ಅನುವಾದಕ್ಕೊಂದು ತಂತ್ರಜ್ಞಾನ:  ಉದಯ ಶಂಕರ ಪುರಾಣಿಕ

Udaya Puranika
ಬೇರೆ ರಾಜ್ಯ ಅಥವಾ ಬೇರೆ ದೇಶಗಳಲ್ಲಿ ಪ್ರವಾಸ ಮಾಡುವಾಗ, ಸಾಮಾನ್ಯವಾಗಿ ಭಾಷೆಯ ಸಮಸ್ಯೆಯನ್ನು ಎದುರಿಸುತ್ತೇವೆ. ನಮಗೆ ಗೊತ್ತಿರುವ ಭಾಷೆಯಲ್ಲಿ ಮತ್ತೊಬ್ಬರ ಜೊತೆ ಸಂಭಾಷಣೆ ನೆಡೆಸುವುದು ವಿಫಲವಾದಾಗ, ಕೈ, ಬಾಯಿ ಸನ್ನೆಗಳು ಮತ್ತು ನಮ್ಮ ಹಾವ ಭಾವಗಳ ಮೂಲಕ ಸಂಭಾಷಣೆ ನೆಡೆಸುವ ಪ್ರಯತ್ನ ಮಾಡುತ್ತೇವೆ. ಕೆಲವೊಮ್ಮೆ ಇದೂ ವಿಫಲವಾಗುವುದುಂಟು. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದೆ, ಆದರೆ ಭಾಷೆಯ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲವೇಕೆ ಎನ್ನುವ ಪ್ರಶ್ನೆ ಆಗ ನಮಗೆ ಎದುರಾಗುವುದುಂಟು.

ಜಪಾನಿನ ಲಾಗ್‍ಬಾರ್ ಹೆಸರಿನ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ ಪುಟ್ಟ ಉಪಕರಣ ಭಾಷೆಯ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾಯಕವಾಗಬಹುದು ಎಂದು ಕೆಲವು ತಜ್ಞರು ಅಭಿಪ್ರಾಯ ಪಡುತ್ತಾರೆ. “ ಐಎಲ್‍ಐ” ಹೆಸರಿನ ಈ ಪುಟ್ಟ ಉಪಕರಣವನ್ನು, ಕೈಗೆ ಗಡಿಯಾರದಂತೆ ಧರಿಸಬಹುದು ಅಥವಾ ಕೊರಳಿನ ಸರದಲ್ಲಿ ಲಾಕೆಟ್‍ನಂತೆ ಬಳಸಬಹುದಾಗಿದೆ. ಈ ಉಪಕರಣವನ್ನು ಬಳಸಲು ಇಂಟರ್‍ನೆಟ್, ವೈಫೈ ಸಂಪರ್ಕದ ಅಗತ್ಯವಿಲ್ಲದಿರುವುದು ಗಮನಾರ್ಹವಾಗಿದೆ. ಒಂದು ಭಾಷೆಯ ಪದವನ್ನು ಅಥವಾ ವಾಕ್ಯವನ್ನು ಮತ್ತೊಂದು ಭಾಷೆಗೆ ಅನುವಾದಿಸಿ, ತಿಳಿಸಲು ಈ ಪುಟ್ಟ ಉಪಕರಣಕ್ಕೆ ಕೇವಲ 0.2 ಸೆಕೆಂಡ್ ಮಾತ್ರ ಸಾಕಾಗುತ್ತದೆ. ಸುಮಾರು 50,000 ಪದಗಳನ್ನು ಮತ್ತು ವಾಕ್ಯಗಳನ್ನು ಗ್ರಹಿಸಿ, ಮೂರು ಭಾಷೆಗಳಿಗೆ ಅನುವಾದ ಮಾಡುವ ಸೌಲಭ್ಯ ಐಎಲ್‍ಐ ನೀಡುತ್ತಿದೆ. ಇಂಗ್ಲೀಷ್, ಜಪಾನೀಸ್ ಮತ್ತು ಚೈನೀಸ್ ಭಾಷೆಗಳಿಗೆ ಈ ಭಾಷಾಂತರ ಸೌಲಭ್ಯವನ್ನು ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ವಿಶ್ವದ ಇತರೆ ಭಾಷೆಗಳಲ್ಲಿ ಕೂಡಾ ಭಾಷಾಂತರ ಸೌಲಭ್ಯವನ್ನು ನೀಡುವುದಾಗಿ ಲಾಗ್‍ಬಾರ್ ಸಂಸ್ಥೆ ಹೇಳಿದೆ. ನೂರಾರು ಭಾಷೆಗಳ ತವರಾದ ಭಾರತದಂತಹ ದೇಶದಲ್ಲಿ, ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ದೊರೆತರೆ, ಇಂತಹ ಅಧುನಿಕ ತಂತ್ರಜ್ಞಾನವು ಸಂವಹನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಬಹುದಾಗಿದೆ. 
  
ಇಷ್ಟು ಸಮರ್ಥವಾದ ವಿಶ್ವದ ಮೊದಲ ಸ್ಮಾರ್ಟ ವೇರೇಬರ್ ಉಪಕರಣ ಐಎಲ್‍ಐ ಎಂದು ಹೇಳಲಾಗುತ್ತಿದೆ. ಐಎಲ್‍ಐ ಉಪಕರಣವನ್ನು ಬಳಸುವುದು ಸುಲಭ. ಉಪಕರಣ ಬಳಸಬೇಕಾದಾಗ, ನಮಗೆ ಯಾವ ಭಾಷೆಯಿಂದ ಯಾವ ಭಾಷೆಗೆ ಅನುವಾದ ಅಗತ್ಯವಿದೆ ಎಂದು ಆಯ್ಕೆ ಮಾಡಿಕೊಳ್ಳಬೇಕು. ತದನಂತರ ಉಪಕರಣದ ಮೈಕ್ರೋಫೋನ್‍ನಲ್ಲಿ ಒಂದು ಭಾಷೆಯ ಪದಗಳು ಅಥವಾ ವಾಕ್ಯವನ್ನು ಹೇಳಿದರೆ ಸಾಕು, ಸುಮಾರು 0.2 ಸೆಕೆಂಡುಗಳಲ್ಲಿ ಉಪಕರಣಕ್ಕೆ ನೀಡಲಾಗಿರುವ ಸ್ಪೀಕರ್‍ನಲ್ಲಿ ಮತ್ತೊಂದು ಭಾಷೆಯಲ್ಲಿ ಅನುವಾದಗೊಂಡ ಪದಗಳು ಅಥವಾ ವಾಕ್ಯವನ್ನು ಕೇಳಬಹುದು. ಸುತ್ತಮುತ್ತಲೂ ಎಷ್ಟೇ ಗದ್ದಲದ ವಾತಾವರಣವಿದ್ದರೂ, ನಾವು ಹೇಳಿದ ಪದಗಳನ್ನು ಅಥವಾ ವಾಕ್ಯವನ್ನು ಈ ಉಪಕರಣವು ಸರಿಯಾಗಿ ಗ್ರಹಿಸಲು ಸಾಧ್ಯವಾಗುವಂತೆ, ವಿಶೇಷ ವಿನ್ಯಾಸದ ಮೈಕ್ರೋಫೋನ್ ಬಳಸಿದ್ದಾರೆ. ಅದೇ ರೀತಿ ಅನುವಾದಗೊಂಡ ಪದಗಳು ಅಥವಾ ವಾಕ್ಯಗಳು ಸ್ಪಷ್ಟವಾಗಿ ಕೇಳುವಂತೆ ಮಾಡಲು ವಿಶೇಷವಾದ ಸ್ಪೀಕರ್ ಬಳಸಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಈ ಸ್ಪೀಕರ್‍ನ ವಾಲ್ಯೂಂನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುವ ಸೌಲಭ್ಯವನ್ನು ಕೂಡಾ ನೀಡಲಾಗಿದೆ. ಇನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಈ ಉಪಕರಣ ಅನುವಾದ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ತಿಳಿದುಕೊಳ್ಳೋಣ. 

ಪ್ರತಿದಿನ ಬಳಸುವ ಸಾಮಾನ್ಯ ಪದಗಳು ಮತ್ತು ವಾಕ್ಯಗಳನ್ನು ಗುರುತಿಸಿ, ಇಂತಹ 50,000 ಪದಗಳು ಮತ್ತು ವಾಕ್ಯಗಳನ್ನು ಐಎಲ್‍ಐನಲ್ಲಿರುವ ಪುಟ್ಟ ಕಂಪ್ಯೂಟರ್‍ನಲ್ಲಿ ಸಂಗ್ರಹಿಸಿಡಲಾಗಿದೆ. ನಾವು ಒಂದು ಭಾಷೆಯ ಪದ ಅಥವಾ ವಾಕ್ಯವನ್ನು ಮೈಕ್ರೋಫೋನ್ ಮೂಲಕ ಹೇಳಿದಾಗ, ಅದು ಯಾವ ಭಾಷೆಯದಾಗಿದೆ ಮತ್ತು ಯಾವ ಭಾಷೆಗೆ ಅನುವಾದ ಮಾಡಬೇಕಾಗಿದೆ ಎಂದು ಗ್ರಹಿಸಿ, ಕ್ಷಣಾರ್ಧದಲ್ಲಿ ಅನುವಾದ ಮಾಡಿ, ಸ್ಪೀಕರ್ ಮೂಲಕ ನೀಡಲು, ಅಗತ್ಯವಾದ ತಂತ್ರಾಂಶಗಳನ್ನು ಈ ಪುಟ್ಟ ಕಂಪ್ಯೂಟರ್‍ನಲ್ಲಿ ನೀಡಲಾಗಿದೆ. ಗಾತ್ರದಲ್ಲಿ ಪುಟ್ಟ ಕಂಪ್ಯೂಟರ್ ಆಗಿದ್ದರೂ, ಅಧುನಿಕ ತಂತ್ರಜ್ಞಾನ ಬಳಸಿ ರಚಿಸಲಾಗಿರುವ ಈ ಕಂಪ್ಯೂಟರ್ ಮತ್ತು ತಂತ್ರಾಂಶಗಳು, ಐಎಲ್‍ಐನ ಹೃದಯ ಭಾಗವಾಗಿದೆ. ಇನ್ನು ಈ ಉಪಕರಣ ಕಾರ್ಯನಿರ್ವಹಿಸಲು, ಬ್ಯಾಟರಿಗಳನ್ನು ನೀಡಲಾಗಿದೆ. ಐಎಲ್‍ಐ ವಿನ್ಯಾಸ, ಕಾರ್ಯಾಚರಣೆ, ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಜಪಾನಿನ ತಂತ್ರಜ್ಞರ ಕೌಶಲ್ಯ ಎದ್ದು ಕಾಣುತ್ತದೆ. 

ಐಎಲ್‍ಐ ಉಪಕರಣದ ಮೊದಲು ಕೂಡಾ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದ ಮಾಡಲು ಅಧುನಿಕ ತಂತ್ರಜ್ಞಾನವನ್ನು ಬಳಸುವ ಪ್ರಯತ್ನಗಳು ನೆಡೆದಿವೆ. 
 
ಉದಾಹರಣೆಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜಗಳಲ್ಲಿ ಒಂದಾಗಿರುವ ಗೂಗಲ್ ಸಂಸ್ಥೆಯು ಅಭಿವೃದ್ಧಿಪಡಿಸಿ, ಉಚಿತವಾಗಿ ಗೂಗಲ್ ಟ್ರಾನ್ಸಲೇಟ್ ತಂತ್ರಾಂಶ ಸೌಲಭ್ಯವನ್ನು ಸ್ಮಾರ್ಟ ಫೋನ್ ಬಳಕೆದಾರರಿಗೆ ನೀಡಲಾಗಿದೆ. ಕನ್ನಡ ಭಾಷೆಯೂ ಸೇರಿದಂತೆ ವಿಶ್ವದ 103 ಭಾಷೆಗಳ ಪದಗಳ ಅನುವಾದವನ್ನು ಈ ತಂತ್ರಾಂಶ ಬಳಸಿ ಮಾಡಲು ಸಾಧ್ಯವಿದೆ. ಈ ತಂತ್ರಾಂಶವನ್ನು ಇಂಟರ್‍ನೆಟ್ ಸೌಲಭ್ಯ ಇಲ್ಲದ ಪ್ರದೇಶದಲ್ಲೂ ಬಳಸಲು ಸಾಧ್ಯವಿದೆ. ಆದರೆ ಆಗ 52 ಭಾಷೆಗಳಲ್ಲಿ ಮಾತ್ರ ಅನುವಾದ ಸಾಧ್ಯವಾಗುತ್ತದೆ. ಮೊಬೈಲ್ ಫೋನಿನ ಕೀಬೊರ್ಡ್ ಬಳಸಿ ಒಂದು ಭಾಷೆಯ ಪದಗಳನ್ನು ಟೈಪ್ ಮಾಡಿದರೆ, ಅದನ್ನು ಮತ್ತೊಂದು ಭಾಷೆಗೆ ಅನುವಾದ ಮಾಡುವ ಕೆಲಸವನ್ನು ಈ ತಂತ್ರಾಂಶ ಮಾಡುತ್ತದೆ. ಮೊಬೈಲ್ ಫೋನ್ ಕೀಬೋರ್ಡ ಬಳಸಲು ಇಷ್ಟವಿಲ್ಲದಿದ್ದರೆ ಕೈಬರಹದಂತೆ ಇರುವ ಸೌಲಭ್ಯವನ್ನು ಬಳಸಿ, 93 ಭಾಷೆಗಳ ಪದಗಳನ್ನು ಅನುವಾದ ಮಾಡಲು ಸೌಲಭ್ಯ ನೀಡಲಾಗಿದೆ. ಇದಲ್ಲದೆ ಒಂದು ಭಾಷೆಯ ಪದಗಳನ್ನು ಮೊಬೈಲ್ ಫೋನಿನ ಮೈಕ್ರೋಫೋನ್ ಮೂಲಕ ಹೇಳಿದರೆ, ಮೊಬೈಲ್ ಫೋನಿನ ಸ್ಪೀಕರ್ ಬಳಸಿ ಅನುವಾದಗೊಂಡ ಪದಗಳನ್ನು ಕೇಳುವ ಸೌಲಭ್ಯವನ್ನು 32 ಭಾಷೆಗಳಲ್ಲಿ ನೀಡಲಾಗಿದೆ. 

ವರ್ಡ ಲೆನ್ಸ್ ಎನ್ನುವ ಹೊಸ ತಂತ್ರಜ್ಞಾನವನ್ನು ಗೂಗಲ್ ಟ್ರಾನ್ಸಲೇಟ್ ಮೊಬೈಲ್ ಫೋನ್ ತಂತ್ರಾಂಶದಲ್ಲಿ ನೀಡಿರುವುದು ವಿಶೇಷವಾಗಿದೆ. ಮೊಬೈಲ್ ಫೋನ್ ಕ್ಯಾಮರಾವನ್ನು ಒಂದು ಭಾಷೆಯಲ್ಲಿರುವ ಪದಗಳು ಅಥವಾ ವಾಕ್ಯಗಳ ಮೇಲೆ ಕೇಂದ್ರಿಕರಿಸಿದರೆ ಸಾಕು, ಮತ್ತೊಂದು ಭಾಷೆಯಲ್ಲಿ ಅನುವಾದ ಮಾಡಿ ಈ ತಂತ್ರಾಂಶವು ತಿಳಿಸುತ್ತದೆ. ಈ ಸೌಲಭ್ಯವನ್ನು 30 ಭಾಷೆಗಳಲ್ಲಿ ನೀಡಲಾಗಿದೆ. ಇದಲ್ಲದೆ, ಮೊಬೈಲ್ ಫೋನ್ ಕ್ಯಾಮರಾ ಬಳಸಿ ತಗೆದ ಚಿತ್ರಗಳಲ್ಲಿರುವ ಭಾಷೆಯನ್ನು ಗುರುತಿಸಿ, ಅನುವಾದ ಮಾಡುವ ಸೌಲಭ್ಯವನ್ನು 37 ಭಾಷೆಗಳಲ್ಲಿ ನೀಡಲಾಗಿದೆ. 

ಗೂಗಲ್ ಟ್ರಾನ್ಸ್‍ಲೇಟರ್ ತಂತ್ರಾಂಶದಲ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ವಾಕ್ಯಗಳನ್ನು ಅನುವಾದಿಸಿದಾಗ, ಯಾವಾಗಲೂ ನಿಖಿರವಾಗಿರುವುದಿಲ್ಲದಿರುವುದು ಒಂದು ಕೊರತೆಯಾಗಿದೆ. ಗೂಗಲ್ ಸಂಸ್ಥೆಯು ಈ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮುಂದುವರೆಸಿದೆ. 
 
ಫ್ರೆಂಚ್, ಸ್ಪಾನಿಷ್, ಇಟಾಲಿಯನ್, ಪೋರ್ಚುಗೀಸ್ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಅನುವಾದ ಸೌಲಭ್ಯ ನೀಡುವ ಸ್ಮಾರ್ಟ ಫೋನ್ ತಂತ್ರಾಂಶವನ್ನು ವೇವರ್ಲಿ ಲ್ಯಾಬ್ಸ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ ಎಂದು ಹೇಳಿಕೊಂಡಿದೆ. ಸ್ಮಾರ್ಟಫೋನ್‍ನಲ್ಲಿ ಒಂದು ಭಾಷೆಯ ಪದಗಳನ್ನು ಮತ್ತೊಂದು ಭಾಷೆಗೆ ಅನುವಾದವನ್ನು ಪೈಲೆಟ್ ಹೆಸರಿನ ಈ ತಂತ್ರಾಂಶವು ಮಾಡುತ್ತದೆ. ಈ ಸಂಸ್ಥೆಯು ತಂತ್ರಾಂಶದ ಜೊತೆಗೆ ನೀಡುವ ವಿಶೇಷವಾದ ಇಯರ್ ಫೋನ್‍ನ್ನು (ಕಿವಿಯೊಳಗೆ ಇರಿಸಿಕೊಳ್ಳುವ ಸ್ಪೀಕರ್) ಬಳಸಿ, ಅನುವಾದಗೊಂಡ ಪದಗಳನ್ನು ಕೇಳಬಹುದಾಗಿದೆ. ನಾವು ಮೊಬೈಲ್ ಫೋನ್ ಬಳಸಿ ಇಬ್ಬರಿಗಿಂತ ಹೆಚ್ಚು ಜನರ ಜೊತೆ ಏಕ ಕಾಲದಲ್ಲಿ ಮಾತನಾಡಲು ಕಾಲ್ ಕಾನ್ಫರೆನ್ಸಿಂಗ್ ಸೌಲಭ್ಯ ಬಳಸುವಂತೆ, ಪೈಲೆಟ್ ತಂತ್ರಾಂಶವನ್ನು ಬಳಸಿ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡುವವರು ಏಕ ಕಾಲಕ್ಕೆ ಸಂಭಾಷಣೆ ನೆಡೆಸುವ ಸೌಲಭ್ಯವನ್ನು ನೀಡಲಾಗಿದೆ. 

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮತ್ತೊಂದು ದಿಗ್ಗಜ ಮೈಕ್ರೋಸಾಫ್ಟ್‍ನ ಸ್ಕೈಪ್ ಸಂಸ್ಥೆಯು ಆನ್‍ಲೈನ್ ಅನುವಾದ ಸೌಲಭ್ಯವನ್ನು ನೀಡುತ್ತಿದೆ. ಸ್ಕೈಪ್ ದೂರವಾಣಿ ಕರೆ ಸೌಲಭ್ಯವನ್ನು ಬಳಸುತ್ತಿದ್ದರೆ 8 ಭಾಷೆಗಳಲ್ಲಿ ಅನುವಾದ ಸೌಲಭ್ಯ ಲಭ್ಯವಿದ್ದು, ಕಿರು ಸಂದೇಶ ಸೌಲಭ್ಯ ಬಳಸುತ್ತಿದ್ದರೆ 50 ಭಾಷೆಗಳಲ್ಲಿ ಅನುವಾದ ಸೌಲಭ್ಯ ಲಭ್ಯವಿದೆ. ಮೇಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸಲಾಗುತ್ತಿರುವ ಈ ಅನುವಾದ ಸೌಲಭ್ಯವು, ಮುಂಬರುವ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಆಶಾವಾದವನ್ನು ಸ್ಕೈಪ್ ಸಂಸ್ಥೆಯು ಹೊಂದಿದೆ. 

ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದ ಮಾಡಲು ಅಭಿವೃದ್ಧಿಪಡಿಸಲಾಗಿರುವ ತಂತ್ರಾಂಶಗಳಲ್ಲಿ ಪ್ರಮುಖವಾಗಿ ವಾಯ್ಸ ರೆಕಗ್ನಿಷನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಒಬ್ಬ ವ್ಯಕ್ತಿ ಹೇಗೆ ಮಾತನಾಡುತ್ತಾನೆ, ಆತನಿರುವ ಪರಿಸರದಲ್ಲಿ ಬೇರೆ ಭಾಷೆಯಲ್ಲಿ ಮಾತುಕತೆ ನಡೆದಿರುವುದೇ, ಸದ್ದು ಗದ್ದಲದ ವಾತಾವರಣವಿದೆಯೇ, ಹೀಗೆ ಹಲವಾರು ಅಂಶಗಳ ಮೇಲೆ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದ ಮಾಡುವ ತಂತ್ರಾಂಶ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಸಂಪೂರ್ಣವಾಗಿ ನಿಖಿರವಾಗಿ ಅನುವಾದ ಸಾಧ್ಯವಾಗದೇ, ಅನುವಾದದಲ್ಲಿ ತಪ್ಪುಗಳಾಗುವ ಸಂಭವವಿರುತ್ತದೆ. ಮಷೀನ್ ಲರ್ನಿಂಗ್‍ನಂತಹ ಅಧುನಿಕ ತಂತ್ರಜ್ಞಾನಗಳನ್ನು ಬಳಸುವುದು, ವಿಶೇಷವಾದ ಮೈಕ್ರೋಫೋನ್, ಸ್ಪೀಕರ್‍ಗಳ ಅಭಿವೃದ್ಧಿ, ಹೀಗೆ ಹಲವು ಹೊಸತನಗಳನ್ನು ಈ ರೀತಿಯ ಅನುವಾದ ತಂತ್ರಾಂಶ ಮತ್ತು ಉಪಕರಣಗಳಲ್ಲಿ ತರುವ ಪ್ರಯತ್ನ ನೆಡೆದಿದೆ. 

ಅನುವಾದ ತಂತ್ರಾಂಶಗಳು ಮತ್ತು ಉಪಕರಣಗಳು, ವಿಶೇಷವಾಗಿ ಪ್ರವಾಸಿಗರಿಗೆ ಉಪಯುಕ್ತವೆನ್ನಲಾದರೂ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆ, ಆರೋಗ್ಯ ಸೇವೆಗಳು, ಸರ್ಕಾರಗಳ ಇ-ಆಡಳಿತ ಸೇವೆಗಳು, ಮೌಲ್ಯಾಧಾರಿತ ಮೊಬೈಲ್ ಮತ್ತು ಇಂಟರ್‍ನೆಟ್ ಸೇವೆಗಳು, ಹೀಗೆ ಹಲವಾರು ಕಡೆ ಉಪಯೋಗವಾಗುತ್ತದೆ. ವಿಶ್ವದಾದಂತ್ಯ ಇಂತಹ ತಂತ್ರಜ್ಞಾನ ಅಭಿವೃದ್ಧಿ ನೆಡೆದಿರುವಂತೆ, ಭಾರತದಲ್ಲಿ ಕೂಡಾ ಖಾಸಗಿ ಸಂಸ್ಥಗಳು ಮತ್ತು ಐಐಟಿ ಶಿಕ್ಷಣ ಸಂಸ್ಥೆಗಳು ಇಂತಹ ಪ್ರಯತ್ನ ಮಾಡುತ್ತಿವೆ. 

-ಉದಯ ಶಂಕರ ಪುರಾಣಿಕ, ಮಾಹಿತಿ ತಂತ್ರಜ್ಞಾನ ತಜ್ಞರು, ಸಾಹಿತಿ, ಬೆಂಗಳೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Sreenath m v
Sreenath m v
6 years ago

ಉಪಯುಕ್ತ ಮಾಹಿತಿ, ಕುತೂಹಲಕಾರಿ ಅಂಶಗಳನ್ನು ಒಳಗೊಂಡ ಲೇಖನ. ಧನ್ಯವಾದಗಳು

1
0
Would love your thoughts, please comment.x
()
x