“ಪಿಕ್ಸಾರ್ ಅನಿಮೇಷನ್ ಸ್ಟುಡಿಯೊಸ್” ನಿರ್ಮಾಣದಲ್ಲಿ 2009ರಲ್ಲಿ ಬಿಡುಗಡೆಯಾದ ಚಿತ್ರ “ಅಪ್”. ಮತ್ತೆ ಮತ್ತೆ ನೋಡಿದಾಗಲೂ ಅಷ್ಟೇ ರಂಜನೀಯವೆನಿಸುವ ಚಿತ್ರ ಇದು. ಕಾರ್ಲ್ ಮತ್ತು ಎಲ್ಲೀ ಇಬ್ಬರೂ ಬಾಲ್ಯದಿಂದಲೇ ಸಾಹಸಪ್ರಿಯರು, ಪ್ರಕೃತಿಯನ್ನು ಇಷ್ಟಪಡುವವರು. ಎಲ್ಲೀಗೆ ದಕ್ಷಿಣ ಅಮೆರಿಕಾದ ದಟ್ಟ ಕಾಡುಗಳ ನಡುವೆ ಇರುವ “ಪ್ಯಾರಡೈಸ್ ಫಾಲ್ಸ್” ಅನ್ನುವ ಸುಂದರ ಜಲಪಾತದ ಬಳಿ ತನ್ನ ಮನೆ ಇರಬೇಕೆಂಬ ಕನಸು. ಮುಂದೆ ಇವರಿಬ್ಬರೂ ಮದುವೆಯಾಗುತ್ತಾರೆ. ಆದರೆ ಜೀವನ ಪೂರ್ತಿ ಏನೇನೋ ತಾಪತ್ರಯಗಳ ಕಾರಣದಿಂದ ಅಲ್ಲಿಗೆ ಪ್ರವಾಸ ಹೋಗಲು ಆಗುವುದೇ ಇಲ್ಲ. ವಯಸ್ಸಾಗುವ ಹೊತ್ತಿಗೆ ಕಾರ್ಲ್ ಹೇಗಾದರೂ ಎಲ್ಲೀಯನ್ನು ಒಮ್ಮೆ ಅಲ್ಲಿಗೆ ಕರೆದೊಯ್ಯಲು ಪ್ಲಾನ್ ಮಾಡುತ್ತಾನೆ. ಅಷ್ಟರಲ್ಲೇ ಅವಳ ಆರೋಗ್ಯ ಹದಗೆಟ್ಟು ಅವಳು ಸಾಯುತ್ತಾಳೆ. ಅದೇ ವೇಳೆಗೆ ಅವರಿದ್ದ ಮನೆಯನ್ನು ಕಬಳಿಸಲು ಅಲ್ಲಿನ ರಿಯಲ್ ಎಸ್ಟೇಟ್ ಮಂದಿ ಸಂಚು ಮಾಡುತ್ತಿರುತ್ತಾರೆ. ಇದರಿಂದ ಪಾರಾಗಲು, ಹಾಗು ಎಲ್ಲೀಯ ಕನಸನ್ನು ಸಾಕಾರಗೊಳಿಸಲು ಕಾರ್ಲ್ ಒಂದು ನಿರ್ಧಾರಕ್ಕೆ ಬರುತ್ತಾನೆ. ತನ್ನ ಮನೆಯ ಛಾವಣಿಗೆ ಸಾವಿರಾರು ಹೀಲಿಯಂ ತುಂಬಿದ ಬಲೂನುಗಳನ್ನು ಕಟ್ಟಿ, ಅವನ ಮನೆಯನ್ನು “ಏರ್ ಶಿಪ್” ಮಾಡಿಕೊಂಡು ಪ್ಯಾರಡೈಸ್ ಫಾಲ್ಸ್ ಕಡೆಗೆ ಹೊರಟುಬಿಡುತ್ತಾನೆ. ಆದರೆ, ಮನೆಯ ಜಗುಲಿಯ ಮೇಲಿದ್ದ ರಸಲ್ ಎಂಬ ತಲೆಹರಟೆ ಹುಡುಗ ಕೂಡ ಇವನ ಅನಪೇಕ್ಷಿತ ಜೊತೆಗಾರನಾಗುತ್ತಾನೆ. ಅವರು ಪಯಣದಲ್ಲಿ ಎದುರಿಸುವ ಕಷ್ಟಗಳು, ತಮ್ಮ ಗಮ್ಯವನ್ನು ತಲುಪಿದ ಮೇಲೆ ಅನುಭವಿಸುವ ಅಚ್ಚರಿಗಳು ಚಿತ್ರದ ಕಥೆ.
ಚಲನಚಿತ್ರ ದೃಶ್ಯ ಮಾಧ್ಯಮ. ಪುಟಗಟ್ಟಲೆ ವಿವರಿಸಿರಬಹುದಾದ್ದನ್ನು ಒಂದೇ ಒಂದು ಚಿತ್ರಿಕೆಯಿಂದ ಹೇಳಿಬಿಡಬಹುದಾದ ತಾಕತ್ತು ಸಿನಿಮಾಗಿದೆ. “ಅಪ್” ಚಿತ್ರದ ಶುರುವಿನಲ್ಲೇ ಇದರ ಒಂದು ಸುಂದರ ನಿದರ್ಶನ ಕಾಣಬಹುದು. ಕಾರ್ಲ್ ಮತ್ತು ಎಲ್ಲೀ ಮದುವೆಯಾದಾಗಿನಿಂದ ವಯಸ್ಸಾಗುವವರೆಗಿನ ಜೀವನದ ತುಣುಕುಗಳನ್ನು ಒಂದೂ ಮಾತಿಲ್ಲದೆ, ಕೇವಲ ನಾಲ್ಕು ನಿಮಿಷದಲ್ಲಿ ತೋರಿಸಲಾಗಿದೆ. ಹೊಸದಾಗಿ ಬಾಳ್ವೆ ಶುರು ಮಾಡುವುದು, ಅವರ ಜೀವನದಲ್ಲಿ ಬಂದು ಹೋಗುವ ನೋವು, ನಲಿವು, ಸಮಸ್ಯೆ, ಪರಿಹಾರ; ಅವರು ಹೋಗಲೇಬೇಕು ಅಂದುಕೊಂಡಿದ್ದ ದಕ್ಷಿಣ ಅಮೆರಿಕಾದ ಪ್ರವಾಸ, ಹೋಗಲಾಗದಂತೆ ಮಾಡಿದ ಹತ್ತಾರು ಕಾರಣಗಳು, ಹಾಗೆಯೇ ಮುಗಿದು ಹೋಗುವ ಜೀವನ ಇವೆಲ್ಲವನೂ “ವಿಶ್ಯುಯಲೀ” ತೋರಿಸಲಾಗಿದೆ.
ಹಾಗೆಯೇ, ಚಿತ್ರದುದ್ದಕ್ಕೂ ಕಾರ್ಲ್ ಮುಖದ ಆಕಾರವನ್ನು ಗಮನಿಸಿ. ಬೆರಗುಗಣ್ಣುಗಳ ಪುಟ್ಟ ಹುಡುಗನಾಗಿದ್ದಾಗ ಅವನದು ದುಂಡಗಿನ ಮುಖ. ಬರಬರುತ್ತಾ ಅವನ ಮುಖದಲ್ಲಿ ಚೌಕಾಕಾರದ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡುಬರುತ್ತದೆ. ವಯಸ್ಸಾಗುವ ಹೊತ್ತಿಗೆ ಅವನ ಮುಖ ಸಂಪೂರ್ಣವಾಗಿ ಚೌಕಾಕಾರ, ಅವನ ಕನ್ನಡಕವೂ ಅಷ್ಟೇ! ಇದು ಅವನು ಜೀವನದಲ್ಲಿ ಪಟ್ಟಿರುವ ಕಷ್ಟಗಳಿಂದ ಝರ್ಝರಿತನಾಗಿ ಬಳಲಿದ, ಕೋಪಿಷ್ಠ ಮುಖ. ಅವನ ಅನಿರೀಕ್ಷಿತ ಸಹಪ್ರಯಾಣಿಕನಾಗಿ ಬರುವ ಪುಟ್ಟ ಹುಡುಗ ರಸಲ್ ಗೆ ಅದೇ ದುಂಡುಮುಖ! ಅವನು ಕಾರ್ಲ್ ಜೀವನಕ್ಕೆ ಆಶಾವಾದ, ಭರವಸೆಯನ್ನು ಕೊಡುವುದನ್ನು ಈ ಸಣ್ಣ ಡೀಟೇಲ್ ಮೂಲಕ ಕೂಡ ಕಾಣಬಹುದು! ತನ್ನ ಹೆಂಡತಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ಆ “ಮನೆಗೆ” ಗಟ್ಟಿಯಾಗಿ ಅಂಟಿಕೊಂಡು ಕಾರ್ಲ್ ಹೆಣಗಾಡುತ್ತಾನೆ. ಅವನಿಗೆ ತೃಪ್ತಿ ಇಲ್ಲ, ಅವನು ಸದಾ ಅಸುಖಿ. ಕಡೆಯಲ್ಲಿ ಆ ಮನೆ ಅವನ ಕೈತಪ್ಪಿದ ಮೇಲೆ ಕಾರ್ಲ್ ತನ್ನೂರಿಗೆ ವಾಪಸಾಗುತ್ತಾನೆ. ರಸಲ್ ಜೊತೆಗೆ ತನ್ನ ಉಳಿದ ಜೀವನವನ್ನು ಕಳೆಯಲು ನಿರ್ಧರಿಸುತ್ತಾನೆ, ಬದುಕಿನಲ್ಲಿ ಹೊಸ ಅರ್ಥ ಕಂಡುಕೊಳ್ಳುತ್ತಾನೆ. ಬಹಳ ವರ್ಷಗಳಿಂದ ಅನುಭವಿಸಿರದ ನಿರಾಳತೆ ಹೊಂದುತ್ತಾನೆ. ಆ ಕ್ಷಣದಲ್ಲಿ “ಓ ನನ್ನ ಚೇತನ, ಆಗು ನೀ ಅನಿಕೇತನ” ಬಹಳ ನೆನಪಿಗೆ ಬಂತು!
ನಮ್ಮ ದೇಶದಿಂದ ಯಾಕೆ ಒಂದು ಅದ್ಭುತ ಅನ್ನುವಂತಹ “ಅನಿಮೇಷನ್ ಚಿತ್ರ” ಬಂದಿಲ್ಲ ಅಂತ ನನಗೆ ಹಲವು ಸಲ ಬೇಸರವಾಗುತ್ತದೆ. ನಮ್ಮಲ್ಲಿ ಇರುವ ಕಥೆಗಳೇನು ಕಮ್ಮಿಯೇ? ನಮ್ಮ ಪುರಾಣಗಳು, ಜನಪದ ಕಥೆಗಳೇ ಅವೆಷ್ಟು ಚಿತ್ರಗಳಿಗೆ ಸರಕಾಗಬಹುದು. ಹೋಗಲಿ ತಂತ್ರಜ್ಞಾನದ ಮಿತಿಯೇ ಅಥವಾ ಹಣಕಾಸಿನ ಸಮಸ್ಯೆಯೇ ಅಂದರೆ ಅದೂ ಅಲ್ಲ. ತೀರಾ ಕಳಪೆ ಅನ್ನುವಂಥ ಅದ್ಧೂರಿ ಚಿತ್ರಗಳ ಗ್ರಾಫಿಕ್ಸಿಗೋಸ್ಕರ ಕೋಟ್ಯಂತರ ಖರ್ಚು ಮಾಡುವಾಗ, ಒಂದು ಒಳ್ಳೆಯ ಅನಿಮೇಷನ್ ಚಿತ್ರ ತಯಾರಿಸುವುದು ಹಣಕಾಸಿನ ದೃಷ್ಟಿಯಿಂದ ಅಸಾಧ್ಯವೇನಲ್ಲ. ಆದರೆ ತೊಂದರೆ ಇರುವುದು ಚಿತ್ರಕರ್ಮಿಗಳ ಮನಸ್ಥಿತಿಯಲ್ಲಿ. ಮೊದಲನೆಯದಾಗಿ, ಎಷ್ಟು ಜನ “ಅನಿಮೇಷನ್ ಚಿತ್ರ” ತೆಗೆಯುವವರು ದೊಡ್ಡವರೂ ಕೂಡ ಈ ಚಿತ್ರವನ್ನು ಮೆಚ್ಚುವಂತಿರಲಿ ಅಂತ ಯೋಚಿಸಿರುತ್ತಾರೆ? ಅವರ ಪ್ರಕಾರ ಈ ಚಿತ್ರಗಳು ಕೇವಲ ಮಕ್ಕಳಿಗೆ! ಎರಡನೆಯದಾಗಿ, ಮಕ್ಕಳಿಗೆ ಚಿತ್ರ ಮಾಡುತ್ತಿರುವಾಗ ಒಂದಷ್ಟು “ಕ್ಯೂಟ್” ಅನ್ನುವ ಅಂಶಗಳು ಚಿತ್ರದಲ್ಲಿದ್ದಾರೆ ಸಾಕು ಅನ್ನುವ ಅಸಡ್ಡೆಯೂ ಇದೆ. ಮಕ್ಕಳೂ ಅತೀವ ಬುದ್ಧಿವಂತರು, ಅವರನ್ನು ಮೆಚ್ಚಿಸುವುದು ಅಷ್ಟು ಸುಲಭವಲ್ಲ ಅನ್ನುವ ಸರಳ ಸತ್ಯ ಮರೆತಿರುತ್ತಾರೆ. ಕಥೆಯಲ್ಲಿ, ನಿರೂಪಣೆಯಲ್ಲಿ ಹೃದಯವಂತಿಕೆ ಬಹಳ ಮುಖ್ಯ. ಹಾಗಿದ್ದಾಗ ನಿಜಜೀವನದಲ್ಲಿ ಇಲಿಯನ್ನು ನೋಡಿ ಅಸಹ್ಯ ಪಟ್ಟುಕೊಳ್ಳುವವರೂ ಕೂಡ, ಇಲಿಯೊಂದು ಅಡಿಗೆಭಟ್ಟ ಆಗುವ ಕಥೆಯುಳ್ಳ “ರೇಟಟೂಯಿ” ಅನ್ನು ಅಷ್ಟೊಂದು ಮೆಚ್ಚಿಕೊಳ್ಳುತ್ತೀವಿ. ಆದರೆ, ಟೋಪಿ ಹಾಕಿಕೊಂಡು ಕ್ರಿಕೆಟ್ ಬ್ಯಾಟ್ ಹಿಡಿದ ಗಣಪತಿ ಕೃತಕ ಅನ್ನಿಸಿಬಿಡುತ್ತದೆ. ಮಕ್ಕಳಲ್ಲಿರುವ ಬುದ್ಧಿವಂತಿಕೆಯನ್ನೂ, ದೊಡ್ದವರಲ್ಲಿರುವ “ಪುಟ್ಟ ಮಗು”ವನ್ನೂ ಗೌರವಿಸುವ ಚಿತ್ರಕರ್ಮಿಗಳು ಬೇಗ ಬರಲಿ ಅನ್ನುವುದು ನಮ್ಮ ಆಶಯ. ಅಲ್ಲಿಯವರೆಗೂ “ಅಪ್” ಅಂತಹ ಚಿತ್ರಗಳೇ ನಮಗೆ ಆಸರೆ!
*****
houdu…animation ಎಂದಾಕ್ಷಣ ಬಜೆಟ್ ಎಂಬ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ ನಮ್ಮವರು. ಅದೂ ನಿಜವೂ ಹೌದು. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಸ್ಕ್ರಿಪ್ಟ್ ಅನ್ನುವುದನ್ನು ನೆನಪಿಗೆ ತಂದುಕೊಳ್ಳುವುದಿಲ್ಲ. ಮುಂದೆ ನಮ್ಮದೇ ಅದ್ಭುತ ಅನಿಮೇಷನ್ ಬರಬಹುದಾ..?
ಒಳ್ಳೆಯ ಲೇಖನ..
ತುಂಬಾ ಒಳ್ಳೆಯ ಬರಹ. ಕನ್ನಡದಲ್ಲಿ ಮಕ್ಕಳಿಗಾಗಿ ಮಾಡಿರುವ ಪದ್ಯಗಳ ಅನಿಮೇಶನ್ ಕೂಡ ಅಷ್ಟು ಒಳ್ಳೆಯ ಗುಣಮಟ್ಟದಲ್ಲಿಲ್ಲ. ನಮ್ಮಲ್ಲೆ ಇರುವ ಸರಕುಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಸಿಕೊಳ್ಳಬೇಕಾದ ಮನಸ್ಥಿತಿ ಮತ್ತು ಪ್ರಯತ್ನ ಬೇಕಷ್ಟೆ.