ಟಿ ವಿಯಲ್ಲಿ ಒಂದು ಇಂಟರ್ ವ್ಯೂ ನೋಡುತ್ತಿದ್ದೆ. ಅದರಲ್ಲಿ ಅಪ್ಪ ಮತ್ತು ಮಗಳ ಸಂದರ್ಶನ ಪ್ರಸಾರವಾಗುತ್ತಿತ್ತು. ಸಂದರ್ಶಕರು ಮಗಳೊಡನೆ ನೇರವಾಗಿ ’ನೀವು ಎಂದಾದರೂ ಅಪ್ಪನಿಗೆ ತಿಳಿಯದಂತೆ ಏನಾದರೂ ತರಲೆ ಮಾಡಿದ್ದು ಇದೆಯೇ? ಅದನ್ನಿಲ್ಲಿ ಹಂಚಿಕೊಳ್ಳಲು ಇಷ್ಟ ಪಡ್ತೀರಾ’ ಎಂದು ಕೇಳಿದರು. ಆಕೆ ನಗುತ್ತಾ ’ ಇಲ್ಲ ಅನ್ಸುತ್ತೆ.. ನನ್ನೆಲ್ಲಾ ತಂಟೆ ತರಲೆಗಳಿಗೆ ನಮ್ಮಪ್ಪನೇ ಸಾಥ್.. ನಾವಿಬ್ಬರೂ ಅಪ್ಪ ಮಗಳು ಎನ್ನುವುದಕ್ಕಿಂತ ಫ್ರೆಂಡ್ಸ್ ಹೆಚ್ಚು’ ಎಂದಳು. ಕಾಲ ಎಲ್ಲಿಂದ ಎಲ್ಲಿಗೆ ತಲುಪಿತು ಎಂದು ಒಂದು ಕ್ಷಣ ಯೋಚಿಸಿದೆ.
ಅಪ್ಪ ಎಂದರೆ ನಮ್ಮ ಕಾಲದಲ್ಲಿ ಮಕ್ಕಳು ಹೆದರಲೇ ಬೇಕಾದ ವಸ್ತುಗಳ ಪಟ್ಟಿಯಲ್ಲಿ ಬರುತ್ತಿದ್ದವ. ಹುಲಿ, ಸಿಂಹ, ಗುಮ್ಮ,ರಾಕ್ಷಸ, ಭೂತ, ಅಪ್ಪ ಎಲ್ಲಾ ಒಂದೇ ಸಾಲಿನಲ್ಲಿ ಬರುತ್ತಿದ್ದರು. ಕೆಲವು ಮನೆಗಳಲ್ಲಿ ಬದಲಾವಣೆಯ ಗಾಳಿ ಬೀಸಿ ಅಪ್ಪ ಎಂದರೆ ಮನುಷ್ಯನೇ ಎಂದು ಅರಿವು ಮೂಡುತ್ತಿತ್ತು. ನಮ್ಮಲ್ಲಿ ನಾನು ಅಪ್ಪನೊಂದಿಗೆ ನಗುತ್ತಾ ಮಾತನಾಡುತ್ತೇನೆ ಎನ್ನುವುದೇ ನನ್ನ ಓರಗೆಯ ಹಲವು ಗೆಳತಿಯರಿಗೆ ಅಚ್ಚರಿಯ ವಿಷಯವಾಗಿತ್ತು. ಏಕೆಂದರೆ ಹೆಚ್ಚಿನ ಮನೆಗಳಲ್ಲಿ ಅಪ್ಪಂದಿರು ತಮ್ಮನ್ನು ಮನೆಯ ವಿಶೇಷ ಸದಸ್ಯನಾಗಿಯೇ ಗುರುತಿಸಿಕೊಳ್ಳುವುದರಲ್ಲೇ ಸಂತಸ ಪಡುತ್ತಿದ್ದ ಕಾರಣ ಮೇಲ್ಮಟ್ಟದ ಪೀಠವನ್ನು ತ್ಯಾಗ ಮಾಡುವ ಮನಸ್ಥಿತಿಗೆ ಇನ್ನೂ ಹೊಂದಿಕೊಂಡಿರಲಿಲ್ಲ.
ನಮ್ಮ ಶಾಲಾ ದಿನಗಳಲ್ಲಿ ನಾವು ಪರೀಕ್ಷೆಗಳಿಗೆ ಸ್ವಲ್ಪವೂ ಹೆದರುತ್ತಿರಲಿಲ್ಲ. ಯಾಕೆಂದರೆ ಅದರಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರ ಬರೆಯುವುದು ನಮ್ಮ ಯೋಗ್ಯತೆಗೆ ಮೀರಿದ್ದು ಎಂದು ನಾವು ಮೊದಲೇ ಅರ್ಥ ಮಾಡಿಕೊಂಡಿದ್ದರಿಂದ ಪರೀಕ್ಷೆಗಳು ಮೂವತ್ತೈದು ಮಾರ್ಕನ್ನು ಗಳಿಸುತ್ತವೆ ಎಂದಾದರೆ ಸುಲಭ ಎಂದೇ ಎನ್ನಿಸಿಕೊಳ್ಳುತ್ತಿತ್ತು. ಅದರಿಂದ ಹೆಚ್ಚು ಮಾರ್ಕೇನಾದರೂ ಸಿಕ್ಕಿದರೆ ಅದರ ಕ್ರೆಡಿಟ್ಟೆಲ್ಲಾ ದೇವರಿಗೇ ಹೋಗುತ್ತಿತ್ತು. ಆದರೆ ಹೆದರಿಕೆ ಆಗುತ್ತಿದ್ದುದು ಉತ್ತರ ಪತ್ರಿಕೆಗೆ ಅಪ್ಪನ ಸೈನ್ ಹಾಕಿಸಿಕೊಂಡು ಬನ್ನಿ ಎಂದು ಕೊಟ್ಟಾಗ. ಅಲ್ಲಿಯವರೆಗೆ ಇದ್ದ ಧೈರ್ಯದ ಗಂಟು ಕರಗಿ ನೀರಾಗಿ ಕಾಲ ಬುಡದಲ್ಲಿ ಹರಿದು ಹೋಗುವಂತಾಗುತ್ತಿತ್ತು.
ಅದ್ಯಾವ ಮೇಷ್ಟ್ರಿಗೆ ಅವರ ಮೇಷ್ಟ್ರು ಇಂತಹ ಶಿಕ್ಷೆ ಕೊಟ್ಟು ಅವಮಾನ ಮಾಡಿದ್ದರೋ ಕಾಣೆ!! ಮೇಷ್ಟ್ರುಗಳ ಕುಲಕೋಟಿ ತಮ್ಮ ಶಿಷ್ಯರನ್ನು ಉದ್ದಾರ ಮಾಡುವ ಪ್ಲಾನಿನ ಲೀಸ್ಟಿನಲ್ಲಿ ಈ ಥರ್ಡ್ ಡಿಗ್ರೀ ಶಿಕ್ಷೆಯಂತೂ ಖಾಯಂ ಇದ್ದೇ ಇರುತ್ತಿತ್ತು. ನಮ್ಮ ಲೆಕ್ಕದ ಮೇಷ್ಟ್ರಂತೂ ತಮಗಾದ ಅವಮಾನದ ಬೆಂಕಿಯನ್ನು ನಮ್ಮಂತಹ ಬಡಪಾಯಿ ಶಿಷ್ಯರ ಕಣ್ಣೀರ ಕೋಡಿಯಿಂದ ತಣಿಸಿಕೊಳ್ಳುತ್ತೇನೆಂದು ಪ್ರತಿಜ್ಞೆ ಮಾಡಿದ್ದರೆಂದು ತೋರುತ್ತದೆ. ಪ್ರತಿಸಲ ಉತ್ತರ ಪತ್ರಿಕೆ ಕೊಟ್ಟಾಗಲೂ ಅವರ ಮುಖದಲ್ಲಿ ಸುಂದರ ನಗುವೂ, ನಮ್ಮ ಮೊಗದಲ್ಲಿ ಭವಿಷ್ಯದ ನೋವೂ ಕಾಣುತ್ತಿತ್ತು. ಹಾಗೆಂದು ನಮ್ಮ ಬೆನ್ನಿಗೆ ದನಕ್ಕೆ ಹೊಡೆಸಿದಂತೆ ಹೊಡೆಸಿದರೂ ಎಷ್ಟು ಪೆಟ್ಟು ಬಿದ್ದಿತ್ತೆಂಬ ಲೆಕ್ಕವೂ ಮರುದಿನಕ್ಕೆ ಮರೆತು ನಾವು ಯಥಾ ಪ್ರಕಾರ ಎವರೇಜ್ ವಿದ್ಯಾರ್ಥಿಗಳಾಗಿಯೇ ಮುಂದುವರಿಯುತ್ತಿದ್ದೆವು.
ಇಂತಹ ಕಾಲದಲ್ಲೇ ಆರು ಅಣ್ಣ ಮೂರು ಜನ ತಮ್ಮಂದಿರ ನಡುವೆ ಹುಟ್ಟಿದ ಏಕಮೇವ ಅದ್ಭುತ ನನ್ನ ಗೆಳತಿ. ಆ ಕಾರಣಕ್ಕೆ ಮನೆಯವರ ಪ್ರೀತಿ ಪ್ರೇಮವನ್ನು ದಾರಾಳವಾಗಿ ಪಡೆದಿದ್ದರೂ ಹುಡುಗಿಯನ್ನು ಶಾಲೆಗೆ ಕಳಿಸಲಿಚ್ಚಿಸದ ಅಜ್ಜ ಅಜ್ಜಿಯರ ಗೊಣಗಾಟದ ನಡುವೆಯೂ ಅಮ್ಮನ ಒತ್ತಾಸೆಯಿಂದ ಶಾಲೆಗೆ ಸೇರಿದ್ದಳು. ಅದೂ ಯಾವದಾದರೂ ಕ್ಲಾಸಿನಲ್ಲಿ ಫೈಲ್ ಆದರೆ ಅಲ್ಲಿಗೆ ಶಿಕ್ಷಣ ನಿಲ್ಲುವುದು ಎಂಬ ಅಪ್ಪನ ಶರತ್ತಿನೊಂದಿಗೆ. ಹಾಗಾಗಿ ಶಾಲೆಗೆ ಹೋಗುತ್ತಲೇ ಇರಬೇಕಾದರೆ ಪಾಸ್ ಆಗಲೇಬೇಕಾದ ಅನಿವಾರ್ಯತೆ ಅವಳಿಗಿತ್ತು.
ಆ ದಿನ ನಮ್ಮ ಗಣಿತದ ಪೇಪರ್ ಸಿಗುವ ದಿನ. ಒಂದು ಕೈಯಲ್ಲಿ ಉತ್ತರ ಪತ್ರಿಕೆ ಕೊಡುತ್ತಿದ್ದಂತೆ ಬಾಯಲ್ಲಿ ಬಯ್ಗುಳದ ಮಳೆ ಹರಿಸುತ್ತಾ, ಬೆತ್ತವನ್ನು ಬೆನ್ನಿನ ಮೇಲೆ ಜಳಪಿಸುವುದು ಅವರ ಕ್ರಮ. ಇಡೀ ಕ್ಲಾಸಿನಲ್ಲಿ ಯಾರೂ ಇದರಿಂದ ಪಾರಾಗುವಂತಿಲ್ಲವಾದ ಕಾರಣ ಯಾರಿಗೆ ಎಷ್ಟು ಮಾರ್ಕು ಸಿಕ್ಕಿದೆ ಎಂದು ಉಳಿದವರಿಗೆ ತಿಳಿಯುವಂತಿರಲಿಲ್ಲ. ಆಗಷ್ಟೇ ಬೆನ್ನಿನ ಮೇಲಿನ ಪೆಟ್ಟಿನ ನೋವನ್ನು ಅರಗಿಸಿಕೊಳ್ಳುತ್ತಾ ನನ್ನ ಬೆಂಚಿನಲ್ಲಿ ಕುಳಿತು ಮಾರ್ಕು ನೋಡಿಕೊಂಡಿದ್ದೆ. ಮನೆಯಲ್ಲೂ ಇದೇ ಮಾರ್ಕಿಗೆ ಪೆಟ್ಟು ಬೀಳುವ ಹೆದರಿಕೆ ಇಲ್ಲದ ಕಾರಣ ಮೇಷ್ಟ್ರು ಹೊಡೆದ ಪೆಟ್ಟಿನ ನೋವು ತನ್ನಿಂದ ತಾನೇ ಮಾಯವಾಗಿ ನಗು ಮೂಡಿತ್ತು.
ಆದರೆ ನನ್ನ ಗೆಳತಿ ನನ್ನಷ್ಟು ಅದೃಷ್ಟಶಾಲಿಯಾಗಿರಲಿಲ್ಲ. ಪರೀಕ್ಷೆಯಲ್ಲಿ ಅವಳು ಗಳಿಸಿದ ಅಂಕ ಭಾರತೀಯರ ಹೆಮ್ಮೆಯ ಕೊಡುಗೆ ’ಸೊನ್ನೆ’ಯಾಗಿತ್ತು. ಮತ್ತು ಈ ಪೇಪರಿಗೆ ಅವಳು ಅಪ್ಪನ ಸಹಿಯನ್ನು ಕಡ್ಡಾಯವಾಗಿ ಹಾಕಿಸಲೇಬೇಕಾಗಿತ್ತು. ಇದು ಕೊನೆಯ ಪರೀಕ್ಷೆಯೇನು ಅಲ್ಲದಿದ್ದರೂ ಓದಿನ ಬಗ್ಗೆ ಅಸಹನೆ ಇರುವ ಮನೆ ಮಂದಿಗೆ ಅವಳ ಓದನ್ನು ನಿಲ್ಲಿಸಲು ಇಷ್ಟು ಸಾಕಾಗುತ್ತಿತ್ತು. ನಮ್ಮೆಲ್ಲರ ಕಣ್ಣಿಗೆ ಅವಳೀಗ ದುರಂತ ನಾಯಕಿಯಂತೆ ಕಾಣಿಸುತ್ತಿದ್ದಳು. ಅವಳು ಶಾಲೆಗೆ ಬರದೇ ಇದ್ದರೆ ಎಲ್ಲರಿಗಿಂತ ಹೆಚ್ಚು ನೋವು ಅನುಭವಿಸುತ್ತಿದ್ದವಳು ನಾನೇ. ಯಾಕೆಂದರೆ ಚಿಲ್ಲರೆ ಹಣದ ಥೈಲಿಯ ಒಡತಿಯಾಗಿದ್ದ ಅವಳು ನಿತ್ಯ ಕೊಡಿಸುತ್ತಿದ್ದ ಕಟ್ಲೀಸ್, ಹುಳಿ ಮಿಠಾಯಿ, ಉಪ್ಪು ಹಾಕಿ ಬೇಯಿಸಿದ ಕಡಲೆ, ರಬ್ಬರ್ ಮಿಟಾಯಿ ಎಂದು ನಾವಾಗ ಕರೆಯುತ್ತಿದ್ದ ಎಷ್ಟು ಜಗಿದರೂ ಮುಗಿಯದ ಬಬ್ಬಲ್ ಗಮ್ ಇವುಗಳ ಪಾಲುದಾರಳಾಗಿದ್ದ ನಾನು ಈ ಎಲ್ಲಾ ಸುಖಗಳಿಂದ ವಂಚಿತಳಾಗಬೇಕಿತ್ತು. ಇದು ಅವಳು ಫೇಲ್ ಆಗುವುದಕ್ಕಿಂದ, ಅವಳ ಶಿಕ್ಷಣ ನಿಲುವುದಕ್ಕಿಂತಲೂ ದೊಡ್ಡ ದುರಂತವೆಂದೇ ನನ್ನ ಅನಿಸಿಕೆಯಾಗಿತ್ತು.
ಹಾಗಾಗಿ ಇದಕ್ಕೆ ಪರಿಹಾರೋಪಾಯವಾಗಿ ಏನು ಮಾಡುವುದೆಂದು ನಾನು ಮತ್ತು ಅವಳು ಕುಳಿತು ತುಂಬಾ ತಲೆ ಕೆಡಿಸಿಕೊಂಡೆವು. ಹೇಗೂ ಸೊನ್ನೆ ಮಾರ್ಕು ಇದೆ ಅಲ್ವಾ ಅದರ ಹಿಂದೆ ಒಂದು ಎಂದು ಸೇರಿಸಿದರೆ ಹತ್ತು ಆಗುವುದಿಲ್ವಾ ಎಂದೆ.ಇಪ್ಪತ್ತೈದಕ್ಕೆ ಹತ್ತು ಮಾರ್ಕು ಬರುವುದೆಂದರೆ ಆಗಿನ ಕಾಲದಲ್ಲಿ ಸಾಮಾನ್ಯವಾದ ವಿಷಯವೇನೂ ಅಲ್ಲ. ಅವಳಿಗೂ ಈ ಉಪಾಯ ಇಷ್ಟ ಆಯಿತು. ಆದರೆ ಪೆನ್ಸಿಲ್ ರಬ್ಬರ್ ಮಾತ್ರ ಉಪಯೋಗಿಸುತ್ತಿದ್ದ, ಇನ್ನೂ ಪೆನ್ನಿನಲ್ಲಿ ಬರೆಯುವ ಮಟ್ಟಕ್ಕೆ ಏರದ ನಾವುಗಳು ಪೆನ್ನು ಹುಡುಕುವುದೆಲ್ಲಿಂದ? ಅದರಲ್ಲೂ ಕೆಂಪು ಶಾಯಿಯ ಪೆನ್ನು. ಮನೆಯಲ್ಲಿ ಅಪ್ಪನ ಕವಾಟಿನಲ್ಲಿ ಭದ್ರವಾಗಿ ಪೆನ್ನು ಇತ್ತಾದರೂ ಅದು ನೀಲಿ ಶಾಯಿಯದ್ದು. ಅದಕ್ಕಾಗಿ ಪೆನ್ನಿನ ಬದಲಿಗೆ ಯಾವುದಾದರೂ ಕೆಂಪು ಬಣ್ಣ ಕಾಣುವಂತೆ ಮಾಡುವ ಬದಲೀ ವಸ್ತುವಿನ ಬಗ್ಗೆ ಚಿಂತಿಸಲು ತೊಡಗಿದೆವು. ಅಮ್ಮಂದಿರು ಹಚ್ಚುವ ಕುಂಕುಮ, ಕೆಂಪು ರಸ ಹೊರ ಹಾಕುವ ಒಂದೆರಡು ಎಲೆಗಳು, ಮರದ ಕಾಂಡದ ರಸ ನಮಗೆ ನೆನಪಿಗೆ ಬಂತಾದರೂ ಅದು ಇಂಕು ಪೆನ್ನಿನ ರೀತಿ ತೋರದೇ ನಮ್ಮ ಕಳ್ಳತನ ಬಯಲಿಗೆಳೆದರೆ ಎಂಬ ಹೆದರಿಕೆ ಹುಟ್ಟಿತು.
ಈಗ ಕೆಂಬಣ್ಣದ ಪೆನ್ನು ಸಂಪಾದಿಸುವುದು ಮತ್ತು ಅದರಿಂದ ಒಂದರ ಸಂಖ್ಯೆಯ ಪುಟ್ಟ ಗೆರೆ ಎಳೆಯುವ ಮೂಲಕ ಓರೆಯಾಗಲಿರುವ ಅವಳ ಭವಿಷ್ಯತ್ತನ್ನು ನೇರ ಮಾಡುವುದಕ್ಕೆ ನಾನು ಬದ್ಧಳಾಗಿದ್ದೆ. ಈ ಆಪರೇಷನ್ ರೆಡ್ ಇಂಕ್ ಪೆನ್ ಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ದಳಾಗಿದ್ದೆ ಎಂದರೆ ನನಗೆ ಸಿಗುತ್ತಿದ್ದ ಮಿಟಾಯಿ, ಕಡಲೆಗಳನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳಲೂ ಹಿಂದೆ ಮುಂದೆ ನೋಡದೇ ಅಖಾಡಕ್ಕಿಳಿದೆ.
ನಮ್ಮ ಕ್ಲಾಸಿನ ಲೀಡರ್ ಆದ ಹುಡುಗಿಯೊಬ್ಬಳಿಗೆ ಪ್ರತಿ ದಿನ ಮೇಷ್ಟ್ರು ಬರುವುದಕ್ಕೆ ಮೊದಲೇ ಅವರ ಬೆತ್ತ, ಡಸ್ಟರ್, ಸೀಮೆ ಸುಣ್ಣ, ಪೆನ್ನು, ಹಾಜರಿ ಪುಸ್ತಕ ಇಷ್ಟನ್ನು ತರುವ ಹೊಣೆ ಇತ್ತು. ಆಗ ಕ್ಲಾಸ್ ಲೀಡರ್ ಆಗುವುದಕ್ಕೆ ಬೇಕಾದ ಮೊದಲ ಅರ್ಹತೆ ಎಂದರೆ ಕ್ಲಾಸಿನಲ್ಲಿ ಉಳಿದವರೆಲ್ಲರಿಗಿಂತಲೂ ಉದ್ದವಾಗಿರುವುದು. ಆ ಹುಡುಗಿ ಅದಾಗಲೇ ಒಂದೇ ಕ್ಲಾಸಿನಲ್ಲಿ ನಾಲ್ಕು ವರ್ಷದ ಅನುಭವ ಪಡೆದವಳು ಮಾತ್ರವಲ್ಲದೇ ನಮ್ಮ ಮೇಷ್ಟ್ರು ಅವಳ ಅಪ್ಪನ ಬಾಡಿಗೆ ಮನೆಯಲ್ಲೇ ವಾಸವಾಗಿದ್ದುದು ಅವಳ ಲೀಡರ್ ಗಿರಿಯನ್ನು ನಿರಾತಂಕವಾಗಿ ಮುಂದುವರಿಸಿತ್ತು. ಸಾದಾರಣವಾಗಿ ನಮ್ಮಂತ ಚಿಲ್ಟಾರಿಗಳನ್ನು ಕಡೆಗಣ್ಣಿನಲ್ಲೂ ನೋಡದ ಅವಳನ್ನು ಕೇಸರಿ ಬಣ್ಣದ ದುಂಡಗಿನ ಹುಳಿ ಸಿಹಿ ರುಚಿ ಹೊಂದಿದ ಮಿಟಾಯಿಯ ಮೂಲಕ ಹಳ್ಳಕ್ಕೆ ಬೀಳಿಸಿದೆ. ಆ ದಿನ ಅವಳು ಮಾಡುವ ಕೆಲಸ ನನ್ನ ಪಾಲಿಗೆ. ಮೊದಲೇ ನನ್ನ ಗೆಳತಿಯ ಉತ್ತರ ಪತ್ರಿಕೆಯನ್ನು ಲಂಗದ ಮರೆಯಲ್ಲಿ ಹಿಡಿದು ಡವಗುಟ್ಟುವ ಎದೆಯ ಸದ್ದು, ನಡುಗುತ್ತಿರುವ ಕಾಲಿನೊಂದಿಗೆ ಆಫೀಸು ರೂಮಿನೆಡೆಗೆ ಹೆಜ್ಜೆ ಹಾಕಿದೆ.
ನಮ್ಮ ಮೇಷ್ಟ್ರು ಕುಳಿತುಕೊಳ್ಳುವ ಮೇಜಿನ ಕಡೆಗೆ ಹೆಜ್ಜೆ ಹಾಕಿ ಅವರೆಡೆಗೆ ನೋಡದೆ ಎಲ್ಲವನ್ನೂ ಒಟ್ಟಿಗೆ ಕೈಯಲ್ಲಿ ಹಿಡಿದುಕೊಳ್ಳುವ ಪ್ರಯತ್ನ ಮಾಡಿದೆ. ಡೆಸ್ಟರ್ ಹಿಡಿದರೆ ಜಾರುವ ಕೋಲು, ಹಾಜರಿ ಪುಸ್ತಕ ಬಿಗಿಗೊಳಿಸಿದರೆ ಸೀಮೆಸುಣ್ಣ ತುಂಡಾಗುವ ಭಯ.. ಇವೆಲ್ಲವುಗಳ ನಡುವೆ ನನ್ನ ನಿರ್ಧಾರ ಅಚಲವಾಗಿತ್ತು. ಗೆಳತಿಯ ಭವಿಷ್ಯದ ಕರಾಳತೆಗಿಂತಲೂ, ಕಡ್ಲೆ, ಮಿಟಾಯಿಗಳು ಇಲ್ಲದ ನನ್ನ ನೀರಸ ದಿನಗಳ ಭವಿಷ್ಯ ನನ್ನನ್ನು ನಿರ್ಧಾರದಿಂದ ಹಿಂದೆ ಸರಿಯದಂತೆ ಮಾಡಿತ್ತು.
ಅಫೀಸು ರೂಮಿನಿಂದ ಹೊರ ಬಂದಾಗ ಹುಲಿಯ ಗುಹೆಯನ್ನೇ ಹೊಕ್ಕು ಜೀವಂತವಾಗಿ ಹೊರ ಬಂದ ಅನುಭವ. ಆದರೆ ಆಗಬೇಕಾದ ಕೆಲಸವಿನ್ನೂ ಮುಗಿದಿರಲಿಲ್ಲ.ಇದಕ್ಕಾಗಿ ಸಹಜ ಎನ್ನುವಂತ ನಟನೆಯನ್ನು ಇನ್ನೂ ಮಾಡಬೇಕಿತ್ತು. ಕೈಯಲ್ಲಿ ಹಿಡಿದಿದ್ದ ಹಾಜರಿ ಪುಸ್ತಕ, ಪೆನ್ನು, ಕೋಲುಗಳನ್ನು ಹಿಡಿದುಕೊಳ್ಳಲು ಕಷ್ಟವಾದಂತೆ ನೆಲಕ್ಕೆ ಬೀಳಿಸಿದೆ. ಅದನ್ನು ಹೆಕ್ಕುವ ಗಡಿಬಿಡಿಯಲ್ಲೇ ಲಂಗದ ಮರೆಯಲ್ಲಿ ಇಟ್ಟಿದ್ದ ಉತ್ತರ ಪತ್ರಿಕೆಯನ್ನು ಹೊರ ತೆಗೆದು ಕೆಂಪು ಪೆನ್ನಿನಲ್ಲಿ ಸೊನ್ನೆಯ ಹಿಂದೆ ಒಂದು ಗೆರೆಯನ್ನು ಎಳೆದು ಅದನ್ನು ಹತ್ತನ್ನಾಗಿಸಿದೆ. ಅದನ್ನು ಲಂಗದ ಮರೆಗೆ ಸೇರಿಸಿ, ಬೆವರುವ ಕೈಗಳಲ್ಲಿ ಮತ್ತೆಲ್ಲವನ್ನೂ ಹಿಡಿದು ಕ್ಲಾಸ್ ರೂಮಿನ ಮೇಜಿನಲ್ಲಿಟ್ಟೆ.ಆತಂಕದ ನೋಟ ಬೀರುತ್ತಿದ್ದ ಗೆಳತಿಗೆ ನನ್ನ ನಗು ಮುಖ ಕಂಡು ಸಂತಸವಾಗಿತ್ತು.
ಅವಳ ಮನೆಯಲ್ಲಿ ಕೇವಲ ಮಾರ್ಕನ್ನು ಮಾತ್ರ ನೋಡಿ ಸೈನ್ ಹಾಕಿದ ಅವಳ ಅಪ್ಪನಿಗೂ ಒಂದೇ ಒಂದು ರೈಟ್ ಗುರುತಿಲ್ಲದ ಉತ್ತರ ಪತ್ರಿಕೆಗೆ ಇಷ್ಟು ಮಾರ್ಕು ಹೇಗೆ ಬಂದಿದ್ದು ಎಂದು ಯೋಚಿಸುವಷ್ಟು ಸಮಯವಿರಲಿಲ್ಲ. ಸಹಿ ಸಿಕ್ಕಿದ ಕೂಡಲೇ ರಬ್ಬರಿನಲ್ಲಿ ಒಂದನ್ನು ಅಳಿಸಿ ಮೊದಲಿನಂತೆ ಸೊನ್ನೆ ಮಾರ್ಕನ್ನೇ ಹೊತ್ತ ಉತ್ತರ ಪತ್ರಿಕೆಯನ್ನು ಮೇಷ್ಟ್ರ ಮೇಜಲ್ಲಿಟ್ಟಾಗಿತ್ತು.
ಆದರೆ ಅಂದಿನಿಂದಲೇ ಇಬ್ಬರೂ ಇನ್ನು ಇಂತಹ ತಪ್ಪು ಆಗದಂತೆ ಅಂದರೆ ಪರೀಕ್ಷೆಯಲ್ಲಿ ತಾನೇ ತಾನಾಗಿ ಪಾಸಾಗುವಷ್ಟು ಮಾರ್ಕನ್ನು ಪಡೆದೇ ತೀರುತ್ತೇವೆಂಬ ಛಲ ಹೊತ್ತು ಅದರಂತೆ ನಡೆದೆವು.
ಹೀಗಿದ್ದ ಆ ಕಾಲದ ಅಪ್ಪಂದಿರು ಕಾಲಕ್ರಮೇಣ ಬದಲಾಗುತ್ತಾ ತಮ್ಮ ಮಕ್ಕಳ ತಪ್ಪುಗಳಿಗೆ ತಾವೇ ಬೇಲಿಗಳಾಗುತ್ತಾ, ಕಡಿಮೆ ಮಾರ್ಕು ಬಂದ ತಮ್ಮ ಮಕ್ಕಳ ಬೆನ್ನನ್ನು ತಾವೇ ತಟ್ಟಿ, ’ಅಮ್ಮನಿಗೆ ಹೇಳಲ್ಲ, ಕೊಡಿಲ್ಲಿ ಸೈನ್ ಹಾಕ್ತೀನಿ’ ಎಂದು ಎಳೆದು ತೆಗೆದುಕೊಂಡು ಮಕ್ಕಳ ಬಾಯಲ್ಲಿ ’ ಅಪ್ಪಾ ಐ ಲವ್ ಯೂ’ ಎಂದು ಹೇಳಿಸುವಷ್ಟು ಬದಲಾದದ್ದು ಹೇಗೆ ಎಂಬುದೇ ಬಿಡಿಸಲಾರದ ಕಗ್ಗಂಟು.
*****
ಈಗ ಕೆಂಬಣ್ಣದ ಪೆನ್ನು ಸಂಪಾದಿಸುವುದು ಮತ್ತು ಅದರಿಂದ ಒಂದರ ಸಂಖ್ಯೆಯ ಪುಟ್ಟ ಗೆರೆ ಎಳೆಯುವ ಮೂಲಕ ಓರೆಯಾಗಲಿರುವ ಅವಳ ಭವಿಷ್ಯತ್ತನ್ನು ನೇರ ಮಾಡುವುದಕ್ಕೆ ನಾನು ಬದ್ಧಳಾಗಿದ್ದೆ. ಈ ಆಪರೇಷನ್ ರೆಡ್ ಇಂಕ್ ಪೆನ್ ಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ದಳಾಗಿದ್ದೆ !!! ವಾವ್! ಗ್ರೇಟ್ ಬರಹ.
"…………….ಪರೀಕ್ಷೆಯಲ್ಲಿ ಅವಳು ಗಳಿಸಿದ ಅಂಕ ಭಾರತೀಯರ ಹೆಮ್ಮೆಯ ಕೊಡುಗೆ ’ಸೊನ್ನೆ’ಯಾಗಿತ್ತು. " ನಾನು ಅದರ ಆಸುಪಾಸಿನಲ್ಲೇ ಇರುತ್ತಿದ್ದೆನು… ಚೆನ್ನಾಗಿದೆ ಮೇಡಂ ಬರಹ.
ತುಂಬಾ ನವಿರಾದ ನಿರೂಪಣೆ. ಆತ್ಮೀಯವಾದ ಬರಹ. 🙂
ನಿಮ್ಮ ಬರಹ ಚೆನ್ನಾಗಿ ಮೂಡಿ ಬಂದಿದೆ. ನನ್ನ ಬಾಲ್ಯದ ದಿನಗಳ ನೆನಪನ್ನು ಹಸಿರಾಗಿಸಿದ್ದಕ್ಕೆ ಧನ್ಯಾವಾದಗಳು.
Thumba manamuttuva haage barediddiri nice. Mahila sampadada oggarane kooda thumbs eshtavaytu nange- sangeetha raviraj
adhbutha…tumba ista patte
ಬರವಣಿಗೆ ಅನುಭವಸಹಜ ರೂಪ.ಕಥೆ ಚೆನ್ನಾಗಿದೆ
ವಂದನೆಗಳು 🙂