ಅಪ್ಪ: ರಾಜುಗೌಡ ನಾಗಮಂಗಲ

rajugowda-nagamangala

ಅಪ್ಪಂದಿರ ದಿನ ಮುಗಿದೇ ಹೋಯ್ತು. ಇನ್ನೂ ಮುಂದಿನ ವರ್ಷವೇ ಅಪ್ಪನನ್ನ ಹಗಲಿಂದ ಇರುಳಿಬ್ಬಾಗವಾಗುವವರೆಗೂ ತಮ್ತಮ್ಮ ಹೆಗಲಿಗೆ ಕಟ್ಟಿಕೊಂಡು ಹೊಗಳುವುದು, ಹಾಡುವುದು ಕವಿತೆ ಬರೆಯುವುದು ಅಲ್ಲೋ ಇಲ್ಲೋ ಓದಿದ ಆದರ್ಶ ಅಪ್ಪಂದಿರ ಬಗ್ಗೆ ಬರೆಯುವುದು ಎಲ್ಲವೂ ಒಂದಷ್ಟು ಈ ವರ್ಷ ಮುಗಿಯಿತು.

ಬರೆಯುವುದೇನು ತಪ್ಪಿಲ್ಲ ಓದಿದವ ತನ್ನ ನೆನಪುಗಳನ್ನು ಮೆಲುಕು ಹಾಕುತ್ತಾನೆ, ಅಷ್ಟಕ್ಕೂ ಅಪ್ಪನೆಂದರೆ ದ್ವೇಷವೇನು ಇಲ್ಲಾ. ಜಗತ್ತಿಗೆ ನನ್ನಪ್ಪನನ್ನ ತೋರಿಸುವ ಉಮೇದುವಾರಿಕೇನು ಇಲ್ಲಾ, ನನಗಂತೂ ಅಪ್ಪನೆಂದರೆ ಚಿಪ್ಪೊಡೆಯದ ಮುತ್ತು, ನಾನಾಗ ಚಿಗುರುಗಣ್ಣಿನ ಹುಡುಗ. ಎಸ್. ಎಸ್. ಎಲ್ಸಿ ಮುಗ್ಸಿ ಬೆಂಗಳೂರಿಗ್ಬಂದು ಲೋಟ ತೊಳೆದು ಹೂ ಮಾರಿ ಕಾಲೇಜ್ ಸೇರಿದಾಗಿನಿಂದ ಅಪ್ಪಮ್ಮನಂದ್ರೆ ನನಗಷ್ಟಕ್ಕಷ್ಟೆ, ಯಾರಾದ್ರು ಅಪ್ಪಮ್ಮನ ಬಗ್ಗೆ ಹೇಳಿದ್ರೆ ನಿಯತಕಾಲಿಕೆ ಪತ್ರಿಕೆಗಳಲ್ಲಿ ಓದಿದಾಗ ಸಣ್ಣದಾಗಿ ಕಂಪಿಸುತ್ತೇನೆ, ಅಳಲಾಗದೆ ಬಸವಳಿಯುತ್ತೇನೆ. ಆದರೀಗ ಅಪ್ಪನೆಂದರೆ ಗೋಡೆ ಮೇಲೆ ನೇತಾಡುವ ಕಲಾಕೃತಿ ಬಲಿತ ಕಣ್ಣುಗಳಿಂದ ಆಗಾಗ ಹರಿಯುವ ಕಣ್ಣೀರು ಮಬ್ಬಾಗಿಸುವ ನೆರಳು ಬಿಸಿಲು ಸರಿಯುವಂತೆ ಸುರಿಯುವ ಬಿಸಿನೀರು. ಇರಲಿ ಒಂದು ವಸ್ತುವಿನ ಬೆಲೆ ಅದನ್ನು ಕಳೆದುಕೊಂಡ ನಂತರವಷ್ಟೇ ತಿಳಿಯುವುದು.

ವರ್ಷದ ಕೆಳಗೆ ಬಹುಮಾನವಾಗಿ ಪಡೆದ ಒಂದು ಪುಸ್ತಕವನ್ನು ಓದಿದ್ದೆ, ಹೆಸರು “ಅಮೂರ್ತ” ಸ್ಫೂರ್ತಿ ಎಸ್ ಉಮೇಶ್ ಅವರು ಬರೆದ ಧಾತ್ರಿ ಪ್ರಕಾಶನದ ಹದಿನಾರು ಸಾಧಕರೆನ್ನಿಸಿಕೊಂಡ ವ್ಯಕ್ತಿತ್ವಗಳ ಕುರಿತಾತ ಪುಸ್ತಕವದು. ಇಲ್ಲಿರುವ ಸಾಧಕರ ಬದುಕಿನ ಬಗ್ಗೆ ಬೆಳಕು ಚೆಲ್ಲಿದರೆ ಅವರ ಸಾಹಸ ಕಥೆಗಳನ್ನು ಪ್ರಸ್ತುತ ಪಡಿಸಿದರೆ ಓದುಗರಲ್ಲಿ ಸ್ಫೂರ್ತಿ ಚಿಲುಮೆ ಉಕ್ಕುವುದರಲ್ಲಿ ಸಂದೇಹವಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಕತ್ತಲೆಯನ್ನು ಹೊಡೆದೋಡಿಸಿ ಬೆಳಕು ಮೂಡಿಸುವ ಸಾಮರ್ಥ್ಯ ನಮ್ಮಲ್ಲೆ ಇದೆ, ನೆನಪಿರಲಿ ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು ನಮ್ಮ ಬದುಕಿಗೆ ನಾವೇ ನಾವಿಕರು ಈ ಪುಸ್ತಕವನ್ನು ಎಲ್ಲಿಂದಲಾದರೂ ಸರಿ ಓದಲು ಆರಂಭಿಸಿದರೆ ಹಾಗೆ ಓದುತ್ತಾ ಓದುತ್ತಾ ಎಲ್ಲೋ ಒಂದೆಡೆ ಯಾವುದೋ ಒಂದು ಕಥೆ ಒಂದು ಸಾಲು ಒಬ್ಬ ವ್ಯಕ್ತಿ ಚಿತ್ರ ಖಂಡಿತವಾಗಿಯೂ ನೇರವಾಗಿ ಓದುಗನ ಕಣ್ಮುಂದೆ ಬರುತ್ತಾನೆ, ನಾನೀಗ ಪುಸ್ತಕದ ಹದಿನಾರನೇಯ ಸಾಧಕರನ್ನು ಇಲ್ಲಿ ಪರಿಚಯ ಮಾಡಿಕೊಡುತ್ತೇನೆ,

# " My dad is the Father of the century"

ಈ ಮೇಲಿನ ಮಾತನ್ನು ರಿಕ್ ತನ್ನ ತಂದೆ ಡಿಕ್ ಅವರನ್ನು ಕುರಿತು ತನ್ನ ಕಂಪ್ಯೂಟರ್ನಲ್ಲಿ ಬರೆದಿದ್ದ, ತಂದೆ ಮಗ ಇಬ್ಬರ ನಡುವಿನ ನಿಸ್ವಾರ್ಥ ಪ್ರೇಮವನ್ನು ಇವತ್ತು ಇಡೀ ಪ್ರಪಂಚವೇ ನೋಡಿದೆ, ನಿರಂತರ ಓಟ ಜಗತ್ತಿನಲ್ಲೆಲ್ಲಾ ಇವರದೆ ಆಟ ಈ ಮಾಂತ್ರಿಕ ಅಪ್ಪ ಮಗನ ಜೋಡಿ ಭಾಗವಹಿಸಿದ ಓಟದ ಸ್ಪರ್ಧೆಗಳು ಅಂಕಿ ಅಂಶಗಳ ಪ್ರಕಾರ ಅದರ ಸಂಖ್ಯೆ ೧೦೪೨, ಇಪ್ಪತ್ತೇಳು ಬಾರಿ ಬೋಸ್ಟನ್ ಮ್ಯಾರಥಾನ್, ೬೮ ಇತರ ಮ್ಯಾರಥಾನ್ಗಳು ಮತ್ತು ೨೪೦ ಬಾರಿ ಟ್ರಯತ್ಲಾನ್ ನಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು, ೧೯೯೨ರಲ್ಲಿ ಕೇವಲ ಕೇವಲ ೪೫ ದಿನಗಳಲ್ಲಿ ಅಮೇರಿಕಾದಾದ್ಯಂತ ೩೭೩೬ ಮೈಲಿ ಬೈಕಿಂಗ್ ನಾಡಿ ದಾಖಲೆ ನಿರ್ಮಿಸಿದ್ದಾರೆ, ಜಗತ್ತಿನ ಹಲವಾರು ಪ್ರತಿಷ್ಟಿತ ಓಟದ ಸ್ಪರ್ಧೆಗಳಲ್ಲಿ ಭಾಗವಾಗಿಸಿ ವಿಜೇತರಾಗಿದ್ದಾರೆ, ಇದರಲ್ಲೆಂಥದಿದೆ ಹೇಳಿಕೊಳ್ಳುವ ಸಾಧನೆ ಅಂತೀರಾ ?? ಇದೆ ಇದೊಂದು ನಾಲ್ವತ್ತೊಂಬ್ಬತ್ತು ವರ್ಷಗಳ ಹಿಂದೆ ಕುಡಿಯೊಡೆದ ಪ್ರೇಮಕಥೆ, ಅದು ೧೯೬೦ರ ದಶಕ ಅಮೇರಿಕಾದ ಮಸ್ಯಾಚುಸೆಟ್ಸ್ ನ ಪುಟ್ಟ ಪಟ್ಟಣವೊಂದರಲ್ಲಿ ಡಿಕ್, ಮತ್ತು ಜೂಡಿ ಎಂಬ ದಂಪತಿಗಳು ವಾಸವಾಗಿದ್ದರು, ಡಿಕ್ ವೃತ್ತಿಯಲ್ಲಿ ರಾಷ್ಟೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್. ಪ್ರಾಮಾಣಿಕ ಅಧಿಕಾರಿ ಹೆಂಡತಿಯನ್ನು ಕಂಡರೆ ಬಲು ಪ್ರೀತಿ. ದಂಪತಿಗಳಲ್ಲಿ ಭಾರಿ ಅನ್ಯೋನ್ಯತೆ. ಒಟ್ಟಾರೆ ಅದೊಂದು ಪುಟ್ಟ ಕುಟುಂಬ ಸುಖಿ ಸಂಸಾರ, ೧೯೬೨ರ ಜನವರಿ ತಿಂಗಳಲ್ಲಿ ಜೂಡಿ ತುಂಬು ಗರ್ಭಿಣಿಯಾದಳು. ಎಂಟು ತಿಂಗಳು ಕಳೆಯುವವರೆಗೂ ದಂಪತಿಗಳಿಬ್ಬರೂ ಮಗು ಗರ್ಭದಲ್ಲಿ ಚೆನ್ನಾಗಿ ಬೆಳೆಯುತ್ತಿದೆ ಎಂದೇ ಭಾವಿಸಿದ್ದರು, ಸ್ಕ್ಯಾನಿಂಗ್ ವರದಿಗಳೂ ಅದನ್ನೇ ಹೇಳುತ್ತಿದ್ದವು, ತಂದೆ ತಾಯಿಗಳಿಬ್ಬರು ಮಗುವಿನ ಬಗ್ಗೆ ಸಾವಿರಾರು ಕನಸುಗಳನ್ನು ಕಂಡರು ಆದರೆ ಅವರ ಬದುಕಿನಲ್ಲಿ ಅವರಂದುಕೊಂಡಂತಾಗಲಿಲ್ಲ, ಅದು ಹೇಗೋ ಕಾಯ ಹೊಡೆದು ಹೂವಾಗುವ ಸಮಯ ಮಗುವಿಗೆ ಆಹಾರ ಹೊಂದಗಿಸುತ್ತಿದ್ದ ಹೊಕ್ಕಳ ಬಳ್ಳಿ ನೇಣಿನ ಉರುಳಿನಂತೆ ಮಗುವಿನ ಕುತ್ತಿಗೆಗೆ ಸುತ್ತಿಕೊಂಡಿತ್ತು, ಅಪಾಯವನ್ನರಿತ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಮಗುವನ್ನು ಹೊರತೆಗೆದರು , ಆದರಾಗಲೇ ಸಮಯ ಮಗುವಿನ ಉಸಿರಾಟ ಮೆದುಳಿಗೆ ಸರಬರಾಜಾಗುವ ಆಮ್ಲಜನಕ ಸ್ಥಗಿತಗೊಂಡಿತ್ತು, ಇಡೀ ಮೆದುಳಿಗೆ ರಕ್ತ ಚಲನೆ ಸಂಪೂರ್ಣವಾಗಿ ನಿಂತು ಹೋಗಿತ್ತು, ಮೆದುಳಾಗಲೇ ಜೀವಂತ ಶವವಾಗಿತ್ತು, ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ ಮೇಲೆ ದೇಹದ ಅಂಗಾಂಗಳಿಗೆ ಶಕ್ತಿ ತುಂಬಬಲ್ಲ ನರಗಳು, ಸ್ನಾಯುಗಳು ಮತ್ತು ಮಾಂಸಖಂಡಗಳಿಗೆ ತಮ್ಮ ಚಲನಶೀಲ ಸಂದೇಶಗಳಾದರೂ ಹೇಗೆ ತಾನೆ ರವಾನೆಯಾದೀತು ? ಮಗುವಿನ ದೇಹದ ಬಹುತೇಕ ಅಂಗಾಂಗಳು ನಿರ್ಜೀವಗೊಂಡಿದ್ದವು, ಮಗು ಜೀವಂತ ಶವವಾಗಿತ್ತು,

1

ವೈದ್ಯರು ಮಗುವಿನ ತಂದೆತಾಯಿಗಳಿಗೆ ಮಗುವನ್ನು ಯಾವುದಾದರೂ ದೈಹಿಕ ಮತ್ತು ಮಾನಸಿಕ ಬುದ್ದಿಮಾಂದ್ಯ ಕೇಂದ್ರಕ್ಕೆ ಸೇರಿಸಿ ಅವನ ಆಸೆಯಿನ್ನು ಬಿಟ್ಟಾಕಿ ಎಂದು ತಿಳಿಸಿದರೂ ಸಹ ರಿಕ್ ಮತ್ತು ಜೂಡಿ ದಂಪತಿಗಳು, ಮನೆಗೆ ಕರೆದುಕೊಂಡು ಹೋಗುತ್ತಾರೆ, ಕಾರಣ ಅ ಮಗು ಆಗಾಗ ತನ್ನ ಪಿಳಿಪಿಳಿ ಕಣ್ಣುಗಳನ್ನು ಗಾಳಿಗಾಲುಗಾಡುವ ಮನೆ ಕಿಟಕಿಯಂತೆ ಬೆಳಕನ್ನು ಗುರುತಿಸುತ್ತದೆ, ತಂದೆ ತಾಯಿಗಳಿಗೆ ಮಗುವಿನ ಮೇಲೆ ಹೊಸದೊಂದು ಭರವಸೆ ಹುಟ್ಟು ಹಾಕತ್ತೆ ಹಾಗೆ ಮಗುವಿಗೆ ರಿಕ್" ಎಂದು ಹೆಸರಿಡುತ್ತಾರೆ.

ತಂದೆ ಪ್ರತಿವಾರ  ರಿಕ್ ನನ್ನು ಬೋಸ್ಟನ್ ನಲ್ಲಿದ್ದ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಿದರೆ ತಾಯಿ ಮನೆಯಲ್ಲೆ ಮಗುವಿನ ಮುಂದೆ ಇಂಗ್ಲೀಷ್ ಗಳನ್ನು ಬರೆದು, ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಬೊಟ್ಟು ತೋರಿಸಿ ಹೆಸರು ಹೇಳುವುದು ದಿನ ನಾಲ್ಕಾರು ವಿಧಾನಗಳಲ್ಲಿ ಮಗುವಿನ ಮುಂದೆ ತನ್ನ ಚಟುವಟಿಕೆಗಳನ್ನು ತೋರಿಸುವುದು, ಮಗು ಎದ್ದಾದರೂ ಎದ್ದು ಮಾತನಾಡಬಹುದೆಂದು ಇದೇ ರೀತಿ ಹನ್ನೊಂದು ವರ್ಷಗಳನ್ನು ಕರೆಯುತ್ತಾರೆ, ಆದರೆ ಮಗುವಿನಲ್ಲಿ ಯಾವುದೇ ಬದಲಾವಣೆ ಹೊರ ಜಗತ್ತಿಗಾಗಲಿ, ರಿಕ್ ಮತ್ತು ಜೂಡಿ ದಂಪತಿಗಾಗಲಿ ತಿಳಿಯುವುದಿಲ್ಲ,

ಅದೊಂದು ದಿನ ತಂದೆ ಮಗನನ್ನು ಬೋಸ್ಟನ್ ನ ಪ್ರತಿಷ್ಟಿತ ವಿಶ್ವವಿದ್ಯಾನಿಲಯದ ತಾಂತ್ರಿಕ ವಿಭಾಗಕ್ಕೆ ಕರೆದುಕೊಂಡು ಹೋಗಿ ಮಗನ ಸ್ಥಿತಿಯನ್ನು ಅಲ್ಲಿನ ಪ್ರೊಫೆಸರ್ ಒಬ್ಬರ ಬಳಿ ಹೇಳಿಕೊಂಡು ಹೇಗಾದರೂ ಸರಿ ತಮ್ಮ ಮಗನನ್ನು ಹೊರಜಗತ್ತಿನ ಸಂವೇದನೆಗಳಿಗೆ ಸ್ಪಂದಿಸುವಂತೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಾನೆ. ಆದರೆ ಆ ಪ್ರೊಫೆಸರ್ ಡಿಕ್ ಅವರ ಮನವಿಯನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿತ್ತಾರೆ, ನಿಮ್ಮ ಮಗನ ಮೆದುಳು ಕೆಲಸ ಮಾಡುತ್ತಿಲ್ಲ ಅವ ಹೀಗೆ ಬದುಕಿರುವವರೆಗೂ ಏನನ್ನು ಮಾಡಲಾರ ಅದೊಂದು" ಜೀವ ಇರುವ ನಿರ್ಜೀವ ವಸ್ತು "ಎಂದು ಬಿಟ್ಟರು ಆದರೆ ಡಿಕ್ ವಿಚಲಿತನಾಗಲಿಲ್ಲ, ಮಗನ ಮೇಲೆ ಅದೇನೊ ಭರವಸೆ ನಿತ್ಯ ಬಾನಲ್ಲಿ ಅಡ್ಡಾಡುವ ಬಿಳಿ ಮೋಡಗಳ ನಡುವೆ ಕಪ್ಪು ಮೋಡಗಳನ್ನೆ ಹುಡುಕುತ್ತಿದ್ದವನು, ಹನಿಯೊಂದು ಬೀಜದ ಮೊಳಕೆಗೆ ನೀರೆರೆಯುವ ಕನಸು ಕಾಣುತಿದ್ದವ, ಕೊನೆಗೆ ಪ್ರೊಫೆಸರ್ ಬಳಿ ಒಂದು ಕೋರಿಕೆಯಿಟ್ಟ ಮಗನ ಮುಂದೆ ಒಂದು ಜೋಕ್ ಹೇಳಿ ಅಂತ ಪ್ರೋಫಸರ್ ಜೋಕ್ ಸೊಗಸಾಗಿ ಹೇಳಿದರು, ಜೋಕ್ ಮುಗಿದ ನಂತರ ಮಗು ರಿಕ್ ಜೋರಾಗಿ ನಗಲಾರಂಭಿಸಿತು, ಪ್ರೊಫಸರ್ ದಿಗ್ಬ್ರಾಂತರಾದರು, ರಿಕ್ ನ ಮೆದುಳು ಚೆನ್ನಾಗಿ ಕೆಲಸ ಮಾಡುತ್ತಿದೆ, ಎಂಬುದು ಅವರಿಗೆ ಖಾತರಿಯಾಗಿತು, ಕೂಡಲೆ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಸೇರಿ ರಿಕ್ ಗೆಂದೆ  ವಿಶೇಷವಾದ ಕಂಪ್ಯೂಟರ್ ಒಂದನ್ನು ತಯಾರಿಸಿ ಕೊಟ್ಟರು. ತಂದೆ ಡಿಕ್ ಅದಕ್ಕಾಗಿ ಕಷ್ಟಪಟ್ಟು ಸಾಲ ಮಾಡಿ ೫೦೦೦ಡಾಲರ್ ಹೊಂದಿಸಿದ, ಅ ವಿಶೇಷವಾದ ಗಣಕಯಂತ್ರದಲ್ಲಿ ಒಂದು ಒತ್ತುಗುಂಡಿ (ಸ್ವಿಚ್)ಇತ್ತು ರಿಕ್ ಅದನ್ನು  ತಲೆಯಿಂದ ಮುಟ್ಟುವ ಮೂಲಕ ಮಾನೀಟರ್ ಕರ್ಜರ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಿತ್ತು, ಮತ್ತು ತನಗೆ ಬೇಕಾದ ಅಕ್ಷರಗಳನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು, ರಿಕ್ ತಲೆಯನ್ನು  ಅತ್ತಿತ್ತ ಆಡಿಸುತ್ತಾ ಒಂದೊಂದೇ ಅಕ್ಷರಗಳನ್ನು ಆಯ್ಕೆ ಮಾಡಿಕೊಂಡು ಪದಗಳನ್ನು ಸೃಷ್ಟಿಸಿ ಅದನ್ನು ಕಂಪ್ಯೂಟರ್ ಪರದೆಯ ಮೇಲೆ ಹರಿದು ಬಿಡತೊಡಗಿದ. ಹೊರಜಗತ್ತಿಗೆ ಆತನ ಭಾವನೆಗಳು ಆ ಮೂಲಕ ಅರ್ಥವಾಗತೊಡಗಿದವು.

ರಿಕ್ ಕಂಪ್ಯೂಟರ್ ನಲ್ಲಿ ಮೊದಲ ಪದ ಬರೆಯುವಾಗ ಡಿಕ್ ಮತ್ತು ಜೂಡಿ ದಂಪತಿಗಳಲ್ಲಿ ಸಹಜವಾದ ಆಸೆಯೊಂದಿತ್ತು, ಮೊದಲು ಅಮ್ಮ, ಅಥವಾ ಅಪ್ಪನೆಂದು ಬರೆಯಬಹುದೆನೋ ಎಂದು ನೋಡುತ್ತ ಕುಳಿತರು, ಆದರೆ ರಿಕ್ ಬರೆದದ್ದೆ ಬೇರೆ "Go Bruins"ಎಂದು ಬರೆದ ಬ್ರೂಯಿನ್ಸ್ ಎನ್ನುವುದು ರಿಕ್ ನೆಲೆಸಿದ್ದ ಬೋಸ್ಟನ್ ನ ಪ್ರತಿಷ್ಟಿತ ಹಾಕಿ ತಂಡದ ಹೆಸರು ಇದೇ ಸಮಯದಲ್ಲಿ ಆ ತಂಡ ಮಹತ್ವದ ಹಾಕಿ ಟೂರ್ನಮೆಂಟ್ನ ಫೈನಲ್ ತಲುಪಿತ್ತು, ಅ ದಿನ ಫೈನಲ್ ಆಡಬೇಕಾಗಿತ್ತು, ತಂಡವನ್ನು ರಿಕ್ ತನ್ನಕ್ಷರಗಳ ಮೂಲಕ ಪ್ರೋತ್ಸಾಹಿಸಿದೆ, ಈ ವಿಷಯ ಆ ನಗರದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿದ್ದವು. ರಿಕ್ ಇವೆಲ್ಲಾವನ್ನು ನೋಡುತ್ತಿದ್ದ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಚಡಪಡಿಸುತ್ತಿದ್ದ, ತಂದೆ ಡಿಕ್ ಅವರಿಗೆ ರಿಕ್ ಮೇಲೆ ತನ್ನ ಮಗ ಇಂದಲ್ಲ ನಾಳೆ ಮಾತನಾಡಬಲ್ಲ ಎಂಬುದು ಸಾಬೀತಾದಂತೆ ಶಾಲೆಯೊಂದಕ್ಕೆ ಸೇರಿಸಿದ, ಮಗನನ್ನು ಪುಟ್ಟ ತಳ್ಳುಗಾಲಿಯೊಂದರ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ, ಹೀಗೆ ರಿಕ್ ಹೈಸ್ಕೂಲ್ ವಿಧ್ಯಾಭ್ಯಾಸ ಆರಂಭವಾಯ್ತು. ಅದೊಂದು ದಿನ ರಿಕ್ ಅವನ ಆಪ್ತ ಸ್ನೇಹಿತನೊಬ್ಬನಿಗೆ  ಭೀಕರ ಅಪಘಾತವಾಗಿತ್ತು, ಅದರಲ್ಲಿ ಆತನ ಎರಡು ಕೈ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು, ಪಾಪ!ಆತ ಬಡ ಕುಟುಂಬದಿಂದ ಬಂದವನು, ಚಿಕಿತ್ಸೆಗಾಗಿ ಹಣವಿಲ್ಲದ ಕಾರಣ ಆ ಶಾಲೆಯ ವಿಧ್ಯಾರ್ಥಿಗಳೆಲ್ಲಾ ಸೇರಿ ಅವನಿಗೆ ಸಹಾಯಾರ್ಥವಾಗಿ ಐದು ಕಿಲೋ ಮೀಟರ್ ಓಟದ ಸ್ಪರ್ಧೆಯನ್ನು ಏರ್ಪಡಿಸಿದರು. ಅ ದಿನ ರಿಕ್ ಮನೆಗೆ ಬಂದವನೇ ತನ್ನ ಕಂಪ್ಯೂಟರ್ ನಲ್ಲಿ " ಅಪ್ಪ !ನಾನು ಈ ಸಹಾಯಾರ್ಥ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ. ಗೆಳೆಯನ ಸಂಕಷ್ಟದಲ್ಲಿ ಭಾಗಿಯಾಗುತ್ತೇನೆ, ನೀನೂ ನನ್ನೊಂದಿಗೆ ಬರುವೆಯಾ?"ಎಂದು ಬರೆದಿಟ್ಟಿದ್ದ ಅಪ್ಪನಿಗೆ ಒಂದೆಡೆ ಅಚ್ಚರಿ, ಮತ್ತೊಂದೆಡೆ  ಗೆಳೆಯನ ಬಗೆಗೆ ಮಗನಿಗಿರುವ ಕಾಳಜಿ ಅನುಕಂಪ ಮತ್ತು ಔದಾರ್ಯವನ್ನು ಕಂಡು ಹೆಮ್ಮೆ.

ಈ ಸಮಯಕ್ಕೆ ಡಿಕ್ ಗೆ ೪೦ವರ್ಷ ಆತ ಮಗನೊಂದಿಗೆ ಐದು ಕಿಲೋ ಮೀಟರ್ ಓಡಬೇಕಾದ ಅನಿವಾರ್ಯತೆ, ಡಿಕ್ ಗೆ ಮಗನ ಮೇಲೆ ಅತಿಯಾದ ಪ್ರೀತಿ, ಪ್ರೀತಿಯೆಂಬ ಮಾಯೆ ಏನೆಲ್ಲಾ ಮಾಡತ್ತೆ ಮಾಡಿಸುತ್ತೆ, ನೋಡಿ ಅಂತೂ ಡಿಕ್ ಮಗ ರಿಕ್ ಜೊತೆಗೆ ಹೆಜ್ಜೆಹಾಕಲು ಸಮ್ಮತಿಸಿದ. ಅಂದು ಎಲ್ಲರಂತೆ ಡಿಜ್ ಕೂಡ ಮಗನನ್ನು ಗಾಲಿಯಲ್ಲಿ ಕೂರಿಸಿಕೊಂಡು ಓಡತೊಡಗಿದ, ಮಗನ ಮುಖದ ಮೇಲೆ ಮೂಡುತ್ತಿದ್ದ ಕಿರುನಗೆ ತಂದೆಗೆ ಆನೆಬಲವನ್ನೆ ತಂದುಕೊಟ್ಟಿತು. ಅಂತೂ ರಿಕ್ -ಡಿಕ್ ಜೋಡಿ ಐದು ಕಿಲೋಮೀಟರ್‌ ದೂರವನ್ನು ಕ್ರಮಿಸಿ ಗುರಿ ಮುಟ್ಟಿತು, ಮನೆಗೆ ಬಂದ ರಿಕ್ ಕಂಪ್ಯೂಟರ್ ನಲ್ಲಿ ಹೀಗೆ ಬರೆದ 

"ಅಪ್ಪ !ನಾನು ನಿನ್ನೊಂದಿಗೆ ಓಡುತ್ತಿರುವಾಗ ನಾನೊಬ್ಬ ಅಂಕವಿಕಲ ಎನ್ನುವುದೇ ಮರೆತು ಹೋಗುತ್ತಿತ್ತು" ಮಗನ ಆ ಒಂದು ಮಾತು ಮುಂದೆ ಡಿಕ್ ಅವರ ಬದುಕಿನ ಚಿತ್ರಣವನ್ನು ಬದಲಾಯಿಸಿತು, "ನನ್ನ ಮಗ ನನ್ನೊಂದಿಗೆ ಓಡುವಾಗ ಆತನಿಗೆ ತಾನು ಅಂಗವಿಕಲನಲ್ಲ ಎನ್ನುವ ಭಾವನೆ ಬಂದಿದೆಯೆಂದರೆ ನಾನು ಜೀವನಪರ್ಯಂತ ಆತನೊಂದಿಗೆ ಓಡಲು ಸಿದ್ದನೆಂದು ಅಂದೇ ತಿರ್ಮಾನಿಸಿ ಬಿಟ್ಟ, ನಾಲ್ವತ್ತು ವರ್ಷದ ತಂದೆ ಮಗನಿಗಾಗಿ ಕಡೆಯ ಉಸಿರಿರುವರೆಗೂ ಓಡುತ್ತಲೇ ಇರುವ ದೃಡ ನಿರ್ಧಾರವನ್ನೇ ಮಾಡಿಬಿಟ್ಟೆ ಅಂದಿನಿಂದ ಆರಂಭವಾದ ಓಟದ ಪರ್ವ ಅನೇಕ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು, ಹೀಗೆ ಸಾಗಿತು ಅಪ್ಪ ಮಗನ ನಾಗಲೋಟ. ಈ ಅಪೂರ್ವ ಜೋಡಿಯ ಮುಂದಿನ ಗುರಿ ಟ್ರಯತ್ಲಾನ್ ಆಗಿತ್ತು, ಟ್ರಯತ್ಲಾನ್ ಮೂರು ವಿಭಿನ್ನ ಪಂದ್ಯಗಳನ್ನೊಳಗೊಂಡ ಕ್ರೀಡಾ ಸ್ಪರ್ಧೆ. ಈ ಸ್ಪರ್ಧೆಯ ವಿಶೇಷವೆಂದರೆ ಕ್ರೀಡಾಪಟುಗಳು ಒಂದೇ ದಿನದಲ್ಲಿ ಒಂದಾದ ಮೇಲೊಂದರಂತೆ ಈಜು ಬೈಕಿಂಗ್ ಮತ್ತು ಓಟದ ಮೂಲಕ ನಿಗದಿತ ದೂರದ ಗುರಿ ಮುಟ್ಟಬೇಕಿತ್ತು. ಇವರ ಓಟದ ಸ್ಪರ್ಧೆ ಈಜಿನತ್ತ ಸಹ ವಾಲುತ್ತ  ಮಗನಿಗಾಗಿ ಡಿಕ್ ಈಜಲು ಕಲಿತ ತನ್ನ ಬೆನ್ನ ಹಿಂದೆ ಮಗನನ್ನು ಕಟ್ಟಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ‌.

ಅಂದು ಜೂನ್ ತಿಂಗಳ ಮೂರನೇ ಭಾನುವಾರ ‌ಫಾದರ್ಸ್ ಡೇ ಎಂದು ಜಗತ್ತಿನಾದ್ಯಂತ ಆಚರಿಸುವ ವಿಶೇಷ ದಿನ ಅಂದೇ ವಿಶೇಷವಾದ ಸ್ಪರ್ಧೆಯ ದಿನವೂ ಹೌದು" ಅಂದು ಡಿಕ್‌-ರಿಕ್ ಇಬ್ಬರನ್ನು ಪ್ರೋತ್ಸಾಹಿಸಲು ಸಾವಿರಾರು ಜನರು ಬಂದು ನೆರೆದಿದ್ದರು, ಅವರೆಲ್ಲರು ಸೇರಿ ಎರಡು ಆಸನಗಳಿದ್ದ ಬೈಕ್ ಒಂದನ್ನು ಈ ಜೋಡಿಗೆ ಉಡುಗೊರೆ ಕೊಟ್ಟರು, ಜತೆಗೆ ರಿಕ್ ನೀರಿನಲ್ಲಿ ಮುಳುಗದಂತೆ ತಯಾರಿಸಿದ್ದ ಸಣ್ಣ ದೋಣಿ ಕೂಡ ಸಿದ್ದವಾಗಿತ್ತು,

ಡಿಕ್ ಬಲವಾದ ಬೆಲ್ಟ್ ಒಂದನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡ. ಆದರ ಮತ್ತೊಂದು ತುದಿಯನ್ನು ದೋಣಿಯ ಮುಂದಿದ್ದ ಕೊಂಡಿಗೆ ಕಟ್ಟಿದ, ಮಗನನ್ನು  ಅದರಲ್ಲಿ ಕೂರಿಸಿದವನೇ ನೀರಿಗೆ ಜಿಗಿದ. ಈಜುತ್ತಾ ಈಜುತ್ತಾ ಕೆಲವೇ ನಿಮಿಷಗಳಲ್ಲಿ ಒಂದು ಕಿಲೋಮೀಟರ್ ದೂರವನ್ನು ಕ್ರಮಿಸಿದ. ನಂತರ ಆರಂಭವಾದದು ಇಪ್ಪತ್ತು ಕಿಲೋಮೀಟರ್ ಬೈಕ್ ರೇಸ್, ತದನಂತರ ಐದು ಕಿಲೋಮೀಟರ್ ದೂರದ ಮ್ಯಾರಥಾನ್ ಅಪ್ಪ ಮುಂದೆ ನಿಂತು ತನ್ನನ್ನು ಮುನ್ನಡೆಸುತ್ತಾನೆ ಎನ್ನುವ ಭರವಸೆ ಮಗನಿಗೆ, ಮಗನ ಆಸೆ ಪೂರೈಸುವ ಸದಾವಕಾಶ ದೊರೆಯಿತಲ್ಲ ಎನ್ನುವ ಖುಷಿ ಅಪ್ಪನಿಗೆ, ಅಂತಿಮವಾಗಿ ಅಪ್ಪಮಗನ ಜೋಡಿ ಗುರಿ ಮುಟ್ಟತ್ತೆ, ಗುರಿಯೆಡೆಗೆ ಬರುತ್ತಿದಂತೆ ಇಪ್ಪತ್ತು ಸಾವಿರ ಜನರ ದೀರ್ಘ ಕರತಾಡನ‌‌. ಇಡೀ ಜನಸಮೂಹ ಈ ಅಸಾಮಾನ್ಯ ಜೋಡಿಗೆ ಎದ್ದು ನಿಂತು ಗೌರವ ಸಲ್ಲಿಸಿತ್ತು, ನೂರಾರು ಬ್ಯಾನರ್ ಗಳು ಮತ್ತು ಪೋಸ್ಟರ್ ಗಳು ರಾರಾಜಿಸುತ್ತಿದ್ದವು, ನಿಜ್ಜಕ್ಕೂ ಅದು ಈ ಜೋಡಿ ಅಪ್ಪ ಮಗನ ಬದುಕಿಗೆ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು, ಇಬ್ಬರ ಕಣ್ಣುಗಳಲ್ಲಿ ಆನಂದಭಾಷ್ಪ ಉಕ್ಕಿ ಹರಿಯುತ್ತಿತ್ತು,

ಹೀಗೆ ಅವರ ಜೀವನ ಸರಾಗವಾಗಿ ಸಾಗುವಾಗ ಒಮ್ಮೆ ಡಿಕ್ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ತಪಾಸಣೆಯ ನಂತರ ಹೃದಯದ ರಕ್ತನಾಳವೊಂದು ಶೇ ೯೫% ರಷ್ಟು ಮುಚ್ಚಿಹೋಗಿರುವುದು ಕಂಡು ಬಂತು‌. ‌ಅ ಸಮಯದಲ್ಲಿ ವೈದ್ಯರು ಡಿಕ್ ಅವರ ಪರಿಸ್ಥಿತಿ ನೋಡಿ ಹೀಗೆ ಹೇಳಿದ್ರು "ನಿನ್ನ ನಿರಂತರ ಓಟವೇ ನಿನ್ನನ್ನು ಈವರೆಗೂ ಬದುಕಿಸಿದೆ. ಹಾಗಿಲ್ಲದಿದ್ದರೆ ನೀನು ೧೫ ವರ್ಷಗಳ ಹಿಂದೆಯೇ ಸತ್ತು ಹೋಗುತ್ತಿದ್ದೆ" ಎಂದರು ಈ ಕ್ಷಣವನ್ನು ನಾವು ಯಾವ ರೀತಿಯಲ್ಲಿ ನೋಡಬೇಕು ಹೇಳಿ "ತಂದೆ ಮಗನಿಗೊಂದು ಸುಂದರ ಬದುಕನ್ನು ಕಟ್ಟಿಕೊಟ್ಟಿದ್ದ. ಅದಕ್ಕೆ ಪ್ರತಿಯಾಗಿ ಮಗ ತಂದೆಯ ಪ್ರಾಣವನ್ನೇ ಉಳಿಸಿದ್ದ, ಈ ಪುಸ್ತಕ ಬಂದಾಗ ತಂದೆ ಡಿಕ್ ಅವರಿಗೆ ೭೧ವರ್ಷ ಮಗ ರಿಕ್ ಅವರಿಗೆ ೪೯ ವರ್ಷ ರಿಕ್ ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದು ಅಲ್ಲೆ ಕೆಲಸ ಮಾಡುತ್ತಿದ್ದಾನೆ. ಇಬ್ಬರು ಆನಂದದಿಂದ ತುಂಬು ಜೀವನ ನಡೆಸುತ್ತಿದ್ದಾರೆ. ವಿಶ್ವದ ನಾನಾಕಡೆ ಭಾಷಣಗಳನ್ನು ಮಾಡಿ ಅಂಗವಿಕಲರಿಗೆ ತಮ್ಮದೇ ಆದ ಪ್ರತಿಷ್ಟಾನವನ್ನು ಸ್ಥಾಪಿಸಿದ್ದಾರೆ, ಅದರ ಮೂಲಕ ನೂರಾರು ಅಂಗವಿಕಲರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ,

ಇಂಥ ಅಪ್ಪ ಮಗನ ಜೋಡಿ ನೋಡಿ ಅಂತರಾಷ್ಟ್ರೀಯ ಟಿ‌ವಿ ಛಾನಲ್ ಒಂದರ ಆ್ಯಂಕರ್ ರಿಕ್ ಅವರನ್ನು " ನಿನ್ನ ಜೀವನದ ಬಹುದೊಡ್ಡ ಆಸೆ ಏನು ?"ಎಂದು ಪ್ರಶ್ನಿಸಿದ್ದ, ಅದಕ್ಕೆ ರಿಕ್ ಹೀಗೆ ಉತ್ತರಿಸಿದ್ದ, "ನನ್ನ ಬದುಕಿನ ಮಹೋನ್ನತ ಕನಸೆಂದರೆ ಅದು ಎಂದಾದರೂ ಒಂದು ದಿನ ನನ್ನ ತಂದೆಯನ್ನು ಇದೇ ಗಾಲಿಕುರ್ಚಿಯಲ್ಲಿ ಕುಳ್ಳಿರಿಸಿ ತಳ್ಳುತ್ತಾ ನಾನು ಆತನೊಂದಿಗೆ ಹೆಜ್ಜೆ ಹಾಕಬೇಕು " ರಿಕ್ ಹೀಗೆ ತನ್ನ ಕಂಪ್ಯೂಟರ್ ಮೇಲೆ ಬರೆದಾಗ ಆತನ ಕಣ್ಣಿಂದ ಒಂದೆರೆಡು ಹನಿ ಕಣ್ಣೀರು ಕೆನ್ನೆಗೆ ಜಾರಿತ್ತು. ರಿಕ್ ಮತ್ತು ಡಿಕ್ ಅವರ ಬಗ್ಗೆ ನಾನು ಬರೆಯುವುದಕ್ಕೆ ಒಂದು ಕಾರಣವಿದೆ, ಮೊನ್ನೆ ಅಕ್ಕ ಮೇಸೆಜ್ ಮಾಡಿದ್ರು, ಅವರಿಗಿಷ್ಟವಾದ ಸಂಗತಿಯೊಂದನ್ನು ಹೇಳ್ದೆ ಅದಕ್ಕಾವರು.
"You Made my day Brother "
ಅಂದ್ರು ಈವಾಗ ನೀವ್ಹೇಳಿ ಈ ಅಪ್ಪ ಮಗನಿಗೆ ಮಗ ಅಪ್ಪನಿಗೆ ಏನಂತ ಹೇಳ್ಬೇಕು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Prasad
Prasad
6 years ago

Very well narrated. Thank you for such a beautiful and inspirational write-up!

– Prasad, Republic of Angola

1
0
Would love your thoughts, please comment.x
()
x