ಅಪೂರ್ಣ ಹೋರಾಟ !: ಅಶ್ಫಾಕ್ ಪೀರಜಾದೆ


-1-
ದೇಶ ಸ್ವಾತಂತ್ರವಾಗಿ ದಶಕಗಳೇ ಕಳೆದು ಹೋದರೂ ದೇಶದ ಪ್ರಜೆಗಳು ಮಾತ್ರ ಇನ್ನೂ ಗುಲಾಮರಾಗಿಯೇ ಉಳಿದಿರುವದು ನಮ್ಮ ದೇಶದ ಅತಿದೊಡ್ಡ ದುರಂತ. ಆಜಾದ ದೇಶದ ಗುಲಾಮ ಪ್ರಜೇಗಳು ನಾವು!. ಬ್ರಿಟೀಷರ ಕಾಲದಿಂದಲೂ ನಾವು ಶೋಷಣೆಯ ಹಳ್ಳಕ್ಕೆ ಬಿದ್ದು ಒದ್ದಾಡ್ತಾ ಇದ್ದೇವೆ. ಆಗ ಬ್ರಿಟೀಷರು ನಮ್ಮನ್ನು ಶೋಷಿಸುತ್ತಿದ್ದರೆ, ಈಗ ನಮ್ಮವರೆ ನಮ್ಮನ್ನು ಶೋಷಿಸುತ್ತಿದ್ದಾರೆ. ಸ್ವತಂತ್ರ್ಯಪೂರ್ವ ಮತ್ತು ಸ್ವಾತಂತ್ರದ ನಂತರದ ದಿನಗಳು ಕಂಡಿರು ಹಿರಿಯರನ್ನು ಕೇಳಿದರೆ ಸ್ವತಂತ್ರ್ಯಪೂರ್ವದ ದಿನಗಳೇ ಚೆನ್ನಾಗಿದ್ದವು. ಈಗೀನ ರಾಜಕಾರಣಿಗಳು ವೋಟಿನಾಸೆಗೆ ದೇಶದ ಜ್ವಲಂತ ಸಮಸ್ಯೆಗಳನ್ನೆಲ್ಲ ಹಾಗೇ ಜೀವಂತವಾಗಿಟ್ಟು, ಬಡಜನರನ್ನು ಜೀವಂತ ಶವಗಳನ್ನಾಗಿ ಮಾಡಿ ಅನ್ನ ನೀರು ವಸತಿಯಂತಹ ಮೂಲಭೂತ ಸೌಕರ್ಯಗಳಿಗಾಗಿ ಬಾಯಿ-ಬಾಯಿ ಬಿಡುವಂತೆ ಮಾಡಿದ್ದಾರೆ. ತುತ್ತು ಅನ್ನಕ್ಕೂ ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಭ್ರಷ್ಟಾಚಾರ, ಆತಂಕವಾದ, ನಿರುದ್ಯೋಗ, ಹಸಿವು, ದಾರಿದ್ರ್ಯಗಳಂಥ ಸಮಸ್ಯೆಗಳ ನಡುವೆ ಬದುಕು ತತ್ತರಗೊಂಡಿದೆ ಇದಕ್ಕೆಲ್ಲ ಕೊನೆಯೆಂದು?.

“ಯಾರಿಗೆ ಬಂತು.. ಎಲ್ಲಿಗೆ ಬಂತು… ನಲವತ್ತೇಳರ ಸ್ವಾತಂತ್ರ್ಯ? ಎಂದು ಕವಿ ಕೇಳಿದಂತೆ ನಮ್ಮ ಪಾಡು …. ಹೀಗೆಲ್ಲ ಹಿರಿಯ ಜೀವಿ ಸ್ವಾತಂತ್ರ್ಯಯೋಧ ಅಣ್ಣಾರಾಯರು ಯೋಚಿಸಿ ದೇಶ ಮತ್ತು ದೇಶದ ಜನತೆಯ ದುಸ್ಥಿತಿ ಕುರಿತು ಮರಮರ ಮರಗುತ್ತಾರೆ. ಅವರಿಗೆ ಅವರ ಹದಿ ಹರೆಯದ ದಿನಗಳು ನೆನಪಾಗುತ್ತವೆ. ಸ್ವಾತಂತ್ರ್ಯ ಚಳುವಳಿಗೆ ಧುಮುಕಿದಾಗ ಅವರಿಗೆ ಹದಿನಾರೇ ವರ್ಷ. ಸ್ವಾತಂತ್ರ್ಯಕ್ಕಾಗಿ ನಡೆದ ಅದೇಷ್ಟೋ ಸಾವು-ನೋವುಗಳನ್ನು, ತ್ಯಾಗಬಲಿದಾನಗಳನ್ನು ಅವರು ಕಣ್ಣಾರೆ ಕಂಡಿದ್ದರು. ತಾವು ಸಹ ಸಾಕಷ್ಟು ಸಲ ಸ್ವತಃ ಬ್ರಿಟೀಷರ ಬೂಟಿನ ಏಟು ತಿಂದು ಜೈಲಿಗೆ ಬಿದ್ದು ಬಂದವರಾಗಿದ್ದರು. ಅವಿರತವಾದ ಹೋರಾಟದ ಫಲಶೃತಿ ದೊರಕಿದ ಸ್ವಾತಂತ್ರ್ಯವನ್ನು ಈಗ ಕೇವಲ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗೋಸ್ಕರ ದುರುಪಯೋಗ ಮಾಡುತ್ತಿರುವುದು ಕಂಡು ಕಣ್ಣೀರು ಹಾಕುತ್ತಿದ್ದರು. ಆದರೆ ತಮ್ಮ ಅಸಹಾಯಕ ಸ್ಥಿತಿಯಿಂದಾಗಿ ಇದಕ್ಕೆ ಪರಿಹಾರವಿಲ್ಲವೆಂದು ಭಾವಿಸಿ ಏನೂ ಮಾಡಲಾಗದೆ ಸುಮ್ಮನಾಗಿ ಬಿಡುತ್ತಿದ್ದರು. ಪರಕೀಯರನ್ನು ಹೇಗೋ ನಮ್ಮ ದೇಶ ಬಿಟ್ಟು ತೊಲಗಿಸಿದೆವು ಆದರೆ ಬೇಲಿಯೇ ಎದ್ದು ಹೊಲ ಮೇದಂತೆ ನಮ್ಮ ಮಕ್ಕಳೇ ತಪ್ಪು ಮಾಡುತ್ತಿರಬೇಕಾದರೆ ನೊಡುತ್ತ ಸುಮ್ಮನೇ ಕುಳಿತುಕೂಳ್ಳಬೇಕೇ?. ನಮ್ಮವರೆ ನಮ್ಮ ಹಿತಶತ್ರುಗಳಾದಾಗ ಮಾಡುವುದೇನು?, ಅವರನ್ನು ಸರಿದಾರಿಗೆ ತರುವುದೆಂತು? ಹೇಗಾದರೂ ಮಾಡಿ ಸಾಯುವದರೊಳಗಾಗಿ ಅವರಿಗೆ ಸರಿದಾರಿಗೆ ತರಬೇಕು ಎಂದು ಆಲೋಚಿಸುತ್ತಿದ್ದರು.

ಹಲವಾರು ಬಾರಿ ಸತ್ಯಾಗ್ರಹ ,ಚಳುವಳಿ ಮಾಡಿ ರಾಜಕಾರಣಿಗಳನ್ನು ಎಚ್ಚರಿಸಿಯಾಗಿತ್ತು. ಸತತ ಒಂದು ವಾರದ ಕಾಲ ಉಪವಾಸ ಕುಳಿತು ಭ್ರಷ್ಟಾಚಾರದ ವಿರುದ್ಧ ಆಂದೋಲನ ಹಮ್ಮಿಕೊಂಡಿದ್ದು ಆಗಿತ್ತು. ಲಕ್ಷೋಪ ಲಕ್ಷ ಜನ ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಈ ಆಂದೋಲನದಲ್ಲಿ ಭಾಗವಹಿಸಿದ್ದರು. ಅಣ್ಣಾರಾಯರು ಆಗ ಈ ಪರಿಸ್ಥಿತಿಯಿಂದಾಗಿ ಸೋತು ಕೈಚಲ್ಲಿ ಕುಳಿತಿದ್ದ ಜನರ ಮುಖವಾಣಿಯಾದರು, ಮೂಕ ಜನರ ಧ್ವನಿಯಾದರು. ಕೂಗು ಸರಕಾರಕ್ಕೆ ತಲುಪಿ ಸರಕಾರ ಅಲ್ಲೋಲ ಕಲ್ಲೋಲವಾಯ್ತು. ರಾಜಕಾರಣಿಗಳು ತಮ್ಮ ತಪ್ಪು ತಿದ್ದಿಕೊಳ್ಳುವುದಾಗಿ ಹೇಳಿದರು. ಜನರ ಒತ್ತಾಯಕ್ಕೆ ಮಣಿದು ಕಠೀಣ ಕಾಯ್ದೆಗಳನ್ನು ಪಾಸ ಮಾಡಿದರೂ ಆ ಕಾಯ್ದೆಗಳೆಲ್ಲ ರಾಜಕಾರಣಿಗಳ ಪಾದದಡಿಯಲ್ಲೇ ಬಿದ್ದಿರುವದರಿಂದರಿಂದ ಅವುಗಳನ್ನು ಹೇಗೆ ತಿರುಚಬೇಕು, ಅವುಗಳಿಂದ ಹೇಗೆ ಬಚಾವ್ ಆಗಬೇಕು ಎನ್ನುವ ಕುತಂತ್ರದಿಂದ ಭ್ರಷ್ಟರು ಬಚಾವ ಆಗುತ್ತಲೇ ಇದ್ದರು. ದೇಶದ ಜನತೆಗೆ ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಆಗ ಜನರೆಲ್ಲ ಅಂದುಕೊಂಡ್ರು ದೇಶಕ್ಕೊಬ್ಬ ನಿಸ್ವಾರ್ಥ ಮನೋಭಾವದ ಸಮರ್ಥ ನಾಯಕನ ಅವಶ್ಯಕತೆ ಈ ದೇಶಕ್ಕೆ ಇದೆ ಎಂದು. ಕಾಯ್ದೆಗಳನ್ನು ಅನುಷ್ಠಾಣಗೊಳಿಸುವ ಒಬ್ಬ ಸಮರ್ಥನಾಯಕನಿರದೇ ಎಂಥ ಕಾಯ್ದೆ-ಕಾನೂನುಗಳು ಬಂದರು ವ್ಯರ್ಥವೆಂದು ಅಭಿಪ್ರಾಯ ಪಟ್ಟರು.

ಕಾಕತಾಳೀಯವೆಂಬಂತೆ ಇದೇ ಸಮಯಕ್ಕೆ ಸರಿಯಾಗಿ ಚುನಾವಣೆ ಘೋಷಣೆಯಾಗುತ್ತದೆ. ಭ್ರಷ್ಟ ರಾಜಕಾರಣಿಗಳಿಗೆ ಬುದ್ದಿ ಕಲಿಸುವುದಕ್ಕೆ ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿ ಮಹಾಜನತೆಗೆ ಸಿಕ್ಕ ಅತಿದೊಡ್ಡ ಅವಕಾಶ ಮತದಾನ. ಇಂಥ ಶಕ್ತಿಯುತ ಬ್ರಹ್ಮಾಸ್ತ್ರ ಜನರ ಕೈಯಲ್ಲೇ ಇರುವಾಗ ಇನ್ನುಳಿದ ಹೋರಾಟಗಳೆಲ್ಲ ಬೇಕಾ? ಎಂದು ಅಣ್ಣಾರಾಯರು ತಮ್ಮನ್ನೇ ತಾವು ಪ್ರಶ್ನಿಸಿಕೊಂಡರು. ಪ್ರಜೆಗಳು ತಮ್ಮ ಹಕ್ಕು ಸರಿಯಾಗಿ ಚಲಾಯಿಸಿದ್ದೇಯಾದರೆ ದೇಶದ ಇತಿಹಾಸವನ್ನೇ ಬದಲು ಮಾಡಬಹುದು. ಯಾವುದೇ ಆಸೆ ಆಮಿಷ್ಯಗಳಿಗೆ ಬಲಿಯಾಗದೆ ಅಯೋಗ್ಯರನ್ನು ಮನೆಗೆ ಕಳಿಸುವ ಮೂಲಕ ಯೋಗ್ಯರನ್ನು ಆರಿಸಿ ತಂದು ದೇಶದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಬಹುದು. ನಮ್ಮ ದೇಶದ ದುರಂತವೆಂದರೇ ಹಾಗಾಗದಿರುವುದು. ಪಾಪ ಹಸಿವಿನಿಂದ ಕಂಗಾಲಾದ ಬಡ ಮುಗ್ಧ ಜನತೆ ಆ ಕ್ಷಣದ ಕ್ಷಣಿಕ ಸುಖಕ್ಕಾಗಿ, ಒಂದು ತುತ್ತು ಅನ್ನಕ್ಕಾಗಿ ಒಂದು ಬಾಟಲ್ ಸರಾಯಿಗೊಸ್ಕರ ತಮ್ಮನ್ನು ಮಾರಿಕೊಳ್ಳುವ ಮೂಲಕ ಇಡೀ ದೇಶದ ಹಿತವನ್ನೇ ಮರೆತು ಮತದಾನ ಮಾಡುತ್ತಾರೆ. ಹೀಗಾಗಿ ದೇಶ ಭ್ರಷ್ಟರ ಕಳ್ಳಖೂಳರ ಆಧಿಪತ್ಯಕ್ಕೆ ಒಳಪಡುತ್ತದೆ. ದೇಶ ಇಂಥ ಎಷ್ಟೋ ಚುನಾವಣೆಗಳು ಎದುರಿಸಿದೆ. ಪರಿಸ್ಥತಿ ಸ್ವಲ್ಪೂ ಬದಲಾಗಿಲ್ಲ. ಈಗ ಇನ್ನೊಂದು ಚುನಾವಣೆ ಬಂದಿದೆ. ಈಗಲಾದರೂ ಪರಿಸ್ಥಿತಿ ಪರಿವರ್ತನೆಯು ಸಾಧ್ಯವೇ?. ಎಂದು ಯೋಚಿಸಿತ್ತಲೇ ಇದ್ದರು ಅಣ್ಣಾರಾಯರು.

-2-

ಚುನಾವಣೆ ಎದುರಿಸಲು ರಣನೀತಿ ನಿರ್ಧರಿಸಲೆಂದೇ ರಾಷ್ಟ್ರೀಯ ಪಕ್ಷದ ಸಭೆ ನಡೆಯುತ್ತದೆ. ಈ ಸಭೆಯಲ್ಲಿ ಘಟಾನುಘಟಿ ನಾಯಕರು, ಪಕ್ಷದ ವರೀಷ್ಠರು, ಕಾರ್ಯಕರ್ತರು ಸೇರುತ್ತಾರೆ. ಅಧ್ಯಕ್ಷರು ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. ಈ ಬಾರಿಯ ಚುನಾವಣೆ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಏಕೆಂದ್ರೆ ನಮ್ಮ ಅಧಿಕಾರವಧಿಯಲ್ಲಿ ಪಕ್ಷದ ಹೆಸರು ಸಾಕಷ್ಟು ಕೆಟ್ಟು ಹೋಗಿದೆ. ನಮ್ಮ ಅನೈತಿಕ ಕೃತ್ಯಗಳು, ಭ್ರಷ್ಟಾಚಾರದ ಹಗರಣಗಳು ಜನ ಮಾನಸದಲ್ಲಿ ಇನ್ನೂ ಹಸಿಯಾಗಿಯೇ ಉಳಿದು ಕೊಂಡಿವೆ. ಇಂಥದರಲ್ಲಿ ಜನರ ಮುಂದೆ ಯಾವ ಮುಖ ಹೊತ್ತು ಮತ ಕೇಳಲು ಹೋಗುವುದು?. ಅದಕ್ಕಾಗಿ ನನಗೊಂದು ಆಲೋಚನೆ ಬಂದಿದೆ. ಈ ಬಾರಿ ಭ್ರಷ್ಟರನ್ನು, ದೇಶದ್ರೋಹಿಗಳನ್ನು ಪಕ್ಷದಿಂದ ದೂರವಿಟ್ಟು ಸ್ವಾತಂತ್ರ್ಯ ಹೋರಾಟಗಾರರನ್ನು ದೇಶದ ಪ್ರಗತಿಗೆ ದುಡಿದ ಸಮಾಜ ಸೇವಕರನ್ನು, ಸಮಾಜದಲ್ಲಿ ವಿವಿಧ ಸಾಧನೆಗೈದು ಜನಪ್ರಿಯರಾದವರನ್ನು ಗುರ್ತಿಸಿ ಪಕ್ಷಕ್ಕೆ ಕರೆ ತಂದು ಅವರ ಮನವೋಲಿಸಿ ಅವರನ್ನು ನಮ್ಮ ಪಕ್ಷದಿಂದ ಸ್ಪರ್ಧೆಗೆ ನಿಲ್ಲಿಸಿ ನಾವು ಇಂಥಿಂಥ ಸಾಧಕರನ್ನ ಸಮಾಜ ಸೇವಕರನ್ನ ನಮ್ಮ ಪಕ್ಷದಿಂದ ಚುನಾವಣೆಗೆ ನಿಲ್ಲಿಸಿದ್ದೇವೆ ದಯವಿಟ್ಟು ಈ ಶುಧ್ಧಹಸ್ತರನ್ನು ಅರಿಸಿ ತಂದು ದೇಶವನ್ನು ಭ್ರಷ್ಟರಿಂದ ರಕ್ಷಿಸುವುದಕ್ಕೆ ಸಹಾಯಮಾಡಿ ಎಂದು ವಿನಂತಿಸಿಕೊಳ್ಳುವುದರ ಮೂಲಕ ಮುಳುಗುತ್ತಿರುವ ಹಡಗು ಅಂದರೆ ನಮ್ಮ ಪಕ್ಷದ ಮಾನ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದಾಗ ಸಭಾಭವನದ ತುಂಬ ಕರತಾಡನ, ಉತ್ಸಾಹದ ವಾತಾವರಣ. ಕಾರ್ಯಕರ್ತರು ತುಂಬ ಉತ್ಸಾಹದಿಂದ ಹೀಗಾದರೆ ಮಾತ್ರ ಚುನಾವಣೆಯಲ್ಲಿ ತಮ್ಮ ಪ್ರಾಣ ಪಣಕಿಟ್ಟು ದುಡಿಯುವುದಾಗಿ ಭರವಸೆ ನೀಡಿದಾಗ ಸಭೆ ಮುಕ್ತಾಯವಾಗುತ್ತದೆ.

ಚುನಾವಣೆ ಪ್ರಕ್ರಿಯೆಗಳು ಆರಂಭಗೊಳ್ಳುತ್ತಿದ್ದಂತೆಯೇ ಸಭೆಯ ನಿರ್ಧಾರದಂತೆ ನೈಪಥ್ಯಕ್ಕೆ ಸರಿಯುತ್ತಿರುವ ಸ್ವಾತಂತ್ರ ಹೋರಾಟಗಾರರನ್ನು, ಸಮಾಜ ಸೇವಕರನ್ನು, ಸಾಧನೆಗೈದ ಕಲಾವಿದರನ್ನು ಪಕ್ಷಕ್ಕೆ ಕರೆತಂದು ನಾಮಪತ್ರ ಸಲ್ಲಿಸುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಕಾರ್ಯ ನಡೆಯುತ್ತದೆ. ಅದರಂತೆಯೇ ಸ್ಥಳೀಯ ಮುಖಂಡರೆಲ್ಲ ಸೇರಿ ಸ್ವಾತಂತ್ರ್ಯ ಸೇನಾನಿ ಅಣ್ಣಾರಾಯರ ಮನೆ ಬಾಗಿಲು ತಟ್ಟಿದಾಗ ಈಗಾಗಲೇ ಹದಗೆಟ್ಟು ಹೋಗಿರುವ ರಾಜಕೀಯಕ್ಕೆ ತಾನು ಬರುವದಿಲ್ಲವೆಂದು ಸ್ಪಷ್ಟವಾಗಿ ಹೇಳಿ ಅವರ ಕೋರಿಕೆಯನ್ನು ನಯವಾಗಿಯೇ ನಿರಾಕರಿಸುತ್ತಾರೆ, ನಮ್ಮ ದೇಶಕ್ಕೆ ತಮ್ಮಂಥ ದೇಶ ಪ್ರೇಮಿಗಳ, ಗಾಂಧಿವಾದಿಗಳ, ನಿಸ್ವಾರ್ಥ ಜೀವಿಗಳ ಸೇವೆ ಅವಶ್ಯಕತೆಯಿದೆ ಎಂದು ಮನವರಿಕೆ ಮಾಡಲು ಪ್ರಯತ್ನಿಸಿ. ನೀವು ಸಕ್ರೀಯ ರಾಜಕಾರಣಕ್ಕೆ ಬಂದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ. ಇಲ್ಲವಾದರೆ ತಮ್ಮಂಥ ಅನೇಕ ಚಳವಳಿಗಾರರ ತ್ಯಾಗ ಬಲಿದಾನಗಳಿಂದ ಸಿಕ್ಕ ನಮ್ಮ ಸ್ವಾತಂತ್ರ್ಯ ಭ್ರಷ್ಟರ, ಕಳ್ಳರ, ಕೊಲೆಗಡಕರ, ಅತ್ಯಾಚಾರಿಗಳ ಪಾಲಾಗಿ ದೇಶ ಹಾಳಾಗಿ ಹೋಗುವದರಲ್ಲಿ ಸಂಶಯವೇ ಇಲ್ಲ. ದೇಶ ಹಾಳಾಗಬಾರದು ಎನ್ನುವ ಕಳಕಳಿಯೇ ನಮ್ಮ ಪಕ್ಷದ್ದು. ಅದಂಕಂತಲೇ ದೇಶದ್ರೋಹಿಗಳನ್ನೆಲ್ಲ ದೂರವಿಟ್ಟು ನಿಮ್ಮಂಥ ದೇಶ ಭಕ್ತರನ್ನ ಹುಡುಕಿ ತಂದು ಚುನಾವಣೆಗೆ ನಿಲ್ಲಿಸುವ ಮೂಲಕ ದೇಶ ಉಳಿಸುವ ಕಾರ್ಯ ಮಾಡಬೇಕಾಗಿದೆ. ಇನ್ನಾದರೂ ನಾವು ಎಚೆತ್ತುಕೊಳ್ಳಬೇಕು ನಾವು ಸುಮ್ನೆ ಕೂಡ್ರದೆ ಭಾರತಮಾತೆಯ ಪುತ್ರರಾಗಿ ನಮ್ಮ ಪಾಲಿನ ಕರ್ತವ್ಯ ನಿಭಾಯಿಸಬೇಕು. ನೀವು ಸುಮ್ನೆ ಹುಂ ಅನ್ನಿ ಮಿಕ್ಕಿದೆಲ್ಲ ನಾವು ನೋಡಕೋತೀವಿ ಎಂದು ಪದೆಪದೇ ಒತ್ತಾಯಿಸಿದಾಗ ಪಕ್ಷ ಮುಖಂಡರ ಮಾತಿನಲ್ಲಿ ಸತ್ಯವಿದೆ ಅನಿಸಿ ಒಪ್ಪಿಗೆ ಸೂಚಿಸಿದ ನಂತರ ಅಣ್ಣಾರಾಯರು ಕಾರ್ಯಕರ್ತರೊಂದಿಗೆ ತೆರಳಿ ತುಂಬಾ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿ ಬರುತ್ತಾ.ರೆ.

ಇತ್ತ, ದಾದಾ ಸಾಹೇಬ ಶ್ರೀಮಂತ ಕುಳ, ಹಿಂದೊಮ್ಮೆ ರಸ್ತೆ ಬದಿ ಡಬ್ಬಾ ಚಹಾ ಅಂಗಡಿ ಇಟ್ಟುಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವ, ರೀಯಲ್ ಎಸ್ಟೇಟ್ ಏಜಂಟರ ಸಂಪರ್ಕ ಬಂದು ಭೂಮಿ ಮನೆಗಳ ಸಣ್ಣ ಸಣ್ಣ ವ್ಯಾಪಾರಗಳನ್ನು ಕುದಿರಿಸುತ್ತ ಕುದಿರಿಸುತ್ತ ಹಂತ ಹಂತವಾಗಿ ಬೆಳದವ. ಈ ದಂಧೆಯಲ್ಲಿ ಬಂದ ಲಾಭವನ್ನೇ ದೋ ನಂಬರ ದಂಧೆಗಳಿಗೆಲ್ಲ ತಿರುಗಿಸಿ ಸಾಕಷ್ಟು ಸಂಪತ್ತು ಸಂಪಾದಿಸಿದ್ದ. ಈ ದಂಧೆಗಳಲ್ಲಿ ನಡೆಯುವ ಕೊಲೆ ಜಗಳಗಳಲ್ಲಿ ಭಾಗವಹಿಸುವ ಮೂಲಕ ಸ್ವಲ್ಪ ಮಟ್ಟಿಗೆ ರೌಡಿ ಪಟ್ಟಕ್ಕೂ ಏರಿದ್ದ. ಭೂಗತ ಜಗತ್ತಿನೊಂದಿಗೆ ಈಗಲೂ ಸಂಪರ್ಕ ಹೊಂದಿರುವ ವ್ಯಕ್ತಿ. ಹಿರಿಯ ರಾಜಕಾರಣಿಗಳಿಗೆಲ್ಲ ಬೇಕಾದ ಮನುಷ್ಯ. ಅಣ್ಣಾರಾಯರು ನಾಮಪತ್ರ ಸಲ್ಲಿಸಿದ ರಾಷ್ಟ್ರೀಯ ಪಕ್ಷದಿಂದಲೇ ಚುನಾವಣಾ ಅಖಾಡಕ್ಕೆ ಇಳಿಯಬಯಸಿದ್ದ. ಏಕೆಂದರೆ ಈ ಪಕ್ಷದಿಂದ ಸ್ಪರ್ಧಿಸಿದರೆ ಮಾತ್ರ ಜಯ ಖಚಿತ ಎಂದು ನಂಬಿದ್ದ. ಟಿಕೇಟ್ ಅಣ್ಣಾರಾಯರ ಪಾಲಾಗುವುದು ಎಂದು ತಿಳಿದಾಗ ಕಿಡಿಕಿಡಿಯಾಗಿದ್ದ. ಶತಾಯ ಗತಾಯ ಪ್ರಯತ್ನ ಮಾಡಿ ಟಿಕೇಟ್ ಪಡೆಯಲೇಬೇಕೆಂಬ ನಿರ್ಧಾಕ್ಕೆ ಬಂದು. ಪಕ್ಷದ ವರೀಷ್ಟರ ಮನೆ ಬಾಗಿಲು ತಟ್ಟಿ ದುಡ್ಡಿನ ಆಸೆ ತೋರಿಸಿಯೂ ಬಂದಿದ್ದ.

ಇನ್ನೊಂದು ಕಡೆ ಪ್ರದೇಶ ಕ್ರಾಂತಿ ದಳದ ಅಧ್ಯಕ್ಷ ಕ್ರಾಂತಿಕಾರಿ ಯುವಕ ವಿಜಯ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದು ಕೂಡ ವಿಶೇಷವಾಗಿತ್ತು. ಇದೇ ಕಾರಣಕ್ಕೇ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಜಯ ಅಷ್ಟು ಸುಲಭವಲ್ಲ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿತ್ತು. ಇವುಗಳ ನಡುವೆ ಗಾಂಧಿವಾದಿ ಅಣ್ಣಾರಾಯರು ಆಶಾವಾದಿಯಾಗಿದ್ದರು. ಆದರೆ ಕೊನೆ ಘಳಿಗೆಯಲ್ಲಿ ರಾಷ್ಟ್ರೀಯ ಪಕ್ಷದ ಟಿಕೇಟ್ ಘೋಷಣೆಯಾದಾಗ ಅಣ್ಣಾರಾಯರ ಪಾಲಿಗೆ ದೊಡ್ಡ ಆಘಾತ ಕಾದಿತ್ತು. ಅವರ ಪಾಲಿನ ಟಿಕೇಟ್ ಕೈ ತಪ್ಪಿ ಹೋಗಿತ್ತು. ಕೊಟ್ಟ ಮಾತು ಮುರಿಯುವುದು, ನೀಡಿದ ಆಶ್ವಾಸನೆಗಳನ್ನು ಮರೆಯುವದೇ ನುರಿತ ರಾಜಕಾರಣಿಗಳ ಲಕ್ಷಣ ಅಲ್ಲವೇ?. ದುಡ್ಡಿನ ಆಸೆಗೆ ಟಿಕೇಟ ಯಾರಾರಿಗೋ ಮಾರಿಕೊಂಡಿದ್ದರೂ ಪ್ರತಿಷ್ಡಿತ ಪಕ್ಷದ ಬಹುತೇಕ ಟಿಕೇಟಗಳು ಕ್ರಿಮಿನಲ್ಸಗಳ ಪಾಲಾಗಿದ್ದವು. ಅದಕ್ಕೆ ದುಡ್ಡಿದ್ದವರಿಗೆ ಟಿಕೇಟ ಕೊಟ್ಟರೆ ಜನರಿಗೆ ದುಡ್ಡು ಕೊಟ್ಟು ಸುಲಭವಾಗಿ ಆರಿಸಿ ಬರುತ್ತಾರೆ ಎಂಬುದು ಅವರ ಕೊನೆ ಗಳಿಗೆಯ ನಿರ್ಧಾರವಾಗಿತ್ತು,. ಅಣ್ಣಾರಾಯರಂಥ ಅದೆಷ್ಟೋ ಮುಗ್ಧ ಹಿರಿಯ ಜೀವಿಗಳ ಭಾವನೆಗಳೊಂದಿಗೆ ಚಲ್ಲಾಟವಾಡಲಾಗಿತ್ತು. ಟಿಕೇಟ್ ಬೆಲೆ ಹೆಚ್ಚಿಸಿಕೊಳ್ಳಲು ಅಣ್ಣಾರಾಯರಂಥ ದೇಶ ಪ್ರೇಮಿಗಳನ್ನು ಬಲಿಪಶು ಮಾಡಲಾತ್ತು. ನೊಂದು ಜೀವಿಗಳು ಮುದೊಂದು ದಿನ ಈ ಪಕ್ಷ ನಿರ್ನಾಮವಾಗಿ ಹೋಗಲಿ ಎಂದು ಶಪಿಸಿದರು. ಅಣ್ಣಾರಾಯರು ತಮಗಾದ ವಂಚನೆಯನ್ನು ನೆನಸಿಕೊಂಡು ಬಿಕ್ಕಿ ಬಕಿ ಅತ್ತರು. ಹಿರಿಯರೊಬ್ಬರಿಗೆ ಮೊಸವಾದ ವಿಷಯ ಗೊತ್ತಾಗಿ ಅವರ ಸ್ನೇಹಿತರು, ಬಂಧ ಬಳಗದವರು, ಸಹೃದಯರು ಓಡೋಡಿ ಬಂದರು. ಅಣ್ಣಾರಾಯರಲ್ಲಿ ಧೈರ್ಯ ತುಂಬಲು ಪ್ರಯತ್ನಿಸಿದರು. ಸ್ವಾತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಬೇಕು. ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ಹೇಳಿ ಅವರಿಗೆ ಪ್ರೋತ್ಸಾಹಿಸಿದರು. ಅಭಿಮಾನಿಗಳ ಒತ್ತಾಯಕ್ಕೆ ಸೋತ ಅಣ್ಣಾರಾಯರು ತಮ್ಮ ಇಚ್ಛೆಯಂತೆಯೇ ಆಗಲಿ ಎಂದು ತಾನು ಚುನಾವಣೆ ಕಣದಿಂದ ಹಿಂದೆ ಸರಿಯುವದಿಲ್ಲವೆಂದು ಘೋಷಿಸಿದರು. ತಕ್ಷಣ ಅಲ್ಲಿ ನೆರದಿದ್ದ ಅಭಿಮಾನಿಗಳು “ಅಣ್ಣಾರಾಯರಿಗೆ ಜೈವಾಗಲಿ” ಎಂದು ಕೂಗಿದರು. ಜೈ ಘೋಷ ಮುಗಿಲ ಮುಟ್ಟಿತು. ಜನರ ಪ್ರೀತಿ ಕಂಡು ಅಣ್ಣಾರಾಯರ ಹೃದಯ ತುಂಬಿ ಬಂದು ಕಣ್ಣುಗಳಿಂದ ಆನಂದ ಭಾಷ್ಪ ಧಾರೆಯಾಯಿತು.

-3-

ಆಗಲೇ ಪ್ರಚಾರದ ಭರಾಟೆ ಆರಂಭವಾಗಿತ್ತು. ಪಕ್ಷದ ಅಭ್ಯರ್ಥಿಯ ಕರಪತ್ರಗಳು, ಬ್ಯಾನರಗಳು, ಕಟೌಟಗಳು ಎಲ್ಲಡೆ ರಾರಾಜಿಸುತ್ತಿದ್ದವು ಕ್ರಾಂತಿಕಾರಿ ಯುವಕ ತಮ್ಮ ಸಂಘಟನೆಯ ಗೆಳೆಯರೊಂದಿಗೆ ಪ್ರಚಾರ ಆರಂಭಿಸಿದ್ದ. ಅಣ್ಣಾರಾಯರು ಸಹ ತಮ್ಮ ಬಂಧು ಮಿತ್ರರೊಂದಿಗೆ ಮತದಾರರ ಮನೆ ಬಾಗಿಲುಗಳಿಗೆ ಹೋಗಿ ರಾಷ್ಟ್ರೀಯ ಪಕ್ಷದಿಂದ ತಮಗಾದ ಅನ್ಯಾಯವನ್ನು ಹೇಳಿ ಮತಯಾಚಿಸುತ್ತಿದ್ದರು. ಅಣ್ಣಾರಾಯರ ಪರವಾಗಿ ಅನುಕಂಪದ ಅಲೆ ಎದ್ದು ಕಾಣುತ್ತಿತ್ತು. ಹಿರಿಯ ಗಾಂಧಿವಾದಿಯೊಬ್ಬರಿಗೆ ಅನ್ಯಾಯವಾಗಿದೆ ಅವರನ್ನು ಗೆಲ್ಲಿಸುವ ಮೂಲಕ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕೆನ್ನುವ ಛಲ ಅವರ ಅಭಿಮಾನಿಗಳಲ್ಲಿ ತೋರುತ್ತಿತ್ತು. ಈ ಬೆಳವಣಿಗೆಗಳೆಲ್ಲ ದಾದಾನ ಗಮನಕ್ಕೆ ಬಂದು ‘ಕುರ್ಚಿ’ ಕೈಕೊಟ್ಟು ದೂರ ಹೋಗುತ್ತಿದೆ ಅನಿಸಲಾರಂಭಿಸಿತ್ತು. ಹೀಗಾಗಿ ಹೇಗಾದರು ಮಾಡಿ ಅಣ್ಣಾರನ್ನು ಸ್ಪರ್ಧೆಯಿಂದ ಹಿಂದಕ್ಕೆ ಸರಿಸಬೇಕೆಂದು ನಿರ್ಧರಿಸಿ ಅದೊಂದು ರಾತ್ರಿ ಅಣ್ಣಾರಾಯರ ಮನೆಕದ ತಟ್ಟಿದ. ಅಣ್ಣಾರಾಯರು ಬಾಗಿಲು ತೆರೆದಾಗ ದಾದಾ ಕಟೌಟದಂತೆ ಕೈಮುಗಿದು ನಿಂತಿದ್ದು ನೋಡಿ ಅಣ್ಣಾರಾಯರಿಗೆ ಆಶ್ಚರ್ಯವಾಯಿತು.
“ ಗಾಬರಿಯಾಗಬೇಡಿ ರಾಯರೇ ನಾನು ನಿಮ್ಮನೇನೋ ಮಾಡಲು ಬಂದಿಲ್ಲ. ಕೇವಲ ತಮ್ಮ ದರ್ಶನಾ ಮಾಡಿಕೊಂಡು ಒಂದು ಸಲಹೆ ಕೊಟ್ಟು ಹೋಗೋನಂಂತ ಬಂದಿದ್ದೇನೆ” ಎಂದು ಹೇಳುತ್ತ ತನ್ನ ಎರಡೂ ಕೈಗಳನ್ನು ಕೆಳಗಿಳಿಸಿದ.
“ಏನದು ನಿನ್ನ ಸಲಹೆ ?” ಗಂಭೀರ ಸ್ವರದಲ್ಲಿ ಪ್ರಶ್ನಿಸಿದರು ಅಣ್ಣಾ.
“ನನ್ನ ಸಲಹೆ ಕೇಳುವುದಾದರೆ ಚುನಾವಣಾ ಕಣದಿಂದ ತಾವು ಹಿಂದಕ್ಕೆ ಸರಿಯುವದೇ ಒಳ್ಳೆಯದು”
“ಸರಿಯದಿದ್ದರೆ?” ಖಾರವಾಗಿಯೇ ಪ್ರಶ್ನಿಸಿದರು.
“ಸರಿಯದಿದ್ದರೆ ನಾನೇನೂ ನಿಮಗೆ ಮಾಡಲು ಹೋಗಲ್ಲ, ಮತದಾರರೆ ನಿಮಗೆ ಬುದ್ದಿ ಕಲಸ್ತಾರೆ”
“ಅದ್ಹೇಗೆ?”
“ನನ್ನ ದುಡ್ಡಿನ ಮುಂದೆ ನಿಮ್ಮ ಈ ಪ್ರಮಾಣಿಕತೆ ನಡೆಯೊಲ್ಲ”
“ಅದೇನು ಅಗತ್ತದೆಯೋ ಅಗಲಿ. ನಾನು ಮಾತ್ರ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ” ಸ್ಪಷ್ಟ ಪಡಿಸಿದರು.
‘ಸುಮ್ನೆ ಹಠ ಮಾಡಬೇಡಿ ನನ್ಮಾತು ಕೇಳಿ, ನಿಮಗೆ ಬೇಕಾದಷ್ಟು ದುಡ್ಡು ನಾನು ಕೊಡತೀನಿ, ತಗೆದುಕೊಂಡು ತಪ್ಪಗೆ ಮನೆಯಲ್ಲಿರೀ”
“ಸ್ವಾತಂತ್ರ್ಯ ಸೇನಾನಿ ನಾನು, ನಿಮ್ಮಂಥವರ ಎಂಜಲಿಗೆ ಜೊಲ್ಲು ಸುರಿಸುವ ನಾಯಿಯಲ್ಲ”
“ ನನ್ನ ಮಾತು ಕೇಳು, ಚುನಾವಣೆಯಲ್ಲಿ ಸೋತು, ಇದ್ದ ಮಾನ ಕಳ್ಕೋಂಡು ಸಾಯುವದಕ್ಕಿಂತ ದೊಡ್ಡು ತಗೊಂಡು ಹಾಯಾಗಿರುವದು ಉತ್ತಮ” ಮಾತು ಒರಟಾಗಿತ್ತು. “ಮರ್ಯಾದೆಯಿಂದ ಮನೆಗೆ ಹಿಂದಿರಿಗು. ಮತದಾರರು ದುಡ್ಡಿನ ಆಸೆಗೆ ನಿನ್ನಂಥ ಹಲ್ಕಾ ವ್ಯಕ್ತಿಗೆ ಮತ ಹಾಕುವಷ್ಟು ಮೂರ್ಖರಲ್ಲ” ರಾಯರು ತಮ್ಮ ಸಾತ್ವಿಕ ಸಿಟ್ಟು ಹೊರಹಾಕಿದರು.
“ಹಣ ಕಂಡರೆ ಹೆಣಾನೂ ಬಾಯಿ ಬಿಡುತ್ತೆ ಅಂತಾರೆ. ಹಣ ಕೊಟ್ಟರೆ ಬೇರೆಯವರೇನು? ನಿನ್ನ ಜೊತೆ ಇದ್ದವರೆ ನಿನಗೆ ಮತ ಹಾಕುವದಿಲ್ಲ. ನೆನಪಿಡು”
“ನನ್ನ ಜೊತೆ ಇದ್ದವರು ಅಂಥವರಲ್ಲ. ಹಣಕ್ಕಾಗಿ ಗುಣ ಮಾರಿಕೊಳ್ಳುವಂಥವರಲ್ಲ.. ನಂಬಿದವರನ್ನ ಮೋಸ ಮಾಡುವಂಥರಲ್ಲ. ಕೊನೆಯದಾಗಿ ಹೇಳ್ತೀನಿ ನೀವಿನ್ನು ಮರ್ಯಾದೆಯಿಂದ ನನ್ನ ಮನೆಯಿಂದ ಹೊರಡಬಹುದು” ಎಂದು ಅವನ ಮುಖಕ್ಕೆ ಬಡಿದವರಂತೆ ಬಾಗಿಲು ಮುಚ್ಚಿದರು.

“ಫಲಿತಾಂಶ ಬರಲಿ ಆಗ ಗೊತ್ತಾಗುತ್ತೆ, ಆಗ ಬುದ್ದಿ ಬರುತ್ತೆ ಈ ಮುದಕನಿಗೆ” ಎಂದು ಬೊಗಳುವ ನುಡಿಗಳು ಅಣ್ಣಾರಾಯರ ಕಿವಿಗೆ ಬಿಳುತ್ತಿದ್ದರು ನಿರಾತಂಕವಾಗಿ ಕುರ್ಚಿ ಮೇಲೆ ಆಸೀನನಾದರು.ಈ ವಿಷಯ ಯುವಕ ವಿಜಯನಿಗೆ ಗೊತ್ತಾಗಿ ತನ್ನ ಸಂಘದ ಸಭೆ ಕರೆದು ಸದಸ್ಯರೊಂದಿಗೆ ಚರ್ಚೆಗಿಳಿಯುತ್ತಾನೆ-
“ಸ್ವಾತಂತ್ರ್ಯ ಚಳುವಳಿ ಕಾಲದಲ್ಲೂ ಗಾಂಧೀ ನೆಹರುರಂಥ ಅಹಿಂಸಾವಾದಿಗಳು, ಸುಭಾಸ ಭಗತ್ ರಂಥ ಕ್ರಾಂತಿಕಾರಿಗಳು ಇದ್ದರು. ಇವರೆಲ್ಲರ ಹೋರಾಟದ ಮಾರ್ಗ ಭಿನ್ನವಾದರೂ ಗುರಿಯೊಂದೇಯಾಗಿತ್ತು. ಅದು ತನ್ನ ಮಾತೃಭೂಮಿಯನ್ನು ಪರಕೀಯರ ದಾಸ್ಯದಿಂದ ಮುಕ್ತಗೊಳಿಸುವುದು. ಅದರಂತೆ ನಮ್ಮ ಹಾಗೂ ಅಣ್ಣಾರಾಯರ ಮಾರ್ಗ ಬೇರೆ ಬೇರೆಯಾದರು ಅದು ದೇಶವನ್ನು ಭ್ರಷ್ಟರಿಂದ ದುಷ್ಟರಿಂದ ರಕ್ಷಿಸಿಸುವುದೇ ಆಗಿದೆ. ಅಣ್ಣಾರಾಯರಿಗೆ ತುಂಬಾ ಅನ್ಯಾಯವಾಗಿದೆ. ಸಿದ್ಧಾಂತಕ್ಕೆ ಬದ್ಧರಾದವರು ಈಗಿನ ಕಾಲದಲ್ಲಿ ದಾದಾನಂಥ ದುಷ್ಟ ವ್ಯಕ್ತಿಯನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಅಣ್ಣಾರಾಯರು ನಮಗೆಲ್ಲ ಪೂಜ್ಯರು. ಅವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಾವು ಅವರಲ್ಲಿ ಇನ್ನಷ್ಟು ನೈತಿಕ ಧೈರ್ಯ ತುಂಬಬೇಕು. ಅವರನ್ನು ತನು ಮನ ಧನದಿಂದ ಬೆಂಬಲಿಸಬೇಕು.ದಾದಾರಂಥ ದುಷ್ಟರನ್ನು ಬುದ್ಧಿ ಕಲಿಸಬೇಕಾದರೆ ನಾವು ಅಣ್ಣಾರಂಥವರನ್ನು ಬೆಂಬಲಿಸಿ ಅವರನ್ನು ಚುನಾವಣೆ ಗೆಲ್ಲಿಸಿ ತರಲೇಬೇಕು. ಅದಕ್ಕಾಗಿ ನಾನು ಕಣದಿಂದ ಹಿಂದಕ್ಕೆ ಸರಿದು ಅಣ್ಣಾರಾಯರಿಗೆ ಬೆಂಬಲ ಘೋಷಿಸಬೇಕೆಂದಿರುವೆ” ಎಂದಾಗ ವಿಜಯನ ಭಾವನೆಗಳಿಗೆ ಸ್ಪಂದಿಸಿದ ಗೆಳೆಯರ ಬಳಗ ಅಣ್ಣಾರಾಯರ ಗೆಲುವಿಗೆ ಶ್ರಮಿಸುವ ಭರವಸೆ ನೀಡಿದರು. ಮಾರನೇಯ ದಿನವೇ ಅಣ್ಣಾರಾಯರಿಗೆ ಬೆಂಬಲ ವ್ಯಕ್ತ ಪಡಿಸಿ ವಿಜಯ ಹೊರಡಿಸಿದ ಪ್ರಕಟನೆ ಪತ್ರಿಕೆಗಳಲ್ಲಿ ಪ್ರಕಟವಾಯಿತು.

ಅದರಲ್ಲಿ ಅಣ್ಣಾರಾಯರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕೆಂದು ಮತದಾರರಲ್ಲಿ ವಿನಂತಿಸಲಾಗಿತ್ತು. ಅಣ್ಣಾ ಅಭಿಮಾನಿಗಳು, ವಿಜಯನ ಸ್ನೇಹಿತರು ಬಿರುಸಿನ ಪ್ರಚಾರ ಕೈಗೊಂಡರು. ಅಣ್ಣಾರಾಯರ ವಿನಮ್ರ ವಿನಂತಿ, ವಿಜಯನ ಕ್ರಾಂತಿಕಾರಿ ಭಾಷಣಕ್ಕೆ ಸ್ಪಂದಿಸಿದ ಮತದಾರರು ಸ್ವಇಚ್ಛೆಯಿಂದ ತಮ್ಮ ಮನೆ ದೇವರುಗಳ ಮೇಲೆ ಪ್ರಮಾಣ ಮಾಡಿ ಅಣ್ಣಾರಾಯರನ್ನೇ ಆರಿಸಿ ತರುವುದಾಗಿ ಭರವಸೆ ನೀಡುತ್ತಿದ್ದರು. ಹೀಗಾಗಿ ಅಣ್ಣಾ ವಿಜಯ ಬಹುತೇಕ ಖಚಿತವಾದಂತಾಗಿತ್ತು. ಈ ಬೆಳವಣಿಗೆಗಳಿಂದ ದಾದಾ ಕಂಗಾಲವಾಗಿದ್ದ. ಸೋಲಿನ ಬೀತಿ ಅವನ ನಿದ್ದೆಗೆಡಿಸಿತ್ತು. ನಾಳೆ ಮತದಾನವೆಂದರೆ ಇಂದು ರಾತ್ರಿ ದಾದಾ ನಿಶಾಚರನಾದ. ರಾತ್ರಿಯಲ್ಲ ಹಣ ಮತ್ತು ಹೆಂಡದ ಹೊಳೆ ಹರಿಸಿದ. ಇಷ್ಟಾಗಿಯೂ ತನಗೆ ಮತ ಹಾಕಲಿಲ್ಲವೆಂದರೆ ತಾನು ಜೈಲಿಗೆ ಹೊದ್ರು ಪರ್ವಾಗಿಲ್ಲ ಒಬ್ಬರನ್ನು ತಂದು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಅವನ ಬೆದರಿಕೆಗಳಿಗೆ ಮತದಾರರು ಹೆದರಿ ನಡಗಲಾರಂಭಿಸದ್ದರು. ಏಕೆಂದರೆ ಅವನೊಬ್ಬ ಅಘೋಷಿತ ಕ್ರಿಮಿನಲ್ ಹೇಳಿದಂತೆ ಮಾಡಲು ಹೇಸುವದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿತ್ತು. ಹೀಗಾಗಿ ಅವನು ಒತ್ತಾಯಪೂರ್ವಕವಾಗಿ ನೀಡುತ್ತಿದ್ದ ಹಣ ಸ್ವೀಕರಿಸಲೇ ಬೇಕಾಗಿತ್ತು.

ಮತದಾನ ಮುಗಿದು ಚುನಾವಣಾ ಫಲಿತಾಂಶಗಳು ಪ್ರಕಟವಾಗತೊಡಗಿದವು. ರಾಷ್ಟ್ರೀಯ ಪಕ್ಷ ಎಲ್ಲಡೆ ಜಯಭೇರಿ ಬಾರಿಸುತ್ತಿತ್ತು. ಸ್ಥಳೀಯ ಕ್ಷೇತ್ರದ ಫಲಿತಾಂಶ ಕೂಡ ಪ್ರಕಟವಾಗಿ ಅಣ್ಣಾರಾಯರು ಹೀನಾಯ ಸೋಲು ಅನುಭವಿಸಿದ ಸುದ್ದಿ ಬಂದಿತು. ಅಣ್ಣಾ ವಿಜಯರ ಎಲ್ಲ ಪ್ರಯತ್ನಗಳು ವ್ಯರ್ಥವಾಗಿದ್ದವು. ದಾದಾನ ನುಡಿದ ಭವಿಷ್ಯದಂತೆ ಅಣ್ಣಾರಾಯರು ನಂಬಿದ ಜನರೇ ದುರಾಸೆಯಿಂದಲೋ ಪ್ರಾಣಭಯದಿಂದಲೋ ಮೋಸ ಮಾಡಿದ್ದರು. ಅಣ್ಣಾ ಚುಣಾವಣಾ ಪಲಿತಾಂಶ ಕಂಡು ಬಿಕ್ಕಿ ಬಿಕ್ಕಿ ಅತ್ತರು.

“ಚುನಾವಣೆಯಲ್ಲಿ ಸೋತಿದ್ದಕ್ಕೆ ನನಗೆ ದುಃಖವಿಲ್ಲ ನಮ್ಮ ಜನರ ಈ ಮೌಢ್ಯಕ್ಕೆ ಅವರ ಅಜ್ಞಾನಕ್ಕೆ ಅವರ ಭಯಕ್ಕೆ ನನಗೆ ದುಃಖವಾಗುತ್ತದೆ. ದೇಶದ ಪ್ರಜೆಗಳೇ ಹೀಗಿರುವಾಗ ದೇಶದ ಗತಿ ಇನ್ನೇನಾಗಬೇಕು. ಭ್ರಷ್ಟರೆಲ್ಲ ಸೇರಿ ದೇಶ ಲೂಟಿ ಮಾಡುತ್ತಿದ್ದರೆ ನಮ್ಮಂಥ ದೇಶ ಭಕ್ತರು ಕಣ್ಮುಚ್ಚಿ ಕೂಡ್ರುವುದೇ?” ಎಂದು ತಳಮಳಿಸಿದರು. ಅಣ್ಣಾರಾಯರು ಈ ಆಘಾತದಿಂದ ಇನ್ನು ಚೇತರಿಸಿಕೊಂಡಿರಲಿಲ್ಲ ಅಷ್ಠರಲ್ಲಿ ಇನ್ನೊಂದು ಆಘಾತಕಾರಿ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿತ್ತು. ದಾದಾ ಕಡೆಯ ಪುಂಡರು ಅಣ್ಣಾರನ್ನು ಬೆಂಬಲಿಸಿದ ಕಾರಣಕ್ಕೆ ವಿಜಯನನ್ನು ಮಾರಕಾಸ್ತ್ರಗಳಿಂದ ಬಡಿದು ಕೊಂದು ಹಾಕಿದ್ದರು. ಈ ಸುದ್ದಿ ತಿಳಿದು ಅಣ್ಣಾರಾಯರು ಕುಳಿತ ಕುರ್ಚಿಯಿಂದ ಮೇಲೆದ್ದರು. ಸಮಾಧನ ಹೇಳಲು ಬಂದಿದ್ದ ನಿಜವಾದ ಬೆಂಬಲಿಗರ ಮುಂದೆ ನಿಂತು ಸಿಟ್ಟಿನಿಂದ ಹೇಳಿದರು.

“ವಿಜಯ ಈ ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಿಜವಾದ ದೇಶ ಭಕ್ತ’ ಎಂದು ಅಣ್ಣಾರಾಯರು ಇನ್ನಷ್ಟು ದುಃಕಿತರಾದರು. ಅವರ ಕಣ್ಮುಂದೆ ಭಗತ್ ಸಿಂಗ, ಸುಭಾಸ ಚಂದ್ರ ಬೋಸರ ಚಿತ್ರಗಳು ಹಾದು ಹೋದವು. ಆಗಲೇ ದೇಹದಲೆಲ್ಲೆ ಮಿಂಚಿನ ಸಂಚಾರವಾದಂತಾಗಿ

“ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಲಭಿಸುವವರೆಗೆ ನಮ್ಮಂಥ ದೇಶಪ್ರೇಮಿಗಳ ಹೋರಾಟ ನಿಲ್ಲದು. ವಿಜಯ ಅರ್ಧಕ್ಕೆ ಬಿಟ್ಟು ಹೋದ ಹೋರಾಟ ನಾನು ನನ್ನ ಕೊನೆ ಕ್ಷಣದವರೆಗೂ ಮುಂದವರಿಸುತ್ತೇನೆ. ನನ್ನ ನಂತರ ನನ್ನಂಥ ಇನ್ನೊಬ್ಬ ದೇಶಭಕ್ತ ಇದನ್ನು ಮುಂದವರೆಸುತ್ತಾನೆ” ಎಂದು ಸಾರಿದ ಅಣ್ಣಾರಾಯರ ದೇಹದಲೆಲ್ಲ ದೇಶಾಭಿಮಾನದ ವಿದ್ಯುತ್ತ ಪ್ರವಹಿಸಿದಂತಾಗಿ “ಜೈ ಹಿಂದ” ಎಂದು ಘರ್ಜಿಸಿದರು. ಹಿಂದಿನಿಂದ ವಿಜಯನ ಕ್ರಾಂತಿಕಾರಿ ಗೆಳೆಯರು “ಅಣ್ಣಾರಾಯರಿಗೆ ಜೈವಾಗಲಿ” ಎಂದು ಜೈಕಾರ ಹಾಕಿದರು. ಅವರ ಜೈಘೋಷ ದಶದಿಕ್ಕುಗಳಿಗೂ ಹರಡಿ ಒಂದು ಕ್ಷಣ ಭೂಮಿ ಆಕಾಶವೆಲ್ಲ ನಡುಗಿಂದಂತಾಗಿದ್ದು ಸಾಮಾಜಿಕ ಪರಿವರ್ತನೆಯ ಮನ್ಸೂಚನೆಯಾಗಿತ್ತು.
– ಅಶ್ಫಾಕ್ ಪೀರಜಾದೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x