ಆಗ ಸಮಯ ಅಪರಾಹ್ನದ ೩ ಘಂಟೆ ೨೦ ನಿಮಿಷಗಳು. ದಾದರ್ ನಿಂದ ಧಾರವಾಡಕ್ಕೆ ಹೋಗುವ ಮುಂಬೈ-ಧಾರವಾಡ ಎಕ್ಸ್‌ಪ್ರೆಸ್ ಟ್ರೈನ್ ಹೊರಡುವುದು ಕೇವಲ ೫ ನಿಮಿಷಗಳು ಮಾತ್ರ ಬಾಕಿ ಇತ್ತು. ಅತ್ತಲಿಂದ ಒಬ್ಬ ತರುಣೆ ಟ್ರೈನ್ ತಪ್ಪಿ ಹೋಗಬಹುದೆಂಬ ಭೀತಿಯಲ್ಲಿ, ಅಕ್ಕ-ಪಕ್ಕದವರನ್ನು ಲೆಕ್ಕಿಸದೇ ಎದುರಿಗೆ ಬಂದವರನ್ನು ನೂಕುತ್ತ, ಮತ್ತೆಲ್ಲೋ ಕಣ್ಣಾಡಿಸುತ್ತ ಓಡುತ್ತಲೇ ಇದ್ದಳು. ಟ್ರೈನ್ ಹಸಿರು ನಿಶಾನೆ ತೋರಿಸಿ ಕೊನೆಗೊಮ್ಮೆ ಹಾರ್ನ್ ಹಾಕಿ ಇನ್ನೇನು ಹೊರಟೆ ಬಿಟ್ಟಿತು ಅನ್ನೋವಷ್ಟರಲ್ಲಿ ಅವಳು ಟ್ರೈನ್ ಹತ್ತಿಬಿಟ್ಟು, ಸ್ವಲ್ಪ ತಡವಾಗಿದ್ದರೂ ಟ್ರೈನ್ ತಪ್ಪಿ ಬಿಡುತ್ತಿತ್ತು; ಥ್ಯಾಂಕ್ ಗಾಡ್ ಎನ್ನುತ್ತ ನಿಟ್ಟುಸಿರು ಬಿಡುತ್ತಾಳೆ. ತುಸು ವಿರಾಮದ ನಂತರ ಲಗ್ಗೆಜ್ ಎಲ್ಲ ಎತ್ತಿಕೊಂಡು ತನ್ನ ಸೀಟ್ ಹುಡುಕುತ್ತ ನಡೆಯುತ್ತಾಳೆ.
ನೀಳ ಕಾಯದ, ಸಂಪಿಗೆ ಮೂಗಿನ, ಬಟ್ಟಲು ಕಣ್ಣಿನ, ಪಿಂಕು ಚೂಡಿ ಧರಿಸಿದ, ೨೨ ವರುಷದ ಕೃಷ್ಣ ಸುಂದರಿ ವರುಣಾ, ಹಂಸನಡಿಗೆಯಲಿ ಬರುವುದನ್ನು ಕಾಣುತ್ತಲೇ ಎದುರಿನ ಸೀಟ್ನಲ್ಲಿ ಕುಳಿತಿದ್ದ ಯುವಕನೊಬ್ಬ ಆಕೆಯ ರೂಪರಾಶಿಗೆ ಮೋಹಿತನಾಗಿ ಆಕೆಯತ್ತ ನೋಟ ಹರಿಸುತ್ತಾನೆ. ನೀರು ಕೇಳುವ ನೆಪದಲ್ಲಿ ಆಕೆಯೊಂದಿಗೆ ಮಾತನಾಡಲು ಶುರು ಮಾಡುತ್ತಾನೆ. ಅವಳಿಗೆ ಕಥೆ ಕಾದಂಬರಿಗಳ ಮೇಲೆ ಆಸಕ್ತಿ ಇರುವುದೆಂದು; ಬಂದಾಗಿನಿಂದ ಒಂದೇ ಸವನೆ ಓದುತ್ತಿರುವ ಕಾದಂಬರಿಯೊಂದನ್ನು ಕಂಡು ಗಮನಿಸಿದ ಪ್ರಕಾಶ್ ತನಗೂ ಕೂಡ ಅದೆಲ್ಲ ತುಂಬಾ ಹಿಡಿಸುವ ವಿಷಯ ಎಂದು ಹೇಳಿ ಬೇರೆ ಬೇರೆ ಕಾದಂಬರಿಗಳ ಬಗ್ಗೆ ಚರ್ಚಿಸುತ್ತಾನೆ. ಬೇರೆ ಬೇರೆ ಟಾಪಿಕ್ ಎಲ್ಲ ಎತ್ತಿಬಿಟ್ಟು ಆಕೆಯೊಂದಿಗೆ ಮಾತನಾಡುತ್ತ ಕೂಡುತ್ತಾನೆ. ಜಂಕ್ಷನ್ ನಡುವೆ ಅವನು ತರುತ್ತಿದ್ದ ಚಿಪ್ಸ್, ತಂಪು ಪಾನೀಯಗಳು ಅವರ ಮಾತಿಗೆ ಮತ್ತಷ್ಟು ಉತ್ತೇಜನ ನೀಡುತ್ತವೆ.
ಕೆಲವೇ ಕ್ಷಣಗಳಲ್ಲಿ ಅವರಿಬ್ಬರ ನಡುವೆ ಒಳ್ಳೆಯ ಸಂಬಂಧ ಏರ್ಪಡುತ್ತದೆ. ಧಾರವಾಡ ತಲುಪುವವರೆಗೂ ಇಬ್ಬರ ನಡುವೆ ಮಾತಿನ ಜಡಿಮಳೆ ಭರದಿಂದ ಸುರಿಯುತ್ತಲೇ ಇರುತ್ತದೆ. ಟ್ರೈನ್ ಜರ್ನೀ ಅವರಿಬ್ಬರನ್ನೂ ತುಂಬ ಸನಿಹ ತಂದಿದ್ದರೆ, ಲೈಫ್ ಲಾಂಗ್ ಸ್ನೇಹಿತರಾಗಿವುದಕ್ಕೆ ಸೆಲ್ ಫೋನ್ ನಂಬರ್ ತುಂಬ ನರವಾಗುತ್ತದೆ. ಪರಿಚಿತರಾದ ಸಂತಸದೊಂದಿಗೆ ಸ್ನೇಹದ ಹೊಳೆಯಲ್ಲಿ ಈಜಾಡ್ತಾ ತಮ್ಮ ತಮ್ಮ ಮನೆಗೆ ತೆರಳುತ್ತಾರೆ.
ಚಿಕ್ಕಪ್ಪನ ಮನೆಗೆ ಬಂದಿದ್ದ ವರುಣಾ ಹೊಸದೊಂದು ಪರಿಸರಕ್ಕೆ ಕಾಲಿಟ್ಟ ಸಂಭ್ರಮದಲ್ಲಿದ್ದಳು. ಟ್ರೈನ್ ಜರ್ನಿಯಲ್ಲಿ ಪರಿಚಯಗೊಂಡ ಹುಡುಗ ಪ್ರಕಾಶ್ ನಿಂದ ಕಾಲ್, ಮೆಸೇಜ್ ಗಳ್ ನಿರೀಕ್ಷೆಯಲ್ಲಿದ್ದ ವರುಣಾ ಅವನ ಯಾವೊಂದು ಸುಳಿವಿಲ್ಲದಿರುವುದನ್ನು ಕಂಡು ಕೊಂಚ ನಿರಾಶಿತಳಾಗಿದ್ದಳು. ಜರ್ನೀಯಲ್ಲಿ ನಡೆದ ಮಾತುಗಳನ್ನ ಮತ್ತೆ ಸಿಂಹಾವಲೋಕನ ಮಾಡಿಕೊಳ್ಳುತ್ತ, ಕನ್ನಡಿಯ ಮುಂದೆ ನಿಂತು ತನ್ನ ದೇಹ ಸೌಂದರ್ಯವನ್ನೇ ನೋಡಿಕೊಳ್ಳುತ್ತ, ಮಂದಹಾಸ ಬೀರುತ್ತಾಳೆ. ಮುಂಗುರುಳಲ್ಲಿ ಬೆರಳಾಡಿಸುತ್ತ, ಆ ದಿನ ಪ್ರಕಾಶ ತನ್ನನ್ನು ಕದ್ದು ಮುಚ್ಚಿ ನೋಡುತ್ತಿರುವುದನ್ನು ಕಂಡರೂ ತನಗೇನೂ ಅರಿವಿಲ್ಲವೆಂಬಂತೆ ನಟಿಸಿದ್ದನ್ನ ನೆನೆದು ಗೊಳ್ಳೆಂದು ನಕ್ಕಿಬಿಟ್ಟಿದ್ದಳು ಕೃಷ್ಣಸುಂದರಿ.
ಲಕ್ಷಣವಾದ ಅವನ ನೋಟ, ಮಾತಲ್ಲಿ ಕಂಡ ಅವನ ಜಾಣತನ, ಮನಸೂರೆಗೊಳ್ಳುವ ಅವನ ಮಾತಿನ ಧಾಟಿ ಅವಳಿಗೆ ತುಂಬ ಹಿಡಿಸಿತ್ತು. ಅದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತ ಕೇವಲ ಜರ್ನಿಯಲ್ಲಿ ತನಗೆ ಇಷ್ಟೊಂದು ಕಾಳಜಿ ತೋರಿದ ಹುಡುಗ ಲೈಫ್ ಲಾಂಗ್ ತನ್ನ ಜೀವನದಲ್ಲಿದ್ದರೆ ಮಗುವಂತೆ ತನ್ನನ್ನು ನೋಡಿಕೊಳ್ಳವನು ಎಂದು ಮನದಲ್ಲಿ ದುರಾಸೆ ಪಟ್ಟಳೆನೋ. ಒಂದು ಕ್ಷಣಕ್ಕೆ ಅವನು ತನ್ನ ಸ್ವಂತದವನೆಂಬ ಭಾವನೆ ಅವಳಲ್ಲಿ ಕಾಣುತ್ತಿತ್ತು. ಇದೆಂತ ಹುಚ್ಚು ಈ ಪೆದ್ದು ಮನಕೆ ಎಂದು ತನ್ನ ತಲೆಯನ್ನು ತಾನೇ ತಿವಿದುಕೊಂಡು ಮತ್ತೆ ತನ್ನ ಕೆಲಸದಲ್ಲಿ ನಿರತಳಾಗಿದ್ದಳು.
ಸಂಜೆ, ತಂಗಾಳಿಯ ಸವಿಯುತ್ತ, ಟರ್ರಸ್ ಮೇಲೆ ನಿಂತು ಹಕ್ಕಿಗಳ ಇಂಚರ ಕೆಳುತ್ತ ದೂರಕ್ಕೆ ಕಣ್ಣಾಡಿಸಿದಳು. ಬಾನಂಗಳದಲಿ ಉಷಾ, ಕಿರಣಾ, ಸಂಧ್ಯಾರೊಂದಿಗೆ ಮುಂಜಾವಿನಿಂದ ಮುಸ್ಸಂಜೆಯವರೆಗೂ ಮುದ್ದಾಡಿ, ಬಾನ ರಂಗೇರಿಸಿ, ಆಟ ಸಾಕೆಂಬಂತೆ ಪಡುವನದ ಮನೆಗೆ ತೆರಳುತ್ತಿರುವ ದಿನಕರನನ್ನು ಕಂಡು ತನ್ನಲ್ಲೇ ತಾನು ಮುಗುಳ್ನಕ್ಕು ಕನಸಿನ ಲೋಕಕ್ಕೆ ಜಾರಿ ಪ್ರಕಾಶನ ನೆನಪುಗಳ ಬುತ್ತಿ ಬಿಚ್ಚಿ, ಅದು ನೀಡುವ ಹಿತವಾದ ಮೃದುಲ ಭಾವಗಳನ್ನು ಹೆಕ್ಕಿ ಸವಿಯುತ್ತಿದ್ದಳು ಪ್ರೀತಿಯ ಸವಿಯ.
ಮನದಲ್ಲಿ ನೆನೆಯುವ ಹುಡುಗ ಪ್ರಕಾಶ್, ಧಿಡೀರ್ ಎಂದು ವರುಣಾ ಇನ್‌ಬಾಕ್ಸ್ ಗೆ ಸಂದೇಶವೊಂದನ್ನು ರವಾನಿಸಿದ್ದ. ಮೊಬೈಲ್ ನಲ್ಲಿ ಬೆಳಕು ಬಿದ್ದು ತೆಗೆದುನೋಡಲು ಅದು ಪ್ರಕಾಶ್ ನ ಸಂದೇಶವಾಗಿತ್ತು. ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದ ವರುಣ ತುಂಬಾ ಸಂತಸಪಟ್ಟಿದ್ದಳು ಆಕೆಯ ಹರ್ಷೋದ್ಗಾರಕ್ಕೆ ಅಂದು ಮಿತಿ ಇರಲಿಲ್ಲ. ಪ್ರೀತಿಯ ಮೊದಲ ತುಡಿತವೋ ಏನೋ; ಆ ದಿನ ಅವರಿಬ್ಬರೂ ಬೆಳಗಿನ ೩ ಗಂಟೆಯವರೆಗೂ ಪರಸ್ಪರ ಯೋಗಕ್ಷೇಮ ವಿಚಾರಿಸುತ್ತ ಮೆಸೇಜ್ ಮಾಡುತ್ತಾ ತುಂಬಾ ಹೊತ್ತು ಹರಟಿದ್ದರು.
ಅಂದಿನಿಂದ ಗಾಢವಾಗಿ ಶುರುವಾಗಿಬಿಟ್ಟಿತ್ತು ಅವರ ಒಲವಿನ ಪಯಣ. ನೀವು ನಾವು ಎನ್ನುವ ಪದಗಳು ನೀನು ನಾನುಗಳಲ್ಲಿ ಬದಲಾವಣೆಗೊಂಡಿದ್ದವು. ದೇಹವೆರಡು ಆತ್ಮ ಒಂದೆನ್ನುವ ಭಾವ ಬಂದುಬಿಟ್ಟಿತ್ತು. ಸಾಯಂಕಾಲಕ್ಕೆ ಮೀಸಲಿರಿದ್ದ ಸಂದೇಶಗಳು ದಿನಕ್ಕೆ ಬದಲಾಗಿ ನಂತರ ಮೆಸೇಜ್ ನಿಂದ ಕರೆಗೆ ಪರಿವರ್ತನೆಯಾಗಿ ಪ್ರೇಮದ ನಿತ್ಯೋತ್ಸವ ಅವರ ಹೃದಯಗಳನ್ನು ಶೃಂಗರಿಸಿ ಒಲವಿನ ಭಾವನೆಗಳಿಗೆ ಆಹ್ವಾನ ನೀಡಿತ್ತು. ಚಿಕ್ಕಪ್ಪನ ಮನೆಗೆ ರಜೆಗೆಂದು ಬಂದಿದ್ದ ವರುಣ ತಿಂಗಳಾಗಿ ಹೋಗಿತ್ತು. ಹೊರಡುವ ಮನಸಿಲ್ಲದಿದ್ದರೂ ಓದಿನ ನಿಮಿತ್ತ ಆಕೆ ಮುಂಬೈಗೆ ತೆರಳುವ ಸಮಯ ಬಂದಿತ್ತು. ವಿಷಯ ತಿಳಿದ ಪ್ರಕಾಶ ಹೊರಡುವ ಮುನ್ನ ತನ್ನನ್ನೊಮ್ಮೆ ಭೇಟಿ ಮಾಡುವುದಾಗಿ ವರುಣಾಳಲ್ಲಿ ವಿನಮ್ರದ ನಿವೇದನೆಯೊಂದನ್ನು ಇಟ್ಟಿದ್ದನು.
ಪ್ರಕಾಶನ ಕೋರಿಕೆಯ ಮೇರೆಗೆ ವರುಣಾ ಅವನನ್ನು ಕಾಣಲೆಂದು ಹೊರಟಳು. ಅದಾಗಲೇ ಪ್ರೇಮದ ಮೊಗ್ಗು ಅರಳಿ ನಿಂತು ಸೌರಭವ ಸೂಸಿದ್ದ ಬಂಧನಕ್ಕೆ ಆ ಭೇಟಿ, ಸ್ನೇಹದಿಂದ ಅಧಿಕೃತವಾಗಿ ಪ್ರೀತಿಗೆ ಬದಲಾಗಿತ್ತು. ತನ್ನ ಪ್ರೇತಿಯನ್ನು ವ್ಯಕ್ತ ಪಡಿಸದೇ ಹೋದಲ್ಲಿ ತಾನು ಅವಳನ್ನು ಕಳೆದುಕೊಳ್ಳುತ್ತೇನೆಂಬ ಭಯದಿಂದ ಪ್ರಕಾಶ, ವರುಣಾಳಲ್ಲಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾನೆ. ಪ್ರೀತಿಯ ಹೊಳೆಯಲ್ಲಿ ಈಜಾಡಲು ತನ್ನ ಭಾವನೆಗಳೆಂಬ ಬಟ್ಟೆಯನ್ನು ಬಿಚ್ಚಿಡಲು ತುದಿಗಾಲಲ್ಲೇ ನಿಂತಿದ್ದಳೇನೋ ವರುಣಾ. ಅವನ ಮಾತುಗಳನ್ನು ಕೇಳುತ್ತಿದ್ದಂತೆಯೇ ಪ್ರಪಂಚವನ್ನೇ ಮರೆತು ಅವನ ಅಪ್ಪಿ ಮುದ್ದಾಡುತ್ತಾಳೆ.
ವರುಣಾ ಮುಂಬೈಗೆ ಹೋಗುವ ದಿನ ಆಕೆಯನ್ನು ಕಳುಹಿಸಲು ಸ್ಟೇಶನ್ ಗೆ ಬಂದಿದ್ದ ಪ್ರಕಾಶ; ಅಂದೇಕೋ ತುಂಬ ಮಂಕಾಗಿದ್ದನು. ದೂರವಾಗುತ್ತಿರುವ ನೋವಿರಬಹುದೆ? ಇರಬಹುದು. ಅದೇ ನೋವು ವರುಣಾಳ ವದನದಲ್ಲೂ ಕೂಡ ಕಾಣುತ್ತಿತ್ತು. ಆ ಒಂದು ಕ್ಷಣಕ್ಕೆ ಇಬ್ಬರಲ್ಲೂ ಮಾತಿಲ್ಲ ಕಥೆಯಿಲ್ಲ ಅದಿಲ್ಲದಿದ್ದರೂ, ಕಣ್ಣ ಭಾಷೆಯಲ್ಲಿ, ಹೃದಯ ಮಿಡಿತಗಳಲ್ಲಿನ ಭಾವನೆಗಳ ವಿನಿಮಯ ಅದೆಷ್ಟೋ ವಿಷಯಗಳನ್ನು ಅವರಿಬ್ಬರಿಗೂ ತಿಳಿಯಪಡಿಸಿತ್ತು.
ಒಲವಾದ ಪ್ರಥಮಾರ್ಧದಲ್ಲಿ ದಾರಿಯಿಂದ ದೂರವಿದ್ದರೆ ಏನಂತೆ ಹೃದಯಗಳಿಂದ ಸನಿಹವೇ ಇರುವೆವಲ್ಲ ಎಂಬ ಭಾವನೆ ಮೊದ-ಮೊದಲು ಅನ್ನಿಸಿದರೂ ಕ್ರಮೇಣ ಒಬ್ಬರೊನ್ನೊಬ್ಬರು ನೋಡಲೇ ಬೇಕೆಂಬ ಅತೀವ ಉತ್ಕಟತೆ ಇಬ್ಬರಲ್ಲೂ ಕಾಣಿಸತೊಡಗಿತು. ಅದೆಷ್ಟು ದಿನ ಮುಖ ನೋಡದೇ ಹೀಗೆಯೇ ಇರುವುದೆಂದು ಅಂದುಕೊಂಡು ವಿರಹಗಳಂತಿದ್ದ ಇಬ್ಬರೂ ಮುಖಾ–ಮುಖಿ ಭೇಟಿ ಮಾಡಿ, ಅಲ್ಲಿ ಇಲ್ಲಿ ಸುತ್ತಾಡಲು ಪ್ರಾರಂಬಿಸಿದರು. ತಿಂಗಳಿಗೊಮ್ಮೆ ಎಂಬಂತೆ ಮಹಾರಾಷ್ಟ್ರ, ಮುಂಬೈನ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದಲ್ಲದೇ ಸಿನೆಮಾ, ಪಾರ್ಕು ಅಂತ ಸುತ್ತಾಡುತ್ತ ಒಲವಿನ ಉದ್ಯಾನದಲ್ಲಿ ಜೋಡಿಹಕ್ಕಿಗಳು ಯಾರ ಹಂಗಿಲ್ಲದೇ ಸ್ವಚ್ಛಂದವಾಗಿ ವಿಹರಿಸುತ್ತಿದ್ದವು.
ಸುತ್ತಾಟ ಶುರುವಾದ ಕೆಲವೇ ತಿಂಗಳುಗಳಲ್ಲಿ ವರುಣಾ ಹೊಟ್ಟೆನೋವು, ವಾಂತಿ ಭೇದಿ ಎಂದು ಆಸ್ಪತ್ರೆ ನಡೆಯುತ್ತಾಳೆ. ಎರಡು ತಿಂಗಳುಗಳಿಂದ ಮುಟ್ಟಾಗದ ವರುಣಾಳಿಗೆ ಭಯ ಗೋಚರಿಸಿದ್ದಲ್ಲದೇ ಯಾವದೋ ದುರ್ಘಟನೆಯ ಮುನ್ಸೂಚನೆಯೂ ಕಂಡಂತಾಗಿ, ಆ ದಿನ ತಾನು ಪ್ರಕಾಶನನ್ನು ತಡೆದಿದ್ದರೆ ಇಂತಹ ಅನಾಹುತ ತಪ್ಪಿಸಬಹುದಿತ್ತು, ತಾನು ಆಗುವುದಿಲ್ಲ ಅಂದಿದ್ದಕ್ಕೆ ಸಣ್ಣ ಮುಖ ಮಾಡುವುದರ ಜೊತೆಗೆ ತನ್ನೊಡನೆ ಕೋಪದಿಂದ ವರ್ತಿಸಿ ಇಗ್ನೊರ್ ಮಾಡತೊಡಗಿದ್ದ ಪ್ರಕಾಶನೊಂದಿಗೆ ನಿರಾಕರಿಸಿ ಹಠ ಸಾಧಿಸಿದರೆ; ಎಲ್ಲಿ ಅವನ ಪ್ರೀತಿಯನ್ನು ಕಳೆದುಕೊಳ್ಳುವೆನೆಂಬ ಅಭದ್ರತೆಯ ಭಯದಿಂದ ವಿರೋಧ ಮಾಡದೇ ನಿರೋಧ ಬಳಸದೇ ಆ ದಿನ ಪ್ರಕಾಶನ ಜೊತೆ ಸಾಂಗತ್ಯ ಬಯಸಿದ್ದನ್ನು ಆಸ್ಪತ್ರೆಯಲ್ಲಿ ನೆನೆದು ಬೆವತಿದ್ದ ಮುಖವನ್ನೆಲ್ಲ ಕರವಸ್ತ್ರದಿಂದ ಒರೆಸಿಕೊಳ್ಳುತ್ತ ಭಾರವಾದ ಮನ ಹೊತ್ತು ವೈದ್ಯರಲ್ಲಿಗೆ ನಡೆಯುತ್ತಾಳೆ. ಅವಳ ಅನುಮಾನ ಸರಿಯಾಗಿತ್ತು ಆಗಾಕೆ 2 ತಿಂಗಳ ಗರ್ಭಿಣಿ. ಗಾಬರಿಗೊಂಡ ವರುಣಾ 2 ದಿನಗಳ ನಂತರ ಪ್ರಿಟೆಸ್ಟ್ ರಿಪೋರ್ಟ್ ತೆಗೆದುಕೊಳ್ಳಲು ಬರುವೆನೆಂದು ಹೇಳಿ ಮನೆಯತ್ತ ಅವಸರದ ಹೆಜ್ಜೆಯನ್ನಿಟ್ಟಿದ್ದಳು.
ಎರಡನೆಯ ಬಾರಿ ವರುಣಾ ವೈದ್ಯರನ್ನು ಕಾಣಲು ಹೋದಾಗ, ವೈದ್ಯರು ಅವಳನ್ನು ಕೂಡಿಸಿ, ಸ್ನೇಹಭಾವದಿಂದ ಮಾತನಾಡಿ, ಅವಳ ಮನಸನ್ನು ಸಮತೋಲನಕ್ಕೆ ತಂದು, ನಡೆದ ವಿಷಯವನ್ನು ಮರೆಮಾಚದೇ ತನ್ನೆದುರು ಹೇಳೆಂದಾಗ ಭಯದ ಬಿಸಿಲಲಿ ವಿಲ-ವಿಲ ಒದ್ದಾಡಿದ ವರುಣಾ ಹೇಗೋ ಧೈರ್ಯ ತಂದುಕೊಂಡು ತನ್ನ ಪ್ರಿಯಕರನೊಂದಿಗೆ ದೈಹಿಕ ಸಂಬಂಧ ಇರುವುದಾಗಿ ಹೇಳುತ್ತಾಳೆ. ನಿಷ್ಠೆ ಒಬ್ಬರೊಡನೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ವರುಣಾ ಥಟ್ಟೆನೆ ಹೌದು ಕೇವಲ ಪ್ರಿಯಕರನೊಂದಿಗೆ ಮಾತ್ರ ಎನ್ನುತಾಳೆ.
ಕಸಿ-ವಿಸಿಗೊಂಡು ತಮ್ಮ ಗೊಂದಲದಿಂದ ಹೊರಬರದ ವೈದ್ಯರು ಆಕೆಯನ್ನು ಮತ್ತೆ ಅದೆಲ್ಲಿ ಹೋಗುತ್ತಿದ್ದೀರಿ, ಏನೆಲ್ಲಾ ಮಾಡುತ್ತಿದ್ದೀರಿ ಎನ್ನಲು; ತಾನು ತಿಂಗಳ ಕೋಣೆಯನ್ನು ತನ್ನ ಪ್ರಿಯಕರನಿಗೆ ಮೀಸಲಿಟ್ಟಿರುವುದಲ್ಲದೇ ಅವನ ಜೊತೆಯಲ್ಲಿ ಸ್ಮಾಲ್ ಟ್ರಿಪ್ ಗಳನ್ನ ಮಾಡಿರುವುದಾಗಿ, ಹೋದಲೆಲ್ಲ ಲಾಡ್ಜ್ ಮಾಡುತ್ತಿದ್ದು, ಮಲಗುವ ಮುನ್ನ ಪ್ರಕಾಶ ಮತ್ತೆ ತಾನು ಬದಾಮ್ ಹಾಲು ಕುಡಿದು ಮಲಗುತ್ತಿದ್ದೆವು ಎನ್ನುತ್ತಾಳೆ. ಅದಾದ ನಂತರ ನಿದ್ದೆಗೆ ಜಾರಿದ ತನಗೆ ಬೆಳಗಾಗಿದ್ದಷ್ಟೆ ಗೊತ್ತಿರುತ್ತಿತ್ತು ಎಂದಾಗ, ವೈದ್ಯರ ಸಂದೇಹಗಳಿಗೆ ಪುರಾವೆಗಳು ಸಿಕ್ಕಾಗಿತ್ತು. ಕಾರಣ, ವರುಣಾಳ ಟೆಸ್ಟ್ ರಿಪೋರ್ಟ್ ಹೇಳುತ್ತಿತ್ತು; ಪ್ರಕಾಶ್ ಅಲ್ಲದೇ ಬೇರೆಯವರೊಂದಿಗೂ ವರುಣಳ ದೈಹಿಕ ಸಂಬಂಧ ಇತ್ತೆಂದೆಂಬುದು; ಅಲ್ಲದೇ ವರುಣಾ ಹೆಚ್.ಐ.ವಿ ಪಾಸಿಟಿವ್ ಎನ್ನುವುದು ಕೂಡ ತಿಳಿದು ಬಂತು. ಪ್ರಕಾಶ್ ನನ್ನು ಭೇಟಿ ಮಾಡಿ ವಿಷಯ ಏನೆಂದು ತಿಳಿಯಬೇಕೆನ್ನುವಷ್ಟರಲ್ಲಿ ವರುಣಾಳಿಗೆ ಪ್ರಕಾಶ್ ಒಬ್ಬ ಸೆಕ್ಸ್ ಟ್ರೇಡರ್ ಎನ್ನುವುದು ತಿಳಿದು ಬಂತು. ಇಷ್ಟೆಲ್ಲಾ ವಿಷಯ ತಿಳಿಯುತ್ತಿದ್ದಂತೆಯೇ ಪ್ರಕಾಶ ಪತ್ತೆ ಇಲ್ಲದೇ ನಾಪತ್ತೆಯಾಗಿ ತಲೆಮರೆಸಿಕೊಳ್ಳುತ್ತಾನೆ.
ಹಾಲಿನಲ್ಲಿ ಸುಂದಾಗುವ ಮಾತ್ರೆ ಕೊಟ್ಟು ತನ್ನ ದೇಹವನ್ನು ಬೇರೆಯವರಿಗೆ ಮಾರುತ್ತಿದ್ದ ಎಂಬ ವಿಷಯ ಕೇಳುತ್ತಲೇ ವರುಣಾ ಬೆಚ್ಚಿ, ತತ್ತರಿಸಿ ಹೋಗಿದ್ದಳು. ತನ್ನ ಕೈಹಿಡಿಯುವುದಾಗಿ ಮಾತು ಕೊಟ್ಟು ಪ್ರೀತಿಯಿಂದ ಹಣೆಗೆ ಮುತ್ತಿಟ್ಟು ಮುದ್ದಿಸಿದ ಪ್ರಕಾಶನ ಯಾವ ಮಾತಿಗೂ ವಿರೋಧ ಮಾಡದೇ ಎಲ್ಲದಕ್ಕೂ ಸಮ್ಮತಿ ಇಟ್ಟು ನಂಬಿಕೆಯ ದೀಪ ಹಚ್ಚಿದ್ದ ವರುಣಾ, ಆ ಚಾಂಡಾಲನ ಮಾತೆಲ್ಲಾ ಸುಳ್ಳು ಎಂಬ ಕಟು ಸತ್ಯ ಅರಿವಾಗಿ ದಿಕ್ಕು ತೋಚದೆ ಹುಚ್ಚಿಯಂತೆ ಆಡತೊಡಗುತ್ತಾಳೆ.
ಬಾಳ ಭಾವಗೀತೆಗೆ ದುರಂತದ ಆಹ್ವಾನ ಇತ್ತು ತಾಳ ತಪ್ಪುವಂತೆ ಮಾಡಿದ್ದು ತಾನೇ ಎಂದು ಕಂಬನಿ ಮಿಡಿಯುತ್ತಾಳೆ. ಪೋಸ್ಟ್ ಟೆಸ್ಟ್ ಫಲಿತಾಂಶದಿಂದಾಗಿ ವರುಣಾ ಗ್ರೀಫ್ ಕೌನ್ಸೆಲಿಂಗ್ ಸೇರಿದಂತೆ ಮತ್ತೆ ಕೆಲವು ಕೌನ್ಸೆಲಿಂಗ್ ಗಳಿಗೆ ಒಳಗಾಗುವುದರ ಮೂಲಕ ಆಕೆಯ ಮನಸ್ಥಿತಿಯನ್ನು ಸಾಧಾರಣ ಹಂತಕ್ಕೆ ತಂದು ನಿಲ್ಲಿಸಲಾಗುತ್ತದೆ. ಎ. ಆರ್. ಟಿ ಟ್ರೀಟ್‌ಮೆಂಟ್ ತಪ್ಪದೇ ತೆಗೆದುಕೊಳ್ಳುತ್ತ, ತಿನ್ನುವ ಆಹಾರದಲ್ಲೆಲ್ಲ ನಿಯಂತ್ರಣ ಸಾಧಿಸುತ್ತಾಳೆ. ಕುದಿಸಿ ಆರಿಸಿದ ನೀರು ಕುಡಿಯುವುದು, ನಿತ್ಯ ವ್ಯಾಯಾಮಗಳೆಲ್ಲ ಆಕೆಗೆ ಅನಿವಾರ್ಯವಾಗಿ ಹೋಗುತ್ತದೆ.
ಇವತ್ತೋ ನಾಳೆಯೋ ಎಂದು ದಿನ ಎಣಿಸುತ್ತಾ ಬದುಕುತ್ತಿರುವ ವರುಣಾ ಅಪರಿಚಿತ ವ್ಯಕ್ತಿಯೊಡನೆ ಸ್ನೇಹ ಬೆಳೆಸಿದ ತನ್ನ ಮೂರ್ಖತನಕ್ಕೆ ತಾನೇ ಹೊಣೆ ಎಂದು ಹಣೆ ಚಚ್ಚಿಕೊಳ್ಳುತ್ತಾ ಅಳುತ್ತಾ ಕಾಲ ಕಳೆಯುತ್ತಾಳೆ.
ಇಂತಿ ನಿಮ್ಮ ಮನೆ ಮಗಳು
ರುಕ್ಮಿಣಿ ಎನ್.
ನಿಜಕ್ಕೊ ಸುಂದರ ಬರಹ.ಸದ್ಯದ ಪರಿಸ್ತಿತಿಗೆ ಹೊಂದುವ ಬರಹ. ಕೇವಲ ಒಂದೇ ದಿನದ ಪರಿಚಯ ಪ್ರೀತಿಯಾಗಿ, ಪ್ರೀತಿಯಿಂದ ಮಿಲನದವರೆಗೂ ಹೋಗುತ್ತೆ ಅಂದಮೇಲೆ ಅದೆಂಥಹ ಹುಚ್ಚು ಪ್ರೀತಿ?? ಪ್ರೀತಿಯ ಅರ್ಥವೇ ತಿಳಿಯದ ಹುಚ್ಚು ಮನಸ್ಸುಗಳ ಪ್ರೇಮದಾಟ ಬಾಳಿನಲ್ಲಿ ಎಂದೂ ಮರೆಯಲಾಗದಂಥಹ ಅನುಭವಗಳನ್ನ ಬಿಟ್ಟು ಹೋಗುತ್ತೆ. ಯುವ ಪೀಳಿಗೆಗೆ ಇಂಥಹ ಬರಹಗಳು ಮಾದರಿಯಾಗಬೇಕು. ಒಂದು ಹೆಣ್ಣಾಗಿ ನೀವು ಹೆಣ್ಣಿನಲ್ಲಿ ಪ್ರೀತಿ ಪ್ರೇಮ ಇವುಗಳ ಬಗ್ಗೆ ಚೆನ್ನಾಗಿ ಅರಿವನ್ನ ಮೂಡಿಸಿ ಸಮಾಜದಲ್ಲಿ ಹೆಚ್ಚುತ್ತಿರುವ ಈ ತರಹದ ಘಟನೆಗಳನ್ನ ತಡೆಯಬೇಕು. ಇದೆ ತರಹದ ಬರಗಳು ನಿಮ್ಮಿಂದ ಹೆಚ್ಚು ಹೆಚ್ಚು ಮೂಡಿಬರುತ್ತಿರಲಿ.
ಶುಭವಾಗಲಿ.
ಧನ್ಯವಾದಗಳು ಸರ್..
ಇಷ್ಟವಾಯಿತು…
ಒಳ್ಳೆಯ ನಿರೂಪಣೆ!
ಶುಭವಾಗಲಿ ಗೆಳೆತಿ!
ಬರಹ ಚೆನ್ನಾಗಿದೆ. ನಿರೂಪಣೆಯೂ.. ಮೊದಲ ಬರಹಗಳಿಗೂ ಒಂದು ಲೈಕ್!
ಥ್ಯಾಂಕ್ ಯೂ ಅಣ್ಣ
ಲೇಖನದ ಬಗ್ಗೆ ಮಾತಿಲ್ಲ. ತುಂಬ ಚೆನ್ನಾಗಿದೆ ನಿರೂಪಣೆ. ಆದರೆ ವಿಚಾರಗಳು ದಿಗ್ಬ್ರಮೆಗೊಳಿಸುತ್ತವೆ. ಧನ್ಯವಾದಗಳು ರುಕ್ಮಿಣಿ
ಧನ್ಯವಾದಗಳು ಅಕ್ಕ….
ಪ್ರೀತಿ-ಪ್ರೇಮ ಎಂದು ಸಾಗಿದ ಕಥೆ ಕೊನೆಗೆ ಕಂಡಿದ್ದು ದುರಂತದ ತಿರುವು…
ನಿಮ್ಮ ಬರವಣಿಗೆ ಇಷ್ಟ ಆಯ್ತು…
ಧನ್ಯವಾದಗಳು ಅಕ್ಕ….
ರುಕ್ಮಿಣಿಯವರೇ,
ಈ ಸಲ ನಿರೂಪಣೆಯಲ್ಲಿ, ಕಥೆ ಕಟ್ಟುವಲ್ಲಿ ಗೆದ್ಡಿದ್ದೀರ.
ಇಷ್ಟವಾಯಿತು. ಸಮಾಜದಲ್ಲಿ ಮುಂದಾಗುವ ಅಪಾಯವನ್ನು ಅರಿಯದೇ ಪ್ರೀತಿಯ ನೆಪದಲ್ಲಿ ಮುಂದೆ ಸಾಗಿ ಕೊನೆಗೆ ಅರಿಯದ ಕಂದಕಾದಲ್ಲಿ ಬೀಳುವ ಅಂಶಗಳನ್ನು ಮನಮುಟ್ಟುವ ಹಾಗೆ ಚಿತ್ರಿಸಿದ್ದೀರ. ಇದು ನಮಗೆ ಕಥೆ ಅನ್ನಿಸಿದರೂ ನಿಜವಾಗಿಯೂ ಅದೆಷ್ಟೋ ಮುಗ್ಧ ಹೆಣ್ಣು ಮಕ್ಕಳು ಇವುಗಳಿಂದ ಜೀವನ ಕಳೆದುಕೊಂಡಿದ್ದಾರೆ.
ಬರೆಯುತ್ತಲಿರಿ… ಶುಭವಾಗಲಿ.
ಕೇವಲ ಜರ್ನಿಯಲ್ಲಿ ತನಗೆ ಇಷ್ಟೊಂದು ಕಾಳಜಿ ತೋರಿದ ಹುಡುಗ ಲೈಫ್ ಲಾಂಗ್ ತನ್ನ ಜೀವನದಲ್ಲಿದ್ದರೆ ಮಗುವಂತೆ ತನ್ನನ್ನು ನೋಡಿಕೊಳ್ಳವನು ಎಂದು ಮನದಲ್ಲಿ ದುರಾಸೆ ಪಟ್ಟಳೆನೋ. ಕಂಡಿತ ಮುಂದಾಗುವ ಅಪಾಯವನ್ನು ಅರಿಯದೇ ಪ್ರೀತಿಯ ನೆಪದಲ್ಲಿ ಮುಂದೆ ಸಾಗಿ ಕೊನೆಗೆ ಪ್ರೀತಿ ಅಂದ್ರೇನೆ ಜಿಗುಪ್ಸೆ ಪಡುವಂತಹ ಬದುಕಿಗೆ ಪ್ರಯಾಣಬೆಳೆಸುವಂತಾ ಸ್ತಿತಿ . ಇದು ಕತೆಯಾದರು ವಾಸ್ತವದಲ್ಲಿ ಇದಕ್ಕಿಂತಲೂ, ಕರ್ಣ ಕಟೋರಿಗಳಿದಾರೆ ಎಂಬುದಂತೂ, ವಾಸ್ತವ ಸತ್ಯ .
ಧನ್ಯವಾದಗಳು ಸರ್..
very nice
ನಿರೂಪಣೆ ಚೆನ್ನಾಗಿದೆ ರುಕ್ಮಿಣಿ 🙂
ಥ್ಯಾಂಕ್ ಯೂ ಶರತ್
ಒಮ್ದು ಉತ್ತಮ ಕಥೆಯನ್ನು ನೀಡಿದ್ದೀರಿ, ಹಾಗೆಯೇ ಒಂದು ಎಚ್ಚರಿಕೆ ಸಹ.
ಒಂದು ವಿಷಯ ನನಗೆ ಅರ್ಥವಾಗದ್ದುಃ ಪ್ರೀತಿ ಮತ್ತು ಪ್ರೇಮಗಳು ದೈಹಿಕ ಸಂಬಂಧಕ್ಕೆ ಕಟ್ಟು ಬಿದ್ದಿವೆಯೇ? ಕಾಮ ಮತ್ತು ಪ್ರೇಮದ ವ್ಯತ್ಯಾಸ ನಮ್ಮ ಯುವಕ ಯುವಕಿಯರಿಗೆ ಗೊತ್ತಾಗುತ್ತಿಲ್ಲವೋ? ಅಥವಾ ನನ್ನಂತವರು, ಇದು ಇಂದಿನ ದಿನಗಳ ವಾಸ್ತವತೆ ಯೆಂದು ಒಪ್ಪಿಕೊಳ್ಳಬೇಕೆ?
Chenagidhe nimma lekana
Shubhavagali rukku
ಧನ್ಯವಾದಗಳು ಸರ್
ಛೇ………. ಇ೦ತಹ ವರುಣರು ಪ್ರೀತಿಯ ಗುಂಗಿನಲ್ಲಿ ಮೋಸಹೊಗುತ್ತಿರುವುದು ಆತಂಕಕಾರಿ.. ಹೆಣ್ಣಿನ ದೇಹದಿಂದ ಸಂಪಾದಿಸುವ ನೀಚರನ್ನು ಅರಿಯುವುದೆಂತು.. ಸುರಕ್ಸಿತವೋ ಅಸುರಕ್ಷಿತವೋ ತನ್ನ ಬಾಳಸಂಗಾತಿಯನ್ನು ಬಿಟ್ಟು ತನ್ನ ದೇಹವನ್ನು ಒಪ್ಪಿಸುವುದು ಯಾವ ನಿಟ್ಟಿನಲ್ಲೂ ಕ್ಷೇಮಕರವಲ್ಲ.. ಹರೆಯದ ಉತ್ಸುಕತೆಯದಲ್ಲಿ ಮನವನ್ನು ಕ್ಷಣಿಕಸುಖಕ್ಕೆ ಜಾರಿಸಿದರೆ ಜೀವನವೇ ಕೈ ತಪ್ಪಿ ಹೋದಿತು.. ಅರ್ಥಗರ್ಭಿತ ಬರಹ.. ಬರವಣಿಗೆ ಸರಳ ನಿರೂಪಣೆಯಿಂದ ಪ್ರತಿಯೊಬ್ಬರಿಗು ತಲುಪುವಂತಿದೆ..
ವರುಣಾಳ ದಾರುಣ ಕಥನ ಕೇಳಿ ಮೈ ಜುಂ ಎಂದಿತು.
ಕೈ ಮೀರಿದ ಸ್ಥಿತಿಗೆ ಕೈಗೊಂಬೆಯಾಗುದು ಅಂದ್ರೆ ಇದೇನಾ…………ಅಕ್ಕ ಸೊಪರ್ ಮನ ಗೆದ್ದಿದೀರಾ..
Ellara pratikriyegoo dhanyavaadagaLu…
ಒಬ್ಬ ಅಪರಿಚಿತ ವ್ಯಕ್ತಿಯೊಂದಿಗಿನ ಪರಿಚಯ ಎಂಥ ಗಾಢ ಪರಿಣಾಮ ಬೀರಬಹುದೆಂಬುದನ್ನು ಮನಮುಟ್ಟುವಂತೆ ಚಿತ್ರಿಸಿದೆ ಕಥೆ. ಕಥೆಯಲ್ಲಿನ ತಿರುವುಗಳು 'ಹೀಗೂ ಆಗಬಹುದೇ?!’ ಎಂದು ಉಬ್ಬೇರಿಸುವಂತಿದ್ದರೂ, ನಿರೂಪಣೆಯಲ್ಲಿ ಗೆದ್ದಿದ್ದೀಯ. ಕಡೆಯಲ್ಲಿ ಆ ಪರಿಚಯದ ನೆರಳಿಗೆ ವರುಣ ತೆತ್ತೆ ಬೆಲೆ ತನ್ನ ಜೀವನ ಎಂಬುದನ್ನು ನೆನೆದಾಗ ಜೀವ ಹಿಡಿಯಷ್ಟಾಯಿತು. ಮಹಾಮಾರಿ ಏಡ್ಸ್ ಅನ್ನು ತಡೆಯುವಲ್ಲಿ, ’ಪ್ರೆವೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂರ್’ ಎಂಬ ವೈದ್ಯಕೀಯ ಉಕ್ತಿ ಹೆಚ್ಚು ಸಹಕಾರಿ. ಈ ವಿಷಯದ ಬಗ್ಗೆ ಯುವ ಸಮೂಹದಲ್ಲಿ ಹೆಚ್ಚು ಅರಿವು ಮೂಡಿಸುವ ಕೆಲಸಗಳಾಗಬೇಕು.
– ಪ್ರಸಾದ್.ಡಿ.ವಿ.
Nice
ಅರ್ಥಪೂರ್ಣ ಬರಹ