ಸೆಪ್ಟೆಂಬರ್ ತಿಂಗಳೆಂದರೆ ಮಳೆಗಾಲ ಹಿಂದಾಗಿ ಚಳಿಗಾಲ ಅಂಬೆಗಾಲಿಕ್ಕುತ್ತಾ ಬರುವ ಕಾಲ. ರೈತರಿಗೂ ಸುಗ್ಗಿಯ ಪೂರ್ವತಯಾರಿ ಮಾಡಿಕೊಳ್ಳುವ ಕಾಲ. ಸತತ ಮಳೆಯಿಂದ ನಲುಗಿ ಮಾಸಿದ ಭೂತಾಯಿ ಆಭರಣಗಳು ಮತ್ತೆ ನಳನಳಿಸುವ ಕಾಲ. ಎಳೆ ಬಿಸಿಲಿಗೆ ಮೈಯೊಡ್ಡಿ ಬೆಚ್ಚಗಿನ ಕಾಫಿ ಹೀರುವ ಮಜವೇ ಬೇರೆ. ಮಣ್ಣಿನೊಳಕ್ಕೆ ಸೇರಲಾರದ ಎರೆಹುಳುಗಳು ಕಟ್ಟಿರುವೆಗಳ ದವಡೆಗೆ ಬಲಿಯಾಗುವ ಕಾಲ. ಸೆಪ್ಟೆಂಬರ್ ತಿಂಗಳಲ್ಲಿ ಶಿಶು ಕ್ಯಾನ್ಸರ್ ಜಾಗೃತಿ, ಗರ್ಭಕೋಶದ ಕ್ಯಾನ್ಸರ್ ಜಾಗೃತಿ ಹೀಗೆ ವಿವಿಧ ರೀತಿಯ ಕ್ಯಾನ್ಸರ್ ಕುರಿತಾದ ಜಾಗೃತಿಗೊಳಿಸುವ ತಿಂಗಳು. ಪಾಶ್ಚ್ಯಾತ್ಯ ದೇಶಗಳಲ್ಲಿ ಬೇಸಿಗೆ ರಜ ಮುಗಿದು ಶಾಲೆಗಳು ಪುನ: ಪ್ರಾರಂಭವಾಗುವ ಕಾಲವಾದ್ದರಿಂದ, ಹೋಟೆಲ್‌ಗಳು ಬಿಕೋ ಎನ್ನುತ್ತಿರುತ್ತವೆಯಾದ್ದರಿಂದ, ಹೋಟೆಲ್-ರೆಸ್ಟೋರೆಂಟ್ ಮಾಲೀಕರು ಈ ತಿಂಗಳನ್ನು ಅನಿಷ್ಟವೆಂದು ಭಾವಿಸುವ ಕಾಲ. ಭಾವಿ ಪ್ರಜ್ಞಾವಂತ ಪ್ರಜೆಗಳನ್ನು ರೂಪಿಸುವ ಮಹತ್ವ್ತದ ಹೊಣೆಗಾರಿಕೆಯಿರುವ ಶಿಕ್ಷಕರ ದಿನಾಚರಣೆಯನ್ನು ನಮ್ಮ ದೇಶದಲ್ಲಿ ಆಚರಿಸುವ ತಿಂಗಳು. ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳನ್ನು ತಡೆಯುವ ಓಝೋನ್ ಬಗೆಗಿನ ಜಾಗೃತಿಗೊಳಿಸುವ ದಿನವೂ ಇದೇ ತಿಂಗಳಲ್ಲಿ ಬರುತ್ತದೆ. ಅಳಿವಿನಂಚಿಗೆ ಬಂದು ನಿಂತಿರುವ ಘೇಂಡಾಮೃಗಗಳನ್ನು ಉಳಿಸುವ ನಿಟ್ಟಿನಲ್ಲೂ ಪ್ರತಿ ಸೆಪ್ಟೆಂಬರ್ ೨೨ರಂದು ವಿಶ್ವ ಘೇಂಡಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕೈಯಲ್ಲಿ ಕತ್ತಿ-ಬಾಯಲ್ಲಿ ಭಗವದ್ಗೀತೆ ಧೋರಣೆ ಹೊಂದಿರುವ ಅಮೆರಿಕ ಇದೇ ತಿಂಗಳ ೨೧ರಂದು ವಿಶ್ವ ಶಾಂತಿ ದಿನವನ್ನು ಆಚರಿಸುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಬರುವಷ್ಟು ವಿಶ್ವದಿನಗಳು ಇನ್ಯಾವ ತಿಂಗಳಲ್ಲೂ ಬರುವುದಿಲ್ಲ. ಈ ತಿಂಗಳ ೧೬ರಂದು ವಿಶ್ವ ಓಝೋನ್ ದಿನ, ೧೭-೧೯ ವಿಶ್ವ ಚೊಕ್ಕಟ ದಿನ, ಇದರ ಮಧ್ಯದಲ್ಲಿ ಬರುವ ೧೮ರಂದು ನೀರು ನಿರ್ವಹಣಾ ದಿನ, ೨೧ರಂದು ಶೂನ್ಯ ಮಾಲಿನ್ಯ ದಿನವಾದರೆ, ೨೨ ಕಾರುರಹಿತ ದಿನ, ೨೩ರಂದು ಪರಿಸರ ಋಣ ದಿನ, ಹಾಗೆ ೨ ದಿನ ಬಿಟ್ಟು ೨೬ ವಿಶ್ವ ಪರಿಸರಾರೋಗ್ಯ ದಿನವಾದರೆ, ಪ್ರತಿ ಸೆಪ್ಟಂಬರ್ ಕಡೆಯ ಭಾನುವಾರ ವಿಶ್ವ ನದಿಗಳ ದಿನ. ಇದಲ್ಲದೇ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಆಚರಿಸುವ ಹಬ್ಬ-ಹರಿದಿನಗಳು ಬೇರೆ. ನಮ್ಮಲ್ಲೂ ದಸರ-ನವರಾತ್ರಿ-ಶರನ್ನವರಾತ್ರಿಯೆಂದು ಒಂಬತ್ತು ದಿನ ಸ್ತ್ರೀದೇವತೆಗಳನ್ನು ಇದೇ ತಿಂಗಳಲ್ಲಿ ಆರಾಧಿಸಲಾಗುತ್ತಿದೆ.
ಸೆಪ್ಟೆಂಬರ್ ಕೊನೆಯ ವಾರದಲ್ಲಿ ದೇಶದ ಪ್ರಧಾನಿ ಬೆಂಗಳೂರಿಗೆ ಬಂದು ಫುಡ್ ಪಾರ್ಕ್ ಉದ್ಘಾಟಿಸಿ, ಮಂಗಳಯಾನದ ಯಶಸ್ಸಿಗೆ ಕಾರಣೀಭೂತರಾದ ಇಸ್ರೋದ ವಿಜ್ಞಾನಿಗಳ ಬೆನ್ನು ತಟ್ಟಿದ್ದಾರೆ. ಬೆಂಗಳೂರಿನಲ್ಲಿ ಅತಿದೊಡ್ಡ ಸಮಸ್ಯೆಯಾದ ತ್ಯಾಜ್ಯ ವಿಲೇವಾರಿಯ ಬಗ್ಗೆಯೂ ಒಂದೆರೆಡು ಮಾತನಾಡಿದ್ದಾರೆ. ಇದೇ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ. ಜಗತ್ತಿನ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದುರದೃಷ್ಟವಶಾತ್, ನಮ್ಮ ನೆರೆ ದೇಶವಾದ ಪಾಕಿಸ್ಥಾನ ಇದರಲ್ಲಿ ಮೊದಲನೇ ಸ್ಥಾನ ಪಡೆದಿದೆ. ಕತಾರ್, ಆಫ್ಘಾನಿಸ್ತಾನ, ಬಾಂಗ್ಲಾ ಹಾಗೂ ಇರಾನ್ ಕ್ರಮವಾಗಿ ೨ ರಿಂದ ೫ನೇ ಸ್ಥಾನ ಪಡೆದಿವೆ. ಮಾಲಿನ್ಯದ ಶಬ್ಧ ಕೇಳುತ್ತಿದ್ದಂತೆ ನಮ್ಮ ಮನಸ್ಸಿಗೆ ಬರುವುದು ಚೀನಾ ನಂತರದಲ್ಲಿ ಭಾರತ. ಒಂದು ಘನಮೀಟರ್ ವಾತಾವರಣದಲ್ಲಿ ೨.೫ ಮೈಕ್ರೋಗ್ರಾಂಗಿಂತ ಹೆಚ್ಚು ಮಾಲಿನ್ಯ ವಾತಾವರಣದಲ್ಲಿದ್ದರೆ ಅದು ಸುರಕ್ಷಿತ ವಾತಾವರಣವಲ್ಲ. ಪಾಕಿಸ್ಥಾನದಲ್ಲಿ ಈ ಪ್ರಮಾಣ ೧೦೧ಕ್ಕೆ ತಲುಪಿ ಮೊದಲ ಸ್ಥಾನವನ್ನು ಆಕ್ರಮಿಸಿದೆ. ಕತಾರ್‌ನಲ್ಲಿ ೯೨, ಆಫ್ಘಾನಿಸ್ಥಾನದಲ್ಲಿ ೮೪, ಬಾಂಗ್ಲಾ ೭೯ ಹಾಗೂ ಇರಾನ್‌ನಲ್ಲಿ ೭೬ ಇದೆ. ಹಾಗಾದರೆ ಭಾರತೀಯರು ಅಡ್ಡಿಯಿಲ್ಲ, ನಮ್ಮ ಮಾಲಿನ್ಯ ಪ್ರಮಾಣ ಕಡಿಮೆಯಿದೆಯೆಂದು ಬೆನ್ನು ತಟ್ಟಿಕೊಳ್ಳುವ ಪರಿಸ್ಥಿತಿಯಲ್ಲಿ ನಾವು ಇಲ್ಲ. ನಮ್ಮಲ್ಲಿ ಈ ಪ್ರಮಾಣ ೫೯!! ಮತ್ತು ನಂಬರ್ ೧ ಆಗಲು ದಾಪುಗಾಲಿಕ್ಕಿದ್ದೇವೆ ಎಂಬುದು ಹೆಮ್ಮೆಯ ವಿಚಾರವಲ್ಲ.
ಮಾಲಿನ್ಯಗಳು ಮತ್ತು ಪರಿಸರ ವಿರೋಧಿ ನಡಾವಳಿಗಳು, ಭೂಮಿಯ ಬಿಸಿಯ ಹೆಚ್ಚಳ ಇತ್ಯಾದಿಗಳು ಹೆಚ್ಚಿನ ಜನರಲ್ಲಿ ಭಯವನ್ನು ಮೂಡಿಸುತ್ತಿಲ್ಲ. ಅಥವಾ ಇನ್ನಾದರೂ ಪರಿಸರಸ್ನೇಹಿತರಾಗಿ ಬದುಕುವ ಮನೋಭಾವವನ್ನು ಸೃಷ್ಟಿಸುವುದಿಲ್ಲ. ಕಾಶ್ಮೀರದಲ್ಲಾದ ಅತಿವೃಷ್ಟಿಗೆ ಕಾರಣ ಹವಾಮಾನ ವೈಪರೀತ್ಯ ಎಂದು ಚರ್ಚೆಯಾಗಬಹುದೇ ವಿನ: ಭೂಬಿಸಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಏನು ಮಾಡಬಹುದು ಎಂಬ ಯೋಚನೆ ಮಾಡುವ ಜನಸಂಖ್ಯೆ ಕಡಿಮೆ. ಓದಿಕೊಂಡವರೂ, ವಿದ್ಯಾವಂತರೂ, ಜ್ಞಾನಿಗಳು, ರಾಜಕಾರಣಿಗಳೂ ಇದರಿಂದ ಹೊರತಲ್ಲ. ಮಕ್ಕಳು-ಮೊಮ್ಮಕ್ಕಳಿಗಾಗಿ ಕೂಡಿಡುವ, ಆಸ್ತಿ ಮಾಡುವ ವಿಷಯದಲ್ಲಿ ಮಾತ್ರ ತಮ್ಮ ದೂರದೃಷ್ಟಿಯನ್ನು ಬಳಸುತ್ತಾರೆ ಹೊರತು, ಭೂಮಿಯ ಭವಿಷ್ಯದ ಚಿಂತೆ ಯಾರಿಗೂ ಇಲ್ಲ. ಇದಕ್ಕೆ ಪೂರಕವಾಗಿ ಬೀರ್‌ಬಲ್ಲನ ಕತೆಯೊಂದು ಜ್ಞಾಪಕಕ್ಕೆ ಬರುತ್ತದೆ. ಅಕ್ಬರನ ಆಸ್ಥಾನದಲ್ಲಿ ಒಂದು ಚರ್ಚೆಯಾಯಿತು. ಮನುಷ್ಯನಿಗೆ ಯಾವ ವಸ್ತು ಅಥವಾ ವ್ಯಕ್ತಿ ಇಷ್ಟವಾಗುತ್ತದೆ ಅಥವಾ ಅತಿಯಾಗಿ ಪ್ರೀತಿಸುತ್ತಾರೆ. ಎಲ್ಲಾ ಪ್ರಾಜ್ಞರು ದೊರೆಗೆ ಮೆಚ್ಚಿಸುವ ಉತ್ತರಗಳನ್ನೇ ಹೇಳಿದರು. ಕಡೆಗೆ ಉಳಿದವನು ಬೀರ್‌ಬಲ್. ದೊರೆಯೇ, ಸ್ವಂತ ಪ್ರಾಣಕ್ಕಿಂತ ಮಿಗಿಲಾದ ಪ್ರೀತಿಯ ಅಥವಾ ಇಷ್ಟವಾದ ವಸ್ತು ಪ್ರಪಂಚದಲ್ಲಿ ಬೇರಿಲ್ಲ ಎಂದನು. ಅಕ್ಬರ ಇದನ್ನು ಸಾಧಿಸಿ ತೋರಿಸು ಎಂದು ಸವಾಲು ಹಾಕಿದ. ದೊಡ್ಡದಾದ ಹೊಂಡವನ್ನು ತೆಗೆದು, ಕೋತಿ ಮತ್ತು ಅದರ ಮರಿಯನ್ನು ಬಿಡಲಾಯಿತು. ಆಮೇಲೆ ಹೊಂಡಕ್ಕೆ ನಿಧಾನವಾಗಿ ನೀರನ್ನು ಹಾಕಲಾಯಿತು. ನೀರಿನ ಮಟ್ಟ ಹೆಚ್ಚುತ್ತಿದ್ದಂತೆ, ತಾಯಿ ಕೋತಿ ಮರಿಯನ್ನು ನೀರಿನಲ್ಲಿ ಮುಳುಗಲು ಬಿಡದೆ ಎತ್ತಿ ಹಿಡಿಯಿತು. ಮತ್ತೂ ಹೆಚ್ಚು ನೀರನ್ನು ಬಿಟ್ಟಾಗ ತಲೆಯ ಮೇಲೆ ಇಟ್ಟುಕೊಂಡಿತು. ತಾಯಿಯ ಮೂಗಿನ ಮಟ್ಟಕ್ಕೆ ನೀರು ಏರುತ್ತಿದ್ದಂತೆ, ತನ್ನ ಮರಿಯನ್ನೇ ಕಾಲಡಿಯಲ್ಲಿ ಹಾಕಿಕೊಂಡು ತನ್ನ ಜೀವವನ್ನು ಉಳಿಸಿಕೊಳ್ಳಲು ಮುಂದಾಯಿತು. ಇದನ್ನು ನೋಡುತ್ತಿದ್ದ ಅಕ್ಬರ, ಬೀರ್‌ಬಲ್ಲನ ಬುದ್ಧಿವಂತಿಕೆಗೆ ಮೆಚ್ಚಿ ಧನ-ಕನಕಗಳನ್ನು ನೀಡಿ ಸತ್ಕರಿಸಿದ ಎಂಬಲ್ಲಿಗೆ ಕತೆ ಮುಗಿಯುತ್ತದೆ.
ಜಗತ್ತಿನ ಎಲ್ಲಾ ವ್ಯವಹಾರಗಳೂ ಇದೀಗ ತೈಲ ಮತ್ತು ಕಲ್ಲಿದ್ದಲ ಮೇಲೆಯೇ ನಿಂತಿದೆ. ಹಾಗಾದರೆ ತೈಲವಿಲ್ಲದೆ ನಾವು ಬದುಕಲು ಸಾಧ್ಯವಿಲ್ಲವೇ? ಸಾಧ್ಯಸಾಧ್ಯತೆಗಳ ಮೇಲೆ ಒಮ್ಮೆ ಕಣ್ಣು ಹಾಯಿಸೋಣ. ನಿಮಗೆ ಬಿಸಿನೀರು ಬೇಕು ಎಂದರೆ ವಾಟರ್ ಹೀಟರ್ ಬೇಕು, ಹಳ್ಳಿಗಾಡಿನಲ್ಲಾದರೆ ಕಟ್ಟಿಗೆ ಒಲೆ. ನೀವು ಸ್ವಲ್ಪ ಅನುಕೂಲವಂತರಾಗಿದ್ದರೆ ಶವರ್ ಬಾತ್ ಮಾಡುತ್ತೀರಿ. ಮಳೆ-ಚಳಿಗಾಲದಲ್ಲಾದರೆ ಬೆಚ್ಚಗಿನ ತುಂತುರು ನೀರು ಮೈ-ಮನಸ್ಸಿಗೆ ಆವರ್ಣನೀಯ ಆನಂದವನ್ನು ನೀಡುತ್ತದೆ. ಎಷ್ಟು ಹೊತ್ತಾದರೂ ಬಚ್ಚಲಿನಿಂದ ಹೊರಬರಲು ಮನಸ್ಸಾಗುವುದಿಲ್ಲ. ಭಾರತದಂತಹ ದೇಶದಲ್ಲಿ ಸೂರ್ಯನ ಕೃಪೆ ಚೆನ್ನಾಗಿಯೇ ಇದೆ. ನೀರು ಕಾಯಿಸಲು ಸೌರಶಕ್ತಿಯ ಬಳಕೆ ಮಾಡಬಹುದು. ಮೈಗೆ ಸವರಿಕೊಳ್ಳುವ ಸಾಬೂನುಗಳನ್ನು ತೈಲವನ್ನು ಬಳಸಿ ತಯಾರಿಸಲಾಗುತ್ತದೆ. ಪರಿಸರಸ್ನೇಹಿ ಸಾಬೂನುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳನ್ನು ಬಳಸಬಹುದು. ಸಂಚಾರ ವ್ಯವಸ್ಥೆಗೆ ತೈಲವನ್ನೇ ಅತಿ ಹೆಚ್ಚು ಅವಲಂಬಿಸಿದ್ದೇವೆ. ಒಂದು ಕಾಲದಲ್ಲಿ ಕಾರು-ಬೈಕುಗಳು ಪ್ರತಿಷ್ಟೆಯ ಸಂಕೇತವಾಗಿತ್ತು. ನಿಧಾನವಾಗಿ ಕಾಲ ಬದಲಾಗುತ್ತಿದೆ. ಹಾಲೆಂಡ್ ದೇಶದಲ್ಲಿ ಸೈಕಲ್ ಸವಾರರನ್ನು ಗೌರವದಿಂದ ಕಾಣಲಾಗುತ್ತದೆ. ಸೈಕಲ್ ಸವಾರಿ ಪ್ರತಿಷ್ಟೆಯ ಸಂಕೇತವಾಗುತ್ತಿದೆ. ಸೈಕಲ್‌ಗಳನ್ನು ಸುಲಭವಾಗಿ ದಾಟಿಸಬಹುದು. ಕಡಿಮೆ ಜಾಗ ಸಾಕಾಗುತ್ತದೆ. ಜೊತೆಗೆ ಅತ್ಯುತ್ತಮ ವ್ಯಾಯಾಮ ಕೂಡ. ಇನ್ನು ಆಹಾರ ಪದ್ಧತಿಯಲ್ಲೂ ಹಲವು ಬದಲಾವಣೆಯನ್ನು ಮಾಡಿಕೊಳ್ಳುವುದು ಸಾಧ್ಯ. ಅದ್ಯಾವುದೋ ಅಂತಾರಾಷ್ಟ್ರೀಯ ಖಾದ್ಯತೈಲ ನಮ್ಮೂರಿಗೆ ಬರುವಷ್ಟರಲ್ಲೇ ಹಲವಾರು ರೀತಿಯ ಮಾಲಿನ್ಯವನ್ನು ಮಾಡಿಕೊಂಡೇ ಬಂದಿರುತ್ತದೆ. ಸ್ಥಳೀಯವಾಗಿ ಲಭ್ಯವಿರುವ ತೈಲ ಮತ್ತಿತರ ಆಹಾರಗಳ ಬಳಕೆ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಲ್ಲವು. ಅಡುಗೆಯನ್ನು ಬೇಯಿಸಲು ನಾವು ತೈಲವನ್ನು ಅವಲಂಭಿಸಿದ್ದೇವೆ. ಬದಲಿಗೆ ಹೊಂದಾಣಿಕೆ ಮಾಡಿಕೊಂಡು ಸಾಧ್ಯವಿದ್ದಾಗ ಸೋಲಾರ್ ಕುಕ್ಕರ್‌ಗಳನ್ನು ಬಳಸುವ ಪ್ರಯತ್ನ ಮಾಡಬಹುದು. ವಿದ್ಯುಚ್ಚಕ್ತಿಗಾಗಿ ಕಲ್ಲಿದ್ದಲು-ಪೆಟ್ರೋಲ್ ಬದಲಿಗೆ ಸೌರಶಕ್ತಿಯನ್ನೇ ನೆಚ್ಚಿಕೊಳ್ಳಬಹುದು.
ಮನುಷ್ಯನಿಗೆ ಕೂಡಿಡುವ ಬಯಕೆ ಪ್ರಾರಂಭವಾಗಿದ್ದೇ ಅಭದ್ರತೆಯ ಕಾರಣದಿಂದ ಎಂದು ಹೇಳಬಹುದು. ಆ ಹೊತ್ತಿನ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಮಾತ್ರ ಇತರ ಪ್ರಾಣಿಗಳು ಹೋರಾಡುತ್ತವೆ. ಮನುಷ್ಯನಿಗಾದರೆ ನಾಳಿನ ಚಿಂತೆಯಿದೆ. ಮಕ್ಕಳು-ಮೊಮ್ಮೊಕ್ಕಳು-ಮರಿಮಕ್ಕಳು ಹೀಗೆ ತನ್ನ ಮುಂದುವರೆಯುವ ಸಂತತಿ ಕಷ್ಟದಲ್ಲಿ ಸಿಗಬಾರದು ಎಂಬ ಅಭದ್ರತೆ ಭಾವ ಕೂಡಿಹಾಕುವುದಕ್ಕೆ ಪ್ರೇರಣೆ ನೀಡುತ್ತದೆ. ವಿಪರ್‍ಯಾಸವೆಂದರೆ, ಕೂಡಿಡುವುದು ಎಂದರೆ ಅದು ಸುಲಭವಾಗಿ ಸಂಪತ್ತಾಗಿ ಬದಲಾಗುವಂತಹ, ದುಬಾರಿಯಾದಂತಹ ವಸ್ತುಗಳಾಗಿರಬೇಕು, ಚಿನ್ನ-ಒಡವೆ ಇತ್ಯಾದಿಗಳು. ಜನಸಂಖ್ಯೆಯ ಮತ್ತು ಅದರ ಅಗತ್ಯಗಳನ್ನು ಪೂರೈಸಲು ಭೂಮಿ ಬೇಕು, ಹಾಗಾಗಿ ಬರೀ ಮಣ್ಣಾದರೂ ಭೂಮಿಗೆ ಬೆಲೆಯಿದೆ. ಹಾಗಾಗಿ ಹೆಚ್ಚು-ಹೆಚ್ಚು ಭೂಮಿಯನ್ನು ಸಂಪಾದಿಸಿ ಇಡುವ ಮನೋಭಾವವಿದೆ. ಇದಕ್ಕಾಗಿ ಆತ ಇನ್ನಿತರ ಪ್ರಭೇದಗಳನ್ನು ಬಲಿಕೊಡಲು ಹಿಂಜರಿಯುದಿಲ್ಲ. ಸ್ವಾರ್ಥವನ್ನು ಮೆರೆಯುತ್ತಾನೆ. ಬರೀ ಒಂದಡಿ ಜಾಗಕ್ಕಾಗಿ ಕೊಲೆಗಳಾದ ಪ್ರಸಂಗಗಳಿವೆ. ಪಾಂಡವರಿಗೆ ಕಡೇಪಕ್ಷ ೫ ಹಳ್ಳಿಗಳನ್ನಾದರೂ ನೀಡು ಎಂಬ ಕೃಷ್ಣನ ಮನವಿಯನ್ನು ಸಾರಾಸಗಟು ತಿರಸ್ಕರಿಸಿದ ದುರ್‍ಯೋಧನನ ಉದಾಹರಣನೆಯನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು. ಹಾಗೆಯೇ ವಿದ್ಯುತ್ ಕೂಡಾ ಮನುಷ್ಯನ ಮೂಲಭೂತ ಅವಶ್ಯಕತೆ ಎಂದು ಪರಿಗಣಿಸಲಾಗಿದೆ. ನಿರಂತರವಾಗಿ ವಿದ್ಯುತ್ ಪೂರೈಸುವುದು ಆಡಳಿತ ನಡೆಸುವವರಿಗೊಂದು ಶಾಶ್ವತ ತಲೆನೋವು. ನವೀಕರಿಸಬಹುದಾದ ಇಂಧನಗಳ ಮೊರೆ ಹೋಗಲು ಕಲ್ಲಿದ್ದಲು-ತೈಲ ಲಾಭಿ ಅನುವುಮಾಡಿಕೊಡುವುದಿಲ್ಲ. ಮುಖ್ಯವಾಗಿ ಈಗಿರುವ ವಿದ್ಯುತ್ ಅಭಿಯಂತರರಿಗೆ ಇದು ಬೇಕಾಗಿಲ್ಲ. ಸಚಿವಾಲಯದ ಹಾದಿ ತಪ್ಪಿಸಲೆಂದೇ ತಪ್ಪು ಮಾಹಿತಿಗಳನ್ನು ನೀಡುವ ಪ್ರಯತ್ನವೂ ನಡೆಯುತ್ತದೆ. ತನ್ನ ತಾತ್ಕಾಲಿಕ ಲಾಭಕ್ಕಾಗಿ ಇಡೀ ಸಮುದಾಯವನ್ನು ಬಲಿ ನೀಡಿದ ಪ್ರಸಂಗಗಳು ಕಡಿಮೆಯಿಲ್ಲ.
ಇವತ್ತಿನ ಮಾಹಿತಿ-ತಂತ್ರಜ್ಞಾನ ಯುಗದಲ್ಲಿ ಎಲ್ಲರಿಗೂ ಹವಾಮಾನ ವೈಪರೀತ್ಯವೇನು ಎಂಬುದರ ಅರಿವಿದೆ (ಮಾಧ್ಯಮಗಳು ರೇಪ್ ಸಂಸ್ಕ್ರತಿಯನ್ನು ವೈಭವೀಕರಿಸಿದಷ್ಟು ಗಾಢವಾಗಿ ಹವಾಮಾನ ಸಮಸ್ಯೆಗಳನ್ನು ಎತ್ತಿ ಹಿಡಿಯದಿದ್ದರೂ ಕೂಡ). ಮಕ್ಕಳ ಶೈಕ್ಷಣಿಕ ಪಠ್ಯದಲ್ಲೂ ಸಾಕಷ್ಟು ಪರಿಸರ ಸಂಬಂಧಿ ಪಾಠಗಳಿವೆ. ಅತ್ಯಂತ ಆಪ್ಯತೆಯಿಂದ ಕಲಿಯಬಹುದಾದ ಜೀವಜಾಲ ವಿಷಯಗಳನ್ನು ಅಕಾಡೆಮಿಕ್ ಆಗಿ ಪರಿವರ್ತಿಸಿ, ಮಕ್ಕಳನ್ನು ವಿಮುಖಗೊಳಿಸುತ್ತಿದ್ದೇವೆಯೇ ಎಂಬ ಅನುಮಾನ ಕೂಡ ಹಲವು ಸಂದರ್ಭಗಳಲ್ಲಿ ಕಾಡಬಹುದು. ಇಷ್ಟಕ್ಕೂ ಮಾನವನ ಈ ಪರಿಸರವಿರೋಧಿ ವರ್ತನೆಗೆ ಕಾರಣವೇನು ಎಂದು ಕೆದಕ್ಕುತ್ತಾ ಹೋದರೆ, ಮತ್ತದೇ ಬೀರ್‌ಬಲ್ಲನ ಮಂಗನ ಕತೆಗೆ ಬರಬೇಕಾಗುತ್ತದೆ. ಮುಂದಿನ ಪೀಳಿಗೆಗಾಗಿ ಇಂದು ತ್ಯಾಗ ಮಾಡಲು ಯಾರೂ ತಯಾರಿಲ್ಲ. ಭೂಮಿಯ ಮುಂದಿನ ಭವಿಷ್ಯಕ್ಕಾಗಿ ತಮ್ಮ ಸುಖಲೋಲುಪತೆಗಳನ್ನು ಮಿತಿಗೊಳಿಸಿಕೊಳ್ಳಲು ಯಾರೂ ಮುಂದಾಗುವುದಿಲ್ಲ. ಮುಂದಿನ ಪೀಳಿಗೆಗಾಗಿ ಉತ್ತಮ ವಾತಾವರಣವನ್ನು ಬಿಟ್ಟು ಹೋಗಬೇಕು ಎಂದು ಸಂಕಲ್ಪ ಮಾಡಿದ ಮರುಕ್ಷಣ, ಸ್ವಂತ ಅಗತ್ಯಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಎಲ್ಲವನ್ನೂ ಮಿತವಾಗಿ ಬಳಸಬೇಕಾಗುತ್ತದೆ. ಕಾರಿನ ಬದಲು ಬಸ್ಸಿನಲ್ಲಿ ಪ್ರಯಾಣಿಸಬೇಕಾಗುತ್ತದೆ. ಮಾಂಸಾಹಾರವನ್ನು ತ್ಯಜಿಸಬೇಕಾಗುತ್ತದೆ. ತೀರಾ ಅವಶ್ಯಕತೆಗಳನ್ನು ಮಾತ್ರ ಪೂರೈಸಿಕೊಳ್ಳುವತ್ತ ಶ್ರಮಿಸಬೇಕಾಗುತ್ತದೆ. ಯಾರಿಗೆ ಬೇಕು? ಇದ್ದಷ್ಟು ದಿನ ಅರಾಂ ಇದ್ದರೆ ಆಯಿತು.
ನಿಮ್ಮ ಮನೆಗೆ ರಾತ್ರಿ ಹೊತ್ತು ದರೋಡೆಕೋರರು ದಾಳಿ ಮಾಡಿದರು ಎಂದುಕೊಳ್ಳಿ. ಅವರು ನಿಮಗೆ ಶತ್ರುಗಳು, ನಿಮ್ಮ ಸ್ವತ್ತನ್ನು ಅಪಹರಿಸಲು ಬಂದ ಕಳ್ಳರು. ಇವರ ವಿರುದ್ಧ ಹೋರಾಡುವ ಮನೋಭಾವ ತೋರುತ್ತೀರಿ. ಅವರನ್ನು ಓಡಿಸಲು ಅಕ್ಕ-ಪಕ್ಕದವರ ಸಹಾಯವನ್ನು ಪಡೆಯುತ್ತೀರಿ. ದೂರವಾಣಿ ಸಂಪರ್ಕವಿದ್ದರೆ ರಕ್ಷಣಾ ಇಲಾಖೆಗೆ ಕರೆ ಮಾಡುತ್ತೀರಿ. ರಾಜ್ಯಗಳ ಗಡಿ ಜಗಳ ಅಥವಾ ನೀರಿನ ಜಗಳ ಬಂದಾಗ ಆಯಾ ರಾಜ್ಯದವರು ಪಕ್ಕದ ರಾಜ್ಯದ ಮುಖ್ಯಮಂತ್ರಿಯ ಪ್ರತಿಕೃತಿಯನ್ನು ಸುಟ್ಟು ಪ್ರತಿಭಟನೆ ಮಾಡುತ್ತಾರೆ. ಹಾಗೆಯೇ ನೆರೆ ದೇಶಗಳು ಯುದ್ಧಕ್ಕೆ ಬಂದಾಗ ನಮ್ಮ ಸೈನಿಕರು ಪ್ರಾಣದ ಹಂಗು ತೊರೆದು ಕಾದಾಡಿ ದೇಶವನ್ನುಳಿಸುತ್ತಾರೆ. ದಾಳಿಗೆ ಪ್ರತಿದಾಳಿ ಮಾಡಲು ಸದಾ ಸನ್ನದ್ದರಾಗಿರುತ್ತಾರೆ. ಯುದ್ಧಕ್ಕೆ ಬೇಕಾದ ಸರಕುಗಳು ತಯಾರಾಗಿರುತ್ತವೆ. ಹೀಗೆ ಸ್ವಂತ ವಿಚಾರದಲ್ಲಿ ತೀವ್ರಗಾಮಿ ನಿಲುವನ್ನು ತಳೆಯುತ್ತೀರಿ. ಅದೇ ಪರಿಸರ ಸಂರಕ್ಷಣೆ ವಿಚಾರದಲ್ಲಿ ಹಾಗಾಗುವುದಿಲ್ಲ. ಏಕೆಂದರೆ, ಬರಲಿರುವ ಅಗೋಚರ ಶತ್ರುವನ್ನು ನಾವೇ ಪಾಲಿಸಿ-ಪೋಷಿಸಿ ಬೆಳೆಸುತ್ತಿದ್ದೇವೆ. ಈ ಪ್ರಪಂಚದಲ್ಲಿ ವಾಸಿಸುವ ಪ್ರತಿಯೊಬ್ಬರು ಈ ಅಗೋಚರ ಶತ್ರುವನ್ನು ಪೊರೆಯುವವರೆ ಆಗಿದ್ದಾರೆ. ಅಂದರೆ, ಮಾನವ ತನಗೇ ತಾನೆ ಶತ್ರುವಾಗಿದ್ದಾನೆ. ಶತ್ರುವನ್ನು ಹಿಮ್ಮೆಟ್ಟಿಸಲು ಬೇರೆ ಯಾವುದೇ ಆಯುಧಗಳಿಲ್ಲ. ಅಪರಿಗ್ರಹವೊಂದೇ ದಾರಿ. ಮೂಲ ಸಂಸ್ಕ್ರತದ ಈ ಪದ ಅಪರಿಗ್ರಹದ ಒಟ್ಟಾರೆ ಅರ್ಥವೆಂದರೆ, ಅತಿಯಾದ ಮಿತಿಯಿಂದ ಬಾಳುವುದು. ಅಗತ್ಯಕ್ಕೆಷ್ಟು ಬೇಕೋ ಅಷ್ಟನ್ನೇ ಉಪಯೋಗಿಸುವುದು. ಕಡಿಮೆ ಅವಲಂಬನೆ, ದುಂದುಗಾರಿಕೆಯಿಲ್ಲದ ಜೀವನ, ಹಪಾಹಪಿರಹಿತ, ದುರಾಸೆರಹಿತ ಇತ್ಯಾದಿಗಳು.
ಇಂಗ್ಲೀಷ್‌ನಲ್ಲಿ ಒಂದು ಗಾದೆಯ ಸಾರಾಂಶ ಈ ರೀತಿ ಇದೆ. ಕಿಟಕಿ ಬಾಗಿಲು ಬಿಗುವಾದರೆ ಕೊಡೆ ಮಾರುವವನಿಗೆ ಲಾಭ- ಮಳೆಗಾಲದಲ್ಲಿ ತೇವಾಂಶವನ್ನು ಹೀರಿಕೊಂಡ ಬಾಗಿಲು ಹಿಗ್ಗುತ್ತದೆ. ಬಾಗಿಲು ತೆಗೆಯಲು ಬರುವುದಿಲ್ಲ. ತೇವಾಂಶವಾಗುವುದು ಯಾವಾಗ ಎಂದರೆ ಮಳೆಗಾಲದಲ್ಲಿ, ಅಂದರೆ ಮಳೆಗೆ ಜನ ಛತ್ರಿ ಹಿಡಿಯಬೇಕಾಗುತ್ತದೆ. ಇದನ್ನೇ ಗಾದೆಯ ರೂಪದಲ್ಲಿ ಪೋಣಿಸಿದ್ದಾರೆ. ಹಾಗೆಯೇ ಪ್ರಜಾಪ್ರಭುತ್ವದಲ್ಲಿ ಜನ ವಿವೇಚನೆ ಕಳೆದುಕೊಂಡರೆ – ರಾಜಕಾರಣಿಗಳಿಗೆ ಕಾರ್ಪೊರೇಟರ್‌ಗಳಿಗೆ ಲಾಭವೆಂದು ನಾವು ತಿದ್ದಿಕೊಳ್ಳಬಹುದು.
*****
ಎಲ್ಲದಕು ಕಾರಣನು ಏರುತ್ತಿರುವ ಜನಸಂಖ್ಯೆ ಪರಮಾತ್ಮಾ.. 🙁
ಚೆನ್ನಾಗಿದೆ ಸರ್…..
ಅಖಿಲೇಶ್, ನಿಮ್ಮ ಕಳಕಳಿಭರಿತ ಲೇಖನ ಓದುವುದೇ ಒಂದು ಖುಷಿ. ನಮ್ಮ ಅಗೋಚರ ಶತ್ರು ಯಾರೆಂಬ ಅರಿವೆ ಇಲ್ಲದ ನಾವು ನಮ್ಮ ಅಳಿವಿಗೆ ನಾವೆ ಕಾರಣನಾಗುತ್ತಿರುವುದು ವಿಚಿತ್ರವಾದರೂ ಸತ್ಯ!