ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ (ಭಾಗ-೩):ರುಕ್ಮಿಣಿ ಎನ್.


ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ


ಮನಸಿಗೆ ಹೌಸಿ ತರು ಮಲ್ನಾಡ್ ಸೀಮಿ ಅಲ್ಲ ಬಟ್ಟಾ ಬಯಲ್ ಸೀಮಿ ರೀ ನಮ್ದು. ದಾರಿ ಆಚಿಕ್-ಇಚಿಕ್ ಪೀಕ್ ಜಾಲಿ ಗಿಡಗೋಳ್, ಅಲ್ಲೆಟ್ ಇಲ್ಲೆಟ್ ಹಸಿ ಬಿಸಿ ಬೆಳದ್ ನಿಂತ ಬಂಬಲಕ್ಕಿ, ಹಂಗ ಬಂದಕ್ಯಾಸ್ ಸೊಡ್ಡನ್ ಮಕಕ್ಕ ಬಡದ್ ನೆತ್ತಿ ಸುಟ್ಟ ಹೋಗ್ತೈತೆನೋ ಅನ್ನು ಸುಡು-ಸುಡು ಬಿಸಲ್. ಕೆಂಡ್ ಉಡ್ಯಾಗಿಟ್ಕೊಂಡ್ ಬೀಸೂ ಬಿರುಗಾಳಿ, ಉರಿ ಉರಿ ಝಳ. ಗಾಳಿ ಪದರಿನ್ಯಾಗ್ ಕಟ್ಕೊಂಡ್ ಬರು ಹಾಳ್ ಮಣ್ಣ ಮಕದ ಮ್ಯಾಲ್ ಮನಿ ಮಾಡಿ ಕುಂತ್ ಬಿಡ್ತೈತಿ.

 

ಟ್ರಕ್ಕಿನ್ ಮೂರು ದಂಡಿಗಿ ಗಂಡಸರ ನಿಂತಿದ್ರು. ಒಂದು ಮೂಲ್ಯಾಗ್ ಮದಿ ಮಗಳನ ಕುಂದಿರಿಸಿದ್ರು. ರಂವ ರಂವ ಬಿಸಲಾಗ್ ಸೋಬಾನಿ ಪದ ಸುರು ಮಾಡಿದ್ರು ನಮ್ಮ ಗೌರಮ್ಮತ್ತಿ, ಸಾಬವ್ವ, ಶಾಂತವ್ವ, ಲಸಮವ್ವ. ಇಬ್ರು ಮುಂದ್ ಮುಂದ್ ಹಾಡಿದ್ರ,  ಇಬ್ರು ಹಿಂದಿಂದ “ಸೋ ನಿಂಗ” ಅಂತ ಅನ್ನವರ. ಹಾಡ್ ಕೇಳ್ಕೊಂತ  ಹಾಂಗ ನನ್ನ ಕಣ್ಣ ತನ್ಯಾಡೂ ಕೈ ತುಂಬುವಾಂಗ ಹಚ್ಚ್ ಹಸರ ಬಳಿ ಉಡ್ಕೊಂಡ್ ನಡು ನಡು ಬಂಗಾರದ್ ಪಾಟ್ಲಿ ಹಾಕೊಂಡಿದ್ದ ಮದಿಮಗಳ ಕೈ ಮ್ಯಾಲ್ ಬಿದ್ದು. ಹಾಂಗ್ ನೋಡುವಾಗ್ ಮತ್ತ ನನ್ನ ತಲಿ ನನ್ನ ಇನ್ನಷ್ಟ್ ಒಳಗ್ ತಗೊಂದ್ ಹೋತು. ಹುಡುಗೀಗಿ ಇನ್ನೂ ಹದ್ನೆಂಟು ದಾಟಿಲ್ಲ ೧೪ ವರಸಿನ್ಯಾಕಿ ಹೆಂಗ್ ಸಂಸಾರ ಮಾಡ್ತಾಳ್ ಆಕೀ ಅಂತ. ಅದ್ ಒತಾಟಿ ಇರ್ಲಿ ಇಕಿನ್ ಹೀರ್ಯಾ ಆಗಾಂವ್ ಎಷ್ಟ್ ವರ್ಸನ್ಯಾವ್ ಇರ್ಬೇಕ್ ಅಂತೇಳಿ ಚಿಂತಿ ಶುರು ಆತ್ ನಂಗ್. ಯಾಕಂದ್ರ, ಶಾಂಯವಾಯಿ ಮಗ ನಮ್ಮ ಸಣ್ಣಪ್ಪ ಚೆನ್ನಪ್ಪಗ ಅವರಕ್ಕ ಅಂದ್ರ ನಮ್ಮ ಗೌರವ್ವತ್ತಿ ಮಗಳನ ತಗೊಂಡಾರ. ಆ ಹುಡುಗಿ ಭಾಳ ಸಣ್ಣದ ಇತ್ತ. ಖರ್ಚಿನ್ಯಾಗ್ ಖರ್ಚ ಹೊಕ್ಕೈತಿ. ಎಲ್ಲಿ ಹೊಳ್ಳೆ ಮುಳ್ಳೇ ಖರ್ಚ್ ಮಾಡುದ ಅಂತ ಒಂದ ಚಪ್ಪರದಾಗ ಇಬ್ಬರ ಕಾಕಾಗೋಳಿಗೆ ಅಕ್ಕಿ ಕಾಳ ಒಗ್ದಿದ್ವಿ.

ಈಗ ಮೂವತ್ತರ ಗಡಿ ದಾಟೀತ್ ನಮ್ಮ ಚೆನ್ನಪ್ಪ ಕಾಕಾಗ. ೧೨ ವರ್ಷದ್ ಹುಡುಗಿ ಇನ್ನ ಮೈ ನೆರಿವಲ್ಲದು ಅಂತ ಅಕೀ ಅಪ್ಪ-ಅವ್ವಗ ಹುಡುಗೀದ ಚಿಂತಿ. ತಿಂದುಂಡ್ ದುಂಡಗ ಮೈ ಬೆಳೆಸ್ಲಿ ಅಂತ ಮಗಳಿಗಿ ಏನ ಬೇಕ್ ಅದನ್ ತಿನಿಸಿ ತುಪ್ಪದಾಗ್ ಕೈ ತೋಳಿಸಿ, ಅಂಗೈ ಮ್ಯಾಲ್ ನಡಿಸಿ, ಕಣ್ಣ ರೆಪ್ಪ್ಯಾಗ್ ಮುಚ್ಚಿಟ್ಟ ಬೆಳಸಿದ್ರೂ ಹುಡುಗಿ ಬೆಳದಿಲ್ಲ.

ಅಕಡಿ ನಮ್ಮ ಚೆನ್ನಪ್ಪ ಕಾಕಾ ವಾರಿಗೆವರೆಲ್ಲ ಯಾಡ್ಯಾಡ ಮಕ್ಕ್ಳಿಗೆ ತಂದಿ ಅನಿಸ್ಕೊಂಡ್ರ; ನನ್ನಾಕಿ ಮಾತ್ರ ಇನ್ನ ತವರ ಮನ್ಯಾಗ್ ಕುಂತಾಳ ಅಂತ ಮಕ ಬ್ಯಾರಿ ಗಡಗಿ ಮಾಡ್ಕೊಂಡ ಕುಂದ್ರತಾನ್. ನಮ್ಮಾಯಿ ಮುತ್ಯಾನ ಕೂಡ ಜಗಳಾನೂ ಮಾಡ್ತಾನ್! ಒಂದೊಂದ್ಸಲ ಕಳ್ಳಭಟ್ಟಿ ಕಳ್ಳ ವ್ಯಾಪರ್ ಮಾಡ್ತಾಳಲ್ಲ ಆ ಲಮಾನ್ಯಾರ್ ಲಸಮವ್ವ! ಅಕೀ ಮನೀಗಿ ಹೋಗಿ ಒಂದ್ ನಾಲ್ಕೈದ್ ದಾರು ಪಾಕೀಟ್ ಕುಡದ್ಕ್ಯಾಸ ಜೋಲಿ ತಪ್ಪಿ ಹೊಯ್ಡ್ಯಾಡ್ಕೋಂತ್ ಮಂದಿ ಅನ್ನದ ಮಕ್ಳ ಅನ್ನದ ಸರೂ ರಾತ್ರ್ಯಾಗ್ (ಮಧ್ಯ ರಾತ್ರಿ) ಸಂದಿ-ಗೊಂದಿ ನೋಡದ್ ಮೂಲಿ ಕಲ್ಲಿಗಿ ಅಲ್ಲೆಟ್ ಇಲ್ಲೆಟ್ ತಲಿ ಬಡಿಸ್ಕೋಂತ್,  ಅಖಂಡಪ್ಪ ಕಾಕಾನ ಕಟ್ಟಿ ಮ್ಯಾಲಟ್ ಹೊಳ್ಳ್ಯಾಡಿ ಜಟ್ಟೆಪ್ಪಗೋಳ್ ಧರೆಪ್ಪ ಕಾಕಾನ ಮನಿ ಕಟ್ಟಿ ಮ್ಯಾಲ್ ಕುಂತ್, ಊರ್ ಮಂದಿ ಹೌ ಹಾರಿ ಏಳುವಾಂಗ್ ಚೀರ್ಯಾಡ್ತಾನ. ಆಮ್ಯಾಕ್ ಹೆಣ್ಣ್ ಕೊಟ್ಟ ಅಕ್ಕನ ಮನಿ ಅಂಗಳದಾಗ್ ನಿಂತ್ ಎಲ್ಲಾರಿಗೂ ಸಿಕ್ ಸಿಕ್ಕಂಗ್ ಬಾಯಿಗಿ ಬಂದಂಗ್ ಅಂತಾನ.

ಮಾರಿ ಮ್ಯಾಗ್ ಬಿಸಲ್ ಬೀಳು ಮಟಾ ಬಿದ್ದ್ ಉಳ್ಯಾಡ್ತಾನ್. ಹೊಲ-ಮನಿ ಚಿಂತಿ ಬಿಟ್ಟ್ ಗುಡಿ-ಗುಂಡಾರ ಇಸ್ಪೀಟ ಅದಿದ ಅನ್ಕೋಂತ ಕಾಲಾ ಕಳ್ಯಾಕ್ ಸುರು ಮಾಡಿದ್ ನಮ್ಮ ಚೆನ್ನಪ್ಪ ಕಾಕಾ. ಯಾಡೂ ಮನ್ಯಾಗ್ ಇವನ ಚಿಂತ್ಯಾಗ್ ಮನಸಿಗಿ ಶಾಂತಿ ಅನ್ನುದ್ ಇರಾಕಿಲ್ಲ.  ಕಾಕಾ ಅಲ್ಲಿ ಇಲ್ಲಿ ಓಡ್ಯಾಡುದ್ ನೋಡಿಕ್ಯಾಸ್ ಎಲ್ಲಿ ಚೆನ್ನಪ್ಪ ಯಾರದರ ಹೆಂಗಸಿನ ಕೂಡ ಗೆಳೆತನ ಇಟ್ಕೊಂಡ ಗಿಟ್ಕೊಂಡಾನ ಅಂತ ಶಂಕಿ ಬ್ಯಾರಿ ಸುರು ಆತು ನಮ್ಮಾಯಿ ಮುತ್ಯಾಗ್.  ಆ ಚಿತ್ರ ನನ್ನ ಕಣ್ಣ ಮುಂದ್ ಕಟ್ಟಿದಂಗ್ ಆಗಿತ್ತ. ಅಂತ ಹಣಿಬಾರ್ ಈ ಹುಡುಗಿಗೂ ಬರಬಾರ್ದ ಅಂತ ನೆನಿಸ್ಕೊಂಡ್ನಿ ನಾ.

ಇಷ್ಟ್ ಸಣ್ಣ ವಯಸ್ಸಿನ್ಯಾಗ ಮದ್ವಿ ಮಾಡಬ್ಯಾಡ್ರಿ ಅಂತ ಹೇಳುವಷ್ಟ್ ನನ್ಕಡಿ ಧೈರ್ಯ ಏನೋ ಇತ್ತು ಆದ್ರ ನನ್ನ ಮಾತು ಯಾರು ಕೇಳಾಂಗಿಲ್ಲ ಅನ್ನು ಖಾತ್ರಿನೂ ನಂಗಿತ್ತ್. ಮಗಳ ಬೆಳದ ನಿಂತ ದ್ವಾಡದ ಆಗೈತಿ ಲಗುಟ್ನ ಚಪ್ಪರ ಹಾಕಿಸಿ ವಾಲಗ ಊದಿಸಿ ಲಗ್ನ ಮಾಡಿ ಕೊಟ್ಟ ಬಿಡ್ ಸತ್ಯಮ್ಮ ಅಂತ್ ನಮ್ಮೌಗನ ಅನ್ನವರ ನಮ್ಮ ಕಳ್ಳಬಳ್ಳ್ಯಾವರ. ನನ್ನ ಮಗಳ ಇನ್ನ  ಓದಾಕತ್ಯಾಳವ ಓದುದ್ ಮುಗಿಲಿ ಆಮ್ಯಾಲ್ ನೋಡಿದ್ರಾತ್ ಈಗೇನ್ ಅಂವಸ್ರ ಐತಿ ಅಂತ ಅನ್ನು ನಮ್ಮ ಅವ್ವನ ಮಾತಿಗಿ, ಅಯ್ಯ ನಿನ್ ಸುಡ್ಲಿ, ಆ ಹೆಣ್ಣ್ ಹುಡುಗೀನ ಇನ್ನ ಓದಿಸ್ತ್ಯಾ? ಇವತ್ ಮದ್ವಿ ಮಾಡಿ ಕೊಟ್ರ ಎರಡ್ ಮಕ್ಳ ಹಡ್ಯು ವೈಸಾಗೈತಿ (14 ವರ್ಷದಕಿರಿ ನಾ ಆವಾಗ). ಅದೂ ಅಲ್ದ್ ಕೊಟ್ಟ ಹೆಣ್ಣ ಕುಲಕ್ಕ ಹೊರಗ್ ಅಂತ. ಯಾಕ ರೊಕ್ಕ ಸೂರುವ್ತಿ ಆ ಹುಡುಗಿ ಮ್ಯಾಗ್ ? ಅಕಿನ ಸಾಲಿ ಕಲ್ಸು ವಿಚಾರ ಬಿಟ್ಬಿಡ ಸತ್ಯಮ್ಮ. ಮೆಟ್ರಿಕ್ ಮುಗಿಸಿದ್ರ ರಗಡ್ ಆತ್.  ನೀ ಅಕಿನ್ ಜೇರಕರ್ತ (ಒಂದು ವೇಳೆ) ಓದಿಸಿದಿ ಅಂದ್ರ ನಾಳಿ ಬಕ್ಳಂಗಾ ಸಾಲಿ ಕಲ್ತ್‌ವಂಗ್ ನೋಡಿ ಲಗ್ನ ಮಾಡಿ ಕೊಡುದ ಅಕೈತಿ. ಸಾಲಿ ಕಲತ್ ಸೂಟು ಬೂಟು ಹಾಕೊಂಡ  ಸೂರ್ ಏನ್ ಇಕಿನ್ ಹಂಗ ಹಾರಿಸ್ಕೊಂಡ್ ಹೊಕ್ಕಾನಾ? ಲಕ್ಸ್ ಗಟ್ಲೆ ಗಂಟ ಕೊಡ್ಬೇಕ್ ಅಕೈತಿ ಅದೆಲ್ಲ ತಲ್ಯಾಗಿಂದ ತಗದ ಹಾಕ್. ಗಂಡ ಹುಡುಗನ ಬೇಕಾದರ ಓದಸ್ ಅನ್ನವರು ರೀ.

ಬಾಂವ್ಯಾಗಿಂದ ಒಂದ್ ಕಪ್ಪಿ ಮ್ಯಾಲ್ ಬರ್ಬೇಕಂತ ಜಿಗೀತಿದ್ರ ಉಳದ್ ಕಪ್ಪಿಗೋಳ ಬ್ಯಾಡ ಹೋಗ್‌ಬ್ಯಾಡ್ ಅಂತ ಕಾಲ್ ಹಿಡದ ಎಳಿತಿದ್ದು ಅಂತ. ಹಾಂಗ್ ಆಗಿತ್ರಿ ನನ್ನ ಹಣಿಬರಾನೂ. ಜೇರಕರ್ತ ನಮ್ಮವ್ವ ನನ್ನ ಬಳಗ ಅನ್ಕೋತ್ ಅವರ ಮಾತ್ ಕೇಳಿಕ್ಯಾಸ ನನ್ನ ಸಾಲಿ ಬಿಡಿಸಿ ಮದ್ವಿ ಮಾಡಿ ಕೊಟ್ಟಿದ್ರ, ಅನ್ಪಡ್ ಗಂಡಪ್ಪನ ಕೂಡ ಸಂಸಾರ ಹೂಡಿ ನಾಕ್ ಮಕ್ಕಳಿಗೆ ತಾಯಿ ಆಗಿ ಅಲ್ಲೇ ಅಡಿಗಿ ಮನ್ಯಾಗಿನ ಗಡಿಗಿ ಮುಕ್ಳಿ ತೋಳ್ಯುದಾಕ್ಕಿತ್ರಿ ನನ್ನ ಪಾಳೆನೂ. ಸಮಾಜ್ ಸೇವೆ ಕನಾಸಾಗೆ ಉಳಿತಿತ್ತು. ನಮ್ಮವ್ವ ನನ್ನ ಪಾಲಿನ ದೇವರು. ನೂರಾ ಜನಮ ಬಂದ್ರು ಆಕೀ ಹೊಟ್ಯಾಗ್ ಹುಟ್ಟಿಸ್ಲಿ ನನ್ನ ದೇವರ.

ಸಣ್ಣ ವಯಸ್ಸಿನ್ಯಾಗ್ ಮದ್ವಿ ಆಗ್ಬ್ಯಾಡ್ರಿ. ಎಲ್ಲದಕೂ ತಿಳುವಳಿಕೆ ಭಾಳ ಬೇಕ್ ಅಲ್ದ ಕಳ್ಳ ಬಳ್ಳ್ಯಾಗ್ ಮದ್ವಿ ಮಾಡಿ ಕುಡ್ಬ್ಯಾಡ್ರಿ ಅಂತ ಸಾಲ್ಯಾಗ್ ಕಲತ್ ಪಾಠಾ ಜೀವನದಾಗ ಅನುಸರಿಸಿ ನಡಿಬೇಕಂತ ನಾ ಹಿಂಗ್ ಅಟಟ್ ಆಗಾಗ ಬಿಟ್ಟಿ ಉಪದೇಶ ಕೊಟ್ರ, ನನ್ನ ಮಾತಿಗಿ ಏನ್ ಅನ್ನವರ ಗೊತ್ತೇನ್ರೀ ನಮ್ಮ ಜನ?,  “ಏ ಹುಡುಗಿ,  ಮಂಗ್ಯಾ ತಾ ಕೆಡುದ್ ಅಲ್ದಾ ವನಾನೂ ಕೆಡಿಸ್ತಂತ. ಏನ್ ತಿಳುವಳಿಕಿಲ್ಲ ಅವರಿಗೆ? ಕಸ ಮುಸ್ರಿ ಮಾಡ್ತಾರ್, ಅಡಿಗಿ ಮಾಡ್ತಾರ್, ಯಾಡೆಡ್ ಕೊಡ ನೀರ್ ಹೊತ್ತ ತರ್ತಾರ್. ಹೊಲಕ್ಕೋದ್ರ ಒಲಿ ಉರ್ಯಾಕ್ ಕಟಿಗಿ, ದನಗೋಳಿಗಿ ಹಸರ್ ಮೆವ್ವ ಮಾಡ್ಕೊಂಡ್ ತಲಿಮ್ಯಾಲ ಇಟ್ಕೊಂಡ್  ಹರದಾರಿ ನಡದ್ ಬರ್ತಾರ್. ಕೊಡಾ ಬ್ಯಾಡ ಸಣ್ಣ ಕಳಿಸೀಲಿ ನೀರ್ ತಂದ್ರ ಹೊಟ್ಟಿ ಝಾಡಿಸಿತ್ತ ಮಗಳದ ಅಂತ ನಿಮ್ಮವ್ವ ಒಂದ್ ಕೆಲಸ ಹಚ್ಚಿಲ್ಲ ನಿನಗ್. ನಿಮ್ಮವ್ವ ಕೊಟ್ಟ ಸಲಿಗಿ ಹೆಚ್ಚಾಗೈತಿ ನಿನಗ. ಅದ್ಕ ಇಷ್ಟ ಮಾತಾಡ್ತಿ ನೀ. ಗಂಡನ ಮನಿ ನಡ್ಯಾಕತ್ರ ಎಲ್ಲಾನೂ ತಿಳ್ಕೋತಾರ ನಿನಗ್ ಆ ಚಿಂತಿ ಬ್ಯಾಡ.  ಇಲ್ನೋಡ ಹುಡುಗಿ, ನಿನ್ ಪುರ್ತೇಕ್ ನೀ ಇರು ಅದ್ಬಿಟ್ಟಕ್ಯಾಸ್ ಹಂಗ-ಹಿಂಗ ಅನಾಕತ್ತಿ ನಮ್ಮನಿಗಿ ಹೆಜ್ಜಿ ಇಡ್ಬ್ಯಾಡ್ ನೀ ಅನ್ನವರ ನಂಗ್. ಊರ್ ಚಿಂತಿ ಮಾಡಿ ಮುಲ್ಲಾ ಸೊರ್ಗಿದಂತ! ಏನರ ಹೇಳಾಕ ಹೋದ್ರ ಹೀಂಗೆಲ್ಲ ಅಂದಕ್ಯಾಸ್ ನನ್ನ ಬುಡಕ್ ಕೋಡ್ಲಿ ಇಡಾಕ್ ಬರ್ತಿತ್ರಿ ಜನ. ಹಂತಾದಕನ ನಾ ಉಸಾಬರಿ ಮಾಡುದ್ ಬಿಟ್ಟ ಸುಮ್ಮ ಮದ್ವಿಗಿ ಹೋಗಿ ಅಕ್ಕಿ ಕಾಳ ಒಗದ್ ಬಂದ್ರ ಆತ್ ಅಂತ ಹೊಂಟ್ ನಿಂತೀನಿ. ಅದ್ರಾಗ್ ನನಗ್ ಆವಾಗ್ ಅಷ್ಟ ಬ್ಯಾರಿ ತಿಳಿತಿರ್ಲಿಲ್ಲ ನೊಡ್ರಿ.

ಹತ್ತ ಹೊಡಿಗುಡ್ದ  ಗಾಡಿ ಬಬಲೇಸೂರ್ ಮುಟ್ಟಿ ಆಗಿತ್ತ. ನಾವ್ ಹೋಗಿ ಮುತ್ಟುಗುಡ್ದ  ಗಂಡಿನ ಕಡೆಯವರ ಹೆಣ್ಣ ಕಡೆಯವರನ್ನ ಇದರಗೊಳ್ಳಾಕ ಮುತ್ತೈದೆರ ಕೂಡ ಕಾಯಿ, ಕಪ್ರ, ಆರತಿ ಐಗೋಳ ಗುರುಸ್ವಾಮಿ ಕರ್ಕೊಂಡ ಬಾಜಾ ಬಜಂತ್ರಿ ಕರಿಸಿ ಊದಿಸ್ಕೊಂತ ಬಾರಿಸ್ಕೊಂತ ದೊಡ್ಡ ಹಿಂಡ ಬಂದು ಅಗಸಿ ಬಾಗಿಲಿಗೆ ನಿಂತಿತ್ತು. ಮತ್ತೊಂದ್ ಕಡೆ ಒಂದು ದೊಡ್ಡ ಗುಂಪ್ ಡೊಳ್ಳ ಹಿಡಿದು ತಮ್ಮ ಗುಂಗಿನ್ಯಾಗ್ ಕಣ್ಣ ಮುಚ್ಚಿ ಸೊಂಡಿ ಕಡದ್, ಹಿಡ್ದಂಗ್ ಕಟ್ಟಂಗ್  ಹಿಡ್ದಂಗ್ ಕಟ್ಟಂಗ್ ಹಿಡದ್ ಕಟ್ಟಿ ಗುಮ್ಮ ಅನ್ನು ಸ್ವರಾದಾಗ್ (ನನಗ್ ಹಂಗ ಕೇಳಿಸ್ತಿತ್ತು) ಬಾರಿಸು ಕಡ್ತಕ್ಕ ನನ್ನ ಕಿವಿ ರಮ್ಮ ಅಂದ ರಂಗೇರಿದ್ದು.

ಅಗಸಿ ಬಾಗಿಲನ್ಯಾಗ ಇದರ್ಗೊಂಡ ಬೀಗರು ಕಾಲು ತೊಳೆದು ತಾಂಬೂಲಾ ಬದ್ಲಾಡಿಸಿ ಸಕ್ರಿ ಬಾಯೊಳಗ ಹಾಕೊಂಡ್ರು. ಆಮ್ಯಾಗ್. ಇಬ್ರೂ ಬೀಗರು ಸೇರಿ ಗುರುಸ್ವಾಮಿದು ಕಾಲು ತೊಳದು ಪೂಜಿ ಮಾಡಿ ದಕ್ಷಿಣ ಕೊಟ್ಟು ಮತ್ತ ಅದ ಬಾಜಾ ಬಜಂತ್ರಿ ಕಡ್ಸಿಂದ ಊದಿಸ್ಕೋಂತ ಬಾರಿಸ್ಕೋಂತ ಹೆಣ್ಣಿನ ಕಡೆಯವರನ್ನ ಕರಕೊಂಡ ಹಂದರ ಕಡೆ ಹೆಜ್ಜಿ ಹಾಕಿಸಿದ್ರು. ಹಾದಿ ತುಂಬಾ ಸೋಬಾನಿ ಪದ ಹಾಡುದ ಸುರು ಮಾಡಿದ್ರು ಹೆಣ್ಣು ಮಕ್ಳು.

“ಬೀಗರ ಬಂದಾರ

ಬಾಳಿಯ ಬನದಾಗ ಇಳಿದಾರ

ಬಾಳಿಯ ಮರವೆಲ್ಲ

ನೂರಿ ನುಗ್ಗಿ ಸ್ವಾಗತ

ಬೀಗರಿಗಿ ಬಯಸ್ಯಾವ”

ಅನ್ನು ಪದ ಹಾಡಿದ್ರು, ಮತ್ತೊಂದ್

“ಕಿಲ್ಲೇದ್ ಕಾಲವಳ ಮೆಲ್ಲಕ ಬಾರವ್ವ

ಕಲ್ಲ ಬಾಳವರ ಮನಿ ಮುಂದ

ಕಲ್ಲ್ಮುಳ್ಳ ಭಾಳವ್ವ ದಾರ್ಯಾಗ

ಇರಲಿ ನಿನ್ನೆರಡೂ ಕಣ್ಣವ್ವ”

ಹಿಂಗ್ ಏನೇನೋ ಪದ ಹೇಳಿ ಬೀರಪ್ಪ ಮುತ್ಯಾನ ಗುಡಿಗಿ ಕರ್ಕೊಂಡ ಹ್ವಾದ್ರು.

ಅಕ್ಕಿ ಕಾಳ್ ಮನಿ  ಮುಂದ ಇದ್ದಿರ್ಲಿಲ್ಲ ಬೀರಪ್ಪ ಮುತ್ಯಾನ ಗುಡ್ಯಾಗ್ ಇತ್ತ. ನಮ್ಮೂರ್ ಕಡೆ ಮದಿವಿ ಎಲ್ಲ ಗುಡಿ ಗುಂಡಾರ್ನ್ಯಾಗ್ ಮಾಡ್ಟಾರ್. ಉಗ್ರಾಣ ಕೋಲೆದಾಗ್ ಆಹ್ಹಾ! ಘಮ್ಮಂತ ಉಪ್ಪಿಟ್ಟ ಭಾಸ್ ಬರ್ತಿತ್ತ್. ಬಿಸಲಾಗ್ ಬಂದ ನಮಗ ಹೊಟ್ಟಿ ಹಸದ ಹೌ ಹಾರಿತ್ತ್. ಹಿಂದ್ ಮುಂದ್ ಇಚಾರ್ ಮಾಡದ ಮದಲನೆ ಪಂತಿಗೆ ಚಾ, ನಾಷ್ಟಾಕ ಕುಂತ್ನಿ ನನ್ನ ಗೆಳತ್ಯಾರ್ ಕೂಡ. ಎಗ್ಗಳಂಗಾ ಉಪ್ಪಿಟ್ ಜೆಡದ್ ಮ್ಯಾಲೊಂದ್ ಚಾ ಕುಡದ್ ಹೊಂಟಿವಿ ನಮ್ಮ ವಯಸ್ಸಿನ್ಯಾವರನ ಹುಡುಕೊಂತ. ಅಲ್ಲೇ ಬಾಜುಕ್ ಇದ್ದ ಹೊಲದಾಗ ಅಡ್ಡಾಡಿ ಬರ್ಬೇಕಂತ ಹೆಜ್ಜಿ ಹಾಕಿದ್ವಿ,  ನಮಗ ಮದ್ವಿಗಿ ಸಂಬಂಧನಾ ಇಲ್ಲೆನೋ ಅನ್ನುವಂಗ.  ನಮ್ಮನ ನೋಡಿಕ್ಯಾಸ ಒಂದ್ ನಾಳ್ಕೈದ್ ಹುಡುಗ್ರು ಬ್ಯಾರಿ ಬೆನ್ನ ಹತ್ತಿದ್ದು. ಅದ್ರಲ್ಲಿ ಒಬ್ಬಾಂವ ತನಗ  ಗುಂಡಿಗಿ ಐತಿ ಅನ್ನುವಂಗ ಸೋಗ್ಲಾಡ್ಯಾ ಕಾಗಿ ಕಂಠದಾಗ ಟಪೋರಿ ಹಾಡಾ ಸುರು ಮಾಡಿದ,

“ನೀ ಎಲ್ಲಿಗೊಂಟಿ ಅಲ್ಲಿಗಿ

ಬರ್ತೀನಿ ಸುವರ್ಣ

ನಿನ್ ಹೆಸರಿಗಿ ನನ್ನ ಹೆಸರ

ಸೇರಿಸ್ತೀನಿ ಸುವರ್ಣ.

ನನ್ನ ಎದೆಯ ಗೂಡ

ತಮಟೆ ನೀನು ಸುವರ್ಣ

ಯಾವಾಗ ಹೇಳೆ

ನನಗೂ ನಿನಗೂ ಕಲ್ಯಾಣ”

ಅಂತ ಹಾಡು ಕಡ್ತಿಗಿ ಉಳದ ಹುಡುಗುರು ಕಿಕಿಕಿಕಿ ಅಂತ ಗೇಲಿ ಮಾಡಿ ಹಲ್ಲ ಕಿಸ್ಯಾಕ ಸುರು ಮಾಡಿದು. ಹುಡುಗ್ಯಾರ್ ಅಂದ್ರ ಏನಂತ ತಿಳದಾರ್ ಯಾಂಬಾಲ್ ಊರ್ ಬಾಡ್ಯಾಗೋಳ್ ತಡಿ ಇವರಿಗಿ ಶಾಸ್ತಿ ಮಾಡ್ತನ್.  ನಾ ಏನ್ ಕಡಿಮಿ ಅಂತ ಎಲ್ಲೋ ಕೇಳಿದ್ದ ಗೊತ್ತಿದ್ದ ಹಾಡ ಐತಿ,

“ನೀನೊಂದು ಕಬ್ಬಿಣ ಜಲ್ಲೆ

ನಿನ್ನ ಡೊಂಕನೆಲ್ಲ ಬಲ್ಲೆ”

ಅಂತ ಅಂದ ನಡಿ,  ನಿಮ್ಮನಿಗಿ ಈ ಸದ್ದ ಹೋಗುನ್ ನಿಮ್ಮಪ್ಪ ಅವ್ವನ  ಭೆಟ್ಟಿ ಆಗಿ ಮಾತಾಡ್ತನ. ಹಿಂದಿಂದ ಬರ್ತೀಯೋ ಇಲ್ಲ ಹೆಸರಿಗಿ ಹೆಸರ ಸೇರಿಸ್ತೀಯೊ ನೋಡುನ ನಡಿ ಅಂದ್ನಿ. ನಾ ಹಾಂಗ್ ಅಂದ ಕಡ್ತಿಗಿ  ದಿಕ್ಕಾ ಪಾಲಾಗಿ ಓಡಿ ಹೋದ್ ಹುಡುಗ್ರು ಆಮ್ಯಾಲ ಒಂದ್ ಕಪೇನೂ  ಕಣ್ಣೀಗಿ ಬೀಳಲಿಲ್ಲ. ಇಷ್ಟೆಲ್ಲ ಕಿತಬಿ ಮಾಡುಗೊಡ್ದ ಅಕ್ಕಿಕಾಳ ಬೀಳು ಟೈಂ ಆಗಿತ್ತು. ಮದ್ವಿ ನಡಿಯು ಜಾಗಕ್ ಹೋದ್ವಿ.

ಎಲ್ಲಿ ನೋಡ್ತಿ ಅಲ್ಲಿ  ಹೆಂಗ್ಸರು ಮಣಕಾಲ್ ಮುರಿ ಸೀರಿ, ರೇಶ್ಮಿ ಸೀರಿ ಕಾಣ್ತಿದ್ವು. ಕೈತುಂಬ ಅನ್ನುವಂಗ ಹಸರ ಕಡ್ಡಿ ಬಳಿ ಬ್ಯಾರಿ ಹಾಕೊಂಡಿದ್ರು, ಮಾರಿ ಮ್ಯಾಲ ಹಣಿ ತುಂಬುವಂಗ ಬಂಡಾರ್ ಹಚ್ಕೊಂಡ, ರೂಪಾಯಿ ಸಿಕ್ಕಾದಷ್ಟ್ ದೊಡ್ಡದು ಕೆಂಪು ಕುಂಕುಮ ಮುತ್ತೈದಿಗಿ ಮೆರಗ್ ಕೊಟ್ಟಿದ್ದನ್ ನೋಡಾಕ್ ಯಾಡು ಕಣ್ಣು ಸಾಲಾಂಗಿಲ್ಲ ಅನಿಸ್ತಿತ್ತು. ಸುತ್ತ ಹತ್ತು ಹಳ್ಳಿಗೆ ಕೇಳುವಂಗ ಸಿನೆಮಾ ಹಾಡ್ ಹಾಕಿದ್ರು.

ಅಕ್ಕಿ ಕಾಳಿಗಿಂತ ಮದಲ ಸುರಿಗಿ ನೀರ್ ಅಂತ ಬೀಳ್ತಾವ್ರಿ. ಗುಡಿ ಮುಂದ್ ನಾಲ್ಕು ಕಡೆ ದೊಡ್ಡು ನಾಲ್ಕು ಕಟಿಗಿ ಪಳಿ ಇಟ್ ನಡುವ ಆಡ್ಡಡ್ಡ ಯಾಡ್ಯಾಡ ಪಳಿ ಇಟ್ ಒಂದೊಂದು ದಂಡಿ ಕಡಿ ಮದಿಮಗಳನ ಮದಿಮಗನ ಕುಂದ್ರಿಸಿ  ಇಬ್ಬರಿಗಿ ಬೆನ್ನ ಹಿಂದ ಇಬ್ಬ್ಬಿಬ್ರೂ ಮುಂದ್ ಇಬ್ಬಿಬ್ರೂ ಅರಿಸಿನ ಸೀರಿ ಬಿಳಿ ವಸ್ತ್ರ ವಲ್ಲಿ ಹಿಡ್ಕೊಂಡ್ ನಿಂತಿದ್ರು. ಉಟ್ಟರವಿ ಮ್ಯಾಲ ಸುರಿಗಿ ನೀರ ಹಾಕಿ ಜಳಕ ಮಾಡಿಸಿದ್ರು.  ಅಲ್ಲೇ ಊರ ಹಿರೆರ ಮುಂದ್ ಅವರು ಉಟ್ಟರವಿ ಮ್ಯಾಲ ಅರವಿ ಬದಲ್ ಮಾಡಿದ್ರ್.

ನನಗ ಒಂದ್ ಸಂಪ್ರದಾಯ ಬರಬ್ಬರಿ ಅಂತ ಅನಿಸ್ಲಿಲ್ಲ. ಅದೆಂಗ್ ಊರ ಜನ ಮುಂದ್ ಹೆನ್ಮಕ್ಳು ಬಟ್ಟೆ ಬದಲ ಮಾಡೋದು ಅದೊಂತರ ಮುಜುಗರ ಅನ್ನಿಸ್ತು. ಆ ಆಚರಣಿ ನಂಗ್ ಬಿಲ್ಕುಲ್  ಸರಿ ಅನಿಸ್ಲಿಲ್ಲ. ಮನಿಸಿನ್ಯಾಗ್ ಅನ್ಕೊಂಡ್ನಿ ಇಂತವೆಲ್ಲ ಇದ್ರ ನಾ ಮದ್ವಿ ಮಾಡ್ಕೊಳ್ಳುದಿಲ್ಲ ಅಂತ.  ಆಮ್ಯಾಕ್ ಆ ಜಾಗದಿಂದ ವಧು ವರನ ಕರ್ಕೊಂಡ್ ದೇವರ ಮುಂದ್ ನಿಲ್ಲಿಸಿದ್ರು ಅಲ್ಲೇ ಅಕ್ಕಿ ಕಾಳ್ ಬಿದ್ದು . ಮದಿಮಗನ ಕೈಗೊಂದ್ ತೆಂಗಿನ ಕಾಯಿನ ಕೆಂಪ ಅರಿವ್ಯಾಗ್ ಸುಳ್ಳಿ ಸುತ್ತಿಕ್ಯಾಸ್ ಕಟ್ಟಿದ್ರು. ಆ ತೆಂಗಿನ್ ಕಾಯಿನ ಲಗ್ನ ಮುಗದ್ ಮ್ಯಾಲ್ ಮನಿ ಜಂತಿಗಿ ಕಟ್ಟಬೇಕಂತ ವಾಡಿಕಿ. ನನಗ್ ಗದ್ದಲ ಅಂದ್ರ ಆಗಿ ಬರುದಿಲ್ಲ ಅದಾಕ್ ಲಗುಟ್ನ ಅಲ್ಲಿಂದ ಜಾಗ ಕಿತ್ತಬೇಕಂತ ಊಟ ಮಾಡಿ ಮತ್ತ ಆ ಬಾಜೂಕಿನ ಹೊಲಕ್ ಹ್ವಾದ್ನಿ . ಅಲ್ಲಿ ಏನೋ ಆಗಿತ್ತ,  ಭಾಳ ಜನ ಹುಯ್ಯ ಅಂತ ಗುಂಪ್ ಕಟ್ಟಿತ್ತು!


 

ಮುಂದುವರಿಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Hipparagi Siddaram
Hipparagi Siddaram
10 years ago

ಕುಮಾರಿ ರುಕ್ಮಿಣಿ ಬಾಯೇರ…. ಭಾಳ ಚಲೋತ್ನ್ಯಾಗ ಬರದೀರಿ…ನಿಮ್ಮ ಲೇಖನಿಯೊಳಗ ನಾನಾ ನಮೂನಿ ಪದಗೋಳು ಬ್ಯಾರೇನ ಹೊಸಾ ಅರ್ಥಾ ಪಡಕೋಂತಾವಲ್ರೀ…ನನಗಂತೂ ಎರಡ್ಮೂರು ಸಲ ಓದೂವಂಗ ಆತ ನೋಡ್ರೀ…….ನಿಮಗ ಅಗದಿ ಛಲೋ ಭವಿಷ್ಯ ಅದ ನೋಡ್ರೀ….ಮುಂದುವರಸ್ರೀ ನಿಮ್ಮ ಬರವಣಿಗೇನಾ…ಶುಭವಾಗಲ್ರೀ…ಹೀಂಗ ಚೆಂದ..ಚೆಂದದ ಲೇಖನಗಳನ್ನ ನಿಮ್ಮಿಂದ ನಿರೀಕ್ಷೇ ಮಾಡೂವಂಗ ಆಗೇತಿ ನೋಡ್ರೀ…Best Wishes…

gaviswamy
10 years ago

ಚೆನ್ನಾಗಿ ಬರೆದಿದ್ದೀರಿ.

ಬಾಲ್ಯ ವಿವಾಹ ಹಾಗೂ ಮದುವೆಗೆ ಸಂಬಂಧಿತ ಇನ್ನಿತರ ಕಂದಾಚಾರಗಳನ್ನು ವಿಶಿಷ್ಟ ಧಾಟಿಯಲ್ಲಿ ವಿಮರ್ಶೆ ಮಾಡಿದ್ದೀರಿ.

ಮಹದೇವ ಹಡಪದ
ಮಹದೇವ ಹಡಪದ
10 years ago

bhashe channaagide..

3
0
Would love your thoughts, please comment.x
()
x