80 ವರ್ಷಗಳ ಹಿಂದೆ ಅಳುತ್ತಲೇ ಭೂಮಿಗೆ ಬಂದ ಮಗುವಿಗೆ ತಿಳುವಳಿಕೆ ಬರುವ ಮೊದಲೇ ತನ್ನ ತಂದೆಯನ್ನು ಕಳೆದುಕೊಂಡಿತ್ತು. ತಂದೆಯನ್ನು ನೋಡಿದ ನೆನಪು ಅದಕ್ಕಿರಲಿಲ್ಲ. ಕಡುಬಡತನದ ಆ ಮನೆಯಲ್ಲಿ ಮನೆ ತುಂಬಾ ಮಕ್ಕಳು ಎಲ್ಲರೂ ಸೇರಿದರೆ ಬರೋಬ್ಬರಿ 8 ಮಕ್ಕಳು ಹಾಗೂ ಎರಡು ವಿಧವೆಯರು! ಊರಲ್ಲಿ ಶಾಲೆಯಿದೆ, ಓದಲಿಕ್ಕೆ ಕಷ್ಟವಿದೆ. ಅಂತೂ-ಇಂತೂ ಕಷ್ಟಪಟ್ಟು ಆ ಮಗು 7ನೇ ತರಗತಿಯವರೆಗೆ ಕಲಿಯಿತು. ಹೆಚ್ಚು ಕನ್ನಡ ಹಾಗೂ ಸ್ವಲ್ಪ ಇಂಗ್ಲೀಷು. ಮತ್ತೆ ಬೇಸಾಯಕ್ಕಿಳಿದ ಆ ಯುವಕ ನಿರಂತರವಾಗಿ ದುಡಿಯುತ್ತಲೇ ಇದ್ದ. ಮಧ್ಯದಲ್ಲಿ ಮದುವೆ-ಸಂಸಾರ ಹಾಗೂ ನಿರಂತರ ದುಡಿಮೆ. ಮೂರಾಳು ಮಾಡುವ ಕೆಲಸ ಒಬ್ಬನೇ ಮಾಡುತ್ತಿದ್ದರೂ ಇಡೀ ಕುಟುಂಬವನ್ನು ಸಲಹುವುದು ಕಷ್ಟವಾಗುತ್ತಿತ್ತು. ಬೆಳೆದ ಬತ್ತಕ್ಕೆ ಯಾವಾಗಲೂ ಲಾಭ ಎಂಬ ಎರಡಕ್ಷರ ಸಿಗಲೇ ಇಲ್ಲ. ಇದ್ದ-ಬದ್ದ ಅಡಿಕೆ ಫಸಲು ಹಿಂದಿನ ಸಾಲಕ್ಕೆ ಜಮಾ ಆಗುತ್ತಿತ್ತು. ಜೀವನದಲ್ಲಿ ಸಂತೋಷವೆನ್ನುವುದು ಕಂಡದ್ದು, ಮದುವೆಯಲ್ಲಿ, ಮಕ್ಕಳಾದಾಗ ಹಾಗೂ ಅಲ್ಲೊಂದು-ಇಲ್ಲೊಂದು ಸಿನೆಮಾ ನೋಡಿದಾಗ, ಪುಸ್ತಕ ಓದಿದಾಗ, ಅದಕ್ಕಿಂತ ಹೆಚ್ಚಾಗಿ ಓರಗೆಯ ಸ್ನೇಹಿತರ ಸಂಗದಲ್ಲಿ ಅದು ಬಿಟ್ಟರೆ ಬಂಧು-ಬಳಗ, ಜೊತೆಗೆ ಜಾತಿಯನ್ನೂ ಮೀರಿ ಚಿಕ್ಕ ಮಕ್ಕಳನ್ನು ಕಂಡಾಗ ಮಾತ್ರ. ಪ್ರತಿದಿನ ಬೆಳಗ್ಗೆ ಅಷ್ಟೊತ್ತಿಗೆ ರೇಡಿಯೋ ಹಾಕಲೇ ಬೇಕು. ಸರಿಯಾಗಿ 8 ಗಂಟೆಗೆ ಸಿಲೋನ್ ಸ್ಟೇಷನ್‍ನಲ್ಲಿ ಬರುವ ಸೈಗಲ್ ಹಾಡು ಕೇಳಲೇ ಬೇಕು. ಹಿಂದಿಯ ಮಹಮದ್ ರಫಿ, ಲತಾ ಹಾಗೂ ಪಿ.ಬಿ.ಶ್ರೀನಿವಾಸ್, ಎಸ್ ಜಾನಕಿಯರ ಹಾಡು ಬಂದಾಗ ಕಣ್ಣು ಮುಚ್ಚಿ ತನ್ಮಯನಾಗಿ ಸಂಗೀತವನ್ನು ಆಸ್ವಾದಿಸುತ್ತಾ, ಭಾವುಕನಾಗುತ್ತಿದ್ದ.
ಹುಟ್ಟು ಆಕಸ್ಮಿಕ-ಸಾವು ಅನಿವಾರ್ಯ. ಯಾರೂ ಸಾವಿಗಿಂತ ದೊಡ್ಡವರಲ್ಲ. ಹುಟ್ಟಿದವ ಹೇಗೆ ಹುಟ್ಟಿದ ಅಥವಾ ಹೇಗೆ ಸತ್ತ ಎನ್ನುವುದು ಮುಖ್ಯವಲ್ಲ. ಇದರ ಮಧ್ಯದ ಅವಧಿಯಿದೆಯಲ್ಲ, ಬದುಕು, ಇದನ್ನು ಹೇಗೆ ಬದುಕಿದ ಅನ್ನುವುದು ಹೆಚ್ಚು ಮುಖ್ಯವಾಗುತ್ತದೆ. ಕಡುಬಡತನದಲ್ಲೂ ಮಾನವೀಯತೆಯ ಮೇರು ಮೆರೆದವರೂ ಇದ್ದಾರೆ ಹಾಗೆಯೇ ಬಾಯಲ್ಲಿ ಬಂಗಾರದ ಚಮಚವನ್ನೇ ಇಟ್ಟುಕೊಂಡು ಹುಟ್ಟಿದ ಕೃಪಣರೂ, ದೂರ್ತರೂ ಎಲ್ಲಾ ಕಾಲದಲ್ಲೂ ಸಿಗುತ್ತಾರೆ. ಯಾರನ್ನೋ ಅತಿಯಾಗಿ ಹೊಗಳುವುದೋ ಅಥವಾ ಇನ್ಯಾರನ್ನೋ ಅತಿಯಾಗಿ ದೂರುವುದು ಈ ಲೇಖನದ ಉದ್ಧೇಶ ಖಂಡಿತಾ ಅಲ್ಲ. ಕಣ್ಣಾರೆ ಕಂಡ ಕೆಲವು ಘಟನೆಗಳು ಹಾಗೂ ಅಗಲಿದ ದು:ಖವನ್ನು ಹೊರಹಾಕಿ ಮರೆಯುವ ಸ್ವಾರ್ಥಕ್ಕಷ್ಟೇ ಲೇಖನ ಸೀಮಿತ.
ಭಾರತದಲ್ಲಿ ಪ್ರತಿವರ್ಷ ಕೋಟಿ ಜನ ಸಾಯುತ್ತಾರೆ ಎಂದಿಟ್ಟುಕೊಳ್ಳೋಣ. ಇದರಲ್ಲಿ ವಿವಿಧ ಧರ್ಮಗಳ, ಜಾತಿಯ ಜನರು ಇರುತ್ತಾರೆ. ಆಯಾ ಧಾರ್ಮಿಕ ಸಂಪ್ರದಾಯದಂತೆ, ಕೆಲವರು ಶವವನ್ನು ಹುಗಿಯುತ್ತಾರೆ, ಕೆಲವರು ಸುಡುತ್ತಾರೆ, ಪಾರ್ಸಿಯಂತಹ ಅಪರೂಪದ ಜನಾಂಗದವರು ಶವವನ್ನು ಹದ್ದುಗಳಿಗೆ ಮೀಸಲಿಡುತ್ತಾರೆ. ಭಾರತದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾದ ಹಿಂದುಗಳ ಹೆಚ್ಚಿನ ಜನರಲ್ಲಿ ಶವವನ್ನು ಸುಡುವ ಪರಿಪಾಠವಿದೆ. ಒಂದು ಶವವನ್ನು ಸುಡಲು ಆಯಾ ದೇಹದ ತೂಕವನ್ನು ಆಧರಸಿ ಸುಮಾರು 600 ಕೆಜಿಯಿಂದ 800 ಕೆಜಿಯಷ್ಟು ಒಣ ಕಟ್ಟಿಗೆ ಬೇಕಾಗುತ್ತದೆ. ಹೀಗೆ ಶವವನ್ನು ಸುಡುವುದರಿಂದ ಬರುವ ಇಂಗಾಲಾಮ್ಲ ವಾತಾವರಣಕ್ಕೆ ಪ್ರತಿವರ್ಷ ಸೇರುವ ಪ್ರಮಾಣ 8 ಮಿಲಿಯನ್ನು ಟನ್ ಎಂದು “ಮೋಕ್ಷ” ಎಂಬ ಸರ್ಕಾರಿಯೇತರ ಸಂಸ್ಥೆಯ ಸಮೀಕ್ಷೆ ಹೇಳುತ್ತದೆ. ಹಳ್ಳಿಗಾಡಿನ ಕತೆ ಹಾಗೂ ಪಟ್ಟಣದ ಕತೆ ಕೊಂಚ ಬೇರೆಯಿದೆ. ರೈತಾಪಿ ವರ್ಗ ವಾಸಿಸುವ ಹಳ್ಳಿಗಾಡಿನ ಊರಿನಲ್ಲಿ ಯಾರೋ ಒಬ್ಬರು ಸತ್ತರೆ, ಹತ್ತಿರದ ಕಾಡಿನಲ್ಲಿ ಒಣಗಿ ನಿಂತ ಮರವನ್ನು ಕೊಯ್ದು ಸುಡುತ್ತಾರೆ. ಪೇಟೆಯಲ್ಲಿ ಹಾಗಲ್ಲ. ಪೇಟೆಯಲ್ಲಿ ಮರದ ಲಭ್ಯತೆ ಕಡಿಮೆ. ಮಲೆನಾಡಿನಂತಹ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಕಟ್ಟಿಗೆ ಡಿಪೋದಲ್ಲಿ ಸುಡುವ ಕಟ್ಟಿಗೆ ಲಭ್ಯವಿರುತ್ತದೆ. ಬೆಂಗಳೂರು, ಮುಂಬಯಿ ಅಥವಾ ದಿಲ್ಲಿಯಂತಹ ಪ್ರದೇಶದಲ್ಲಿ ಕಟ್ಟಿಗೆ ಸಿಗುವುದು ಕಷ್ಟ ಸಾಧ್ಯ. ದಿನಕ್ಕೆ ನೂರಾರು ಜನ ಸಾಯುವ ಮಹಾನಗರಗಳಲ್ಲಿ ಶವ ಸುಡುವುದಕ್ಕೆ ಕಟ್ಟಿಗೆ ಪೂರೈಸುವ ಮಾಫಿಯಾಗಳೇ ಇವೆ. ಕಾಶಿ-ಹರಿದ್ವಾರದಂತಹ ಪುಣ್ಯಸ್ಥಳಗಳಲ್ಲಿ ಕಟ್ಟಿಗೆಯ ಅಭಾವ ಎಷ್ಟಿದೆಯೆಂದರೆ ಶವವನ್ನು ಪೂರ್ತಿಯಾಗಿ ಸುಡುವುದೇ ಇಲ್ಲ. ಅರೆ-ಬರೆ ಬೆಂದ ಶವವನ್ನು ಗಂಗಾಮಾತೆಯ ಒಡಲಿಗೆ ಹಾಕಿ ಪಾಪ ಕಟ್ಟಿಕೊಳ್ಳುತ್ತಾರೆ. ಸರಿ ಪಡಿಸಲಾಗದಷ್ಟು ಗಂಗೆ ಮಲಿನವಾಗಿದ್ದು ಇದೇ ಕಾರಣಕ್ಕೆ.
ಮೇಲೆ ಹೇಳಿದ ಮೋಕ್ಷ ಸಂಸ್ಥೆಯು ಅತಿ ಕಡಿಮೆ ಕಟ್ಟಿಗೆಯನ್ನು ಬಳಸಿ, ಶವವನ್ನು ಸುಡುವ ಅಸ್ತ್ರ ಒಲೆಗಳನ್ನು 1992ರಿಂದ ತಯಾರಿಸುತ್ತಿದೆ. ದೇಶದ ಎಲ್ಲಾ ಪ್ರಮುಖ ಪಟ್ಟಣಗಳಲ್ಲೂ ಈ ಅಸ್ತ್ರ ಒಲೆಗಳನ್ನು ನಿರ್ಮಿಸಿ ಕಟ್ಟಿಗೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಸಂಸ್ಥೆಯ ಉದ್ಧೇಶ. ಇಂತಹ ಒಳ್ಳೆಯ ಉದ್ಧೇಶಗಳಿಗೂ ಅಡೆತಡೆಗಳು ಎದುರಾಗುತ್ತವೆ. ಇದೇ ಕಟ್ಟಿಗೆ ಮಾಫಿಯಾದವರು ಅಸ್ತ್ರ ಒಲೆ ನಿರ್ಮಿಸದಂತೆ ತಡೆ ಒಡ್ಡುವ ಪ್ರಯತ್ನಗಳನ್ನು ಮಾಡುತ್ತವೆ. ಹೆಚ್ಚು-ಹೆಚ್ಚು ಶವ, ಹೆಚ್ಚು-ಹೆಚ್ಚು ಕಟ್ಟಿಗೆ ಹಾಗೂ ಹೆಚ್ಚು-ಹೆಚ್ಚು ಲಾಭ ಈ ಉದ್ಧೇಶ ಹೊಂದಿದ ಕಟ್ಟಿಗೆ ಮಾಫಿಯಾಗಳು ಮೋಕ್ಷ ಸಂಸ್ಥೆಯ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ ಉದಾಹರಣೆಗಳಿವೆ.
ಮೂಲತ: ಅತ್ಯಂತ ಧಾರ್ಮಿಕ ಮನಸ್ಸಿನ ಅಪ್ಪ, ಅತ್ಯಂತ ಕಷ್ಟ ಜೀವಿ. ಸ್ವತ: ಎತ್ತು ಕಟ್ಟಿ ನೇಗಿಲು ಹಿಡಿದ ನೇಗಿಲ ಯೋಗಿ, ಕೃಷಿಯ ಎಲ್ಲಾ ಕ್ಷೇತ್ರಗಳಲ್ಲೂ ಪಳಗಿದವ. ಹಸಿರು ಕ್ರಾಂತಿಗೂ ಮುಂಚೆ ತೀವ್ರ ಆಹಾರದ ಅಭಾವವಾದಾಗ ಕೆರೆ ಜಡ್ಡಿನಲ್ಲಿ, ಖುಷ್ಕಿಯಲ್ಲಿ ಭತ್ತ ಬೆಳೆದವ. ಹೈನುಗಾರಿಕೆ ಇತ್ಯಾದಿ ಯಾವ ಕೆಲಸ ಬರುವುದಿಲ್ಲ ಎಂಬತ್ತಿಲ್ಲ. ಕಬ್ಬು ಬೆಳೆದು ಬೆಲ್ಲ ಮಾಡುತ್ತಿದ್ದ. ಯಾವುದೇ ಕೆಲಸ ಮಾಡುವ ಅದಮ್ಯ ಉತ್ಸಾಹ ಅವನಲ್ಲಿತ್ತು. ತನಗಿಂತ ಕಿರಿಯರ ಜೊತೆ ಬೆರೆಯುತ್ತಿದ್ದ. ಅವರ ಜೊತೆ ಸೈಕಲ್ ಹೊಡೆದುಕೊಂಡು ಜೋಗ-ಕಾರ್ಗಲ್ ಸುತ್ತಿ ಬರುತ್ತಿದ್ದ. ಊರಿನ ಓಟದಲ್ಲಿ ಭಾಗವಹಿಸುತ್ತಿದ್ದ. ಅಡಿಕೆ-ತೆಂಗಿನ ಮರ ಹತ್ತುವುದೂ ಗೊತ್ತು. ಬಾವಿ ಇಳಿಯುವುದು ಗೊತ್ತು. ಅಪ್ರತಿಮ ಧೈರ್ಯಸ್ಥನಾಗಿದ್ದ. ಒಂದು ಬ್ಯಾಟರಿ ಹಿಡಿದು ಹೊರಟರೆ, ಸರಿ ರಾತ್ರಿಯಾದರೂ ಸೈ ಬಾರದ ಎಮ್ಮೆಯನ್ನೋ ದನವನ್ನೋ ಹುಡುಕಿಕೊಂಡೇ ಬರುತ್ತಿದ್ದ. ಇಷ್ಟೆಲ್ಲಾ ಸಾಹಸಿಯಾಗಿದ್ದರೂ, ಮನಸ್ಸು ಮಾತ್ರ ಮಗುವಿನಂತಿತ್ತು. ಊರಿಗೆಲ್ಲಾ ಕೃಷ್ಣಣ್ಣನಾಗಿದ್ದವ, ಬೆಳ್ಳಂಬೆಳಗ್ಗೆ ಹೂ ಕೊಯ್ಯುವಾಗ, ರಸ್ತೆಯಲ್ಲಿ ಕೆಲಸಕ್ಕೆ ಹೋಗುವ ಜಟ್ಟನೋ, ನಾಗನೋ ಕಂಡರೆ ಸಾಕು. ಕಡಲೆಗಾತ್ರದ ಕಲ್ಲನ್ನು ಅವರ ಮೇಲೆಸೆದು, ಏನೂ ಗೊತ್ತಿಲ್ಲದ ಹಾಗೆ ಹೂ ಕೊಯ್ಯುತ್ತಿದ್ದ. ಈ ಕೃಷ್ಣಣಯ್ಯಗೆ ಬೆಳಗ್ಗೆ ಬೇರೆ ಕೆಲ್ಸ ಇಲ್ಲ, ಕಲ್ಲಗೆ ಹೊಡಿತಾರೆ ಎಂದು ಹುಸಿಕೋಪ ತೋರಿದವರ ಮೇಲೆ ಬಾಯ್ತೆರೆದು ನಗುತ್ತಿದ್ದ. ಹೀಗೆ ತನ್ನ ಪ್ರತಿದಿನದ ಪ್ರಾರಂಭವನ್ನು ಖುಷಿಯಿಂದಲೇ ಪ್ರಾರಂಭಿಸಬೇಕು ಎಂಬುದನ್ನು ಅನುಭವದಿಂದ ತಿಳಿದುಕೊಂಡಿದ್ದನೇನೋ?
ಈಗೊಂದು ಇಪ್ಪತ್ತು ವರ್ಷದ ಹಿಂದೆ ಕೆರೆಯಲ್ಲಿ ಅಂತರಗಂಗೆ ಮುಚ್ಚಿಕೊಂಡು ಜಲಚರಗಳಿಗೆ ನೀರಿನ ಅಭಾವವಾಗುಷ್ಟಾಗಿತ್ತು. ನಾವೆಲ್ಲಾ ಸೇರಿ ಕೆರೆಜಂಡು ತೆಗೆಯುವ ಕಾಯಕದಲ್ಲಿ ಇಳಿದೆವು. ಇಂತಹ ಕೆಲಸದಲ್ಲಿ ನಮಗೆ ಉತ್ಸಾಹ ಮಾತ್ರ ಇತ್ತು, ಅನುಭವ ಇರಲಿಲ್ಲ. ಪೂಜೆ ಮುಗಿಸಿ ಹತ್ತು ಗಂಟೆಗೆ ಕೆರೆಯ ಹತ್ತಿರ ಬಂದವ. ಜಂಡು ತೆಗೆಯುವ ಇಂಜಿನಿಯರಿಂಗ್ ಹೇಳಿಕೊಟ್ಟಿದ್ದಲ್ಲದೆ ಸ್ವತ: ಕೆಲಸಕ್ಕೆ ನಿಂತ. ಕೆರೆಜಂಡು ಪೂರ್ತವಾಗಿ ತೆಗೆದ ಮೇಲೆಯೇ ವಿರಮಿಸಿದ್ದು. ಊರಲ್ಲಿ ಯಾರೇ ಸತ್ತರೂ, ಅಡಿಕೆ ದಬ್ಬೆಯ ಚಟ್ಟ ಕಟ್ಟುವುದು ಅಪ್ಪನೇ ಆಗಿತ್ತು. ಶವದ ಸೈಜಿನ್ನು ಕಣ್ಣಿನಲ್ಲಿಯೇ ಅಂದಾಜು ಹಾಕಿ, ಅತ್ತಿತ್ತ ಜಾರದಂತೆ ಕವೆ ಕೊಟ್ಟು ಚಟ್ಟ ನಿರ್ಮಿಸುವ ಕಲೆಯೂ ಕೃಷ್ಣಣ್ಣದೇ ಆಗಿತ್ತು.
ಇಂತಿಪ್ಪ ಕೃಷ್ಣಣ್ಣ 75 ವರ್ಷದವರೆಗೂ ಯಾವುದೇ ಆಧುನಿಕ ಕಾಯಿಲೆಗಳಿಲ್ಲದೇ ಅರಾಂ ಆಗಿಯೇ ಇದ್ದ. ನೋ ಬಿಪಿ, ನೋ ಶುಗರ್. ಅದೊಂದು ದಿನ ಸ್ವಲ್ಪ ಸುಸ್ತು, ಎದೆನೋವು ಎಂದ. ಫಿಜಿಶಿಯನ್ ಹೃದಯ ತೊಂದರೆ ಎಂದರೆ. ಶಿವಮೊಗ್ಗ, ಬೆಂಗಳೂರು ಎಲ್ಲಾ ಆಯಿತು. ವಯಸ್ಸಿನ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡುವುದು ಅಪಾಯಕಾರಿ ಎಂಬ ಅಭಿಪ್ರಾಯ ಎಲ್ಲಾ ಕಡೆಯಿಂದ ಕೇಳಿಬಂತು. ಸರಿ, ಮಾತ್ರೆ-ಔಷಧಗಳಿಂದಲೇ ಮ್ಯಾನೇಜ್ ಮಾಡಿ ಎಂದರು. ಅದರಂತೆ ಮನೆಯಲ್ಲೇ ಚಿಕಿತ್ಸೆ ಮುಂದುವರೆಯಿತು. ಈಗ ಅವರಿಗೆ ಸಮಯ ಕಳೆಯುವದೇ ಕಷ್ಟ. ಮೊದಲಿನಿಂದಲೂ ಪುಸ್ತಕ ಓದುವ ಹವ್ಯಾಸ ಇತ್ತು. ಈ ವಯಸ್ಸಿನಲ್ಲೂ ಸಣ್ಣ ಅಕ್ಷರದ ಕಸ್ತೂರಿ ಮಾಸ ಪತ್ರಿಕೆಯನ್ನು ಒಂದಿಂಚೂ ಬಿಡದೇ ಓದುತ್ತಿದ್ದರು. ಆದರೆ ಅವರ ಓದುವ ರಾಕ್ಷಸ ಹಸಿವಿನ ಮುಂದೆ ನನ್ನ ಪುಸ್ತಕ ಭಂಡಾರ ವಾರದಲ್ಲೇ ಖಾಲಿ. ದಿನ ಬೆಳಗಾದರೆ ಪುಸ್ತಕ ತಂದು ಕೊಡು ಎಂದು ವರಾತ ತೆಗೆದರು. ಇದಕ್ಕಾಗಿಯೇ ಲೈಬ್ರರಿ ಸದಸ್ಯತ್ವ ಪಡೆಯಲಾಯಿತು. ಹೀಗೆ ಒಂದು ದಿನ ಲೋಕಾಭಿರಾಮ ಮಾತನಾಡುವಾಗ “ದೇಹದಾನ”ದ ಮಹತ್ವ ವಿವರಿಸಿದೆ. ಮರಣ ಹೊಂದಿದ ಮೇಲೂ ಉಪಕಾರ ಮಾಡುವ ಹೊಸ ದಾರಿಯಿದು. ನಾನಂತೂ ದೇಹದಾನ ಮಾಡಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದು ಅವರ ಮನಕ್ಕೆ ನಾಟಿತು. ಸರಿ ನಾನೂ ದೇಹದಾನ ಮಾಡಬಹುದೇ? ಎಂದರು. ಅತ್ಯಂತ ಧಾರ್ಮಿಕ ಮನ:ಸ್ಥಿತಿಯ ನಿನಗೆ ನಾನೇನು ಒತ್ತಾಯ ಮಾಡುವುದಿಲ್ಲ. ನೀನು ಸಂಪೂರ್ಣ ಒಪ್ಪಿದರೆ, ಅದಕ್ಕೆ ಬೇಕಾದ ಏರ್ಪಾಡು ಮಾಡುತ್ತೇನೆ ಎಂದೆ. ಮಡದಿಯನ್ನು, ಮಕ್ಕಳನ್ನು ಕೇಳಿ, ಕೆಲಭಾಗ ಧಾರ್ಮಿಕವಾಗಿಯೂ ಯೋಚನೆ ಮಾಡಿ ಆಯ್ತು ಎಂದರು.
ಕಳೆದ ಒಂದು ತಿಂಗಳಿಂದ ಅವರ ಆರೋಗ್ಯದ ಸ್ಥಿತಿ ನಿಧಾನವಾಗಿ ಬಿಗಡಾಯಿಸುತ್ತಿತ್ತು. ಎದ್ದು ಹೋಗಲು ಹಿಂದೇಟು ಹಾಕುತ್ತಿದ್ದರು. ಮಧ್ಯೆ ಶ್ವಾಸಕೋಶದ ಸೋಂಕು ಆಗಿ ಮತ್ತೊಮ್ಮೆ ಶಿವಮೊಗ್ಗ ಕಂಡಾಯಿತು. ಮೂರು ದಿನಕ್ಕೊಮ್ಮೆ ಸ್ನಾನ. ಕಡೆ-ಕಡೆಗೆ ಅವರಿಗೆ ಪುಸ್ತಕ ಓದುವುದೂ ಸಾಧ್ಯವಾಗಲಿಲ್ಲ. ಅವರ ನೆಚ್ಚಿನ-ಮೆಚ್ಚಿನ ಲೇಖಕರೊಬ್ಬರ ಪುಸ್ತಕವನ್ನು ಅದೇಗೋ ಮಾಡಿ ತಂದೆ. ಒಂದೆರೆಡು ಪುಟ ಓದಲಷ್ಟೇ ಸಾಧ್ಯವಾಯಿತು. ವೈದ್ಯರ ಪ್ರಕಾರ ತೀರಾ ಮಲಗಿದಲ್ಲೇ ಮಲಗಿದ್ದರೆ, ಅಥವಾ ಕುಳಿತಲ್ಲೇ ಕುಳಿತಿದ್ದರೆ, ಅದು ಅಪಾಯ. ಅದಕ್ಕಾಗಿ ಒಂದಿಷ್ಟಾದರೂ ಚಟುವಟಿಕೆ ಬೇಕು. ಹೃದಯ ತನ್ನ ಕ್ಷಮತೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋದಂತೆ, ದೇಹದ ಇತರ ಭಾಗಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಇದನ್ನು ಹೇಳಿದ ಮೇಲೆ ದಿನಕ್ಕೆ ಮೂರು ಬಾರಿ ನಡೆಸಲು ಶುರು ಮಾಡಿದೆವು. ಇದೇ ಹೊತ್ತಿನಲ್ಲಿ ನಮ್ಮ ಹತ್ತಿರದ ಸಂಬಂಧಿಕರಿಬ್ಬರು ತೀರಿಕೊಂಡರು. ಅವರಲ್ಲಿ ಒಬ್ಬರು ಇನ್ನೂ ಮಧ್ಯವಯಸ್ಕರಾಗಿದ್ದರು. ಇನ್ನೊಬ್ಬ ಅವರ ತಂಗಿಯ ಗಂಡ. ಇದೆಲ್ಲಾ ಯೋಚನೆಗಳಿಂದ ಜರ್ಝರಿತರಾದರು. ಮೊನ್ನೆ ಸೋಮವಾರ ಅಂದರೆ ದಿನಾಂಕ:28/11/2016ರಂದು ಮಧ್ಯಾಹ್ನ 12 ಗಂಟೆಗೆ ಕರೆ ಬಂತು. ತುರ್ತಾಗಿ ಬಾ ಎಂದರು. ಮನೆಗೆ ಹೋಗಿ ಎದೆ-ಬೆನ್ನು ತಿಕ್ಕಿ-ತೀಡಿ ಏನು ಎಂದು ವಿಚಾರಿಸಿದೆ. “ದೇಹದಾನ”ದ ಪೇಪರ್‍ಗಳನ್ನು ತಯಾರಿಟ್ಟುಕೋ ಎಂದರು. ಈಗ್ಯಾಕೆ ಅದರ ಮಾತು! ಎಂದೆ.
ಮಾರನೇ ದಿನ ಮಂಗಳವಾರ 29/11/2016ರಂದು ಇಡೀ ಚೆನ್ನಾಗಿದ್ದರು. ತಿಂಡಿ-ಊಟ ಎಲ್ಲಾ ಆಯಿತು. ಮೂರ್ನಾಲ್ಕು ಬಾರಿ ಜಗಲಿಯ ಮೇಲೆ ನಡೆದರು. ವಾಕರ್ ಹಿಡಿದುಕೊಂಡು ನಡೆಯುತ್ತೇನೆ, ವಾಕರ್ ತೆಗೆದುಕೊಂಡು ಬಾ ಎಂದರು. ರಾತ್ರಿಯೂ ಚೆನ್ನಾಗಿಯೇ ಊಟ ಮಾಡಿದರು. ನಾನೂ ಊಟ ಮುಗಿಸಿದೆ. ನಾಲ್ಕು ಹೆಜ್ಜೆ ನಡೆಯೋಣ ಎಂದೆ. ಮೊದಲು ಆಗುವುದಿಲ್ಲ ಎಂದರು. ನೋಡು ನೀನು ಚೆನ್ನಾಗಿರಬೇಕು ಎಂದರೆ ನಡಯಲೇ ಬೇಕು. ಹೆಚ್ಚು ಬೇಡ, ಜೊತೆಗೆ ನಾನಿದ್ದೇನೆ ಎಂದೆ. ನನ್ನ ಒತ್ತಾಯಕ್ಕೋ ಅಥವಾ ಛಲಕ್ಕೋ ಗೊತ್ತಿಲ್ಲ. ಬರೇ ನಾಲ್ಕು ಹೆಜ್ಜೆ ನಡೆದು ಬಂದು ಮಂಚದ ಮೇಲೆ ಕುಳಿತರು. ಮುಖ ಪೇಲವವಾದಂತಾಯಿತು. ಸ್ವಲ್ಪ ಜೊಲ್ಲು ಸುರಿಯಿತು. ಮಡದಿ, ಮಕ್ಕಳನ್ನು ಕಣ್ಣಲ್ಲಿ ತುಂಬಿಕೊಂಡರು. ಏನೋ ಹೇಳುವ ಪ್ರಯತ್ನ ಕೈಗೂಡಲಿಲ್ಲ. ಬಾಯಿಂದ ಹೊರಬಂದ ಶಬ್ಧ ಟೇ. .ಟೇ.. ಟೇ…!! ಅಷ್ಟೇ!!! ಆಗ ಸಮಯ ಸರಿಯಾಗಿ 9.53 ಆಗಿತ್ತು. ಮೊನ್ನೆಯಿಂದ ರೇಡಿಯೋದಲ್ಲಿ ಸಂಗೀತವಿಲ್ಲ. ಬಹುಷ: ಅದೂ ಶೋಕಾಚರಣೆಯಲ್ಲಿರಬೇಕು. ಅದೆಷ್ಟೋ ಮೃತರಿಗೆ ಚಟ್ಟ ಕಟ್ಟಿ ಮಸಣ ಸೇರಿಸಿದ ಅಪ್ಪ, ತಾನು ಮಾತ್ರ ಚಟ್ಟ ಹತ್ತಿ ಮಸಣಕ್ಕೆ ಹೋಗಲೇ ಇಲ್ಲ. ತನ್ನ ಕಣ್ಣು ಮತ್ತು ದೇಹ ದಾನ ಮಾಡಿದ. ಇತರರಿಗೆ ಮಾದರಿಯಾದ.
ಬರಹ ಆಪ್ತವಾಗಿದೆ ಸರ್, ನನ್ನ ಅಪ್ಪನನ್ನು ನೆನಪಿಸಿತು.ಕಣ್ಣು ತೋಯಿಸಿತು