‘ಅಪ್ಪಾ… ಬಾಂಬು ಅಪ್ಪಾ, ಬಾಂಬು’ ಅಂತ ಮಗ ಅಳುತ್ತಾ ಎಬ್ಬಿಸಿದಾಗ ಗರಬಡಿದವನಂತೆ ‘ಹ್ಞಾ! ಎಲ್ಲಿ…ಎಲಿ?್ಲ’ ಅಂತ ತಡಕಾಡಕತಿದೆ. ಹಾಸಿಗೆಯಲ್ಲ ಅಸ್ತವ್ಯಸ್ತವಾಗಿ ಲುಂಗಿ ಇಲ್ಲದೆ ಹಾಗೆ ಓಡಾಡುತ್ತಿದ್ದನ್ನು ನೋಡಿ ಎಲ್ಲರೂ ಏನಾಯ್ತು ಅಂತ ಓಡಿ ಬಂದ್ರು
‘ಬಾಂಬು!ಬಾಂಬೂ…..! ಎಲ್ಲಿ ಬಾಂಬು?’ ಅಂದೆ
‘ಅಯ್ಯೋ ಸವಾರಾತಿವರಗೂ ಸುಡಗಾಡೂ ಏನೇನೊ ನೋಡತಿರಿ, ಹಿಂಗ ಎದ್ದು ಕಣವರಸ್ತಿರಿ’ ಎಂದ್ಲು ಈಕಿ
ಅಷ್ಟರಾಗ ಮಗ ‘ಅಪ್ಪಾ ಬಾಂಬು ಬೇಕು ಅಪ್ಪಾ ಬಾಂಬು ಬೇಕು’ ಎಂದು ಅಳಕೊಂತ ಕುತಿದ್ದ. ನನಗ ಹುಚ್ಚು ಮಬ್ಬು ಕೂಡೆ ಹಿಡಿತು. ಅಕ್ಬರ್ ಬೀರಬಲ್‍ನ ಕಥೆಗ ಅಕ್ಬರನ ಮಗ ಒಂದು ಸಾರಿ ವಿಪರಿತ ಹಠ ಹಿಡದಿರತಾನ. ಹಠದಾಗ ಆನೆ ಕೇಳತಾನ, ಆನಿನೂ ತರತಾರ, ಗಿಂಡಿ ಕೇಳತಾನ ಗಿಂಡಿನೂ ತರಸ್ತಾನ, ಆಗ ಆ ಮಗು ಆನಿನ ಈ ಗಿಂಡಿಯಾಗ ಕೂಡಸು ಅಂತ ಹಠ ಮಾಡಕತಿದಾಗ ಅವರು ಒದ್ಯಾಡಿದ ಪ್ರಸಂಗ ಇತ್ತಲ್ಲ ನನ್ನ ಪಾಲಿಗೆ ರಿಪಿಟ್ ಆದಂಗ ಆತು. ಅಷ್ಟರಗ ಮಗನ ವಯಸ್ಸು ಎಷ್ಟು ಅಂದಿರಿ? ಜಸ್ಟ ತ್ರಿ ಯಿಯರಸ್. ಒಂದು ರೀತಿ ಟಿಪಿಕಲ್ ಮನುಷ್ಯ ಇವ. ಹತ್ತು ವರ್ಷದಾಗ ಹುಡುಗರು ಮಾಡಬೇಕಾದ್ದನ್ನು ಈ ಮೂರನೇ ವರ್ಷದಾಗ ಮಾಡಿ ಮುಗಿಸಿಬಿಟ್ಟಾನ. ಮೊದಲು ಹೆಣ್ಣಾದರೂ ಗಂಡಾದರೂ ಒಂದೆ ಭಾವದವು ಅಂತ ಅನಕೊಂಡಿದ್ದೆ. ಮಗನ ವರ್ತನೆಯಿಂದನ ಗೊತ್ತಾಗಿದ್ದು ಗಂಡು ಗಂಡೆ, ಮುಗ್ಧ ಹೆಣ್ಣು ಹೆಣ್ಣೇ. ನಾವು ಬೆಳದಂಗ ಬೆಳೆದು ಬ್ಯಾಡ ಸ್ವಲ್ಪ ಡಿಫೆರೆಂಟಾಗಿ ಬೇಳಸಮಾ ಅಂತ ಭಾವಿಸಿದ್ದೆ. ನನ್ನ ಹಾದಿಗೆ ಬರಾ ಲಕ್ಷಣದವ ಅಲ್ಲ ಅಂತ ಈಗಲೇ ತೋರಿಸಿಬಿಟ್ಟಾನ. ನಾನು ಬಾಲ್ಯದಾಗ ಹನ್ನೆರಡು ಹದಿಮೂರು ವರ್ಷತನ ಮಾಡಿದವನ್ನೆಲ್ಲಾ ಈಗಲೇ ಮಾಡಿ ಮುಗಸಾಕತಾನ. ಅವನ ಸಂಗ್ರಹದಾಗ ಏನವ ಅಂತ ತಿಳಿದಿರಿ? ಆಟದ ಸಾಮಾನಂತೂ ಬಿಕರಿ ಆಗ್ಯಾವ ಬಿಡ್ರಿ, ಏಳು ನಮೂನಿ ಬಾಲು, ಸಣ್ಣ ಬಾಲನಿಂದ ಹಿಡದು ದೊಡ್ಡವು ತನ, ಗೋಲಿ, ಜೋಕಾಲಿ, ಸೈಕಲ್ಲು, ಬ್ಯಾಟು, ಟೆನಿಸ್ ಬ್ಯಾಟು, ಕವಣಿ, ಪಿರಕಿ, ಬಿಲ್ಲು ಬಾಣ, ಗಾಳಿಪಟ, ಟೈರು ಅದರಲ್ಲಿ ವೆರಾಟಿ ಸೈಕಲ್,ಗಡಿ ಟೈರು ಮೊನ್ನೆ ಭಯ ಆಗು ಹಾಂಗ ಹೋಗೋ ಟ್ರಾಕ್ಟರ್‍ನ್ನ ತೋರಿಸಿ ‘ಅಪ್ಪಾ ಆ ಗಾಲಿ ತೊಡಸು ‘ಅಂತ ಗಂಟು ಬಿದ್ದಿದ್ದ. ಇವನ ‘ಕ’ ಬದಲು ಉಚ್ಛರಿಸುವ ‘ತ’ ದಿಂದ ಗಲ್ಲ ಗಲ್ಲ ಬಡಕಂತಹ ಸ್ಥಿತಿನ ಆಗಾಗ ತಂದಿಡತಾನ.
ಚಡ್ಡಿ ಅಂದ್ರ ಅವನಿಗೆ ಅಲರ್ಜಿ. ‘ಅಲ್ಲಲೇ ಕಾಲೇಜು ಮೆಟ್ಟಿಲ ಹತ್ತಿದ ಮೇಲೆನ ನಾವು ಪ್ಯಾಂಟು ಕಂಡವರು ನಿನನ್ದೆನಲೇ?’ ಅಂದ್ರ, ಮುಖ ಸೊಟ್ಟ ಮಾಡಿಕೊಂಡು ನಿಮ್ಮ ಕರ್ಮ ಅನ್ನೊ ದಾಟಿಯಲ್ಲಿ ‘ತೊಡಸಲ್ಲೋಲ?’ ಅಂತ ಬತ್ತಲೆಯಾಗಿ ಓಣ್ಯಾಗ ಓಡ್ಯಾಡವ, ಬಾಯಿ ಕೈ ಹಚ್ಚಿ ಹೊಯಿಕೊಯ್ಯವ. ಮನ್ಯಾಗ ಯಾರನ್ನ ಹೊತಾನೊ ಕಾಣೆ, ನಮ್ಮನಿಗೆ ಬರೋ ಅಣ್ಣನ, ಅಕ್ಕನ ಸಾಫ್ಟವೇರ್ ಮಕ್ಕಳ ಪ್ರಭಾವವೊ ಏನೋ, ಅವಗ ಜೀನ್ಸ ಪ್ಯಾಂಟಾ ಆಗಬೇಕು, ಬೇರೆವು ನಡಿಯಾಂಗಿಲ್ಲ, ಅದು ನೆಲಕ್ಕ ಬಡಿಯಾಂಗ ಇರುವಂತಿರಬೇಕು, ಹೊಸ ಚಡ್ಡಿ ಇದ್ರೂ ಪ್ಯಾಂಟು ಹರಿದಿದ್ರೂ ಅದ ಆಗಬೇಕು.
ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರ ಇವನಿಗೆ ಜ್ವರಗಿರ ಬಂದ್ರ ನಮಗ ದುಃಖ ಆದ್ರ ಇವನಿಗೆ ಸಂಭ್ರಮ. ನಿಮಗ ಆಶ್ಚರ್ಯ ಏಕೆ? ಹೇಳತಿರುವುದು ಸುಳ್ಳ ಅನಸಬಹುದು. ಮಕ್ಕಳಿಗೆ ಗುಳಿಗಿ, ಔಷದ ಹಾಕಬೇಕಾದ್ರ ಏನೆಲ್ಲಾ ಲಗಾ ಹೊಡಿತಾರ ಅನ್ನೊದು ಗೊತ್ತಿದ್ದ ಅದ. ಅದ ನನ್ನ ಇಬ್ರು ಹೆಣ್ಣಮಕ್ಕಳಿಗೆ ಹಾಕಬೇಕಾದ್ರ ತ್ರಾಸ ಇತ್ತು. ಇವನಿಗೆ ಹಾಕೋಕೆ ನಮಗೇನು ತ್ರಾಸಿಲ್ಲ. ಗುಳಿಗಿನ ಪೇಪರಮಂಟು ತಿನ್ನೊ ಹಾಂಗ ಕಟಕಟ ಕಡಿದು ತಿಂದು ಬಿಡತಾನ, ಔಷದನ್ನ ಗಟಗಟ ಕುಡದು ಇನ್ನೊಂದು ಡೋಸಿಗೆ ಕೈಒಡ್ಡತಾನ. ಇವನ್ನ ನೋಡಿ ಡಾಕ್ಟರ್ ಹೌಹಾರಿ ಇದು ವಿಚಿತ್ರ ಕೇಸದರಿ ಅಂತ ಗೌರವಿಸ್ಯಾರ. ಅಲ್ಲದ ಮನ್ಯಾಗ ಯಾರಿಗೆ ಏನರ ಆದಾಗ ಗುಳಿಗಿ-ಔಷಧಿ ತಂದಿದ್ರ ಇವನಿಗೆ ಕಾಣೊಹಾಂಗ ನುಂಗಗಿಂಲ್ಲ, ಇವನಿಗೆ ಕಣ್ಣಿಗೆ ಬಿದ್ರ ಸಾಕು ನಂತರ ಸಮಾಧಾನ ಮಾಡಕ ತಾಸತನ ಬೇಕು.
ಮೂರು ವರ್ಷ ಆತೂ ಅಂಗನವಾಡ್ಯಾಗ ಹಾಕಮ ಅಂತ ಎಷ್ಟೋ ಸಾರಿ ಕೂಡಿಸಿ ಬಂದ್ರ ಪ್ರಯೋಜನ ಆಗಿಲ್ಲ. ಆ ಸಣ್ಣ ಮಕ್ಕಳ ದೋಸ್ತಿನ್ಯಾ ಒಲ್ಲೆ ಅಂತನ. ಅದ ಶಾಲಿ ಹತ್ತಿರದ ಒಂದನೆ ಕ್ಲಾಸನ್ಯಾಗ ಕೂಡಾಕ ಹಿಗ್ಗು, ಅದರಾಗ ಮಧ್ಯಾಹ್ನ ಆ ಶಾಲಿಯ ಮಲ್ಲಮ್ಮಕ್ಕ ಮಾಡೋ ಬಿಸಿಯೂಟಕ್ಕ ಬಿದ್ದ ಸಾಯವ, ಮೇಷ್ಟ್ರ ಮಗ ಅಂತ ಟೀಚರ್ಸು ಬಗಲು ಕೂಡಿಸಿಕೊಂಡು ಉಣಾಕ ಹೋದ್ರ ‘ಊಹುಂ’ ಅನಾವ, ಎಲ್ಲರ ಜೊತಿ ಸರತಿಯಲಿ ಪ್ರತ್ಯೇಕ ತಾಟಿನಲ್ಲಿ ಕೂಡವ, ಅನ್ನ ಸಾರು ಹಾಕಿಸಿಕೊಂಡು ಭರ್ತಿ ಹೊಡ್ಯಾವ, ಬಾಯಿ ತೊಕಳಲಾರದ ಮನಿಗೆ ಬಂದು ಬಾಯಿ ತೋರಿಸಿ ‘ಸೂಪರ್’ ಅಂತ ಅಜ್ಜಿ ಅಮ್ಮಗ ರೇಗಸಾವ. ಮನ್ಯಾಗ ಅವಗ ಊಟ ಮಾಡಸಬೇಕು ಅಂದ್ರ ಹರಸಹಾಸ ಪಡಬೇಕು. ಅಲ್ಲಿ ಊಟ ಮಾಡೋದು ರೊಟ್ಟಿ ಚಪಾತಿ ಮಾತ್ರ . ಅನ್ನ ಉಣ್ಣಂದ್ರ ಸಾಧ್ಯನ ಇಲ್ಲ. ಅದ ಶಾಲಿ ಬಿಸಿಯೂಟ ಅಂದ್ರ ತಾಟಿ ಹಿಡಕೊಂಡು ಓಡಾವ. ಇಂತವ. ಅಲ್ಲದ ನಮ್ಮನ್ಯಾಗಿನ ನನ್ನ ಮಕ್ಕಳ ವಿಶೇಷ ಅಂದ್ರ ಮೂವರದು ನಾನ ಆಗಬೇಕು. ಇದು ಆತ್ಮರತಿ ಮಾಡಿಕೊಳ್ಳೊದು ಅಲ್ಲ. ಯಾರೆ ಮಕ್ಕಳಿಗೆ ಬಡದು ಕೂಡಲೇ ಬಾಯಿಂದ ‘ಅಮಾ’್ಮ ಅಂತ ಸೌಂಡ ಬರುತ್ತ. ನಮ್ಮವು ಹಾಂಗಿಲ್ಲ ‘ಎಪ್ಪಾ’ ಅಂತ ಉದ್ಗಾರ ತೆಗೆತಾವು, ನಡುರಾತ್ರಿಲಿ ನೀರಡಿಸಿದರ, ಒಂದಾಕ ಎರಡಾಕ ಬಂದ್ರ ಅಪ್ಪ ಅಂತ ಎಬ್ಬಸ್ತಾವ. ಹೆಣ್ಣಮಕ್ಕಳು ತಂದಿ ಮೇಲೆ, ಗಂಡು ಮಕ್ಕಳು ತಾಯಿನ ಹಚ್ಚಕೊಳ್ಳುವುದು ಸಹಜ ಗುಣ. ಇವನು ಅದಕ ಅಪವಾದ. ಮುಂಜಾನ ಎದ್ದುಕೂಡಲೇ ನನಗ ನಡುಕ ಶುರುವಾಗತ್ತ. ಇವನಿಗೆ ನಾಟಕ ಮಾಡಿಕೊಂತ ಹಲ್ಲುತಿಕ್ಕಸಬೇಕು. ಅವರವ್ವ ತಿಕ್ಕಸಾಕೋದ್ರ ತಿಕ್ಕೊಳ್ಳವಲ್ಲ. ನಾನಿರದಾಗ ಹಾಂಗ ತಿಂದು ಬಿಡಾವ. ಸ್ನಾನ ನಾನ ಮಾಡಸಬೇಕು. ನನ್ನ ಜೊತಿ ಊಟಕ್ಕೂತಾಗ ತಿಂದ್ರೆ ತಿನ್ನಾವ ಇಲ್ಲಾಂದ್ರ ತಿನ್ನಾಕ ಹೋಗಲ್ಲ. ಶಾಲಿಗೆ ಹೊರಟು ನಿಂತ್ರ ಮೊದಲ ಗಾಡಿಮ್ಯಾಲೆ ಹೋಗಿ ಕೂತುಬಿಟ್ಟಿರತಾನ. ಈಕಿಗೆ ನನ್ನ ರೂಢಿ ಕಡಿಮೆ ಮಾಡಿಸು ಮಾಡಿಸು ಅಂತ ಹೇಳಿ ಹೇಳಿ ಸಾಕಾಗ್ಯೇದ ಹೊರತು ಜಾರಿಗಿ ತರಾಕ ಆಕಿಂದ ಸಾಧ್ಯನ ಆಗಿಲ್ಲ. ಅಲ್ಲದೆ ಇವ ಮಾತಾಡೋದು ಯಾರರ ಹೇಳಿಕೊಟ್ಟಂಗ ಮಾತಾಡತಿರತಾನ.
ಇಂತವ ಇವತ್ತು ಮುಂಜಾನೆ ಮುಂಜಾನೆ ‘ಬಾಂಬು ಬೇಕಪ, ಬಾಂಬು’ ಎಂದು ಹಠ ಮಾಡುತ್ತಿದ್ದನ್ನು ನೋಡಿ ನನಗ ಹೆದರಿಕಿ ಸ್ಟಾರ್ಟ ಆತು. ‘ಅಪ್ಪ ಆ ಐಎಸ್‍ಐಎಸ್ ಉಗ್ರರಿಗೆ ಗೋತ್ತಾದ್ರ ಕಿಡ್ನಾಪ ಮಾಡಿ ಬಿಡತಾರಲ್ಲಪ’ ಅಂದ್ಲು ಮಗಳು, ಅನಿಷ್ಠ ಬಾಯಿ ಮುಚ್ಚಲೇ ಅಂತ ಅಜ್ಜಿ ದಬಾಯಿಸಿದ್ಲು. ‘ಆನಿನ ಗಿಂಡ್ಯಾಗ ಕೂಡಸು’ ಅನ್ನೊ ಸ್ಥಿತಿ ನನ್ನದಾಯಿತು. ಅಂತದು ಕೇಳಿದ್ರೆ ಡಿಜಿಟಲ್ ಯುಗದಾಗ ಸಾಧಿಸಿ ತೋರಸಬುದಾಗಿತ್ತಿ, ‘ಅಪ್ಪಾ ಬಾಂಬು ಬೇಕಪ ಬಾಂಬು’ ಅಂತ ಕೇಳಿತಿರಬೇಕಾದ್ರೆ ಏನು ಅಂತ ಉತ್ತಿರಿಸೋದು. ಸಂದಿಗ್ಧಕ್ಕೆ ಇಡಾದೆ ಇವನ ತಲ್ಯಾಗ ಬಿಟ್ಟವರ್ಯಾರು ಏನು ಎಂದು ದಿಗಿಲಿಗೆ ಬಿದ್ದೆ ‘ದೊಡ್ಡಕ್ಕ ಅಪ್ಪಿ ಅದನ್ನ ತೊಂಡು ಏನ ಮಾಡ್ತಿ' ಅಂದ್ಲು ಅತುಗೊಂತ ‘ಡಮ್’ ಅನಿಸಿಬಿಡತಿನಿ ಅಂದ. ಮತ್ತಿಷ್ಟು ಗಾಭರಿಯಾದೆ. ಎಲ್ಲಾರನೂ ಕ್ಲಾಸು ತೊಂಡೆ ಅತಿಯಾಗಿ ಟಿವಿ ನೋಡುತಿರೊದಕ್ಕ. ಒಬ್ಬರನ್ನ ಸೀಳಿಬಿಡತಿನಿ ಅಂದೆ . ‘ಅಲ್ಲ ನಾನು ನೋಡೊದು ಅದಾ ಮಹಾಭಾರತ ಒಂದ’ ಎಂದು ಅವ್ವಾ ಅಳಾಕ ಸುರುಮಾಡಿದ್ಲು.
‘ನಾನು ಅಲ್ಲ ಮತ್ಯೇನಾರು ಕೇಳಾಪ ಬೇರೆ ಕೊಡಸ್ತನಿ’ ಎಂದೆ
‘ ನನಗ ಬಾಂಬ ಬೇಕು’ ಅಂದ.
‘ ಹಾಂಗೆಲ್ಲ ಅಂದ್ರ ಪೋಲಿಸರು ಹಿಡಕೊಂಡು ಹೋಗಿಬಿಡತಾರ ನೋಡು’
‘ನಾನು ಬಾಂಬ ಹಾಕಿ ಬೀಡ್ತಿನಿ’
ನನಗ ಕಣ್ಣಾಗ ರಕ್ತ ಬರೋದಷ್ಟ ಬಾಕಿ ಉಳದಿತ್ತು. ‘ಹೌದು! ಬಾಂಬು ಎಲ್ಲಿ ಸಿಗತಾವ?’
‘ಅಲ್ಲೇ……ದೂ…..ರ’
ಗಾಡಿ ಮ್ಯಾಲೆ ಕೂರಿಸಿಕೊಂಡು ಅವನು ತೋರಿಸುವ ದಿಕ್ಕನತ್ತ ಗಾಡಿ ಮನ್ನಡೆಸಿದೆ.
‘ಯಾಕಡೆ?’
‘ಈಕಡೆ’
‘ಮತ್ತ’
‘ಆಕ’
‘ಹಿಂಗ ಒಳ್ಳಬೇಕಾ’
‘ಹಿಂಗ ಒಳ್ಳಬೇಕು’
‘ಮುಂದು ಹೋಗಬೇಕಾ’
ಇಲ್ಲೆ ಅಂತ ಒಂದು ಅಂಗಡಿ ತೋರಿಸಿದ ನಾನು ಯಾವುದು ಅಂತ ನೋಡಿದಾಗ ಪುಣ್ಯಕ್ಕೆ ಅದು ಪಟಾಕಿ ಮಾರೋ ಅಂಗಡಿಯಾಗಿತ್ತು.
ಒಳಗ ಕರಕೊಂಡು ಹೋದೆ. ಕೈಯಿಂದ ಕೊಸರಿಕೊಂಡು ಥೇಟು ಬಾಂಬಿನಾಕಾರದಲ್ಲಿದ್ದ ಗುಂಡಾಕಾರದ ಬಾಣವನ್ನು ಹಿಡದು ‘ಅಪ್ಪಾ, ಬಾಂಬು, ಬಾಂಬು, ಡಂ ಅನಸಲಾ?’ ಎಂದ ಕೈಯಲ್ಲಿ ಮತಾಪು ಪಟ್ಟಣ ಹಿಡಿದು.
ಅಂಗಡಿಯಲ್ಲಿದ್ದವರು ಹೌಹಾರಿ ಹೊರಗ ಬಂದ್ರು
ನಾನು ಬಚಾವಾದೆ ಎಂದು ನಿಟ್ಟುಸಿರು ಬಿಟ್ಟೆ
ಅಂಗಡಿಯವ ‘ಎಂತಾ ತಂದಿ? ಮಗನ ಬಿಟ್ಟು ಆಟ ನೋಡಿಕೊಂತ ನಿಂತಾರ!’ ಎಂದು ಬಾಯಿಬಿಡಾಕ ರೆಡಿಯಾಗಿದ್ದ.
Good one sir I enjoyed it
Thanking sir
Thank u sir
Sir kate super edannu Pratilipi anno application ede alli edannu nanu hakabahuda
ಸೂಪರ್ ಇದೆ ಅಣ್ಣ