ಆ ತೆಗ್ಗಿಮನಿ ಸಿದ್ದಕ್ಕನ್ ಹೆಸರ ಎತ್ತುಗೊಡ್ದ, ದೂರ್ನಿಂದ ಅಕಿ ಬರುದ್ ಕಾಣ್ತ್. ಬರಿಮೈ ಮುಕ್ಳಿ ಹುಡುಗನ್ ಬಗಲಾಗ ಕುಂದ್ರಸ್ಕೊಂಡ್, ಹುಡುಗನ ಚಡ್ಡಿ ಸೊಂಟದಾಗ ತುರ್ಕೊಂಡ್, ಇನ್ನೊಂದ್ ಕಡೆ ಹುಡ್ಗಿ ಕೈ ಹಿಡದ್ ದರಾ-ದರಾ ಎಳ್ಕೋತ್ ಬರಾಕತ್ತಿದ್ಳು. ಅಕೀ ಆ ಕೂಸಿನ್ ಕೈ ಎಳಿಯು ಕಡ್ತಕ್ಕ, ಹುಡುಗಿದ್ ರಟ್ಟಿ ನೂಸ್ತಿತ್ತ್ ಯಾಂಬಾಲ್(ಯಾರಿಗೆ ಗೊತ್ತು). ಒಂದ್ ಸವ್ನಿ ರೊಂಯ್ ಅಂತ ಅಳಾಕತ್ತಿತ್ ಹುಡುಗಿ. ಕಣ್ಣಾಗೀನ್ ನೀರ್ ಕಪಾಳಕ್ಕ್ ಬಂದ್ರ, ಮೂಗನ್ಯಾಗಿನ್ ಸುಂಬಳ್ ಬಾಯಾಗ್ ಇಳ್ಯಾಕತ್ತಿತ್. ದೊಡ್ಡ್ ಗಾಡ್ಯಾಗ್ ಹತ್ತಾಕ್ ಏನರ ಆಸ್ರ (ಆಸರೆ, ನೆರವು) ಬೇಕ, ಹುಡುಗುರ್ನ್ ಕರ್ಕೊಂಡ್ ಅಕೀ ಗುದ್ದ್ಯಾಡುದ್ ನೋಡಿಕ್ಯಾಸ್ ನಾನ ಕೈ ಎಳದ್ ಮ್ಯಾಗ್ ಹತ್ತಸಿಕೊಂಡ್ನಿ.
ಬರಗ್ನ (ಅವರಸರದಿಂದ) ಬಂದಕಿನ್ ಒಂದ್ ಮೂಲ್ಯಾಗ್ ಜಾಗಾ ಹಿಡ್ಕೊಂಡ್ ಕುಂತ್ಳು. ಸೊಂಟದಾಗ್ ತುರ್ಕೊಂಡಿದ್ದ ಮಗನ ಚಡ್ಡಿ ಹಿರದ್ ತಗದಾಕಿನ್, ಅದರ(ಮಗನ) ಕಾಲ್ ಸಿಗಸಿ ಹುಡುಗನ್ ಮುಕಳಿ ಮುಚ್ಚಿದ್ಳು.
ಅಕಡಿ(ಅತ್ತ) ಇನ್ನೊಂದ್ ಮೂಲ್ಯಾಗ್ ನೀ ದರಾ-ದರಾ ಎಳ್ಕೊಂಡ್ ಯಾಕ್ ಬಂದಿ ಅಂತೇಳಿ ಚಂದ್ರಿ (ಸಿದ್ದಕ್ಕನ್ ಮಗಳು) ಸೊಂಡಿ ಪಿರ್ಕಿಸಿ (ಮುಖ ಗಂಟು ಹಾಕಿ, ಅಳುವ ಭಂಗಿಯಲ್ಲಿ) ಕುಂತಿತ್ತ್ . ಅವ್ವ ರಮಿಸ್ಲಿ (ಸಮಾಧಾನ ಮಾಡ್ಲಿ) ಅಂತ್ ಕುಂತಿತ್ತ್ ಯಾಂಬಾಲ್. ಅಯ್ಯ ಬಿಡ್ರಿ, ಅವರವ್ವಗ ಹುಡುಗಿ ದ್ಯಾಸ್ (ಲಕ್ಷ) ಇರಾಕಿಲ್ಲ. ತನ್ನ ಸನ್ಯಾಗ ತಾ ಇದ್ಳ್ ನೋಡ್ರಿ.
ಅಯ್ಯ ಇನ್ನ ೮ ಆಗಿಲ್ಲ, ಏನ್ ಸೆಕೀ (ಸೆಕೆ) ಐತೆವಾ. ಗಂಟ್ಲ ಎಸ್ಟ್ ಒಣಿಗ್ತ್.. ನನ್ನವ್ವಾ. ಏ ಅವಿ (ಪುಟ್ಟಿ) ರುಕುಮಾ, ನೀರ ಇದ್ರ ಕೊಡ ತಂಗೀ ಅಂದ್ಲು (ಮಡ್ಡಿ ಮನಿ, ಬಾಳ ದೂರಿತ್ತ್. ಅಲ್ಲಿಂದ್ ಕೂಸಿಗೋಳ್ನ ಕರ್ಕೊಂಡ್ ಬರುಗೊಡ್ದ ತೇಕ್(ತೇಗು) ಹತ್ತಿತ್ತ್ ಅಕಿಗಿ). ಮೂಲ್ಯಾಗ್ ಕುಂತಿದ್ದ ಅಕೀ ಮಗಳ್, ನಮ್ಮವ್ವ ನನ್ನ ದಾದ್ ಮಾಡೊಳ್ಳ್ (ಲಕ್ಷ ಕೊಡ್ತಿಲ್ಲ) ಅಂದಕಿನ್; ಸೋಗ್ಲಾಡಿ, ಗತ್ತ್ (ನಟಿಸು) ತಗದ ಮತ್ತ ರಾಗಾ ತಗೀತ್. ಆ ಆ ಆ ಆ ಅಂತ ಗಂಡುಸುರ್ ದನಿ ಎತ್ತಿತ ಪಡಶಾಂಟದ್ (ಬೈಗುಳ). ಈ ಕಪೆ ಕಣ್ಣಾಗನಿ ನೀರಿಲ್ಲ ಮೂಗಿನ್ಯಾಗ್ ತಟಕ್ ಸುಂಬ್ಳಿಲ್ಲ.
ಅಯ್ಯ ಬಾರವಾ ಬಂಗಾರಿ, ಏನ್ ಆತ್ ಸಿಂಗಾರಿ? ರಟ್ಟಿ ನೂಸತೈತ್ಯಾ? ಗೊತ್ತಾಗ್ಲಿಲ್ಲ್ ಕೂಸ, ಬೇಕಂತ್ ಮಾಡ್ಲಿಲ್ಲ ಮಗಳ. ಅಂತ್ ಹೇಳಿಕ್ಯಾಸ್ ಮಗಳ ಕಡಿ ಕೈ ಚಾಚಿ ಬಾ ಅಂತ್ ಸನ್ನಿ ಮಾಡಾಕತ್ಲ್ (ಬಾ ಎಂದು ಸೂಚನೆ ಕೊಡು). ಇಷ್ಟಕ್ ಯಾಕ್ ಗಪ್ಪ್ ಆಗ್ಯಾಳ್ ಚಂದ್ರಿ? ಅಕ್ಯು(ಅವಳೂ) ನನ್ ಜಾತ್ಯಾಕಿ. ನೀ ದಾದ್ ಯಾಕ್ ಮಾಡ್ಲಿಲ್ ನಂಗ್? ಹೂಹೂಹು ಅಂತ್ ಮತ್ತ್ ಅಳಾಕ್ ಸುರು ಹಚ್ಕೋತ್ ಅಳಮಾರಿ ಹೆಣ್ಣ!
ಕಾಯಿ ಕೊಡ್ತನ್ ಬಾ ಚಂದಾನಿ, ಗುಂಡಾನಿ, ನನ್ನ ತವರಿನ ಸೊಸಿಯ, ನಮ್ಮಪ್ಪನ ಲಗ್ನ ಆಕ್ಕಿಯಾ ಯವ್ವಾ, ಮುತ್ಯಾ ಬೇಸಿದನ, ನಮ್ಮಪ್ಪನ ಕಟ್ಕೊಲ್ಳವ್ವ ಚಂದ್ರಕಲಾ. (ಪ್ರೀತಿಯಿಂದ) ಅಂತ್ ಕೈ ಮಾಡಿದ್ಲ ಅವರವ್ವ. ಕೈ ಆಕಡೆಟ್ ಇಕಾಡೆಟ್ ಸರಸ್ಕೊಂತ್ ನೀ ಕಾಯಿ ಕೊಟ್ಟಾಗ್ ನಾ ಬರಾಕಿ ಅಂತ ಚಾಲ್ ಊರಿ (ಹಟ ಹಿಡಿದು) ಕುಂತ್ಳು ಚಂದ್ರಿ. ಅವರವ್ವ ನಮ್ಮ ಅಮೋಘಸಿದ್ಯಾನ್ ಕೈಲಿಂದ ೨ ರೂಪಾಯಿ ಕೊಟ್ಟ ನಾಕಣೆಕೊಂದುರು(೨೫ ಪೈಸೆ ಗೆ ಒಂದು) ೮ ಪಾಪಡಿ ತರಿಸಿ ಐದು ಬಳ್ಳಿಗಿ (ಬೆರಳಿಗೆ) ಒಂದೊಂದ್ ಹಾಕಿ ತಿನಿಸಿದಾಗ್ ಹುಡುಗಿ ಸಮಾಧಾನ ಆತ್ರಿ.
ಇಕಡಿ (ಇತ್ತ), ನೀರಡಿಕಿ ಆಗೇತಿ ಅಂತ್ ನೀರ ಇದ್ರ ಕೊಡ ತಂಗೀ ಅಂತ ನೀರ್ ಕೇಳಿದ್ಲ್ ಸಿದ್ದಕ್ಕ. ನನ್ ಕಡೆನೂ ಇಲ್ಲೆಕ್ಕ್, ಹೊಲ್ಯಾರ್ ಯಲ್ಲವಾಯಿ ಮನ್ಯಾಗ್ ಇಸ್ಕೊಂಡ್ ಬರ್ತನ್ ತಡಿ ಅಂತ್ ಹೊಂಟ್ ನಿಂತ್ನಿ. ಅಯ್ ತಂಗೀ ಹೊಲ್ಯಾರ್ ಮನ್ಯಾನ ನೀರ್ ಕುಡಿಸಾಕ್ಯಾ ನಂಗ್? ಬ್ಯಾಡ್ ಬಿಡ್ವಾ ಅಂತೇಳಿ ಮಕಾ ಗಡಿಗಿ ಮಾಡಿದ್ಲು (ಮುಖ ಊದಿಸಿ ಕೂಡು).
(ನಾ ಅರೆ ಏನ್ ಮಾಡ್ಲಿ, ಗಾಡಿ ಬಸ್ ಸ್ಟಾಂಡಿನ್ಯಾಗ್ (ಬಸ್ ನಿಲ್ದಾಣ) ನಿಂತಿತ್ತು. ಊರಿನ ಯಾಡು ದಂಡಿಗಿ ಒಂದ್ ಕಡಿ ಹೊಲ್ಯಾರು ಇನ್ನೊಂದ್ ದಂಡಿಗಿ ಮಾದರ ಮಂದಿ ಮನಿಗೋಳ್ ಅದಾವ್. ಅದು ಅಲ್ದ್, ನನಗ ಮಾದ್ರೂ, ಹೊಲ್ಯಾರು ಅನ್ನು ಭೇದ-ಭಾವ ಮಾಡಿ ಗೊತ್ತಿರಾಕಿಲ್ಲ (ಮೂರ್ ತಿಂಗಳ ಕೂಸಿದ್ದಾಗಿನಿಂದ ಕ್ರಿಸ್ಚಿಯನ್ ಸಂಸ್ಥೆಯಲ್ಲಿ ಬೆಳೆದವಳು ನಾನು, ಹೀಗಾಗಿ ಸಂಕುಚಿತ ಭಾವನೆಗಳು ನನ್ನಲ್ಲಿ ಇರಲೇ ಇಲ್ಲ)).
ತುಗೊಂದ್ ಬಾ ಅಂದ್ರ ಇಲ್ಲೆ ಚಂದ್ರಪ್ಪಣ್ಣನ ಮನ್ಯಾಗಿಂದ ನೀರ್ ತಂದ್ ಕೊಡ್ತನ, ಇಲ್ಲ ಅಂದ್ರ ಗಪ್ಪ್ ಕುಂದ್ರ ಅಂದ್ನಿ. ಅದಕ್ ಸಿದ್ದಕ್ಕ ಏನ್ ಅನ್ಬೇಕ್ರಿ ನನಗ್. ಆ ಗಿರಣಿ ಸಾಬು (ಸಾಬಣ್ಣ) ಮುತ್ಯಾನ (ಮುತ್ಯಾ=ಅಜ್ಜ) ಮನಿಗೋಗಿ ತುಗೊಂದ್ ಬಾರ ತಂಗೀ.. ಬಾಯಿ ಬಾಳ್ ಆರೈತಿ ಅಂದ್ಲು (ಯಾಕಂದ್ರ ಅವರು ಮ್ಯಾಗಿನ ಜಾತ್ಯಾವರು).
ನೀ ವಳೆ ಅದಿ ನೋಡ್ ವಾ, ಆ ಗಿರಣಿ ಮನ್ಯಾನವರ್ ಅಂದ್ರ ಆಗಿ ಬರುದುಲ್ ನನಗ್. ದೊಡ್ಡ ಸೊಕ್ಕಿನೂ ಅದಾವವ. ಗಿರಣಿ ಏನ್ ಹಾಕಿದ್ರೋ, ಆ ಕಿರಾಣಿ ಅಂಗಡಿ ಏನ್ ಚಾಲೂ ಮಾಡಿದ್ರೋ, ಅದ್ ಅಲ್ಲದ, ಮಗಾ ಬಿಜಾಪೂರ್ ನ್ಯಾಗ್ ನೋಕ್ರಿ ಏನ್ ಮಾಡಕತ್ತ, ಕೋಡ್ ಬಂದು ಅನಿಸ್ತೈತಿ ಅವರೀಗಿ. ಆ ಈಶೀ (ಈಶ್ವರಿ), ಎದೀ ಸೀಳಿದ್ರ ಯಾಡ್ ಅಕ್ಷರ ಗೊತ್ತಿಲ್ಲಕಿಗಿ, ನನಕಿನ್ ಸಣ್ಣಾಕಿ ಬ್ಯಾರಿ ಅಕೀ ಹಾಂಗ್ ನೋಡಿದ್ರ. ಮನ್ನಿ ನಮ್ಮ್ ಮುದಕಿ ಅಂಗಡಿಗಿ ಹ್ವಾದ್ರ ಚಿಲ್ಲರ ಇಲ್ಲದಕ್ಕ್ ತಡಾ-ತಡಾ ಮಾತಾಡಿ ಕಳಿಸ್ಯಾಳ ಅಂತ್. ಆ ಗಿರಣಿ ಆಯಿನೂ (ಈಶ್ವರಿ ಅತ್ತೆ) ಬಾಜುಕ್ ಇದ್ದಳಂತ, ದೊಡ್ಡವರಿಗೆ ಹಾಂಗ್ಯಾಕ್ ಅಂತೀವ ಅಂತ ಒಂದು ಮಾತು ಹೇಳಲಿಲ್ಲ ಅಂತ್. ಈ ನಮ್ಮ ಮುದಿಕೀಗೂ ಎಟ್ಟ ಸಲ ಹೇಳಿನಿ ಆ ಗಿರಣ್ಯಾರ್ ಅಂಗಡಿಗಿ ಹೋಗಬ್ಯಾಡ. ಅವು ಕೌ ಕೌ ಕಾಗಿ ಹಂಗ್ ಮಾಡ್ತಾವಂತ. ಇಕೆಲ್ಲಿ ಕೇಳ್ತಾಳ್ ನನ್ನ ಮಾತ? ಮತ್ತೂ ಅಲ್ಲೇ ಹೊಕ್ಕಿನಂತಾಳ.
ಇದ್ದುಳ್ಳಾರ (ಶ್ರೀಮಂತರು) ಇದ್ರ್ ತಮ್ಮ ಪುರತೇಕ(ತಮ್ಮಷ್ಟಕ್ಕೆ ತಾವು) ಇರ್ತಾರ್. ನಮಗೇನ ತಂದ್ ಹಾಕ್ತಾರೋ ಬಂದ್ ಹಾಕ್ತಾರೋ? ಮನಿ ಕೂಳ್(ಊಟ) ತಿಂದ, ಇಂತ ಸೊಕ್ಕಿನ ಮೂಳಗೋಳಿಗಿ ಸಲಾಮ್ ಹೊಡಿ ಅಂದ್ರ ಆಗಿ ಬರುದುಲ್ ನಂಗ್. ನಮ್ಮುವುಕ (ನಮ್ಮವರಿಗೆ) ಬುದ್ಧಿ ಇಲ್ಲ ಮದಲ. ಈಗ ಏನರ ಜಾಸ್ತ್ ಅಂತೀಯಾ; ನಮ್ಮ ಸತ್ಯಮ್ಮನ ಮಕ್ಕಳು, ನಮಗ ಬುದ್ಧಿ ಹೇಳಾಕ್ ಬರ್ತಾವ್ ಅಂತ ಚೆಂಜಿಕ್(ಸಂಜೆಗೆ) ಕಟ್ಟಿಗಿ ಕುಂತ್, ಡಂಗುರಾ ಬಾರಿಸ್ತಾಳ್ ನಮ್ಮ್ ಆಯಿ. ಎದಕ ಬೇಕ್ ಒಣಾ ಉಸಾಬರಿ ಅಂತ ನಮ್ಮ್ ಮುದಿಕಿಗಿ ಏನ್ ಹೆಳುದುಲ್ ನಾ. ಹೀಂಗೈತಿ ನೋಡ್ ಎಕ್ಕ. ಅದಕ ನಾ ಗಿರಣಿ ಮುತ್ಯಾನ ಮನಿಗಿ ಹೋಗುದಿಲ್ಲ. ಅಯ್ಯ ಹುಡುಗಿ ಹೋಗಲಿಲ್ಲ ನೋಡ್ ಅಂತ್ ಅನ್ನಾಕ್ ಹೋಗಬ್ಯಾಡ ನೀ. ಅಟ್ಟೊತ್ತಿಗೆನ (ಅಷ್ಟರಲ್ಲಿ ) ನನ್ನ ಗೆಳತ್ಯಾರ್ ಮೂರು ಮಂದಿ ಜತ್ತ(ಜೊತೆಯಾಗಿ) ಆಗಿ ಬಂದ್ರು. ಒಬ್ಬಾಕಿ ಕಡಿ ನೀರಿದ್ದುವು. ಕುಡಿಯವ ಎಕ್ಕ ಅಂತ ನೀರ್ ಕೊಟ್ನಿ. ಗಟಾ-ಗಟಾ ಅಂತ್ ಅರ್ಧ ಕ್ಯಾನ್ ನೀರ್ ಕುಡುದ್ಲ.
ಆಟ್ಟೊತ್ತನ್ನುಗೋಡ್ದ (ಆ ಸಮಯಕ್ಕೆ) ಗಾಡಿ ತುಂಬಿತ್ತು. ಇನ್ನೊಂದಿಷ್ಟ್ ಮಂದಿ ಬರಾವರ್ ಬಾಕಿ ಆದಾರ್ ಅಂತೇಳಿ ಗಾಡಿ ಇನ್ನ್ ಬಿಟ್ಟಿರಲಿಲ್ಲ. ಹುಯ್ಯಿ ಅಂತ ಕುರಿ ಹಿಂಡ್ ತುಂಬಿದಂಗ ಮಂದಿ ತುಂಬಿ ಬಿಟ್ಟಿದ್ರು, ಗಾಡಿ ಸಣ್ಣಗ ಹೊಂಟಾಕ (ಹೊರಡಲಿಕ್ಕೆ) ಸುರು ಮಾಡಿದ್ರ ಅದರ ಒಂದ್. ಬಿಸಲ ಆರಕ್ಕೊಂಡ (ಹರಡು) ಬಿದ್ದಿತ್ತು. ಹತ್ಯಾಗ್ ಕುಂತಿದ್ದಿಕ್ಕ ಗಾಳಿ ಆಡದ ಉಸರ ಕಟ್ಟಿ ಒಗದಂಗ್ ಆಗಿತ್ತ್. ಅಷ್ಟ ಯಾಕ್ ಒಂದ್ ಸವಣಿ ಬೆವರ ಬಿಟ್ಟ್, ಮೈ ಎಲ್ಲ ತಪ್ಪ ಅಂತ್ ತೋದಿತ್ತ್. ಮದಿಮಗಳನ್ ತಯಾರ ಮಾಡಿ ಕರ್ಕೊಂಡ್ ಬರುದ್ ಮುಗ್ದಿರಾಕಿಲ್ಲ.
ಅಯ್ಯ ದೇವ್ರ..! ಇದೊಳ್ಳಿ ಆತ್ ನೋಡ್. ಇಂತಾ ಶೆಡಗ್ರಕ್ಕನ, ನಾ ಎಲ್ಲಿ ಹೋಗುದುಲ್ಲ ಅಂತ ಬಡ್ಕೊಳ್ಳುದು ನಮ್ಮವ್ವನ ಕೂಡ್. ನನ್ನ ಮಕ್ಳು ಮಾತ್ ಕೇಳೂದಿಲ್ಲ, ಮನಸಿನ್ಯಾಗ್ ಮರಗತೈತಿ ಅಂತೇಳಿ, ಅಕಿ ಅಂದಿದ್ದಕ್ಕೆಲ್ಲ ಹೂಂ ಅನ್ಕೋತ್ ಹೊಕ್ಕಿವಿ ನಾಂವ್. ಈಗ, ಇದ.. ಲಿಬ್ನಕ್ಕ ಹೊಂಟ್ ನಿಲ್ಬೇಕಾದ್ರ ಆಕೀ ಹಂತೆಕ್ ಬಕ್ಕಳಗ (ಬಹಳಷ್ಟು) ಬೇಗಳಾ ತಿಂದ ಬಂದನ್ ನಾ, ನಿನ್ನೆ ಇವತ್ ಕೂಡೆ. (ನಿಮಗ ಮಂದಿ ಬ್ಯಾಡ, ಮಕ್ಕಳ ಬ್ಯಾಡ. ಎದ್ರಾಗು ಜಮಾ ಇಲ್ಲ ನೀಂವ್ ಅಂತಾಳ. ಹೋಗುದಿಲ್ ಅಂದಿದ್ದಕ್ಕ ಇಷ್ಟೆಲ್ಲ ಮಾತಾಡಿದ್ಳು ನಮ್ಮವ್ವ. ಅದಕ, ಯಾಕ್ ಸುಮ್ಮ ಅಕೀ ಮನಸ್ ನೂಸುದು? ಹೂಂ ಅಂದ್ರ ಅಕಿ ಮನಸಿಗೂ ಹೌಸಿ (ಖುಷಿ) ನಮಗೂ ನೆಮ್ಮದಿ).
ಗದ್ದಲ್ದಾಗ ಒಬ್ಬರ ಉಸಲ್(ಉಸಿರು) ಒಬ್ಬರಿಗಿ ಬಡ್ಯಾಕತ್ತಿತ್. ಒಂದ್ ಮುದುಕಿ ಬ್ಯಾರಿ ನನಗೀಟ್ ಜಾಗಾ ಕೊಡ್ರೆವ ಅಂತ ಎಲ್ಲಾರ್ನೂ ಕೇಳಾಕತ್ತಿತ್. ಇರ್ಲಿ ಮುದಕಿ ಐತಿ ಅಂತೇಳಿಕ್ಯಾಸ್ ನನ್ ಎದ್ರಿಗಿ ಕುಂದ್ರಸ್ಕೊಂದಿದ್ನಿ. ವಯಸ್ಸಾದ ಮುದುಕ್ರು ಮುದಕ್ಯಾರ್ ಅಂತೇಕ ಕುಂದ್ರಬಾರ್ದ ಅನ್ನುದು ಅವತ್ ತಿಳೀತು. ಬಾಯಾನ ಹಲ್ಲೆಲ್ಲ ಉದಿರಿದ್ದು ಮುದಕೀವ್, ಮ್ಯಾಲ್ ಯಾಡ್ ತಳಗ ಯಾಡ್ (ಮೇಲೆರೆಡು ಕೆಳಗೆರಡು) ಹಲ್ ಬಿಟ್ರ. ಆಕೀ ಮಾತಾಡು ಕಡ್ತಿಗಿ ಬಾಯಾನ್ ಉಗುಳ್ ಬಂದ್ ನನ್ನ ಮಕಕ್ಕ ಸಿಡಿತ್. ಆದ ಆಲ್ದ, ಮುದುಕಿ ಬಾಯಿ ಹೊಲಸ್ ನಾರಾಕತ್ತಿತ್ತ್. ಎಂದ್ ಹಚ್ಚಿತ್ ಯಾಂಬಲ್ ಹಲ್ಲಿಗಿ ಇದ್ಲಿಪುಡಿ, ಬ್ಯಾನ್ ಕಡ್ಡಿ (ಬೇವಿನ ಕಡ್ಡಿ). ಇರುವ ನಾಕ ಹಲ್ಲ. ಅವು ಜಿಡ್ಡಗಟ್ಟಿದಂಗ್ ಆಗಿದ್ದು. ಎಲ್ಲಾ ನೋಡಿಕ್ಯಾಸ್ ಅಳುಮಾರಿ ಬ್ಯಾರಿ ಮಾಡಿ, ನಮ್ಮವ್ವನ್ನ ಮನಿಸಿನ್ಯಾಗ್ ಹಚ್ಚಿ ತಿರಿವ್ಯಾಡಿದ್ನಿ (ಮನಸಿನಲ್ಲಿ ಬೈಯ್ದಾಡು). ಮದಿಮಗಳ ಬರುಮಟಾ; ತಳಗಿಳದ ಒಂದಿಟ್ ಹವಾ ತಿಂದ್ರ ಆತಂತೇಳಿ ತಳಗ್ ಇಳಿದ್ನಿ.
ಹಾಲಪ್ಪಗೋಳ ಬೀರಪ್ಪ ಮುತ್ಯಾನು ಲಗ್ನಕ್ಕ ಹೊಂಟ್ ನಿಂತಿದ್ದ್. ಗಾಡಿ ಬಿಡುಮಟಾ ಅಂತೇಳಿ, ಕುಂದ್ರಾಕ್ ಸಾಲಾಗಿ ಒಗದಿದ್ದ ಕರಿ ಕಲ್ಲ ಮ್ಯಾಲ್ ಹೊಸಾ ಬಿಳಿ ವಲ್ಲಿ ಹೊಲಸಕ್ಕೇತಿ ಅನ್ನುವಾಂಗ್ ಮಕ ಕಿವುಂಚ್ಯಾಡಕೋತ್ ಬಾಯಿಲೆ ಉಫ್ ಅಂತ ಊದಿಕ್ಯಾಸ್ ಧೂಳಾ ಹೊಡದ ತಳಾ ಊರಿ ಕುಂತ. ನಮ್ಮವ್ವಗ ಕಾಕಾ ಆಗ್ಬೇಕ್ ಅಂವ.
(ನಿಮ್ಮಮ್ಮಗ ಕಾಕಾ ಅಂದ್ರ ನಿಂಗ್ ಮುತ್ಯಾ ಅಲ್ಲೇನ ಹುಡುಗಿ ಅನ್ಬ್ಯಾಡ್ರಿ ನೀವ್ ನನಗ್. ನಾ ಯಾರ್ನೂ ಭಾಳಾಕೋನ(ಬಹಳಷ್ಟು) ಹಚ್ಕೋತಿರಲಿಲ್ಲ. ನಮ್ಮವ್ವ ನಮಗ ಹೊಳ್ಳೆ-ಮುಳ್ಳೆ ಅಂತಿದ್ಳು. ಮಕ್ಕಳ್ರ್ಯಾ, ಹಿಂಗ್ ಇರಾಕ್ ಹೋಗಬ್ಯಾಡ್ರಿ ನೀವ್. ಕಾಕಾ, ಮಾಮಾ ಅನ್ಕೋಂತ ನಡೀರಿ ಊರ ತುಂಬ ನಮ್ಮದ ಮಂದಿ ಐತಿ. ಬಿಟ್ಕೋತ್ ಹೋದ್ರ ಕಳ್ಳ ಬಳ್ಳಿ ಹಾಂಗ್ ಬಿಟ್ಕೋತನ ಹೊಕ್ಕೇತಿ. ಇವೆಲ್ಲ ಇರುವನ ನನ್ನ ಮಕ್ಕಳ್ರ್ಯಾ ಸಣ್ಣವರಾಗಿ ನಾವ ತಲಿ ತಗ್ಗಿಸಿ ನಡಿಬೇಕ ಅನಾಕರಿ ನಮ್ಮವ್ವ. ಎವ್ವಾ, ಪುರಾಣ ಸಾಕ್ ಮಾಡ್ ನನ್ನ ಹಡದವ್ವ ನಿಂದ್. ಮನಿಸ್ಲೆ(ಮನಸಿಂದ) ದೊಡ್ಡಂವಿದ್ದ ದೊಡ್ಡತನ (ಹಿರಿಗುಣ) ತೋರ್ಸು ಮಂದಿಗಿ ನಾ ನನ್ನಾವ್ರು ಅನಾಕಿ ಇಲ್ಲ ಅಂದ್ರ ಹಿಂಗ್ ನೋಡ್ ನಾ ಅಂತೇಳಿ ಜವಾಬ್ ಕೊಡ್ತಿದ್ನಿ ನಮ್ಮವಗ. ಗಂಡನ ಆಶ್ರಯ ಇಲ್ಲದ ನಮ್ಮ ಮನಿಗಿ ನಮ್ಮವ ಒಂದ ಜೀವ ಗಂಡಾಳಿನಂಗ್ ದುಡದ ನಮಗ್ ಹೊಟ್ಟಿಗಿ ಬಟ್ಟಿಗಿ ಮಾಡ್ಯಾಳ್ರಿ. ಅವ್ವನ ತವರ ಮನ್ಯಾನವರಿಗಿ ಏನೂ ಕಡಿಮಿ ಇರಾಕಿಲ್ರಿ ನಮ್ಮ್ ಆಯಿ ೨ ವರಸದ ಕೂಸ್ ನಮ್ಮವ್ವನ ತಬ್ಲಿ ಮಾಡಿಕ್ಯಾಸ್ ಊರ್ ಹೊಂತುಟ್ಲೆ ಬದುಕನ್ನು ಆಟದಾಗ ಔಟ್ ಆಗಿ ಹೋಗಿದ್ಳ್. ತಾಯಿ ಸತ್ತ್ ನಮ್ಮವಾಗ ಇನ್ನೊಬಾಕಿ ಅವ್ವ ಬ್ಯಾರಿ ಇದ್ಲು. ಹಿಂಗಾಗಿ ತವರ್ ಮನಿ ಬಾಗಿಲ ಎಂದೋ ಮುಚ್ಚಿತ್ತ್. ಮಕ್ಳ ಕರ್ಕೊಂಡ್ ತವರ ಮನ್ಯಾಗ್ ಬಾಡಿಗಿ ಮನಿ ಮಾಡಿ ಇದ್ದ ನಮ್ಮವ್ವಗ, ಸಣ್ಣ ವಯಸ್ಸ.. ಯಾಡ್ ಮಕ್ಕಳ್ನ ಕಟ್‌ಗೊಂಡ್ ಬದುಕ್ ಅನ್ನು ನೀರಿಗಿ ಈಜ್ ಬರ್ದ ಬಿದ್ದೈತಿ ಹುಡುಗಿ, ಹೆಂಗ್ ನಡದೈತಿ ತಂಗೀ ಬಾಳೆ, ಏನರ ಅಡಚ್ನಿ ಅದು ಬಂದ್ರ ನಮ್ನ ಕೇಳುತ್ ಬಾ ಅಂತ್ ಅಂದವರ್ ಬೆಳ್ಳೆನಿಕ್ಯಾಗ್ರಿ (ಬೆರಳೆಣಿಕೆಯಷ್ಟು). ಊರ್ ತುಂಬ ಮಂದಿ ಮಕ್ಳ ಇದ್ದ ಇಂತ ಗತಿ ನಮ್ಮವ್ವಗ ಮತ್ತ. ಯಾರಿಲ್ಲ ಅಂದ್ರ ಆ ಮಾತ್ ಬ್ಯಾರೆ ಅಕ್ಕಿತ್. ಹೀಂಗಿತ್ರಿ ನಮ್ಮವನ ಬಳಗ. ಅವ್ವಗ, ಯಾರ್ ಉಪಕಾರು ಬೇಕಿರಾಕಿಲ್ಲ ಒಂದೆರಡು ಮಾತ್ ಬೇಕಿದ್ದು. ಆಗಾಗ ಕಷ್ಟ ಕಾರ್ಪಣಿ (ಸಂಕಟ) ಬಂದ್ರ ಒಳಗೊಳಗ್ ಕಣ್ಣೀರಿಡುದ್ ನಮ್ಮವ್ವ. ಇಷ್ಟೆಲ್ಲ ಇದ್ರು ನನ್ನ ಮಂದಿ, ನನ್ನ ಬಳಗ ಅಂತ ಹುಚ್ಚರಂಗ್ ಆಡ್ತೈತಿ ನನ್ನವ್ವ. ಹೀರ್ಯಾರ್ ಹೇಳಿದ್ ಮಾತ್ ಖರೇ ಐತಿ ನೋಡ್ರಿ ಹಣ ಅಂದ್ರ ಹೆಣಾನು ಬಾಯಿ ತಗಿತೈತೆಂತ್. ಇಲ್ಲಿ.. ಹಣ ಇರಲಾರ್ದವ್ರ್ ನಾವು.. ಅದಕ್ಕ ಇದ್ದ ಜನಾನು ಹೆಣಾ ಇದ್ದಂಗ್ ಇದ್ರು. ಇಂತಾ ಕಾರಣಕ್ಕ, ನಾ ಯಾರಿಗೂ ನನ್ನ ಬಳಗ ನನ್ನ ಮಂದಿ ಅನ್ನಾಕ್ ಮನ್ಸ್ ಮಾಡುದುಲ್ಲ್. ಇಂತಾವೆಲ್ಲ ನೆನಿಸ್ಕೊಂಡ್ರ ಈಗೂ ನನ್ನ ಹೊಟ್ಯಾಗ್ ಕಾರಾ ಕಲಿಸಿದಂಗ್ ಅಕ್ಕೈತ್ರಿ). ನಾ ವಳ್ಳೆ… ಏನೋ ಹೇಳಾಕೋಗಿ ಎಲ್ಲೆಲ್ಲೋ ಬಂದ್ನಿ.
ಹಾ.. ಕರಿಕಲ್ಲ್ ಮ್ಯಾಲ್ ತಳಾ ಊರಿ ಕುಂತಿದ್ದ ಬೀರಪ್ಪ ಮುತ್ಯಾ ನನ್ ನೋಡಿಕ್ಯಾಸ್, ಏನ್ ಚೆಂದ ಕಾಣ್ತಿ ಲೆ ರುಕುಮಿ, ಬಾರ ನನ್ನ ಸಂಗಾಟ್ (ಬೆನ್ನತ್ತಿ ಜೊತೆ ನಡಿ) ಅಂತ ಅಂದ ಕೈ ಹಿಡಿದ್ ನಂದ್. ಹೂ.. ನಡಿ ಬರ್ತನ ಅದಕ್ಕೇನಂತ್, ಮದಲ್ ತಾಳಿ ಕಟ್ಟ ನನ್ನ ಮುದೋಡಿ (ಮುದುಕ) ಅಂದಾಕಿನ್ ಹಿಡಿದಿದ್ದ್ ಕೈ ಕಸರ್ಕೊಂಡ್ ಹಿಂದ್ ಸರಿಗುಡ್ದ ಮಾರುಕಟ್ಟಿ ಓಣ್ಯಾಗಿಂದ ಐದಾರು ಹೆಣ್ಣಮಕ್ಳು ಅರಿಸಿನ ಸೀರಿ ಉಟ್ಕೊಂಡ್ ಹಸರ(ಹಸಿರು) ಶ್ಯಾಲ್, ಮ್ಯಾಲ್ ಹೊದ್ದ ಮದಿಮಗಳನ (ಮದುವೆ ಮಗಳು) ಹೆಜ್ಜಿ ಮ್ಯಾಲ ಹೆಜ್ಜಿ ಇಡಿಸ್ಕೊಂತ ಕರ್ಕೊಂಡ ಬರುದ್ ಕಾಣಿತ್. ಕೈಯಿಗಿ ಹಚ್ಚಿದ್ ಆ ಮದರಂಗಿ ಕೆಂಪಾ ಆಕೀ ಮಕಾದಾಗ್ ರಂಗೇರಿದಾಂಗ್ ಅನಿಸ್ತಿತ್ತ. ಮದುವಿ ಆಗಿ ಗಂಡನ ಮನಿಗಿ ಹೋಗಿ ಹ್ಯಾಂಗ್ ಬಾಳೆ ಮಾಡ್ಲಿ ಅನ್ನು ಭಯಾ ಇತ್ತ ಯಾಂಬಾಲ್ ಆಕೀ ಮೆಲ್ಲಕ್ ಹೆದರ್ಕೋತ ಇಡು ಹೆಜ್ಜ್ಯಾಗ್. ೮ ದಿನದ ಗಟ್ಲೆ ಅರಿಸಿನಾ ಉಂಡ್ ಆಕೀ ಮೈಗೆ ಚಲೋ ಕಲರ್ ಬಂದಿತ್ತ್. ಎನ್ನಿ ಹಚ್ಚಿ ಎರದ್ ಮಕಕ್ಕ ಭೆಷೆಂಗೆ ಕಳಾ ಬಂದಿತ್ರಿ. ಹನಿ ತುಂಬ ಕುಂಕುಮಾ ತಲಿ ತುಂಬ ಮಲ್ಲಿಗಿ ಕನಕಾಂಬರ ಹೂವ, ಕೊಳ್ಳಾಗ ಹಾಕಿದ್ದ ಬೋರಮಾಳ, ಗುಂಡ, ಈಗೀಗ್ ಹೊಸದಾಗಿ ಬಂದಿದ್ದ್ ನೆಕ್ಲೆಸ್ ಕೊಳ್ಳ ತುಂಬುವಾಂಗ್ ಹಾಕಿದ್ರ್. ಮೂಗಿನ್ಯಾಗ ಹಾಕಿದ್ದ ಮುತ್ತಿನ ನತ್ತ ಇನ್ನಷ್ಟ ಕಳಾ ಕೊಟ್ಟಿತ್ತ ಹುಡುಗಿಗಿ. ನಾನು ಮದಿಮಗಳ ಜೋಡಿನ ಗಾಡಿ ಹತ್ತಿ ಕುಂತ್ನಿ. ಮತ್ತೊಂದ್ ಕಪೆ ಬರವರೆಲ್ಲ ಬಂದಾರೋ ಇಲ್ಲೊ ಅಂತ ಖಾತ್ರಿ ಮಾಡ್ಕೊಂಡ್ ೯ ಗಂಟೇಕ ಗಾಡಿ ಬಬಲೇಸೂರ್ ಕಡೆ ಓಡಾಕ ಸುರು ಮಾಡಿತ್ರಿ.
(ಮುಂದುವರೆಯುವುದು…)
ಇಂತಿ ನಿಮ್ಮ ಮನೆ ಮಗಳು
ರುಕ್ಮಿಣಿ ಎನ್.
Chenagidhe rukku
Basheya syli mathe presenttion superb
Mundina lekanakke kaytha edini
ನಿಮ್ಕಡೆ ಭಾಷೆ ಕೇಳಲು ಚಂದ. ಓದಲು ಆರಂಭದಲ್ಲಿ ಸ್ವಲ್ಪ ಕಷ್ಟ ಅನಿಸಿದ್ರೂ ನಂತರ ಸರಾಗವಾಗಿ ಓದಿಸ್ಕೊಂಡು ಹೋಗುತ್ತದೆ. ಬರೆಯುವವರ ಶ್ರಮಕ್ಕೆ ಮೆಚ್ಚಬೇಕು. ತುಂಬಾ ಇಷ್ಟ ಆಯಿತು. ಕನ್ನಡ ಅಂಕೆಗಳನ್ನು ಇಂಗ್ಲಿಷ್ನಲ್ಲಿ ಅಥವಾ ಶಬ್ದರೂಪದಲ್ಲಿ ಬರೆಯೋದು ಒಳ್ಳೆಯದೆಂದು ನನ್ನ ಭಾವನೆ (ಉದಾ: "ಅಯ್ಯ ಇನ್ನ ೮ ಆಗಿಲ್ಲ" -> 'ಅಯ್ಯ ಇನ್ನ ಎಂಟ್ ಆಗಿಲ್ಲ' ಅಥವಾ 'ಅಯ್ಯ ಇನ್ನ 8 ಆಗಿಲ್ಲ').
ತುಂಬಾ ಇಷ್ಟ ಆಯ್ತು ರುಕ್ಮಿಣಿಯವ್ರೆ…
ನನಗೆ ಮೊದಲು ಮನಸೆಳೆದಿದ್ದು ಬಳಸಿದ ಭಾಷೆ. ಇದು ಸರಾಗವಾಗಿ ಓದಿಸಿಕೊಂಡು ಹೋಗುವ ಬರಹ. ಭಾಗ 1 ಮತ್ತು 2 ಊ ಸೂಪರ್ರೂ…