ಅಬಲೆ ಮಂಜುಳಾ: ರುಕ್ಮಿಣಿ ಎನ್.

ಸಂಜೆ ಆರೂ ಮುಕ್ಕಲಾಗಿತ್ತು. ಮಂಜುಳಾಳ ಅತ್ತೆ ಟಿ.ವಿಯಲ್ಲಿ ಚರಣದಾಸಿ ಸಿರಿಯಲ್ ನೋಡುತ್ತಿದ್ದಳು. ಮಂಜುಳಾ, ಸಂಜೆಯಾಯ್ತು. ಕಸ ಗುಡಿಸಿ, ಅಂಗಳಕೆ ನೀರು ಹಾಕಿ ದೀಪ ಹಚ್ಚು ಎಂದು ಕೂಗುತ್ತಿದ್ದರು. ಆ ದೊಡ್ಡದಾದ ಧ್ವನಿ ಕೇಳಿ ಕಪ್ಪು ಮೋಡದಂತೆ ಹೆಪ್ಪುಗಟ್ಟಿದ್ದ ಮಂಜುಳಾಳ ದುಃಖದ ಕಟ್ಟೆಯೊಡೆದು ಬಿಟ್ಟಿತ್ತು.  ಕಿಟಕಿಯ ಪಕ್ಕ ಕೂತು ಆ ಕಪ್ಪು ಮೋಡವನ್ನೇ ದಿಟ್ಟಿಸುತಿದ್ದ ಅವಳ ಕಣ್ಣುಗಳಿಂದ ಗಂಗೆ ಹರಿಯುತ್ತಲೇ ಇದ್ದಳು.  ಗಂಟಲೆಲ್ಲ ಕಟ್ಟಿ ಹೋಗಿತ್ತು. ಕೂಗಿದರೂ ಓಗೊಡದಿರುವಷ್ಟು ಆಕೆ ಕುಗ್ಗಿ ಹೋಗಿದ್ದಳು. ಅಂತಾಹದೇನಾಗಿತ್ತು ಅವಳಿಗೆ ಅಂತೀರಾ? ಬನ್ನಿ, ನಾನಿಂದು ಅವಳ ಕಥೆ ಹೇಳ್ತೀನಿ.

ಆಕೆಯ ಹೆಸರು ಮಂಜುಳಾ ವಯಸ್ಸು 30. ಆಕೆಯ ದುರಾದೃಷ್ಟ, ಬಾಲ್ಯದಲ್ಲಿಯೇ ಅಪ್ಪ ಅಮ್ಮನನ್ನು ಕಳೆದುಕೊಂಡು ಅನಾಥಳಾದ ಮಂಜುಳಾ ಬೆಳೆದದ್ದು ಮಾವನ ಮನೆಯಲ್ಲಿ.  ಎಸ್.ಎಸ್.ಎಲ್.ಸಿ ಓದಿದ ಮಂಜುಳಾ ಓದಿನಲ್ಲಿ ಆಸಕ್ತಿಯೇ ಇಲ್ಲದ ಕಾರಣ ಮುಂದೆ ಓದುವ ಗೋಜಿಗೆ ಹೋಗುವುದಿಲ್ಲ. ಆದರೆ ಆಕೆ ಒಬ್ಬ ಉತ್ತಮ ಗೃಹಿಣಿ ಆಗಬಲ್ಲಳು ಎಂಬುದರಲ್ಲಿ ಶಕ್ಯವೇ ಇರಲಿಲ್ಲ. ಮನೆಯ ಎಲ್ಲ ಕೆಲಸಗಳನ್ನು ಅಚ್ಚುಕಟ್ಟುತನದಿಂದ ನಿಭಾಯಿಸುತ್ತಾ ಜೀವನೋಪಾಯಕ್ಕೆಂದು ಹೊಲಿಗೆ ತರಬೇತಿ ಪಡೆದಿದ್ದಳು. ಒಂದೊಳ್ಳೆ ಕಡೆ ಸಂಬಂಧ ಬಂದಿದೆ ಎಂದು ಮಂಜುಳಾ ಮಾವ ಹುಡುಗನೊಬ್ಬನಿಗೆ ಅವಳನ್ನು ಗಂಟು ಹಾಕಿ ಜವಾಬ್ಧಾರಿಯಿಂದ ಕೈತೊಳೆದುಕೊಂಡು ಬಿಡುತ್ತಾನೆ.

ಎಲ್ಲ ಹುಡುಗಿಗೂ ತನ್ನ  ಮದುವೆ ಆಗುವ ಹುಡುಗ ನೋಡೋಕೆ ಸ್ಮಾರ್ಟ್ ಆಗಿರಬೇಕು. ಸುರಸುಂದರಾಂಗ ಅಲ್ದೆ ಹೋದ್ರು ಅವನ ಮನಸ್ಸು ಮಾತ್ರ ಅಪ್ಪಟ ಬೆಣ್ಣೆಯಷ್ಟು ಮೃದುವಾಗಿರಬೇಕು. ತನ್ನನ್ನು ಚೆನ್ನಾಗಿ ನೋಡಿಕ್ಕೊಳ್ಳುವ ಶಾರೀರಿಕ ಹಾಗೂ ಮಾನಸಿಕ ಪ್ರಭುದ್ಧತೆ ಅವನಲ್ಲಿರಬೇಕು ಅಂತ ಬಯಸಿ ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೋ ಹಾಗೆಯೇ ಮಂಜುಳಾ ಕೂಡ ಬೆಟ್ಟದಷ್ಟು ಆಸೆ ಆಕಾಂಕ್ಷೆಗಳನ್ನು ಹೊತ್ತು ತಂದವಳು. ಆಡುತ್ತಾ ಬೆಳೆಯುತ್ತಾ ವಯಸ್ಸಿಗೆ ಬಂದಂತೆಲ್ಲ ಮನಸಲ್ಲಿ ಬಯಕೆಯ ಬಳ್ಳಿಗಳನ್ನು ಬೆಳೆಸಿಕೊಂಡಿ ಬಂದವಳು.  ಆಕೆಯ ಬಯಕೆಯ ಬಳ್ಳಿಗೆ ಮರವಾಗಿ ಆಶ್ರಯ ನೀಡುವವನೇ ತನ್ನ ಕೈಹಿಡಿಯುವ ಗಂಡನೆಂದು ನಂಬಿರುತ್ತಾಳೆ ಮಂಜುಳಾ.

ಮದುವೆಯಾದ ಹೊಸತರದಲ್ಲಿ ಹೆಣ್ಣು  ಏನೆಲ್ಲ ಇಚ್ಛಿಸುತ್ತಾಳೆ ಅದ್ರಲ್ಲೂ ತಂದೆ ತಾಯಿ ಇಲ್ಲದ ಪರದೇಸಿ ಹೆಣ್ಣುಮಗಳು ಮಂಜುಳಾ ಗಂಡನೇ ತನ್ನ ಸರ್ವಸ್ವ ಎಂದುಕೊಂಡು ಗಂಡನ ಮನೆಗೆ ಬಲಗಾಲಿಟ್ಟವಳು. ಗಂಡನ ಸನಿಹ, ಅವನು ತೋರುವ ಪ್ರೀತಿ, ಕಣ್ಣ ಭಾಷೆಯಲ್ಲಿಯೇ ಅದಲಿ ಬದಲಿಯಾಗುವ ಆ ಪ್ರೇಮ ಸಂದೇಶಗಳು, ಚೂರು ತುಂಟು ನಗೆ, ಸನ್ನೆಯಲ್ಲಿಯೆ ಕೈ ಮಾಡಿ ಕರೆಯುವ ಆ ರೀತಿ, ಅದು ನೀಡುವ ಮುದ, ಪುಳಕ ಇವೆಲ್ಲ ಒಂದು ಹೆಣ್ಣು ಮದುವೆಯಾದ ಹೊಸತರದಲ್ಲಿ ಬಯಸುವ ಸಹಜ ಬಯಕೆಗಳು.

ಮಂಜುಳಾಳದ್ದು ಕಥೆನೇ ಬೇರೆ ಇತ್ತು. ಮದುವೆಯಾದ ಒಂದು ವಾರದಲ್ಲಿಯೇ ತನ್ನ ಗಂಡ ದೊಡ್ಡ ಕುಡುಕ ಎಂದು ಆಕೆಗೆ  ಗೊತ್ತಾಗುತ್ತದೆ.  ಕುಡಿತದ ಪರಿಣಾಮವಾಗಿ ಮದುವೆಯಾದ ೬ ತಿಂಗಳಲ್ಲೇ ಕೆಲಸ ಕೂಡ ಕಳೆದುಕೊಂಡ  ಆಕೆಯ ಗಂಡ ಬರಿಗೈ ಭಿಕಾರಿಯಾಗುತ್ತಾನೆ. ಆಗ ತಾನೇ ಹೊಸ ಬಾಳಿನ ಸಿಹಿಯ ಸವಿಬೇಕೆಂದಿದ್ದ ಮಂಜುಳಾಳ ಪುಟ್ಟ ಹೃದಯದಲ್ಲಿ ತನ್ನಿನಿಯನಿಗಾಗಿ ಕಟ್ಟಿದ್ದ ಪ್ರೀತಿಯ ತಾಜ್‌ಮೆಹಲ್ ಸದ್ದಿಲ್ಲದೇ ಕಳಚಿ ಬಿದ್ದ ಸದ್ದು ಮಾತ್ರ ಘೋರಾವಾಗಿರುತ್ತದೆ. ಆಕೆಯ ಬಯಕೆಯ ಬಳ್ಳಿ ಕಮರಿ ಕರಕಲಾಗಿ ಹೊಗುತ್ತದೆ.

ಕಂಠ ಪೂರ್ತಿ ಹೆಂಡ ಕುಡಿದು ನಗರದ ಬೀದಿಗಳಲ್ಲೋ ಇಲ್ಲ ತೆಗ್ಗುಗಳಲ್ಲೋ ಬಿದ್ದು ಹೊರಳಾಡುವ ಗಂಡನನ್ನು ಮನೆಗೆ ಕರೆ ತರುವುದೇ ಪತ್ನಿಯ ಧರ್ಮವಾಗಿರುತ್ತದೆ. ಕುಡಿದ ಅಮಲಿನಲ್ಲಿ ಆಕೆಯ ಇಚ್ಛೆ ಇಲ್ಲದಿದ್ದರೂ ಮೈಮೇಲೆ ಮೃಗದಂತೆ ಎರಗಿ ಬರುವ ಗಂಡನ ಶಾರೀರಿಕ ಬಲದ ಎದುರು ಮಂಜುಳಾಳದ್ದು ವ್ಯರ್ಥ ಪ್ರಯತ್ನವಾಗಿರುತ್ತಿತ್ತು. ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಜೀವ- ಭಾವಗಳಿಲ್ಲದ ಬೊಂಬೆಯಂತೆ ಕೇವಲ ಒಂದು ಸಂಭೋಗದ ವಸ್ತುವಾಗಿ ಬಿಡುತ್ತಾಳೆ ಮಂಜುಳಾ.

ಹೀಗೆಯೇ ಅದೆಷ್ಟು ದಿನ ಅಂತ ಬಾಳುವೆ ಮಾಡಿಯಾಳು? ಹೇಗಾದರೂ ಮಾಡಿ ಸಮಸ್ಯೆಯನ್ನು ಬಗೆಹರಿಸಲಿಕ್ಕೆ ನೋಡಿದರೆ, ವಿಧಿ ಇನ್ನೊಂದೆಡೆನೇ ಅವಳನ್ನು ಕರೆದುಕೊಂಡು ಹೋಗುತ್ತಿತ್ತು. ಸಮಸ್ಯೆ ಬಗೆಹರಿಸುವಲ್ಲಿ ಆಕೆ ಮಾಡಿದ ಪ್ರಯತ್ನಗಳೆಲ್ಲ ಸಮಸ್ಯೆಗಳನ್ನು ಮತ್ತಷ್ಟು ಬೆಳೆಸುತ್ತಾ ಹೋಗಿ ಮನೆಯ ಶಾಂತಿಯೆಲ್ಲ ನಶಿಸತೊಡಗುತ್ತದೆ.

ಗಂಡನ ಕುಡಿತದಿಂದ ಬೇಸತ್ತ ಮಂಜುಳಾ ಹೋದಾಳಾದರೂ ಎಲ್ಲಿಗೆ? ಸಮಸ್ಯೆಗಳನ್ನು ಎದುರಿಸುವಷ್ಟು ಗಂಡೆದೆ ಅವಳಿಗಿರಲಿಲ್ಲ. ತಂದೆ ತಾಯಿ ಇಲ್ಲದ ಪರದೇಶಿ ಮಗಳು ತಾನೆಂಬುದೇ ಅವಳನ್ನು ಇನ್ನಷ್ಟು ಅಸಹಾಯಕಳನ್ನಾಗಿ ಮಾಡಿತ್ತು. ತನ್ನ ಕಷ್ಟಗಳನ್ನು ಯಾರೊಟ್ಟಿಗೆ ಹಂಚಿಕೊಳ್ಳುವುದು? ಹುಟ್ಟಿನಿಂದ ತನ್ನನ್ನು ಆಡಿ ಬೆಳೆಸಿದ ಮಾವನಿಗೆ ಇನ್ನೂ ಕಷ್ಟ ಕೊಡಲು ಒಪ್ಪದ ಹುಡುಗಿ ತಾನು ಅಬಲೆ ಎಂಬುದನ್ನು ಒಪ್ಪಿಕೊಂಡು ತನ್ನ ಬದುಕಿನ ಜೊತೆ ಒಪ್ಪಂದ ಎಂಬಂತೆ ಏನಾದರೂ ಆಗಲಿ ಗಂಡನ ಮನೆಯಲ್ಲದೆ ತನಗೆ ಬೇರೆ ಗತಿ ಇಲ್ಲ ಎಂಬ ಹಂತಕ್ಕೆ ಬಂದು ಇದ್ದ ಸ್ಥಿತಿಯೊಂದಿಗೆ ಒಗ್ಗಿಕೊಂಡೇ ಜೀವನ ನಡೆಸಲು ಶುರು ಮಾಡುತ್ತಾಳೆ.

ಇಹಲೋಕ ತ್ಯಜಿಸಿದ್ದ  ಮಂಜುಳಾಳ ಮಾವ ಸರ್ವಿಸ್ ಮಾಡುತ್ತಿದ್ದಾಗಲೇ ಕಟ್ಟಿಸಿದ್ದ ದೊಡ್ಡದಾದ ಮನೆ ಇರುವುದಲ್ಲದೇ ಮಾವನ ಅಭಯ ಹಸ್ತ ಎನ್ನುವಂತೆ ಒಂದಷ್ಟು ಪಿಂಚಣಿ ಅತ್ತೆಯ ಕೈ ಸೇರುತ್ತಿತ್ತು. ಸಣ್ಣ ಪುಟ್ಟ ಸಂತೆ, ಕಾಳು ಕಡಿ ಸೇರಿದಂತೆ ಮನೆಯ ಎಲ್ಲ ಕಾರೋಬಾರನ್ನು  ಮಂಜುಳಾಳ ಅತ್ತೆಯೇ ನೋಡಿಕೊಳ್ಳುತ್ತಾರೆ. ಒಂದರ್ಥದಲ್ಲಿ ಹಣಕಾಸಿನ ಎಲ್ಲ ವಿಷಯಗಳು ಅವರ ಹಿಡಿತದಲ್ಲಿಯೇ ಇರುತ್ತವೆ. ಹೀಗಾಗಿ ಮಂಜುಳಾಳ ಅತ್ತೆ ಅವಶ್ಯಕತೆಗಿಂತ ತೀರಾ ಕಡಿಮೆ ಎನ್ನುವಷ್ಟು ದುಡ್ಡಿನಲ್ಲಿ ಮನೆ ನಿರ್ವಹಣೆ ಮಾಡಿ ತನ್ನ ಖರ್ಚಿಗೊಂದಿಷ್ಟು ಇಟ್ಟುಕೊಂಡು ಮಿಕ್ಕ ದುಡ್ಡನ್ನೆಲ್ಲ ಇದ್ದೂರಲ್ಲಿಯೇ ಮದುವೆ ಮಾಡಿ ಕೊಟ್ಟಿದ್ದ ತನ್ನ ಹಿರಿ ಮಗಳಿಗೆ ಬಟ್ಟೆ ಒಡವೆ ಅಂತ ಹಣ ವ್ಯಯಿಸುತ್ತ ಬಂದಿರುತ್ತಾಳೆ. ಆದರೆ ಸೊಸೆಗೆ ಮಾತ್ರ ಅದರಲ್ಲಿ ಹಕ್ಕಿಲ್ಲ. ಅಂದರೆ ಮಂಜುಳಾ ಆಗಲಿ ಮಂಜುಳಾ ಮಗ ಕಿರಣ್ ಆಗಲಿ ಖಾಯಿಲೆ ಬಿದ್ದರೆ ಆಕೆ ತನ್ನ ಸ್ವಂತ ದುಡಿದ ದುಡ್ಡಿನಲ್ಲಿಯೇ ದವಾಖಾನೆಯ ಖರ್ಚು ವೆಚ್ಚವನ್ನು ನೋಡಿಕೊಳ್ಳಬೇಕು.

ಮಂಜುಳಾಳ ಗಂಡನಂತೂ ಕೆಲಸವಿಲ್ಲದ ದಂಡಪಿಂಡ. ಎಂತೆಂಥ ಡಿಗ್ರೀ ಮಾಡಿದವರೇ ಡಿಗ್ರೀಗೆ ತಕ್ಕ ಕೆಲಸವಿಲ್ಲದೆ ಗೋಳಾಡುವ ಈ ಯುಗದಲ್ಲಿ ಬಿ.ಎ ಕೂಡ ಕಂಪ್ಲೀಟ್ ಮಾಡದವನಿಗೆ ಮೇಲಾಗಿ ಕುಡಿದ ಅಮಲಿನಲ್ಲಂತೂ ಅವಾಚ್ಯ ಬೈಗುಳಗಳನ್ನೇ ಧಾರ್ಮಿಕ ಶ್ಲೋಕಗಳೆಂಬಂತೆ ಉಚ್ಛರಿಸುವ ಅವನ ಮಾತುಗಳಿಗೆ ಕೆಲಸ ಕೊಡಲು ಯಾರೂ ಮುಂದಾಗುತ್ತಿರಲಿಲ್ಲ. ಅಪ್ಪಿತಪ್ಪಿ ಯಾರದಾದರೂ ಮನೆಯ ಭಿಟ್ಟಿ ಕೆಲಸ ಮಾಡಿ ಐವತ್ತೋ ನೂರೋ ಕೊಟ್ಟರೆ ಅದೂ ಕೂಡ ಸಾರಾಯಿ ಅಂಗಡಿಯ ಹಣದ ಪೆಟ್ಟಿಗೆಯನ್ನು ತಪ್ಪದೆ ಸೇರುತ್ತಿತ್ತು.

ತಾನೊಬ್ಬ ಸಾಲದೆಂಬಂತೆ ಕುಡುಕನಿಗೆ ಮಹಾ ಕುಡುಕನ ಸಂಗ ಬೇರೆ ಇರುತ್ತದೆ. ಅವನ ಜೊತೆ ಸೇರಿ ಮನೆಯ ಟೆರೇಸ್ ಮೇಲೆ  ರಾತ್ರಿಯ ಎರಡೇನೂ ಮೂರೇನೂ ಅದ್ಯಾವುದರ ಹಂಗಿಲ್ಲದೆ ಕುಡಿದು ಎಲ್ಲೊಂದರಲ್ಲಿ ವಾಂತಿ ಮಾಡಿಕೊಂಡು ಜೋರಾಗಿ ಹರಟೆ ಹೊಡೆಯುದು ಈ ಕುಡುಕ ಮಹಾಶಯರ ಕಾರ್ಯವಾಗಿರುತ್ತಿತ್ತು. ಅಕ್ಕಪಕ್ಕದ ಜನ ಈ ಕಿರುಕುಳ ತಾಳದೆ, ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಕೊಟ್ಟ ಹಾಗೆ ಮಂಜುಳಾ ಗಂಡ ಮಾಡುವ ಅವಾಂತರಕ್ಕೆ ಮಂಜುಳಾಗೆ ಟೀಕೆ ಟಿಪ್ಪಣಿ ಹೇಳುತ್ತಿದ್ದರು. ಒಟ್ಟಿನಲ್ಲಿ ಗಲ್ಲಿಯಲ್ಲಿರುವ ಎಲ್ಲ ಜನರು ಕಟ್ಟೆಗೆ ಕೂತು ಮಾತನಾಡಿಕೊಳ್ಳಲು ಮಂಜುಳಾ ಸಂಸಾರ ಒಂದು ಗ್ರಾಸವಾಗಿರುತ್ತಿತ್ತು.

ನೋಡಲಿಕ್ಕಷ್ಟೆ ದೊಡ್ಡದಾದ ಮನೆ, ಶಹರಿನ ಜೀವನ ಮಂಜುಳಾಳದ್ದು. ಆದರೆ ಯಾರ ಮನೆಗೂ ಆಸರಿಕೆ ಬೀಸರಿಕೆ ಎಂದು ಹೋಗುವಂತಿಲ್ಲ. ಅಕ್ಕಪಕ್ಕದವರು ಮಂಜುಳಾ ಮನೆಗೆ ಹೆಜ್ಜೆ ಇಡುವುದಕ್ಕೂ ಭಯ ಪಡುತ್ತಿದ್ದರು. ಕಾರಣ, ಆಕೆಯ ಗಂಡನಿಂದ ಅದೆಂಥ ಬೈಗುಳಗಳು ಹೊರ ಬೀಳುತ್ತಾವೆಯೋ ಏನೋ ಎಂಬ ಭಯ ಅವರಲ್ಲಿರುತ್ತಿತ್ತು. ಕೆಲವೊಮ್ಮೆ ಜ್ಞಾನೋದಯವಾಗಿದೆ ಎಂಬಂತೆ ಮಂಜುಳಾಳ ಗಂಡ,  ತನ್ನಿಂದ ಬೈಗುಳ ತಿಂದವರ ಕಾಲಿಗೆ ಬಿದ್ದು ಎಲ್ಲರಿಗೂ ಮುಜುಗರ ತಂದು ಬಿಡುತ್ತಿದ್ದ.  ಅಲ್ಲದೇ, ಸಂಬಂಧಿಕರಲ್ಲಿ, ಆಪ್ತರಲ್ಲಿ ದುಡ್ಡಿಗಾಗಿ ಕೈ ದುಡ್ಡಿಗಾಗಿ ಕೈ ಚಾಚುತ್ತಿದ್ದ. ಗಂಡನ ಇಂತಹ ವರ್ತನೆಯಿಂದ ಮಂಜುಳಾ ಎಲ್ಲಿಯೂ ಹೆಮ್ಮೆಯಿಂದ ತಲೆಯೆತ್ತಿ ನಡೆಯದಂತ ಪರಿಸ್ಥಿತಿಯನ್ನು ತಂದೊಗಿಸಿದ್ದ ಮಂಜುಳಾಳ ಗಂಡ.

ಕಿರಣ ಮಂಜುಳಾಳ ಒಂದೇ ಒಂದು ವಂಶದ ಕುಡಿ. ದೇವರು ಮತ್ತೊಂದು ಮಗುವನ್ನು ಅವಳಿಗೆ ಕರುಣಿಸಲೇ ಇಲ್ಲ. ೯ ವರುಷದ ಕಿರಣ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ.  ಮಗನಿಂದಲೇ ತನ್ನ ಬಾಳು ಹಸನಾಗುವುದು ಎನ್ನುವ ನಂಬಿಕೆ ಅವಳಿಗಿತ್ತು. ಮಗನೆ ತನ್ನ ಬಾಳಿನ ಆಶಾಕಿರಣ ಎಂದು ಮಗನ ಮುಖ ನೋಡುತ್ತಲೇ ಬಾಳ ನೌಕೆಯನ್ನು ನೂಕುತ್ತಾ ಬಂದಿದ್ದಳು. ಮನೆಯ ಕೆಲಸವನ್ನೆಲ್ಲಾ ಮುಗಿಸಿದ ನಂತರ ಹೊಲಿಗೆ ಕೆಲಸ ಮಾಡುತ್ತಾ ಮಗನ ಉಜ್ವಲ ಭವಿಷ್ಯಕ್ಕೆಂದು ಹಣ ಕೂಡಿಡುತ್ತಿದ್ದಳು. ಆ ಬಡ ಜೀವದ ಸಂಪಾದನೆಯ ಮೇಲೂ ಗಂಡನ ಹದ್ದಿನ ಕಣ್ಣು ಬೀಳದೆ ಇರುತ್ತಿರಲಿಲ್ಲ. ಆಗಾಗಾಗ ಗಂಡ ಹೆಂಡತಿಯ ಮದ್ಯ ಜಗಳ ಆಗುತ್ತಲೇ ಇರುತ್ತಿತ್ತು.

ಇಂತಹ ಭಯಾನಕ ಪರಿಸ್ಥಿತಿಯಲ್ಲಿ ಅವರ ಮಗನ (ಕಿರಣ) ಬೆಳವಣಿಗೆಯಾಗುತ್ತಿತ್ತು. ಕುಡುಕ ಅಪ್ಪನ ಪರಿಸ್ಥಿತಿ, ದಿನ ಬೆಳಗಾದರೆ ಕಣ್ಣೀರಲ್ಲೇ ಕೈ ತೊಳೆಯುವ ಅಮ್ಮ, ತಿಂದುಂಡು ಮಲಗುವ ಹೊತ್ತಿನಲ್ಲಿ ಅಪ್ಪ-ಅಮ್ಮನ ಜಗಳ ಇನ್ನೊಂದೆಡೆ ತನಗೂ ಮನೆಗೂ ಸಂಬಂಧವೇ ಇಲ್ಲವೆಂಬಂತೆ ಇರುವ ಕಿರಣನ ಅಜ್ಜಿ ಎಲ್ಲವೂ ಕಿರಣನ ಬಾಳಿನಲ್ಲಿ ಬೇರೊಂದು ವಾತಾವರಣವನ್ನೇ ಸೃಷ್ಟಿಸಿತ್ತು.

ಎಳೆಯ-ಗೆಳೆಯರ ಜೊತೆ ಕೂಡಿ ಆಡಿ ನಲಿಯುವ ವಯಸ್ಸಿನಲ್ಲಿ ಅಪ್ಪನ ಅವಾಚ್ಯ ಬೈಗುಳ, ಅಸಹಾಯಕ ಅಮ್ಮನ ಪರಿಸ್ಥಿತಿ ಎಳೆ ವಯಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿದ ಪರಿಣಾಮವಾಗಿ ಮಗು ತನ್ನ ವಯಸ್ಸಿಗೂ ಮೀರಿ ವಿವೇಕತನ ಮೆರೆಯುತ್ತಿತ್ತಾದರೂ ಆಗಾಗ ಒಬ್ಬನೇ ಮೂಲೆಯಲ್ಲಿ ಕುಳಿತು ಬೆಚ್ಚಿ ಬೀಳುತ್ತಿದ್ದ. ಬೇರೆಯವರ ಮನೆಗೆ ಹೋದರೆ ಮನೆಯಲ್ಲಾಗುವ ಜಗಳದ ಬಗ್ಗೆ ಕೇಳುವರೆಂದು ಎಲ್ಲಿಯೂ ಹೋಗದೆ ಮನೆಯಲ್ಲಿಯೇ ತಾನಾಯಿತು ತನ್ನ ಮನೆಗೆಲಸವಾಯಿತು (ಅಭ್ಯಾಸ) ಎಂದು ಎಲ್ಲವನ್ನೂ ಮರೆತು ಏನೂ ನಡದೇ ಇಲ್ಲ ಎನ್ನುವಂತೆ ಇರುತ್ತಿದ್ದ. ಮೇಲಿಂದ ಮೇಲೆ ಘಟಿಸುವ ಇಂತಹ ಘಟನೆಗಳಿಂದ ಮಗನ ಮೇಲೆ ದುಷ್ಪರಿಣಾಮ ಬೀರದಿರಲಿ ಅಂತ ಮಗನನ್ನು ತಬ್ಬಿ ಅಳುತ್ತಿದ್ದಳು ಮಂಜುಳಾ.

ಒಂದಿನ, ಮದ್ಯ ಸೇವನೆಯ ದಾಸನಾಗಿ ಹೋಗಿದ್ದ  ಮಂಜುಳಾಳ ಗಂಡ ತನಗೆ ದುಡ್ಡು ಕೊಡು ಎಂದು ಪೀಡಿಸಿದ್ದ. ಮಂಜುಳಾ ಕೊಡುವುದಿಲ್ಲವೆಂದು ಖಡಾ- ಖಂಡಿತಾವಾಗಿ ನುಡಿದಾಗ ದೊಡ್ಡ ಜಗಳವನ್ನೇ ಮಾಡಿದ್ದ. ಇವರು ಕೊಡುವುದಿಲ್ಲವೆಂದು ತಿಳಿದು ತನ್ನ ತಾಯಿಯನ್ನು, ಮಗನನ್ನು ಹೆಂಡತಿಯನ್ನು ನೆಲದ ಮೇಲೆ ಕೆಡವಿ ಕುತ್ತಿಗೆಗೆ ಕೊಡಲಿ ಹಿಡಿದು ನಿಂತು ಎಲ್ಲರ ಮನಸ್ಸಿನ ಮೇಲೆ ಭಯದ ಬರೆಯನ್ನೇ ಎಳೆದುಬಿಟ್ಟಿದ್ದ. ಇಷ್ಟು ದಿನ ವಾದಕ್ಕೆ, ಜಗಳಕ್ಕೆ, ಬೈಗುಳಕ್ಕೆ ಮೀಸಲಾಗಿದ್ದ ಅವನ ವರ್ತನೆ ಕೊಡಲಿ ಹಿಡಿದು ಕೊಲ್ಲುವ ಹಂತಕ್ಕೆ ಹೋಗಿದ್ದು ಸಹಜವಾಗಿಯೇ ಅತ್ತೆ ಸೊಸೆಯಲ್ಲಿ  ಭಯವನ್ನು ಸೃಷ್ಟಿ ಮಾಡಿತ್ತು. ಮಗ ಹದ್ದುಮೀರಿ ತಪ್ಪು ಮಾಡುತ್ತಿರುವನೆಂದು ಮಂಜುಳಾಳ ಅತ್ತೆ ಏನೋ ಒಂದಿಷ್ಟು ತಲೆ ಓಡಿಸಿ ಮಗನ ವಿರುದ್ದ ಆರಕ್ಷರ ಠಾಣೆಯಲ್ಲಿ ದೂರು ನೀಡಿ ಬಂದಿದ್ದಳು. ವಿಷಯ ತಿಳಿದ ಪೊಲೀಸರು ಮಂಜುಳಾಳ ಗಂಡನನ್ನು ಠಾಣೆಗೆ ಎಳೆದುಕೊಂಡು ಹೋಗಿದ್ದರು.

ಗತಿಸಿದ ಕಹಿ ಘಟನೆಯನ್ನೆಲ್ಲ ನೆನೆದು ಒಂಟಿಯಾಗಿದ್ದ ಮಂಜುಳಾ ಸಂಜೆಯ ಕಪ್ಪು ಮೋಡವನ್ನೇ ನೋಡುತ್ತಾ ದುಃಖಿಸುತ್ತಿದ್ದಳು…


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
sharada moleyar
sharada moleyar
11 years ago

nice story

ಮಂಜಿನ ಹನಿ

ಒಂದೊಳ್ಳೆಯ ಪ್ರಯತ್ನ ರುಕ್ಮಿಣಿ. ಬರವಣಿಗೆಯಲ್ಲಿ ಬೆಳೆಯುವ ಸೂಚನೆಯನ್ನೀಯುತ್ತಿದ್ದೀರಿ. ಒಬ್ಬ ಬಡವರ್ಗದ ಹೆಣ್ಣೊಬ್ಬಳ ತೊಳಲಾಟಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೀರಿ. ಮನಕಲಕುವ ಕಥೆಯೊಂದನ್ನು ಓದಿಸಿದ್ದೀರಿ ಅಭಿನಂದನೆಗಳು!
– ಪ್ರಸಾದ್.ಡಿ.ವಿ.

Arpitha
Arpitha
11 years ago

Manakalakuva lekana.

ಸುಮನ್
ಸುಮನ್
11 years ago

ರುಕ್ಮಿಣಿಯವರೆ ಮನಸ್ಸು ಕಲಕುವ ಹಂಗ ಬರೆದೀರಿ. ಇದು ಮಂಜುಳಾಳದಷ್ಟ ಅಲ್ಲಾ ವಾಸ್ತವಿಕವಾಗಿ ಇಂಥಾ ಭಾಳಷ್ಟ ಹೆಣ್ಣುಮಕ್ಕಳು ನಮ್ಮ ನಡುವ ಇದ್ದಾರ. ನಿಮ್ಮ ಕಥೆಯೊಳಗ, ಮಂಜುಳಾ ತನಗ ದಕ್ಕಿದ ಈ ಬದುಕನ್ನ ಯಶಸ್ವಿಯಾಗಿ ನಿಭಾಯಿಸಲಿಕ್ಕೆ ಬೆಳಕಿನತ್ತ ದಿಟ್ಟ ಹೆಜ್ಜೆಯನ್ನ ಹಾಕುವಂಥಾ ಸನ್ನಿವೇಶವನ್ನ ಬಿಂಬಿಸುವ ಪ್ರಯತ್ನವನ್ನ ಮಾಡಿದ್ರ ಕಥಿಗೆ ಇನ್ನು ಮೇರಗು ಬರತಿತ್ತು.
ನಿಮ್ಮ ಬರಹ ಹಿಡಿಸಿತು. ನಿಮ್ಮಿಂದ ಇನ್ನು ಒಳೊಳ್ಳೊಯ ಲೇಖನಗಳ ನಿರೀಕ್ಷೆಯಲ್ಲಿರುವ, ಸುಮನ್ ದೇಸಾಯಿ
ಧನ್ಯವಾದಗಳು.

ಗಂಗಾಧರ ದಿವಟರ

ವ್ಯಸನಗಳಿಗೆ ದಾಸರಾಗಿ, ತಾನು-ತನ್ನವರೆಲ್ಲರನ್ನೂ ಬಾಳ ಸುಳಿಯಲ್ಲಿ ಸಿಲುಕಿಸುವ ವ್ಯಥೆ….
ನಮ್ಮ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ದಿನನಿತ್ಯ ಕಂಡು ಬರುವಂತಹ ಮನಮಿಡಿಯುವಂತಹ ಕಥೆ.

ತುಂಬಾ ಸರಳ ಹಾಗೂ ನೇರ ನಿರೂಪಣೆ….
ಅಭಿನಂದನೆಗಳು

ಪ್ರಶಾ೦ತ ಕಡ್ಯ

ಚೆನ್ನಾಗಿದೆ.

shama
shama
11 years ago

chennagide rukku all the best 🙂

7
0
Would love your thoughts, please comment.x
()
x