದ್ಭುತ ಪ್ರಯತ್ನಕ್ಕೆ ತಲೆದೂಗದೆ ವಿಧಿಯಿರಲಿಲ್ಲ. ನಂತರ ನನ್ನ ಈ ಬಾರಿಯ ದೆಹಲಿ ಪ್ರವಾಸದ ಭೇಟಿಯಲ್ಲೂ ಸೋನುವಿನೊಂದಿಗೆ ರಣಬೀರ್ ಬಗ್ಗೆ ಕೇಳುತ್ತಾ ನಾನು ನಗೆಯಾಡಿದ್ದೆ.
ಇನ್ನು ಈ ಬರಹದ ಮುಖ್ಯಪಾತ್ರವಾದ ಸೋನುವಿಗೂ ಮೇಲೆ ಹೇಳಿದ ನಗ್ನ ಅಭಿಮಾನಿಗಳಿಗೂ ಏನು ಸಂಬಂಧ ಎಂದು ನೀವುಗಳು ಯೋಚಿಸುತ್ತಿದ್ದರೆ ಅದಕ್ಕೂ ಒಂದು ಹಿನ್ನೆಲೆಯಿದೆ. ಸೋನುವಿನ ಆರಾಧ್ಯದೈವವಾದ ರಣಬೀರ್ ಕಪೂರ್ ನ ತೀರ್ಥರೂಪರಾದ ಹಿರಿಯ ನಟ ರಿಷಿ ಕಪೂರ್ ರ ಬಗ್ಗೆ ಯಾರಿಗೆ ಗೊತ್ತಿಲ್ಲ! ಟ್ವಿಟ್ಟರ್ ಸೇರಿದಂತೆ ಒಂದಲ್ಲಾ ಒಂದು ವೇದಿಕೆಯಲ್ಲಿ ವಿವಿಧ ಕಾರಣದಿಂದಾಗಿ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿ ಅವರು. ಚಿತ್ರವೊಂದು ಬಿಡುಗಡೆಯಾಗುವಷ್ಟೇ ಸುದ್ದಿಯಾಗಿ ಅವರ ಆತ್ಮಕಥನವು ಇತ್ತೀಚೆಗಷ್ಟೇ ಬಿಡುಗಡೆಯಾಯಿತು.
ಅಂದಹಾಗೆ ಆ ಪುಸ್ತಕದ ಹೆಸರು “ಖುಲ್ಲಂಖುಲ್ಲಾ''!
**********
ಚಂದವಾಗಿ ಬರಿದಿದ್ದೀರಿ. ಒಳ್ಳೆಯ ಓದು.