ಅನ್ಯಾಯದ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ ‘ಅಗ್ನಿದಿವ್ಯ’ ನಾಟಕ ಪ್ರಯೋಗ: ಹಿಪ್ಪರಗಿ ಸಿದ್ಧರಾಮ

ಆಸ್ಟ್ರೀಯನ್ ಮೂಲದ ಜರ್ಮನಿಯ ರಾಜಕಾರಣಿಯಾಗಿದ್ದು, ನಂತರ ಸರ್ವಾಧಿಕಾರಿಯಾಗಿ ಬದಲಾದ ಅಡಾಲ್ಪ್ ಹಿಟ್ಲರ್ ಯಾರಿಗೆ ತಾನೆ ಗೊತ್ತಿಲ್ಲ ?  ಇತ್ತೀಚೆಗೆ (07-03-2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬೆಂಗಳೂರಿನ ಆವಿಷ್ಕಾರ ತಂಡದ ಕಲಾವಿದರು ಡಾ.ಬಿ.ಆರ್.ಮಂಜುನಾಥ ರಚಿಸಿದ ‘ಅಗ್ನಿದಿವ್ಯ’ ನಾಟಕವನ್ನು ಭಾನು ನಿರ್ದೇಶನದಲ್ಲಿ ಅಭಿನಯಿಸಿದರು. ಯುರೋಪಿನ ಇತಿಹಾಸದ ಕಾಲಘಟ್ಟವೊಂದರಲ್ಲಿ ಬದಲಾವಣೆಗೆ ತಹತಹಿಸುವ ಕ್ರಾಂತಿಕಾರಿ ಮನೋಭೂಮಿಕೆಯ ವ್ಯಕ್ತಿಯೊಬ್ಬನು ಚಾಣಾಕ್ಷತನದಿಂದ ಪರಿಸ್ಥಿತಿಯನ್ನು ಎದುರಿಸುತ್ತಾ ವ್ಯವಸ್ಥೆಯೊಂದಕ್ಕೆ ಸವಾಲಾಗುತ್ತಾ, ಅದೇ ವ್ಯವಸ್ಥೆಯನ್ನು ಪ್ರಶ್ನಿಸುವ ಗಂಭೀರ ಕಥಾನಕದ ಪ್ರಯೋಗವನ್ನು ಪ್ರೇಕ್ಷಕರು ಕುತೂಹಲದೊಂದಿಗೆ ವೀಕ್ಷಿಸಿದರು. ಆವಿಷ್ಕಾರ, ಎಐಡಿವೈಒ ಮತ್ತು ಎಐಡಿಎಸ್‍ಒ ಮುಂತಾದ ಎಡಪಂಥೀಯ ವಿಚಾರಧಾರೆಯ ಸಂಘಟನೆಗಳು ಸಂಯುಕ್ತವಾಗಿ ಸಂಘಟಿಸಿದ್ದ 13ನೇ ಸಾಂಸ್ಕøತಿಕ ಜನೋತ್ಸವದ ಸಂದರ್ಭದಲ್ಲಿ ಈ ನಾಟಕ ಪ್ರಯೋಗಗೊಮಡಿತು. ಈ ಸಾಂಸ್ಕøತಿಕ ಜನೋತ್ಸವವನ್ನು ಸೌಹಾರ್ದತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಮರ್ಪಿತಗೊಳಿಸಲಾಗಿತ್ತು. ಈ ಉತ್ಸವದ ಭಾಗವಾಗಿ ಪ್ರಗತಿಪರ ಗೀತೆಗಳು, ಕಾವ್ಯಾಧಾರಿತ ನೃತ್ಯ ರೂಪಕ, ಶಾಸ್ತ್ರೀಯ ವಾದ್ಯ ವೃಂದ, ಖವ್ವಾಲಿ, ನಾಟಕ ಪ್ರಯೋಗಗಳು, ಸಿನೇಮಾ ಪ್ರದರ್ಶನಗಳು, ಪ್ರತಿಕ್ರಿಯೆ-ಸಂವಾದಗಳಲ್ಲಿ ಹಲವಾರು ವಿಚಾರಗಳು ಅಭಿವ್ಯಕ್ತಗೊಂಡವು. ಸಮಕಾಲೀನ ಸಂದರ್ಭದ ನಮ್ಮ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಹಲವಾರು ರೀತಿಯ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ಆಗಾಗ ಸಂಭವಿಸುವ ನಾಟಕೀಯ ಬೆಳವಣಿಗೆಗಳು, ತೀವ್ರ ಭಾವೋನ್ಮಾದದ ಕೆಸರೆರಚಾಟದ ರಂಜನೀಯ ಪ್ರಸಂಗಗಳು ಮಾಧ್ಯಮ ಲೋಕಕ್ಕೆ ತೀವ್ರ ಆಹಾರ ಒದಗಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆಳುವ ವ್ಯವಸ್ಥೆಯೊಂದು ತಾನು ಮಾಡುವ ತಪ್ಪನ್ನು ಮುಚ್ಚಿಕೊಳ್ಳಲು ಏನೆಲ್ಲಾ ಕಸರತ್ತು ಮಾಡುತ್ತದೆ ಎನ್ನುವ ಹಲವಾರು ಸಂಗತಿಗಳನ್ನು ಬಯಲುಗೊಳಿಸುವ ಈ ‘ಅಗ್ನಿದಿವ್ಯ’ ನಾಟಕವು ಈಗಾಗಲೇ ರಾಜ್ಯದ ಹಲವೆಡೆಗಳಲ್ಲಿ ಪ್ರದರ್ಶನ ಕಂಡಿದೆ. 

ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಬರುತ್ತಿದ್ದಂತೆ ತನ್ನ ವಿರೋಧಿಗಳ ಹುಟ್ಟಡಗಿಸಲು ಹಲವಾರು (ಕು)ತಂತ್ರಗಳನ್ನು ಪ್ರಯೋಗಿಸಲು ಆರಂಭಿಸುತ್ತಾನೆ. ಅದರಲ್ಲೂ ಮುಖ್ಯವಾಗಿ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಜರ್ಮನ್ ದೇಶದಲ್ಲಿ ಕಾರ್ಮಿಕ ಚಳುವಳಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಮ್ಯುನಿಷ್ಟ ಚಿಂತಕರನ್ನು ಟಾರ್ಗೆಟ್ ಮಾಡುತ್ತಾನೆ. ಇದಕ್ಕಾಗಿ ಏನೆಲ್ಲವನ್ನು ಮಾಡಲು ತಯಾರಿದ್ದ ಆತ ಜರ್ಮನಿಯ ಪಾರ್ಲಿಮೆಂಟ್ ಭವನ ‘ರಿಚ್‍ಸ್ಟಾಗ್’ ಕಟ್ಟಡಕ್ಕೆ ಬೆಂಕಿ ಹಚ್ಚಿಸಿ, ಅದಕ್ಕೆ ಕಮ್ಯುನಿಷ್ಟ ಚಳುವಳಿಯ ನಾಯಕನಾದ ಜಾರ್ಜಿ ದಿಮಿತ್ರೋವ್ ಮತ್ತು ಆತನ ಸಂಗಡಿಗರನ್ನು ಹೊಣೆಗಾರರನ್ನಾಗಿ ಮಾಡುತ್ತಾನೆ. ಮುಂದೆ ದಿಮಿತ್ರೋವ್ ಮತ್ತು ಆತನ ಸಂಗಡಿಗರನ್ನು ಬಂಧಿಸಿ, ತೀವ್ರ ವಿಚಾರಣೆ ಆಗುವಂತೆ ಮಾಡುತ್ತಾನೆ. ನ್ಯಾಯಾಲಯದಲ್ಲಿ ನಡೆದ ವಿಚಾರಣೆಯನ್ನು ದಿಮಿತ್ರೋವ್ ಎದುರಿಸಿದ ರೀತಿ, ತನ್ನನ್ನು ಮತ್ತು ಸಂಗಡಿಗರನ್ನು ಸಮರ್ಥಿಸಿಕೊಳ್ಳುತ್ತಾ ತನ್ನ ಚಾಣಾಕ್ಷತನದಿಂದ ಖುಲಾಸೆಯಾಗುವ ಪ್ರಸಂಗ ಕುತೂಹಲ ಮತ್ತು ಆಸಕ್ತಿದಾಯವಾಗುವಂತಹ ಸಂಭಾಷಣೆಯ ಮೂಲಕ ನಾಟಕಕಾರರು ಗಮನ ಸೆಳೆಯುತ್ತಾರೆ. ಇತಿಹಾಸದಲ್ಲಿ ‘ರೀಚ್‍ಸ್ಟಾಗ್’ ವಿಚಾರಣೆಯೆಂದು ದಾಖಲಾಗಿರುವ ಈ ಪ್ರಕರಣ ಅತ್ಯಂತ ನಾಟಕೀಯ ಬೆಳವಣಿಗೆಗಳಿಂದ ಕೂಡಿದ ಕುತೂಹಲಕಾರಿ ಪ್ರಸಂಗವಾಗಿದೆ. 

 

ವಿಚಾರಣಾಧೀನ ಕೈದಿಯಾಗಿದ್ದ ಸಂದರ್ಭದ ದಿಮಿತ್ರೋವ್‍ನನ್ನು ಬೇಟಿಯಾಗಲು ಬರುವ ಅಮೇರಿದ ಪತ್ರಕರ್ತೆಯೊಂದಿಗೆ ನಡೆದುಕೊಳ್ಳುವ ಕಾವಲು ಸಿಬ್ಬಂದಿ ಮುಖಭಾವದಲ್ಲಿಯೇ ತನ್ನ ತೊಂದರೆಯನ್ನು ಹೇಳಿಕೊಳ್ಳುವುದು ಪರಿಣಾಮಕಾರಿಯಾಗಿತ್ತು. ಅದೇ ಸಂದರ್ಭದಲ್ಲಿ ಆಗಮಿಸುವ ದಿಮಿತ್ರೋವ್‍ನ ತಾಯಿ ಮತ್ತು ಸೋದರಿಯರ ಸಂಭಾಷಣೆಗಳು ಹೋರಾಟಗಾರನ ಬದುಕನ್ನು ತೆರೆದಿಡುತ್ತವೆ. ಪ್ರಯೋಗದ ದೃಷ್ಟಿಯಿಂದ ನಾಟಕವು ಉತ್ತಮವೆನಿಸಿದರೂ ರಂಗಪರಿಕರ, ರಂಗಸಜ್ಜಿಕೆ, ಬೆಳಕು ಸೇರಿದಂತೆ ಹಲವಾರು ವಿಭಾಗಗಳಲ್ಲಿ ಇನ್ನೂ ಪರಿಣಾಮಕಾರಿತನ ಬಯಸುತ್ತಿತ್ತು. ದೃಶ್ಯಾವಳಿ ಬದಲಾವಣೆಯು ಕೊಂಚ ತೀವ್ರವಾದರೆ ಪ್ರೇಕ್ಷಕರಲ್ಲಿ ಇನ್ನೂ ಕುತೂಹಲ ಹುಟ್ಟಿಸಬಹುದು. ಆಗಿನ ಕಾಲದ ಯುರೋಪಿನ ವೇಷಭೂಷಣಗಳು ಗಮನ ಸೆಳೆದವು. ಯುರೋಪಿನ ಕಥೆಯಾದುದರಿಂದ ಎಲ್ಲೊ ಒಂದು ಕಡೆ ಪ್ರೇಕ್ಷಕ ಪಾಶ್ಚಿಮಾತ್ಯ ಸಂಗೀತವನ್ನು ತೀವ್ರವಾಗಿ ಅಪೇಕ್ಷಿಸುವುದು ಸಹಜ. ಆದರೆ ಒಂದೇ ರೀತಿಯ ಸಂಗೀತ (ಸುಮೇರು ಬೆಂಗಳೂರು) ಏಕತಾನತೆಯನ್ನು ಸೃಷ್ಟಿಸಿದ ಭಾವನೆ ಬಾಲ್ಕನಿಯ ಪ್ರೇಕ್ಷಕ ಪ್ರಭುಗಳಲ್ಲಿ ಹೊರಹೊಮ್ಮಿತು. ವಿವಿಧ ಕ್ಷೇತ್ರಗಳ ಉನ್ನತ ಹುದ್ದೆಯಲ್ಲಿರುವ ಪ್ರತಿಭಾವಂತರು ತಮ್ಮ ಶಕ್ತಿ ಮೀರಿ ಅಭಿನಯಿಸಿದ್ದು ಎದ್ದು ಕಾಣುತ್ತಿತ್ತು. ಕೇವಲ ವರ್ಗ-ಸಂಘರ್ಷ ಸಿದ್ದಾಂತಗಳ ಮೂಲಕ ವರ್ಗ-ಶೋಷಣೆಯನ್ನು ಎತ್ತಿ ತೋರಿಸುವ ಇಂಥಹ ನಾಟಕಗಳು ಇಂಡಿಯಾದಂತಹ ದೇಶವು ಪ್ರಾಚೀನ ಕಾಲದಿಂದಲೂ ಜಾತಿ ವ್ಯವಸ್ಥೆಯ ಸಂಘರ್ಷವನ್ನು ತೀವ್ರವಾಗಿ ಪೋಷಿಸಿಕೊಂಡಿರುವುದು ಜಗಜ್ಜಾಹೀರವಾದ ಸಂಗತಿ. ಜಾತಿ ಶೋಷಣೆಯಂತಹ ಸ್ವದೇಶಿ ಪಿಡುಗು ಸಂಪೂರ್ಣ ನಾಶವಾಗುವುದು ಕನಸಿನ ಮಾತಾಗಿರುವಾಗ ವರ್ಗ ಸಂಘರ್ಷವನ್ನು ನಮ್ಮ ಇಂಡಿಯಾದಲ್ಲಿ ಸಮೀಕರಿಸುವ ಕುರಿತು ಮುಂದಿನ ದಿನಗಳಲ್ಲಿ ಹೇಗೆ ಯೋಚಿಸುತ್ತಾರೆಂಬುದು ನಮ್ಮಯ ಕುತೂಹಲದ ಆಶಯ. ಯಾವುದೇ ವ್ಯವಸ್ಥೆ ಬಂದರೂ ಜನರ ಹಿತವನ್ನು ಬಯಸಬೇಕೆ ಹೊರತು ಸ್ವಹಿತಾಸಕ್ತಿಯನ್ನು ಬಯಸಬಾರದು ಎಂಬುದು ಸರ್ವರ ಆಶಯ.  

*****  

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x