“ಅಪ್ಪನಿಲ್ಲದ ಈ ಮೂರು ವರ್ಷದ ನಂತರ….. . . . . .”: ಧನರಾಜ್ ಪಾತ್ರೆ

ನಾನು ನೋಡಿದ ಮೊದಲ ವೀರ.
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸುವ ಜಾದೂಗಾರ ಅಪ್ಪ,

ಹಾಡು ಕೇಳಿದಾಗೆಲ್ಲಾ.. ಅಪ್ಪ ಕಣ್ಣೆದುರು ನಿಲ್ಲುತ್ತಾರೆ. ಸಾಲುಗಳು ಮಾತ್ರ ಒಂದು ಕುಟುಂಬದಲ್ಲಿ ತಂದೆಯ ಪಾತ್ರ ಪ್ರತಿಬಿಂಬಿಸುತ್ತದೆ. ನನ್ನ ತಂದೆಗೆ “ಬಾಬಾ” ಎಂತಲೇ ಕರೀತಿದ್ದೆ ನನ್ನ ಇಬ್ಬರು ಅಣ್ಣಂದಿರು (ಜಗನ್ನಾಥ, ದಶರಥ)
“ದಾದಾ” ಅಂತ ಕರೀತಿದ್ದರು. ನನ್ನ ತಂದೆ ತಾಯಿ ಹೊಟ್ಟೆ ಪಾಡಿಗಾಗಿ ಕೂಲಿ ಹುಡುಕಿಕೊಂಡು ಸತಾರಕ್ಕೆ (ಮಹಾರಷ್ಟ್ರ) ಹೋದಾಗ ಅಲ್ಲಿ ನನ್ನ ಇಬ್ಬರು ಅಣ್ಣಂದಿರು ಹುಟ್ಟಿದ್ದು ಮಾಹಾರಾಷ್ಟ್ರದಲ್ಲಿ ತಂದೆಗೆ ದಾದಾ ಅಂತಾ ಕರೆಯೋ ರೂಢಿ.

ಆದರೆ, ನಾನು ನಮ್ಮ ಸ್ವಂತ ಊರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿರಗುಡಿಯಲ್ಲಿ ಹುಟ್ಟಿದ್ದರಿಂದ ನಮ್ಮ ಮನೆಯ ಭಾಷೆ ಮರಾಠಿ ಇರುವುದರಿಂದ “ಬಾಬಾ” ಅಂತ ಕರೀತಿದ್ದೆ. ನಮ್ಮ ತಂದೆ ನಮ್ಮ ಸಲುವಾಗಿ ಪಟ್ಟ ಪಾಡು ಬೇರೆ ತಂದೆಯವರಿಗಿಂತ ನನ್ನ ತಿಳುವಳಿಕೆ ಮಟ್ಟಿಗೆ ಭಿನ್ನವಾದದ್ದು. ಅವರು ನಿರ್ವಹಿಸಿದ ಪಾತ್ರ ವಿರಳಾತೀವಿರಳ. ಒಬ್ಬ ಅಕ್ಷರಸ್ಥ ತಂದೆ ತನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ದೊಡ್ಡ ವಿಷಯವೇನಲ್ಲ ಆದರೆ, ನನ್ನ ತಂದೆ ಒಬ್ಬ ಅನಕ್ಷರಸ್ಥ ಕೂಲಿ ಕಾರ್ಮಿಕ ಇದ್ದರೂ ಶಿಕ್ಷಣದ ಬಗ್ಗೆ ಅವರಿಗೆ ಇದ್ದ ಆಸಕ್ತಿ ಎಂಥವರಿಗೂ ಬೆರಗು ಮೂಡಿಸುತ್ತದೆ. ಒಂದು ಘಟನೆ ಹೇಳಲೇಬೇಕು. ನನ್ನ ಹಿರಿಯ ಅಣ್ಣ (ಜಗನ್ನಾಥ) ಎಸ್.ಎಸ್.ಎಲ್.ಸಿ ಫೇಲಾದಾಗ ನಮ್ಮ ತಂದೆ ಅಣ್ಣನಿಗೆ ತುಂಬಾ ಹೊಡೆದಿದ್ದರು, ನನ್ನ ಮಕ್ಕಳು ಚೆನ್ನಾಗಿ ಓದಬೇಕು ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು, ನನ್ನ ಥರಾ ಅವರ ಪರಿಸ್ಥಿತಿ ಇರಬಾರದು ಅಂತಾ ಬಯಸಿದ್ದರಿಂದ ಸಹಜವಾಗಿ ಅವರ ಕೋಪಕ್ಕೆ ಕಾರಣವಾಗಿತ್ತು ನನ್ನ ಅಣ್ಣನ ಫಲಿತಾಂಶ.

ಹೊಟ್ಟೆ ಹೊರೆಯುವುದೇ ಕಷ್ಟವಿದ್ದ ದಿನಗಳಲ್ಲಿ ಅಣ್ಣನು ಫೇಲಾದ ವಿಷಯಗಳನ್ನು ಮತ್ತೆ ಫೀಸು ಕಟ್ಟಲು ಹಣ ಹೊಂದಿಸಲು ಕಷ್ಟವಿತ್ತು. ಬೇರೆ ದಾರಿ ಇಲ್ಲದೇ ನನ್ನ ತಾಯಿಯ ತಾಳಿಯನ್ನು ಅಡವಿಟ್ಟು ನಮ್ಮ ತಂದೆ ಫೀಸು ಕಟ್ಟಿ ಉನ್ನತ ಶಿಕ್ಷಣ ಕೊಡಿಸಿದರು. ಹೀಗೆ ಪ್ರತಿ ದಿನದಂತೆ ನನ್ನ ಹಿರಿಯ ಅಣ್ಣನಿಗೆ ಓದುವ ಸಲುವಾಗಿ ನಸುಕಿನಲ್ಲಿ ಎಬ್ಬಿಸಿದ್ದಾರೆ. ಅಣ್ಣಾ ಸ್ವಲ್ಪ ಸಮಯ ನಿದ್ದೆಯ ಮಂಪರಿನಲ್ಲಿ ಓದುತ್ತಾ ನಿದ್ದೆ ತಡೆಯಲಾರದೇ ಮತ್ತೆ ಮಲಗಿ ಬಿಟ್ಟಿದ್ದಾರೆ. ಅಕಸ್ಮಾತ್ ಚಿಮಣಿ ಎಣ್ಣೆಯ ದೀಪ ಪುಸ್ತಕಗಳಿಗೆ ಹತ್ತಿದೆ, ಅದೃಷ್ಟವಶಾತ್ ಅದೇ ಸಮಯದಲ್ಲಿ ನನ್ನ ತಾಯಿಗೆ ಎಚ್ಚರಿಕೆಯಾದ್ದರಿಂದ ಎಲ್ಲವೂ ಶಾಂತ. ಇಲ್ಲದಿದ್ದರೆ ಅದೇನು ಅನಾಹುತವಾಗುತ್ತಿತ್ತೋ!

ಅಂದು ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ದಂಡಿಸುವುದು ಮಾಮೂಲಾಗಿತ್ತು (ಈಗ ಬಿಡಿ, ಮಕ್ಕಳನ್ನು ದಂಡಿಸುವುದು ಅಪರಾಧ) ಆದರೆ ಎಷ್ಟೋ ಜನ ಪಾಲಕರು “ಮಕ್ಕಳಿಗೆ ಯಾಕೆ ಹೊಡಿದ್ರಿ?” ಅಂತ ಶಿಕ್ಷಕರ ಜೊತೆ ಜಗಳ ಮಾಡುತ್ತಿದ್ದರು. ಮೊದಲೇ ಶಿಕ್ಷಕರನ್ನು ಕಂಡು ಹೆದರುತ್ತಿದ್ದ ನಮಗೆ ನಮ್ಮ ತಂದೆ ದಂಡಂ ದಶಗುಣಂ ಎನ್ನುವಂತೆ ಸೂಚನೆ ಬೇರೆ ನೀಡಿರುತ್ತಿದ್ದರು. ಇದಕ್ಕಿಂತ ಹೊಲದ ಕೆಲಸ, ದನ ಕಾಯೋದೇ ಲೇಸೆಂದು ಅನ್ನಿಸಿದ್ದು ಸುಳ್ಳಲ್ಲ.

ಇವೆಲ್ಲ ಘಟನೆಗಳನ್ನು ನಾನು ಏಕೆ ಪ್ರಸ್ತಾಪಿಸುತ್ತಿದ್ದೇನೆ ಅಂದರೆ, ನನ್ನ ತಂದೆ ವಿಭಿನ್ನವಾಗಿ ಯೋಚಿಸುತ್ತಿದ್ದರು. ಅವರು ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡುವ ತುಡಿತ ಅಬ್ಬಾ!! ಒಬ್ಬ ಕೂಲಿ ಕಾರ್ಮಿಕ ಈ ರೀತಿ ಯೋಚನೆ ಮಾಡುವುದು ಭಿನ್ನವಲ್ಲವೇ? ಅದೂ ನನ್ನನ್ನು ಕಾಡುತ್ತಿರುವ ಪ್ರಶ್ನೆ. ಮೂಲತ: ನಮ್ಮ ಕುಟುಂಬ ತುಂಬಾ ಬಡತನದಿಂದ ಕೂಡಿದ್ದು ನಮ್ಮ “ಕುಲಕಸುಬು” ಜಮೀನ್ದಾರರ ಹೊಲಗಳಲ್ಲಿ ಬೆಳೆಗಳನ್ನು, ಕೃಷಿ ಉಪಕರಣಗಳನ್ನು ಕಾಯುವುದಲ್ಲದೇ ನೈಸರ್ಗಿಕ ವಿಪತ್ತುಗಳನ್ನು ಎದುರಿಸಿದಾಗೆಲ್ಲಾ ಜನರು ದವಸ ಧಾನ್ಯಗಳನ್ನು ಕದಿಯುವುದನ್ನೂ ನೋಡಿಯೂ ನೋಡದಂತಿರುವ ಅನಿವಾರ್ಯ ಬೇರೆ. ಹೊಲಗಳ ಪಹರೆ ಕಾಯುತ್ತಿದ್ದದರಿಂದ “ಪಾರೆಕರಿ” ಅಥವಾ “ಪಹರೇದಾರ” ಅನ್ನುತ್ತಿದ್ದರು. ತಲೆಮಾರಿನಿಂದ ಮಾಡಿಕೊಂಡ ಕಸುಬಿನ ಕಾರಣಕ್ಕೋ ಏನೋ ಊರ ಹಿರೀಕರ ಮನೆಯಲ್ಲಿ ಹತ್ತನ್ನೆರಡು ವಯಸ್ಸಿನಿಂದ ವರ್ಷಗಳ ಕಾಲ ಜೀತದಾಳಾಗಿ ದುಡಿದ ಜೀವ ನನ್ನಪ್ಪನದು.

ಅವರ ಬದುಕಿನಲ್ಲಿ ಕ್ಷಣ ಕ್ಷಣವೂ ಅವಮಾನಗಳು, ತಿರಸ್ಕಾರ, ಅಸ್ಪ್ರಷ್ಯತೆಯ ಕರಾಳತೆ, ಜಾತಿ ಹೆಸರಲ್ಲಿ ಅವಮಾನ ಎಂತಹ ನಿಕೃಷ್ಠ ಜೀವನವೆಂದರೆ ದನಗಳಿಗೆ ಮುಸುರಿ ಹಾಕುವ ಬುಟ್ಟಿಯಲ್ಲಿ ನನ್ನ ತಂದೆಗೆ ಊಟವನ್ನು ಬಡಿಸುತ್ತಿದ್ದ ದಿನಗಳನ್ನು ನೆನೆದೇ ಇಂತಹ ಪರಿಸ್ಥಿತಿ ತನ್ನ ಮಕ್ಕಳಿಗೆ ಬರಬಾರದೆಂದೇ ಹಠಕ್ಕೆ ಬಿದ್ದವರಂತೆ ರಾತ್ರಿ-ಹಗಲು ಎನ್ನದೇ ದುಡಿದು ನಮಗೆ ಮೂರು ಜನರಿಗೂ ಚೆನ್ನಾಗಿ ಓದಿಸಿದರು.
ನಂತರದ ದಿನಗಳಲ್ಲಿ…….

ವಯಸ್ಸಾಯ್ತೋ ಅಪ್ಪನಿಗೆ. . . . ನಾವು ಮೂರು ಜನ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮಾಡಿದ್ದೇನೋ ಆಯಿತು. ಊರಲ್ಲಿ ಅಪ್ಪನ ಓರಗೆಯವರೊಂದಿಗೆ ಮಕ್ಕಳ ಓದಿನ ಬಗ್ಗೆ ಹೇಳುವಾಗೆಲ್ಲಾ ಅಪ್ಪನಿಗೆ ಹೆಮ್ಮೆ. ಮೊಮ್ಮಕ್ಕಳನ್ನೂ ಕಂಡ ಜೀವಕ್ಕೆ ಖುಷಿಯೋ ಖುಷಿ. ಎರಡನೇ ಅಣ್ಣ ಪಿ.ಡಿ.ಓ ಆದ. ನಾನೂ ಸುಮಾರು ವರ್ಷಗಳ ಕಾಲ ಬೆಂಗಳೂರಿನಂಥ ಸಮುದ್ರದಲ್ಲಿ ದುಡಿದು ಅದೊಮ್ಮೆ ನಿರ್ಧರಿಸಿ ಕೋಚಿಂಗ್ ಪಡೆದು ಎರಡು ಬಾರಿ ಕೆ.ಎ.ಎಸ್. ಮುಖ್ಯ ಪರೀಕ್ಷೆಗೆ ಹಾಜರಾದೆ. ಸಧ್ಯ ಪ್ರಥಮ ದರ್ಜೆ ಸಹಾಯಕನಾಗಿ ಸರ್ಕಾರಿ ಸೇವೆಯಲ್ಲಿದ್ದೇನೆ. ದುರಾದೃಷ್ಟವಶಾತ್ ನಾನು ಸರ್ಕಾರಿ ಸೇವೆಗೆ ಸೇರುವ ಸಮಯಕ್ಕೆ ಅಪ್ಪ ಕೇವಲ ನೆನಪು ಮಾತ್ರ.

ಯಾಕಿಷ್ಟು ಅಪ್ಪನ ಬಗ್ಗೆ ಸ್ವಗತದಂತೆ ಹೇಳುತ್ತಾ ಹೋದೆನೆಂದರೆ, ಅಪ್ಪ ಇದೇ ಜನವರಿ ಇಪ್ಪತ್ಮೂರಕ್ಕೆ ಕಾಲವಾಗಿ ಮೂರು ವರ್ಷ. ಭೌತಿಕವಾಗಿ ಇಲ್ಲದೇ ಇರಬಹುದು.. ಆದರೆ, ಮಾನಸಿಕವಾಗಿ ನಮ್ಮ ಸಹೋದರರೆಲ್ಲಾ ಜೊತೆಯಲ್ಲೇ ಮಾರ್ಗದರ್ಶನ ಮಾಡುತ್ತಾ ಮಾತೇ ಆಡದೇ ಮನೆಯ ಹಜಾರದಲ್ಲಿ ಕೂತ ಒಬ್ಬ ಯಜಮಾನನ ಹಾಜರಾತಿಯಂತೆ ನಮ್ಮೆಲ್ಲರ ಕಣ್ಣ ಮುಂದೆ ಇದ್ದಂತೆಯೇ ಭಾಸ.. ವಯಸ್ಸಿಗೇನೋ ಮುಪ್ಪು. ಅಪ್ಪ ಯಾವಾಗಲೂ ನಮ್ಮ ಬಾಲ್ಯದ ಬಲಿಷ್ಠ ಮತ್ತು ನಮ್ಮ ಧೈರ್ಯದ ಹೀರೋ. ಇದ್ದರು, ಮುಂದೆಯೂ ಇರುತ್ತಾರೆ… ನಮ್ಮೊಂದಿಗೆ; ಬಾಬಾ ವಿ ಮಿಸ್ ಯೂ……..

ಧನರಾಜ್ ಪಾತ್ರೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x