ಜಲ್ಪಾಯ್ಗುರಿಯಲ್ಲಿ ರಾಜ್ ಗಂಜ್ ಎಂಬ ಬ್ಲಾಕ್ ಇದೆ. ಬ್ಲಾಕ್ ಎಂದರೆ ನಮ್ಮ ಕಡೆಯ ತಾಲ್ಲೂಕು. ಆ ಬ್ಲಾಕು ಒಂದು ಕಡೆ ಬಾಂಗ್ಲಾ ದೇಶಕ್ಕೆ ಅಂಟಿಕೊಂಡಿದೆ. ಅಂದರೆ ಬಾಂಗ್ಲಾ ದೇಶದ ಬಾರ್ಡರ್ ಈ ಬ್ಲಾಕ್ ನಲ್ಲಿದೆ. ಆ ಬ್ಲಾಕಿನ ಬಾರ್ಡರ್ ನಲ್ಲಿರುವ ಒಂದು ಊರಿನಲ್ಲಿ ಒಮ್ಮೆ ಜಾಂಡೀಸ್ ಕೇಸ್ ಗಳು ಪತ್ತೆಯಾಗಿದ್ದವು. ಅದರ ಇನ್ ವೆಸ್ಟಿಗೇಷನ್ ಗೆ ಅಂತ ಹೋಗಿದ್ದೆ. ನನ್ನ ಜೊತೆ ನಮ್ಮ ಸರ್, ಒಂದಿಬ್ಬರು ಆಫೀಸ್ ಸ್ಟಾಫ್, ವಾಟರ್ ಟೆಸ್ಟಿಂಗ್ ಲ್ಯಾಬೋರೇಟರಿಯಿಂದ ಬಂದಿದ್ದ ಟೆಕ್ನಿಷಿಯನ್ ಮತ್ತು ಆ ಹುಡುಗ ಇದ್ದರು. ನಮ್ಮ ಆರೋಗ್ಯ ಕಾರ್ಯಕರ್ತರು ಯಾವುದಾದರು ಲಸಿಕೆ ನೀಡಬೇಕಾದ ಸಮಯದಲ್ಲಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳಬಹುದಾದವರನ್ನು ಹುಡುಕುತ್ತಾರೆ. ಹಾಗೆ ಹುಡುಕುವಾಗ ಲಸಿಕೆ ಪಡೆದುಕೊಳ್ಳ ಬಯಸುವವರು ಯಾವುದಾದರು ಕಾಯಿಲೆಯಿಂದ ಬಳಲುತ್ತಿದ್ದಾರೆಯೇ ಎಂದು ವಿಚಾರಿಸುತ್ತಾರೆ. ಹಾಗೆ ಒಮ್ಮೆ ಜಪಾನೀಸ್ ಎನ್ ಸೆಪಲೈಟಿಸ್ ಎಂಬ ಕಾಯಿಲೆಯ ವಿರುದ್ಧ ಲಸಿಕೆ ನೀಡಲು ಮಕ್ಕಳನ್ನು ಹುಡುಕುವಾಗ ಆ ಜಾಂಡೀಸ್ ಕೇಸುಗಳು ಪತ್ತೆಯಾಗಿದ್ದವು. ಅವಷ್ಟು ಕೇಸುಗಳು ಒಂದೆರಡು ತಿಂಗಳ ಹಳೆಯ ಕೇಸ್ ಗಳಾದ ಕಾರಣ ನಾವು ಯಾರ ರಕ್ತ ನಮೂನೆಗಳನ್ನು ಸಂಗ್ರಹಿಸಿರಲಿಲ್ಲ. ಆ ಕಾರಣಕ್ಕೆ ನಮ್ಮೊಡನೆ ಬಂದಿದ್ದ ಆ ಹುಡುಗನ ಕಾರ್ಯ ವೈಖರಿಯನ್ನು ನೋಡುವ ಅವಕಾಶ ಸಿಕ್ಕಿರಲಿಲ್ಲ. ನಮ್ಮ ಜಿಲ್ಲೆಯಲ್ಲಿ ಯಾವುದಾದರೂ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡರೆ ಉತ್ತಮ ಟೆಕ್ನಿಷಿಯನ್ ಆದ ಅವನನ್ನು ಕರೆದೊಯ್ಯುತ್ತಿದ್ದರಂತೆ. ಕೆಲಸದ ಕರೆ ಬಂದರೆ ನಡುರಾತ್ರಿಯಲ್ಲೂ ಸಹ ರೆಡಿಯಾಗಿ ಬರುತ್ತಿದ್ದನಂತೆ. ಒಮ್ಮೆ ಒಂದು ಕಡೆ ಚಿಕನ್ ಗುನ್ಯ ಕಾಯಿಲೆ ಕಾಣಿಸಿಕೊಂಡಿದ್ದಾಗ ಟೆಕ್ನಿಷಿಯನ್ ಆಗಿ ಹೋಗಿದ್ದ ಆ ಹುಡುಗನಿಗೂ ಸಹ ಚಿಕನ್ ಗುನ್ಯ ಕಾಯಿಲೆ ಬಂದು ಪಾಪ ಜ್ವರದಿಂದ ತೀವ್ರ ಬಳಲಿದ್ದನಂತೆ. ಹೀಗೆ ಈ ಹಿಂದೆ ಆ ಹುಡುಗನ ಕುರಿತು ಒಂದಷ್ಟು ಕತೆಗಳನ್ನು ಕೇಳಿದ್ದೆ. ಆವತ್ತು ಆ ಹುಡುಗ ನನ್ನೆದುರಿಗೇ ಇದ್ದ. ಜೊತೆಗೆ ತನ್ನ ಫೀಲ್ಡ್ ವಿಸಿಟ್ ದಿನಗಳ ಕುರಿತು ನಮ್ಮ ಪಯಣದ ಉದ್ದಕ್ಕೂ ಕತೆಗಳನ್ನು ಹೇಳಿದ್ದ. ಅವತ್ತು ಖುದ್ದು ಆ ಹುಡುಗನೇ ಎದುರಿಗೆ ಇದ್ದು ಕತೆಗಳನ್ನು ಹೇಳ್ತಾ ಇದ್ದರೆ ನಾನು ಯಾಕೋ ಏನೋ ಅವನ ಕತೆಗಳನ್ನು ನಂಬಿರಲಿಲ್ಲ. ಅದು ಅವತ್ತು ನನ್ನ ಅವನ ಮೊದಲ ದಿನದ ಭೇಟಿ. ನಾನು ಕಾರಿನ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದ ಕಾರಣ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಆತನ ಮುಖವನ್ನು ಸರಿಯಾಗಿ ನೋಡಿರಲಿಲ್ಲ. ಅವನ ಹೆಸರು ಉಚ್ಛರಿಸಲು ತುಂಬಾ ಕಷ್ಟವಾದ ಕಾರಣ ಅವತ್ತು ಅವನ ಹೆಸರನ್ನು ಸರಿಯಾಗಿ ಜ್ಞಾಪಕವನ್ನು ಸಹ ನಾನು ಇಟ್ಟುಕೊಳ್ಳಲಿಲ್ಲ.
ಅದಾದ ಒಂದೆರಡು ತಿಂಗಳ ಬಳಿಕ ಸಿಲಿಗುರಿ ಎಂಬ ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿತು. ಅವತ್ತು ನನ್ನ ಜೊತೆ ಯಾರೋ ಒಬ್ಬ ಟೆಕ್ನಷಿಯನ್ ಬಂದಿದ್ದ. ಅವನು ಜ್ವರದಿಂದ ಬಳಲುತ್ತಿದ್ದವರ ರಕ್ತ ನಮೂನೆಗಳನ್ನು ಸಂಗ್ರಹಿಸಿದ್ದ. ಯಾಕೋ ಅವನ ಕಾರ್ಯ ವೈಖರಿ ನನಗೆ ಹಿಡಿಸಲೇ ಇಲ್ಲ. ಆ ಕಾರಣಕ್ಕೆ ಮುಂದಿನ ವಿಸಿಟ್ ನಲ್ಲಿ ಅವತ್ತು ಜಾಂಡೀಸ್ ಕೇಸ್ ಇನ್ ವೆಸ್ಟಿಗೇಷನ್ ಗೆ ಬಂದಿದ್ದ ಆ ತೆಳು ಶರೀರದ ಹುಡುಗನನ್ನು ಜೊತೆ ಕರೆದೊಯ್ಯಲು ನಾವು ನಿರ್ಧರಿಸಿದ್ದೆವು. ಅವತ್ತು ಕ್ಯಾಂಪ್ ನಲ್ಲಿ ತುಂಬಾ ಜನರಿದ್ದರು. ಡೆಂಗ್ಯೂ ಜ್ವರದಿಂದ ಭಯಭೀತರಾದ ಜನ ನನ್ನ ರಕ್ತ ಪರೀಕ್ಷಿಸಿ ನನ್ನ ರಕ್ತ ಪರೀಕ್ಷಿಸಿ ಎನ್ನುತ್ತಿದ್ದರು. ಆ ಹುಡುಗನಿಗೆ ಒಂದಷ್ಟು ಫಾರ್ಮೇಟ್ ನೀಡಿದ್ದೆ. ಅವುಗಳನ್ನು ಶ್ರದ್ಧೆಯಿಂದ ತುಂಬಿ ಜ್ವರದಿಂದ ಬಳಲುತ್ತಿರುವವರ ರಕ್ತ ನಮೂನೆಗಳನ್ನು ಸಂಗ್ರಹಿಸುತ್ತಿದ್ದ. ಅವಷ್ಟು ರಕ್ತದ ನಮೂನೆಗಳನ್ನು ಅವತ್ತೇ ಟೆಸ್ಟ್ ಮಾಡಬೇಕಿದ್ದ ಕಾರಣ ಅವುಗಳ ಪ್ರೊಸೆಸಿಂಗ್ ಗಾಗಿ ಸಂಜೆ ಅವನೊಬ್ಬನೇ ಕಷ್ಟಪಡುತ್ತಿದ್ದುದ್ದನ್ನು ಕಂಡು ನಾನೂ ಸಹ ಗ್ಲೌಸ್ ತೊಟ್ಟು ಅವತ್ತು ಅವನ ಸಹಾಯಕ್ಕೆ ನಿಂತಿದ್ದೆ. ಹಾಗೆ ನಾವು ಇಬ್ಬರೂ ಒಟ್ಟಿಗೆ ಕೆಲಸ ಮಾಡಿ ಮುಗಿಸಿದಾಗ ರಾತ್ರಿ ಒಂಬತ್ತಾಗಿತ್ತು.
ಸಿಲಿಗುರಿಯಿಂದ ಜಲ್ಪಾಯ್ಗುರಿಯ ನಮ್ಮ ಮನೆಗಳನ್ನು ಆ ಕೆಟ್ಟ ರಸ್ತೆಗಳಲ್ಲಿ ತಲುಪಲು ಕನಿಷ್ಟ ಎರಡು ಗಂಟೆಯಾದರೂ ಬೇಕಿತ್ತು. ಮನೆ ತಲುಪೋಕೆ ತುಂಬಾ ಸಮಯ ಬೇಕು ಎಂದರಿತ ನಾವು ಅಂದಿನ ಕೆಲಸ ಮುಗಿಸಿ ಆ ಕೆಟ್ಟ ರಸ್ತೆಯಲ್ಲಿ ಪಯಣಿಸಿದ್ದೆವು. ಮಾರ್ಗ ಮಧ್ಯೆ ಡಾಬಾ ಒಂದರಲ್ಲಿ ಊಟ ಸಹ ಮಾಡಿದ್ದೆವು. ಅವತ್ತು ನಮ್ಮ ನಮ್ಮ ಮನೆ ತಲುಪಿದಾಗ ರಾತ್ರಿ ಹನ್ನೊಂದು ಮುಕ್ಕಾಲಾಗಿತ್ತು. ಮಾರನೆಯ ದಿನ ಬೆಳಿಗ್ಗೆಯೇ ಎದ್ದು ಮತ್ತೆ ಸಿಲಿಗುರಿಗೆ ಬರಬೇಕಾಗಿತ್ತು. ಹೀಗೆ ಡೆಂಗ್ಯೂ ಔಟ್ ಬ್ರೇಕ್ ನ ಕಾರಣ ನಿತ್ಯ ಜಲ್ಪಾಯ್ಗುರಿ ಟು ಸಿಲಿಗುರಿ ಮತ್ತೆ ಸಿಲಿಗುರಿ ಟು ಜಲ್ಪಾಯ್ಗುರಿ ಪಯಣಿಸಬೇಕಿತ್ತು. ಬೆಳಿಗ್ಗೆ ಬೇಗ ಎದ್ದು ಸಿಲಿಗುರಿಗೆ ಹೋಗಿ ಕ್ಯಾಂಪ್ ಮುಗಿಸಿ ಮತ್ತೆ ಜಲ್ಪಾಯ್ಗುರಿಗೆ ಬರುವಷ್ಟರಲ್ಲಿ ದಿನಾ ರಾತ್ರಿ ಹನ್ನೊಂದಾಗಿರುತ್ತಿರುತ್ತಿತ್ತು. ಡೆಂಗ್ಯೂ ಹೆಚ್ಚು ಏರಿಯಾಗಳನ್ನು ಅಫೆಕ್ಟ್ ಮಾಡಿದ್ದ ಕಾರಣ ಅದನ್ನು ಕಂಟ್ರೋಲ್ ಗೆ ತರಲು ತುಂಬಾ ಶ್ರಮ ಬೇಕಾಗಿತ್ತು. ಡೈಲಿ ಹೀಗೆ ಅಪ್ ಅಂಡ್ ಡೌನ್ ಮಾಡೋಕೆ ಕಷ್ಟ ಅನ್ನುವ ಕಾರಣಕ್ಕೆ ಸಿಲಿಗುರಿಯಲ್ಲಿಯೇ ಒಂದು ಗೆಸ್ಟ್ ಹೌಸ್ ನಲ್ಲಿ ನಮಗೆ ವಾಸ್ತವ್ಯ ನೀಡುವಂತೆ ನಾನು ಮತ್ತು ಆ ಹುಡುಗ ನಮ್ಮ ಹಿರಿಯ ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದೆವು. ನಮ್ಮ ಕೋರಿಕೆ ಮೇರೆಗೆ ಕಾಂಚನ ಜಂಗಾ ಸ್ಟೇಡಿಯಂ ಬಳಿ ನಮಗೆ ವಾಸ್ತವ್ಯದ ವ್ಯವಸ್ಥೆಯಾಗಿತ್ತು. ಅವತ್ತಿನಿಂದ ಮುಂದಿನ ಸುಮಾರು ಒಂದೂವರೆ ಎರಡು ತಿಂಗಳು ನಾನು ಮತ್ತು ಆ ಹುಡುಗ ರೂಮ್ ಮೇಟ್ ಆದೆವು.
ಬೆಳಿಗ್ಗೆಯಿಂದ ಸಂಜೆಯವರೆಗೂ ದುಡಿದು ದಣಿಯುತ್ತಿದ್ದ ನಮ್ಮ ಹುಡುಗ ಸಮಯ ಸಿಕ್ಕಾಗಲೆಲ್ಲಾ ತುಟಿಗೆ ಸಿಗರೇಟು ಕಚ್ಚಿರುತ್ತಿದ್ದ. ಅವನು ಸಿಗರೇಟು ಕಚ್ಚಿದ ಸಮಯದಲ್ಲಿ ಫೋನಿನಲ್ಲಿ ಯಾರೊಡನೆಯೋ ತುಂಬಾ ಹರಟುತ್ತಿದ್ದ. ಇಲ್ಲ ಫೋನಿನಲ್ಲಿ ಹಾರಾಡಿ ಬೇಸರಗೊಂಡು ನಂತರ ಸಿಗರೇಟು ಕಚ್ಚುತ್ತಿದ್ದ. "ಏನ್ ಆಯ್ತು ಅಮ್ರಿ?" ಎಂದರೆ "ಏನಿಲ್ಲ ರಾಜು ದಾ" ಎಂದು ತನ್ನ ಪಾಡಿಗೆ ತಾನು ಕೆಲಸದಲ್ಲಿ ಮಗ್ನನಾಗಿಬಿಡುತ್ತಿದ್ದ. ಕೆಲಸ ಮುಗಿಸಿ ಸಂಜೆ ರೂಮಿಗೆ ಬಂದ ಕೂಡಲೇ ಅಲ್ಲೆಲ್ಲೋ ರಮ್ಮೋ, ವಿಸ್ಕಿಯನ್ನೋ ಹುಡುಕಿ ತಂದು "ರಾಜು ದಾ ಒಂದ್ ಪೆಗ್?" ಎಂದು ಆಗಾಗ ಆಫರ್ ಮಾಡುತ್ತಿದ್ದ. ಕುಡಿಯಬಾರದು ಎಂದು ಡಿಸೈಡ್ ಮಾಡಿದ್ದವನು ಅವನ ಬಲವಂತಕ್ಕೆ ಒಮ್ಮೊಮ್ಮೆ ಒಂದು ಪೆಗ್ ಕುಡಿದುಬಿಡುತ್ತಿದ್ದೆ. ಮೊದ ಮೊದಲಿಗೆ ಇಂಗ್ಲೀಷ್ ಬ್ರಾಂಡುಗಳಿಗೆ ದುಡ್ಡು ಸುರಿಯುತ್ತಿದ್ದವನು ತಿಂಗಳ ಕೊನೆಯ ಕಾರಣಕ್ಕೋ ಏನೋ ಅವುಗಳಿಗೆ ಬೈ ಹೇಳಿ ಅಲ್ಲೆಲ್ಲೋ ಗಲ್ಲಿಗಳಲ್ಲಿ ಕಂಟ್ರಿ ಲಿಕ್ಕರ್ ಹುಡುಕಿ ತಂದು "ರಾಜು ದಾ ಒಂದು ಸಿಪ್?" ಎಂದು ನಗೆ ಬೀರುತ್ತಿದ್ದ. "ಲೇ ಅಮ್ರಿ ಹೀಗೆ ಕುಡಿಬ್ಯಾಡ ಕಣೋ. ಹಿಂಗೆ ಕುಡಿದ್ರೆ ಹೆಲ್ತ್ ಹಾಳಾಗೋಗುತ್ತೆ. ಕುಡಿಯೋದರ ಜೊತೆಗೆ ಸಿಗರೇಟ್ ಬೇರೆ ವಿಪರೀತ ಸೇದ್ತೀಯ. ಇಟ್ಸ್ ನಾಟ್ ಗುಡ್ ಮ್ಯಾನ್" ಎಂದು ನಾನು ಅಡ್ವೈಸ್ ಮಾಡುವಾಗ "ಅಯ್ಯೋ ಬಾ ರಾಜು ದಾ. ನಾನೇನ್ ದಿನಾ ಕುಡೀತಾ ಇದ್ನಾ? ಇವತ್ತು ಹೊರಗಡೆ ಇದ್ದೀವಿ ಕುಡಿತೀನಿ. ಮಸ್ತಿ ಮಾಡ್ತೀನಿ. ಮನೆಗೆ ವಾಪಸ್ಸು ಹೋದರೆ ಮತ್ತೆ ಅದೇ ಲೈಫು." ಎನ್ನುತ್ತಿದ್ದ.
ಅವನು ಹಾಗೆ ಕುಡಿಯುತ್ತಾ ಕುಳಿತಾಗಲೆಲ್ಲಾ ನನಗೆ ಪ್ರೈವೆಸಿಯ ಸಮಸ್ಯೆಯಾಗಿ ನನ್ನ ರೂಮು ನೆನಪಿಗೆ ಬರುತ್ತಿತ್ತು. ನನಗೆ ಮೊದಲಿನಿಂದಲೂ ನನ್ನ ರೂಮು ಎಂದರೆ ನನಗೆ ಪ್ರಾಣ. ನಾನು ಇಡೀ ದಿನ ಎಲ್ಲೆಲ್ಲೋ ಸುತ್ತಾಡಿದರೂ ಅದು ಮಧ್ಯ ರಾತ್ರಿಯಾದರೂ ಸರಿಯೇ ನನ್ನ ರೂಮಿಗೆ ವಾಪಾಸ್ಸಾಗಬೇಕು. ಇದು ನಾನು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿರುವ ರೂಲ್ಸ್. ಆ ಕಾರಣಕ್ಕೆ ನಾನು ಸಿಲಿಗುರಿಯ ಆ ಗೆಸ್ಟ್ ಹೌಸ್ ನಲ್ಲಿದ್ದಾಗಲೂ ಅಲ್ಲಿಂದ ದಿನಾ ಓಡಾಡೋಕೆ ಆಗದ ಕಾರಣ ವಾರಕ್ಕೊಮ್ಮೆಯಾದರೂ ನನ್ನ ರೂಮಿಗೆ ನಾನು ಬಂದುಬಿಡುತ್ತಿದ್ದೆ. ಆದರೆ ಆ ಹುಡುಗ ಅಮೃತಾಂಗ್ಸು ಜಲ್ಪಾಯ್ಗುರಿಯಲ್ಲಿ ತನ್ನ ಸಂಸಾರವಿದ್ದರೂ ಭಾನುವಾರದ ರಜಾದಿನದಲ್ಲಿಯೂ ಆ ಗೆಸ್ಟ್ ಹೌಸ್ ನಲ್ಲಿಯೇ ಉಳಿದುಬಿಡುತ್ತಿದ್ದ. ಮನೆ ಇದ್ದರೂ ಆತ ಅಲ್ಲಿ ಏಕೆ ಉಳಿಯುತ್ತಿದ್ದ ಎಂಬುದು ನನಗೆ ಅಚ್ಚರಿಯ ವಿಷಯವಾಗಿತ್ತು. ಈ ಕುರಿತು ಮಾತು ಬಂದಾಗ ನಮ್ಮ ಡ್ರೈವರ್ "ಅವನ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೆಂಡತಿ ಜೊತೆ ಜಗಳ ಮಾಡಿಕೊಂಡಿದ್ದಾನೆ. ಬಹುಶಃ ಡೈವೋರ್ಸ್ ಆಗೋ ಚಾನ್ಸ್ ಇದೆ." ಎಂದೆಲ್ಲಾ ಹೇಳಿದ್ದ. ಆ ಡ್ರೈವರ್ ಮಾತು ಕೇಳಿದಾಗ ಜನರ ಸ್ವಾಸ್ಥ್ಯ ಕಾಪಾಡಬೇಕು ಎಂದು ಹಪಹಪಿಸುವ ಈ ಹುಡುಗ ತನ್ನದೇ ಮನೆಯ ಆರೋಗ್ಯವನ್ನು ಏಕೆ ಹೀಗೆ ಹಾಳು ಮಾಡಿಕೊಂಡ ಎನಿಸುತ್ತಿತ್ತು.
ಡ್ರೈವರ್ ನ ಮಾತಿಗೆ ಪುಷ್ಟಿ ಎನುವಂತೆ ಒಮ್ಮೆ ಅಮೃತಾಂಗ್ಸು ನನ್ನ ಜೊತೆ ಇರಬೇಕಾದರೆ ಒಂದು ಫೋನ್ ಬಂದಿತ್ತು. ಅತ್ತಲಿನ ಹೆಣ್ಣಿನ ದನಿ "ರಾಜು ದಾ ನ ಮಾತಾಡೋದು?" ಎಂದಿತ್ತು. ಯಾರಪ್ಪ ಇದು ಎಂದು ಆಶ್ಚರ್ಯದಿಂದ "ಹೌದು. ಯಾರು ನೀವು?" ಎಂದಿದ್ದೆ. ನನ್ನ ಆಶ್ಚರ್ಯವನ್ನು ದುಪ್ಪಟ್ಟು ಮಾಡಲು ಆ ಹೆಂಗಸು "ನಾನು ಅಮೃತಾಂಗ್ಸು ಮಿಸ್ಸಸ್" ಎಂದು ಉತ್ತರಿಸಿದ್ದಳು. ನನ್ನ ನಂಬರ್ ಈ ಹೆಂಗಸಿಗೆ ಹೇಗೆ ಸಿಕ್ಕಿತು. ನಂಬರ್ ಸಿಕ್ಕಿದರೂ ನನಗೇಕೆ ಫೋನ್ ಮಾಡಬೇಕಿತ್ತು ಎಂದುಕೊಳ್ಳುತ್ತಿರುವಾಗ "ಅವರು ನಿಮ್ಮ ಜೊತೆ ಇದ್ದಾರ? ಅವರು ಇನ್ನು ಎಷ್ಟು ದಿನ ಡ್ಯೂಟಿ ಮಾಡಬೇಕು? ಅವರನ್ನು ಯಾವಾಗ ಮನೆಗೆ ಕಳುಹಿಸುತ್ತೀರಿ?" ಎನ್ನುವಂತಹ ಅನೇಕ ಪ್ರಶ್ನೆಗಳನ್ನು ಕೇಳಿದಾಗ "ಅಮೃತಾಂಗ್ಸು ಇಲ್ಲೇ ಇದ್ದಾನೆ. ಆದಷ್ಟು ಬೇಗ ಮನೆಗೆ ಹೋಗಲು ಹೇಳ್ತೀನಿ" ಎಂದು ಸಾವಧಾನದಿಂದ ಉತ್ತರಿಸಿ ಫೋನಿಟ್ಟಿದ್ದೆ. ಆಕೆ ಫೋನ್ ಇಟ್ಟ ತಕ್ಷಣ "ನಿನ್ನ ಮಿಸ್ಸೆಸ್ಸ್ ಫೋನ್ ಮಾಡಿದ್ರು ಅಮ್ರಿ?" ಎಂದು ಅಮ್ರಿತಾಂಗ್ಸುವಿಗೆ ಕೇಳಿದಾಗ "ಏನಂತೆ?" ಎನ್ನುವಂತಹ ಸಣ್ಣ ಕುತೂಹಲವನ್ನು ಸಹ ತೋರದೆ ಫೋನ್ ಮಾಡಿದರೆ ಮಾಡಿಕೊಳ್ತಾಳೆ ಬಿಡು ಎನ್ನುವ ಧಾಟಿಯಲ್ಲಿ ನಿರ್ಭಾವುಕನಾಗಿ ಕುಳಿತವ ಮನದಲ್ಲಿ ಅದ್ಯಾವ ನೋವಿತ್ತೋ ಅವತ್ತು ನನಗಂತೂ ತಿಳಿಯಲಿಲ್ಲ. ಮೊದಲೆಲ್ಲಾ ಮನೆಗೆ ಹೋಗಲು ಹಿಂದೆ ಮುಂದೆ ನೋಡುತ್ತಿದ್ದವನನ್ನು ಆ ವಾರಾಂತ್ಯದಲ್ಲಿ ಮನೆಗೆ ಹೋಗಿದ್ದ.
ಅಮೃತಾಂಗ್ಸು ಮಿಶ್ರನ ಊರು ಜಲ್ಪಾಯ್ಗುರಿಯಿಂದ ಸುಮಾರು ಎಂಟು ನೂರು ಕಿಮೀ ಇರಬಹುದು. ಅಷ್ಟು ದೂರದಿಂದ ಜಲ್ಪಾಯ್ಗುರಿಗೆ ಕೆಲಸಕ್ಕೆಂದು ಬಂದ ಹುಡುಗ ಜಲ್ಪಾಯ್ಗುರಿಯ ಹುಡುಗಿಯೊಬ್ಬಳನ್ನು ಪ್ರೀತಿಸಿ ಮನೆಯ ವಿರೋಧದ ನಡುವೆಯೂ ಮದುವೆಯಾಗಿದ್ದನಂತೆ. ಹುಡುಗಿ ಸ್ಥಳೀಯಳೇ ಆದ ಕಾರಣ ಅಮ್ರಿ ಮನೆ ಅಳಿಯನಾಗಿದ್ದನಂತೆ. ಹೀಗೆ ಪ್ರೀತಿಸಿ ಮದುವೆಯಾದವನ ಬಾಳಿನಲ್ಲಿ ಆದ ಆಘಾತಗಳೇನು ಎಂಬುದು ನನಗೆ ಅಷ್ಟು ತಿಳಿಯದ್ದರೂ ಯಾಕೋ ಅವನ ಪರ್ಸನಲ್ ವಿಷಯಗಳನ್ನು ನಾನು ಯಾವತ್ತಿಗೂ ವಿಚಾರಿಸಲು ಹೋಗಿರಲೇ ಇಲ್ಲ. ಆದರೆ ಅವನ ಕಾರ್ಯ ವೈಖರಿ ನೋಡಿ ಜಲ್ಪಾಯ್ಗುರಿಯಿಂದ ಒಂಚೂರು ದೂರದ ಊರಿನಲ್ಲಿ ಕೆಲಸ ಮಾಡುವ ಅವನನ್ನು ಜಲ್ಪಾಯ್ಗುರಿಯ ನಮ್ಮ ಆಫೀಸಿಗೆ ಕರೆದುಕೊಳ್ಳಲು ನಮ್ಮ ಸರ್ ಜೊತೆ ಮಾತನಾಡಿದ್ದೆ. ಯಾಕೆಂದರೆ ಅಂತಹ ಒಬ್ಬ ಒಳ್ಳೆ ಮನುಷ್ಯನ, ಟೆಕ್ನಷಿಯನ್ ನ ಅವಶ್ಯಕತೆ ನಮ್ಮ ಟೀಮ್ ಗಿತ್ತು. ಆ ಕಾರಣಕ್ಕೆ ಸಿಲಿಗುರಿಯಲ್ಲಿ ಡೆಂಗ್ಯೂ ಜ್ವರ ಮುಗಿದ ನಂತರವೂ ಬೇರೆ ಕಡೆ ಆದ ವಿಧ ವಿಧದ ಔಟ್ ಬ್ರೇಕ್ ಗಳ ಸಮಯದಲ್ಲಿ ಅವನನ್ನು ರಕ್ತ ನಮೂನೆ ಸಂಗ್ರಹಿಸಲು ನನ್ನ ಜೊತೆ ಕರೆದೊಯ್ದಿದ್ದೆ. ಒಮ್ಮೊಮ್ಮೆ ತನ್ನ ಆಫೀಸಿನ ಕೆಲಸ ಮುಗಿಸಿ ಸಂಜೆ ನನ್ನ ಚೇಂಬರ್ ಗೆ ಬರುತ್ತಿದ್ದವನು ತುಂಬಾ ಹೊತ್ತು ಫೇಸ್ ಬುಕ್ ನಲ್ಲಿ ಅದೂ ಇದೂ ನೋಡುತ್ತಾ ಸಮಯ ಕಳೆದು ಟೀ ಕುಡಿದು ನನ್ನೊಡನೆ ಹರಟಿ ಮನೆಗೆ ಹೊರಡುತ್ತಿದ್ದ.
ಹೀಗಿರುವಾಗ ನಾನು ಕ್ರಿಸ್ ಮಸ್ ನ ಸಮಯದಲ್ಲಿ ಬೆಂಗಳೂರಿಗೆ ಬಂದಿದ್ದವನು ಜನವರಿ ಎರಡನೇ ತಾರೀಖು ರಜೆ ಮುಗಿಸಿ ವಾಪಸ್ಸು ಜಲ್ಪಾಯ್ಗುರಿಗೆ ಬಂದಿದ್ದೆ. ಆವತ್ತು ಮಧ್ಯಾಹ್ನ ಆಫೀಸಿನಲ್ಲಿ ಕುಳಿತು ಕೆಲವು ಗೆಳೆಯರಿಗೆ ಹೊಸ ವರ್ಷದ ಶುಭಾಶಯ ತಿಳಿಸಲು ಮೆಸೇಜ್ ಮಾಡುತ್ತಿದ್ದವನು ಅಮೃತಾಂಗ್ಸುವಿನ ನೆನಪಾಗಿ ಊಟದ ಸಮಯದಲ್ಲಿ ಆತನಿಗೆ ಫೋನ್ ಮಾಡಿ ಹ್ಯಾಪ್ಪಿ ನ್ಯೂ ಯೀಯರ್ ಅಂತ ಹೇಳಿ ಸಂಜೆ ಆಫೀಸಿಗೆ ಬಾ ಎಂದು ಕರೆದಿದ್ದೆ. ಅಂದು ಸಂಜೆ ಐದಕ್ಕೆ ಆಫೀಸಿಗೆ ಬಂದವನು ಸುಮಾರು ಆರೂವರೆವರೆಗೂ ನನ್ನೊಡನೆ ಹರಟಿದ್ದ. ಆಫೀಸ್ ಕ್ಲೋಸ್ ಮಾಡಲು ಬಂದ ನಮ್ಮ ಸೆಕ್ಯುರಿಟಿ ನಮ್ಮ ಚಿಟ್ ಚಾಟ್ ಗೆ ಜೊತೆಯಾಗಿದ್ದ. ಅವರಿಬ್ಬರೂ ಬೆಂಗಾಳಿಯಲ್ಲಿ ಮಾತನಾಡುತ್ತಾ "ರಾಜು ದಾ ಗೆ ಒಬ್ಬ ಬೆಂಗಾಳಿ ಹುಡುಗಿ ಹುಡುಕಿ ಕೊಡೋಣ." ಎಂದೇಳುತ್ತಾ "ಏನ್ ರಾಜು ದಾ ಬೆಂಗಾಳಿ ಹುಡುಗಿಯನ್ನ ಮದುವೆಯಾಗ್ತೀಯ?" ಎಂದು ಇಬ್ಬರೂ ನಕ್ಕಿದ್ದರು. "ಒಳ್ಳೆ ತಮಾಷೆ ಮಾಡ್ತೀರ ನೀವಿಬ್ರು" ಎಂದು ಹೇಳುತ್ತಾ ಅವರ ಜೊತೆ ನಕ್ಕಿದ್ದೆ. ಅಮೃತಾಂಗ್ಸು ನಗು ನಗುತ್ತಾ "ರಾಜು ದಾ ಈ ಭಾನುವಾರ ನಿನ್ನ ರೂಮಿನಲ್ಲಿ ಒಂದು ಪಾರ್ಟಿ ಮಾಡೋಣ. ನ್ಯೂ ಯೀಯರ್ ಪಾರ್ಟಿ. ನಿನ್ನ ಮ್ಯಾಗಜಿನ್ ಕೆಲಸ ಮುಗಿಸಿ ಫ್ರೀ ಆಗಿರು" ಎಂದಿದ್ದ. ಸಾಮಾನ್ಯವಾಗಿ ನನ್ನ ರೂಮಿಗೆ ಯಾರನ್ನೂ ಕರೆದೊಯ್ಯದ ನಾನು ಭಾನುವಾರ ಅಮ್ರಿಯನ್ನ ಮನೆಗೆ ಕರೆಯಬೇಕು ಎಂದುಕೊಂಡು ಕಂಪ್ಯೂಟರ್ ಶಟ್ ಡೌನ್ ಮಾಡಿ ಮನೆ ಕಡೆಗೆ ಹೆಜ್ಜೆ ಹಾಕಿದ್ದೆ.
ಒಮ್ಮೊಮ್ಮೆ ಹತ್ತು ಹತ್ತೂವರೆಗೆ ಗಾಢ ನಿದ್ರೆಗೆ ಶರಣಾಗಿ ಬಿಡುವ ನಾನು ಅವತ್ತು ಇನ್ನೂ ಬೇಗ ನಿದ್ರೆ ಮಾಡಿಬಿಟ್ಟಿದ್ದೆ. ರಾತ್ರಿ ಹನ್ನೆರಡಾಗಿತ್ತು ಎನಿಸುತ್ತೆ. ನನ್ನ ಫೋನ್ ರಿಂಗಾಗುತ್ತಿತ್ತು. ಇಷ್ಟೊತ್ತಲ್ಲಿ ಯಾರು ಫೋನ್ ಮಾಡಿದ್ದು ಎಂದುಕೊಂಡು ಫೋನ್ ತೆಗೆದರೆ ನನ್ನ ಫೋನ್ ಅರೂಪ್ ಕಾಲಿಂಗ್ ಅಂತ ತೋರಿಸುತ್ತಿತ್ತು. ಸರಿ ರಾತ್ರಿಯಲ್ಲಿ ಬಂದ ಕರೆಯನ್ನು ಅಚ್ಚರಿಯಿಂದ ರಿಸೀವ್ ಮಾಡಿ "ಹೇಳು ಅರೂಪ್" ಎನ್ನುತ್ತಿದ್ದಂತೆ "ನಿದ್ದೆ ಬಂದ್ ಬಿಟ್ಟಿತ್ತಾ. ಡಿಸ್ಟರ್ಬ್ ಮಾಡಿದ್ದಕ್ಕೆ ಸಾರಿ. ಒಂದು ವಿಷಯ ಹೇಳಬೇಕಿತ್ತು ಅದಕ್ಕೆ ಫೋನ್ ಮಾಡಿದೆ." ಅಂದ ನಮ್ಮ ಆಫೀಸಿನ ಅಕೌಂಟೆಂಟ್ ಅರೂಪ್. "ಪರವಾಗಿಲ್ಲ. ಏನ್ ವಿಷಯ ಹೇಳು ಅರೂಪ್" ಎಂದಾಗ ಅರೂಪ್ ವಿಷಯ ಹೇಳಿ ಫೋನಿಟ್ಟಿದ್ದ. ಅವನು ಹೇಳಿದ ವಿಷಯ ಕೇಳಿ ನನ್ನ ಎದೆ ಬಡಿತ ಸಿಕ್ಕಾಪಟ್ಟೆ ಬಡಿದುಕೊಳ್ಳತೊಡಗಿತು. ಎದ್ದು ಕುಳಿತೆ. ನಾನು ಈಗ ರೀಸೀವ್ ಮಾಡಿದ ಕಾಲ್ ಕನಸಲ್ಲ ಅಲ್ಲವಾ ಎನಿಸಿತು. ಮತ್ತೆ ಅರೂಪ್ ಗೆ ಫೋನ್ ಮಾಡಿದೆ. ಆತ ಸದ್ಯಕ್ಕೆ ಇರುವ ಜಾಗ ತಿಳಿಸಿದ. ನಾನು ಆ ಸರಿ ರಾತ್ರಿಯಲ್ಲಿ ಆ ಜಾಗಕ್ಕೆ ಹೋಗಲು ಸಾಧ್ಯವಿರಲಿಲ್ಲ. ನನ್ನ ಫೋನ್ ಮತ್ತೆ ರಿಂಗಾಯಿತು. ಫೋನ್ ಕಡೆ ನೋಡಿದೆ. ಜೊಯಿತಾ ಕಾಲಿಂಗ್ ಅಂತ ತೋರಿಸುತ್ತಿತ್ತು. ಜೊಯಿತಾ ನನ್ನ ಸಹೋದ್ಯೋಗಿ. "ವಿಷಯ ಗೊತ್ತಾಯಿತ?" ಎಂದು ಆಕೆ ಅರೂಪ್ ಹೇಳಿದ ವಿಷಯವನ್ನೇ ಹೇಳಿದಳು. ನನಗೆ ನಂಬಲಾಗಲಿಲ್ಲ. ಅವಳು ಫೋನಿಟ್ಟ ಮೇಲೆ ಇಪ್ಪತ್ತಾರು, ಇಪ್ಪತ್ತೇಳರ ವಯಸ್ಸಿನ ಹುಡುಗ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡಿದ್ದಾನೆ ಎಂಬ ಸುದ್ದಿಯನ್ನು ನನಗೆ ಯಾಕೋ ಅರಗಿಸಿಕೊಳ್ಳಲಾಗಲಿಲ್ಲ. ನನ್ನ ಎದೆ ಸುಮ್ಮನೆ ಬಡಿದುಕೊಳ್ಳುತ್ತಿತ್ತು. ಎದ್ದು ಒಂದು ಲೋಟ ನೀರು ಕುಡಿದೆ. ಬಂದು ಹಾಸಿಗೆಯ ಮೇಲೆ ಮಲಗಿಕೊಂಡೆ.
ಮಂಚದ ಪಕ್ಕದಲ್ಲಿದ್ದ ಛೇರಿನಲ್ಲಿ ಒಬ್ಬ ವ್ಯಕ್ತಿ ಕುಳಿತು ನಗುತ್ತಿರುವ ಹಾಗೆ ಭಾಸವಾಯಿತು. ಅದೆಷ್ಟೋ ಸಾವಿರ ದಿನಗಳನ್ನು ಎಂತೆಂಥಾ ಜಾಗಗಳಲ್ಲಿಯೋ ಒಂಟಿಯಾಗಿ ಕಳೆದು ಅಭ್ಯಾಸವಿದ್ದ ನನಗೆ ನನ್ನ ರೂಮಿನಲ್ಲಿ ನಾನು ಮಲಗಿರುವಾಗ ಹಾಗೆ ಭಯವಾಗಿದ್ದು ಹೊಸತಾಗಿತ್ತು. ಹರಸಾಹಸ ಮಾಡಿ ನಿದ್ದೆಯನ್ನು ಕಣ್ಣಿಗೆ ತಂದುಕೊಂಡಾಗ ಮುಂಜಾನೆ ನಾಲ್ಕಾಗಿತ್ತು. ಮಾರನೆಯ ದಿನ ನನ್ನ ತಳಮಳವನ್ನು, ನೋವನ್ನು ಯಾರ ಬಳಿ ತೋಡಿಕೊಳ್ಳುವುದು ಎಂದು ತಿಳಿಯದೆ ಫೇಸ್ ಬುಕ್ ನಲ್ಲಿ "ತುಂಬಾ ಚಿಕ್ಕ ವಯಸ್ಸಿನ ಒಳ್ಳೆಯ ವ್ಯಕ್ತಿಗಳನ್ನು ದೇವರು ತನ್ನ ಬಳಿಗೆ ಯಾಕೆ ಬೇಗ ಕರೆಸಿಕೊಳ್ಳುತ್ತಾನೋ?" ಎಂಬ ಸ್ಟೇಟಸ್ ಹಾಕಿಕೊಂಡೆ. ಯಾರೋ ಒಬ್ಬ ಪುಣ್ಯಾತ್ಮ "ಯಾಕಪ್ಪಾ ಯಾರಿಗೆ ಟಿಕೆಟ್ ಕೊಡಿಸಿದೆ?" ಎನ್ನುವ ಕಾಮೆಂಟ್ ಜೊತೆ ಸ್ಮೈಲಿ ಚಿಹ್ನೆ ಹಾಕಿದ್ದ. ಸತ್ತವರ ಕುರಿತ ಸ್ಟೇಟಸ್ಸಿಗೂ ಈ ತರಹದ ಕಾಮೆಂಟ್ ಹಾಕುವ ವ್ಯಕ್ತಿಗಳ ಮನೋಸ್ಥತಿ ಕುರಿತು ಬೇಸರವಾಯಿತು. ಆ ಸ್ಟೇಟಸ್ ಡಿಲೀಟ್ ಮಾಡಿ ಸುಮ್ಮನಾದೆ. ಆ ರೀತಿ ಕಾಮೆಂಟ್ ಹಾಕಿದ ವ್ಯಕ್ತಿಗೆ, ಸತ್ತವರ ಕುರಿತ ಸ್ಟೇಟಸ್ ಗೆ ಲೈಕ್ ಒತ್ತುವ ಮನೋಭಾವದ ಮನುಷ್ಯರಿಗೆ ಸತ್ತ ವ್ಯಕ್ತಿ ಒಬ್ಬ ಅಪರಿಚಿತ. ನನ್ನ ಪಾಲಿಗೆ ಅವತ್ತು ಹಾಗೆ ಹಾರ್ಟ್ ಅಟ್ಯಾಕ್ ಆಗಿ ತೀರಿ ಹೋದ ವ್ಯಕ್ತಿ ಮೊದಲಿಗೆ ಅಪರಿಚತನೇ ಆಗಿದ್ದ. ಆದರೆ ಕಾಲಾಂತರದಲ್ಲಿ ಡೆಂಗ್ಯೂ ಕ್ಯಾಂಪಿನ ದೆಸೆಯಿಂದ ಪರಿಚಿತನಾಗಿದ್ದವನು ದಿನ ಕಳೆದಂತೆ ಒಂಚೂರು ಆತ್ಮೀಯನೂ ಆಗಿದ್ದ. ಹಾಗೆ ವೃತ್ತಿಯ ಕಾರಣಕ್ಕೆ ಪರಿಚಿತವಾಗಿದ್ದ ವ್ಯಕ್ತಿ ಜನವರಿ ಎರಡನೇ ತಾರೀಖಿನ ಸಂಜೆ ನನ್ನೊಡನೆ ನಕ್ಕು ಕೈ ಕುಲುಕಿ ಹೋಗಿದ್ದನಲ್ಲದೇ ನಮ್ಮ ಆಫೀಸಿನ ಅಷ್ಟೂ ಜನರಿಗೆ ಕೈ ಕುಲುಕಿ ಹ್ಯಾಪ್ಪಿ ನ್ಯೂ ಯೀಯರ್ ಅಂತ ವಿಶ್ ಮಾಡಿದ್ದ. ಹಾಗೆ ಸಂಜೆ ಆರೂವರೆಗೆ ವಿಶ್ ಮಾಡಿದ್ದವನು ರಾತ್ರಿ ಹನ್ನೊಂದಕ್ಕೆ ಇನ್ನಿಲ್ಲ ಎಂಬುದನ್ನು ನೆನೆದರೆ ಈಗಲೂ ನನಗೆ ಕಸಿವಿಸಿ ಅಸಿಸುತ್ತೆ. ನಮ್ಮ ಸಂಬಂಧಿಕರೇ ಸತ್ತಾಗ ಏನು ಅನಿಸದ ನನಗೆ ತುಂಬಾ ಆತ್ಮೀಯನೂ ಅಲ್ಲದ ಈ ತರಹದ ಸಹೋದ್ಯೋಗಿ ಹೀಗೆ ಅಕಾಲ ಮರಣಕ್ಕೆ ತುತ್ತಾದುದನ್ನು ನೆನೆದಾಗ ಯಾಕೋ ಏನೋ ನನ್ನ ಎದೆ ನೋವಿನ ಮಡುವಾಗುತ್ತೆ.
*****
Raju daa,,, kannaaligalu tumbi banthu,, entha duradrustada saavu… bhaya hutisuthe!!!!
ನಸೀಮಾಜೀ.. ಗೆಳೆಯರ ಅಕಾಲಿಕ ಮರಣ ಹೀಗೇ ಕಾಡುವುದು….. ನನ್ನ ವಿಷಾದವಿದೆ ನಿಮ್ಮ ಗೆಳೆಯನ ಸಾವಿಗೆ.
🙁
ಹುಟ್ಟು ಎನ್ನುವುದು ಒಂಟಿಯಲ್ಲ.. ಸಾವನ್ನುವ ಗೆಳೆಯನ ಜೊತೆಗೇ ಬರುತ್ತದೆ.. 🙁
May his soul rest in peace