ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ: ರುಕ್ಮಿಣಿ ಎನ್.

ಹುಟ್ಟಿದಾಗಿನಿಂದ ಇವತ್ತಿನವರ್ಗು ನಾ ಮದ್ವಿ ಮುಂಜಿ, ಜಾತ್ರೀ ಅಂತ್ ಹೇಳಿ ಊರೂರ್ ತಿರಿಗಿದ್ ಭಾಳ ಕಡಿಮಿ ರೀ. ಮದ್ವಿಅಂದ್ರ್ ಸಿನಿಮಾದಾಗ್ ನೋಡು ಸೀನ್ ಅಷ್ಟ್ ಗೊತ್ತಿತ್ರ್ ನಂಗ್. ಅದರೀ.. ಹುಡುಗನ ಕಡೆಯಿಂದ ಅವನ್ ಗೆಳ್ಯಾರು, ಹುಡುಗಿ ಕಡೆಯಿಂದ ಅಕಿ ಗೆಳತ್ಯಾರು, ಮದ್ವಿ ಒಂದ್ ವಾರ್ ಇರುತ್ಲೇನ್ ಬರಾತಾರು. ಏನೇನರ ಕೆಂತಿ ಮಾಡ್ತಾರು, ಯಾರಗೋ ಯಾರದೋ ಮ್ಯಾಲ್ ಲವ್ವ್ ಅಕ್ಕೈತಿ… ಮದ್ವಿ ದಿನ, ಊಟ ಮದಲ್ ಇರ್ತೈತಿ. ಆಮ್ಯಾಕ್ ಅಕ್ಕಿಕಾಳ್ ಒಗಿತಾರು. ಮದ್ವಿ ಆತ್ ಆತ್ ಅನುಗುಡ್ದ, ಹುಡುಗಿ ಕರ್ಕೊಂಡ್ ಹೋಗು ಸೀನ್, ಅಪ್ಪನ ಅವ್ವನ ಆಪ್‌ಕೊಂಡ್ ಗೊಳೋ ಅಂತ್ ಹುಡುಗಿ ಅಳುದು, ಚಿಂತೀ ಬ್ಯಾಡ್ರಿ ಮಾಮರ ನಾ ಚೆಂದಗ ನೋಡ್ಕೊತನ ನಿಮ್ಮ ಮಗಳನ ಅನುದು, ಗಾಡ್ಯಾಗ್ ಹುಡುಗಿ ಕರ್ಕೊಂಡ್ ಹೊರಡು ಮದಿಮಗ (ಮದುಮಗ), ಹಿಂಗ್ ಏನೇನೋ ಎಟ್ಸೆಟ್ರ ಎಟ್ಸೆಟ್ರ.. ಇಷ್ಟ್ ಗೊತ್ತಿತ್ರಿ.. ಈಗೇನ್ ಮಹಾ ಗೊತ್ತಗಾತೋ ಅನ್ಬ್ಯಾಡ್ರಿ, ಈಗ್ಲೂ ಏನೂ ಗೊತ್ತಿಲ್ಲ… 😛

ನಾ ಯೋಳನೆತ್ತೆ ಇದ್ದಾಗ್, ನಮ್ಮ್ ಓನ್ಯಾಗಿನ್ ಬುಡ್ಡ (ಲಾಲ್ ಸಾಹೇಬ್) ಮಾಮಾನ ಮದ್ವಿಗಿ ಹೋಗಿದ್ನಿ. ಮದ್ವಿ ಹೆಂಗ್ ಇರ್ತೈತಿ, ಏನ್ ಸಂಪ್ರದಾಯ, ಏನ್ ಆಚರಣೆ ಅಂತ ತಿಳ್ಕೊಳ್ಳೋ ಹಂಬಲೇನ್ ಇರ್ಲಿಲ್ಲ. ಮಾಮಾ ಅಂದ್ರ ನಂಗ್ ಭಾಳ ಪ್ರೀತಿ ಇತ್ತು ಅವನ್ ಜೊತಿ ಫೋಟೋ ತಕ್ಕೋ ಬೇಕ್ ಅನ್ನು ಹಂಬಲ್ ಅಷ್ಟ್ ಇತ್ರಿ. ಸಣ್ಣ ಹುಡಿಗ್ಯಾಗಿ ಒಂದ್ ಕಡಿ ಕುಂದರಲೇ ರುಕುಮಿ ಅಂತ ಗುಡುಮಾ (ಲಾಲ್ಸಾಬ್ ಮಾಮನ್ ಅವ್ವ) ಆಯಿ (ಅಜ್ಜಿ) ಗದರಿಸಿದ್ಲು. ಸಪ್ಪನ್ ಮಕ ಹಾಕೊಂಡ್ ನೀನು ಬ್ಯಾಡಾ ನಿನ ಮಗನ್ ಮದ್ವಿನೂ ಬ್ಯಾಡಾ ಅಂತ್ ಮನಿಗಿ ಬಂದಿದ್ನಿ.

ಮತ್ತೊಂದ್ ಕಪೆ (ಮತ್ತೊಂದು ಬಾರಿ), ನಾನಗ್ ಒಂಭತ್ನೆತ್ತೆ ಇದ್ದೀನ್ರಿ, ತಳೇವಾಡ ನನ್ನೂರ್ ಆದ್ರ ಬಾಜೂಕಿನ ಊರ್ ಮುಳವಾಡ ಹೈಸ್ಕೂಲ್ ಸಾಲಿಗಿ ಹೋಗ್ತಿದ್ನಿ, ಒಂದಿನ ನಮ್ಮ ಕಳಬಳ್ಳ್ಯಾಗಿನುವ ಮೂರು ಲಗ್ನ(ಮದುವೆ) ಒಮ್ಮೆಗೆ ಬಂದಿದ್ದು ರೀ. ಯಾವದು ಮಿಸ್ ಮಾಡು ಹಂಗೀರಾಕಿಲ್ಲ. ಅದಕ್ ನಮ್ಮವ್ವ ನಂಗ್, ನುಕುನಾ (ಅಮ್ಮ ನಂಗೆ ಪ್ರೀತಿಯಿಂದ ನುಕುನಾ ಅಂತಾರೆ) ಒಂದಿನ ಸಾಲೀ ಬಿಟ್ಟ, ಬಬಲೆಸೂರ್ ಹೋಗಿ ಅಕ್ಕಿ ಕಾಳ್ ಒಗದ್ ಬಾ ಮಗಳ ಅಂದ್ಲು.

ಥೊ.. ಈ ಮದ್ವಿ ಮುಂಜಿ ಅಂದ್ರ ನನಗ್ ಆಗಿ ಬರುದುಲ್ ನೋಡ್ ಬೇ. ಸಾದಾ ಅರವಿ ಹಾಕೊಂಡ್ ಹೊಕ್ಕಿಯಾ ಮಂದಿ ಅಂತಾರು, ಅಯ್ಯ ನೋಡವ ಹೆಂಗ್ ಬಂದಾವ್ ಗೊಲ್ಲರಂಗ್ ಅಂತಾರ್. ಚಂದಾನ್ ಅರವಿ ಹಾಕೊಂಡ್ ಹೊಕ್ಕಿಯ, ಮೀಸಿ ಒಡದ್ ವಯಸೀಗಿ ಬಂದ್ ಹುಡುಗ್ರು ಪಿಕಿಪಿಕಿ ಮಕಾ ನೋಡ್ಕೋತನ ನಿಲ್ತಾವ ಊರ್ ಬಾವಾಗೋಳ್(ಬೈಗುಳ). ಬರೀ ನೋಡ್ತಾವಾ? ಇಲ್ಲ.. ನೋಡಿಕ್ಯಾಸ ಹಿಂದೊಂದ್ ಮುಂದೊಂದ್ ಅನ್ಲಿಕ್ ಸುರು ಮಾಡ್ತಾವ್. ಹಂತದೇಲ್ಲ ಕೇಳಿಸ್ಕೊಂಡ್ ಸುಮ್ಮ್ ಕೂಡು ಹುಡುಗೆಲ್ಲ್ ನಾ. ನನಗ್ ಹಿಂತಾದ್ ಬಗಿಹರಿಯುದಿಲ್ಲ ಅಂತ ನಿನಗ ಗೊತ್ತಿದ್ದ ಮಾತ ಐತಿ; ನಾ ಹೋಗುದುಲ್ ನೋಡ,  ಅಂತ್ ಹೇಳಿ ಕೈ ಚೆಲ್ಲಿದ್ನಿರಿ.

ನಮ್ಮವ್ವ ನನಗ್ ಹೋಗ ಅಂದ ಮದ್ವಿಗೆನ ನನ್ ವಾರಿಗಿ ಹುಡುಗೇರು, ಕ್ಲಾಸ್ ಮೆಟ್ಸ್ ಹುಡುಗ್ಯಾರ್ ಬ್ಯಾರಿ ಹೊಂಟ್ ನಿಂತಿದ್ರು, ಲೇ ನಾಗೀ (ನಾಗಣ್ಣವರ ನನ್ನ ಸರ್ ನೇಮ್ ಇರುವುದರಿಂದ) ನೀನು ಬಾರ.. ಗೆಳತ್ಯಾರ್ ಗೆಳತ್ಯಾರ್  ಕೂಡಿಕ್ಯಸ್ ಹೋಗುನ್. ನೀ ಎಲ್ಲಿ ಬರುದುಲ್ ನೋಡ್ಲೆ..  ಇದೊಂದ್ ಕಪೆ ಬಾ (ಒಂದು ಬಾರಿ). ಒಂದ್ ಸವ್ನಿ ತಲಿ ತಿನ್ಲಿಕತ್ರು. ಮನ್ಯಾಗ್ ನಮ್ಮವ್ವ ಬ್ಯಾರಿ ಬಡ್ಕೊಳಾಕ್ ಶುರು ಮಾಡಿದ್ಲು ಅಂತೇಳಿ, ಹೂ ಬರ್ತನ್ ಬಿಡ್ರೆ ಅಂತ ಗೋಣ ಹಾಕೀದ್ನಿ.  

ಲೈಫ್ನಲಿ ಫರ್ಸ್ಟ್ ಟೈಮ್ ಇರ್ಬಕ್ ನೋಡ್ರಿ ಆಪತಿ ತಯಾರಾಗಿ ಪೀಕಣಿ (ಮೇಕ್ ಅಪ್- ಆಡುಭಾಸೇಲಿ) ತಕ್ಕೊಂಡಿದ್ದೆ.  ನಾ ಉಡೊ ಹೆಚ್ಚನೆಚ್ಚ ಅರಿಬಿ ಎಲ್ಲ ನಮ್ ಗೋವ ಚಿಗವ್ವ ಕೊಡ್ತಿದ್ಲು. ಹಿಂಗಾಗಿ ನಾ ಯಾವತ್ತೂ ಸ್ವಲ್ಪ ಘಮಂಡಿನ್ಯಾಗ ಇರ್ತಿದ್ನಿ. ಒಂದು ಚೆಂದನೆ ಮೀಡಿ ಹಾಕೊಂಡ್ನೀ, ಗುಂಗುರು ಕೂದ್ಲು ಅಂದ್ರ ನಂಗ್ ಭಾಳ ಪ್ರೀತಿ ಅದರ ಹಿಂದಿನ ದಿನ ತಲಿ ತೊಳ್ಕೊಂಡ್ ಬಾಜು ಮನಿ ನಾಗಮ್ಮನ ಕಡೆ ಇರುವಿ ಜಡಿ ಹಾಕೀಸ್ಕೊಂಡಿದ್ನಿ ಸಣ್ಣಗಿ ಹಾಕಿದ್ ಇರುವೆ ಜಡಿಗಿ ಬೆಳಿಗ್ಗೆ ಅನ್ನುವಸ್ಟ್ರಲ್ಲಿ ಕೂದ್ಲೆಲ್ಲಾ ಗುಂಗುರಾಗಿ ಸುರುಳಿ ಸುರುಳಿ ಸುತ್ತಿದ್ವು.

ನಾ ತಯಾರಗುದುನ್ನ ನಮ್ಮವ್ವ ಒಂದ್ ಸವ್ನಿ ಬಿಟ್ಟ್ ಕಣ್ ಬಿಟ್ಟಂಗ್ ನೋಡ್ಕೋತ್ ಕುಂತ ಬಿಟ್ಲು. ಯಾಕ್ ಅಂತಿರ್ಯಾ? ದಿನ ಬೈಯಾಕಿ ನಂಗ್ ಮಕದ ಮ್ಯಾಲ ಹಂಚಿಬಟ್ಟ್ ಇಲ್ಲ, ಕೈಯಾಗ್ ಬಳಿ ಹಾಕೊದೀಲ್.. ಹೋದಲ್ಲೆಲ್ಲ ಡಿಗ್ಗಿ ಗಟ್ಲೆ ತರ್ತನ್ ಹಾಕೋತೈತಿ ಮಗಳ ಅಂತ್ ಹೇಳಿ. ಮಂದಿ ಮಕ್ಕಳ್ನೋಡ್ ಹೆಂಗ್ ಇರ್ತ್ಯಾವ್, ತಮ್ ಹಂತೇಕ ಇರ್ಲಿಲ್ಲ ಅಂದ್ರೂ ಮಂದಿ ಕಡಿಯಿಂದ ಇಸ್ಕೊಂಡ್ ಹಾಕೋತಾವ್. ನೀನು ಆದಿ, ಇಷ್ಟೆಲ್ಲಾ ಇದ್ರು ಹಾಕೋಳುದಿಲ್ಲ ಅಂತ ಬೈಯಾಕಿ.

ಗಂಡ ಮಗ ಆಗೇರ್ ಹುಟ್ಟಲಿಲ್ಲ ನೀ ನನಗ. ಈಗ ಅವರ್ ಇವರ್ ನೋಡಿದ್ರ ನಿಂಗ್ ಏನ್ ಅನುದುಲ್ಲ; ನನ್ನ ಮುಂದ್ ಅಂತಾರ ಆಯ್ಯ ಸತ್ಯಮ್ಮ, ನಿನ್ನ ಮಗಳಿಗೆ ಬಳಿ ಅದು ಹಾಕೋ ಅಂತ್ ಹೇಳವಾ. ಗಂಡ್ ಹುಡುಗ್ರಾಂಗ್ ಹಂಗ್ ಅಡ್ಡ್ಯಾಡತೈತಿ ಹುಡುಗಿ ಅಂತಾರ್.

ಇಲ್ಲಿ ನೋಡ್, ನಿನಗ್ ತಿಳಿದಿದ್ದ ನೀ ಮಾಡಕ್ ಹೋಗಬ್ಯಾಡಾ ನಿಮ್ಮ ಮಾಮಾನ್ (ಅಮ್ಮನ ತಮ್ಮ) ಮುಂದ್ ಹೇಳ್ತನ ಮಾತ ಕೇಳುಲ್ ಪಾ ನಿನ್ ಸೊಸಿ ಅಂತ್ ಹೇಳಿ,

ನಿನ್.. ನಿನ್.. ಲಗಾ ಹಾಕಿಸ್ತನ್…  ಅಂಜಿಕಿ ಹಾಕ್ತಿದ್ಲು ನಮ್ಮವ್ವ. (ಹಾಸ್ಟೆಲ್ ಪ್ರಭಾವ, ಗಾಢವಾಗಿ ನನ್ ಮೇಲೆ ಬೀರಿತ್ತು. ನಾನಾದ್ರೂ ಏನ್ ಮಾಡ್ಲಿ?)

ಅಕಿ ಬಯ್ಯು ಕಡ್ತಿಗೆ “ಏ ಬೇ.. ಎಲ್ಲಾದ್ಕೂ ನೀ ಮಂದಿ ಮಕ್ಕಳಿಗೆನ ನಮ್ಮನ್ನ್ ಹೋಲಿಸ್ತೀಯಲ್ಲ,  ಸುಮ್ಮೀರ್ತಿ ಸ್ವಲ್ಪ?  ಬೆಳಕ ಹರಿದಾಗ್ನಿಂದ ನಿಂದ್ ಸುಪ್ರಭಾತ ಕೇಳಿ, ತೆಲಿ ಗಿರ್ರ್ ಅಂತ್ ನೂಸಾಕತ್ತ್ ನಂದ್; ಗಪ್ಪ್ ಅಕ್ಕಿ ಅಟಾ?  "ಅವರದವರ ಸುತ್ತ, ನಮ್ದು ನಮ್ಮ ಸುತ್ತ".  ಏನು?, ನನ್ನ ಪಿರ್ಯಾದಿ ಮಾಮಾಗ್ ಹೇಳ್ತೀಯ? ನಿಮ್ಮ ತಮ್ಮ ನನ್ನ ನೋಡಿದ್ರ ಮಾರುದ್ದ ಜಿಗಿತಾನ್, ನಾ ಎದುರಿಗೆ ಬರಾಕತ್ತನ್ ಅಂದ್ರ ನಾ ಕಣ್ಮರಿ ಆಗುಮಟಾ ನೆಲದಾಗ್ ಇಟ್ಟ್ ಕಣ್ಣ ನೆಲದಾಗ್ ಇರ್ತಾವ್ (ಯಾಕಂದ್ರೆ ನಮ್ಮ ಮಾವ ನಾನು  ಇವತ್ತಿನ ವರ್ಗೂ ಒಂದಿನ ಮಾತಾಡಿಲ್ಲ). ಇನ್ನ್..  ನನ್ನ ಲಗಾ ಹಾಕ್ಸು ಮಾತ್ ದೂರ್ ಉಳಿತ್ ಬಿಡ್ ಬೇ ಅಂತ, ಹೊಟ್ಟಿ ಹುಣ್ಣಾಗುವಂಗ್ ನಗು ನನ್ನ ಮಗಳು ಮಗಳಿಗಿ ಇವತ್ತೇನ ಇದ್ಕಿದ್ದಂಗ್ ಏನ್ ಆತು ಅಂತ ಅಚ್ಚರಿ ಆದ್ರ, ಹೆಣ್ಣ್ ಮಕ್ಕಳಂಗ ತಾಯರಾಗಕತೈತಿ  ಅಂತ ಖುಸಿ  ಪಟ್ಟಳ್ರಿ ನಮ್ಮವ್ವ. 

ಮದಿವಿ ಬಬಲೇಸೂರನ್ಯಾಗಿತ್ರಿ, ದೊಡ್ಡ ಮಾಲ್ ಗಾಡಿ (ಟ್ರಕ್) ಹೆಣ್ಣಿನ ಕಡೆಯವರ್ನ ಒಯ್ಯಾಕ್ ಬಂತ್, ಟ್ರಕ್ ಬಂದ ಸುದ್ದಿ ಕೇಳಿದಕಿನ, ಕೂಡ್ಲಿಕ್ ಜಾಗ್ ಸಿಗುದಿಲ್ಲ್ ಅನ್ಕೊಂಡ್ ಬರಾಬರಾ ಹೋಗಿ ಜಾಗಾ ಹಿಡ್ಕಂಡ್ ಕುಂತ್ನೀ. ಟ್ರಕ್ ಬಂದ್ ಯಾಡ್ ತಾಸಿಗಿ ಜನ ಕೂಡ್ತು. ಕಲ್ಲವ್ವ ಬಾರ, ಮಲ್ಲವ್ವ ಬಾರ ಅಂತ್ ಹೇಳಿ.

 ಆ ಗಾಣಿಗ್ಯಾರ್ ಗಂಗವ್ವ ನಸಿಕಿನ್ಯಾಗ್ ಎದ್ದು ೨೦ ಬಿಳಿಜಾಳ್ ರೊಟ್ಟಿ ಬಡ್ಕೊಂಡು ಬುತ್ತಿ ಕಟ್ಕೊಂಡ್ ಹೀರ್ಯಾಗ್(ಪತಿ) ಕೊಟ್ಟ ಬರ್ತನ್ ಅಂತ ಹೊಲಕ್ (ಹೊಲ) ಹ್ವಾದ್ಳ. ಬಸಪ್ಪ( ಗಂಗವ್ವನ ಪತಿ) ಲಿಬ್ಬನಕ ಬರಂಗ್ ಕಾಣುದಿಲ್ಲ, ೩೦ ಆಳ್ ಹಚ್ಚಿಸಿ ಸದಿ(ಕಳೆ) ತಗ್ಸಾಕತ್ತಾನ್ ಅಂತ. ಬಿಟ್ಟ್ ಹೆಂಗ್ ಬಂದಾನೂ, ನಿಮ್ಮ ತಂಗೀನ ಹಚಗೊಡ್ತನಬೇ ಎಕ್ಕ ಅಂದಿದ್ದ. ಗಾಡಿ ನಿಲ್ಸರಿ ಆಕೀ ಬರುತಕ ಅಂತ ಆ ಬೆಲ್ಲದ ಬಾಳಕ್ಕ ಆ ಕಡಿಯಿಂದ ಚೀರ್ತಿದ್ಲು, ಗಾಡ್ಯಾಗ್ ಅಲ್ಲಿಬ್ರೂ ಇಲ್ಲೀಬ್ರೂ ಕುಂತಿದ್ ಬಿಟ್ಟ್ರ ಗಾಡಿ ಖಾಲಿನ ಇತ್ತ. ಚೀರಿ ಕ್ಯಾಸ್ ಗಂಟ್ಲ ಯಾಕ್ ಹರ್ಕೋಳಾಕತಿದ್ಲೋ ಗೊತ್ತಾಗ್ಲಿಲ್ಲ ನನಗ್..

 ಆ ಹೂವ್ಗಾರ್ ಲಸಮವ್ವ(ಲಕ್ಷ್ಮಿ) ಮಗಳ ತೆಲಿಗಿ ಕುಂಚಗಿ ತರತನ್ ಅಂತ ಹ್ವಾದಾಕಿ ಇನ್ನ್ ಬಂದಿಲ್ಲ, ಹೊತ್ತಾತ್ ಬಾರ ಬಾ ಅಂತ್ ಕೈಯಾಗಿನ್ ತಿನ್ನು ರೊಟ್ಟಿ ಬಿಡಿಸಿ ಕರ್ಕೊಂಡ್ ಬಂದಿದ್ನಿ. ಆ ಕಟಗಿ ಕಲ್ಲಪ್ಪ ಮುತ್ಯಾ ಬರ್ತನಂದಿದ್ದ; ಏ ಹರಿದೇಶ, ನಿಮ್ಮ ಮುತ್ಯಾನ ಮನಿಗಿ ಹೋಗಿ ಗಾಡಿ ಹೊಂಟ್ ನಿತ್ತೈತಿ ಅಂತ್ ಲಗುಟ್ನ (ಬೇಗ) ಹಚಗೊಡಪಾನ್ ಅಂತ ನಮ್ಮ ಬಸೊ(ಬಸಮ್ಮ) ಚಿಗವ್ವ ಒಂದ್ ಸವನಿ ಒದುರುದ ನೋಡಿ, ಸಣ್ಣವ್ವ ಅಷ್ಟಾಕ್ ಬಡ್ಕೊತಿ ಬಿಡಬೇ.. ನಮ್ಮ ತಳೇವಾಡ ಮಂದಿನ ಹಿಂಗ್ ಅದಾರ್ ನೋಡ್, ಮೂರಕ್ಕ್ ಬಾ ಅಂದ್ರ್ ಆರಕ್ಕ್ ಬರ್ತಾರ್.  ಬಾ ಇಲ್ಲಿ ನನ್ನ್ ಬಾಜುಕ ಕೂಡ ಅಂತ ಸಣ್ಣವನ ಕೈ ಎಳೆದ ಬಾಜೂಕ್ ಕರ್ಕೊಂಡ್ನೀ.   

ಆಕೀ ಬುಜದ ಮ್ಯಾಲ್ ತಲಿ ಇಟ್, ಎವ್ವ ನಂಗ್ ಹಸು ಆಗೈತಿ, ಮನ್ಯಾಗ್ ಅವ್ವ ಶಾವಿಗಿ ಉಪ್ಪಿಟ್ ಮಾಡಿದ್ಲು; ಗಾಡಿ ಹೊಕ್ಕೈತಿ ಅಂತ ಓಡಿ ಬಂದ್ ಜಾಗ ಹಿಡ್ಕೊಂಡ್ ಕುನ್ತ್ನಿ. ಹೊಟ್ಟಿ ಗುರ್ ಅನ್ನಾಕತೈತಿ. ಹೋಗ್ಗೊಡ್ದ ಮದ್ವಿ ಹಂದರ್ದಾಗಿನ್ ಉಪ್ಪಿಟ್ಟು ಖಾಲಿ ಅಗಿರ್ತೈತಿ. ಅಕ್ಕಿ ಕಾಳ್ ಬೀಳುಮಟ ಹೆಂಗಿರ್ಲಿ ನಾ ?  ನನ್ನ ಸಪ್ಪ್ ಮಕ ನೋಡಿ ನಮ್ಮ ಚಿಗವ್ವ ಆಯ್ಯ ಶಿವನ! ಅಂತ ಗದ್ದಕ್ ಕೈ ಹಿಡ್ಕೊಂಡ್ ಅಲ್ಲಿತಕಾ ಉಪಾಸ್ ಇರ್ತೀಯಾ? ನಿಲ್ ಬರ್ತನ್ ಅಂದಾಕಿನ್ ಸರಕ್ಕನ ತಳಗಿಳದ ದ್ಯಾವಾಪೂರ್ ಸಂಗಮೇಶನ ಚಾ ಅಂಗಡಿಯಿಂದ ಚುಮ್ಮರಿ ಸೂಸ್ಲ ಕಟ್ಟೀಸ್ಕೊಂಡ್ ಬಂದ್ಲು.

ಚುಮ್ಮರಿ ಸೂಸ್ಲ್ ಅಂದ್ರ ನನಗ್ ಯಾಡ ಹೊಟ್ಟಿ (ಅಷ್ಟಿಷ್ಟ). ಮದ್ಲ ಹಸದ್ ನಾಯಿ ಆಗಿದ್ ನನ್ನ್ ಹೊಟ್ಟಿಗಿ ಬಾಯಿ ರುಚಿಹಿಡಿಸು ಸೂಸ್ಲ ತಂದಕೊಟ್ಟ ಚಿಗ್ಗವಗ (ಚಿಕ್ಕಮ್ಮ) ಭಾಳ್ ಉಪ್‌ಕಾರ್ ಆತ್ ಬೇ ಅಂದಾಕಿನ ಸುರು ಮಾಡಿದ್ನಿ ಕೈಯಿಗೆ, ಬಾಯಿಗೆ. ಬ್ಯಾರೇದವರ್ ಬಂದ್ರ ಅವರಿಗಿಷ್ಟ ಕೊಡುದಕ್ಕೈತಿ ಅಂತ್ ತಿಳದ್ ಗಪಾ ಗಪಾ ತಿಂದ್ ಕ್ಯಾಸ್,  ಹಾಳಿ ಮುದ್ದಿ ಮಾಡಿದಕಿನ ಮತ್ತ ಚಾ ಅಂಗಡಿಗಿ ಹೋಗಿ ನೀರ್ ಇಸ್ಕೋಂಡ ಗಳಗಳ ಅಂತ ಚರಿಗಿ ನೀರ್ ಕುಡದ್ ನಿಟ್ಟುಸಿರ್ ಬಿಟ್ನಿ.

ಚಾ ಚಪಲ್ ಬಿಡ್ಬೇಕೇಲ್ಲಿ? ದಸ್ತ್ಯಾಗ್ ಆಯೇರಿ ಹಾಕಕ ಅಂತ ಕೊಟ್ಟ ರೊಕ್ಕಾ ಬಿಟ್ರ ಹಂತೇಕ ಹೆಚ್ಚಿಗಿ ದುಡ್ಡಿರ್ಲಿಲ್ಲ. ನಮ್ಮ್ ಜಿಪುಣಿ (ಕಂಜೂಸ್) ಚಿಗವ್ವ ನನಗ್ ಸೂಸ್ಲ ಕೊಡಿಸಿದ್ದ್ ದೊಡ್ಡ ಮಾತಾಗಿತ್ತು. ಅಕಿನೆಲ್ಲಿ ಮತ್ತ ಕೇಳುದು? ನಾನ್ ಉದ್ರೀ ನಿಲ್ಲಿಸಿ ಕೂಡ್ದ್ರಾತು ಅಂದ್ಕಿನ; ಸಂಗಪ್ಪಣ್ಣ, ನಾಳೆ ಸಾಲಿಗಿ ಹೋಗುಮುಂದ್ ರೊಕ್ಕಾ ಕೊಡ್ತನ್,  ಉದ್ರೀ ನಿಲ್ಸಿ ಒಂದ್ ಚಾ ಕೊಡ್ ಪಾ ಅಂತ; ಸಣ್ಣ ದನಿ ಮಾಡಿ ಕೇಳಿದ್ನಿ ಕೊಡ್ತಾನೋ ಇಲ್ಲೊ ಅನ್ಕೋತ್.

ಪುರೆ ಲಟ್ಟಸಾಕತ್ತಿದ್ದ ಸಂಗಪ್ಪಣ್ಣ ನನ್ನ ಕಡೆ ನೋಡಿ, ಯಾರವ ತಂಗಿ ನೀ ಅಂದ. ನಾ ಜಾಲಾಪೂರ್ ಯಲ್ಲಪ್ಪ ಮುತ್ಯಾನ ಮಮ್ಮಗಳಪಾ ಅಂದ್ನಿ. ನಮ್ಮ ಸತ್ಯಮ್ಮಕ್ಕನ ಮಗಳನವಾ ನೀ? ಬೆಳಗಾಂವ್ ದವರು? ಅಂದ. ಹೂಂ ಅಣ್ಣ ನಾವ್. ಅಂತ್ ಹೇಳಿಕ್ಯಾಸ್, ಉದ್ರೀ ನಿಲ್ಲಿಸಿ ಒಂದ್ ಚಾ ಕೊಡು. ಮತ್ತೊಮ್ಮಿ ಹೇಳಿನಿ. ನಮ್ಮ ನೀಲಮ್ಮನ ಗೆಳತಿ ಅಲ್ಲೇನವ ನೀ, ನೀನು ನನಗ್ ತಂಗಿ ಇದ್ದಂಗ್ ವಾ ಹಂಗ್ ಹೇಳ್ಬ್ಯಾಡ ಅಂದ. (ಇನ್ನೊಬ್ಬರ ಹಂಗಿನ್ಯಾಗ್ ಇದ್ದ್ ಗೊತ್ತಿರದ ನಂಗ್) ಅಯ್ಯೋ ನಾಳಿ ನೀ ರೊಕ್ಕಾ ತಗೋತನ ಅಂದ್ರ ಚಾ ಕೊಡು; ಇಲ್ಲ ಅಂದ್ರ, ಚಾ ಬ್ಯಾಡಪಾ ಅಂತ ಉತ್ರ ಕೊಟ್ನಿ. ಹೂಂ.. ಆತ್ ಬಿಡ್ ತಂಗಿ ನಾಳಿ ಕೊಡು ಅನ್ಕೋತ, ಸುಡು ಸುಡು ಚಾ ನನ್ನ ಕೈಯೊಳಗಿಟ್ಟ. ಬರಾಬರಾ ಚಾ ಹೀರಿದಕಿನ ಮತ್ತ ನನ್ನ ಜಾಗಕ್ ಹೋಗಿ ಕುಂತ್ ಬಿಟ್ನಿ.

ಆ ತೆಗ್ಗಿಮನಿ ಸಿದ್ದಕ್ಕ ಮಡ್ಡಿ ಮ್ಯಾಲ್ ಮನಿ ಮಡ್ಯಾಳ್, ಕತ್ತಲ್ದಾಗ್ ಬ್ಯಾಟ್ರಿ ತಗೊಂಡ್ ಹೋಗಿ, ಮದಿವಿಗಿ ಬಾರವ ಸಿದ್ದಕ್ಕ ತಪ್ಪಿಸಬ್ಯಾಡ. ಹರ್ಯಾಗೆದ್ದಗಳೆ ಮತ್ತೊಂದಸಲ ಕರ್ಯಾಕ್ ಬರಾಕ ಆಗೂದಿಲ್ಲ. ನಿನಗ್ ಗೊತ್ತ, ಮದಿವಿ ಮನಿ ಅಂದ್ರ ಎಷ್ಟ್ ಕೆಲಸಗೋಳ್ ಇರ್ತಾವಂತ. ಅದ್ ಒತಾಟಿ ಇರಲಿ ನೀ ಇಷ್ಟ್ ದೂರ ಮನಿ ಬ್ಯಾರೀ ಮಾಡ್ಕೊಂಡ್ ಕುಂತೀ ಹರದಾರಿ ನಡಿಬೇಕ ನಿನ್ ಮನಿಗ್ ಬರ್ಬೇಕಂದ್ರ. ಕರ್ದಿಲ್ ಅನಬ್ಯಾಡ ಹೊಂತುಟ್ಲೆ ಎದ್ದು  ಮಕ್ಕಳ ತಾಯಾರ್ ಮಾಡಿಸಿ ಕರ್ಕೊಂಡ್ ಬಾ. 

(ಮುಂದುವರೆಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

13 Comments
Oldest
Newest Most Voted
Inline Feedbacks
View all comments
Hussain
10 years ago

ನಾನು ಅಪರೂಪದ ಮದ್ವೆಗೆ ಬಂದ ಹಾಗಾಯ್ತು .. ನಿಮ್ಮ ಭಾಷೆಯ ಸೊಗಡು ಇಷ್ಟವಾಗುತ್ತದೆ . ಅದರ ಮೇಲಿನ ನಿಮ್ಮ ಹಿಡಿತ ಆಶ್ಚರ್ಯಚಕಿತಗೊಳಿಸುತ್ತೆ ..

ರುಕ್ಮಿಣಿ ನಾಗಣ್ಣವರ
Reply to  Hussain

ಧನ್ಯವಾದಗಳು ಅಣ್ಣ…

ಈಶ್ವರ ಭಟ್

ಮುಂದುವರೆಸಿ.. ಗ್ರಾಮ್ಯ ಭಾಷೆ ಬಹಳ ಚೆನ್ನಾಗಿದೆ..:)

hipparagi Siddaram
hipparagi Siddaram
10 years ago

ಬಾಯೇರ…ಬಾಳ ಚಲೋತ್ನಾಗ ಬರದೀರಿ ನೋಡ್ರೀ….ಧನ್ಯವಾದಗಳು !

umesh desai
umesh desai
10 years ago

 
ಭಾಷಾ ಪ್ರಯೋಗ ಹಿಡಿಸಿತು ಆದರೆ ಸಾಕಷ್ಟು ಟೈಪಿಂಗ್ ತಪ್ಪ ಅವ
ಪಂಜು ಒಳಗ ಇವನ್ನ ಚೆಕ್ ಮಾಡತಾರೋ ಇಲ್ಲೋ ಗೊತ್ತಾಗಲಿಲ್ಲ…!!.

Ganesh Khare
10 years ago

ತುಂಬಾ ಚೆನ್ನಾಗಿದೆ. ಬಯಲುಸೀಮೆ ಭಾಷೆಯ ನಿರೂಪಣೆ ತುಂಬಾ ಹಿಡಿಸಿತು.. ಮುಂದಿನ ಭಾಗಕ್ಕಾಗಿ ಕಾಯುತ್ತಿರುತ್ತೇನೆ.

ರುಕ್ಮಿಣಿ ನಾಗಣ್ಣವರ

ಪ್ರತಿಕ್ರಿಸಿದ ಎಲ್ಲರಿಗೂ ಧನ್ಯವಾದಗಳು..

pravara
pravara
10 years ago

ಅಯ್ಯೋ ಮಾರಾಯ್ತಿ, ಆ ಭಾಷೆಯನ್ನು ನೀನು ದುಡಿಸಿಕೊಳ್ಳುವ ರೀತಿಗೆ ಜೈ ಹೋ…. ಓದುವಾಗ ಇಷ್ಟು ಸರಾಗವಾಗಿ ಬರೆಯಲಾಗುತ್ತಿಲ್ಲವಲ್ಲವೆಂಬ ಹೊಟ್ಟೆಯುರಿ ಬಂದಿದ್ದಂತು ಸುಳ್ಳಲ್ಲ… ಶುಭವಾಗಲಿ

hanamantha haligeri
hanamantha haligeri
10 years ago

ಉತ್ತರ ಕರ್ನಾಟಕದ ಜವಾರಿ ಮಾತಿನೊಳಗ ಬಾಳ ಚಂದ ಬರದಿರಿ ರುಕ್ಮಿಣಿಬಾಯಾರ, ಒಳ್ಳೆ ಲಲಿತ ಪ್ರಬಂಧ ಇದ್ದಂಗ ಐತ್ರಿ. ಆದ್ರ  ಉತ್ತರ ಕರ್ನಾಟಕದ ನುಡಿಗಟ್ಟಿನ ಮುಂದೆ ಕಂಸಿನೊಳಗ ನೀವು ಗ್ರಾಂಥಿಕ ಭಾಷಾದೊಳಗ ವಿವರಣೆ ಕೊಟ್ಟಿದ್ದು ನನಗ ಯಾಕೋ ಹಿಡಿಸಲಿಲ್ಲ. ನಮ್ಮ ಭಾಷಾ ಎಲ್ಲರಿಗೂ ಅರ್ಥ ಆಕೈತ್ರಿ,   ಅಕಸ್ಮಾತ್ ಅರ್ಥ ಆಗಲಿಲ್ಲ ಅಂದ್ರ ಅದು ಅವರ ಹಣೆ ಬರಾ ಅಷ್ಟ. ನೀವ ಹಿಂಗ ಬರಕೋತ ಇರ್ರಿ.

Santhoshkumar LM
Santhoshkumar LM
10 years ago

ಹಳಿಗೇರಿ ಯವರೇ,
ಕೊರಿಯನ್ ಭಾಷೆ ಕಲಿಯಪ್ಪ. ಅದು ಅಮೃತ ಕುಡಿದಂಗೆ. ಇಲ್ಲಾಂದ್ರೆ ಅದು ನಿನ್ ಹಣೆಬರಹ!!
ಅರ್ಥ ಆಯ್ತಾ. ಹಾಗಂದರೆ ನಿಮಗೆ ಹೇಗೆ ಆಗುತ್ತೆ.

ನಿಮಗೊಬ್ಬರಿಗೆ ಭಾಷೆ ಅರ್ಥ ಆಯ್ತು ಅಂದ್ರೆ ಅದು ಬೇರೆಯವರಿಗೆಲ್ಲ ಅರ್ಥ ಆಗ್ಬೇಕು ಅಂತ ಇಲ್ಲ.
ದಕ್ಷಿಣ ಭಾಗದ ಕರ್ನಾಟಕದ ಜನರಿಗೆ ಈ ಭಾಷೆ ಅರ್ಥವಾಗೋಕೆ ಕೊಂಚ ಕಷ್ಟವಾಗುತ್ತೆ.
ರುಕ್ಮಿಣಿಯವರು ಅದಕ್ಕೆ ಸಮಾನಾರ್ಥಕ ಪದಗಳನ್ನು ಕೊಟ್ಟು ಅರ್ಥ ಮಾಡಿಸಲು ಸುಲಭ ಮಾಡಿಸಿದ್ದಾರೆ.

ರುಕ್ಮಿಣಿಯವರೇ,
ಗ್ರಾಮ್ಯ ಭಾಷೆಯಲ್ಲಿ ಕಥೆ ಹೇಳುವುದು ಖಂಡಿತವಾಗಿಯೂ ಸವಾಲಿನ ವಿಷಯ.
ಅದರಲ್ಲಿ ನೀವು ಗೆದ್ದಿದ್ದೀರ. ಚೆನ್ನಾಗಿದೆ. ಬರೆಯುತ್ತಿರಿ. ಶುಭವಾಗಲಿ.

ರಾಜೇಂದ್ರ ಬಿ. ಶೆಟ್ಟಿ

ಏನ್ರವ್ವಾ, ಹೀಂಗ್ ಬರೆದ್ರಾ ನಾ ಹ್ಯಾಂಗ್ ಅರ್ಥ ಮಾಡ್ ಕೊಳ್ಲಿ?

Prasad V Murthy
10 years ago

ಚೆಂದ ಬರೆದಿದ್ದೀರಿ ರುಕ್ಮಿಣಿ. ಉತ್ತರ ಕರ್ನಾಟಕದ ಭಾಷೆಯನ್ನು ಬಹಳ ಚೆನ್ನಾಗಿ ದುಡಿಸಿದ್ದೀರಿ. ಒಮ್ಮೊಮ್ಮೆ ಕೆಲವು ಪದಗಳ ಗ್ರಹಿಕೆ ಕಷ್ಟವೆನಿಸುತ್ತಿತ್ತು! ಆದರೆ ಆಮೇಲೆ ಗ್ರಹಿಸಿಕೊಂಡೆ. ನಿರೂಪಣೆ ಚೆನ್ನಾಗಿದೆ. ನೀವು ಇವತ್ತೇ ಮದುವೆ ದಿಬ್ಬಣಕ್ಕೆ ಹರಡುತ್ತೀರಿ ಎಂದು ಕಾದಿದ್ದ ನನಗೆ ನಿಮ್ಮ ಟ್ರಕ್ ಸದ್ದಾಗಿದ್ದು ಕೂಡ ಗೊತ್ತಾಗ್ಲಿಲ್ಲ 😉 ದಿಬ್ಬಣ ಹೊರಡಿಸಿ, ಮದುವೆ ಹೇಗಾಯ್ತೆಂದು ಓದುವುದಕ್ಕೆ ಕಾತ್ರರಾಗಿದ್ದೇವೆ. ಶುಭವಾಗಲಿ.
 
– ಪ್ರಸಾದ್.ಡಿ.ವಿ.

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
10 years ago

ರೀ ಮೇಡಮ್…!!! ನಮ್ ಉತ್ತರ ಕರ್ಣಾಟಕದ ನಾಟಿ ಕನ್ನಡ ಸೊಗ್ಡು ಭಾರಿ ಚೆಲೋತಂಗೆ ಬಳಸಿ ಬರೆದೀರಿ… ಹಿಂಗ ಬರೀರಿ… ನಮ್ಮ ಗ್ರಾಮ್ಯ ಭಾಷೆಯ ನಮ್ಮ ಕರ್ಣಾಟಕದೆಲ್ಲ ಓದುಗರಿಗೆ ಪರಿಚಯವಾಗ್ಲಿ….ಧನ್ಯವಾದಗಳು…………………….

13
0
Would love your thoughts, please comment.x
()
x